Friday 31 August, 2012

ಒಂದು ವಿವಾಹಪೂರ್ವ ವೃತ್ತಾಂತವು..!

ಬ್ಲಾಗಿಗೆ ಬರೆದು ಎರಡು ಮಳೆಗಾಲ ಕಳೆದು ಹೋದವು. ತುಂಬಾ ಸಲ ಏನನ್ನಾದರೂ ಬರೆಯಬೇಕು ಅಂತ ಅಂದುಕೊಳ್ಳುತ್ತೇನಾದರೂ ಹಾಳು ಸೋಮಾರಿತನ ಮತ್ತೆ ಮತ್ತೆ ಅದನ್ನು ಮುಂದೂಡುತ್ತಿತ್ತು. ಇಷ್ಟು ದಿನ ಏನು ಬರೆಯಲಿಲ್ಲವಲ್ಲ ಎನ್ನುವ ಪಶ್ಚಾತಾಪ ಭಾವವೂ, ಏನಾದರೂ ಬರೆಯಬೇಕಿತ್ತು ಎನ್ನುವ ಹಪಹಪಿಯೂ ಈಗ ನನ್ನನ್ನು ಕಾಡುತ್ತಿದೆ.

        ನಿಮಗೆ ಲಾಂಗೂರ್ ಮಂಗನ ಕಥೆ ಗೊತ್ತಿರಬಹುದು. ಪ್ರತಿ ವರ್ಷ ಮಳೆಗಾಲ ಬಂದಾಗ ಈ ಮಂಗ ತನ್ನ ಸಂಗಾತಿಗೆ ಹೇಳುತ್ತದೆ. ಈ ಸಲ ಏನಾದರೂ ಸರಿ ಗೂಡು ಕಟ್ಟಿಯೇ ಕಟ್ಟುತ್ತೇನೆ. ಕಳೆದ ಸಲ ಮಳೆ ನೆನೆದ್ದಿದೇ ಸಾಕು. ನಾಳೆ ಬೆಳಿಗ್ಗೆ ಎದ ಕೂಡಲೇ ಮೊದಲು ಅದೇ ಕೆಲಸ ಮಾಡುತ್ತೇನೆ. ಆದರೆ, ಈ ಮಂಗ ಎಷ್ಟು ಸೋಮಾರಿಯೆಂದರೆ ಇಂತಹ ೧೦ ಮಳೆಗಾಲ ಕಳೆದರೂ ಮನೆ ಕಟ್ಟುವುದು ಹೋಗಲಿ ಕುಳಿತ ಮರದಿಂದ ತನ್ನ ಕುಂಡಿ ಸಹ ಅಲಾಡಿಸುವುದಿಲ್ಲ. ಕಳೆದ ಬಾರಿ ಊರಿಗೆ ಹೋದಾಗ ಅಪ್ಪ ನನ್ನ ಬಳಿ ಈ ಕಥೆ ಹೇಳಿ ನಗುತ್ತ್ದಿದರು. ಕಾರಣ ಏನೆಂದರೆ ನಾನು ಪ್ರತಿ ಬಾರಿ ಊರಿಗೆ ಹೋದಾಗಲೂ ಅವರು ನನ್ನ ಬಳಿ ಅದು ಮಾಡು, ಇದು ಮಾಡು ಅಂತ ಏನಾದರೊಂದು ಹೇಳುತ್ತಲೇ ಇರುತ್ತಾರೆ. ನಾನು ಮುಂದೆ ನೋಡುವ, ನಾಳೆ ಮಾಡುವ ಎಂದೆಲ್ಲಾ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿರುತ್ತೇನೆ. ಆದರೆ, ಈ ಬಾರಿ ಅಪ್ಪನ ಹತ್ತಿರ ನನ್ನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಮಗನೇ, ನಿನಗೆ ವಯಸ್ಸಾಗುತ್ತಿದೆ. ಒಂದು ಮದುವೆ ಅಂತ ಮಾಡಿದರೆ ನಮ್ಮ ಭಾರ ಸ್ಪಲ್ಪ ಇಳಿಯುತ್ತದೆ. ನಿನಗೆ ಜವಾಬ್ದಾರಿಯೂ ಬರುತ್ತದೆ. ಲಾಂಗೂರ್ ಮಂಗನಂತೆ ಕೆಲಸಗಳನ್ನು ಫೋಸ್ಟ್ ಪೋನ್ ಮಾಡುವ ನಿನ್ನ ಆಲಸ್ಯತನವೂ ತಹಬದಿಗೆ ಬರುತ್ತದೆ ಎಂದು ಕಿವಿ ಹಿಂಡ್ದಿದರು. ಮದುವೆ ಎಂದ ಕೂಡಲೇ ನನ್ನ ಎರಡೂ ಕಿವಿಗಳು ನೆಟ್ಟಗಾಗಿ, ಅದರಿಂದ ಆಗುವ ಅನಾಹುತಗಳ ನೆನೆದು ತಲೆಯೂ ಭಾರವಾಗಿ ಸುಮ್ಮನೆ ಕುಳಿತು ಬಿಟ್ಟೆ. ಅದೇನು ಮಹಾ ವಯಸ್ಸಾಯಿತೆಂದು ನನಗೀಗ ಮದುವೆ, ಎಂಬ ಮಾತು ಬಾಯಿಗೆ ಬಂದರೂ ಅಪ್ಪ ನಾನು ಬಾಯಿ ತೆರೆಯುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ. ನೋಡು ಇನ್ನು ೬ ತಿಂಗಳಲ್ಲಿ ನಿನ್ನ ಮದುವೆ ಮಾಡಿಯೇ ತೀರುತ್ತೇವೆ. ಒಂದೋ ನೀನೇ ಹುಡುಗಿ ಹುಡುಕಿಕೋ ಅಥವಾ ನಾವೇ ಹುಡುಕ್ದಿದನ್ನು ಒಪ್ಪಿಕೋ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಅಷ್ಟೇ ಅಲ್ಲ, ಮರು ದಿನವೇ ಚರ್ಚಿಗೆ ಹೋಗಿ ವಿವಾಹ ಪೂರ್ವ ತರಬೇತಿ ಪಡೆಯಲು ಅಗತ್ಯವಿರುವ ಪ್ರಮಾಣ ಪತ್ರವನ್ನೂ ಪಾದ್ರಿಗಳಿಂದ ತಂದುಕೊಟ್ಟರು. (ಈ ಕುರಿತು ಹಿಂದೆ ಬರೆದಿದ್ದೆ ಇಲ್ಲಿ ಓದಿಕೊಳ್ಳಿ)

         ಅಂದು ರಾತ್ರಿಯಿಡಿ ನನಗೆ ನಿದ್ರೆಯೇ ಬರಲಿಲ್ಲ. ಮದುವೆಯಾದ ಹೆಣ್ಣನ್ನು ತಾಳಿ ನೋಡಿ ಗುರುತಿಸಬಹುದು, ಮದುವೆಯಾದ ಗಂಡನ್ನು ಹ್ಯಾಪುಮೋರೆ ಮತ್ತು ಪೆಚ್ಚು ನಗೆಯಿಂದ ಗುರುತಿಸಬಹುದು’ ಎಂದು ಹಿಂದೆ ಯಾರೋ ಹೇಳಿದ ಜೋಕನ್ನು ನೆನಪು ಮಾಡಿಕೊಂಡು, ನನಗೆ ಒದಗಬಹುದಾದ ಅವಸ್ಥೆ ನೆನೆದುಕೊಂಡು ಮಲಗಿದೆ. ಒಂದೆರಡು ದಿನ ಕಳೆದ ಮತ್ತೆ ನಮ್ಮ ಕರ್ಮಭೂಮಿ ಬೆಂಗಳೂರಿಗೆ ವಾಪಸ್ ಬಂದೆ. ಶುರುವಾಯಿತು ಮದುವೆ ಪ್ರಪೋಸಲ್‌ಗಳ ಪ್ರವಾಹ. ರಾಜ್ಯದ ನಾನಾ ಭಾಗಗಳಿಂದ ಬಂದ ವಿವಾಹ ಪ್ರಸ್ತಾವಗಳನ್ನು ಅಪ್ಪ-ಅಮ್ಮ ಪರಿಷ್ಕರಿಸಿ ನನಗೆ ದಿನಂಪ್ರತಿ ವರದಿ ಒಪ್ಪಿಸುತ್ತಿದ್ದರು. ನಾನು ಏನಾದರೊಂದು ನೆವ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಯಾಕೊ ಎರಡು ದಿನ ಕಳೆಯುವಷ್ಟರಲ್ಲಿ ಇವರು ನನಗೆ ಮದುವೆ ಮಾಡಿಯೇ ತೀರುತ್ತಾರೆ ಎಂದು ಬಲವಾಗಿ ಅನಿಸಲು ಶುರುವಾಯಿತು. ಕೊನೆಗೆ ನಾನೇ ಮಣಿದು, ಸರಿ ಹಾಗಾದರೆ, ನನಗೆ ಹುಡುಗಿಯ ನಂಬರ್ ಕೊಡಿ ಅಥವಾ ಹುಡುಗಿಗೆ ನನ್ನ ನಂಬರ್ ಕೊಡಿ. ನೇರವಾಗಿ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬರುತ್ತೇನೆ ಎಂದೆ.

         ನನ್ನ ಸ್ನೇಹಿತರಲ್ಲಿ ಅನೇಕರು ನನ್ನ ಅವಸ್ಥೆ ನೋಡಿ, ಮರುಕವನ್ನೂ, ವಿಷಾದವನ್ನೂ, ಸಂತೋಷವನ್ನೂ ವ್ಯಕ್ತಪಡಿಸಿದರು. ಮದುವೆ ಆದ ಕೆಲವರು ’ಮೊದಲ್ಲೆಲ ಹಾಗೆ, ಈಗ ನೋಡು, ನಾವೆ ನಮ್ಮ ಹೆಂಡತಿಯರಿಗೆ ಹೊಂದಿಕೊಂಡಿಲ್ವಾ? ಅಂತ ಸಮಾಧಾನ ಮಾಡಿದರು. ‘ಎಲ್ಲ ಹುಡುಗಿಯರು ನಿಮ್ಮ ಕಣ್ಣಿಗೆ ಸುಂದರಿಯರಾಗಿ ಕಾಣುವ ಸಮಯದಲ್ಲೇ ಮದುವೆಯಾಗಬೇಕು’. ಮದುವೆಗೆ ಮನಸ್ಸು ಅಣಿಗೊಂಡಾಗ ಎಲ್ಲರೂ ಚೆಲುವೆಯರಾಗಿಯೇ ಕಾಣುತ್ತಾರೆ’ ಎಂದು ಗೆಳೆಯ ಪ್ರಶಾಂತ್ ತನ್ನ ವಯಸ್ಸಿಗೂ ಮೀರಿದ ಅಮೂಲ್ಯ ಸಲಹೆ ನೀಡಿದ. ಬೆಂಗಳೂರಿನ ಸಮಸ್ತ ಸುಂದರಿಯರೆಲ್ಲ ಇಲ್ಲೇ ಮೆರವಣಿಗೆ ಹೊರಟ್ದಿದಾರೇನೋ ಎನ್ನುವಂತೆ ಸಂಜೆ ಮ್ಲಲೇಶ್ವರದ ಸ್ಯಾಂಕಿ ಕರೆ ಸುತ್ತ ವಾಕಿಂಗ್ ಹೊರಟ ಹುಡುಗಿಯರು ತಕ್ಷಣ ನನ್ನ ತಲೆಯೊಳಗೆ ನಡೆದು ಹೋದರು. ಇವರಲ್ಲಿ ಯಾರಾದರೂ ಆಗಬಹುದೇ ಎಂದುಕೊಂಡೆ. ಹಿಂದೆ ಇದೇ ಹುಡುಗಿಯರ ಬಗ್ಗೆ ಒಂದು ಕಥೆ ಬರೆಯಬೇಕೆಂದು ನಾನು ಗೆಳೆಯ ಸೂರ್ಯ ಇಬ್ಬರೂ ಸೇರಿ ಒಂದೆರಡು ವಾರ ಸ್ಯಾಂಕಿ ಕೆರೆ ಸುತ್ತಿ ಬಂದ್ದಿದೆವು! (ಅದೊಂದು ಬೇರೆ ಕಥೆ!).

          ಹೀಗಿರಲು ಒಂದು ದಿನ ದಕ್ಷಿಣ ಕನ್ನಡದಿಂದ ಮದುವೆ ಬ್ರೋಕರ್ ಒಬ್ಬರು ಫೋನ್ ಮಾಡಿ ಹುಡುಗಿಯೊಬ್ಬಳ ನಂಬರ್ ಕೊಟ್ಟರು. ನಾನು ಆ ನಂಬರ್ ಪಡೆದುಕೊಂಡು ಎರಡು ದಿನ ಸುಮ್ಮನೆ ಕಳೆದೆ. ಆಮೇಲೆ ಒಂದು ದಿನ ಫೋನ್ ಮಾಡಿದೆ. ಕರೆ ಸ್ವೀರಿಸಿದ ಹುಡುಗಿ ನೇರವಾಗಿಯೇ ಮಾತನಾಡಿದಳು. ನನಗೆ ಯಾಕೋ ಈ ಹುಡುಗಿ ಕೂಡ ನನ್ನ ತರಾನೇ ಯೋಚನೆ ಮಾಡುವವಳು, ಪರವಾಗಿಲ್ಲ ಅಂತ ಅನಿಸತೊಡಗಿತು. ಒಬ್ಬ ಬಡ ಪತ್ರಕರ್ತನಾದ ನನ್ನನ್ನು ಮದುವೆಯಾದರೆ ಎದುರಿಸಬೇಕಾಗಿ ಬರಬಹುದಾದ ಸವಾಲುಗಳನ್ನು ತಿಳಿ ಹೇಳಿ ನೋಡಿದೆ. ಸವಾಲು ಸ್ವೀಕರಿಸಲು ಸಿದ್ಧಳಿದ್ದ ಹಾಗಿತ್ತು ಹುಡುಗಿಯ ಧ್ವನಿ. ಒಂದು ದಿನ ಮುಖತಃ ಮಾತನಾಡೋಣ ಅಂದೆ. ಆಯಿತು ಅದಕ್ಕೇನಂತೆ ಅಂದರು. ನನ್ನ ಗೆಳೆಯ ಆಕೆಯ ಹೆಸರು ಹೇಳ್ದಿದೇ ತಡ ಫೇಸ್‌ಬುಕ್ ಜಾಲಾಡಿ ಚಿತ್ರ, ವಿಳಾಸ, ಇತ್ಯಾದಿ ಸಮಗ್ರ ಮಾಹಿತಿಗಳನ್ನು ಹುಡುಕಿ ಕೊಟ್ಟು ಇವರೇ ನೋಡಿ ಅವರು ಎಂದ. ಮಲ್ಲಿಗೆಯಂತ ಮ್ದುದು ಮುಖದ ಹುಡುಗಿ. ನನಗೆ ಯಾಕೋ ಈ ಹುಡುಗಿ ತುಂಬಾ ಪಾಪ ಇರಬೇಕು ಅಂತ ಅನಿಸಿತು. ಸುಮ್ಮನೆ ಕಿಚಾಯಿಸಲು ಕೇಳಿದೆ. ಅದಕ್ಕೆ ಅವರು ಅಷ್ಟೇನೂ ಪಾಪ ಅಲ್ಲ, ಸ್ವಲ್ಪ ಜೋರು ಇದೀನಿ ಅಂದರು. (ಮದುವೆ ಆದ ಮೇಲೆ ಹುಡುಗಿಯರೆಲ್ಲ ಜೋರಾಗುತ್ತಾರಂತೆ) ಒಂದು ವಾರ ಕಳೆದು ಮುಖತಃ ಭೇಟಿಯಾಯಿತು. ಮಾತುಕತೆ ನಡೆಯಿತು. ಹುಡುಗಿಗೆ ಏನೋ ಹೇಳಲು ಸಂಕಟ. ನಾನು ಒತ್ತಾಯ ಮಾಡಲಿಲ್ಲ. ಎರಡು ದಿನ ಕಳೆದ ಬ್ರೋಕರ್ ಫೋನ್ ಮಾಡಿ ವಿಷಯ ಹೇಳಿದರು. ಹೀಗಂತೆ.. ಅದಕ್ಕೆ ಅವರಿಗೆ ಸ್ವಲ್ಪ ಸಮಯ ಬೇಕಂತೆ ಅಂದರು... ಆಯಿತು ಎಂದೆ. ಹೀಗೆ ಮುಗಿಯಿತು ನನ್ನ ಮೊದಲ ಮದುವೆ ಪ್ರಪೋಸಲ್..!

           ಈಗ ನಾನು ನಮ್ಮ ಮನೆಯ ಕಿಟಕಿಯ ಸರಳುಗಳಿಂದ ಹೊರಗೆ ಕಣ್ಣು ಹಾಯಿಸಿ, ಸುರಿಯುತ್ತಾ ಇರುವ ಮಳೆಯನ್ನೇ ನೋಡುತ್ತಾ ನಿಂತ್ದಿದೇನೆ. ಹುಡುಗಿ ಕೂಡ ಈ ಮಳೆಯಂತೆಯೇ ಆರ್ದ್ರವಾಗಿ, ಭಾವುಕಳಾಗಿ, ಸ್ನಿಗ್ದ ಸೌಂದರ್ಯ ದೇವತೆಯಾಗಿ ಇದ್ದರೆ ಎಷ್ಟು ಚೆಂದ ಅನಿಸುತ್ತದೆ. ಹಾಗೆ ಯೋಚಿಸುವಾಗಲೆಲ್ಲ ಹೊರಗೆ ಮೋಡ ಕವಿದ ವಾತಾವರಣವೂ ಆಪ್ತವಾಗಿ, ಅಪ್ಯಾಯಮಾನವಾಗಿ ಕಾಣುತ್ತದೆ. ಮನಸ್ಸು ಉಲ್ಲಾಸಗೊಂಡು ಮತ್ತೊಂದು ಖುಷಿಯ ಮಗ್ಗುಲಿಗೆ ಜಿಗಿಯಲು ಅಣಿಗೊಳ್ಳುತ್ತದೆ.

        ಮತ್ತೆ ಮೊಬೈಲ್ ರಿಂಗ್ ಆಗುತ್ತಿದೆ. ಊರಿನಿಂದ ಅಪ್ಪ ಫೋನ್ ಮಾಡುತ್ತಿದ್ದಾರೆ... ಮತ್ತೊಂದು ಮದುವೆ ಪ್ರಪೋಸಲ್ ಇರಬಹುದು..-:)

Sunday 20 June, 2010

ಬೆಂಗಳೂರಿನ ಮಳೆ..!


ಬೆಂಗಳೂರಿನಲ್ಲೀಗ ಮಳೆಯ ಸಂಭ್ರಮ. ಹೊತ್ತೇರಿದರೂ ಕವಿದ ಮಬ್ಬುಗತ್ತಲು. ಆಗಸದ ತುಂಬ ಕರಿಮೋಡಗಳು. ಮಳೆ ಸುರಿಯುತ್ತದೆಯೇ ಎನ್ನುವ ಧಾವಂತದ ನಡುವೆ ಅವಸರಿಸಿ ಶಾಲೆಗೆ ಹೊರಟ ಪುಟಾಣಿಗಳು, ಸಿಗ್ನಲ್‌ನಲ್ಲಿ ತಡವರಿಸುವ ಅವರ ಪುಟ್ಟ ಪಾದಗಳು. ಹಳೆಯ ಛತ್ರಿ ಹುಡುಕಿ ಆಫೀಸಿಗೆ ಹೊರಟ ನಿತ್ಯ ಶ್ರಮಿಕರು. ಪಾರ್ಕಿನಲ್ಲಿ, ರಸ್ತೆಯಂಚಿನಲ್ಲಿ ಮರದ ಎಲೆಗಳಿಂದ ತೊಟ್ಟಿಕ್ಕುವ ಮಳೆಹನಿ. ತೊಯ್ದ ಪುಕ್ಕಗಳನ್ನು ಕೊಡವಿ ಸ್ವಚ್ಛಗೊಳಿಸುತ್ತಿರುವ ಹಕ್ಕಿಗಳು.. ಪ್ಲಾಸ್ಟಿಕ್ ಹೊದೆಸಿ ಮಳೆಯನ್ನು ಶಪಿಸುತ್ತಿರುವ ಫುಟ್‌ಪಾತ್ ವ್ಯಾಪಾರಿಗಳು...

ಈ ಮಳೆಯೆಂದರೆ ಅದೆಷ್ಟು ಸಂಭ್ರಮ. ನೆನಪಿನಾಳದಲ್ಲಿ ಹುದುಗಿರುವ ಕಥೆಗಳು ಮರುಹುಟ್ಟು ಪಡೆಯಲು ಮಳೆಯ ಸಾಥ್ ಬೇಕು. ಬೇರೆ ಊರುಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರ ಪಾಲಿಗೆ ಮಳೆಯೆಂದರೆ ಸುಂದರ ನೆನಪುಗಳ ಕನವರಿಕೆ. ಊರಿಗೆ ಫೋನು ಮಾಡಿದಾಗೊಮ್ಮ ನಾನು ಕೇಳುತ್ತೇನೆ, ‘ಅಮ್ಮಾ ಮಳೆಯಾಗುತ್ತಿದೆಯಾ ಅಲ್ಲಿ? ಮಳೆ ಸುರಿಯುತ್ತಿದ್ದರೆ ಅದರ ಶಬ್ದ ಕೇಳುವ ಬಯಕೆ, ಪ್ಲೀಸ್ ಮಳೆ ಸುರಿಯವ ವಿಡಿಯೋ ತೆಗೆದು ಅದನ್ನು ಮೇಲ್ ಮಾಡ್ಲಿಕ್ಕೆ ಆಗುತ್ತಾ?’ ನಾಲಿಗೆ ತುದಿಗೆ ಬಂದ ಬಯಕೆ ಮನದಲ್ಲೇ ಉಳಿದುಬಿಡುತ್ತದೆ. ಯಾಕೆ ಮಳೆ ನಮ್ಮನ್ನು ಇಷ್ಟೊಂದು ಕಾಡುತ್ತದೆ. ಅಸಲಿಗೆ ಮಳೆಯೆಂಬ ಕಲ್ಪನೆಯೇ ಅದ್ಭುತವಲ್ಲವೆ? ಮಳೆ ಸುರಿಯುವಾಗ ಮುಗಿಲಿಗೆ ಮುಖವೊಡ್ಡಿದರೆ, ಮನಸ್ಸು ಕೂಡ ತೊಯ್ದು ತೊಪ್ಪೆ. ‘ಮಳೆ ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಮಳೆಯಲ್ಲಿ ಅಳುವುದು, ಕಣ್ಣೀರುಗೆರೆಯುವುದು ಯಾರಿಗೂ ಗೊತ್ತಾಗುವುದಿಲ್ಲ. ತುಂಬಾ ದುಃಖವಾದಾಗ ನಾನು ಮಳೆಯಲ್ಲಿ ಅಳುತ್ತಾ ನಡೆಯುತ್ತೇನೆ’. ಎಂದಿದ್ದರು ಇಡೀ ವಿಶ್ವವನ್ನೇ ನಕ್ಕು ನಗಿಸಿದ ಹಾಸ್ಯ ನಟ ಚಾರ್ಲಿ ಚಾಪ್ಲಿನ್.

ಆದರೆ ಬೆಂಗಳೂರಿನ ಮಳೆಗೆ ಜೀವಂತಿಕೆಯೇ ಇಲ್ಲ ಎಂದೆನಿಸುತ್ತದೆ. ಮಗುವಿನ ಅಳುವಿನಂತೆ ಸುರಿಯುವ ಇಲ್ಲಿನ ಮಳೆಯಲ್ಲಿ ಮಣ್ಣಿನ ವಾಸನೆ ಆಘ್ರಾಣಿಸೋಣವೆಂದರೆ ಇಲ್ಲಿ ಮಣ್ಣು, ಕಲ್ಲು, ಮಾನವೀಯತೆ ಎಲ್ಲವೂ ಕರಗಿ ಹೋದಂತಿದೆ. ಮಳೆ ಸುರಿದರೆ ತಗ್ಗಿನ ಪ್ರದೇಶಗಳಲ್ಲಾ ನೀರು ತುಂಬಿ, ತಗ್ಗು, ಉಬ್ಬು ಎಲ್ಲಿ ಎಂದು ಗೊತ್ತಾಗದೆ ಸಂಭವಿಸುವ ದುರಂತಗಳು ಕಣ್ಣೆದುರಿಗೆ ನಿಲ್ಲುತ್ತವೆ. ಕಳೆದ ವರ್ಷ ಇಂಥದೇ ಮಳೆಯಲ್ಲಿ ಲಿಂಗರಾಜಪುರದ ಅಭಿಷೇಕ್ ಎನ್ನುವ ಬಾಲಕ ಕೊಚ್ಚಿಕೊಂಡು ಹೋದ ನೆನಪು ಕಣ್ಣಲ್ಲಿ ಮಳೆಹನಿಯಂತೆ ನೀರು ತರಿಸುತ್ತದೆ. ಇನ್ನು ಮಳೆ ನೆನೆಯಬೇಕೆಂದರೆ ಸ್ಥಳವೆಲ್ಲಿದೆ?
ಸಮಯವೆಲ್ಲಿದೆ? ಟೇರಸ್ ಮೇಲೆ ನಿಂತ ನೀರಿನಲ್ಲಾದರೂ ಕಾಲೂರುವ ಆಸೆಯಾಗುತ್ತಿದೆ. ಮಳೆನೀರಿನಲ್ಲಿ ಕಾಗದದ ದೊಣಿ ಹರಿಬಿಟ್ಟು ಆಟವಾಡುವ ಮಕ್ಕಳು ಎಲ್ಲಿಯಾದರೂ ಕಾಣಸಿಗುತ್ತಾರೆಯೇ ಎಂದು ಕಣ್ಣುಗಳು ಅರಸುತ್ತಿವೆ.

ಮಲೆನಾಡಿನಂತೆ ಬೆಂಗಳೂರಿನಲ್ಲಿ ರಾತ್ರಿ ಮಿಣುಕುಹುಳಗಳ ಸೌಂದರ್ಯವಿಲ್ಲದಿದ್ದರೂ, ಮಳೆಗಾಲದ ರಾತ್ರಿಗಳಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿ ಹೊರಟರೆ ಇಲ್ಲಿನ ಕೆಂಪು ನಿಯಾನ್ ದೀಪಗಳು ರಾತ್ರಿ ನೆಕ್ಲೆಸ್ ಥರ ಕಾಣಿಸುತ್ತದೆ. ಮಳೆ ಬರುತ್ತಿದ್ದರೆ ಇಲ್ಲಿನ ಎಫ್‌ಎಂ ಸ್ಟೇಷನ್‌ಗಳಿಂದ ರೊಮ್ಯಾಂಟಿಕ್ ಕಲ್ಪನೆಗಳು ತೇಲಿಬರುತ್ತಿರುತ್ತವೆ. ಭವಿಷ್ಯದಲ್ಲಿ ಸ್ನಾನ ಮಾಡಬೇಕಾದರೆ ಈಗಲೇ ‘ಬಕೇಟ್ ಹಿಡಿಯಿರಿ’ ಎನ್ನುವಂತ ಜೋಕ್ಸುಗಳು ‘ಮಳೆ ನೀರು ಇಂಗಿಸುವ’ ಸರಳ ಪಾಠವನ್ನು ಹೇಳಿಕೊಡುತ್ತಿವೆ. ಈ ಮಳೆ ಸುರಿಯುವ ಹೊತ್ತಿನಲ್ಲಿ ನಿಮ್ಮ ಪ್ರಿಯತಮೆಯ ಕೈ ಹಿಡಿದು ಬೆಂಗಳೂರಿನ ಯಾವ ರಸ್ತೆಯಲ್ಲಿ ನಡೆಯಲು ನಿಮಗೆ ಇಷ್ಟವಾಗುತ್ತದೆ, ನಮಗೆ ಕರೆ ಮಾಡಿ ಹೇಳಿ’ ಎಂಬ ರೇಡಿಯೋ ಜಾಕಿಯ ಪ್ರಶ್ನೆಗೆ, ’ಬೆಂಗಳೂರಿನ ಮಳೆ ಬೇಡ ಸ್ವಾಮಿ, ಮಳೆ ಸುರಿಯುವ ಹೊತ್ತಿನಲ್ಲಿ ಧಾರವಾಡ ಯೂನಿವರ್ಸಿಟಿ ಕ್ಯಾಂಪಸ್‌ನಿಂದ ಶ್ರೀನಗರ ಸರ್ಕಲ್ ತನಕ ನನ್ನ ಕನಸಿನ ಹುಡುಗಿಯ ಕೈ ಹಿಡಿದು ನಡೆದುಕೊಂಡು ಹೋಗುವ ಆಸೆಯಾಗುತ್ತಿದೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತೇನೆ. .

ಇತ್ತ ಊರಿನಲ್ಲಿ ಮಳೆಯಾಗುತ್ತಿರುವ ಸುದ್ದಿ ತಿಳಿದು ಏನೋ ಬಹುಮುಖ್ಯವಾದುದನ್ನು ಕಳೆದುಕೊಂಡ ಸಂಕಟದ ಭಾವವೊಂದು ಮತ್ತೆ ಮತ್ತೆ ಕೈ ಹಿಡಿದು ಜಗ್ಗಿದಂತಾಗುತ್ತಿದೆ. ನಮ್ಮೂರಿನ ಪುಟಾಣಿ ಕಂದಮ್ಮಗಳು ಕಂಬಳಿ ಕುಪ್ಪೆಯೋ, ಛತ್ರಿಯೋ ಹಿಡಿದು ಕಾಲು ಸಂಕದ ಮೇಲೆ ಹೆಜ್ಜೆಯಿಡುವ ಚಿತ್ರ ಕಣ್ಮುಂದೆ ಬರುತ್ತಿದೆ.. ಮಳೆಯನ್ನು ಯಾರಾದರೂ ‘ಥೂ ದರಿದ್ರ’ ಎಂದು ಬೈದರೆ ಮನಸ್ಸು ಭಾರವಾಗುತ್ತದೆ. 'ಮಳೆ ನಿಂತ ನಂತರ ಎಲೆಯ ಮೇಲಿದ್ದ ಹನಿಗಳೆಲ್ಲಾ ಅವಳ ಹೆಸರನ್ನು ಹೇಳುತ್ತಾ ಉದುರಿಬಿದ್ದವು' ಎಂದು ಕವಿಯಂತೆ ಹಾಡುತ್ತಾ, ನೆನಪಿನ ಮಳೆಯಲ್ಲಿ ಕೊಚ್ಚಿಕೊಂಡು ಹೋಗುವ ಆಸೆಯಾಗುತ್ತಿದೆ..
Happy Monsoon...

Monday 31 May, 2010

ಗೆಳೆಯನ ಮದುವೆ


ಗೆಳೆಯ,ಚನ್ನು ಮೂಲಿಮನಿ ಕಳೆದವಾರ ಮದುವೆಯಾದ.ತಾನು ಪ್ರೀತಿಸಿದ,ತನ್ನನ್ನು ಪ್ರೀತಿಸುವ ಹುಡುಗಿಯನ್ನೇ ಮದುವೆಯಾದ ಅದೃಷ್ಟವಂತ ಆತ. ನಾವೆಲ್ಲ ರಾತ್ರಿಯೇ ಬೆಂಗಳೂರು ಬಿಟ್ಟು ಬೆಳಿಗ್ಗೆ ಧಾರವಾಡದಲ್ಲಿಳಿದು,ಸಾಧನಕೇರಿಯಲ್ಲಿರುವ ಕಲ್ಯಾಣ ಮಂಟಪಕ್ಕೆ ಹೋಗಿ ವಧು-ವರರನ್ನು ಹರಸಿ ಬಂದೆವು.'ನಿನ್ನ ಬ್ಯಾಚುಲರ್ ಜೀವನ ಮುಗಿಯಿತು,ನೀನಿನ್ನು ಸಂಸಾರಸ್ಥ,ಮೊದಲಿನ ಹಾಗೆ ಸೋಮಾರಿಯಾಗಿ ಕಾಲ ಕಳೆಯಬೇಡ.ನೋಡು,'ಒಲವೇ ಜೀವನ ಸಾಕ್ಷಾತ್ಕಾರ''ನೀವಿಬ್ಬರು ನಿಮಗೊಬ್ಬರು'ಇತ್ಯಾದಿ ಸಂಸಾರ ಸೂತ್ರಗಳನ್ನು ನೆನಪಿಟ್ಟುಕೋ.ಸಿಗರೇಟು ಸೇದುವುದನ್ನು ಕಡಿಮೆ ಮಾಡು, ಚಂದಕೆ ಬಾಳ್ವೆ ಮಾಡು, ಹೀಗೆ ಇತ್ಯಾದಿ ನಮಗೆ ಗೊತ್ತಿರುವ ಉಪದೇಶಗಳನ್ನು ಹೇಳಿ ಬಂದೆವು.

ಸ್ವಲ್ಪ ಸೋಮಾರಿತನ ಬಿಟ್ಟರೆ, ಚನ್ನು ತುಂಬಾ ಒಳ್ಳೆಯ ಹುಡುಗ.ಪದವಿಯಿಂದ ನಾವಿಬ್ಬರೂ ಜೊತೆಗೇ ಓದಿದ್ದೇವೆ.ಹಾಗೆ ನೋಡಿದರೆ ನನ್ನ ಸ್ನಾತಕೋತ್ತರ ಕ್ಲಾಸ್ ಮೇಟ್ ಗಳಲ್ಲಿ ಮೂವರು ಮದುವೆಯಾಗಿದ್ದಾರೆ. ಒಬ್ಬನಿಗೆ ಮಗುವೂ ಆಗಿದೆ.ಇನ್ನು ನಾಲ್ಕಾರು ಜನ ನಿಶ್ಚಿತಾರ್ಥ ಮುಗಿದ ಖುಷಿಯಲ್ಲಿದ್ದಾರೆ. ಮದುವೆಯಾಗುವುದು,ಮಕ್ಕಳಾಗುವುದು ಈ ಲೋಕದ ಅದ್ಭುತ ವಿಷಯಗಳೇನೂ ಅಲ್ಲದಿರುವುದರಿಂದ ಆ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತ. ಆದರೆ ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವುದರಿಂದ ಅದರ ಕುರಿತು ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ.

ಮದುವೆಯಾಗುವವರು ಮೊದಲು ವೈವಾಹಿಕ ಬದುಕಿನ ಎಲ್ಲ ವಾಸ್ತವಗಳಿಗೆ ಸಿದ್ದರಾಗಬೇಕು.ಸಂಪ್ರದಾಯದ ಮದುವೆಯಾಗಲಿ,ಬಂಡಾಯದ ಮದುವೆಯಾಗಲಿ, ಇಲ್ಲಿ ಅಪಾರ ಸಹನೆ,ತಿಳುವಳಿಕೆ ಮತ್ತು ಪ್ರಜ್ಞಾಪೂರ್ವಕವಾಗಿ ಹೊಣೆಯರಿತು ವರ್ತಿಸುವ ಮನಸ್ಸು ಇಲ್ಲದಿದ್ದರೆ ಎಲ್ಲವೂ ಮುರಿದು ಬೀಳುತ್ತದೆ. ಮದುವೆ ಮನಸ್ಸಿನ ಆಳದಲ್ಲಿ ತೀರ್ಮಾನಿಸಬೇಕು. ಯಾರದೋ ಒತ್ತಡಕ್ಕೆ,ಇನ್ಯಾವುದೋ ಕಟ್ಟುಪಾಡಿಗೆ ಮದುವೆಯಾಗಬಾರದು.ಔದಾರ್ಯ ಹಾಗೂ ಕನಿಷ್ಠ ಪ್ರೀತಿ ಇಲ್ಲದಿದ್ದರೆ ಯಾವುದೇ ಸಂಬಂಧಗಳು ಮುರಿದು ಬೀಳುತ್ತದೆ.‘ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸಲ್ಪಡುತ್ತವೆ’ಎಂಬ ಮಾತಿದೆ.ಆದರೆ ವಾಸ್ತವ ಹೀಗಿಲ್ಲ. ಮದುವೆ ನಡೆಯುವುದು ಭೂಮಿಯಲ್ಲೇ.ಮದುವೆಗೆ ಮುನ್ನ ಮೊಬೈಲ್‌ಗಳಲ್ಲಿ ಹರಿದಾಡುವ ಪ್ರೀತಿ,ಮದುವೆಯ ನಂತರ ಇರುವುದಿಲ್ಲ.ಇಷ್ಟಪಟ್ಟು ಮದುವೆಯಾದವರೂ ಕಷ್ಟಪಟ್ಟು ಹೊಂದಿಕೊಂಡು ಹೋಗುತ್ತಾರೆ.ದಾಂಪತ್ಯ ಸ್ವರ್ಗ ಎನ್ನುವ ಕಲ್ಪನೆ ಬದಲಾಗಿ ಬದುಕು ಅಸಹನೀಯ ಎನಿಸತೊಡಗುತ್ತದೆ. ಮದುವೆಯಾಗುವವರು ಇದನ್ನೆಲ್ಲ ತಿಳಿದುಕೊಂಡಿರಬೇಕು.

ಬೈಬಲ್ ನಲ್ಲಿ ಒಂದು ಕಥೆಯಿದೆ.ನಿಮಗೂ ಗೊತ್ತಿರಬಹುದು.ದೇವರು ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದ ನಂತರ ಅವನಿಗೆ ಸರಿ ಬೀಳುವ ಸಂಗಾತಿ ಕಾಣಲಿಲ್ಲ.ಹೀಗಿರುವಾಗ ದೇವರು ಮನುಷ್ಯನಿಗೆ ಗಾಢ ನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿ, ತಾನು ಮನುಷ್ಯನಿಂದ ತೆಗೆದ ಎಲುಬನ್ನು ಸ್ತ್ರೀಯಾಗಿ ಮಾಡಿ, ಆಕೆಯನ್ನು ನೋಡಿ,“ಈಕೆಯು ನಿನ್ನ ಎಲುಬುಗಳಿಂದ ಬಂದ ಎಲುಬೂ,ನಿನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ.ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರಿ ಎನಿಸಿಕೊಳ್ಳುವಳು.ನೀವಿಬ್ಬರು ಪರಸ್ವರ ಹೊಂದಿಕೊಂಡು ಜೀವನ ಮಾಡತಕ್ಕದು'ಎಂದು ಹೇಳುತ್ತಾರೆ.ಹೀಗೆ ಗಂಡು ಹೆಣ್ಣು ಒಂದಾಗಿ ಸಂಸಾರ ನಡೆಸುತ್ತಾರೆ.ಅರ್ಧಾಂಗಿ ಎಂದು ಕರೆಯುವುದರ ಅರ್ಥವೂ ಇದೆ.ದುರಂತವೆಂದರೆ ಜಾಗತೀಕರಣದ ಬೆನ್ನಿಗಂಟಿಕೊಂಡೇ ಬಂದ ವಾಣಿಜ್ಯೀಕರಣ ಮದುವೆಯನ್ನೂ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಭೋಗದ ವಸ್ತುವನ್ನಾಗಿ ಮಾಡಿದೆ ಎನ್ನುವುದು.

ಈಚೆಗೆ ಒಬ್ಬರು ವಾಚಕರ ವಾಣಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.ಆದೇನೆಂದರೆ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೆಚ್ಚಿನವರು ಅವರವರ ಜಾತಿ ಸಮಾಜದ ಸಂಘವನ್ನು ಕಟ್ಟಿಕೊಂಡಿದ್ದಾರೆ.ವರ್ಷಕ್ಕೊಮ್ಮೆ ಜಾತಿ ಸಮ್ಮೇಳನಗಳು ನಡೆಯುತ್ತವೆ. ವಿಚಾರಗೋಷ್ಠಿಗಳು,ಉಪನ್ಯಾಸಗಳು,ಸಂಪ್ರದಾಯದ ಊಟ, ಕುಲ ಕಸುಬಿನ ಪ್ರಾತ್ಯಕ್ಷಿಕೆ ಎಲ್ಲವೂ ಭರ್ಜರಿಯಾಗಿಯೇ ಇರುತ್ತವೆ.ಇಷ್ಟಿದ್ದರೂ ಎಲ್ಲ ಜಾತಿಗಳಲ್ಲೂ ಜೀವಂತವಾಗಿರುವ ವರ್ತಮಾನದ ಬಹುಮುಖ್ಯ ವಿಷಯವೊಂದು ಚರ್ಚಿತವಾಗುವುದಿಲ್ಲ.ಅದೇ ವರದಕ್ಷಿಣೆ!.ಹೌದಲ್ಲವೇ? ಅವರು ಎತ್ತಿರುವ ಪ್ರಶ್ನೆ ಎಷ್ಟೊಂದು ಸಕಾಲಿಕ.ಯಾಕೆ ಯಾರೂ ಆ ಕುರಿತು ಯೋಚಿಸುವುದಿಲ್ಲ?

ಪರಸ್ಪರ ಪ್ರೀತಿ ವಿಶ್ವಾಸದ ಆಧಾರದ ಮೇಲೆ ನಡೆಯುವ ಸರಳ ವಿವಾಹಗಳನ್ನು ನಾವು ಪ್ರೋತ್ಸಾಹಿಸಬೇಕು.ಇಂಥ ಮದುವೆಗಳಿಗೆ ಇಡೀ ಸಮಾಜ ಬೆಂಬಲವಾಗಿ ನಿಲ್ಲಬೇಕು.ಆಗ ಹಣ ಅಂತಸ್ತಿನ ಆಧಾರದ ಮದುವೆಗಳು ತಾನಾಗಿಯೇ ನಿಲ್ಲುತ್ತವೆ.ಈ ಪ್ರಕ್ರಿಯೆ ತಡವಾಗಿ ಆಗಬಹುದಾದರೂ ಈ ನಿಟ್ಟಿನಲ್ಲಿ ವಿದ್ಯಾವಂತರು ಪ್ರಯತ್ನಗಳನ್ನು ಮುಂದುವರೆಸಬೇಕು.ಇತ್ತೀಚೆಗೆ ನಮ್ಮ ಕಚೇರಿಯಲ್ಲಿ ಒಬ್ಬರು ಈ ರೀತಿ ಸರಳವಾಗಿ ಮದುವೆಯಾದರು. 'ಮಾನವ ಮಂಟಪ'ದಲ್ಲಿ ನಡೆದ ಈ ಮದುವೆಯ ಖರ್ಚು ಹೆಚ್ಚೆಂದರೆ ಐದು ಸಾವಿರ ದಾಟಿರಲಿಕ್ಕಿಲ್ಲ.ಒಂದು ಮದುವೆ 5 ಸಾವಿರ ಖರ್ಚಿನಲ್ಲಿ ಮುಗಿಯುತ್ತದೆ ಎಂದರೆ ಈ ಕಾಲದಲ್ಲಿ ಊಹಿಸಲಿಕ್ಕೂ ಸಾಧ್ಯವಿಲ್ಲ.ನಿಜಕ್ಕೂ ಇದು ಮಾದರಿಯಲ್ಲವೇ?

ಅಂದಹಾಗೆ ಗೆಳೆಯ ಚನ್ನು ತನ್ನ ಮದುವೆಗೆ ಮುನ್ನ ಆಹ್ವಾನ ಪತ್ರಿಕೆಗೆ ಎರಡು ಸಾಲು ಬರೆದುಕೊಡು ಎಂದು ಕೇಳಿದ್ದ. ಏನು ಬರೆದುಕೊಡಬೇಕೆಂದು ಯೋಚಿಸಿದಾಗ ನೆನಪಿಗೆ ಬಂದಿದ್ದು, ಕೆ.ಎಸ್ ನಿಸಾರ್ ಅಹಮ್ಮದ್ ಅವರ 'ಗೆಳೆಯನ ಮದುವೆ' ಪದ್ಯದ ಸಾಲುಗಳು...

ನಾಳೆ ನಮ್ಮಿಬ್ಬರ ಮದುವೆ
ಹೊಸ ನೀರಿಗಿಳಿಯುವುದು ನಮ್ಮಿಬ್ಬರ ನಾವೆ

ಉತ್ತರೀಯಕೆ ಅಂದು ಸೀರೆ ನಿರಿಗೆಯ ಗಂಟು,
ಹಗುರಾಗಿ ಹಬ್ಬುವುದು ಹೊಸತೊಂದು ನಂಟು;
ಊಟೋಪಚಾರಗಳು ನಲಿವುಗಳೂ ಉಂಟು;
ಹಸೆಗೇರಿದಿಬ್ಬರಿಗೆ ಒಲವು ಗಂಟು

ಕಾದು ನೋಡುವೆವು ನಿಮ್ಮೆಲ್ಲರದ್ದೇ ಬರುವಿಕೆ
ಕೋರುವುದಿಷ್ಟೇ ಇರಲಿ ನಿಮ್ಮ ಹಾರೈಕೆ.

ಸಾಲುಗಳೆಷ್ಟು ಅರ್ಥಗರ್ಭಿತ. ಗೆಳೆಯ ಚನ್ನು ಮತ್ತು ಅಶ್ವಿನಿ ದಾಂಪತ್ಯದಲ್ಲಿ ಪ್ರೀತಿಯ ಒರತೆ ಬತ್ತದಿರಲಿ. ಅವರಿಬ್ಬರಿಗೂ ಒಳ್ಳೆಯದಾಗಲಿ.

Sunday 14 February, 2010

ಮೂರುಸಾವಿರ ಮಠ ನೋಡಿಯೇನ?


ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಜ್ಮೀರ ಎಕ್ಸ್ ಪ್ರಸ್ ನಿಂದ ಕೆಳಗಿಳಿದಾಗ ಬೆಳಗ್ಗೆ 7 ಗಂಟೆ. ಹೊರಗೆ ಇಡಿ ನಗರವೇ ಚಳಿಯಲ್ಲಿ ಉಸಿರಾಡುತ್ತಿರುವಂತೆ ಕಾಣುತ್ತಿತ್ತು. ನಿಧಾನ ಬಂದು ಧಾರವಾಡ ಬಸ್ಸು ಹತ್ತಿದರೆ,ಅದರೊಳಗೆ ಕುಳಿತ ಹೆಂಗಸರಿಬ್ಬರು ಸಂಭ್ರಮದಿಂದ ಮಾತನಾಡುತ್ತಿದ್ದರು.
ಮೂರುಸಾವಿರ ಮಠ ನೋಡಿಯೇನ?
ಇಲ್ಲ, ನಾ, ಸಣ್ಣಾಕಿ ಇದ್ದಾಗ ನೋಡಿದ್ದೆ, ಆಮೇಲೆ ಹೋಗಿಲ್ಲ..
ನಮ್ಮ ಮುತ್ಯಾನೂ ಅಲ್ಲೇ ಇದ್ದ. ಒಮ್ಮೆ ತೇರಿಗೆ ಹೋಗಿದ್ವಿ ನೋಡವ್ವ..
ನಡಿ, ಈಗ ಹೋಗಿ ಬರೋಣ, ಇಂವ ಬೇಕಾದ್ರೆ ಬಸ್ ಸ್ಟಾಂಡಾಗೆ ಕೂಡಲಿ..
ಜೊತೆಗಿದ್ದ ಗಂಡಸಿಗೆ ಸಿಟ್ಟು ಬಂತು.
ಹೇ..ನಿಮ್ಮss ಈಗೆಲ್ಲಿ ಹೋಗ್ತೀರ, ಸಂಜೀಕೆ ಹೋಗೋಣಂತೆ.. ಮೊದಲು ಮನಿಗೆ ಹೋಗೋಣ ನಡೀರಿ.. ಎಂದು ಜೋರು ಮಾಡಿದ..
ನೀ ಬೇಕಾದರೆ, ಬಸ್ ಸ್ಟಾಂಡಾಗ ಕುಂದ್ರು.. ನಾವು ನಡಕೊಂಡು ಹೋಗಿ ಬರ್ತೀವಿ..(ಹೆಂಗಸರಿಬ್ಬರು ಗಟ್ಟಿ ನಿರ್ಧಾರದಲ್ಲಿ ನಿಂತರು.)
ಮತ್ತೆ ಗಂಡಸು ಮಾತನಾಡಲಿಲ್ಲ.

ನಾನು ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ತುಂಬಾ ದಿನಗಳ ನಂತರ ನಾವು ನಮ್ಮ ಊರುಗಳಿಗೇ ಹೋದಾಗ ಅಲ್ಲಿರುವ ಎಲ್ಲ ವಸ್ತುಗಳು ನಮಗೆ ಅಪ್ಯಾಯಮಾನವಾಗಿ ಕಾಣುತ್ತದೆ. ನನಗೆ 'ನಡೀರಿ ಅವ್ವಾರೆ, ನಾನೂ ಬರ್ತೀನಿ, ಹೋಗಿ ನೋಡ್ಕೊಂಡು ಬರೋಣ' ಅಂತ ಹೇಳುವ ಆಸೆಯಾಯಿತು. ಆದರೆ ನನ್ನ ಕರ್ತವ್ಯ ಪ್ರಜ್ಞೆ ಧಿಡೀರನೆ ನೆನಪಾಗಿ ಮೂರುಸಾವಿರ ಮಠ ನೋಡಲು ಹೋದರೆ, ಈವತ್ತು ಕರ್ನಾಟಕ ವಿಶ್ವವಿದ್ಯಾಲಯ ತಲುಪುವುದಿಲ್ಲ ಅಂದುಕೊಂಡೆ. ನೋಡುತ್ತಿದ್ದಂತೆ ಆ ಹೆಂಗಸರಿಬ್ಬರೂ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಇಳಿದು ಹೋದರು. ನಾನು ಈ ಹಿಂದೆ ಚಪ್ಪಲಿ ಸವೆಯುವಂತೆ ಅಡ್ಡಾಡಿದ ಸಿಬಿಟಿ, ಕಾರ್ಪೋರೇಶನ್, ಚೆನ್ನಮ್ಮ ವೃತ್ತ, ವಿದ್ಯಾನಗರಗಳೆಲ್ಲಾ ಎಷ್ಟೊಂದು ಬದಲಾಗಿ ಹೋಗಿದೆಯಲ್ಲಾ ಎಂದು ಆಶ್ಚರ್ಯದಿಂದ ನೋಡುತ್ತಾ ಕುಳಿತುಕೊಂಡೆ.

ಧಾರವಾಡ ಬಸ್, ವಿದ್ಯಾನಗರ ದಾಟಿ, ಉಣಕಲ್ ಕರೆ ಬಳಸಿಕೊಂಡು ಬೈರಿದೇವರಕೊಪ್ಪದ ಸಮೀಪಕ್ಕೆ ಬಂತು. ರಸ್ತೆ ಪಕ್ಕದಲ್ಲೊಂದು ಬೋರ್ಡ್ "ಶ್ರೀ ಶಕ್ತಿ ಮೋಟಾರಸ ಕಾರ ಮೇಳ" ಮೊದಲು ನನಗೆ ಇದೇನೆಂದು ಅರ್ಥ ಆಗಲಿಲ್ಲ. ಇಲ್ಲಿ ಯಾರು ಖಾರ ಅರೆಯುತ್ತಿದ್ದಾರೆ ಎಂದು ಯೋಚಿಸಿದೆ. ಆಮೇಲೆ ಗೊತ್ತಾಯ್ತು ಅದು ಕಾರ್ ಮೇಳ ಎನ್ನುವುದು. ವ್ಯಂಜನ ಬಳಸದ ಕನ್ನಡ. ನವನಗರ ದಾಟಿ ಮುಂದೆ ಬರುತ್ತಿದ್ದಂತೆ ಅಶ್ವಮೇಧ ನಗರ ಎಂಬ ಬೋರ್ಡು ಕಾಣಿಸಿತು. ಎಲ್ಲಿಯಾದರೂ ಅಶ್ವಗಳಿವೆಯಾ ಎಂದು ಇಣುಕಿ ನೋಡಿದರೆ ಮೂರು ನಾಲ್ಕು ಕತ್ತೆಗಳು ಎಳೆಬಿಸಿಲಿನಲ್ಲಿ ಮೈ ಕಾಯಿಸಿಕೊಳ್ಳುತ್ತಿದ್ದವು. ಮುಂದೆ ಸಾಗಿದಾಗ ಓಝೋನ್ ಎಂಬ ಹೊಟೇಲ್ ಬಂತು. ನೋಡಿದರೆ ಅದರ ಎದುರಿಗಿನ ಮಾವಿನ ತೋಪಿನಲ್ಲಿ ಒಂದಿಷ್ಟು ಬೆಳ್ಳಕ್ಕಿಗಳು ಚಳಿಯಲ್ಲಿ ಧ್ಯಾನಕ್ಕೆ ಕುಳಿತಂತೆ ನಿಂತಿದ್ದವು. ಮುಂದೆ ಸಾಗಿದಾಗ ಡೆಂಟಲ್ ಬಂತು (ಎಸ್ ಡಿಎಂ ಮೆಡಿಕಲ್ ಕಾಲೇಜ್). ಹಿಂದೆ ಧಾರವಾಡ ಎಲ್ಲಿದೆ ಎಂದು ಯಾರಾದರೂ ಕೇಳಿದರೆ ಡೆಂಟಲ್ ಮತ್ತು ಮೆಂಟಲ್ ಮಧ್ಯೆ ಇದೆ ಎಂದು ಹೇಳುತ್ತಿದ್ದವು. (ಯಾಕೆಂದರೆ ಈ ಡೆಂಟಲ್ ಕಾಲೇಜ್ ಮತ್ತು ಮಾನಸಿಕ ಆಸ್ಪತ್ರೆಯ ಮಧ್ಯವೇ ಧಾರವಾಡ ಶಹರ ಬರುವುದು). ಮುಂದೆ ನವಿಲೂರು ಬಂತು. ನವಿಲು ಕಾಣಿಸಲಿಲ್ಲ. ಇನ್ನೇನು ಧಾರವಾಡ ಬಂದೇ ಬಿಡ್ತು ಎನ್ನುವಷ್ಟರಲ್ಲಿ 'ನಾಕೌಟ್ ಥರ ಮೀಟರ್ ಇದ್ರೆ, 2 ಲಕ್ಷ ಗೆದ್ದು ತೋರಿಸು' ಎಂಬ ದರ್ಶನ್ ಜಾಹಿರಾತು ಕಾಣಿಸಿತು. ಯಾಕೆ ಒಮ್ಮೆ ಪ್ರಯತ್ನಿಸಬಾರದು ಎಂಬ ಯೋಚನೆ ಸುಮ್ಮನೆ ಸುಳಿದು ಹೋಯಿತು-:. ಮುಂದೆ ಮುಂದೆ ಸಾಗಿದಂತೆ ಶಿಲ್ಪಾ ರೆಸ್ಟೋರಂಟ, ಮಹಾಲಕ್ಷ್ಮಿ ಮೆಡಿಕಲ, ಕಾಮತ ಲಾಡಜ, ಪ್ರೇತಿಸ ಬೇಕ್ರಿ ಇತ್ಯಾದಿ ಬೋರ್ಡುಗಳು ವ್ಯಂಜನಗಳಿಲ್ಲದೆ ಖುಷಿ ಕೊಟ್ಟವು.

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋದರೆ ಅಲ್ಲಿನ ಪತ್ರಿಕೋದ್ಯಮ ವಿಭಾಗದ ಕಿರಿಯ ವಿದ್ಯಾರ್ಥಿಗಳೆಲ್ಲಾ ಮೀಡಿಯಾ ಫೆಸ್ಟ್ ನ ಬ್ಯುಸಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ತಮಗಿಂತ ದೊಡ್ಡ ಜವಾಬ್ದಾರಿಗಳನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಓಡುತ್ತಿರುವ ಈ ವಿದ್ಯಾರ್ಥಿಗಳನ್ನು ಅವರ ಪಾಡಿಗೆ ಓಡಲು ಬಿಟ್ಟು, ನಾನು ಹುಬ್ಬಳ್ಳಿ ಧಾರವಾಡ ಸುತ್ತುವುದೇ ಒಳ್ಳೆಯದು ಎನಿಸತೊಡಗಿತು.

ಮತ್ತೆ ಹುಬ್ಬಳ್ಳಿಗೆ ಬಂದೆ. 3 ಈಡಿಯಟ್ಸ್ ಚಿತ್ರ ನೋಡಿ, ವಾಪಾಸ್ಸು ಬಸ್ ಹತ್ತಿದರೆ ಮತ್ತೊಂದಿಷ್ಟು ತಮಾಷೆಗಳು ಕಾಣಿಸತೊಡಗಿದವು.
'ಪ್ರಯಾಣಿಕರ ಗಮನಕ್ಕೆ ದರ, ಚಾರ್ಜಿ 13 ರೂಪಾಯಿ'
'ಪೊಲೀಸರಿಗೆ ವಾರಂಟ ಇಲ್ಲದೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ.'
'ವಿದ್ಯಾರ್ಥಿಗಳು ಮಾರ್ಗ ಬಿಟ್ಟು ಬಸ್ ಪಾಸ್ ಬಳಸಬಾರದು'

ಈ ಸೂಚನೆಗಳನ್ನು ಬಸ್ಸಿನಲ್ಲಿ ಓದಿ ಮತ್ತೆ ಖುಷಿಪಟ್ಟುಕೊಂಡೆ. ಮರಳಿ ಬೆಂಗಳೂರಿಗೆ ಬಂದರೂ,ಇವು ಆಗಾಗ್ಗ ನೆನಪಾಗಿ ಕಚಗುಳಿ ಇಡುತ್ತಿವೆ.

Monday 14 December, 2009

ತಲಕಾಡಿಗೆ ಹೋಗಿ ಬಂದ ನಂತರ....


ತಲಕಾಡಿಗೆ ಹೋಗಿ ಬಂದ ಖುಷಿಯಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತಾ, ಎರಡು ದಿನ ಸುಮ್ಮನೆ ಕಳೆದೆ. ನಂತರ ಎದ್ದು ಯೋಚಿಸತೊಡಗಿದರೆ ಕಣ್ಣ ಮುಂದೆ ಬರಿ ತಲಕಾಡಿನ ಮರಳೇ ತುಂಬಿಹೋಗಿ, ಬೇರೆನೂ ಕಾಣಿಸದೆ ಚಿಂತಿಸುತ್ತಾ ಕುಳಿತುಕೊಳ್ಳುವಂತಾಯಿತು. 'ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗಳಿಗೆ ಮಕ್ಕಳಾಗದೇ ಹೋಗಲಿ' ಎಂದು ಎಲ್ಲರಿಗೂ ಗೊತ್ತಿರುವ ಹಳೆಯ ಶಾಪದ ಕಥೆಯನ್ನು ಇಲ್ಲಿಯೂ ಬರೆದರೆ ತುಂಬಾ ಬೋರಾಗುತ್ತದೆ ಎಂದು ಅನಿಸಿ, ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. 'ತಲೆ' ಮತ್ತು 'ಕಾಡ' ಎನ್ನುವುದು ಇಬ್ಬರು ಬೇಡರ ಹೆಸರೆಂದೂ, ಆ ಹೆಸರಿನ ಹಿಂದೆ, 'ಸೋಮದತ್ತ' ಎಂಬ ಆನೆಯ ಜನ್ಮ ಪಡೆದಿದ್ದ ಮುನಿಯ ಕಥೆಯೂ ಇದೆಯೆಂದು ನಾನು ತಲಕಾಡಿಗೆ ಹೋಗಿ ಬಂದ ನಂತರ ಅಲ್ಲಿ ಕೊಂಡ ಪುಸ್ತಕದಲ್ಲಿ ಓದಿ ತಿಳಿದ ವಿಷಯಗಳು.

ನಾವು ತಲಕಾಡಿಗೆ ಹೋಗಿದ್ದು ಎರಡು ವಾರಗಳ ಹಿಂದೆ. ನಾನು, ಸ್ನೇಹಿತ ವಜ್ರಾಂಗಿ ಸೂರ್ಯ ಮತ್ತು ಪ್ರಕಾಶ್. ಆವತ್ತು ತಲಕಾಡು ತಲುಪಿದಾಗ ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಬೆಳಿಗ್ಗೆ ಐದಕ್ಕೆಲ್ಲಾ ಎದ್ದು, ಮೆಜೆಸ್ಟಿಕ್ ನಿಂದ (ಒಂದು ಗಂಟೆ ತಡವಾಗಿ ಬಂದ) ಟ್ಯುಟಿಕೊರಿನ್ ರೈಲು ಹತ್ತಿ ಮದ್ದೂರಿನಲ್ಲಿಳಿದು, ತಟ್ಟೆ ಇಡ್ಲಿ ತಿಂದು ರೆಡಿಯಾಗುವ ಹೊತ್ತಿಗೆ 9:30 ಆಗಿತ್ತು. ಅಲ್ಲಿಂದ ಮಳವಳ್ಳಿ. ನಂತರ ತಲಕಾಡು. ಸರ್ಕಾರಿ ಸಾರಿಗೆ. ಹಿಂದಿನ ದಿನ, ರಾತ್ರಿ (ನೈಟ್ ಶಿಪ್ಟ್) ಪಾಳಿಯಲ್ಲಿ ಕೆಲಸ ಮಾಡಿದ್ದರಿಂದ ಮೂವರೂ ಬಸ್ಸಿನಲ್ಲಿ ಕುಳಿತು ನಾಚಿಕೆಯಿಲ್ಲದೆ ತೂಕಡಿಸುತ್ತಿದ್ದೆವು.

ನಡುವೆ ನಾನು ಕಷ್ಟಪಟ್ಟು ಕಣ್ಣು ತೆರೆದು ಕಿಟಕಿಯ ಹೊರಗೆ ತೂರಿಬಿಟ್ಟೆ. ಹಸಿರು!. ಕಣ್ಣು ಹಾಯಿಸಿದೆಡೆಯಲ್ಲೆಲ್ಲಾ ಹಸಿರು. ಮಳವಳ್ಳಿ ದಾಟುತ್ತಿದ್ದಂತೆ ಈ ಊರು ಥೇಟ್ ಮಲೆನಾಡಿನ ಸ್ವರೂಪ ಪಡೆದುಕೊಳ್ಳುತ್ತದೆ. ನಳನಳಿಸುತ್ತಿರುವ ಬತ್ತದ ಗದ್ದೆಗಳು, ಬಲಿತು ನಿಂತ ಕಬ್ಬನ ತೋಟಗಳು, ಟಮೋಟೋ, ದೊಣ್ಣೆಮೆಣಸಿನಕಾಯಿ, ಸೊಪ್ಪು ಬೆಳೆಯುವ ಫಲವತ್ತಾದ ಭೂಮಿ. ಮುಂದೆ ನಿದ್ರೆ ಬರಲಿಲ್ಲ. 40 ಕಿಮೀನ ಈ ದಾರಿಯಲ್ಲಿ ಮೂರು ಕೆರೆಗಳನ್ನು ನೋಡಿದೆ. ಮೂರೂ ದೊಡ್ಡ ದೊಡ್ಡ ಕೆರೆಗಳು. ಈ ಕೆರೆಯ ನೀರನ್ನೇ ಸಾವಿರಾರು ರೈತರು ಕಾಲುವೆಯ ಮೂಲಕ ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಬೆವರು ಹರಿಸಿ ಹುಲುಸಾದ ಬೆಳೆ ತೆಗೆಯುತ್ತಾರೆ.

ಪೂವಳ್ಳಿಯ ಸಮೀಪ ಬಸ್ಸು ನಿಂತಾಗ ಮತ್ತೊಂದು ಕೆರೆ ನೋಡಿದೆ. ಸ್ಟಟಿಕದಷ್ಟೇ ಶುಭ್ರವಾದ ನೀರು. ಬೇಕಾದರೆ ಈ ಕೆರೆಯ ದಡದಲ್ಲಿ ನಿಂತು ನೀರಿನಲ್ಲಿ ಮುಖ ನೋಡುತ್ತಾ ತಲೆ ಬಾಚಿಕೊಳ್ಳಬಹುದಾದಷ್ಟು ಸ್ವಚ್ಛ ನೀರು. ದಾರಿಯುದ್ದಕ್ಕೂ ಎಲ್ಲಿಯೂ ಬಡತನ ಕಾಣಲಿಲ್ಲ. ಯಾರ ಭೂಮಿಯ ಫಸಲೂ ಒಣಗಿರುವುದು ಕಂಡಿಲ್ಲ. ಹಸಿರು ತುಂಬಿದ, ಭೂಮಿಯ ಬಗ್ಗೆ ಪ್ರೀತಿ ಮೂಡಿಸುವ ಈ ಊರು ಇಷ್ಟವಾಗತೊಡಗಿತು. ರೈತರು ತಮ್ಮ ಕೃಷಿಯ ಬಗ್ಗೆ ನಂಬಿಕೆ ಮತ್ತು ಆಸಕ್ತಿ ಕಳೆದುಕೊಂಡು, ನಮ್ಮ ಹಳ್ಳಿಗಳು ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನನಗೆ ಈ ಊರಿನ ಬಗ್ಗೆ ಸಹಜವಾಗಿಯೇ ಹೆಮ್ಮೆ ಎನಿಸತೊಡಗಿತು.

ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಂಚರಿಸುವಾಗ ಗಮನಿಸಿದ ಮುಖ್ಯ ವಿಷಯವೆಂದರೆ ಈ ಜಿಲ್ಲೆಗಳಲ್ಲಿನ ನೀರಾವರಿ ವ್ಯವಸ್ಥೆ. ದಶಕಗಳ ಹಿಂದೆ ರಚನೆಗೊಂಡಿರುವ ನಾಲೆ ವ್ಯವಸ್ಥೆ ಇಲ್ಲಿನ ವ್ಯವಸಾಯವನ್ನು ಎಷ್ಟೊಂದು ಸಮೃದ್ಧವಾಗಿಸಿದೆ ಎಂದರೆ ನೀವೊಮ್ಮೆ ಈ ಪ್ರದೇಶಗಳಲ್ಲಿ ಅಡ್ಡಾಡಿ ನೋಡಬೇಕು. ಬಹುಶ್ಯ: ಇಂದು ನಮ್ಮ ಸರ್ಕಾರದ ಕೈಯಿಂದಲೂ ಇಷ್ಟು ಯೋಜಿತವಾದ ನೀರಾವರಿ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಿಲ್ಲ. ಚಿಕ್ಕದೇವರಾಯ ನಾಲೆ, ದೊಡ್ಡ ದೇವರಾಯ ನಾಲೆ, ವಿರಿಜಾ ನಾಲೆ, ಬಂಗಾರದೊಡ್ಡಿ ನಾಲೆ, ರಾಮಸ್ವಾಮಿ ನಾಲೆ, ರಾಜ ಪರಮೇಶ್ವರಿ ನಾಲೆ, ಮಾಧವ ಮಂತ್ರಿ ನಾಲೆ ಎಷ್ಟೊಂದು ನಾಲೆಗಳು. ಈ ನಾಲೆಗಳಿಗೆ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ಇಲ್ಲಿನ ಕೃಷಿಕರು ವ್ಯವಸಾಯ ಮಾಡುತ್ತಾರೆ.

14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸ್ಥಳೀಯ ಮಂತ್ರಿಯಾಗಿದ್ದ ಮಾಧವ ಎಂಬುವರು ತಲಕಾಡು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಕಾಲುವೆ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಇನ್ನೊಂದೆಡ ಇದೇ ಮಂತ್ರಿ ೧೩೪೨ರಲ್ಲಿ, ಊರಿನಂಚಿನಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿದ. ಪರಿಣಾಮವಾಗಿ ತಲಕಾಡು ಪಟ್ಟಣ ಮರಳ ಗುಡ್ಡವಾಗಿ ಮಾರ್ಪಾಡಾಯಿತು ಎನ್ನುತ್ತಾರೆ ಕೆಲವರು. ತಲಕಾಡಿನ ಬಗ್ಗೆ ಇರುವ ಈ ಎರಡು ಕಥೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎನ್ನುವುದು ನಿಮಗೆ ಬಿಟ್ಟಿದ್ದು.

ಆದರೆ ತಲಕಾಡಿನ ಮರಳಿನಡಿಯಲ್ಲಿ ನೀರಾವರಿ ಕಾಲುವೆಗಳು ಇದ್ದವು ಎನ್ನುವುದಕ್ಕೆ ಈಗ ವೈಜ್ಞಾನಿಕ ಆಧಾರಗಳಿವೆ. ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಮತ್ತು ಪುರಾತತ್ವ ಇಲಾಖೆಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಇದು ಧೃಡಪಟ್ಟಿದೆ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್ ) ಅಡಿ ಉಪಗ್ರಹ ಮತ್ತು ರಾಡಾರ್ ತಂತ್ರಜ್ಞಾನದಿಂದ ಕಾವೇರಿ ನದಿ ತಟದಲ್ಲಿರುವ ತಲಕಾಡಿನ ಮರಳು ಗುಡ್ಡದ ಕೆಳಗಿರುವ ಸುಮಾರು ನಾಲ್ಕು ಶತಮಾನಗಳ ಹಿಂದಿನ ಕಾಲುವೆಗಳನ್ನು ಇವರು ಪತ್ತೆ ಹಚ್ಚಿದ್ದಾರೆ.

ತಿರುಮಲ ರಾಜನ ಪತ್ನಿ ಆಲಮೇಲಮ್ಮ ಹಾಕಿದ್ದ ಶಾಪದಿಂದ ತಲಕಾಡು ಮರಳಾಯಿತು ಎಂದು ಇಂದಿಗೂ ನಂಬಿಕೊಂಡಿರುವವರು ಈ ವೈಜ್ಞಾನಿಕ ಸತ್ಯವನ್ನು ಒಪ್ಪದಿರಬಹುದು. ಇರಲಿ. ಇಲ್ಲಿ ನಾನು ತಲಕಾಡಿನ ಬಗ್ಗೆ ಬರೆಯಲು ಹೊರಟು ನಾಲೆ ನೀರಾವರಿ ವ್ಯವಸ್ಥೆಯ ಬಗ್ಗೆ ಬರೆದಿದ್ದೇನೆ. ಆದರೂ ಮುಖ್ಯವಾಗಿ ಹೇಳಬೇಕಾದದ್ದು ಬೇರೆಯದೇ ಇದೆ.

ನಾವು ಉಣ್ಣುವ ಅನ್ನ, ಜೀವ ಕೊಡುವ ಉಸಿರು, ನೀರು, ನೆರಳು, ವಸತಿ, ಉಡುಪು ಎಲ್ಲದಕ್ಕೂ ಕಾರಣವಾದ ಪ್ರಕೃತಿಯಲ್ಲಿ ಏನೆಲ್ಲಾ ವಿಸ್ಮಯಗಳಿವೆಯಲ್ಲಾ? ನಮಗೆಲ್ಲಾ ಗೊತ್ತಿದೆ, ಮಾಯವಾದ ಕಾಡು, ಕೃಷಿಯಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರುವ ರೈತ, ಹಳ್ಳಿಗಳನ್ನು ಬಿಟ್ಟು ನಗರ ಸೇರುತ್ತಿರುವ ಯುವ ಜನತೆ. ಈ ಹೊತ್ತಿನಲ್ಲಿ, ನನಗೆ ಅನ್ನಿಸಿದ್ದು. ಪ್ರಕೃತಿಯ ಬಗ್ಗೆ ನಮಗೆಲ್ಲಾ ಹೆಮ್ಮೆ ಮೂಡಿ, ನಮ್ಮ ರೈತರಿಗೂ ಭೂಮಿಯ ಬಗ್ಗೆ ಹುರುಪು ಮೂಡಿ, ಅವರು ಕೃಷಿಯಲ್ಲಿ ಕಳೆದುಕೊಂಡಿರುವ ಆಸಕ್ತಿ, ನಂಬಿಕೆ ಮತ್ತೆ ಬಂದರೆ, ನಮ್ಮ ಹಳ್ಳಿಗಳು ಎಷ್ಟೊಂದು ಸಂಭ್ರಮ ಮತ್ತು ಸಮೃದ್ಧಿಯಲ್ಲಿರಲು ಸಾಧ್ಯ. ತಲಕಾಡಿಗೆ ಹೋಗಿ ಬಂದ ನಂತರ ಇದು ಮೊದಲ ಹಂತದ ಚಿಂತನೆ.

Saturday 21 November, 2009

ಒಂದು ಖುಷಿಯ ಸಂಜೆಒಂದಿಡಿ ದಿನವನ್ನು ಆಲಸಿಯಾಗಿ ಕಳೆದ ಬೇಸರದಲ್ಲಿ ಎದ್ದರೆ ಅದಾಗಲೇ ಸಂಜೆಯಾಗಿತ್ತು. ಹೊರಗೆ ಮಳೆ ಸುರಿದು ರಸ್ತೆಗಳನ್ನು ತೊಳೆದಿಟ್ಟ ಹಾಗಿತ್ತು. ಮಧ್ಯಾಹ್ನದಿಂದಲೇ ಸುರಿಯತೊಡಗಿದ ಮಳೆ ಹೊರಗೆ ಅಡಿ ಇಡದಂತೆ ಕೋಣೆಯೊಳಗೇ ನನ್ನನ್ನು ಬಂಧಿಸಿಟ್ಟಿತ್ತು. ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳು ತೊಯ್ದು ತೊಪ್ಪೆಯಾಗಿದ್ದವು.ಟಿ ಕುಡಿದು ಬರೋಣವೆಂದು ಹೊರಟೆ.ಆಗಲೇ ಗೊತ್ತಾಗಿದ್ದು ಪರ್ಸಿನಲ್ಲಿ ಹಣವಿಲ್ಲ ಎನ್ನುವುದು. ATM ಕಡೆ ಹೆಜ್ಜೆ ಹಾಕಿದೆ. ಮಾರು ದೂರ. ಜಿಬುರು ಮಳೆ ಬೇರೆ. ಮಿರ್ಚಿ ಬಜಿ ಕರಿದ ವಾಸನೆ,ಗೋಬಿ ಮಂಚೂರಿ, ಪ್ರೈಡ್ ರೈಸ್, ಪಾನಿಪೂರಿ ವಾಸನೆಗಳೆಲ್ಲಾ ಆ ಸಂಜೆಯೊಳಗೆ ಹದವಾಗಿ ಬೆರೆತು ಇಡಿ ವಾತಾವರಣ ಒಂದು ರೀತಿ ಉಲ್ಲಸಿತವಾಗಿತ್ತು. ಗದ್ದಲ ನಡೆದಿತ್ತು.

ATM ಮುಂದೆ ಜನ Q ನಿಂತಿದ್ದರು.ನಾನೂ ಆ ಸಾಲಿನಲ್ಲಿ ಸೇರಿಕೊಂಡೆ.ಅಷ್ಟರಲ್ಲಾಗಲೇ ಪುಟಾಣಿ ಹುಡುಗಿಯೊಬ್ಬಳು ನನ್ನ ಗಮನ ಸೆಳೆದಳು. 5-6 ವರ್ಷದ ಹುಡುಗಿ. ನಮ್ಮ ಪಕ್ಕದ ಮನೆಯಲ್ಲಿ ಕಾಣಬಹುದಾದ ಹೊಳೆಯುವ ಕಣ್ಣುಗಳ ಮುದ್ದಾದ ಹುಡುಗಿ.ಆಕೆಯ ಕೈಯಲ್ಲೊಂದು ಬಣ್ಣದ ಛತ್ರಿ. ಅವರಮ್ಮ ATM ಕೌಂಟರ್ ಹೊರಗೆ ಕೊಡೆ ಇಟ್ಟು ಒಳಗೆ ದುಡ್ಡು ತೆಗೆಯಲು ಹೋಗಿದ್ದರು. ಈಕೆ ತನ್ನ ಕೊಡೆ ತಿರುಗಿಸುತ್ತಾ ಇನ್ನೊಂದು ಛತ್ರಿ ಗಾಳಿಯಲ್ಲಿ ಹಾರಿ ಹೋಗದಂತೆ ಕಾವಲು ನಿಂತಿದ್ದಳು.

ನನಗೆ ಯಾಕೋ ಈ ಮಗುವನ್ನು ಮಾತನಾಡಿಸಬೇಕು ಅಂತ ಅನಿಸತೊಡಗಿತು.
ಪುಟ್ಟೀ ನಿನ್ನ ಛತ್ರಿ ನನಗೆ ಕೊಡ್ತೀಯಾ? ಸುಮ್ಮನೆ ಕೇಳಿದೆ.
ಹಮ್.. ಇಲ್ಲ. ಕೊಡಲ್ಲ. ಇದು ನನ್ ಛತ್ರಿ.
ಹೋಗ್ಲಿ ನಿನ್ನ ಹೆಸರೇನು?
ನೀಹಾರಿಕಾ! ಥಟ್ಟನೆ ಹೇಳಿದಳು.
ನೀಹಾರಿಕಾ,ಹಾಗೆಂದರೆ ಏನು? ಗೊತ್ತಿದೆಯಾ?
ಹಮ್.. ಇಲ್ಲ.
ನಿನ್ನ ಹೆಸರಿನ ಅರ್ಥ ನಿನಗೆ ಗೊತ್ತಿಲ್ಲವಾ? ಹೋಗಲಿ,
ನೀನು ಎಷ್ಟನೇ ಕ್ಲಾಸಿನಲ್ಲಿ ಓದ್ತಿದಿಯಾ?
ಫಸ್ಟ್ ಸ್ಟಾಂಡರ್ಡ್.
ನೀಹಾರಿಕಾ ಎನ್ನುವ ಹೆಸರಿನ ಅರ್ಥ ಯಾರೂ ನಿನಗೆ ಹೇಳಿಕೊಟ್ಟಿಲ್ಲವಾ?
ಇಲ್ಲ..
ನೋಡು ಮರಿ, ನೀಹಾರಿಕಾ ಅಂದರೆ ನಕ್ಷತ್ರ ಪುಂಜ ಅಂತ ಅರ್ಥ. STAR...
ಹೌದಾ..!?
ಬ್ಯೂಟಿಫುಲ್ ... ನೈಟ್ ಕಾಣುವ ಸ್ಟಾರ್ ಅಲ್ವಾ ಅಂಕಲ್?
ಹೌದು. ನೋಡು ನಿನ್ನ ಹೆಸರು ಎಷ್ಟು ಮುದ್ದಾಗಿದೆಯಲ್ವಾ?
ನೀಹಾರಿಕಾಳ ಮುಖದಲ್ಲಿ ಸಾವಿರ ಮಲ್ಲಿಗೆ ಅರಳಿದ ಸಂಭ್ರಮ....

ನಾನು ಮುಂದೆ ಸಾಗಲಾರದೆ ನೋಡುತ್ತಾ ನಿಂತೆ. ನೀಹಾರಿಕಾ ಎರಡು ಸುತ್ತು ನನ್ನತ್ತ ತಿರುಗಿ ಕೈಬೀಸಿ ಹೊರಟು ಹೋದಳು. ನನ್ನಲ್ಲಿ ಹೊಸ ಖುಷಿ ಅರಳತೊಡಗಿತು.ನಾನು ಚಿಕ್ಕವನಿದ್ದಾಗ,ಈ ಹುಡುಗಿಯಷ್ಟೇ ವಯಸ್ಸಿನ ಮಗುವಾಗಿದ್ದಾಗ, ಕಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಮೈಲಿ ದೂರ ಕಾಡಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಅವರಿವರ ಛತ್ರಿಯ ಕೆಳಗೆ ನಿಂತು, ದೇಹವೆಲ್ಲಾ ತೊಯ್ದು ತೊಪ್ಪೆಯಾಗಿ ಶಾಲೆ ತಲುಪುತ್ತಿದ್ದೆ. ಚಪ್ಪಲಿಯೇ ಇಲ್ಲದೆ ಬರಿಗಾಲಿನಲ್ಲಿ ನಡೆದು ಹೋದರೂ, ಆ ಮಳೆಯ ದಾರಿಯಲ್ಲಿ ಏನೋ ಒಂದು ಖುಷಿ ಇರುತ್ತಿತ್ತು.

ನೆನಪು ಹಾಗೂ ಸುತ್ತಣ ದೃಶ್ಯಗಳ ಸಮ್ಮಿಶ್ರಣ ಹೊತ್ತ ಈ ಸಂಜೆ ಯಾಕೋ ವಿಶೇಷ ಸಂಜೆ ಎನಿಸತೊಡಗಿತು.ನೀಹಾರಿಕಾಳಂತ ಪುಟಾಣಿ ಹುಡುಗಿಗೆ ನಮ್ಮ ಮನಸ್ಸನ್ನು ಅರಳಿಸುವ,ಕುಪ್ಪಳಿಸುವಂತೆ ಮಾಡುವ, ಜ್ಞಾಪಿಸಿಕೊಳ್ಳುವಂತೆ ಮಾಡುವ ಶಕ್ತಿ ಇದೆಯಲ್ಲಾ ಎಂದು ಅಚ್ಚರಿ ಎನಿಸತೊಡಗಿತು. ಆಲಸಿತನ ನಿಧಾನವಾಗಿ ಕರಗತೊಡಗಿತು.

Sunday 1 November, 2009

ಪ್ರವಾಹವೂ ಲೈವ್‌‌, ಪರಿಹಾರವೂ LIVE‌!

ಮೂರು ಜನ ನಿರೂಪಕರು ಏಕಕಾಲಕ್ಕೆ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವುದನ್ನು ನೋಡಿದ್ದೀರಾ? ನೋಡದಿದ್ದರೆ ತಕ್ಷಣವೇ ನೋಡಿ ಸುವರ್ಣ ನ್ಯೂಸ್‌!. ನೇರ, ದಿಟ್ಟ, ನಿರಂತರ ಚಾನೆಲ್‌ಗೆ ಹೊಸಬರ ಆಗಮನದಿಂದ ಒಂದಿಷ್ಟು ಹೊಸ ನೀರು ಹರಿದು ಬರಬಹುದು ಎಂಬ ಭ್ರಮೆ ಇಟ್ಟುಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಭ್ರಮೆ ಏನಾಗುತ್ತದೆ ಎನ್ನುವುದನ್ನು ಇನ್ನೂ ಕಾದು ನೋಡಬೇಕಿದೆ.


ಈಗ, ಒಂದೆಡೆ ತಾವೇ ಪ್ರಶ್ನೆ ಕೇಳಿ ತಾವೇ ಉತ್ತರ ಹೇಳಿ, ತಾವೇ ತೀರ್ಪು ಕೊಡುವ ನಿರೂಪಕರೊಬ್ಬರು. ಇನ್ನೊಂದೆಡೆದೆ ಚಕ್ರವ್ಯೂಹ ಖ್ಯಾತಿಯ ಹಮೀದ್‌. ಮತ್ತೊಂದೆಡೆ ಸುವರ್ಣ ಚಾನೆಲ್‌ನ ಹೊಸ ಸಿಇಒ‌. ಇವರು ಮೂವರು ಸೇರಿ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಿದ್ದರೆ, ಆ ಕಾರ್ಯಕ್ರಮಕ್ಕೆ ಮಾತನಾಡಲೆಂದು ಬಂದ ಅತಿಥಿಗಳಿಗೆ ಮಾತನಾಡಲು ಅವಕಾಶವೇ ಇಲ್ಲ ಎನ್ನುತ್ತಿದ್ದಾರೆ, ಹೊಸದಾಗಿ ಸುವರ್ಣ ನೋಡಲು ಪ್ರಾರಂಭಿಸಿರುವ ವೀಕ್ಷಕರು.

‘ಜಾಣನಲ್ಲದವನ ಮಾತು ಯಾರಿಗೂ ರುಚಿಸುವುದಿಲ್ಲ. ಹೇಳುವುದಕ್ಕೆ ತಕ್ಕುದಲ್ಲದ ಅನುಭವ ಕೇಳುವನ ಆಸಕ್ತಿ ಕೆರಳಿಸುವುದಿಲ್ಲ’ ಎನ್ನುವುದನ್ನು ಕೆಲವು ಟಿವಿ ನಿರೂಪಕರು ಇನ್ನಷ್ಟು ಜಾಣತನದಿಂದ ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಜಾಣ ಎಂದುಕೊಂಡು ಇಡಿ ಟಿವಿ ಪರದೆಯನ್ನು ತಾವೇ ಆಕ್ರಮಿಸಿಕೊಂಡು ಕುಳಿತರೆ ಅದೇ ಆ ಚಾನೆಲ್‌ಗೆ ಮುಳುವಾಗುತ್ತದೆ. ವೀಕ್ಷಕ ಎಷ್ಟು ದಿನ ನಿರೂಪಕನನ್ನು ಸಹಿಸಿಕೊಂಡಾನು?

ಇಲ್ಲಿ ಇದು ಮುಖ್ಯ ವಿಷಯವಲ್ಲ. ಇತ್ತೀಚೆಗೆ ಟಿವಿಯಲ್ಲಿ ಬರುವಂತಹ ಎಷ್ಟೋ ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಭಾಗವಹಿಸುವವರ ನಿಲುವುಗಳನ್ನು ಹೇಳಿಕೊಳ್ಳುವ ತಾಣಗಳಾಗುತ್ತದೆಯೇ ಹೊರತು, ಪರಸ್ಪರ ಚರ್ಚೆಯ ಮೂಲಕ ಸಾರ್ವತ್ರಿಕ ನಿಲುವುಗಳನ್ನು ರೂಪಿಸುವ ವೇದಿಕೆಯಾಗುವುದಿಲ್ಲ. ನಮ್ಮ ಕನ್ನಡ ಚಾನೆಲ್‌ಗಳಲ್ಲಂತೂ ಇತ್ತೀಚೆಗೆ ಇಂತಹ ಬರಿ ಮಾತಿನ ಮನೋರಂಜನೆ, ‘ವಿಶೇಷ ಕಾರ್ಯಕ್ರಮ’ ಎನ್ನುವ ಹೆಸರಿನಲ್ಲಿ ಸಾಕಷ್ಟು ಬರುತ್ತಿದೆ. ಒಮ್ಮೊಮ್ಮೆ ಈ ಮಾತು ಎಷ್ಟು ಕಳಪೆ ಮಟ್ಟಕ್ಕೆ ಹೋಗುತ್ತದೆಯೆಂದರೆ, ‘ನಿಮ್ಮ ಆಂತರಿಕ ಕಚ್ಚಾಟಗಳು ಈಗ ನಿಮಗೇ ಉಲ್ಟಾ ಹೊಡೆದಿದೆಯಾ? ಎಂದು ನಿರೂಪಕರೊಬ್ಬರು ಯಾವ ಮುಜುಗರವೂ ಇಲ್ಲದೇ ನೇರವಾಗಿ ರಾಜಕೀಯ ಮುಖಂಡರೊಬ್ಬರಿಗೆ ಕೇಳುತ್ತಾರೆ. ನಂತರ ಅವರು ಉತ್ತರಿಸುವ ಮುನ್ನವೇ ತಾವೇ ಉತ್ತರವನ್ನೂ, ಅಂತಿಮ ತೀರ್ಪನ್ನೂ ಕೊಡುತ್ತಾರೆ. ’ಅಂತಿಮ ತೀರ್ಪು’ ಅಂತ ಒಂದು ಹೊಸ ಕಾರ್ಯಕ್ರಮ ಪ್ರಾರಂಭಿಸಿದರೆ ಅದಕ್ಕೆ ಈ ನಿರೂಪಕನನ್ನು ಕಣ್ಣು ಮುಚ್ಚಿ ಜಡ್ಜ್‌ ಆಗಿ ಮಾಡಬಹುದು ಅಂತ ಅನಿಸುತ್ತಿದೆ.

ಟಿವಿ ಎನ್ನುವುದು ಒಂದು ಮಾಧ್ಯಮವೇ? ಇಲ್ಲ ಉದ್ಯಮವೇ? ಅಥವಾ ವ್ಯಾಪಾರವೇ? ಬಂಡವಾಳಶಾಹಿ ವ್ಯವಸ್ಥೆಯೇ? ಇತ್ಯಾದಿಗಳೆಲ್ಲ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವೀಕ್ಷಕನ ಅರಿವಿಗೆ ನಿಲುಕುವುದಿಲ್ಲ. ಆತ ಅದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಕೆಲವು ಚಾನೆಲ್‌ಗಳಿಗೆ ಇದೇ ಬಂಡವಾಳ. ಮಧ್ಯಮ ವರ್ಗದ ವೀಕ್ಷನಿಗೆ ಏನು ಬೇಕು ಎನ್ನುವುದನ್ನು ಈ ಚಾನೆಲ್‌ಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಒಂದು ಚಾನೆಲಿನ ಕಟ್ಟಡದ ಮೇಲೆ ಒಂದು ಕಾಗೆ ಹಾರಿದರೂ ಅದಕ್ಕೆ ಅದು ಲೈವ್‌ ಸುದ್ದಿಯಾಗುತ್ತದೆ. ಇಬ್ಬರು ಕಾಗೆ ತಜ್ಞರನ್ನು ಸ್ಟುಡಿಯೋಗೆ ಕರೆಯಿಸಿ ಚರ್ಚೆ ನಡೆಸುವಷ್ಟರ ಮಟ್ಟಿಗೆ ಆ ಚಾನೆಲ್‌ ವೃತ್ತಿಪರತೆ ಹೊಂದಿದೆ. ಮೊನ್ನೆ ಒಂದು ಚಾನೆಲ್‌ ಪ್ರವಾಹ ಪೀಡಿತ ಪ್ರದೇಶದ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡಿತು. ಐದು ಗ್ರಾಮಗಳನ್ನು ಹೊಸದಾಗಿ ನಿರ್ಮಿಸುವುದೆಂದರೆ ಸುಲಭದ ಕೆಲಸವೇ? ಸಂಗ್ರಹವಾದ ಹಣ ಇದಕ್ಕೆ ಸಾಕಾಗುವುದಿಲ್ಲ ಎಂದು ತಿಳಿದದ್ದೇ ತಡ, ಹೊಸದೊಂದು ಐಡಿಯಾ ಪ್ರಯೋಗಿಸಿತು. ಐವತ್ತು ಸಾವಿರದ ಮೇಲೆ ದಾನ ಮಾಡುವರು ನೇರವಾಗಿ ಸ್ಟುಡಿಯೋಗೆ ಬಂದು ಮಾತನಾಡಬಹುದು ಎಂದರು. ಕಾರ್ಯಕ್ರಮ ಲೈವ್‌ ಬೇರೆ. ದುಡ್ಡು ಬರದೇ ಇರುತ್ತದೆಯೇ? ಪ್ರವಾಹವೂ ಲೈವ್‌, ಪರಿಹಾರವೂ ಲೈವ್‌. ಹೇಗಿದೆ?

ವಿದ್ಯುನ್ಮಾನ ಮಾತ್ರವಲ್ಲ ಮುದ್ರಣವೂ ಸೇರಿದಂತೆ ಇಂದು ಮಾಧ್ಯಮಗಳು ನಾಚಿಕೆಯಿಲ್ಲದಷ್ಟು ವಾಣಿಜ್ಯೀಕರಣಗೊಂಡಿದೆ. ಸಂಪಾದಕೀಯದ ಸ್ಥಳಗಳನ್ನೇ ಮಾರಲಾಗುವ ಇಂದಿನ ಕಾಲದಲ್ಲಿ ಪ್ರಿಂಟ್‌ ಪತ್ರಿಕೋದ್ಯಮವಂತೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ (ಪಿ.ಆರ‍್) ಕೈಗೊಂಬೆಯಾಗಿದೆ. ಅದಕ್ಕೇ ಖ್ಯಾತ ಚಿಂತಕ ನೋಮ್‌ ಛಾಮ್‌ಸ್ಕೀ ಹೇಳಿದ್ದು, ‘ಮಾಧ್ಯಮ ಎನ್ನುವುದು ಈಗ ಒಂದು ಕಲಾಪ್ರಕಾರವೂ ಅಲ್ಲ, ಸಂವಹನ ಮಾಧ್ಯಮವೂ ಅಲ್ಲ. ಅದು ಬಳಕೆ ಸಾಮಗ್ರಿಗಳ ಉತ್ಪಾದಕರಿಗೆ ಗ್ರಾಹಕರನ್ನು ತಲುಪಲಿಕ್ಕೆ ಅನುಕೂಲ ಮಾಡಿಕೊಡುವ ಒಂದು ತಂತ್ರಜ್ಞಾನ ಮಾತ್ರ’.

ಈ ವರ್ಷದ ಅತ್ಯತ್ತಮ ಟಿವಿ ಪ್ರಶ್ನೆ ಎನ್ನುವುದಕ್ಕೆ ಯಾರೋ ಉದಾಹರಣೆ ಕೊಟ್ಟರು. ವಿಷಯ:- ಕರುಣಾಕರ ರೆಡ್ಡಿ ನಿವಾಸದಲ್ಲಿ ಹಾವು.

ವರದಿಗಾರನ ಪ್ರಶ್ನೆ- ದೊಡ್ಡ ಹಾವು ಕಂಡರೆ ಏನು ಮಾಡಬೇಕು? ಚಿಕ್ಕ ಹಾವು ಕಂಡರೆ ಏನು ಮಾಡಬೇಕು?

Tuesday 20 October, 2009

ಎಲ್ಲೋ ಮಳೆಯಾಗಿದೆಯೆಂದು...ಮೊನ್ನೆ U2 ನೋಡುತ್ತಿದ್ದೆ. ಮನಸಾರೆ ಚಿತ್ರದ "ಎಲ್ಲೋ ಮಳೆಯಾಗಿದೆಯೆಂದು...." ಹಾಡು ಬರುತ್ತಿತ್ತು. ಹೌದು. ಹಾಡು ಕೇಳುತ್ತಿದ್ದಂತೆ ಇದರಲ್ಲಿ ಏನೋ ವಿಶೇಷವಿದೆ ಅನಿಸತೊಡಗಿತು. ವಿಮರ್ಶೆ ಓದಿ ಚಿತ್ರ ನೋಡುವರ ಸಾಲಿಗೆ ಸೇರಿದವನು ನಾನು. ಕೆಲವೊಮ್ಮೆ ಈ ವಿಮರ್ಶೆಗಳೇ ಚಿತ್ರಕ್ಕಿಂತ ಹೆಚ್ಚಿನ ಮನೋರಂಜನೆ ಒದಗಿಸುತ್ತದೆ. ಮನಸಾರೆ 'ಮೆಂಟಲ್‌ಗಳ' ಚಿತ್ರ ಎಂದು ಚಿತ್ರ ನೋಡಿ ಬಂದ ಕೆಲವು ಗೆಳೆಯರು ಹೇಳಿದ್ದರಿಂದ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದೆ. ಆದರೆ ಈ ಹಾಡು ಮಾತ್ರ ತೀವ್ರವಾಗಿ ಕಾಡತೊಡಗಿತು. ಆಫೀಸಿಗೆ ಹೋದವನೇ ಯೂಟ್ಯೂಬ್‌ನಲ್ಲಿ ಹಾಡನ್ನು ಹುಡುಕಿ ಮತ್ತೆ ಕೇಳಿಸಿಕೊಂಡೆ. ಕಾಯ್ಕಿಣಿ ಕವಿತೆ ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳತೊಡಗಿತು.

ಹೌದು. ಕಳೆದ ಒಂದು ವಾರದಿಂದ, ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತ್ತಿದೆ, ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತ್ತಿದೆ... ಎಂದು ಗುನುಗುನಿಸಿಕೊಂಡು ಓಡಾಡುತ್ತಿದ್ದೇನೆ. ನಮ್ಮ ಕಾಯ್ಕಿಣಿ ಎಂತಹ ಅದ್ಭುತ ಕಲೆಗಾರ. ಅವರ ಕಾವ್ಯ ಕುಸುರಿಗೆ ಮಾರು ಹೋಗದವರಿಲ್ಲ. "ಕಾಯ್ಕಿಣಿ ಎಂತಹ ಕಲೆಗಾರನೆಂದರೆ, ಅವರ ಕಿವಿಯ ಹತ್ತಿರ ಶಂಖ ಹುಳುವೊಂದನ್ನು ಹಿಡಿದರೆ, ಆ ಪುಟಾಣಿ ಹುಳುವಿನ ಹೃದಯಕ್ಕೆ ಎಷ್ಟು ಕವಾಟುಗಳಿವೆ ಎನ್ನುವುದನ್ನು ಹೇಳಬಲ್ಲಷ್ಟು ಸೂಕ್ಷ್ಮ ಕಲೆಗಾರ" ಎಂದು ಬೊಗಸೆಯಲ್ಲಿ ಮಳೆಗೆ ಬೆಳಗೆರೆ ಬೆನ್ನುಡಿ ಬರೆದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ನಿಜವಾಗಿಯೂ ತಲೆಸುತ್ತುವ ಗೀತೆಗಳಿಂದ ಬೇಸೆತ್ತು ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಸುಂದರ ಮಳೆಗೀತೆಗಳನ್ನೂ, ಕನ್ನಡ ಭಾಷೆಯ ಮಾಧುರ್ಯವನ್ನೂ ಪರಿಚಯಿಸಿದವರು ಕಾಯ್ಕಿಣಿ. ಅಷ್ಟರ ಮಟ್ಟಿಗೆ ನಮ್ಮ ಕಿ(ಕ)ವಿಗಳು ಕಾಯ್ಕಿಣಿಗೆ ಖುಣಿಯಾಗಿರಬೇಕು. ಯಾಕೋ ಮನಸ್ಸು, ತುಂಬಾ ವರ್ಷಗಳ ಹಿಂದಕ್ಕೆ ಓಡುತ್ತಿದೆ. ಅಂಗನವಾಡಿಯಲ್ಲೋ, ಒಂದನೆಯ ತರಗತಿಯಲ್ಲೋ ಇರಬೇಕು. "ಪುಣ್ಯಕೋಟಿ ಗೋವಿನ ಹಾಡು". ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು. ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಇದು ಮಕ್ಕಳು ಓದಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಈ ಪದ್ಯವನ್ನು ಕಾವೇರಿ ಟೀಚರ್ ಸುಶ್ರಾವ್ಯವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರೆ, ನಮ್ಮ ಕಣ್ಣುಗಳಿಂದ ನಮಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಅಷ್ಟೊಂದು ಮಹೋನ್ನತ ಮೌಲ್ಯಗಳಿಂದ ಕೂಡಿದ ಪದ್ಯ ಅದು.

ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕಿವಿಯಲ್ಲಿ ಇಂಗದ ಅನುರಣನ. ಮತ್ತೆ ಮತ್ತೆ ನೆನಪಾಗಿ, ಬಾಲ್ಯವನ್ನು ನೆನಪಿಸಿ, ಕಣ್ಣೀರು ತರಿಸುವ ಈ ಪದ್ಯದ ಪ್ಯಾರಾವೊಂದು ಇಲ್ಲಿದೆ. "ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು" ಎಂದು ಹೇಳಿದ ಪುಣ್ಯಕೋಟಿ ಹುಲಿಯ ಗವಿಯ ಬಾಗಿಲು ಹೊಕ್ಕು..
'ಖಂಡವಿದಕೋ, ಮಾಂಸವಿದಕೋ,
ಗುಂಡಿಗೆಯ ಬಿಸಿರಕ್ತವಿದಕೋ,
ಉಂಡು ಸಂತಸಗೊಂಡು ನೀ
ಭೂಮಂಡಲದೊಳು ಬಾಳಯ್ಯನೆ' ಎಂದು ಹೇಳುತ್ತದೆ. ಮುಂದೆ ನಾವು ಮಾತಾಡುತ್ತಿರಲಿಲ್ಲ. ಕೆನ್ನೆಯ ಮೇಲೆ ಕಣ್ಣೀರು ಹರಿಯಲು ಪ್ರಾರಂಭವಾಗುತ್ತಿತ್ತು. ಅನಾಮಿಕ ಕವಿಯೊಬ್ಬ ಬರೆದ ಈ ಕವಿತೆಯಲ್ಲಿ ಎಷ್ಟೊಂದು ಮೌಲ್ಯವಿದೆ.

ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು. ಕವನ ರಚನೆ ಅಥವಾ ಬರೆಹ ಕೂಡ ಹೀಗೆ. ಬರೆಹ ಅಥವಾ ಕವಿತೆಯಲ್ಲಿ ಹೃದಯದ ಸ್ಪಂದನವನ್ನು ಗುರುತಿಸದೇ ಹೋದರೆ, ಅದು ಯಾರ ಮನಸ್ಸಿನಲ್ಲಿಯೂ ಧೀರ್ಘಕಾಲ ನೆಲೆನಿಲ್ಲುವುದಿಲ್ಲ. ಯಾರ ಮನಸ್ಸನ್ನೂ ತಟ್ಟಿ ಬೆರಗುಗೊಳಿಸುವುದಿಲ್ಲ.

ಇಂತಹ ಸ್ಪಂದನ ಇಲ್ಲದೇ ಹೋಗಿರುವುದರಿಂದಲೇ ನಮ್ಮ ಬದುಕು ಇಂದು ಹೀಗಾಗಿದೆ. ಮುಗ್ಧತೆ ಕಳೆದುಹೋದ ಮನುಷ್ಯನ ಮನಸ್ಸಿನಲ್ಲಿ ಅಂಧಕಾರ ಬಿಟ್ಟು ಇನ್ನೇನು ಉಳಿಯುತ್ತದೆ? ಯಾಕೋ ಇದು ಸ್ಪಲ್ಪ ಗಂಭೀರವಾಗುತ್ತಿದೆ ಅನಿಸುತ್ತಿದೆ. ನಿಲ್ಲಿಸುತ್ತೇನೆ. ಪ್ರಾಸವೇ ಪದ್ಯವೆಂದು ತಿಳಿದು ಕವಿತೆ ರಚಿಸುವ ಈಗಿನ ಕಾಲದಲ್ಲಿ ಕಾಯ್ಕಿಣಿ ಕವಿತೆಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮನಸ್ಸಿಗೆ ಹಿತವೆನಿಸುತ್ತದೆ. ಮತ್ತೆ ಹಾಡಿಕೊಳ್ಳುತ್ತಿದ್ದೇನೆ..

ಎಲ್ಲೋ ಮಳೆಯಾಗಿದೆಯೆಂದು....

ಚಿತ್ರ ಕೃಪೆ - http://my.opera.com

Sunday 11 October, 2009

ಹೊಸ ತಲೆಮಾರಿನ ತಲ್ಲಣ

ಒಮ್ಮೆ ಚಿಲಿ ದೇಶದ ಕವಿ ನೆರೂಡನಿಗೆ ಸಂದರ್ಶಕಿಯೊಬ್ಬಳು ಒಂದು ಗಂಭೀರ ಪ್ರಶ್ನೆ ಕೇಳಿದಳು. ನೀವು ನಿಮ್ಮ ಪುಸ್ತಕಗಳಲ್ಲಿ ಒಂದನ್ನು ಬೆಂಕಿಯಿಂದ ರಕ್ಷಿಸಿಕೊಳ್ಳಬೇಕಾಗಿ ಬಂದರೆ ಯಾವ ಪುಸ್ತಕ ರಕ್ಷಿಸಿಕೊಳ್ಳುತ್ತೀರಿ?

ನೆರೂಡ ಅಷ್ಟೇ ಸರಳವಾಗಿ ಹೇಳಿದ. ‘ಯಾವುದನ್ನೂ ರಕ್ಷಿಸಲಿಕ್ಕಿಲ್ಲ. ನನ್ನ ಪುಸ್ತಕಗಳಿಂದ ನನಗೇನು ಉಪಯೋಗ? ಅದಕ್ಕೆ ಬದಲು ಒಬ್ಬಳು ಹುಡುಗಿಯನ್ನು ರಕ್ಷಿಸಬಯಸುವೆ.. ನನ್ನ ಯಾವುದೇ ಪುಸ್ತಕಕ್ಕಿಂತ ಹೆಚ್ಚು ಸಂತೋಷ ಆಕೆಯಿಂದ ದೊರೆಯಬಲ್ಲದು.

ನೆರೂಡನ ಜಾಣತನ ನಮ್ಮ ಇಂದಿನ ಕವಿಗಳಿಗೆ ಇಲ್ಲವಲ್ಲ ಎಂದೆನಿಸುತ್ತದೆ. ನಮ್ಮ ಕೆಲವು ಬರಹಗಾರರು ತಮ್ಮ ಬರಹದಿಂದ ಜಗತ್ತೇ ಬದಲಾಗಬಹುದು ಎಂಬ ಭ್ರಮೆ ಉಳ್ಳವರು. ಅಥವಾ ಆ ಭ್ರಮೆ ಇಟ್ಟುಕೊಂಡೇ ಬರೆಯುವವರು. ನನ್ನ ಬರಹದಿಂದ ಸಮಾಜಕ್ಕೆ ಏನೂ ಒಳಿತಾಗದಿದ್ದರೆ ನಾನು ಬರೆಯುವುದರಿಂದ ಏನು ಸಾರ್ಥಕ ಎಂಬ ಪೊಳ್ಳು ಭರವಸೆಗಳನ್ನೂ, ಆಶಯಗಳನ್ನೂ, ತಾವೇ ನಂಬಿದ ಸತ್ಯಗಳನ್ನೂ ಇಟ್ಟುಕೊಂಡವರು. ನನ್ನ ಊರು, ಹಿತ್ತಲ ಹೂಬಳ್ಳಿ, ಪಕ್ಷಿಗಳು ಬಡತನ, ಅವ್ವನ ಲಾಲಿ ಹಾಡು, ಅಜ್ಜಿಯ ಜೋಗುಳ ಇವೆಲ್ಲಾ ನನ್ನ ಬರಹವನ್ನು ರೂಪಿಸಿದೆ ಎಂದು ಪದೇ ಪದೇ ಬರದುಕೊಂಡು ತಮ್ಮ ಊರಿಗೂ, ಹಿತ್ತಲಿಗೂ ಮುಜುಗರ ಹುಟ್ಟಿಸುವವರು. ‘ನೀವು ಬರೆಯದೇ ಇದ್ದರೆ ಇಲ್ಲಿ ಬೆಳಕು ಹರಿಯುವುದಿಲ್ಲ ಎಂದು ನಿಮಗೆ ನಂಬಿಸಿದವರು ಯಾರು? ಎಂದು ಇವರನ್ನು ಕೇಳಬೇಕು ಅನಿಸುತ್ತದೆ.

ನನ್ನ ಖುಷಿಗಾಗಿ ಬರೆಯುವವನು ನಾನು. ನನ್ನ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕಾಗಲಿ, ಈ ಸಮಾಜಕ್ಕಾಗಲಿ ಕಿಂಚಿತ್ ಉಪಯೋಗವಾಗುತ್ತಿದೆ ಎಂಬ ಚಿಲ್ಲರೆ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡು ನಾನು ಓಡಾಡುತ್ತಿಲ್ಲವಾದ್ದರಿಂದ ನನಗೆ ನನ್ನ ಬರವಣಿಗೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಅದರ ಮುಂದಣ ಸಾಧ್ಯತೆಯ ಬಗ್ಗೆ ಮಾತ್ರ ಗೊಂದಲವಿದೆ. ಯಾಕೆಂದರೆ ಕವಿಯಂತೆ ನಾನು ಭವಿಷ್ಯದ ಜನಾಂಗಕ್ಕಾಗಿ ಬರೆಯುತ್ತಿಲ್ಲ. ಇಂದಿನ ಅಗತ್ಯಕ್ಕೆ ತಕ್ಕಂತೆ ಬರೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಬರವಣಿಗೆ ನನ್ನೊಳಗನ್ನು ದಿನದಿಂದ ದಿನಕ್ಕೆ ಶುದ್ಧೀಕರಿಸುತ್ತಾ ಹೊರಟಿದೆ ಎಂದು ನಾನು ನಂಬಿದ್ದೇನೆ.

ಅನೇಕ ಉತ್ತಮ ಬರಹಗಳು ವಿನಯ ಮತ್ತು ಮೌನದಲ್ಲಿ ಹುಟ್ಟುತ್ತವೆ. (ಇಲ್ಲಿಯವರೆಗೆ ಪ್ರೀತಿ ಮಾತ್ರ ಹುಟ್ಟುತ್ತದೆ ಎಂದು ತಿಳಿದಿದ್ದೆ) ಲೇಖಕ ಸರಳ, ನೇರ, ಪ್ರಾಮಾಣಿಕ ಹಾಗೂ ಸಂಕೋಚದ ಸ್ವಭಾವದವನಾಗಿದ್ದರೆ ಉತ್ತಮ ಬರಹ ಖಂಡಿತ ಹುಟ್ಟುತ್ತದೆ.

ರಹಮತ್ ತರೀಕೆರೆ ಸಂಪಾದಿಸಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ “ಹೊಸ ತಲೆಮಾರಿನ ತಲ್ಲಣ” ಕನ್ನಡದ 38 ಯುವ ಬರಹಗಾರರು ತಾವು ಏಕೆ ಮತ್ತು ಹೇಗೆ ಬರಹಗಾರರಾಗಿದ್ದು ಎಂದು ಬರೆದಿದ್ದಾರೆ. ನೀವೇಕೆ ಬರಹಗಾರರಾಗಬೇಕು ಎಂದು ನಿಮಗನಿಸುತ್ತಿದ್ದರೆ ಈ ಪುಸ್ತಕ ಓದಿ. 80 ರೂಪಾಯಿ ಜೇಬಿಗೆ ಹೊರೆಯೆನಿಸದು.

Thursday 16 July, 2009

ಅಬೋಲಿನ್ ಕುದುರೆಯೂ ಕಿಂಗ್‌ಫಿಷರ್ ಡರ್ಬಿಯೂ


ಕಳೆದ
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಿಂಗ್‌ಫಿಷರ್ ಡರ್ಬಿಯಲ್ಲಿ ಬುಕ್ಕಿಗಳ ಸರ್ವ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಅಬೋಲಿನ್ ಎಂಬ ಕುದುರೆ ೭೯.೨೦ ಲಕ್ಷ ಮೊತ್ತದ ಬಹುಮಾನವನ್ನು ಗೆದ್ದುಕೊಂಡಿತು. ಗೆಲ್ಲುವುದಕ್ಕೂ ಸ್ವಲ್ಪ ಮುಂಚೆ ಈ ಕುದುರೆ ನಮ್ಮಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಯಾವ ಪರಮಾತ್ಮನಿಂದಲೂ ಊಹಿಸಲಿಕ್ಕಾಗದು ಎನ್ನುವ ಭಾವದಲ್ಲಿ ಅಶ್ವಶಾಲೆಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಹುರುಳಿ ತಿನ್ನುತ್ತಿತ್ತು. ಅದನ್ನು ಓಡಿಸಿದ ಜಾಕಿ ಅಲ್ಫೋರ್ಡ್‌ಗೆ ಅಬೋಲಿನ್ ಗೆಲ್ಲುತ್ತದೆ ಎನ್ನುವ ಸಣ್ಣ ವಿಶ್ವಾಸ ಕೂಡಾ ಹಿಂದಿನ ದಿನ ರಾತ್ರಿ ವಿಸ್ಕಿ ಕುಡಿಯುವಾಗಲೂ ಇರಲಿಲ್ಲ.

ಕುದುರೆ ಜೂಜಿನ ಮಾಯಾಲೋಕವೇ ಅಂಥದ್ದು. ಹಚ್ಚ ಹಸಿರಿನ ಎರಡು ಕಿ.ಮೀ ಸುತ್ತಳತೆಯ ಅಂಗಳದಲ್ಲಿ ನಡೆಯುವ ರೇಸಿನಲ್ಲಿ ಯಾವ ಕುದುರೆ ಯಾರ ಭವಿಷ್ಯವನ್ನು ಬರೆಯಲಿದೆ, ಇನ್ಯಾರ ಮನೆಯ ದೀಪವನ್ನು ನಂದಿಸಲಿದೆ ಎನ್ನುವುದು ನಿಜಕ್ಕೂ ಆ ದೇವರಿಂದಲೂ ಊಹಿಸಲು ಸಾಧ್ಯವಾಗದ ಕೆಲಸ. ಯಾವ ಭವಿಷ್ಯಕಾರನೂ, ಎಂಥ ವಿಜ್ಞಾನಿಯೂ, ಯಾವ ಗಿಣಿಶಾಸ್ತ್ರಜ್ಞನೂ ಗೆಲ್ಲುವ ಕುದುರೆಯನ್ನು ಊಹಿಸಿ ಹೇಳಲಾರ. ಓಡಲಿರುವ ಕುದುರೆಯ ವಂಶವನ್ನೇ ಪತ್ತೆಹಚ್ಚಿ ಅದರ ವಂಶವಾಹಿಯನ್ನೇ ಹುಡುಕಿ ತಂದರೂ, ಇದೇ ಕುದುರೆ ಗೆಲ್ಲುತ್ತದೆ ಎನ್ನುವುದನ್ನು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಹೆಣ್ಣಾದರೆ ಅದಕ್ಕೆ ಮುಟ್ಟೂ, ಗಂಡಾದರೆ ಬೆದೆಯೂ ಕಾಡಬಹುದು ಎಂದು ಲಂಕೇಶ್ ಒಮ್ಮೆ ಬರೆದಿದ್ದರು.

ಕುದುರೆ ಜೂಜಿನ ಬಗ್ಗೆ ಏನೇನೂ ಗೊತ್ತಿಲ್ಲದ ನಾನು ಕಳೆದ ಭಾನುವಾರ ಬೆಳಿಗ್ಗೆ ಬೇಗನೇ ಎದ್ದ ತಪ್ಪಿಗೆ ರೇಸ್‌ಕೋರ್ಸ್ ರಸ್ತೆಯ ಮುಂದೆ ಬಂದು ನಿಂತಿದ್ದೆ. ರಸ್ತೆಯಂಚಿನಲ್ಲಿ ನಿಂತಿದ್ದ ಕಿಂಗ್‌ಫಿಷರ್ ಹೋರ್ಡಿಂಗ್ಸ್‌ಗಳೆಲ್ಲಾ ಬೆಳ್ಳಂ ಬೆಳಿಗ್ಗೆಯೇ ನಶೆ ಏರಿಸಿಕೊಂಡವರಂತೆ ನಿಂತಿದ್ದವು. ಟರ್ಫ್ ಕ್ಲಬ್ ಮುಂದಿನ ಅಂಗಳದಲ್ಲಿ ಒಂದಿಷ್ಟು ಪಂಟರು ಅಂಡು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು. ಹಿಂದೆಲ್ಲಾ ಬೆಂಗಳೂರಿನಲ್ಲಿ ಅಣ್ಣಾವ್ರ ಚಿತ್ರ ಬಿಡುಗಡೆಯಾದಾಗ ಗರುವಾರ ರಾತ್ರಿಯೇ ಅಭಿಮಾನಿಗಳು ಹಾಸಿಗೆಯೊಂದಿಗೆ ಬಂದು ಥಿಯೇಟರ್ ಎದುರು ಮಲಗಿ, ಬೆಳಿಗ್ಗೆ ಎದ್ದು ಸರತಿ ಸಾಲಿನಲ್ಲಿ ನಿಂತು, ನುಗ್ಗಾಟ ನಡೆಸಿ, ಚಿತ್ರ ನೋಡಿ ಹೋಗುತ್ತಿದ್ದರಂತೆ. ಕಿಂಗ್ ಫಿಷರ್ ಡರ್ಬಿಯಲ್ಲಿ ಪಾಲ್ಗೊಳ್ಳಲು ಜೂಜು ಪ್ರೇಮಿಗಳು ಇಂಥದೇ ಕಸರತ್ತು ನಡೆಸಿದ ಹಾಗಿತ್ತು. ಬೆಳಿಗ್ಗೆ ಏಳಕ್ಕೆಲ್ಲಾ ಟರ್ಫ್ ಕ್ಲಬ್ ಮುಂದೆ ಜನ ಜಮಾಯಿಸಿದ್ದರು. ರೇಸಿನಲ್ಲಿ ಓಡಲಿರುವ ಕುದುರೆಗಳ ಹೆಸರನ್ನು ಹೊತ್ತ ಒರಿಜಿನಲ್ ವಿಲ್ ಇತ್ಯಾದಿ ರೇಸ್ ಪುಸ್ತಕದ ಹರಿದ ಹಾಳೆಗಳು ಅಲ್ಲೊಂದು ಇಲ್ಲೊಂದು ಬಿದ್ದಿದ್ದವು.

ನನಗೆ ಕುತೂಹಲ ಕೆರಳಿಸಿದ್ದು ಕುದುರೆ ಜೂಜಲ್ಲ. ರೇಸು ಕುದುರಗಳ ಹೆಸರುಗಳು. ಬಕ್‌ಪಾಸರ್, ಗೆಲಿಲಿ, ರೆಡ್ ರೋಮಿಯೋ, ಜಿಪ್ಸಿ ಮ್ಯಾಜಿಕ್, ಜಾಕ್ವೆಲಿನ್, ಅಸ್ಟ್ರಾಲ್ ಫ್ಲಾಷ್, ರಿಯಲ್ ಡ್ರೀಮ್, ಲಾಸ್ಟ್ ನೈಟ್, ಸೊನ್ನೆಟ್, ಬೇಕಾನ್ ಲೈಟ್, ಫ್ರೀ ಸ್ಪಿರಿಟ್, ಬಕ್ ಮೇಕರ್, ಕಿಚನ್ ಕ್ಯಾಬಿನೆಟ್, ರೆಡ್ ಟೆರರ್, ಫೈರ್ ಕ್ರಸ್ಟ್, ಕೋಮಾಂಛೆ, ಪ್ಲಾಟಿನಂ ಗರ್ಲ್, ಸೀಕ್ರೇಟ್ ಹಾರ್ಟ್, ಬ್ಲಾಕ್ ಪರ್ಲ್ ವ್ಹಾ... ಎಷ್ಟೊಂದು ರೊಮ್ಯಾಂಟಿಕ್ ಹೆಸರುಗಳು. ನಮ್ಮೂರಿನ ಕೆಲವು ಕಿಲಾಡಿಗಳು ತಮ್ಮ ಸಾಕುನಾಯಿಗಳಿಗೆ ಇಂತಹ ತೂಕದ ಹೆಸರನ್ನು ಇಡುವುದಿದೆ. ನಮ್ಮ ಪಕ್ಕದ ಮನೆಯ ನಾಯಿಯ ಹೆಸರು ಲಾಡೆನ್. ಬುಷ್ ಮತ್ತು ಮುಷರಫ್ ಅದರ ಹಿಂಬಾಲಕರು. ಬರಿ ಅನ್ನವನ್ನೇ ತಿನ್ನುತ್ತಿದ್ದ ನಾಯಿಯೊಂದರ ಹೆಸರು ರೈಸ್ (ಕೊಂಡೊಲಿಜಾ ರೈಸ್). ವಿಚಿತ್ರವಾಗಿ ಕೂಗುತ್ತಿದ್ದ ನಾಯಿಯ ಹೆಸರು ಜಾಕ್ಸನ್. ಸ್ವಲ್ಪ ವೈಯಾರದಿಂದಿದ್ದ ಹೆಣ್ಣು ನಾಯಿಯೊಂದಕ್ಕೆ ಇಟ್ಟ ಹೆಸರು ಸಿಲ್ಕ್. ನಮ್ಮ ಮನೆಯಲ್ಲಿ ಕಡುಕಪ್ಪು ಬಣ್ಣದ ನಾಯಿಯೊಂದಿತ್ತು ಅದಕ್ಕೆ ನಾವಿಟ್ಟ ಹೆಸರು ಶಾಡೋ.

ಟರ್ಫ್ ಕ್ಲಬ್ ಆವರಣದಲ್ಲಿ ಕುದುರೆಯ ಖುರಪುಟದ ಸದ್ದುಗಳು ಕೇಳಿಬರುವ ಹೊತ್ತಿನಲ್ಲಿ ನಾನು ಈ ಕುದುರೆಯ ಹೆಸರಿಗೂ ನಮ್ಮೂರ ಶ್ವಾನದಳದ ಹೆಸರಿಗೂ ಇರುವ ಸಂಬಂಧವನ್ನು ತಾಳೆ ಹಾಕುತ್ತಿದ್ದೆ. ಯಾಕೆ ಒಂದು ನೂರು ರೂಪಾಯಿ ಆಡಿ ಅದೃಷ್ಟ ಪರೀಕ್ಷಿಸಬಾರದು ಅಂತ ಅನಿಸಿದರೂ, ಮನುಷ್ಯನ ವಿನಾಶಕ್ಕೆ ಅತ್ಯಂತ ಹತ್ತಿರದ ದಾರಿ ಕುದುರೆ ಜೂಜು ಎನ್ನುವ ವಿವೇಕ ಎಚ್ಚರಿಸಿತು. ಕೂಲಿಕಾರರು, ಜವಾನರು, ರಿಕ್ಷಾಡ್ರೈವರ್‌ಗಳು, ಸರ್ಕಾರಿ ನೌಕರಸ್ತರು ಹೀಗೆ ರೇಸಿನ ದಾಸ್ಯಕ್ಕೆ ಸಿಕ್ಕವರು ಎಷ್ಟೊಂದು ಜನ ಎನಿಸಿತು. ಒಂದಿಷ್ಟು ಸುತ್ತಾಡಿ ಅಲ್ಲಿಂದ ಮರಳಿದೆ.

ಅಬೋಲಿನ್ ಎಪ್ಪತ್ತೊಂಭತ್ತು ಲಕ್ಷ ಗೆದ್ದಿರಬಹುದು. ಸುಮಾರು ೯ ಕೋಟಿಗೂ ಹೆಚ್ಚಿನ ಬೆಟ್ಟಿಂಗ್ ನಡೆದಿದೆ ಎನ್ನುತ್ತಾರೆ. ಆದರೆ ಅದು ಗೆದ್ದ ದಿನ ನೂರಾರು ಬಡ ಜೂಜುಗಾರರ ಮನೆಯ ದೀಪಗಳೂ ನಂದಿವೆ....!