Sunday 14 February, 2010

ಮೂರುಸಾವಿರ ಮಠ ನೋಡಿಯೇನ?


ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಜ್ಮೀರ ಎಕ್ಸ್ ಪ್ರಸ್ ನಿಂದ ಕೆಳಗಿಳಿದಾಗ ಬೆಳಗ್ಗೆ 7 ಗಂಟೆ. ಹೊರಗೆ ಇಡಿ ನಗರವೇ ಚಳಿಯಲ್ಲಿ ಉಸಿರಾಡುತ್ತಿರುವಂತೆ ಕಾಣುತ್ತಿತ್ತು. ನಿಧಾನ ಬಂದು ಧಾರವಾಡ ಬಸ್ಸು ಹತ್ತಿದರೆ,ಅದರೊಳಗೆ ಕುಳಿತ ಹೆಂಗಸರಿಬ್ಬರು ಸಂಭ್ರಮದಿಂದ ಮಾತನಾಡುತ್ತಿದ್ದರು.
ಮೂರುಸಾವಿರ ಮಠ ನೋಡಿಯೇನ?
ಇಲ್ಲ, ನಾ, ಸಣ್ಣಾಕಿ ಇದ್ದಾಗ ನೋಡಿದ್ದೆ, ಆಮೇಲೆ ಹೋಗಿಲ್ಲ..
ನಮ್ಮ ಮುತ್ಯಾನೂ ಅಲ್ಲೇ ಇದ್ದ. ಒಮ್ಮೆ ತೇರಿಗೆ ಹೋಗಿದ್ವಿ ನೋಡವ್ವ..
ನಡಿ, ಈಗ ಹೋಗಿ ಬರೋಣ, ಇಂವ ಬೇಕಾದ್ರೆ ಬಸ್ ಸ್ಟಾಂಡಾಗೆ ಕೂಡಲಿ..
ಜೊತೆಗಿದ್ದ ಗಂಡಸಿಗೆ ಸಿಟ್ಟು ಬಂತು.
ಹೇ..ನಿಮ್ಮss ಈಗೆಲ್ಲಿ ಹೋಗ್ತೀರ, ಸಂಜೀಕೆ ಹೋಗೋಣಂತೆ.. ಮೊದಲು ಮನಿಗೆ ಹೋಗೋಣ ನಡೀರಿ.. ಎಂದು ಜೋರು ಮಾಡಿದ..
ನೀ ಬೇಕಾದರೆ, ಬಸ್ ಸ್ಟಾಂಡಾಗ ಕುಂದ್ರು.. ನಾವು ನಡಕೊಂಡು ಹೋಗಿ ಬರ್ತೀವಿ..(ಹೆಂಗಸರಿಬ್ಬರು ಗಟ್ಟಿ ನಿರ್ಧಾರದಲ್ಲಿ ನಿಂತರು.)
ಮತ್ತೆ ಗಂಡಸು ಮಾತನಾಡಲಿಲ್ಲ.

ನಾನು ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ತುಂಬಾ ದಿನಗಳ ನಂತರ ನಾವು ನಮ್ಮ ಊರುಗಳಿಗೇ ಹೋದಾಗ ಅಲ್ಲಿರುವ ಎಲ್ಲ ವಸ್ತುಗಳು ನಮಗೆ ಅಪ್ಯಾಯಮಾನವಾಗಿ ಕಾಣುತ್ತದೆ. ನನಗೆ 'ನಡೀರಿ ಅವ್ವಾರೆ, ನಾನೂ ಬರ್ತೀನಿ, ಹೋಗಿ ನೋಡ್ಕೊಂಡು ಬರೋಣ' ಅಂತ ಹೇಳುವ ಆಸೆಯಾಯಿತು. ಆದರೆ ನನ್ನ ಕರ್ತವ್ಯ ಪ್ರಜ್ಞೆ ಧಿಡೀರನೆ ನೆನಪಾಗಿ ಮೂರುಸಾವಿರ ಮಠ ನೋಡಲು ಹೋದರೆ, ಈವತ್ತು ಕರ್ನಾಟಕ ವಿಶ್ವವಿದ್ಯಾಲಯ ತಲುಪುವುದಿಲ್ಲ ಅಂದುಕೊಂಡೆ. ನೋಡುತ್ತಿದ್ದಂತೆ ಆ ಹೆಂಗಸರಿಬ್ಬರೂ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಇಳಿದು ಹೋದರು. ನಾನು ಈ ಹಿಂದೆ ಚಪ್ಪಲಿ ಸವೆಯುವಂತೆ ಅಡ್ಡಾಡಿದ ಸಿಬಿಟಿ, ಕಾರ್ಪೋರೇಶನ್, ಚೆನ್ನಮ್ಮ ವೃತ್ತ, ವಿದ್ಯಾನಗರಗಳೆಲ್ಲಾ ಎಷ್ಟೊಂದು ಬದಲಾಗಿ ಹೋಗಿದೆಯಲ್ಲಾ ಎಂದು ಆಶ್ಚರ್ಯದಿಂದ ನೋಡುತ್ತಾ ಕುಳಿತುಕೊಂಡೆ.

ಧಾರವಾಡ ಬಸ್, ವಿದ್ಯಾನಗರ ದಾಟಿ, ಉಣಕಲ್ ಕರೆ ಬಳಸಿಕೊಂಡು ಬೈರಿದೇವರಕೊಪ್ಪದ ಸಮೀಪಕ್ಕೆ ಬಂತು. ರಸ್ತೆ ಪಕ್ಕದಲ್ಲೊಂದು ಬೋರ್ಡ್ "ಶ್ರೀ ಶಕ್ತಿ ಮೋಟಾರಸ ಕಾರ ಮೇಳ" ಮೊದಲು ನನಗೆ ಇದೇನೆಂದು ಅರ್ಥ ಆಗಲಿಲ್ಲ. ಇಲ್ಲಿ ಯಾರು ಖಾರ ಅರೆಯುತ್ತಿದ್ದಾರೆ ಎಂದು ಯೋಚಿಸಿದೆ. ಆಮೇಲೆ ಗೊತ್ತಾಯ್ತು ಅದು ಕಾರ್ ಮೇಳ ಎನ್ನುವುದು. ವ್ಯಂಜನ ಬಳಸದ ಕನ್ನಡ. ನವನಗರ ದಾಟಿ ಮುಂದೆ ಬರುತ್ತಿದ್ದಂತೆ ಅಶ್ವಮೇಧ ನಗರ ಎಂಬ ಬೋರ್ಡು ಕಾಣಿಸಿತು. ಎಲ್ಲಿಯಾದರೂ ಅಶ್ವಗಳಿವೆಯಾ ಎಂದು ಇಣುಕಿ ನೋಡಿದರೆ ಮೂರು ನಾಲ್ಕು ಕತ್ತೆಗಳು ಎಳೆಬಿಸಿಲಿನಲ್ಲಿ ಮೈ ಕಾಯಿಸಿಕೊಳ್ಳುತ್ತಿದ್ದವು. ಮುಂದೆ ಸಾಗಿದಾಗ ಓಝೋನ್ ಎಂಬ ಹೊಟೇಲ್ ಬಂತು. ನೋಡಿದರೆ ಅದರ ಎದುರಿಗಿನ ಮಾವಿನ ತೋಪಿನಲ್ಲಿ ಒಂದಿಷ್ಟು ಬೆಳ್ಳಕ್ಕಿಗಳು ಚಳಿಯಲ್ಲಿ ಧ್ಯಾನಕ್ಕೆ ಕುಳಿತಂತೆ ನಿಂತಿದ್ದವು. ಮುಂದೆ ಸಾಗಿದಾಗ ಡೆಂಟಲ್ ಬಂತು (ಎಸ್ ಡಿಎಂ ಮೆಡಿಕಲ್ ಕಾಲೇಜ್). ಹಿಂದೆ ಧಾರವಾಡ ಎಲ್ಲಿದೆ ಎಂದು ಯಾರಾದರೂ ಕೇಳಿದರೆ ಡೆಂಟಲ್ ಮತ್ತು ಮೆಂಟಲ್ ಮಧ್ಯೆ ಇದೆ ಎಂದು ಹೇಳುತ್ತಿದ್ದವು. (ಯಾಕೆಂದರೆ ಈ ಡೆಂಟಲ್ ಕಾಲೇಜ್ ಮತ್ತು ಮಾನಸಿಕ ಆಸ್ಪತ್ರೆಯ ಮಧ್ಯವೇ ಧಾರವಾಡ ಶಹರ ಬರುವುದು). ಮುಂದೆ ನವಿಲೂರು ಬಂತು. ನವಿಲು ಕಾಣಿಸಲಿಲ್ಲ. ಇನ್ನೇನು ಧಾರವಾಡ ಬಂದೇ ಬಿಡ್ತು ಎನ್ನುವಷ್ಟರಲ್ಲಿ 'ನಾಕೌಟ್ ಥರ ಮೀಟರ್ ಇದ್ರೆ, 2 ಲಕ್ಷ ಗೆದ್ದು ತೋರಿಸು' ಎಂಬ ದರ್ಶನ್ ಜಾಹಿರಾತು ಕಾಣಿಸಿತು. ಯಾಕೆ ಒಮ್ಮೆ ಪ್ರಯತ್ನಿಸಬಾರದು ಎಂಬ ಯೋಚನೆ ಸುಮ್ಮನೆ ಸುಳಿದು ಹೋಯಿತು-:. ಮುಂದೆ ಮುಂದೆ ಸಾಗಿದಂತೆ ಶಿಲ್ಪಾ ರೆಸ್ಟೋರಂಟ, ಮಹಾಲಕ್ಷ್ಮಿ ಮೆಡಿಕಲ, ಕಾಮತ ಲಾಡಜ, ಪ್ರೇತಿಸ ಬೇಕ್ರಿ ಇತ್ಯಾದಿ ಬೋರ್ಡುಗಳು ವ್ಯಂಜನಗಳಿಲ್ಲದೆ ಖುಷಿ ಕೊಟ್ಟವು.

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋದರೆ ಅಲ್ಲಿನ ಪತ್ರಿಕೋದ್ಯಮ ವಿಭಾಗದ ಕಿರಿಯ ವಿದ್ಯಾರ್ಥಿಗಳೆಲ್ಲಾ ಮೀಡಿಯಾ ಫೆಸ್ಟ್ ನ ಬ್ಯುಸಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ತಮಗಿಂತ ದೊಡ್ಡ ಜವಾಬ್ದಾರಿಗಳನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಓಡುತ್ತಿರುವ ಈ ವಿದ್ಯಾರ್ಥಿಗಳನ್ನು ಅವರ ಪಾಡಿಗೆ ಓಡಲು ಬಿಟ್ಟು, ನಾನು ಹುಬ್ಬಳ್ಳಿ ಧಾರವಾಡ ಸುತ್ತುವುದೇ ಒಳ್ಳೆಯದು ಎನಿಸತೊಡಗಿತು.

ಮತ್ತೆ ಹುಬ್ಬಳ್ಳಿಗೆ ಬಂದೆ. 3 ಈಡಿಯಟ್ಸ್ ಚಿತ್ರ ನೋಡಿ, ವಾಪಾಸ್ಸು ಬಸ್ ಹತ್ತಿದರೆ ಮತ್ತೊಂದಿಷ್ಟು ತಮಾಷೆಗಳು ಕಾಣಿಸತೊಡಗಿದವು.
'ಪ್ರಯಾಣಿಕರ ಗಮನಕ್ಕೆ ದರ, ಚಾರ್ಜಿ 13 ರೂಪಾಯಿ'
'ಪೊಲೀಸರಿಗೆ ವಾರಂಟ ಇಲ್ಲದೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ.'
'ವಿದ್ಯಾರ್ಥಿಗಳು ಮಾರ್ಗ ಬಿಟ್ಟು ಬಸ್ ಪಾಸ್ ಬಳಸಬಾರದು'

ಈ ಸೂಚನೆಗಳನ್ನು ಬಸ್ಸಿನಲ್ಲಿ ಓದಿ ಮತ್ತೆ ಖುಷಿಪಟ್ಟುಕೊಂಡೆ. ಮರಳಿ ಬೆಂಗಳೂರಿಗೆ ಬಂದರೂ,ಇವು ಆಗಾಗ್ಗ ನೆನಪಾಗಿ ಕಚಗುಳಿ ಇಡುತ್ತಿವೆ.

10 comments:

ಸೂರ್ಯ ವಜ್ರಾಂಗಿ said...

ha ha ha ha

sunaath said...

ಜೋಮನ್,
ಧಾರವಾಡದಲ್ಲಿ ಕೆಲ ಕಾಲ ಇದ್ದಿರೇನೊ? ಹುಬ್ಬಳ್ಳಿಯ ಹೆಂಗುಸರ
ಮಾತುಗಳನ್ನು ತಪ್ಪಿಲ್ಲದೆ ಬರೆದಿದ್ದೀರಿ. ಧನ್ಯವಾದಗಳು. ಇನ್ನು ವ್ಯಂಜನ ಬಳಸದ ಕನ್ನಡವು ಸರಿಯಾದ ಕನ್ನಡವೆಂದು ಬೇರೆ ಹೇಳಬೇಕಾಗಿಲ್ಲ. ಉದಾಹರಣೆಗೆ ಅಶ್ವತ್ಥ ಎನ್ನುವ ನಾಮಪದವನ್ನು
ವ್ಯಂಜನ ಬಳಸಿ ಬರೆಯುವವರು ಅಶ್ವತ್ಠ್ ಎಂದು ಬರೆದಾಗ ಈ ಪದವನ್ನು ಉಚ್ಚರಿಸಲೇ ಸಾಧ್ಯವಿಲ್ಲ, ಅಲ್ಲವೆ? ಅದರಂತೆ, ದೀರ್ಘಾಂತ ಪದಗಳನ್ನು ಹೃಸ್ವಾಂತವಾಗಿ ಬರೆಯುವದೂ ಸಹ ಎಷ್ಟು
ಆಭಾಸಕಾರಿ ಎಂದು ಹೇಳಬೇಕಾಗಿಲ್ಲ. ಉದಾಹರಣೆಗೆ ‘ಬಾಲಾ’ ಎನ್ನುವ ಹುಡುಗಿಯ ಹೆಸರು ‘ಬಾಲ’ ಆದಾಗ ಹೇಗಿರುತ್ತೆ, ಹೇಳಿ.
Anyway, ಧಾರವಾಡವನ್ನು ಪ್ರೀತಿಯಿಂದ ನೆನೆಸಿಕೊಂಡಿದ್ದೀರಿ,
ಧನ್ಯವಾದಗಳು.

Viresh Math said...

Channadige Dharwar Bhashe........ Veeru

ಮನಸು said...

hahaha, nage honalaagide...

ಶೆಟ್ಟರು (Shettaru) said...

ಜೋಮನ್,

ಹಂಗ ಒಮ್ಮೆ ಹುಬ್ಬಳ್ಳಿ-ಧಾರವಾಡ ಅಡ್ಡಾಡಿ ಬಂದಾಂಗಾಯ್ತು.

ಈಗ ಯುನಿವರ್ಸಿಟಿ ಹೆಂಗಾಗೈತಿ ಅನ್ನೂದೆ ಬರೆದಿಲ್ಲ. ಬೋಟಾನಿಕ್ ಗಾರ್ಡನ್ನಿಂದ ಹಂಗ ಒಮ್ಮೆ ಶ್ರೀನಗರ ಸರ್ಕಲಮಟ ಹೋಗಿ ಬರಬೇಕಿತ್ತು.

-ಶೆಟ್ಟರು

MD said...

ಹೂಂ... ಯುನಿವರ್ಸಿಟಿಗೆ ಹೋಗಿ ಹುಡ್ಗೀರ್ಗೆ ಕಾಳ್ ಹಾಕಿ ಬಂದೆ ಅನ್ನೋದನ್ನ ಇಷ್ಟು ಆಪ್ತವಾಗಿ ಬರೆದಿದ್ದೀರ ಜೋಮೋನ್.
ಸುಮ್ನೆ ತಮಾಶೆಗೆ ಅಂದೆ ಸಾಹೇಬ್ರ, ಭಾಳ ಸೀರಿಯಸ್ ತಗೋಬ್ಯಾಡ್ರಿ - ಸಲೈನ್ (ಗ್ಲುಕೋಸ್) ಹಚ್ಚಬೇಕಾದೀತು :-)
ನಿಜ, ಹುಬ್ಬಳ್ಳಿ-ಧಾರವಾಡ ಅವಳಿನಗರಗಳಲ್ಲು ; ಒಂದೇ ಮಹಾನಗರವಾಗಿಬಿಟ್ಟಿವೆ.
ಮತ್ತೆ ಹುಬ್ಬಳ್ಳಿಯ ವಿದ್ಯಾನಗರದ ಮತ್ತು ಧಾರವಾಡದ ವಿದ್ಯಾಗಿರಿಯ ಆ ಶಾಂತತೆ ಮಾಯವಾಗಿಬಿಟ್ಟಿದೆ.
--ಎಮ್.ಡಿ

Hombisilu said...

Dharwad igu........ bhal miss madkothir anstda

ವಾಣಿಶ್ರೀ ಭಟ್ said...

nimma lekhana nanage nanna dharavaadadallina dinagala nenapu tantu.. sundara vaagide..

shilpa said...

ಸರ್,
ನಿಮ್ಮ ಲೇಖನ ಚೆನ್ನಾಗಿದೇ.ಸರಳ ಸಹಜವಾಗಿ ನಿಮ್ಮ ಅನುಭವ ಹಂಚಿಕೋಂಡಿದ್ದಿರಿ. ಓದಿ ಸಂತಸವಾಯಿತು.ನಾನು ಮಿಡಿಯಾ ಫೆಸ್ಟ್ ನಲ್ಲಿ ಭಾಗವಹಿಸಿದ್ದೆ. ಆದರೆ ಆಗ ನಿಮ್ಮ ಪರಿಚಯವಿರಲಿಲ್ಲ ಅದಕ್ಕೆ ಬೇಸರವಿದೆ.

VMK said...

Naanu dharwad da are bare nivasi.. yakandre engineering bare ooru..Evag Job bare RAJYA.. kahren Vamme Dharwad ke hogi bandagayitu...:)