Monday 14 December, 2009

ತಲಕಾಡಿಗೆ ಹೋಗಿ ಬಂದ ನಂತರ....


ತಲಕಾಡಿಗೆ ಹೋಗಿ ಬಂದ ಖುಷಿಯಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತಾ, ಎರಡು ದಿನ ಸುಮ್ಮನೆ ಕಳೆದೆ. ನಂತರ ಎದ್ದು ಯೋಚಿಸತೊಡಗಿದರೆ ಕಣ್ಣ ಮುಂದೆ ಬರಿ ತಲಕಾಡಿನ ಮರಳೇ ತುಂಬಿಹೋಗಿ, ಬೇರೆನೂ ಕಾಣಿಸದೆ ಚಿಂತಿಸುತ್ತಾ ಕುಳಿತುಕೊಳ್ಳುವಂತಾಯಿತು. 'ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗಳಿಗೆ ಮಕ್ಕಳಾಗದೇ ಹೋಗಲಿ' ಎಂದು ಎಲ್ಲರಿಗೂ ಗೊತ್ತಿರುವ ಹಳೆಯ ಶಾಪದ ಕಥೆಯನ್ನು ಇಲ್ಲಿಯೂ ಬರೆದರೆ ತುಂಬಾ ಬೋರಾಗುತ್ತದೆ ಎಂದು ಅನಿಸಿ, ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. 'ತಲೆ' ಮತ್ತು 'ಕಾಡ' ಎನ್ನುವುದು ಇಬ್ಬರು ಬೇಡರ ಹೆಸರೆಂದೂ, ಆ ಹೆಸರಿನ ಹಿಂದೆ, 'ಸೋಮದತ್ತ' ಎಂಬ ಆನೆಯ ಜನ್ಮ ಪಡೆದಿದ್ದ ಮುನಿಯ ಕಥೆಯೂ ಇದೆಯೆಂದು ನಾನು ತಲಕಾಡಿಗೆ ಹೋಗಿ ಬಂದ ನಂತರ ಅಲ್ಲಿ ಕೊಂಡ ಪುಸ್ತಕದಲ್ಲಿ ಓದಿ ತಿಳಿದ ವಿಷಯಗಳು.

ನಾವು ತಲಕಾಡಿಗೆ ಹೋಗಿದ್ದು ಎರಡು ವಾರಗಳ ಹಿಂದೆ. ನಾನು, ಸ್ನೇಹಿತ ವಜ್ರಾಂಗಿ ಸೂರ್ಯ ಮತ್ತು ಪ್ರಕಾಶ್. ಆವತ್ತು ತಲಕಾಡು ತಲುಪಿದಾಗ ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಬೆಳಿಗ್ಗೆ ಐದಕ್ಕೆಲ್ಲಾ ಎದ್ದು, ಮೆಜೆಸ್ಟಿಕ್ ನಿಂದ (ಒಂದು ಗಂಟೆ ತಡವಾಗಿ ಬಂದ) ಟ್ಯುಟಿಕೊರಿನ್ ರೈಲು ಹತ್ತಿ ಮದ್ದೂರಿನಲ್ಲಿಳಿದು, ತಟ್ಟೆ ಇಡ್ಲಿ ತಿಂದು ರೆಡಿಯಾಗುವ ಹೊತ್ತಿಗೆ 9:30 ಆಗಿತ್ತು. ಅಲ್ಲಿಂದ ಮಳವಳ್ಳಿ. ನಂತರ ತಲಕಾಡು. ಸರ್ಕಾರಿ ಸಾರಿಗೆ. ಹಿಂದಿನ ದಿನ, ರಾತ್ರಿ (ನೈಟ್ ಶಿಪ್ಟ್) ಪಾಳಿಯಲ್ಲಿ ಕೆಲಸ ಮಾಡಿದ್ದರಿಂದ ಮೂವರೂ ಬಸ್ಸಿನಲ್ಲಿ ಕುಳಿತು ನಾಚಿಕೆಯಿಲ್ಲದೆ ತೂಕಡಿಸುತ್ತಿದ್ದೆವು.

ನಡುವೆ ನಾನು ಕಷ್ಟಪಟ್ಟು ಕಣ್ಣು ತೆರೆದು ಕಿಟಕಿಯ ಹೊರಗೆ ತೂರಿಬಿಟ್ಟೆ. ಹಸಿರು!. ಕಣ್ಣು ಹಾಯಿಸಿದೆಡೆಯಲ್ಲೆಲ್ಲಾ ಹಸಿರು. ಮಳವಳ್ಳಿ ದಾಟುತ್ತಿದ್ದಂತೆ ಈ ಊರು ಥೇಟ್ ಮಲೆನಾಡಿನ ಸ್ವರೂಪ ಪಡೆದುಕೊಳ್ಳುತ್ತದೆ. ನಳನಳಿಸುತ್ತಿರುವ ಬತ್ತದ ಗದ್ದೆಗಳು, ಬಲಿತು ನಿಂತ ಕಬ್ಬನ ತೋಟಗಳು, ಟಮೋಟೋ, ದೊಣ್ಣೆಮೆಣಸಿನಕಾಯಿ, ಸೊಪ್ಪು ಬೆಳೆಯುವ ಫಲವತ್ತಾದ ಭೂಮಿ. ಮುಂದೆ ನಿದ್ರೆ ಬರಲಿಲ್ಲ. 40 ಕಿಮೀನ ಈ ದಾರಿಯಲ್ಲಿ ಮೂರು ಕೆರೆಗಳನ್ನು ನೋಡಿದೆ. ಮೂರೂ ದೊಡ್ಡ ದೊಡ್ಡ ಕೆರೆಗಳು. ಈ ಕೆರೆಯ ನೀರನ್ನೇ ಸಾವಿರಾರು ರೈತರು ಕಾಲುವೆಯ ಮೂಲಕ ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಬೆವರು ಹರಿಸಿ ಹುಲುಸಾದ ಬೆಳೆ ತೆಗೆಯುತ್ತಾರೆ.

ಪೂವಳ್ಳಿಯ ಸಮೀಪ ಬಸ್ಸು ನಿಂತಾಗ ಮತ್ತೊಂದು ಕೆರೆ ನೋಡಿದೆ. ಸ್ಟಟಿಕದಷ್ಟೇ ಶುಭ್ರವಾದ ನೀರು. ಬೇಕಾದರೆ ಈ ಕೆರೆಯ ದಡದಲ್ಲಿ ನಿಂತು ನೀರಿನಲ್ಲಿ ಮುಖ ನೋಡುತ್ತಾ ತಲೆ ಬಾಚಿಕೊಳ್ಳಬಹುದಾದಷ್ಟು ಸ್ವಚ್ಛ ನೀರು. ದಾರಿಯುದ್ದಕ್ಕೂ ಎಲ್ಲಿಯೂ ಬಡತನ ಕಾಣಲಿಲ್ಲ. ಯಾರ ಭೂಮಿಯ ಫಸಲೂ ಒಣಗಿರುವುದು ಕಂಡಿಲ್ಲ. ಹಸಿರು ತುಂಬಿದ, ಭೂಮಿಯ ಬಗ್ಗೆ ಪ್ರೀತಿ ಮೂಡಿಸುವ ಈ ಊರು ಇಷ್ಟವಾಗತೊಡಗಿತು. ರೈತರು ತಮ್ಮ ಕೃಷಿಯ ಬಗ್ಗೆ ನಂಬಿಕೆ ಮತ್ತು ಆಸಕ್ತಿ ಕಳೆದುಕೊಂಡು, ನಮ್ಮ ಹಳ್ಳಿಗಳು ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನನಗೆ ಈ ಊರಿನ ಬಗ್ಗೆ ಸಹಜವಾಗಿಯೇ ಹೆಮ್ಮೆ ಎನಿಸತೊಡಗಿತು.

ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಂಚರಿಸುವಾಗ ಗಮನಿಸಿದ ಮುಖ್ಯ ವಿಷಯವೆಂದರೆ ಈ ಜಿಲ್ಲೆಗಳಲ್ಲಿನ ನೀರಾವರಿ ವ್ಯವಸ್ಥೆ. ದಶಕಗಳ ಹಿಂದೆ ರಚನೆಗೊಂಡಿರುವ ನಾಲೆ ವ್ಯವಸ್ಥೆ ಇಲ್ಲಿನ ವ್ಯವಸಾಯವನ್ನು ಎಷ್ಟೊಂದು ಸಮೃದ್ಧವಾಗಿಸಿದೆ ಎಂದರೆ ನೀವೊಮ್ಮೆ ಈ ಪ್ರದೇಶಗಳಲ್ಲಿ ಅಡ್ಡಾಡಿ ನೋಡಬೇಕು. ಬಹುಶ್ಯ: ಇಂದು ನಮ್ಮ ಸರ್ಕಾರದ ಕೈಯಿಂದಲೂ ಇಷ್ಟು ಯೋಜಿತವಾದ ನೀರಾವರಿ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಿಲ್ಲ. ಚಿಕ್ಕದೇವರಾಯ ನಾಲೆ, ದೊಡ್ಡ ದೇವರಾಯ ನಾಲೆ, ವಿರಿಜಾ ನಾಲೆ, ಬಂಗಾರದೊಡ್ಡಿ ನಾಲೆ, ರಾಮಸ್ವಾಮಿ ನಾಲೆ, ರಾಜ ಪರಮೇಶ್ವರಿ ನಾಲೆ, ಮಾಧವ ಮಂತ್ರಿ ನಾಲೆ ಎಷ್ಟೊಂದು ನಾಲೆಗಳು. ಈ ನಾಲೆಗಳಿಗೆ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ಇಲ್ಲಿನ ಕೃಷಿಕರು ವ್ಯವಸಾಯ ಮಾಡುತ್ತಾರೆ.

14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸ್ಥಳೀಯ ಮಂತ್ರಿಯಾಗಿದ್ದ ಮಾಧವ ಎಂಬುವರು ತಲಕಾಡು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಕಾಲುವೆ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಇನ್ನೊಂದೆಡ ಇದೇ ಮಂತ್ರಿ ೧೩೪೨ರಲ್ಲಿ, ಊರಿನಂಚಿನಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿದ. ಪರಿಣಾಮವಾಗಿ ತಲಕಾಡು ಪಟ್ಟಣ ಮರಳ ಗುಡ್ಡವಾಗಿ ಮಾರ್ಪಾಡಾಯಿತು ಎನ್ನುತ್ತಾರೆ ಕೆಲವರು. ತಲಕಾಡಿನ ಬಗ್ಗೆ ಇರುವ ಈ ಎರಡು ಕಥೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎನ್ನುವುದು ನಿಮಗೆ ಬಿಟ್ಟಿದ್ದು.

ಆದರೆ ತಲಕಾಡಿನ ಮರಳಿನಡಿಯಲ್ಲಿ ನೀರಾವರಿ ಕಾಲುವೆಗಳು ಇದ್ದವು ಎನ್ನುವುದಕ್ಕೆ ಈಗ ವೈಜ್ಞಾನಿಕ ಆಧಾರಗಳಿವೆ. ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಮತ್ತು ಪುರಾತತ್ವ ಇಲಾಖೆಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಇದು ಧೃಡಪಟ್ಟಿದೆ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್ ) ಅಡಿ ಉಪಗ್ರಹ ಮತ್ತು ರಾಡಾರ್ ತಂತ್ರಜ್ಞಾನದಿಂದ ಕಾವೇರಿ ನದಿ ತಟದಲ್ಲಿರುವ ತಲಕಾಡಿನ ಮರಳು ಗುಡ್ಡದ ಕೆಳಗಿರುವ ಸುಮಾರು ನಾಲ್ಕು ಶತಮಾನಗಳ ಹಿಂದಿನ ಕಾಲುವೆಗಳನ್ನು ಇವರು ಪತ್ತೆ ಹಚ್ಚಿದ್ದಾರೆ.

ತಿರುಮಲ ರಾಜನ ಪತ್ನಿ ಆಲಮೇಲಮ್ಮ ಹಾಕಿದ್ದ ಶಾಪದಿಂದ ತಲಕಾಡು ಮರಳಾಯಿತು ಎಂದು ಇಂದಿಗೂ ನಂಬಿಕೊಂಡಿರುವವರು ಈ ವೈಜ್ಞಾನಿಕ ಸತ್ಯವನ್ನು ಒಪ್ಪದಿರಬಹುದು. ಇರಲಿ. ಇಲ್ಲಿ ನಾನು ತಲಕಾಡಿನ ಬಗ್ಗೆ ಬರೆಯಲು ಹೊರಟು ನಾಲೆ ನೀರಾವರಿ ವ್ಯವಸ್ಥೆಯ ಬಗ್ಗೆ ಬರೆದಿದ್ದೇನೆ. ಆದರೂ ಮುಖ್ಯವಾಗಿ ಹೇಳಬೇಕಾದದ್ದು ಬೇರೆಯದೇ ಇದೆ.

ನಾವು ಉಣ್ಣುವ ಅನ್ನ, ಜೀವ ಕೊಡುವ ಉಸಿರು, ನೀರು, ನೆರಳು, ವಸತಿ, ಉಡುಪು ಎಲ್ಲದಕ್ಕೂ ಕಾರಣವಾದ ಪ್ರಕೃತಿಯಲ್ಲಿ ಏನೆಲ್ಲಾ ವಿಸ್ಮಯಗಳಿವೆಯಲ್ಲಾ? ನಮಗೆಲ್ಲಾ ಗೊತ್ತಿದೆ, ಮಾಯವಾದ ಕಾಡು, ಕೃಷಿಯಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರುವ ರೈತ, ಹಳ್ಳಿಗಳನ್ನು ಬಿಟ್ಟು ನಗರ ಸೇರುತ್ತಿರುವ ಯುವ ಜನತೆ. ಈ ಹೊತ್ತಿನಲ್ಲಿ, ನನಗೆ ಅನ್ನಿಸಿದ್ದು. ಪ್ರಕೃತಿಯ ಬಗ್ಗೆ ನಮಗೆಲ್ಲಾ ಹೆಮ್ಮೆ ಮೂಡಿ, ನಮ್ಮ ರೈತರಿಗೂ ಭೂಮಿಯ ಬಗ್ಗೆ ಹುರುಪು ಮೂಡಿ, ಅವರು ಕೃಷಿಯಲ್ಲಿ ಕಳೆದುಕೊಂಡಿರುವ ಆಸಕ್ತಿ, ನಂಬಿಕೆ ಮತ್ತೆ ಬಂದರೆ, ನಮ್ಮ ಹಳ್ಳಿಗಳು ಎಷ್ಟೊಂದು ಸಂಭ್ರಮ ಮತ್ತು ಸಮೃದ್ಧಿಯಲ್ಲಿರಲು ಸಾಧ್ಯ. ತಲಕಾಡಿಗೆ ಹೋಗಿ ಬಂದ ನಂತರ ಇದು ಮೊದಲ ಹಂತದ ಚಿಂತನೆ.

6 comments:

sunaath said...

ತಲಕಾಡಿನಡಿಯಲ್ಲಿ ಕಾಲುವೆಗಳು ಇದ್ದದ್ದನ್ನು ತಿಳಿದು ವಿಸ್ಮಯವಾಯಿತು. ಯಾವಯಾವುದೋ ಕಾರಣಗಳಿಂದಾಗಿ, ಜನರು
ಊರು ಬಿಟ್ಟು ಹೋಗಿದ್ದರೆ, ಕಾಲುವೆಗಳು ಹೂತು ಹೋಗುವ ಸಂಭವವಿದೆ. ಇಲ್ಲಿಯೂ ಹಾಗೇ ಆಗಿರಬಹುದೆ?

ಸಾಗರದಾಚೆಯ ಇಂಚರ said...

ತುಂಬಾ ಆಸಕ್ತಿಕರ ಮಾಹಿತಿ ನೀಡಿದ್ದಿರಾ ಕಾಲುವೆಗಳ ಬಗೆಗೆ
ಎಷ್ಟೊಂದು ಕಾಲುವೆಗಳು ಕಾಲ ಗರ್ಭದಲ್ಲಿ ಮಾಯವಾಗಿವೆಯೋ?

ತೇಜಸ್ವಿನಿ ಹೆಗಡೆ said...

ತುಂಬಾ ಉತ್ತಮವಾದ ಚಿಂತನೆ. ಒಮ್ಮೆ ತಲಕಾಡಿಗೆ ಹೋಗಿಬರಬೇಕೆಂದೆನಿಸಿತು ಅಲ್ಲಿಯ ಪ್ರಕೃತಿ ವರ್ಣನೆ ಓದಿ. ತಲಕಾಡಿಗೆ ಹೋಗುವಾಗಲೇ ಪೂವಳ್ಳಿ ಸಿಗುವುದೇ?

ಮನಸು said...

ಅರಸನಿಗೆ ಮಕ್ಕಳಾಗದಿರಲಿ ತಲಕಾಡು ಮರಳಾಗಲಿ ಎಂಬುದಕೆ ಅಲಮೇಲಮ್ಮನ ಶಾಪವೇ ಕಾರಣ ಎಂಬ ಪ್ರತೀತಿ ಇದೆ. ಹಾಗೆ ಮಂಡ್ಯ ಸುತ್ತಮುತ್ತಲಿನ ಕಾಲುವೆಗಳು ನಿಜಕ್ಕೂ ಖುಷಿನೀಡುತ್ತದೆ. ಒಳ್ಳೆಯ ವಿಷಯವನ್ನೇ ಮುಂದಿಟ್ಟಿದ್ದೀರಿ.

Anonymous said...

allo maraya, thookadikegoo nachike beka?

Anonymous said...

Allo maraya thookadikegoo nachike beka?