Saturday 21 November, 2009

ಒಂದು ಖುಷಿಯ ಸಂಜೆಒಂದಿಡಿ ದಿನವನ್ನು ಆಲಸಿಯಾಗಿ ಕಳೆದ ಬೇಸರದಲ್ಲಿ ಎದ್ದರೆ ಅದಾಗಲೇ ಸಂಜೆಯಾಗಿತ್ತು. ಹೊರಗೆ ಮಳೆ ಸುರಿದು ರಸ್ತೆಗಳನ್ನು ತೊಳೆದಿಟ್ಟ ಹಾಗಿತ್ತು. ಮಧ್ಯಾಹ್ನದಿಂದಲೇ ಸುರಿಯತೊಡಗಿದ ಮಳೆ ಹೊರಗೆ ಅಡಿ ಇಡದಂತೆ ಕೋಣೆಯೊಳಗೇ ನನ್ನನ್ನು ಬಂಧಿಸಿಟ್ಟಿತ್ತು. ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳು ತೊಯ್ದು ತೊಪ್ಪೆಯಾಗಿದ್ದವು.ಟಿ ಕುಡಿದು ಬರೋಣವೆಂದು ಹೊರಟೆ.ಆಗಲೇ ಗೊತ್ತಾಗಿದ್ದು ಪರ್ಸಿನಲ್ಲಿ ಹಣವಿಲ್ಲ ಎನ್ನುವುದು. ATM ಕಡೆ ಹೆಜ್ಜೆ ಹಾಕಿದೆ. ಮಾರು ದೂರ. ಜಿಬುರು ಮಳೆ ಬೇರೆ. ಮಿರ್ಚಿ ಬಜಿ ಕರಿದ ವಾಸನೆ,ಗೋಬಿ ಮಂಚೂರಿ, ಪ್ರೈಡ್ ರೈಸ್, ಪಾನಿಪೂರಿ ವಾಸನೆಗಳೆಲ್ಲಾ ಆ ಸಂಜೆಯೊಳಗೆ ಹದವಾಗಿ ಬೆರೆತು ಇಡಿ ವಾತಾವರಣ ಒಂದು ರೀತಿ ಉಲ್ಲಸಿತವಾಗಿತ್ತು. ಗದ್ದಲ ನಡೆದಿತ್ತು.

ATM ಮುಂದೆ ಜನ Q ನಿಂತಿದ್ದರು.ನಾನೂ ಆ ಸಾಲಿನಲ್ಲಿ ಸೇರಿಕೊಂಡೆ.ಅಷ್ಟರಲ್ಲಾಗಲೇ ಪುಟಾಣಿ ಹುಡುಗಿಯೊಬ್ಬಳು ನನ್ನ ಗಮನ ಸೆಳೆದಳು. 5-6 ವರ್ಷದ ಹುಡುಗಿ. ನಮ್ಮ ಪಕ್ಕದ ಮನೆಯಲ್ಲಿ ಕಾಣಬಹುದಾದ ಹೊಳೆಯುವ ಕಣ್ಣುಗಳ ಮುದ್ದಾದ ಹುಡುಗಿ.ಆಕೆಯ ಕೈಯಲ್ಲೊಂದು ಬಣ್ಣದ ಛತ್ರಿ. ಅವರಮ್ಮ ATM ಕೌಂಟರ್ ಹೊರಗೆ ಕೊಡೆ ಇಟ್ಟು ಒಳಗೆ ದುಡ್ಡು ತೆಗೆಯಲು ಹೋಗಿದ್ದರು. ಈಕೆ ತನ್ನ ಕೊಡೆ ತಿರುಗಿಸುತ್ತಾ ಇನ್ನೊಂದು ಛತ್ರಿ ಗಾಳಿಯಲ್ಲಿ ಹಾರಿ ಹೋಗದಂತೆ ಕಾವಲು ನಿಂತಿದ್ದಳು.

ನನಗೆ ಯಾಕೋ ಈ ಮಗುವನ್ನು ಮಾತನಾಡಿಸಬೇಕು ಅಂತ ಅನಿಸತೊಡಗಿತು.
ಪುಟ್ಟೀ ನಿನ್ನ ಛತ್ರಿ ನನಗೆ ಕೊಡ್ತೀಯಾ? ಸುಮ್ಮನೆ ಕೇಳಿದೆ.
ಹಮ್.. ಇಲ್ಲ. ಕೊಡಲ್ಲ. ಇದು ನನ್ ಛತ್ರಿ.
ಹೋಗ್ಲಿ ನಿನ್ನ ಹೆಸರೇನು?
ನೀಹಾರಿಕಾ! ಥಟ್ಟನೆ ಹೇಳಿದಳು.
ನೀಹಾರಿಕಾ,ಹಾಗೆಂದರೆ ಏನು? ಗೊತ್ತಿದೆಯಾ?
ಹಮ್.. ಇಲ್ಲ.
ನಿನ್ನ ಹೆಸರಿನ ಅರ್ಥ ನಿನಗೆ ಗೊತ್ತಿಲ್ಲವಾ? ಹೋಗಲಿ,
ನೀನು ಎಷ್ಟನೇ ಕ್ಲಾಸಿನಲ್ಲಿ ಓದ್ತಿದಿಯಾ?
ಫಸ್ಟ್ ಸ್ಟಾಂಡರ್ಡ್.
ನೀಹಾರಿಕಾ ಎನ್ನುವ ಹೆಸರಿನ ಅರ್ಥ ಯಾರೂ ನಿನಗೆ ಹೇಳಿಕೊಟ್ಟಿಲ್ಲವಾ?
ಇಲ್ಲ..
ನೋಡು ಮರಿ, ನೀಹಾರಿಕಾ ಅಂದರೆ ನಕ್ಷತ್ರ ಪುಂಜ ಅಂತ ಅರ್ಥ. STAR...
ಹೌದಾ..!?
ಬ್ಯೂಟಿಫುಲ್ ... ನೈಟ್ ಕಾಣುವ ಸ್ಟಾರ್ ಅಲ್ವಾ ಅಂಕಲ್?
ಹೌದು. ನೋಡು ನಿನ್ನ ಹೆಸರು ಎಷ್ಟು ಮುದ್ದಾಗಿದೆಯಲ್ವಾ?
ನೀಹಾರಿಕಾಳ ಮುಖದಲ್ಲಿ ಸಾವಿರ ಮಲ್ಲಿಗೆ ಅರಳಿದ ಸಂಭ್ರಮ....

ನಾನು ಮುಂದೆ ಸಾಗಲಾರದೆ ನೋಡುತ್ತಾ ನಿಂತೆ. ನೀಹಾರಿಕಾ ಎರಡು ಸುತ್ತು ನನ್ನತ್ತ ತಿರುಗಿ ಕೈಬೀಸಿ ಹೊರಟು ಹೋದಳು. ನನ್ನಲ್ಲಿ ಹೊಸ ಖುಷಿ ಅರಳತೊಡಗಿತು.ನಾನು ಚಿಕ್ಕವನಿದ್ದಾಗ,ಈ ಹುಡುಗಿಯಷ್ಟೇ ವಯಸ್ಸಿನ ಮಗುವಾಗಿದ್ದಾಗ, ಕಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಮೈಲಿ ದೂರ ಕಾಡಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಅವರಿವರ ಛತ್ರಿಯ ಕೆಳಗೆ ನಿಂತು, ದೇಹವೆಲ್ಲಾ ತೊಯ್ದು ತೊಪ್ಪೆಯಾಗಿ ಶಾಲೆ ತಲುಪುತ್ತಿದ್ದೆ. ಚಪ್ಪಲಿಯೇ ಇಲ್ಲದೆ ಬರಿಗಾಲಿನಲ್ಲಿ ನಡೆದು ಹೋದರೂ, ಆ ಮಳೆಯ ದಾರಿಯಲ್ಲಿ ಏನೋ ಒಂದು ಖುಷಿ ಇರುತ್ತಿತ್ತು.

ನೆನಪು ಹಾಗೂ ಸುತ್ತಣ ದೃಶ್ಯಗಳ ಸಮ್ಮಿಶ್ರಣ ಹೊತ್ತ ಈ ಸಂಜೆ ಯಾಕೋ ವಿಶೇಷ ಸಂಜೆ ಎನಿಸತೊಡಗಿತು.ನೀಹಾರಿಕಾಳಂತ ಪುಟಾಣಿ ಹುಡುಗಿಗೆ ನಮ್ಮ ಮನಸ್ಸನ್ನು ಅರಳಿಸುವ,ಕುಪ್ಪಳಿಸುವಂತೆ ಮಾಡುವ, ಜ್ಞಾಪಿಸಿಕೊಳ್ಳುವಂತೆ ಮಾಡುವ ಶಕ್ತಿ ಇದೆಯಲ್ಲಾ ಎಂದು ಅಚ್ಚರಿ ಎನಿಸತೊಡಗಿತು. ಆಲಸಿತನ ನಿಧಾನವಾಗಿ ಕರಗತೊಡಗಿತು.

7 comments:

ಚಿತ್ರಾ said...

ಜೋ,
ತುಂಬಾ ಆತ್ಮೀಯವಾದ ಬರಹ .
ಹೊಳೆಯುವ ಕಣ್ಣುಗಳಲ್ಲಿ , ಕುತೂಹಲ , ಮುಗ್ಧತೆ ತುಂಬಿಕೊಂಡ ಮುದ್ದು ಮಕ್ಕಳು ಕೆಲ ಕ್ಷಣಗಳ ಮಟ್ಟಿಗೆ , ನಮ್ಮನ್ನು ತಮ್ಮ ಸಮವಯಸ್ಕರನ್ನಾಗಿಸಿಬಿಡುವುದು ಎಂಥಾ ಸೋಜಿಗ ಅಲ್ಲವೇ?

ಮನಸು said...

ವಾಹ್!! ತುಂಬಾ ಚೆನ್ನಾಗಿದೆ ನೀವು ಆ ಮಗುವಿಗೆ ಅವಳ ಹೆಸರಿನ ಅರ್ಥ ತಿಳಿಸಿದ್ದು ಒಳ್ಳೆಯ ಕೆಲಸ, ಮಕ್ಕಳಾಗಿದ್ದರೆ ಚೆನ್ನ, ಆ ಮಗು ನಿಮ್ಮನ್ನು ಹಳ್ಳಿಗೆ ಕೊಂಡೂಯ್ಯದದ್ದು ಎಲ್ಲಾ ನೆನಪುಗಳನ್ನು ಮರುಕಳಿಸುವಂತೆ ಮಾಡಿತು.. ಲೇಖನ ತುಂಬಾ ಚೆನ್ನಾಗಿದೆ.

ಮಲ್ಲಿಕಾಜು೯ನ ತಿಪ್ಪಾರ said...

beautiffu baraha joman.. tumba chennagide

ಸೂರ್ಯ ವಜ್ರಾಂಗಿ said...

ಲೇಖನ ಚೆನ್ನಾಗಿದೆ ಜೋಮನ್‌.... ಹಾಲು ಹಾದಿಯಲ್ಲಿರುವ ನೀಹಾರಿಕೆಗಳ ಹಾಗೆ.. ಹೀಗೆ ಬರೆಯುತ್ತಿರಿ ಆಲಸಿಯಾಗಿರದೆ.

ಸಾಗರದಾಚೆಯ ಇಂಚರ said...

ಜೋ,
ಒಳ್ಳೆಯ ಬರಹ,
ಮನಸ್ಸಿಗೆ ತುಂಬಾ ಹಿತ ನೀಡಿತು

Sushrutha Dodderi said...

ನಾನು ಈ 'ನಿಹಾರಿಕಾ' ಹೆಸರನ್ನ ಮೊದಲು ಕೇಳಿದ್ದು / ಓದಿದ್ದು, ಯಾವುದೋ ಯಂಡಮೂರಿಯವರ ಕಾದಂಬರಿಯಲ್ಲಿ. ಯಾವ್ದು ಅಂತ ತಕ್ಷಣ ನೆನಪಾಗ್ತಿಲ್ಲ..

ನೆಲದ ಹುಡುಗ said...

ಬಹರ ಚೆನ್ನಾಗಿದೆ.ಮಕ್ಕಳ ಮನಸ್ಸಿನಂಥ ಮನಸ್ಸು ನಮ್ಮದೆಲ್ಲರದು ಆಗಿದ್ದರೆ ....