ಮೂರು ಜನ ನಿರೂಪಕರು ಏಕಕಾಲಕ್ಕೆ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವುದನ್ನು ನೋಡಿದ್ದೀರಾ? ನೋಡದಿದ್ದರೆ ತಕ್ಷಣವೇ ನೋಡಿ ಸುವರ್ಣ ನ್ಯೂಸ್!. ನೇರ, ದಿಟ್ಟ, ನಿರಂತರ ಚಾನೆಲ್‌ಗೆ ಹೊಸಬರ ಆಗಮನದಿಂದ ಒಂದಿಷ್ಟು ಹೊಸ ನೀರು ಹರಿದು ಬರಬಹುದು ಎಂಬ ಭ್ರಮೆ ಇಟ್ಟುಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಭ್ರಮೆ ಏನಾಗುತ್ತದೆ ಎನ್ನುವುದನ್ನು ಇನ್ನೂ ಕಾದು ನೋಡಬೇಕಿದೆ.
ಈಗ, ಒಂದೆಡೆ ತಾವೇ ಪ್ರಶ್ನೆ ಕೇಳಿ ತಾವೇ ಉತ್ತರ ಹೇಳಿ, ತಾವೇ ತೀರ್ಪು ಕೊಡುವ ನಿರೂಪಕರೊಬ್ಬರು. ಇನ್ನೊಂದೆಡೆದೆ ಚಕ್ರವ್ಯೂಹ ಖ್ಯಾತಿಯ ಹಮೀದ್. ಮತ್ತೊಂದೆಡೆ ಸುವರ್ಣ ಚಾನೆಲ್‌ನ ಹೊಸ ಸಿಇಒ. ಇವರು ಮೂವರು ಸೇರಿ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಿದ್ದರೆ, ಆ ಕಾರ್ಯಕ್ರಮಕ್ಕೆ ಮಾತನಾಡಲೆಂದು ಬಂದ ಅತಿಥಿಗಳಿಗೆ ಮಾತನಾಡಲು ಅವಕಾಶವೇ ಇಲ್ಲ ಎನ್ನುತ್ತಿದ್ದಾರೆ, ಹೊಸದಾಗಿ ಸುವರ್ಣ ನೋಡಲು ಪ್ರಾರಂಭಿಸಿರುವ ವೀಕ್ಷಕರು.
‘ಜಾಣನಲ್ಲದವನ ಮಾತು ಯಾರಿಗೂ ರುಚಿಸುವುದಿಲ್ಲ. ಹೇಳುವುದಕ್ಕೆ ತಕ್ಕುದಲ್ಲದ ಅನುಭವ ಕೇಳುವನ ಆಸಕ್ತಿ ಕೆರಳಿಸುವುದಿಲ್ಲ’ ಎನ್ನುವುದನ್ನು ಕೆಲವು ಟಿವಿ ನಿರೂಪಕರು ಇನ್ನಷ್ಟು ಜಾಣತನದಿಂದ ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಜಾಣ ಎಂದುಕೊಂಡು ಇಡಿ ಟಿವಿ ಪರದೆಯನ್ನು ತಾವೇ ಆಕ್ರಮಿಸಿಕೊಂಡು ಕುಳಿತರೆ ಅದೇ ಆ ಚಾನೆಲ್‌ಗೆ ಮುಳುವಾಗುತ್ತದೆ. ವೀಕ್ಷಕ ಎಷ್ಟು ದಿನ ನಿರೂಪಕನನ್ನು ಸಹಿಸಿಕೊಂಡಾನು?
ಇಲ್ಲಿ ಇದು ಮುಖ್ಯ ವಿಷಯವಲ್ಲ. ಇತ್ತೀಚೆಗೆ ಟಿವಿಯಲ್ಲಿ ಬರುವಂತಹ ಎಷ್ಟೋ ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಭಾಗವಹಿಸುವವರ ನಿಲುವುಗಳನ್ನು ಹೇಳಿಕೊಳ್ಳುವ ತಾಣಗಳಾಗುತ್ತದೆಯೇ ಹೊರತು, ಪರಸ್ಪರ ಚರ್ಚೆಯ ಮೂಲಕ ಸಾರ್ವತ್ರಿಕ ನಿಲುವುಗಳನ್ನು ರೂಪಿಸುವ ವೇದಿಕೆಯಾಗುವುದಿಲ್ಲ. ನಮ್ಮ ಕನ್ನಡ ಚಾನೆಲ್‌ಗಳಲ್ಲಂತೂ ಇತ್ತೀಚೆಗೆ ಇಂತಹ ಬರಿ ಮಾತಿನ ಮನೋರಂಜನೆ, ‘ವಿಶೇಷ ಕಾರ್ಯಕ್ರಮ’ ಎನ್ನುವ ಹೆಸರಿನಲ್ಲಿ ಸಾಕಷ್ಟು ಬರುತ್ತಿದೆ. ಒಮ್ಮೊಮ್ಮೆ ಈ ಮಾತು ಎಷ್ಟು ಕಳಪೆ ಮಟ್ಟಕ್ಕೆ ಹೋಗುತ್ತದೆಯೆಂದರೆ, ‘ನಿಮ್ಮ ಆಂತರಿಕ ಕಚ್ಚಾಟಗಳು ಈಗ ನಿಮಗೇ ಉಲ್ಟಾ ಹೊಡೆದಿದೆಯಾ? ಎಂದು ನಿರೂಪಕರೊಬ್ಬರು ಯಾವ ಮುಜುಗರವೂ ಇಲ್ಲದೇ ನೇರವಾಗಿ ರಾಜಕೀಯ ಮುಖಂಡರೊಬ್ಬರಿಗೆ ಕೇಳುತ್ತಾರೆ. ನಂತರ ಅವರು ಉತ್ತರಿಸುವ ಮುನ್ನವೇ ತಾವೇ ಉತ್ತರವನ್ನೂ, ಅಂತಿಮ ತೀರ್ಪನ್ನೂ ಕೊಡುತ್ತಾರೆ. ’ಅಂತಿಮ ತೀರ್ಪು’ ಅಂತ ಒಂದು ಹೊಸ ಕಾರ್ಯಕ್ರಮ ಪ್ರಾರಂಭಿಸಿದರೆ ಅದಕ್ಕೆ ಈ ನಿರೂಪಕನನ್ನು ಕಣ್ಣು ಮುಚ್ಚಿ ಜಡ್ಜ್ ಆಗಿ ಮಾಡಬಹುದು ಅಂತ ಅನಿಸುತ್ತಿದೆ.
ಟಿವಿ ಎನ್ನುವುದು ಒಂದು ಮಾಧ್ಯಮವೇ? ಇಲ್ಲ ಉದ್ಯಮವೇ? ಅಥವಾ ವ್ಯಾಪಾರವೇ? ಬಂಡವಾಳಶಾಹಿ ವ್ಯವಸ್ಥೆಯೇ? ಇತ್ಯಾದಿಗಳೆಲ್ಲ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವೀಕ್ಷಕನ ಅರಿವಿಗೆ ನಿಲುಕುವುದಿಲ್ಲ. ಆತ ಅದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಕೆಲವು ಚಾನೆಲ್‌ಗಳಿಗೆ ಇದೇ ಬಂಡವಾಳ. ಮಧ್ಯಮ ವರ್ಗದ ವೀಕ್ಷನಿಗೆ ಏನು ಬೇಕು ಎನ್ನುವುದನ್ನು ಈ ಚಾನೆಲ್‌ಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಒಂದು ಚಾನೆಲಿನ ಕಟ್ಟಡದ ಮೇಲೆ ಒಂದು ಕಾಗೆ ಹಾರಿದರೂ ಅದಕ್ಕೆ ಅದು ಲೈವ್ ಸುದ್ದಿಯಾಗುತ್ತದೆ. ಇಬ್ಬರು ಕಾಗೆ ತಜ್ಞರನ್ನು ಸ್ಟುಡಿಯೋಗೆ ಕರೆಯಿಸಿ ಚರ್ಚೆ ನಡೆಸುವಷ್ಟರ ಮಟ್ಟಿಗೆ ಆ ಚಾನೆಲ್ ವೃತ್ತಿಪರತೆ ಹೊಂದಿದೆ. ಮೊನ್ನೆ ಒಂದು ಚಾನೆಲ್ ಪ್ರವಾಹ ಪೀಡಿತ ಪ್ರದೇಶದ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡಿತು. ಐದು ಗ್ರಾಮಗಳನ್ನು ಹೊಸದಾಗಿ ನಿರ್ಮಿಸುವುದೆಂದರೆ ಸುಲಭದ ಕೆಲಸವೇ? ಸಂಗ್ರಹವಾದ ಹಣ ಇದಕ್ಕೆ ಸಾಕಾಗುವುದಿಲ್ಲ ಎಂದು ತಿಳಿದದ್ದೇ ತಡ, ಹೊಸದೊಂದು ಐಡಿಯಾ ಪ್ರಯೋಗಿಸಿತು. ಐವತ್ತು ಸಾವಿರದ ಮೇಲೆ ದಾನ ಮಾಡುವರು ನೇರವಾಗಿ ಸ್ಟುಡಿಯೋಗೆ ಬಂದು ಮಾತನಾಡಬಹುದು ಎಂದರು. ಕಾರ್ಯಕ್ರಮ ಲೈವ್ ಬೇರೆ. ದುಡ್ಡು ಬರದೇ ಇರುತ್ತದೆಯೇ? ಪ್ರವಾಹವೂ ಲೈವ್, ಪರಿಹಾರವೂ ಲೈವ್. ಹೇಗಿದೆ?
ವಿದ್ಯುನ್ಮಾನ ಮಾತ್ರವಲ್ಲ ಮುದ್ರಣವೂ ಸೇರಿದಂತೆ ಇಂದು ಮಾಧ್ಯಮಗಳು ನಾಚಿಕೆಯಿಲ್ಲದಷ್ಟು ವಾಣಿಜ್ಯೀಕರಣಗೊಂಡಿದೆ. ಸಂಪಾದಕೀಯದ ಸ್ಥಳಗಳನ್ನೇ ಮಾರಲಾಗುವ ಇಂದಿನ ಕಾಲದಲ್ಲಿ ಪ್ರಿಂಟ್ ಪತ್ರಿಕೋದ್ಯಮವಂತೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ (ಪಿ.ಆರ‍್) ಕೈಗೊಂಬೆಯಾಗಿದೆ. ಅದಕ್ಕೇ ಖ್ಯಾತ ಚಿಂತಕ ನೋಮ್ ಛಾಮ್‌ಸ್ಕೀ ಹೇಳಿದ್ದು, ‘ಮಾಧ್ಯಮ ಎನ್ನುವುದು ಈಗ ಒಂದು ಕಲಾಪ್ರಕಾರವೂ ಅಲ್ಲ, ಸಂವಹನ ಮಾಧ್ಯಮವೂ ಅಲ್ಲ. ಅದು ಬಳಕೆ ಸಾಮಗ್ರಿಗಳ ಉತ್ಪಾದಕರಿಗೆ ಗ್ರಾಹಕರನ್ನು ತಲುಪಲಿಕ್ಕೆ ಅನುಕೂಲ ಮಾಡಿಕೊಡುವ ಒಂದು ತಂತ್ರಜ್ಞಾನ ಮಾತ್ರ’.
ಈ ವರ್ಷದ ಅತ್ಯತ್ತಮ ಟಿವಿ ಪ್ರಶ್ನೆ ಎನ್ನುವುದಕ್ಕೆ ಯಾರೋ ಉದಾಹರಣೆ ಕೊಟ್ಟರು. ವಿಷಯ:- ಕರುಣಾಕರ ರೆಡ್ಡಿ ನಿವಾಸದಲ್ಲಿ ಹಾವು.
ವರದಿಗಾರನ ಪ್ರಶ್ನೆ- ದೊಡ್ಡ ಹಾವು ಕಂಡರೆ ಏನು ಮಾಡಬೇಕು? ಚಿಕ್ಕ ಹಾವು ಕಂಡರೆ ಏನು ಮಾಡಬೇಕು?
Sunday, 1 November 2009
Subscribe to:
Post Comments (Atom)
7 comments:
ತುಂಬಾ ಚೆನ್ನಾಗಿ ನಿರೊಪಿಸಿದ್ದೀರಿ, ಈಗ ಜನರೆಲ್ಲ ಹಣದ ಹಿಂದೆ ಓಡುತ್ತಿದ್ದಾರೆ ಅಂತೆಯೇ ಚಾನಲುಗಳೇನು ಹೊರತಲ್ಲ. ಒಟ್ಟಲ್ಲಿ ಅವರುಗಳ ಜಾಹಿರಾತಿಗೆ ಜನ ಮರುಳೋ ಜಾತ್ರೆ ಮರುಳೋ ಅನ್ನುವಹಾಗೆ ಹಣ,ವಸ್ತುಗಳು ಚಾನೆಲುಗಳಿಗೆ ಹೋಗುತ್ತಿವೆ. ಒಳ್ಳೆಯ ರೀತಿಯಲ್ಲಿ ಉಪಯೋಗವಾದರೆ ಒಳಿತು.
ಒಂದು ಅತ್ಯುತ್ತಮ ವಿಶ್ಲೇಷಣೆ.
ಹಣಕ್ಕಾಗಿಯೇ ಹುಟ್ಟಿಕೊಂಡ ಅನೇಕ ಟಿ ವಿ ಚಾನೆಲ್ಲುಗಳಿಂದಾಗಿ ಕಾರ್ಯಕ್ರಮವೇ ಹಿಡಿಸದಾಗಿದೆ
ಒಳ್ಳೆಯ ಲೇಖನ
ಕರುಣಾಕರ ರೆಡ್ಡಿ ಮನೆಗೆ ಬಂದದ್ದು ಮರಿ ನಾಗರವಂತೆ.... ಅದರಿಂದ ಅವರ ಕುಟುಂಬಕ್ಕೆ ಗಂಡಾಂತರ ಉಂಟಂತೆ...... ಇನ್ನು ಏಳು ತಿಂಗಳೊಳಗೆ ಅಪಘಾತ ಆಗುವ ಸಾಧ್ಯತೆಯೂ ಇದೆಯಂತೆ.....ನಿನ್ನೆ ಸಂಜೆಯಷ್ಟೇ ಟಿವಿ9ನಲ್ಲಿ ಪ್ರಸಾರವಾದ ವಿಶೇಷ ಕಾರ್ಯಕ್ರಮ......RB
Correct.
ella adhOgatigiLidive. RAjakeeya, cinema-dharavahi, kriket, kaLape manaranjane - ishtu bitre bEre EnU illa. Idishtannadru sariyaagi toristaara? adoo illa :(
ಜೋ,
ಅದೆಷ್ಟೋ ಟಿ ವಿ ವಾಹಿನಿಗಳು ಹುಟ್ಟಿಕೊಂಡಿರುವುದೇ ಹಣಮಾಡಲಿಕ್ಕೇನೊ ಎಂಬ ಅನುಮಾನ ಬರುತ್ತದೆ. ಇಂಥವುಗಳಿಂದಾಗಿ ಜನರಿಗೆ , ಮಾಧ್ಯಮಗಳ ಮೇಲಿನ ಭರವಸೆಯೇ ಮಾಯವಾಗುತ್ತಿದೆ
" Tv9 ಕಟ್ಟಡದ ಮೇಲೆ ಒಂದು ಕಾಗೆ ಹಾರಿದರೂ ಅದಕ್ಕೆ ಅದು ಲೈವ್ ಸುದ್ದಿಯಾಗುತ್ತದೆ. ಇಬ್ಬರು ಕಾಗೆ ತಜ್ಞರನ್ನು ಸ್ಟುಡಿಯೋಗೆ ಕರೆಯಿಸಿ ಚರ್ಚೆ ನಡೆಸುವಷ್ಟರ ಮಟ್ಟಿಗೆ ಆ ಚಾನೆಲ್ ವೃತ್ತಿಪರತೆ ಹೊಂದಿದೆ. "
ಇದು ಇನ್ನೂ ಎಷ್ಟೋ ವಾಹಿನಿಗಳ ಕಥೆಯೂಕೂಡ! ನೀವು India TV ನೋಡಿಲ್ಲವೇ? ಯಾರದೋ ಮನೆಯ ಗಂಡ ಹೆಂಡತಿ / ಅತ್ತೆ- ಸೊಸೆ ಜಗಳವನ್ನೂ Breaking News ಎಂದು ಪ್ರಸಾರ ಮಾಡುವ ಧೈರ್ಯ ಅದಕ್ಕಿದೆ. ಇನ್ನೇನು ಟಿ ವಿ ಯಿಂದ ಈಚೆ ಬಂದು ವೀಕ್ಷಕರಿಗೆ ಹೊಡೆದೇ ಬಿಡುತ್ತಾರೇನೋ ಎಂಬಂತೆ ಕೈ- ಕಾಲು ಕುಣಿಸುತ್ತಾ ಅರಚಾಡುವ reporter ಗಳು ಬಹಳಷ್ಟು ಚಾನೆಲ್ ಗಳಲ್ಲಿ ನೋಡ ಸಿಗುತ್ತಾರೆ . ಒಟ್ಟಿನಲ್ಲಿ ನಮಗೇ ಬುದ್ಧಿ ಇಲ್ಲ ಅಷ್ಟೇ !
(ಅಂದ ಹಾಗೆ, ನೀವೂ TV9 ನಲ್ಲಿ ಲೈವ್ ಬರುತ್ತಿದ್ದರೆ ತಿಳಿಸಿ ! )
ondu kade HITLER sarvaadhikara.hosabara vijrambane. halabarella illi jeetadalugale...
Post a Comment