Tuesday 20 October, 2009

ಎಲ್ಲೋ ಮಳೆಯಾಗಿದೆಯೆಂದು...ಮೊನ್ನೆ U2 ನೋಡುತ್ತಿದ್ದೆ. ಮನಸಾರೆ ಚಿತ್ರದ "ಎಲ್ಲೋ ಮಳೆಯಾಗಿದೆಯೆಂದು...." ಹಾಡು ಬರುತ್ತಿತ್ತು. ಹೌದು. ಹಾಡು ಕೇಳುತ್ತಿದ್ದಂತೆ ಇದರಲ್ಲಿ ಏನೋ ವಿಶೇಷವಿದೆ ಅನಿಸತೊಡಗಿತು. ವಿಮರ್ಶೆ ಓದಿ ಚಿತ್ರ ನೋಡುವರ ಸಾಲಿಗೆ ಸೇರಿದವನು ನಾನು. ಕೆಲವೊಮ್ಮೆ ಈ ವಿಮರ್ಶೆಗಳೇ ಚಿತ್ರಕ್ಕಿಂತ ಹೆಚ್ಚಿನ ಮನೋರಂಜನೆ ಒದಗಿಸುತ್ತದೆ. ಮನಸಾರೆ 'ಮೆಂಟಲ್‌ಗಳ' ಚಿತ್ರ ಎಂದು ಚಿತ್ರ ನೋಡಿ ಬಂದ ಕೆಲವು ಗೆಳೆಯರು ಹೇಳಿದ್ದರಿಂದ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದೆ. ಆದರೆ ಈ ಹಾಡು ಮಾತ್ರ ತೀವ್ರವಾಗಿ ಕಾಡತೊಡಗಿತು. ಆಫೀಸಿಗೆ ಹೋದವನೇ ಯೂಟ್ಯೂಬ್‌ನಲ್ಲಿ ಹಾಡನ್ನು ಹುಡುಕಿ ಮತ್ತೆ ಕೇಳಿಸಿಕೊಂಡೆ. ಕಾಯ್ಕಿಣಿ ಕವಿತೆ ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳತೊಡಗಿತು.

ಹೌದು. ಕಳೆದ ಒಂದು ವಾರದಿಂದ, ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತ್ತಿದೆ, ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತ್ತಿದೆ... ಎಂದು ಗುನುಗುನಿಸಿಕೊಂಡು ಓಡಾಡುತ್ತಿದ್ದೇನೆ. ನಮ್ಮ ಕಾಯ್ಕಿಣಿ ಎಂತಹ ಅದ್ಭುತ ಕಲೆಗಾರ. ಅವರ ಕಾವ್ಯ ಕುಸುರಿಗೆ ಮಾರು ಹೋಗದವರಿಲ್ಲ. "ಕಾಯ್ಕಿಣಿ ಎಂತಹ ಕಲೆಗಾರನೆಂದರೆ, ಅವರ ಕಿವಿಯ ಹತ್ತಿರ ಶಂಖ ಹುಳುವೊಂದನ್ನು ಹಿಡಿದರೆ, ಆ ಪುಟಾಣಿ ಹುಳುವಿನ ಹೃದಯಕ್ಕೆ ಎಷ್ಟು ಕವಾಟುಗಳಿವೆ ಎನ್ನುವುದನ್ನು ಹೇಳಬಲ್ಲಷ್ಟು ಸೂಕ್ಷ್ಮ ಕಲೆಗಾರ" ಎಂದು ಬೊಗಸೆಯಲ್ಲಿ ಮಳೆಗೆ ಬೆಳಗೆರೆ ಬೆನ್ನುಡಿ ಬರೆದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ನಿಜವಾಗಿಯೂ ತಲೆಸುತ್ತುವ ಗೀತೆಗಳಿಂದ ಬೇಸೆತ್ತು ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಸುಂದರ ಮಳೆಗೀತೆಗಳನ್ನೂ, ಕನ್ನಡ ಭಾಷೆಯ ಮಾಧುರ್ಯವನ್ನೂ ಪರಿಚಯಿಸಿದವರು ಕಾಯ್ಕಿಣಿ. ಅಷ್ಟರ ಮಟ್ಟಿಗೆ ನಮ್ಮ ಕಿ(ಕ)ವಿಗಳು ಕಾಯ್ಕಿಣಿಗೆ ಖುಣಿಯಾಗಿರಬೇಕು. ಯಾಕೋ ಮನಸ್ಸು, ತುಂಬಾ ವರ್ಷಗಳ ಹಿಂದಕ್ಕೆ ಓಡುತ್ತಿದೆ. ಅಂಗನವಾಡಿಯಲ್ಲೋ, ಒಂದನೆಯ ತರಗತಿಯಲ್ಲೋ ಇರಬೇಕು. "ಪುಣ್ಯಕೋಟಿ ಗೋವಿನ ಹಾಡು". ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು. ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಇದು ಮಕ್ಕಳು ಓದಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಈ ಪದ್ಯವನ್ನು ಕಾವೇರಿ ಟೀಚರ್ ಸುಶ್ರಾವ್ಯವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರೆ, ನಮ್ಮ ಕಣ್ಣುಗಳಿಂದ ನಮಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಅಷ್ಟೊಂದು ಮಹೋನ್ನತ ಮೌಲ್ಯಗಳಿಂದ ಕೂಡಿದ ಪದ್ಯ ಅದು.

ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕಿವಿಯಲ್ಲಿ ಇಂಗದ ಅನುರಣನ. ಮತ್ತೆ ಮತ್ತೆ ನೆನಪಾಗಿ, ಬಾಲ್ಯವನ್ನು ನೆನಪಿಸಿ, ಕಣ್ಣೀರು ತರಿಸುವ ಈ ಪದ್ಯದ ಪ್ಯಾರಾವೊಂದು ಇಲ್ಲಿದೆ. "ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು" ಎಂದು ಹೇಳಿದ ಪುಣ್ಯಕೋಟಿ ಹುಲಿಯ ಗವಿಯ ಬಾಗಿಲು ಹೊಕ್ಕು..
'ಖಂಡವಿದಕೋ, ಮಾಂಸವಿದಕೋ,
ಗುಂಡಿಗೆಯ ಬಿಸಿರಕ್ತವಿದಕೋ,
ಉಂಡು ಸಂತಸಗೊಂಡು ನೀ
ಭೂಮಂಡಲದೊಳು ಬಾಳಯ್ಯನೆ' ಎಂದು ಹೇಳುತ್ತದೆ. ಮುಂದೆ ನಾವು ಮಾತಾಡುತ್ತಿರಲಿಲ್ಲ. ಕೆನ್ನೆಯ ಮೇಲೆ ಕಣ್ಣೀರು ಹರಿಯಲು ಪ್ರಾರಂಭವಾಗುತ್ತಿತ್ತು. ಅನಾಮಿಕ ಕವಿಯೊಬ್ಬ ಬರೆದ ಈ ಕವಿತೆಯಲ್ಲಿ ಎಷ್ಟೊಂದು ಮೌಲ್ಯವಿದೆ.

ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು. ಕವನ ರಚನೆ ಅಥವಾ ಬರೆಹ ಕೂಡ ಹೀಗೆ. ಬರೆಹ ಅಥವಾ ಕವಿತೆಯಲ್ಲಿ ಹೃದಯದ ಸ್ಪಂದನವನ್ನು ಗುರುತಿಸದೇ ಹೋದರೆ, ಅದು ಯಾರ ಮನಸ್ಸಿನಲ್ಲಿಯೂ ಧೀರ್ಘಕಾಲ ನೆಲೆನಿಲ್ಲುವುದಿಲ್ಲ. ಯಾರ ಮನಸ್ಸನ್ನೂ ತಟ್ಟಿ ಬೆರಗುಗೊಳಿಸುವುದಿಲ್ಲ.

ಇಂತಹ ಸ್ಪಂದನ ಇಲ್ಲದೇ ಹೋಗಿರುವುದರಿಂದಲೇ ನಮ್ಮ ಬದುಕು ಇಂದು ಹೀಗಾಗಿದೆ. ಮುಗ್ಧತೆ ಕಳೆದುಹೋದ ಮನುಷ್ಯನ ಮನಸ್ಸಿನಲ್ಲಿ ಅಂಧಕಾರ ಬಿಟ್ಟು ಇನ್ನೇನು ಉಳಿಯುತ್ತದೆ? ಯಾಕೋ ಇದು ಸ್ಪಲ್ಪ ಗಂಭೀರವಾಗುತ್ತಿದೆ ಅನಿಸುತ್ತಿದೆ. ನಿಲ್ಲಿಸುತ್ತೇನೆ. ಪ್ರಾಸವೇ ಪದ್ಯವೆಂದು ತಿಳಿದು ಕವಿತೆ ರಚಿಸುವ ಈಗಿನ ಕಾಲದಲ್ಲಿ ಕಾಯ್ಕಿಣಿ ಕವಿತೆಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮನಸ್ಸಿಗೆ ಹಿತವೆನಿಸುತ್ತದೆ. ಮತ್ತೆ ಹಾಡಿಕೊಳ್ಳುತ್ತಿದ್ದೇನೆ..

ಎಲ್ಲೋ ಮಳೆಯಾಗಿದೆಯೆಂದು....

ಚಿತ್ರ ಕೃಪೆ - http://my.opera.com

19 comments:

ಸೂರ್ಯ ವಜ್ರಾಂಗಿ said...

ಗುರುವೇ ಚೆನ್ನಾಗಿದೆ...
ಎಲ್ಲೋ ____ ಮಳೆಯಾಗಿ.... ನಿಮ್ಮ ಮನಸ್ಸಲ್ಲಿ ತಂಗಾಳಿ ಬೀಸಿದಂತೆ ಕಾಣುತ್ತಿದೆ.
ಕನ್ನಡ ಭಾಷಾಲೋಕದಲ್ಲಿನ ಪದಗಳೊಂದಿಗೆ ಕಾಯ್ಕಿಣಿಯವರು ಆಡುವ ಆಟ ಅವರ್ಣನೀಯ...ಈ ಹಾಡು ಕೂಡ ಅದರ ಫಲವೇ...
ಪುಣ್ಯಕೋಟಿ ಗೋವಿನ ಹಾಡು ಕೂಡ ಅಷ್ಟೇ ಸುಮಧುರ, ಸುಂದರ. ನಮ್ಮ ಜೀವನಕ್ಕೆ ದಾರಿ ತೋರಿಸುವಂಥ ಹಾಡು.
ಚೆನ್ನಾಗಿ ಬರೆದಿದ್ದೀರಿ.. ಹೀಗೆ ಬರೆಯುತ್ತಿರಿ ಆಗಾಗ..

arivina marevu said...

ಆತ್ಮೀಯ ಜೋಮನ್,

ನಾನು ಮಲ್ಲಿಗೆಯ ಕವಿ ಕೆ.ಎಸ್. ಎನ್ ರ ಅಭಿಮಾನಿ. ನಿಮ್ಮ ಲೇಖನ ಓದಿ ಅವರ ವಾಕ್ಯ ‘ಕಣ್ಣು ಕಪ್ಪೆ ಚಿಪ್ಪಿನಗಲದ ದೋಣಿ; ನೋಟ ಸಮುದ್ರದಂತಹ ಪ್ರಾಣಿ’ ಎಂಬ ಕವಿ ಮಾತು ನೆನಪಾಯಿತು. ಮಳೆಯ ಹಿಂದೆ ಹೀಗೂ ಒಂದು ಕಥೆ ಇರಬಹುದೇ? ಎಂದು ಯೋಚಿಸುವಂತಾಯಿತು. ಖುಷಿಯಾಯಿತು. ಹೀಗೆಯೇ ಬರೆಯುತ್ತಿರಿ, ನಾವು ಓದುತ್ತಿರುತ್ತೇವೆ.

ಅಭಿಮಾನದಿಂದ,

ಹರ್ಷವರ್ಧನ್ ಶೀಲವಂತ. ಧಾರವಾದ.

uma rao said...

v touching jomon
uma

ಚಕೋರ said...

ಬರಹದ ಜತೆಗೆ ಹಾಕಿದ ಫೋಟೋ ನೂ ಮುದ್ದಾಗಿದೆ. ಮನಸಾರೆ ಯಲ್ಲಿ ನನಗಿಷ್ಟವಾಗಿದ್ದು, ಒಂದೇ ಒಂದು ನೋಟ ಸಾಕು... ಬಹುಶಃ ಜಯಂತರು ತುಂಬಾ ರೋಮ್ಯಾಂಟಿಕ್ ಆಗಿ ಬರೆದ ಗೀತೆಗಳಲ್ಲೊಂದು ಇದು.

Anonymous said...

Nice article joman.... Rajju...

Viresh Math said...

tumba channagide, matte matte bare...... Veeru

shyam said...

jObi ninna malehani blognalli matte male surididu kushi nidide. jotege kaykini avara bagge helalu i have no words. he is really great. innu punnyakoti songannu nijakku mareyalu sadyavilla. higE baritiru, navu oduttirutteve. shyam....

Anonymous said...

tummba chennagide

Anonymous said...

tumba chennagide

Pramod said...

ಹಾಡು ಗಾಢವಾಗಿದೆ. ನಿಮ್ಮ ಬರಹ ಕೂಡ. "ನಾ ನಗುವ ಮೊದಲೇನೆ" ಕೂಡ ಸೂಪರ್

ಮನಸು said...

wow nive article tumba istavayitu... manasare haadu aste chennagide

jomon varghese said...

ಆತ್ಮೀಯ ಸೂರ್ಯ,

ಪ್ರತಿ ಬಾರಿಯೂ ಬ್ಲಾಗ್‌ ಆಪ್‌ಡೇಟ್‌ ಆಗುತ್ತಿದ್ದಂತತೆ, ಖುಷಿಯಿಂದ ಓದಿ ಪ್ರತಿಕ್ರಿಯಿಸುವ ನಿಮ್ಮ ಒಳ್ಳೆಯ ಮನಸ್ಸಿಗೆ ಧನ್ಯವಾದಗಳು.

ಹರ್ಷ ಸರ್‌,
ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು.

ಉಮಾ,
ಮೇಡಂ, ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.

ಚಕೋರ,

ತುಂಬಾ ಧನ್ಯವಾದಗಳು. ಒಂದೇ ಒಂದು ನೋಟ ಸಾಕು... ನನಗೂ ಇಷ್ಟವಾಯಿತು.

ರಜನಿ.
ಥ್ಯಾಂಕ್ಸ್‌ ರಜ್ಜು

ವೀರೇಶ್‌,

ಥ್ಯಾಂಕ್ಸ್‌

ಶ್ಯಾಮ್‌,
:) ನಿನಗೆ ಥ್ಯಾಂಕ್ಸ್‌ ಯಾಕೆ? ಮುಂದಿನ ಸಲ ಬ್ಲಾಗ್‌ ಅಪ್‌ಡೇಟ್‌ ಮಾಡಿದಾಗ ಖಂಡಿತ ಓದಿ, ಪ್ರತಿಕ್ರಿಯಿಸು.

ಅನಾಮಿಕ,
ಹೆಸರು ಹೇಳಿ ಸಾರ್‌. ಆದರೂ ಥ್ಯಾಂಕ್ಸ್‌.

ಪ್ರಮೋದ್‌,

ಥ್ಯಾಂಕ್ಸ್‌ ಪ್ರಮೋದ್‌, ಮಳೆಹನಿಗೆ ಬರುತ್ತಿರಿ.

ಮನಸ್ಸು,

ಮನಸ್ಸಿಗೆ ಥ್ಯಾಂಕ್ಸ್‌. ಮಳೆಹನಿಗೆ ಬನ್ನಿ, ಬರುತ್ತಿರಿ.

ದಿನಕರ ಮೊಗೇರ said...

ಜಯಂತ್ ಕಾಯ್ಕಣಿಯವರ ಹಾಡು ಒಂಥರಾ ಸ್ಲೋ ಪಾಯ್ಸನ್ ಇದ್ದಂತೆ, ಕ್ರಮೇಣ ಕಿಕ್ ಕೊಡತ್ತೆ..... ಕೇಳ್ತಾ, ಕೇಳ್ತಾ ಪ್ರೀತಿ ಬರತ್ತೆ...... ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ...... ಫೋಟೋ ಕೂಡ....

ಚಿತ್ರಾ said...

ಜೋ,
ನಿಮ್ಮ ಬರೆಹ ಓದಿ .. ಆ ಹಾಡನ್ನು ಡೌನ್ ಲೋಡ್ ಮಾಡಿ ಕೇಳಿದೆ. ನಿಜಕ್ಕೂ ಸುಂದರವಾಗಿದೆ ..ಈಗ ನನ್ನ ತಲೆಯೊಳಗೂ ಆ ಹಾಡೇ ತುಂಬಿಕೊಂಡು ಬಿಟ್ಟಿದೆ. ಅದಕ್ಕೂ ಮೊದಲು ಅದೇ ಚಿತ್ರದ " ನಾ ನಗುವ ಮೊದಲೇನೆ.. " ನನ್ನನ್ನು ಆವರಿಸಿತ್ತು.
"ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು " ಅತ್ಯಂತ ನಿಜವಾದ ಮಾತು .
ಇತ್ತೀಚೆ ಜೀವನದಲ್ಲಿ ಕೇವಲ ಮುಂದೆ ಮುಂದೆ ನೋಡುತ್ತಾ ಓಡುತ್ತಲೇ ಇರುವ ನಾವು , ಅಕ್ಕ ಪಕ್ಕದ ಪುಟ್ಟ ಪುಟ್ಟ ಸಂತಸ ,ಸೌಂದರ್ಯಗಳನ್ನು ಕಡೆಗಣಿಸುವ ನಾವು ಖುಷಿಯನ್ನು ಹುಡುಕುವುದಾದರೂ ಎಲ್ಲಿ ?ಯಾವಾಗ?

ನಿಮ್ಮ ಲೇಖನವೂ ಸುಂದರವಾಗಿದೆ. ಹಳೆಯದನ್ನು ನೆನಪಿಸುತ್ತಾ. ಹೊಸದಕ್ಕೆ ಹೋಲಿಸುತ್ತಾ.. ನಡುವೆಯೇ ಒಂದು ಸಂದೇಶ ನೀಡುತ್ತಾ...
ಅಲ್ಲಾ.. ನೀವೇಕೆ ಇತ್ತೀಚೆ ಬರೆಯುವುದನ್ನು ಕಮ್ಮಿ ಮಾಡಿದ್ದೀರಿ?

jomon varghese said...

@ದಿನಕರ

ನಿಮ್ಮ ಸಹೃದಯ ಓದು ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು. ಬನ್ನಿ ಮತ್ತೆ ಮಳೆಹನಿಗೆ..

@ಚಿತ್ರಾ,
ಮೇಡಂ ನೀವೆಲ್ಲಿ ತಪ್ಪಿಸಿಕೊಂಡು ಹೋಗಿದ್ದೀರಿ ಎಂದು ಭಾವಿಸಿದ್ದೆ. ಸದ್ಯಕ್ಕೆ ನಿಮ್ಮ ಪ್ರತಿಕ್ರಿಯೆ, ಕಾಳಜಿ ನೋಡಿ ಖುಷಿಯಾಯಿತು. ನಿಮ್ಮ ಪ್ರತಿಕ್ರಿಯೆಯೂ ಒಮ್ಮೊಮ್ಮೆ ನನ್ನನ್ನು ಬರೆಯುವಂತೆ ಮಾಡುತ್ತದೆ.

ಬರೆಯುವುದನ್ನು ಕಡಿಮೆ ಮಾಡಿಲ್ಲ. ಆದರೂ ಬ್ಲಾಗಿಗೆ ಬರೆಯುವುದೆಂದರೆ ಪ್ರೀತಿಯ ಕೆಲಸವಲ್ಲವೇ? ಅದನ್ನು ಶ್ರದ್ದೆಯಿಂದಲೂ, ಪ್ರೀತಿಯಿಂದಲೂ ಮಾಡಬೇಕು. ಅದಕ್ಕೆ ಒಂದಿಷ್ಟು ಸಮಯ ಬೇಕು. ಅದನ್ನು ಹೊಂದಿಸಿಕೊಳ್ಳುವಷ್ಟರಲ್ಲಿ ಒಮ್ಮೊಮ್ಮೆ ತಡವಾಗಿ ಬಿಡುತ್ತದೆ ಅಷ್ಟೇ. ಹಾಗಂತ ನೀವು ಬರುವುದನ್ನು ಮರೆಯಬೇಡಿ.

Unknown said...

sahebru hinglla haadanna olagolage, matte matte gunugoke shuru madiddiri andre..... ello love nalli biddiddireno anno sanna anumana nange.... enantiri..?!
-JITENDRA

ಮುಸ್ಸಂಜೆ said...

jomon channagi bardodiya nangu aa song tumbha ishta kano

Unknown said...

ಬಹಳ ದಿನಗಳ ಮೇಲೆ ಬ್ಲಾಗ್ ನೋಡಿದೆ. ತುಂಬ ಚೆನ್ನಾಗಿ ಬರೆದಿರುವಿರಿ. ಮಳೆಯ ಯಾವುದೆ ವಿಷಯವಾದರು ಹೆಕ್ಕಿ ಬರೆಯುತ್ತಿರಿ.

ಮೃತ್ಯುಂಜಯ. ಮ. ಯಲಿವಾಳ said...

anna tumba channagide nenpuglu nmmana yellige bekadru kridukondu hoguttave ala