ಒಮ್ಮೆ ಚಿಲಿ ದೇಶದ ಕವಿ ನೆರೂಡನಿಗೆ ಸಂದರ್ಶಕಿಯೊಬ್ಬಳು ಒಂದು ಗಂಭೀರ ಪ್ರಶ್ನೆ ಕೇಳಿದಳು. ನೀವು ನಿಮ್ಮ ಪುಸ್ತಕಗಳಲ್ಲಿ ಒಂದನ್ನು ಬೆಂಕಿಯಿಂದ ರಕ್ಷಿಸಿಕೊಳ್ಳಬೇಕಾಗಿ ಬಂದರೆ ಯಾವ ಪುಸ್ತಕ ರಕ್ಷಿಸಿಕೊಳ್ಳುತ್ತೀರಿ?
ನೆರೂಡ ಅಷ್ಟೇ ಸರಳವಾಗಿ ಹೇಳಿದ. ‘ಯಾವುದನ್ನೂ ರಕ್ಷಿಸಲಿಕ್ಕಿಲ್ಲ. ನನ್ನ ಪುಸ್ತಕಗಳಿಂದ ನನಗೇನು ಉಪಯೋಗ? ಅದಕ್ಕೆ ಬದಲು ಒಬ್ಬಳು ಹುಡುಗಿಯನ್ನು ರಕ್ಷಿಸಬಯಸುವೆ.. ನನ್ನ ಯಾವುದೇ ಪುಸ್ತಕಕ್ಕಿಂತ ಹೆಚ್ಚು ಸಂತೋಷ ಆಕೆಯಿಂದ ದೊರೆಯಬಲ್ಲದು.
ನೆರೂಡನ ಜಾಣತನ ನಮ್ಮ ಇಂದಿನ ಕವಿಗಳಿಗೆ ಇಲ್ಲವಲ್ಲ ಎಂದೆನಿಸುತ್ತದೆ. ನಮ್ಮ ಕೆಲವು ಬರಹಗಾರರು ತಮ್ಮ ಬರಹದಿಂದ ಜಗತ್ತೇ ಬದಲಾಗಬಹುದು ಎಂಬ ಭ್ರಮೆ ಉಳ್ಳವರು. ಅಥವಾ ಆ ಭ್ರಮೆ ಇಟ್ಟುಕೊಂಡೇ ಬರೆಯುವವರು. ನನ್ನ ಬರಹದಿಂದ ಸಮಾಜಕ್ಕೆ ಏನೂ ಒಳಿತಾಗದಿದ್ದರೆ ನಾನು ಬರೆಯುವುದರಿಂದ ಏನು ಸಾರ್ಥಕ ಎಂಬ ಪೊಳ್ಳು ಭರವಸೆಗಳನ್ನೂ, ಆಶಯಗಳನ್ನೂ, ತಾವೇ ನಂಬಿದ ಸತ್ಯಗಳನ್ನೂ ಇಟ್ಟುಕೊಂಡವರು. ನನ್ನ ಊರು, ಹಿತ್ತಲ ಹೂಬಳ್ಳಿ, ಪಕ್ಷಿಗಳು ಬಡತನ, ಅವ್ವನ ಲಾಲಿ ಹಾಡು, ಅಜ್ಜಿಯ ಜೋಗುಳ ಇವೆಲ್ಲಾ ನನ್ನ ಬರಹವನ್ನು ರೂಪಿಸಿದೆ ಎಂದು ಪದೇ ಪದೇ ಬರದುಕೊಂಡು ತಮ್ಮ ಊರಿಗೂ, ಹಿತ್ತಲಿಗೂ ಮುಜುಗರ ಹುಟ್ಟಿಸುವವರು. ‘ನೀವು ಬರೆಯದೇ ಇದ್ದರೆ ಇಲ್ಲಿ ಬೆಳಕು ಹರಿಯುವುದಿಲ್ಲ ಎಂದು ನಿಮಗೆ ನಂಬಿಸಿದವರು ಯಾರು? ಎಂದು ಇವರನ್ನು ಕೇಳಬೇಕು ಅನಿಸುತ್ತದೆ.
ನನ್ನ ಖುಷಿಗಾಗಿ ಬರೆಯುವವನು ನಾನು. ನನ್ನ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕಾಗಲಿ, ಈ ಸಮಾಜಕ್ಕಾಗಲಿ ಕಿಂಚಿತ್ ಉಪಯೋಗವಾಗುತ್ತಿದೆ ಎಂಬ ಚಿಲ್ಲರೆ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡು ನಾನು ಓಡಾಡುತ್ತಿಲ್ಲವಾದ್ದರಿಂದ ನನಗೆ ನನ್ನ ಬರವಣಿಗೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಅದರ ಮುಂದಣ ಸಾಧ್ಯತೆಯ ಬಗ್ಗೆ ಮಾತ್ರ ಗೊಂದಲವಿದೆ. ಯಾಕೆಂದರೆ ಕವಿಯಂತೆ ನಾನು ಭವಿಷ್ಯದ ಜನಾಂಗಕ್ಕಾಗಿ ಬರೆಯುತ್ತಿಲ್ಲ. ಇಂದಿನ ಅಗತ್ಯಕ್ಕೆ ತಕ್ಕಂತೆ ಬರೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಬರವಣಿಗೆ ನನ್ನೊಳಗನ್ನು ದಿನದಿಂದ ದಿನಕ್ಕೆ ಶುದ್ಧೀಕರಿಸುತ್ತಾ ಹೊರಟಿದೆ ಎಂದು ನಾನು ನಂಬಿದ್ದೇನೆ.
ಅನೇಕ ಉತ್ತಮ ಬರಹಗಳು ವಿನಯ ಮತ್ತು ಮೌನದಲ್ಲಿ ಹುಟ್ಟುತ್ತವೆ. (ಇಲ್ಲಿಯವರೆಗೆ ಪ್ರೀತಿ ಮಾತ್ರ ಹುಟ್ಟುತ್ತದೆ ಎಂದು ತಿಳಿದಿದ್ದೆ) ಲೇಖಕ ಸರಳ, ನೇರ, ಪ್ರಾಮಾಣಿಕ ಹಾಗೂ ಸಂಕೋಚದ ಸ್ವಭಾವದವನಾಗಿದ್ದರೆ ಉತ್ತಮ ಬರಹ ಖಂಡಿತ ಹುಟ್ಟುತ್ತದೆ.
ರಹಮತ್ ತರೀಕೆರೆ ಸಂಪಾದಿಸಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ “ಹೊಸ ತಲೆಮಾರಿನ ತಲ್ಲಣ” ಕನ್ನಡದ 38 ಯುವ ಬರಹಗಾರರು ತಾವು ಏಕೆ ಮತ್ತು ಹೇಗೆ ಬರಹಗಾರರಾಗಿದ್ದು ಎಂದು ಬರೆದಿದ್ದಾರೆ. ನೀವೇಕೆ ಬರಹಗಾರರಾಗಬೇಕು ಎಂದು ನಿಮಗನಿಸುತ್ತಿದ್ದರೆ ಈ ಪುಸ್ತಕ ಓದಿ. 80 ರೂಪಾಯಿ ಜೇಬಿಗೆ ಹೊರೆಯೆನಿಸದು.
Sunday, 11 October 2009
Subscribe to:
Post Comments (Atom)
4 comments:
ನಿಮ್ಮ ವಾದ ಸರಿ, ಆದರೆ ನಮ್ಮ ಖುಷಿಗೆ ನಾವು ಬರೆಯುವುದರ ಜೊತೆಗೆ ನಾವು ಬರೆದಿದ್ದನ್ನು ಎಲ್ಲರೂ ಓದಬೇಕು ಎನ್ನುವ ಮನೋಭಾವ ಎಲ್ಲ ಬರಹಗಾರರಿಗೂ ಇರುತ್ತದೆ. ಅದಿಲ್ಲದಿದ್ದರೆ ನಾವು ಮನೆಯಲ್ಲೇ ಬರೆದುಕೊಲ್ಲಬಹುದಿತ್ತು ಅದನ್ನು ಬ್ಲಾಗ್ ಗೆ ಹಾಕುವ ಉದ್ದೇಶವೇನು ಇರಲಿಲ್ಲ ಎಂದು ಒಮ್ಮೊಮ್ಮೆ ಅನಿಸುತ್ತದೆ. ನಮ್ಮ ಅ ಭಿಪ್ರಾಯಗಳು ಸರಿಯೋ ತಪ್ಪೋ ಎಂಬುದನ್ನು
ನಿರ್ಧರಿಸಬೇಕಾದರೆ ನಮ್ಮ ಬರಹಗಳಿಗೆ ಪ್ರತಿಕ್ರಿಯೆ ಬೇಕು ಅಲ್ಲವೇ?
ನಿಮ್ಮ ಶೈಲಿ ತುಂಬಾ ಹಿಡಿಸಿತು
ಚೆನ್ನಾಗಿದೆ ಜೋಮನ್. ಅಂತೂ ಬರೆದಿರಲ್ಲಾ.. ಹೀಗೆ ಆಗಾಗ ಬರೆಯುತ್ತಿರಿ.
chennagide baraha..
@ಸಾಗರದಾಚೆಯ ಇಂಚರ,
ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ವಾದವೂ ಸರಿ.
@ಸೂರ್ಯ,
ಥ್ಯಾಂಕ್ಸ್ ಸೂರ್ಯ
@ದಿವ್ಯಾ,
ಧನ್ಯವಾದಗಳು.ಮಳೆಹನಿಗೆ ಸ್ವಾಗತ. ಬರುತ್ತಲಿರಿ.
Post a Comment