Thursday 16 July, 2009

ಅಬೋಲಿನ್ ಕುದುರೆಯೂ ಕಿಂಗ್‌ಫಿಷರ್ ಡರ್ಬಿಯೂ


ಕಳೆದ
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಿಂಗ್‌ಫಿಷರ್ ಡರ್ಬಿಯಲ್ಲಿ ಬುಕ್ಕಿಗಳ ಸರ್ವ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಅಬೋಲಿನ್ ಎಂಬ ಕುದುರೆ ೭೯.೨೦ ಲಕ್ಷ ಮೊತ್ತದ ಬಹುಮಾನವನ್ನು ಗೆದ್ದುಕೊಂಡಿತು. ಗೆಲ್ಲುವುದಕ್ಕೂ ಸ್ವಲ್ಪ ಮುಂಚೆ ಈ ಕುದುರೆ ನಮ್ಮಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಯಾವ ಪರಮಾತ್ಮನಿಂದಲೂ ಊಹಿಸಲಿಕ್ಕಾಗದು ಎನ್ನುವ ಭಾವದಲ್ಲಿ ಅಶ್ವಶಾಲೆಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಹುರುಳಿ ತಿನ್ನುತ್ತಿತ್ತು. ಅದನ್ನು ಓಡಿಸಿದ ಜಾಕಿ ಅಲ್ಫೋರ್ಡ್‌ಗೆ ಅಬೋಲಿನ್ ಗೆಲ್ಲುತ್ತದೆ ಎನ್ನುವ ಸಣ್ಣ ವಿಶ್ವಾಸ ಕೂಡಾ ಹಿಂದಿನ ದಿನ ರಾತ್ರಿ ವಿಸ್ಕಿ ಕುಡಿಯುವಾಗಲೂ ಇರಲಿಲ್ಲ.

ಕುದುರೆ ಜೂಜಿನ ಮಾಯಾಲೋಕವೇ ಅಂಥದ್ದು. ಹಚ್ಚ ಹಸಿರಿನ ಎರಡು ಕಿ.ಮೀ ಸುತ್ತಳತೆಯ ಅಂಗಳದಲ್ಲಿ ನಡೆಯುವ ರೇಸಿನಲ್ಲಿ ಯಾವ ಕುದುರೆ ಯಾರ ಭವಿಷ್ಯವನ್ನು ಬರೆಯಲಿದೆ, ಇನ್ಯಾರ ಮನೆಯ ದೀಪವನ್ನು ನಂದಿಸಲಿದೆ ಎನ್ನುವುದು ನಿಜಕ್ಕೂ ಆ ದೇವರಿಂದಲೂ ಊಹಿಸಲು ಸಾಧ್ಯವಾಗದ ಕೆಲಸ. ಯಾವ ಭವಿಷ್ಯಕಾರನೂ, ಎಂಥ ವಿಜ್ಞಾನಿಯೂ, ಯಾವ ಗಿಣಿಶಾಸ್ತ್ರಜ್ಞನೂ ಗೆಲ್ಲುವ ಕುದುರೆಯನ್ನು ಊಹಿಸಿ ಹೇಳಲಾರ. ಓಡಲಿರುವ ಕುದುರೆಯ ವಂಶವನ್ನೇ ಪತ್ತೆಹಚ್ಚಿ ಅದರ ವಂಶವಾಹಿಯನ್ನೇ ಹುಡುಕಿ ತಂದರೂ, ಇದೇ ಕುದುರೆ ಗೆಲ್ಲುತ್ತದೆ ಎನ್ನುವುದನ್ನು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಹೆಣ್ಣಾದರೆ ಅದಕ್ಕೆ ಮುಟ್ಟೂ, ಗಂಡಾದರೆ ಬೆದೆಯೂ ಕಾಡಬಹುದು ಎಂದು ಲಂಕೇಶ್ ಒಮ್ಮೆ ಬರೆದಿದ್ದರು.

ಕುದುರೆ ಜೂಜಿನ ಬಗ್ಗೆ ಏನೇನೂ ಗೊತ್ತಿಲ್ಲದ ನಾನು ಕಳೆದ ಭಾನುವಾರ ಬೆಳಿಗ್ಗೆ ಬೇಗನೇ ಎದ್ದ ತಪ್ಪಿಗೆ ರೇಸ್‌ಕೋರ್ಸ್ ರಸ್ತೆಯ ಮುಂದೆ ಬಂದು ನಿಂತಿದ್ದೆ. ರಸ್ತೆಯಂಚಿನಲ್ಲಿ ನಿಂತಿದ್ದ ಕಿಂಗ್‌ಫಿಷರ್ ಹೋರ್ಡಿಂಗ್ಸ್‌ಗಳೆಲ್ಲಾ ಬೆಳ್ಳಂ ಬೆಳಿಗ್ಗೆಯೇ ನಶೆ ಏರಿಸಿಕೊಂಡವರಂತೆ ನಿಂತಿದ್ದವು. ಟರ್ಫ್ ಕ್ಲಬ್ ಮುಂದಿನ ಅಂಗಳದಲ್ಲಿ ಒಂದಿಷ್ಟು ಪಂಟರು ಅಂಡು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು. ಹಿಂದೆಲ್ಲಾ ಬೆಂಗಳೂರಿನಲ್ಲಿ ಅಣ್ಣಾವ್ರ ಚಿತ್ರ ಬಿಡುಗಡೆಯಾದಾಗ ಗರುವಾರ ರಾತ್ರಿಯೇ ಅಭಿಮಾನಿಗಳು ಹಾಸಿಗೆಯೊಂದಿಗೆ ಬಂದು ಥಿಯೇಟರ್ ಎದುರು ಮಲಗಿ, ಬೆಳಿಗ್ಗೆ ಎದ್ದು ಸರತಿ ಸಾಲಿನಲ್ಲಿ ನಿಂತು, ನುಗ್ಗಾಟ ನಡೆಸಿ, ಚಿತ್ರ ನೋಡಿ ಹೋಗುತ್ತಿದ್ದರಂತೆ. ಕಿಂಗ್ ಫಿಷರ್ ಡರ್ಬಿಯಲ್ಲಿ ಪಾಲ್ಗೊಳ್ಳಲು ಜೂಜು ಪ್ರೇಮಿಗಳು ಇಂಥದೇ ಕಸರತ್ತು ನಡೆಸಿದ ಹಾಗಿತ್ತು. ಬೆಳಿಗ್ಗೆ ಏಳಕ್ಕೆಲ್ಲಾ ಟರ್ಫ್ ಕ್ಲಬ್ ಮುಂದೆ ಜನ ಜಮಾಯಿಸಿದ್ದರು. ರೇಸಿನಲ್ಲಿ ಓಡಲಿರುವ ಕುದುರೆಗಳ ಹೆಸರನ್ನು ಹೊತ್ತ ಒರಿಜಿನಲ್ ವಿಲ್ ಇತ್ಯಾದಿ ರೇಸ್ ಪುಸ್ತಕದ ಹರಿದ ಹಾಳೆಗಳು ಅಲ್ಲೊಂದು ಇಲ್ಲೊಂದು ಬಿದ್ದಿದ್ದವು.

ನನಗೆ ಕುತೂಹಲ ಕೆರಳಿಸಿದ್ದು ಕುದುರೆ ಜೂಜಲ್ಲ. ರೇಸು ಕುದುರಗಳ ಹೆಸರುಗಳು. ಬಕ್‌ಪಾಸರ್, ಗೆಲಿಲಿ, ರೆಡ್ ರೋಮಿಯೋ, ಜಿಪ್ಸಿ ಮ್ಯಾಜಿಕ್, ಜಾಕ್ವೆಲಿನ್, ಅಸ್ಟ್ರಾಲ್ ಫ್ಲಾಷ್, ರಿಯಲ್ ಡ್ರೀಮ್, ಲಾಸ್ಟ್ ನೈಟ್, ಸೊನ್ನೆಟ್, ಬೇಕಾನ್ ಲೈಟ್, ಫ್ರೀ ಸ್ಪಿರಿಟ್, ಬಕ್ ಮೇಕರ್, ಕಿಚನ್ ಕ್ಯಾಬಿನೆಟ್, ರೆಡ್ ಟೆರರ್, ಫೈರ್ ಕ್ರಸ್ಟ್, ಕೋಮಾಂಛೆ, ಪ್ಲಾಟಿನಂ ಗರ್ಲ್, ಸೀಕ್ರೇಟ್ ಹಾರ್ಟ್, ಬ್ಲಾಕ್ ಪರ್ಲ್ ವ್ಹಾ... ಎಷ್ಟೊಂದು ರೊಮ್ಯಾಂಟಿಕ್ ಹೆಸರುಗಳು. ನಮ್ಮೂರಿನ ಕೆಲವು ಕಿಲಾಡಿಗಳು ತಮ್ಮ ಸಾಕುನಾಯಿಗಳಿಗೆ ಇಂತಹ ತೂಕದ ಹೆಸರನ್ನು ಇಡುವುದಿದೆ. ನಮ್ಮ ಪಕ್ಕದ ಮನೆಯ ನಾಯಿಯ ಹೆಸರು ಲಾಡೆನ್. ಬುಷ್ ಮತ್ತು ಮುಷರಫ್ ಅದರ ಹಿಂಬಾಲಕರು. ಬರಿ ಅನ್ನವನ್ನೇ ತಿನ್ನುತ್ತಿದ್ದ ನಾಯಿಯೊಂದರ ಹೆಸರು ರೈಸ್ (ಕೊಂಡೊಲಿಜಾ ರೈಸ್). ವಿಚಿತ್ರವಾಗಿ ಕೂಗುತ್ತಿದ್ದ ನಾಯಿಯ ಹೆಸರು ಜಾಕ್ಸನ್. ಸ್ವಲ್ಪ ವೈಯಾರದಿಂದಿದ್ದ ಹೆಣ್ಣು ನಾಯಿಯೊಂದಕ್ಕೆ ಇಟ್ಟ ಹೆಸರು ಸಿಲ್ಕ್. ನಮ್ಮ ಮನೆಯಲ್ಲಿ ಕಡುಕಪ್ಪು ಬಣ್ಣದ ನಾಯಿಯೊಂದಿತ್ತು ಅದಕ್ಕೆ ನಾವಿಟ್ಟ ಹೆಸರು ಶಾಡೋ.

ಟರ್ಫ್ ಕ್ಲಬ್ ಆವರಣದಲ್ಲಿ ಕುದುರೆಯ ಖುರಪುಟದ ಸದ್ದುಗಳು ಕೇಳಿಬರುವ ಹೊತ್ತಿನಲ್ಲಿ ನಾನು ಈ ಕುದುರೆಯ ಹೆಸರಿಗೂ ನಮ್ಮೂರ ಶ್ವಾನದಳದ ಹೆಸರಿಗೂ ಇರುವ ಸಂಬಂಧವನ್ನು ತಾಳೆ ಹಾಕುತ್ತಿದ್ದೆ. ಯಾಕೆ ಒಂದು ನೂರು ರೂಪಾಯಿ ಆಡಿ ಅದೃಷ್ಟ ಪರೀಕ್ಷಿಸಬಾರದು ಅಂತ ಅನಿಸಿದರೂ, ಮನುಷ್ಯನ ವಿನಾಶಕ್ಕೆ ಅತ್ಯಂತ ಹತ್ತಿರದ ದಾರಿ ಕುದುರೆ ಜೂಜು ಎನ್ನುವ ವಿವೇಕ ಎಚ್ಚರಿಸಿತು. ಕೂಲಿಕಾರರು, ಜವಾನರು, ರಿಕ್ಷಾಡ್ರೈವರ್‌ಗಳು, ಸರ್ಕಾರಿ ನೌಕರಸ್ತರು ಹೀಗೆ ರೇಸಿನ ದಾಸ್ಯಕ್ಕೆ ಸಿಕ್ಕವರು ಎಷ್ಟೊಂದು ಜನ ಎನಿಸಿತು. ಒಂದಿಷ್ಟು ಸುತ್ತಾಡಿ ಅಲ್ಲಿಂದ ಮರಳಿದೆ.

ಅಬೋಲಿನ್ ಎಪ್ಪತ್ತೊಂಭತ್ತು ಲಕ್ಷ ಗೆದ್ದಿರಬಹುದು. ಸುಮಾರು ೯ ಕೋಟಿಗೂ ಹೆಚ್ಚಿನ ಬೆಟ್ಟಿಂಗ್ ನಡೆದಿದೆ ಎನ್ನುತ್ತಾರೆ. ಆದರೆ ಅದು ಗೆದ್ದ ದಿನ ನೂರಾರು ಬಡ ಜೂಜುಗಾರರ ಮನೆಯ ದೀಪಗಳೂ ನಂದಿವೆ....!

8 comments:

sunaath said...

ಕುದುರೆ ಜೂಜನ್ನು ban ಮಾಡಬೇಕು.

Unknown said...

ರೀ ಸ್ವಾಮಿ ಅದಕ್ಕೇನಾ ಸಂಡೇ ನಿಮ್ಮ ಮೊಬೈಲ್‌ ‘ನಾಟ್ ರೀಚಬಲ್’ ಆಗಿದ್ದು...! ರೇಸ್ ಕೋಸ್ ಕೋರ್ಸ್ ಪಕ್ಕನೇ ನಿಂತುಕೊಂಡು ಗಂಟೆಗಟ್ಟಲೇ ಟ್ರೈ ಮಾಡ್ತೀನ್ದಲ್ರೀ... ಇಲ್ಲಿದ್ದೇನೆ ಅಂತ ಒಂದು ಮಾತು ಹೇಳಬಾರದಿತ್ತ.. ನಾನೂ ಕಂಪನಿ ಕೊಡ್ತಿದ್ದೆ!

-ಜಿತೇಂದ್ರ

ಸೂರ್ಯ ವಜ್ರಾಂಗಿ said...

ಗುರುಗಳೇ...
ಚೆನ್ನಾಗಿ, ಸ್ಫುಟವಾಗಿ ಬರೆದಿದ್ದೀರಿ. ರೇಸ್ ಬಗ್ಗೆ ಮೋಹ ಹುಟ್ಟವ ಹಾಗೆ... ಇದನ್ನು ಓದಿ ರೇಸ್‌ನಲ್ಲಿ ಬೆಟ್ ಕಟ್ಟಲು ಯಾರಾದರೂ ಹೋದರೆ ಅದಕ್ಕೆ ಜವಾಬ್ದಾರರು ನೀವೇ. ಅವುಗಳ ಹೆಸರುಗಳು ನನ್ನಲ್ಲೂ ಕುತೂಹಲ ಮೂಡುವಂತೆ ಮಾಡಿತು.
ಉತ್ತಮ ಲೇಖನ....ಮುಂದಿನ ಬರಹದ ನಿರೀಕ್ಷೆಯಲ್ಲಿ
-ವಜ್ರಾಂಗಿ ಸೂರ್ಯ

ಚಿತ್ರಾ said...

ಜೋಮನ್,
ರೇಸ್ ಕೋರ್ಸ್ ನ ಚಿಕ್ಕ ಪರಿಚಯಕ್ಕಾಗಿ ಧನ್ಯವಾದಗಳು.
ಕುದುರೆಗಳ ಹೆಸರಿನಷ್ಟೇ ಇಂಟರೆಸ್ತಿಂಗಾಗಿವೆ ನೀವು ಬರೆದ ನಾಯಿಗಳ ಹೆಸರುಗಳು ಕೂಡ !
ಈ ಜೂಜಿನಲ್ಲಿ ಕ್ಷಣದಲ್ಲಿ ಗೆದ್ದು ಮರುಕ್ಷಣವೇ ಸೋತು ಸುಣ್ಣವಾದವರೂ ಇದ್ದಾರಲ್ಲವೇ? ಇದೆಂದಲ್ಲ , ಎಲ್ಲ ಜೂಜುಗಳು ಕೂಡ ಮನುಷ್ಯನನ್ನು ಅಧೋಗತಿಗೆ ತಳ್ಳುತ್ತವೆ.
( ಅಂದ ಹಾಗೆ, ಭಾನುವಾರ ಲಕ್ಷಣವಾಗಿ ಚರ್ಚ್ ಗೆ ಹೋಗಿ ಪ್ರಾರ್ಥನೆ ಮಾಡೋದು ಬಿಟ್ಟು ನೀವ್ಯಾಕ್ರೀ ರೇಸ್ ಕೋರ್ಸ್ ಹತ್ರ ನಿಂತಿದ್ರಿ? )

ಕನಸು said...

ಜೋಮನ್
ನನ್ನ ಕನಸಿಗೆ ಒಂದ ಸಲ ಬನ್ನಿ,,

ಶ್ರೀನಿವಾಸಗೌಡ said...

ಜೋಮನ್ ನಿಮ್ಮ ಬ್ಲಾಗ್ ಇವತ್ತೇ ನೋಡಿದ್ರೆ ನೊಡ್ರಲ್ಲಾ, ಸಕ್ಕತ್ ಆಗಿದೆ, ರೇಸ್ ಕೋರ್ಸ್ ಹತ್ರನೆ ಒಂದು ವರ್ಷ ಇದ್ದೆ ನಂಗೆ ಏನೂ ಅರ್ಥ ಆಗಿರಲಿಲ್ಲ, ಚಿಕ್ಕ ಲೇಖನದಲ್ಲಿ ಏನೆಲ್ಲಾ ಹೆಳಿದ್ರಿ ನೀವು, ಚೆನ್ನಾಗಿದೆ.

ಧರಿತ್ರಿ said...

ಭಾರೀ ಬರೆದುಬಿಟ್ಟಿಯಾ..ಚೆನ್ನಾಗ್ ಹೇಳಿದ್ದಿ. ಬೆನ್ನಿಗೊಂದು ಗುಡ್ಡು ಆಯಿತಾ?

ತೇಜಸ್ವಿನಿ ಹೆಗಡೆ said...

ರೇಸ್ ಬಗ್ಗೆ ಕೇಳಿದ್ದೆ.. ಹೆಚ್ಚಿನ ಮಾಹಿತಿಯೇನೂ ಇರಲಿಲ್ಲ. ಆದರೆ ಇದರ ಹಿಂದೆ ಬಿದ್ದವರಾರೂ ಉಧ್ಧಾರ ಮಾತ್ರ ಆಗಿಲ್ಲ ಎಂದು ತಿಳಿದುಕೊಂಡಿರುವೆ. ಮಾಹಿತಿ ಪೂರ್ಣ ಲೇಖನ.