Monday 31 May, 2010

ಗೆಳೆಯನ ಮದುವೆ


ಗೆಳೆಯ,ಚನ್ನು ಮೂಲಿಮನಿ ಕಳೆದವಾರ ಮದುವೆಯಾದ.ತಾನು ಪ್ರೀತಿಸಿದ,ತನ್ನನ್ನು ಪ್ರೀತಿಸುವ ಹುಡುಗಿಯನ್ನೇ ಮದುವೆಯಾದ ಅದೃಷ್ಟವಂತ ಆತ. ನಾವೆಲ್ಲ ರಾತ್ರಿಯೇ ಬೆಂಗಳೂರು ಬಿಟ್ಟು ಬೆಳಿಗ್ಗೆ ಧಾರವಾಡದಲ್ಲಿಳಿದು,ಸಾಧನಕೇರಿಯಲ್ಲಿರುವ ಕಲ್ಯಾಣ ಮಂಟಪಕ್ಕೆ ಹೋಗಿ ವಧು-ವರರನ್ನು ಹರಸಿ ಬಂದೆವು.'ನಿನ್ನ ಬ್ಯಾಚುಲರ್ ಜೀವನ ಮುಗಿಯಿತು,ನೀನಿನ್ನು ಸಂಸಾರಸ್ಥ,ಮೊದಲಿನ ಹಾಗೆ ಸೋಮಾರಿಯಾಗಿ ಕಾಲ ಕಳೆಯಬೇಡ.ನೋಡು,'ಒಲವೇ ಜೀವನ ಸಾಕ್ಷಾತ್ಕಾರ''ನೀವಿಬ್ಬರು ನಿಮಗೊಬ್ಬರು'ಇತ್ಯಾದಿ ಸಂಸಾರ ಸೂತ್ರಗಳನ್ನು ನೆನಪಿಟ್ಟುಕೋ.ಸಿಗರೇಟು ಸೇದುವುದನ್ನು ಕಡಿಮೆ ಮಾಡು, ಚಂದಕೆ ಬಾಳ್ವೆ ಮಾಡು, ಹೀಗೆ ಇತ್ಯಾದಿ ನಮಗೆ ಗೊತ್ತಿರುವ ಉಪದೇಶಗಳನ್ನು ಹೇಳಿ ಬಂದೆವು.

ಸ್ವಲ್ಪ ಸೋಮಾರಿತನ ಬಿಟ್ಟರೆ, ಚನ್ನು ತುಂಬಾ ಒಳ್ಳೆಯ ಹುಡುಗ.ಪದವಿಯಿಂದ ನಾವಿಬ್ಬರೂ ಜೊತೆಗೇ ಓದಿದ್ದೇವೆ.ಹಾಗೆ ನೋಡಿದರೆ ನನ್ನ ಸ್ನಾತಕೋತ್ತರ ಕ್ಲಾಸ್ ಮೇಟ್ ಗಳಲ್ಲಿ ಮೂವರು ಮದುವೆಯಾಗಿದ್ದಾರೆ. ಒಬ್ಬನಿಗೆ ಮಗುವೂ ಆಗಿದೆ.ಇನ್ನು ನಾಲ್ಕಾರು ಜನ ನಿಶ್ಚಿತಾರ್ಥ ಮುಗಿದ ಖುಷಿಯಲ್ಲಿದ್ದಾರೆ. ಮದುವೆಯಾಗುವುದು,ಮಕ್ಕಳಾಗುವುದು ಈ ಲೋಕದ ಅದ್ಭುತ ವಿಷಯಗಳೇನೂ ಅಲ್ಲದಿರುವುದರಿಂದ ಆ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತ. ಆದರೆ ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವುದರಿಂದ ಅದರ ಕುರಿತು ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ.

ಮದುವೆಯಾಗುವವರು ಮೊದಲು ವೈವಾಹಿಕ ಬದುಕಿನ ಎಲ್ಲ ವಾಸ್ತವಗಳಿಗೆ ಸಿದ್ದರಾಗಬೇಕು.ಸಂಪ್ರದಾಯದ ಮದುವೆಯಾಗಲಿ,ಬಂಡಾಯದ ಮದುವೆಯಾಗಲಿ, ಇಲ್ಲಿ ಅಪಾರ ಸಹನೆ,ತಿಳುವಳಿಕೆ ಮತ್ತು ಪ್ರಜ್ಞಾಪೂರ್ವಕವಾಗಿ ಹೊಣೆಯರಿತು ವರ್ತಿಸುವ ಮನಸ್ಸು ಇಲ್ಲದಿದ್ದರೆ ಎಲ್ಲವೂ ಮುರಿದು ಬೀಳುತ್ತದೆ. ಮದುವೆ ಮನಸ್ಸಿನ ಆಳದಲ್ಲಿ ತೀರ್ಮಾನಿಸಬೇಕು. ಯಾರದೋ ಒತ್ತಡಕ್ಕೆ,ಇನ್ಯಾವುದೋ ಕಟ್ಟುಪಾಡಿಗೆ ಮದುವೆಯಾಗಬಾರದು.ಔದಾರ್ಯ ಹಾಗೂ ಕನಿಷ್ಠ ಪ್ರೀತಿ ಇಲ್ಲದಿದ್ದರೆ ಯಾವುದೇ ಸಂಬಂಧಗಳು ಮುರಿದು ಬೀಳುತ್ತದೆ.‘ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸಲ್ಪಡುತ್ತವೆ’ಎಂಬ ಮಾತಿದೆ.ಆದರೆ ವಾಸ್ತವ ಹೀಗಿಲ್ಲ. ಮದುವೆ ನಡೆಯುವುದು ಭೂಮಿಯಲ್ಲೇ.ಮದುವೆಗೆ ಮುನ್ನ ಮೊಬೈಲ್‌ಗಳಲ್ಲಿ ಹರಿದಾಡುವ ಪ್ರೀತಿ,ಮದುವೆಯ ನಂತರ ಇರುವುದಿಲ್ಲ.ಇಷ್ಟಪಟ್ಟು ಮದುವೆಯಾದವರೂ ಕಷ್ಟಪಟ್ಟು ಹೊಂದಿಕೊಂಡು ಹೋಗುತ್ತಾರೆ.ದಾಂಪತ್ಯ ಸ್ವರ್ಗ ಎನ್ನುವ ಕಲ್ಪನೆ ಬದಲಾಗಿ ಬದುಕು ಅಸಹನೀಯ ಎನಿಸತೊಡಗುತ್ತದೆ. ಮದುವೆಯಾಗುವವರು ಇದನ್ನೆಲ್ಲ ತಿಳಿದುಕೊಂಡಿರಬೇಕು.

ಬೈಬಲ್ ನಲ್ಲಿ ಒಂದು ಕಥೆಯಿದೆ.ನಿಮಗೂ ಗೊತ್ತಿರಬಹುದು.ದೇವರು ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದ ನಂತರ ಅವನಿಗೆ ಸರಿ ಬೀಳುವ ಸಂಗಾತಿ ಕಾಣಲಿಲ್ಲ.ಹೀಗಿರುವಾಗ ದೇವರು ಮನುಷ್ಯನಿಗೆ ಗಾಢ ನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿ, ತಾನು ಮನುಷ್ಯನಿಂದ ತೆಗೆದ ಎಲುಬನ್ನು ಸ್ತ್ರೀಯಾಗಿ ಮಾಡಿ, ಆಕೆಯನ್ನು ನೋಡಿ,“ಈಕೆಯು ನಿನ್ನ ಎಲುಬುಗಳಿಂದ ಬಂದ ಎಲುಬೂ,ನಿನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ.ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರಿ ಎನಿಸಿಕೊಳ್ಳುವಳು.ನೀವಿಬ್ಬರು ಪರಸ್ವರ ಹೊಂದಿಕೊಂಡು ಜೀವನ ಮಾಡತಕ್ಕದು'ಎಂದು ಹೇಳುತ್ತಾರೆ.ಹೀಗೆ ಗಂಡು ಹೆಣ್ಣು ಒಂದಾಗಿ ಸಂಸಾರ ನಡೆಸುತ್ತಾರೆ.ಅರ್ಧಾಂಗಿ ಎಂದು ಕರೆಯುವುದರ ಅರ್ಥವೂ ಇದೆ.ದುರಂತವೆಂದರೆ ಜಾಗತೀಕರಣದ ಬೆನ್ನಿಗಂಟಿಕೊಂಡೇ ಬಂದ ವಾಣಿಜ್ಯೀಕರಣ ಮದುವೆಯನ್ನೂ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಭೋಗದ ವಸ್ತುವನ್ನಾಗಿ ಮಾಡಿದೆ ಎನ್ನುವುದು.

ಈಚೆಗೆ ಒಬ್ಬರು ವಾಚಕರ ವಾಣಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.ಆದೇನೆಂದರೆ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೆಚ್ಚಿನವರು ಅವರವರ ಜಾತಿ ಸಮಾಜದ ಸಂಘವನ್ನು ಕಟ್ಟಿಕೊಂಡಿದ್ದಾರೆ.ವರ್ಷಕ್ಕೊಮ್ಮೆ ಜಾತಿ ಸಮ್ಮೇಳನಗಳು ನಡೆಯುತ್ತವೆ. ವಿಚಾರಗೋಷ್ಠಿಗಳು,ಉಪನ್ಯಾಸಗಳು,ಸಂಪ್ರದಾಯದ ಊಟ, ಕುಲ ಕಸುಬಿನ ಪ್ರಾತ್ಯಕ್ಷಿಕೆ ಎಲ್ಲವೂ ಭರ್ಜರಿಯಾಗಿಯೇ ಇರುತ್ತವೆ.ಇಷ್ಟಿದ್ದರೂ ಎಲ್ಲ ಜಾತಿಗಳಲ್ಲೂ ಜೀವಂತವಾಗಿರುವ ವರ್ತಮಾನದ ಬಹುಮುಖ್ಯ ವಿಷಯವೊಂದು ಚರ್ಚಿತವಾಗುವುದಿಲ್ಲ.ಅದೇ ವರದಕ್ಷಿಣೆ!.ಹೌದಲ್ಲವೇ? ಅವರು ಎತ್ತಿರುವ ಪ್ರಶ್ನೆ ಎಷ್ಟೊಂದು ಸಕಾಲಿಕ.ಯಾಕೆ ಯಾರೂ ಆ ಕುರಿತು ಯೋಚಿಸುವುದಿಲ್ಲ?

ಪರಸ್ಪರ ಪ್ರೀತಿ ವಿಶ್ವಾಸದ ಆಧಾರದ ಮೇಲೆ ನಡೆಯುವ ಸರಳ ವಿವಾಹಗಳನ್ನು ನಾವು ಪ್ರೋತ್ಸಾಹಿಸಬೇಕು.ಇಂಥ ಮದುವೆಗಳಿಗೆ ಇಡೀ ಸಮಾಜ ಬೆಂಬಲವಾಗಿ ನಿಲ್ಲಬೇಕು.ಆಗ ಹಣ ಅಂತಸ್ತಿನ ಆಧಾರದ ಮದುವೆಗಳು ತಾನಾಗಿಯೇ ನಿಲ್ಲುತ್ತವೆ.ಈ ಪ್ರಕ್ರಿಯೆ ತಡವಾಗಿ ಆಗಬಹುದಾದರೂ ಈ ನಿಟ್ಟಿನಲ್ಲಿ ವಿದ್ಯಾವಂತರು ಪ್ರಯತ್ನಗಳನ್ನು ಮುಂದುವರೆಸಬೇಕು.ಇತ್ತೀಚೆಗೆ ನಮ್ಮ ಕಚೇರಿಯಲ್ಲಿ ಒಬ್ಬರು ಈ ರೀತಿ ಸರಳವಾಗಿ ಮದುವೆಯಾದರು. 'ಮಾನವ ಮಂಟಪ'ದಲ್ಲಿ ನಡೆದ ಈ ಮದುವೆಯ ಖರ್ಚು ಹೆಚ್ಚೆಂದರೆ ಐದು ಸಾವಿರ ದಾಟಿರಲಿಕ್ಕಿಲ್ಲ.ಒಂದು ಮದುವೆ 5 ಸಾವಿರ ಖರ್ಚಿನಲ್ಲಿ ಮುಗಿಯುತ್ತದೆ ಎಂದರೆ ಈ ಕಾಲದಲ್ಲಿ ಊಹಿಸಲಿಕ್ಕೂ ಸಾಧ್ಯವಿಲ್ಲ.ನಿಜಕ್ಕೂ ಇದು ಮಾದರಿಯಲ್ಲವೇ?

ಅಂದಹಾಗೆ ಗೆಳೆಯ ಚನ್ನು ತನ್ನ ಮದುವೆಗೆ ಮುನ್ನ ಆಹ್ವಾನ ಪತ್ರಿಕೆಗೆ ಎರಡು ಸಾಲು ಬರೆದುಕೊಡು ಎಂದು ಕೇಳಿದ್ದ. ಏನು ಬರೆದುಕೊಡಬೇಕೆಂದು ಯೋಚಿಸಿದಾಗ ನೆನಪಿಗೆ ಬಂದಿದ್ದು, ಕೆ.ಎಸ್ ನಿಸಾರ್ ಅಹಮ್ಮದ್ ಅವರ 'ಗೆಳೆಯನ ಮದುವೆ' ಪದ್ಯದ ಸಾಲುಗಳು...

ನಾಳೆ ನಮ್ಮಿಬ್ಬರ ಮದುವೆ
ಹೊಸ ನೀರಿಗಿಳಿಯುವುದು ನಮ್ಮಿಬ್ಬರ ನಾವೆ

ಉತ್ತರೀಯಕೆ ಅಂದು ಸೀರೆ ನಿರಿಗೆಯ ಗಂಟು,
ಹಗುರಾಗಿ ಹಬ್ಬುವುದು ಹೊಸತೊಂದು ನಂಟು;
ಊಟೋಪಚಾರಗಳು ನಲಿವುಗಳೂ ಉಂಟು;
ಹಸೆಗೇರಿದಿಬ್ಬರಿಗೆ ಒಲವು ಗಂಟು

ಕಾದು ನೋಡುವೆವು ನಿಮ್ಮೆಲ್ಲರದ್ದೇ ಬರುವಿಕೆ
ಕೋರುವುದಿಷ್ಟೇ ಇರಲಿ ನಿಮ್ಮ ಹಾರೈಕೆ.

ಸಾಲುಗಳೆಷ್ಟು ಅರ್ಥಗರ್ಭಿತ. ಗೆಳೆಯ ಚನ್ನು ಮತ್ತು ಅಶ್ವಿನಿ ದಾಂಪತ್ಯದಲ್ಲಿ ಪ್ರೀತಿಯ ಒರತೆ ಬತ್ತದಿರಲಿ. ಅವರಿಬ್ಬರಿಗೂ ಒಳ್ಳೆಯದಾಗಲಿ.

5 comments:

ಮನಸು said...

ತುಂಬಾ ಚೆನ್ನಾಗಿದೆ ನಿಮ್ಮ ಲೇಖನ, ಗೆಳೆಯನ ಮದುವೆಗೆ ನಿಮ್ಮ ಶುಭಾಶಯಗಳ ಜೊತೆ ನಮ್ಮ ಶುಭಾಶಯಗಳು.
ನಿಸಾರ್ ಅವರ ಸಾಲುಗಳು ತುಂಬಾನೇ ಚೆನ್ನಾಗಿದೆ. ಒಳ್ಳೆಯ ಸಾಲುಗಳನ್ನೆ ಗೆಳೆಯನಿಗೆ ತಿಳಿಸಿದ್ದೀರಿ.

ಚಿತ್ರಾ said...

ಜೋ,
ಸುಂದರ ಅನುಬಂಧದ ಬಗೆಗೊಂದು ಚೆಂದದ ಲೇಖನ ಬರೆದಿದ್ದೀರ . ಪ್ರೀತಿ ಪ್ರೇಮ ಎಂದು ಕುಣಿದಾಡಿ , ಗಡಿಬಿಡಿಯಲ್ಲೇ ನಿರ್ಧರಿಸಿ ,ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಂಡು ಎರಡೇ ತಿಂಗಳಲ್ಲಿ , ವಾಸ್ತವಕ್ಕೆ ಹೊಂದಿ ಕೊಳ್ಳಲಾರದೆ ಬೇರೆಯಾಗುವವರ ಸಂಖ್ಯೆ ಇತ್ತೀಚೆ ಹೆಚ್ಚುತ್ತಿದೆ ಎನ್ನುವುದು ನಿಜಕ್ಕೂ ವಿಷಾದನೀಯ .
ನಿಮ್ಮ ಸ್ನೇಹಿತ ಹಾಗು ಅವರ ಅರ್ಧಾಂಗಿಗೆ ನನ್ನ ಹಾರ್ದಿಕ ಶುಭಾಶಯಗಳು !

ಶರಶ್ಚಂದ್ರ ಕಲ್ಮನೆ said...

ಅರ್ಥಪೂರ್ಣ ಲೇಖನ... ನಿಮ್ಮ ಗೆಳೆಯನಿಗೆ ನನ್ನ ಕಡೆ ಇಂದ ಶುಭ ಹಾರೈಕೆಗಳು.

ಸಾಗರದಾಚೆಯ ಇಂಚರ said...

ಗೆಳೆಯನಿಗೆ ಶುಭ ಹಾರೈಕೆಗಳು

Shaani said...

ನೀನೂ ಜಲ್ದಿ ಲಗ್ಣ ಮಾಡ್ಕಳಲೋ ತಮ್ಮಾ....