Sunday 20 June, 2010

ಬೆಂಗಳೂರಿನ ಮಳೆ..!


ಬೆಂಗಳೂರಿನಲ್ಲೀಗ ಮಳೆಯ ಸಂಭ್ರಮ. ಹೊತ್ತೇರಿದರೂ ಕವಿದ ಮಬ್ಬುಗತ್ತಲು. ಆಗಸದ ತುಂಬ ಕರಿಮೋಡಗಳು. ಮಳೆ ಸುರಿಯುತ್ತದೆಯೇ ಎನ್ನುವ ಧಾವಂತದ ನಡುವೆ ಅವಸರಿಸಿ ಶಾಲೆಗೆ ಹೊರಟ ಪುಟಾಣಿಗಳು, ಸಿಗ್ನಲ್‌ನಲ್ಲಿ ತಡವರಿಸುವ ಅವರ ಪುಟ್ಟ ಪಾದಗಳು. ಹಳೆಯ ಛತ್ರಿ ಹುಡುಕಿ ಆಫೀಸಿಗೆ ಹೊರಟ ನಿತ್ಯ ಶ್ರಮಿಕರು. ಪಾರ್ಕಿನಲ್ಲಿ, ರಸ್ತೆಯಂಚಿನಲ್ಲಿ ಮರದ ಎಲೆಗಳಿಂದ ತೊಟ್ಟಿಕ್ಕುವ ಮಳೆಹನಿ. ತೊಯ್ದ ಪುಕ್ಕಗಳನ್ನು ಕೊಡವಿ ಸ್ವಚ್ಛಗೊಳಿಸುತ್ತಿರುವ ಹಕ್ಕಿಗಳು.. ಪ್ಲಾಸ್ಟಿಕ್ ಹೊದೆಸಿ ಮಳೆಯನ್ನು ಶಪಿಸುತ್ತಿರುವ ಫುಟ್‌ಪಾತ್ ವ್ಯಾಪಾರಿಗಳು...

ಈ ಮಳೆಯೆಂದರೆ ಅದೆಷ್ಟು ಸಂಭ್ರಮ. ನೆನಪಿನಾಳದಲ್ಲಿ ಹುದುಗಿರುವ ಕಥೆಗಳು ಮರುಹುಟ್ಟು ಪಡೆಯಲು ಮಳೆಯ ಸಾಥ್ ಬೇಕು. ಬೇರೆ ಊರುಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರ ಪಾಲಿಗೆ ಮಳೆಯೆಂದರೆ ಸುಂದರ ನೆನಪುಗಳ ಕನವರಿಕೆ. ಊರಿಗೆ ಫೋನು ಮಾಡಿದಾಗೊಮ್ಮ ನಾನು ಕೇಳುತ್ತೇನೆ, ‘ಅಮ್ಮಾ ಮಳೆಯಾಗುತ್ತಿದೆಯಾ ಅಲ್ಲಿ? ಮಳೆ ಸುರಿಯುತ್ತಿದ್ದರೆ ಅದರ ಶಬ್ದ ಕೇಳುವ ಬಯಕೆ, ಪ್ಲೀಸ್ ಮಳೆ ಸುರಿಯವ ವಿಡಿಯೋ ತೆಗೆದು ಅದನ್ನು ಮೇಲ್ ಮಾಡ್ಲಿಕ್ಕೆ ಆಗುತ್ತಾ?’ ನಾಲಿಗೆ ತುದಿಗೆ ಬಂದ ಬಯಕೆ ಮನದಲ್ಲೇ ಉಳಿದುಬಿಡುತ್ತದೆ. ಯಾಕೆ ಮಳೆ ನಮ್ಮನ್ನು ಇಷ್ಟೊಂದು ಕಾಡುತ್ತದೆ. ಅಸಲಿಗೆ ಮಳೆಯೆಂಬ ಕಲ್ಪನೆಯೇ ಅದ್ಭುತವಲ್ಲವೆ? ಮಳೆ ಸುರಿಯುವಾಗ ಮುಗಿಲಿಗೆ ಮುಖವೊಡ್ಡಿದರೆ, ಮನಸ್ಸು ಕೂಡ ತೊಯ್ದು ತೊಪ್ಪೆ. ‘ಮಳೆ ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಮಳೆಯಲ್ಲಿ ಅಳುವುದು, ಕಣ್ಣೀರುಗೆರೆಯುವುದು ಯಾರಿಗೂ ಗೊತ್ತಾಗುವುದಿಲ್ಲ. ತುಂಬಾ ದುಃಖವಾದಾಗ ನಾನು ಮಳೆಯಲ್ಲಿ ಅಳುತ್ತಾ ನಡೆಯುತ್ತೇನೆ’. ಎಂದಿದ್ದರು ಇಡೀ ವಿಶ್ವವನ್ನೇ ನಕ್ಕು ನಗಿಸಿದ ಹಾಸ್ಯ ನಟ ಚಾರ್ಲಿ ಚಾಪ್ಲಿನ್.

ಆದರೆ ಬೆಂಗಳೂರಿನ ಮಳೆಗೆ ಜೀವಂತಿಕೆಯೇ ಇಲ್ಲ ಎಂದೆನಿಸುತ್ತದೆ. ಮಗುವಿನ ಅಳುವಿನಂತೆ ಸುರಿಯುವ ಇಲ್ಲಿನ ಮಳೆಯಲ್ಲಿ ಮಣ್ಣಿನ ವಾಸನೆ ಆಘ್ರಾಣಿಸೋಣವೆಂದರೆ ಇಲ್ಲಿ ಮಣ್ಣು, ಕಲ್ಲು, ಮಾನವೀಯತೆ ಎಲ್ಲವೂ ಕರಗಿ ಹೋದಂತಿದೆ. ಮಳೆ ಸುರಿದರೆ ತಗ್ಗಿನ ಪ್ರದೇಶಗಳಲ್ಲಾ ನೀರು ತುಂಬಿ, ತಗ್ಗು, ಉಬ್ಬು ಎಲ್ಲಿ ಎಂದು ಗೊತ್ತಾಗದೆ ಸಂಭವಿಸುವ ದುರಂತಗಳು ಕಣ್ಣೆದುರಿಗೆ ನಿಲ್ಲುತ್ತವೆ. ಕಳೆದ ವರ್ಷ ಇಂಥದೇ ಮಳೆಯಲ್ಲಿ ಲಿಂಗರಾಜಪುರದ ಅಭಿಷೇಕ್ ಎನ್ನುವ ಬಾಲಕ ಕೊಚ್ಚಿಕೊಂಡು ಹೋದ ನೆನಪು ಕಣ್ಣಲ್ಲಿ ಮಳೆಹನಿಯಂತೆ ನೀರು ತರಿಸುತ್ತದೆ. ಇನ್ನು ಮಳೆ ನೆನೆಯಬೇಕೆಂದರೆ ಸ್ಥಳವೆಲ್ಲಿದೆ?
ಸಮಯವೆಲ್ಲಿದೆ? ಟೇರಸ್ ಮೇಲೆ ನಿಂತ ನೀರಿನಲ್ಲಾದರೂ ಕಾಲೂರುವ ಆಸೆಯಾಗುತ್ತಿದೆ. ಮಳೆನೀರಿನಲ್ಲಿ ಕಾಗದದ ದೊಣಿ ಹರಿಬಿಟ್ಟು ಆಟವಾಡುವ ಮಕ್ಕಳು ಎಲ್ಲಿಯಾದರೂ ಕಾಣಸಿಗುತ್ತಾರೆಯೇ ಎಂದು ಕಣ್ಣುಗಳು ಅರಸುತ್ತಿವೆ.

ಮಲೆನಾಡಿನಂತೆ ಬೆಂಗಳೂರಿನಲ್ಲಿ ರಾತ್ರಿ ಮಿಣುಕುಹುಳಗಳ ಸೌಂದರ್ಯವಿಲ್ಲದಿದ್ದರೂ, ಮಳೆಗಾಲದ ರಾತ್ರಿಗಳಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿ ಹೊರಟರೆ ಇಲ್ಲಿನ ಕೆಂಪು ನಿಯಾನ್ ದೀಪಗಳು ರಾತ್ರಿ ನೆಕ್ಲೆಸ್ ಥರ ಕಾಣಿಸುತ್ತದೆ. ಮಳೆ ಬರುತ್ತಿದ್ದರೆ ಇಲ್ಲಿನ ಎಫ್‌ಎಂ ಸ್ಟೇಷನ್‌ಗಳಿಂದ ರೊಮ್ಯಾಂಟಿಕ್ ಕಲ್ಪನೆಗಳು ತೇಲಿಬರುತ್ತಿರುತ್ತವೆ. ಭವಿಷ್ಯದಲ್ಲಿ ಸ್ನಾನ ಮಾಡಬೇಕಾದರೆ ಈಗಲೇ ‘ಬಕೇಟ್ ಹಿಡಿಯಿರಿ’ ಎನ್ನುವಂತ ಜೋಕ್ಸುಗಳು ‘ಮಳೆ ನೀರು ಇಂಗಿಸುವ’ ಸರಳ ಪಾಠವನ್ನು ಹೇಳಿಕೊಡುತ್ತಿವೆ. ಈ ಮಳೆ ಸುರಿಯುವ ಹೊತ್ತಿನಲ್ಲಿ ನಿಮ್ಮ ಪ್ರಿಯತಮೆಯ ಕೈ ಹಿಡಿದು ಬೆಂಗಳೂರಿನ ಯಾವ ರಸ್ತೆಯಲ್ಲಿ ನಡೆಯಲು ನಿಮಗೆ ಇಷ್ಟವಾಗುತ್ತದೆ, ನಮಗೆ ಕರೆ ಮಾಡಿ ಹೇಳಿ’ ಎಂಬ ರೇಡಿಯೋ ಜಾಕಿಯ ಪ್ರಶ್ನೆಗೆ, ’ಬೆಂಗಳೂರಿನ ಮಳೆ ಬೇಡ ಸ್ವಾಮಿ, ಮಳೆ ಸುರಿಯುವ ಹೊತ್ತಿನಲ್ಲಿ ಧಾರವಾಡ ಯೂನಿವರ್ಸಿಟಿ ಕ್ಯಾಂಪಸ್‌ನಿಂದ ಶ್ರೀನಗರ ಸರ್ಕಲ್ ತನಕ ನನ್ನ ಕನಸಿನ ಹುಡುಗಿಯ ಕೈ ಹಿಡಿದು ನಡೆದುಕೊಂಡು ಹೋಗುವ ಆಸೆಯಾಗುತ್ತಿದೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತೇನೆ. .

ಇತ್ತ ಊರಿನಲ್ಲಿ ಮಳೆಯಾಗುತ್ತಿರುವ ಸುದ್ದಿ ತಿಳಿದು ಏನೋ ಬಹುಮುಖ್ಯವಾದುದನ್ನು ಕಳೆದುಕೊಂಡ ಸಂಕಟದ ಭಾವವೊಂದು ಮತ್ತೆ ಮತ್ತೆ ಕೈ ಹಿಡಿದು ಜಗ್ಗಿದಂತಾಗುತ್ತಿದೆ. ನಮ್ಮೂರಿನ ಪುಟಾಣಿ ಕಂದಮ್ಮಗಳು ಕಂಬಳಿ ಕುಪ್ಪೆಯೋ, ಛತ್ರಿಯೋ ಹಿಡಿದು ಕಾಲು ಸಂಕದ ಮೇಲೆ ಹೆಜ್ಜೆಯಿಡುವ ಚಿತ್ರ ಕಣ್ಮುಂದೆ ಬರುತ್ತಿದೆ.. ಮಳೆಯನ್ನು ಯಾರಾದರೂ ‘ಥೂ ದರಿದ್ರ’ ಎಂದು ಬೈದರೆ ಮನಸ್ಸು ಭಾರವಾಗುತ್ತದೆ. 'ಮಳೆ ನಿಂತ ನಂತರ ಎಲೆಯ ಮೇಲಿದ್ದ ಹನಿಗಳೆಲ್ಲಾ ಅವಳ ಹೆಸರನ್ನು ಹೇಳುತ್ತಾ ಉದುರಿಬಿದ್ದವು' ಎಂದು ಕವಿಯಂತೆ ಹಾಡುತ್ತಾ, ನೆನಪಿನ ಮಳೆಯಲ್ಲಿ ಕೊಚ್ಚಿಕೊಂಡು ಹೋಗುವ ಆಸೆಯಾಗುತ್ತಿದೆ..
Happy Monsoon...

8 comments:

ರಾಜೇಶ್ ನಾಯ್ಕ said...

ಚೆನ್ನಾದ ಬರಹ. ಮಳೆಯ ನೆನಪುಗಳೇ ಹಾಗೆ. ಎಲ್ಲೆಲ್ಲೋ ಒಯ್ಯುತ್ತವೆ!

ಮನಸು said...

alli maLe illi sudu bisilu naavu yaavaga maLe nodteevo anniside.. lekhana chennagide

ಚಿತ್ರಾ said...

ಜೋ,
ಮಲೆನಾಡ ಮಳೆಯನ್ನು ನೆನಪಿಸಿ ಮನಸನ್ನು ಭಾರವಾಗಿಸಿದ್ದಕ್ಕೆ ದೇವರು ನಿಮ್ಮನ್ನು ಸುಮ್ಮನೆ ಬಿಡಲ್ಲ ಕಣ್ರೀ.
ಚೆಂದದ ಲೇಖನ !

ಸಂತೋಷಕುಮಾರ said...

ಜೋಮನ್,

ತಿಂಗಳ ಹಿಂದೆ ಧಾರವಾಡ ಬಂದಿದ್ದಿರಿ ಅಂತ ಗೊತ್ತಾಯ್ತು,ನಾನೂ ಅಲ್ಲೆ ಇದ್ದೆ. ಭೆಟಿಯಾಗಬಹುದಿತ್ತು.

ಶ್ರೀನಿಧಿ.ಡಿ.ಎಸ್ said...

hmmmmmmmmmm.......

ushags said...

thumba chenda barediddira, malheyalli thoyda haage aaythu.

SHANKAR NINGANUR, SRES FIRST GRADE COLLEGE, KALLOLI said...

hi tumba channagide

ಜಲನಯನ said...

ನನಗೆ ಮಲೆನಾಡ ಮಳೆಗಿಂತಾ ಕರಾವಳಿ ಮಳೆಯದು ಬಹಳ ಅನುಭವ...ಚನ್ನಾಗಿದೆ ..ಅನುಭವದ ಮಾತು...ಮನಸು ಭಾರವಾಗೊಷ್ಟು ನನಗೇನೂ ಆಗಿಲ್ಲ ಬಿಡಿ....ಒದ್ದೆ ಅಂತೂ ಆದೆ..ಮಳೆಲಿ ಹಲವೊಮ್ಮೆ...ಹಹಹಹ