Monday 22 September, 2008
ಸ್ವರ್ಗಕ್ಕೆ ದಾರಿ ಯಾವುದಯ್ಯಾ?
ಪ್ರತಿ ಭಾನುವಾರ ಊರಿನಿಂದ ಅಮ್ಮ ಫೋನ್ ಮಾಡಿ, ಈವತ್ತು ನೀನು ಚರ್ಚಿಗೆ ಹೋಗಿದ್ದೀಯಾ ಎಂದು ಕೇಳುತ್ತಾಳೆ. ಅಮ್ಮ ಫೋನ್ ಮಾಡಿದ್ದು ಬೆಳಿಗ್ಗೆ ಆದರೆ ನಾನು ಸಂಜೆಯ ಪೂಜೆಗೆ ಹೋಗುತ್ತೇನೆಂದೂ, ಸಂಜೆ ಆದರೆ ಬೆಳಗ್ಗಿನ ಪೂಜೆಗೆ ಹೋಗಿ ಬಂದಿರುವೆನೆಂದೂ ಸುಳ್ಳು ಹೇಳುತ್ತೇನೆ. ಭಾನುವಾರ ಕೂಡ ಚರ್ಚಿಗೆ ಹೋಗದವನು ನಿಜವಾದ ಕಥೋಲಿಕ್ ಕ್ರಿಶ್ಚಿಯನ್ನನೇ ಅಲ್ಲ ಎನ್ನುವುದು ಅಮ್ಮನ ನಂಬಿಕೆ. ಅಸಲಿಗೆ ನಾನು ಚರ್ಚಿಗೆ ಹೋಗಿ ಒಂದು ವರ್ಷವಾಯಿತು. ಆದರೆ ಅಮ್ಮನನ್ನು ಖುಷಿ ಪಡಿಸಲು ಇಂತಹ ಚಿಕ್ಕ ಚಿಕ್ಕ ಸುಳ್ಳುಗಳನ್ನು ಹೇಳುತ್ತಿರುತ್ತೇನೆ. "ಅಮ್ಮ ಭಾನುವಾರ ಚರ್ಚಿಗೆ ಸಿಕ್ಕಾಪಟ್ಟೆ ಜನ ಬಂದಿರುತ್ತಾರೆ, ಆವತ್ತು ದೇವರು ಕೂಡ ಫುಲ್ ಬ್ಯುಸಿ ಇರ್ತಾನೆ, ಬಂದಿರುವ ಅರ್ಜಿಗಳನ್ನೆಲ್ಲಾ ಸ್ಥಳದಲ್ಲೇ ಪರಿಶೀಲಿಸಿ ಪರಿಹಾರ ಸೂಚಿಸಲು ಅವರೇನು ಮುಖ್ಯಮಂತ್ರಿ ಯಡಿಯೂರಪ್ಪನವರಾ?" ಅಂತೆಲ್ಲಾ ತಮಾಷೆ ಮಾಡುತ್ತಿರುತ್ತೇನೆ. ಆದರೆ ಅಮ್ಮ ಮಾತ್ರ ಗಂಭೀರವಾಗಿಯೇ, " ದೇವರ ಹತ್ತಿರ ನಿನ್ನ ಆಟ ಬೇಡ, ಈಗ ನೀನು ಏನಾಗಿದ್ದಿಯೋ ಅದೆಲ್ಲಾ ಆತನಿಂದಲೇ ಆಗಿರುವುದು, ಎಂದೆಲ್ಲಾ ಹೇಳಿ ನನ್ನನ್ನು ಅಧೈರ್ಯಗೊಳಿಸಿ, ದೇವರಿಗೆ ವಿಧೇಯನಾಗಿರುವಂತೆ ಹೇಳುತ್ತಾಳೆ. ನನಗೆ ನಗು ಬರುತ್ತದೆ.
ಪ್ರತಿ ಭಾನುವಾರ ಅಮ್ಮ ಫೋನು ಮಾಡುವುದು, ನಾನು ಚರ್ಚಿಗೆ ಹೋಗದೇ ಇರುವುದು, ಸುಳ್ಳು ಹೇಳುವುದು ನಡದೇ ಇದೆ. (ಮುಂದೆಯೂ ಕೂಡ ನಡೆಯಲಿದೆ) ಹೀಗಿರುವಾಗಲೇ ಮೊನ್ನೆ ರಾಜ್ಯಾದ್ಯಂತ ಮತಾಂತರ ಪ್ರಕರಣ ನಡೆಯಿತಲ್ಲ. ನನ್ನ ಪ್ರಾಣ ಸ್ನೇಹಿತರೆಲ್ಲಾ ಫೋನು ಮಾಡಿ " ಲೆ, ಚರ್ಚಿಗೆ ಹೋಗಬೇಡ, ಹೋದರೆ, ನಿನ್ನನ್ನೂ ಹಿಡಿದು ಬಡಿದು ಕಳುಹಿಸುತ್ತಾರೆ ಅಂದಿದ್ದರು. ನಂತರ ಅವರೇ ನೆನಪು ಮಾಡಿಕೊಂಡು, ನೀನು ಚರ್ಚಿಗೆ ಹೋದರೆ ಚರ್ಚಿನವರೇ ನಿನ್ನನ್ನು ಒಳಗೆ ಕರೆದುಕೊಳ್ಳುವುದಿಲ್ಲ, ಆದ್ದರಿಂದ ನಿನಗೇನೂ ಆಗುವುದಿಲ್ಲ ಎಂದು ಸಮಾಧಾನ ಕೂಡ ಮಾಡಿದ್ದರು. ಮತಾಂತರ ಪ್ರಕರಣಗಳು ನಡೆದಾಗ ನನಗೂ ತುಂಬಾ ಬೇಜಾರಾಗುತ್ತದೆ. ಪರಿಚಯದವರೆಲ್ಲಾ ಏನಪ್ಪಾ ನಿಮ್ಮ ಮಂದಿ ಎಲ್ಲಾ ಕನ್ವರ್ಟ್ ಮಾಡ್ತಾರಂತಲ್ಲ ಅಂತ ಮುಖಕ್ಕೆ ಹೊಡೆದಂತೆ ಕೇಳುತ್ತಾರೆ. ಅವರಿಗೆ ಸತ್ಯಾಸತ್ಯತೆಯನ್ನು ವಿವರಿಸುವ ಹೊತ್ತಿಗೆ ಸಾಕು ಬೇಕಾಗುತ್ತದೆ. ಯಾರೋ ಮಾಡುವ ಕೆಲಸದಿಂದಾಗಿ ನಾನೂ ತಲೆ ತಗ್ಗಿಸುತ್ತೇನೆ. ಈ ಮತ, ಧರ್ಮಗಳನ್ನೆಲ್ಲಾ ತಗೆದುಕೊಂಡು ಹೋಗಿ ಸುಟ್ಟು ಬಿಡಬೇಕೆನ್ನಿಸುತ್ತದೆ. ನಾವೊಂದಿಷ್ಟು ಜನ ಸ್ನೇಹಿತರು ನಮ್ಮ ಜಾತಿ, ಮತ, ಧರ್ಮ ಎಲ್ಲವನ್ನೂ ಬಿಟ್ಟು ನಮ್ಮ ನಮ್ಮ ಧರ್ಮಗಳಿಗೆ ಭಾರವಾಗಿ ಬದುಕುತ್ತಿದ್ದೇವೆ. ನಮ್ಮ ಕಣ್ಣಿಗೆ ಅಲ್ಲಾನೂ, ಈಶ್ವರನೂ. ಯೇಸುವೂ ಎಲ್ಲರೂ ಒಂದೇ ಥರ ಕಾಣುತ್ತಾರೆ. ಚಿಕ್ಕವನಿದ್ದಾಗ ನಾನೂ ಕೂಡ ಈ ದೇವರಿಗೆ ದೊಡ್ಡ ಶಕ್ತಿ ಇರುತ್ತದೆ ಎಂದುಕೊಂಡಿದ್ದೆ. ಆದರೆ ಈಗ ಮನುಷ್ಯರ ಅಜ್ಞಾನವನ್ನೂ, ಮತಾಂಧತೆಯನ್ನೂ ಸಹಿಸಿಕೊಂಡಿರುವ ದೇವರುಗಳಿಗೇ ಇಲ್ಲ ಎನಿಸುತ್ತದೆ.
ವಿಷಯ ಅದಲ್ಲ. ನಮ್ಮ ಕಥೋಲಿಕ್ ಕ್ರಿಶ್ಚಿಯನ್ನರಲ್ಲಿ ಮದುವೆ ಆಗಬೇಕಾದರೆ ನಾವಿರುವ ಊರಿನ ಚರ್ಚಿನ ಪಾದ್ರಿ, ಈತ ಪ್ರತಿ ಭಾನುವಾರ ಚರ್ಚಿಗೆ ಬಂದಿದ್ದಾನೆ ಎನ್ನುವ ಧೃಢೀಕರಣ ಪತ್ರವೊಂದನ್ನು ನೀಡಬೇಕು. ಇಲ್ಲದಿದ್ದರೆ ಮದುವೆ ಇಲ್ಲ. ನಾನು ಈಗ ಮೈಸೂರಿನಲ್ಲಿ ಚರ್ಚಿಗೆ ಹೋಗದೆ ಆರಾಮಾಗಿ ತಿರುಗಾಡಿಕೊಂಡಿದ್ದೇನೆ. ಆದರೆ ಮುಂದೊಂದು ದಿನ ನಾನು ಮದುವೆಯಾಗುವಾಗ ಇಲ್ಲಿನ ಚರ್ಚಿನ ಪಾದ್ರಿಯ ಪತ್ರವನ್ನು ನಾನೂ ನಮ್ಮೂರ ಪಾದ್ರಿಗೆ ಕೊಡಬೇಕು. ಒಂದು ದಿನವೂ ಚರ್ಚಿಗೆ ಹೋಗದಿರುವ ನನಗೆ ಪತ್ರವಂತೂ ಕೊಡುವುದಿಲ್ಲ. ಅಜನ್ಮ ಬ್ರಹ್ಮಚಾರಿಯಾಗಿ ಕಾಲ ಕಳೆಯುವುದು ಸ್ವಲ್ಪ ಕಷ್ಟದ ಕೆಲಸವಾದ್ದರಿಂದ ಈ ಪತ್ರವನ್ನು ಗಿಟ್ಟಿಸಲು ಯಾವುದಾದರೂ ಕುಟಿಲ ಮಾರ್ಗಗಳಿವೆಯಾ ಅಂತ ನಾನು ನನ್ನ ಪತ್ರಕರ್ತ ಬುದ್ದಿ ಉಪಯೋಗಿಸಿ ಚಿಂತಿಸುತ್ತಿರುತ್ತೇನೆ.
ಮೊನ್ನೆ ಊರಿಗೆ ಹೋದಾಗ ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ಲೈಸೆನ್ಸ್ ಇಲ್ಲದ ಬೈಕ್ ಸವಾರನಂತೆ ನಾನೂ ನಮ್ಮೂರ ಪಾದ್ರಿಯ ಕೈಗೆ ಸಿಕ್ಕಿಹಾಕಿಕೊಂಡೆ. ಮೈಸೂರಿನಲ್ಲಿ ಯಾವ ಚರ್ಚಿಗೆ ಹೋಗುತ್ತೀಯಾ ಎಂದರು. ನಾನು ಸಂತ ಫಿಲೋಮಿನಾ ಚರ್ಚಿಗೆ ಅಂದೆ! ಅಲ್ಲಿನ ಫಾದರನ್ನು ಪರಿಚಯ ಮಾಡಿಕೊಂಡೆಯಾ ಅಂದರು. ಇಲ್ಲ ಎಂದೆ. ಹಾಗೆಲ್ಲಾ ಆಗುವುದಿಲ್ಲ, ಅವರೇ ನಿನಗೆ ಮುಂದೆ ಪತ್ರ ಕೊಡಬೇಕಾದವರು, ಇಲ್ಲದಿದ್ದರೆ ನಾನು ನಿನ್ನ ಮದುವೆ ಮಾಡಿಸುವುದಿಲ್ಲ ಎಂದರು. ಒಳ್ಳೆಯದೇ ಆಯಿತು ಬಿಡಿ, ನಾನು ರಿಜಿಸ್ಟೆಡ್ ಮದುವೆ ಆಗುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಬಹಳ ವರ್ಷಗಳ ಹಿಂದೆ, ನನ್ನ ನಾಮಕರಣ ಶಾಸ್ತ್ರ ಮಾಡಲು ನಮ್ಮಪ್ಪ ನನ್ನನ್ನು ಚರ್ಚಿಗೆ ಕರೆದುಕೊಂಡು ಹೋದಾಗ, ಇದೇ ಫಾದರ್ ಚರ್ಚಿಗೆ ತೆರಿಗೆ ಕಟ್ಟುವುದು ಬಾಕಿ ಉಳಿಸಿದ್ದಕ್ಕೆ ನಿನ್ನ ಮಗನ ನಾಮಕರಣ ಮಾಡಲು ಆಗುವುದಿಲ್ಲ ಅಂದಿದ್ದರಂತೆ. ನಮ್ಮಪ್ಪನಿಗೆ ತಲೆಕೆಟ್ಟು ಹೋಗಿ, " ಹೋಗ್ರೀ ಫಾದರ್ ನೀವು ಮಾಡದೇ ಇದ್ದರೆ ಅಷ್ಟೇ ಹೋಯಿತು, ಇವನನ್ನು ಮಸೀದಿಗೆ ಕರೆದುಕೊಂಡು ಹೋಗಿ ಮುಂಜಿ ಮಾಡಿಸಿ ಸುಲೈಮಾನ್ ಎಂದು ಹೆಸರಿಡುತ್ತೇನೆ" ಎಂದಿದ್ದರು. ಆದರೆ ಅಮ್ಮನ ಮಧ್ಯ ಪ್ರವೇಶದಿಂದ ನಾನು ಸುಲೈಮಾನ್ ಆಗುವುದು ತಪ್ಪಿ ಜೋಮನ್ ವರ್ಗೀಸ್ ಆಗಿಯೇ ಉಳಿದುಕೊಂಡೆ
ಇದನ್ನೆಲ್ಲಾ ನೆನಪಿಸಿಕೊಂಡಾಗ ಈಗ ನನಗೆ ನಗು ಬರುತ್ತಿದೆ. ಒಬ್ಬ ಕಥೋಲಿಕ್ ಕ್ರಿಶ್ಚಿಯನ್ನನಾದ ನಾನು, ನರಕಕ್ಕೆ ಹೋಗುವ ಯಾವುದೇ ಭಯವಿಲ್ಲದೆ ಈ ರೀತಿ ದೇವರಿಗೆ ಅವಿಧೇಯನಾಗಿ ನಡೆಯುತ್ತಿದ್ದೇನಲ್ಲಾ ಎಂದೆನಿಸುತ್ತದೆ. ಒಮ್ಮೊಮ್ಮೆ ದೇವರು ನನ್ನ ಸುಳ್ಳನ್ನೆಲ್ಲಾ ಮನ್ನಿಸಿ ಸ್ವರ್ಗಕ್ಕೆ ಕರೆದುಕೊಂಡರೂ ಕರೆದುಕೊಳ್ಳಬಹುದು ಎನ್ನುವ ಆಸೆ ಮೂಡುತ್ತದೆ. ಹೀಗೆ ಇದನ್ನು ಬರೆಯುವಾಗಲೇ ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿರುವ ಜ್ಞಾನೋಕ್ತಿಯೊಂದು ನೆನಪಾಯಿತು.
ಕಂದಾ ನನ್ನ ಮಾತುಗಳನ್ನು ಕೇಳು,
ನಿನ್ನ ಕಿವಿಯನ್ನು ಜ್ಞಾನದ ಕಡೆಗೂ,
ಹೃದಯವನ್ನು ವಿವೇಕದ ಕಡೆಗೂ ತಿರುಗಿಸು
ಬುದ್ದಿಗಾಗಿ ಮೊರೆಯಿಡು,
ವಿವೇಕಕ್ಕಾಗಿ ಕೂಗಿಕೊಂಡು
ಅದನ್ನು ಬೆಳ್ಳಿಯಂತೆಯೂ, ನಿಕ್ಷೇಪದಂತೆಯೂ ಹುಡುಕು.
ಇದನ್ನು ಓದಿಕೊಂಡ ನಂತರ, ಸಂಪೂರ್ಣ ಗೊಂದಲಕ್ಕೆ ಸಿಲುಕಿ, ಸ್ವರ್ಗಕ್ಕೆ ದಾರಿ ಯಾವುದು ಎಂದು ಗೊತ್ತಾಗದೇ ಕುಳಿತಿದ್ದೇನೆ.
Subscribe to:
Post Comments (Atom)
35 comments:
ಗೆಳೆಯಾ, ಹೆದರಬೇಡ. ನಿನ್ನ ಮದುವೆ ಮಾಡೋದಕ್ಕಂತಾನೇ ನಾವಿದ್ದೇವೆ. ಎಲ್ಲದಕ್ಕೂ ಒಂದು ಕಳ್ಳ ದಾರಿ ಇದ್ದೇ ಇರುತ್ತೆ. ನಿನಗೆ ಸರ್ಟಿಫಿಕೇಟ್ ಇಲ್ಲದೆ ಮದುವೆ ಮಾಡಿಸುತ್ತೇವೆ. ಚಿಂತೆ ಮಾಡಬೇಡ ನಾನೇ ಮುಂದೆ ನಿಂತು ಮದುವೆ ಮಾಡಿಸ್ತೀನೀ... ಸ್ವರ್ಗಕ್ಕೂ ಕಳುಹಿಸ್ತೀನಿ.
- ಚನ್ನು ಮೂಲಿಮನಿ.
Excellent Joman.
Barahada vinoda shyliya naduveyoo gadha chintane inukide.
Ee buddi Bajarangigaligoo barali.
Anda haage neevu Kendasampigeyalli bareyuva joman tane ?
- Harish Kera
ಡೋಂಟ್ ವರಿ ಜೋಮನ್ ಚೆನ್ನು ಹೇಳಿದ ಹಾಗೆ ನಿನ್ನನ್ನು ಸ್ವರ್ಗಕ್ಕೆ ಕಳುಹಿಸಲು ಬೇಕಾದಷ್ಟು ರಹದಾರಿಗಳು ನಮ್ಮ ಬಳಿ ಇವೆ. .... ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ನಾವು ಮಾಡ್ತೇವೆ ಆಯ್ತಾ......
ಏನೇ ಆದರೂ ಬರಹ ಚೆನ್ನಾಗಿದೆ. ಹೀಗೆ ಮುಂದುವರಿಯಲಿ ನಿಮ್ಮ ಬರವಣಿಗೆ...
- ಮಲ್ಲಿಕಾರ್ಜುನ
ಚರ್ಚಿಗೆ ಹೋಗದಿದ್ದರೆ ದೇವರೇನು ಕೋಪಗೊಳ್ಳಲಾರ. ಆದರೆ ದೇವರಂತ ಅಮ್ಮನಲ್ಲಿ ಸುಳ್ಳು ಹೇಳಬೇಡ....ತುಂಬ ಟಚಿಂಗ್ ಬರಹ...
ಒಲವಿನಿಂದ
ಬಾನಾಡಿ
ಅಬ್ಬಾ! ಹಿಂಗೆಲ್ಲಾ ಇದೆಯಾ ವಿಷ್ಯ! ಸದ್ಯ ನಮ್ಮಲ್ಲಿ ಹೀಗಿಲ್ಲ. ಇಲ್ಲಾಂದ್ರೆ ನಾನಿಲ್ಲಿ ಪಟ್ಟಾಲಮ್ಮನ ಗುಡಿಯಿಂದನೋ, ಅಣ್ಣಮ್ಮನ ಗುಡಿಯಿಂದನೋ ಸರ್ಟಿಫಿಕೇಟು ತರಬೇಕಿತ್ತು :)
ದಿನಾ ಟ್ರಾಫಿಕ್ ಇಲ್ಲದ ಶಾರ್ಟ್ ಕಟ್ ದಾರಿ ಹುಡುಕೋದೆ ಕೆಲಸವಾಗಿದೆ, ಇನ್ನೆಲ್ಲಿ ಸ್ವರ್ಗಕ್ಕೆ ದಾರಿ ಹುಡುಕೋದು!
ಆದ್ರೆ ಜೋಮನ್, ನಮಗೆ ದೇವರು ಧರ್ಮ ಇತ್ಯಾದಿಗಳ ಮೇಲೆ ನಂಬಿಕೆಯಿಲ್ಲವೆಂದ ಮಾತ್ರಕ್ಕೆ ಅವುಗಳನ್ನು ತಿರಸ್ಕಾರದಿಂದ,ಅಗೌರವದಿಂದ ನೋಡಬೇಕಿಲ್ಲ ಅಲ್ಲವಾ?
ಚನ್ನು,
ಮಾರಾಯ, ನೀನು ನನ್ನನ್ನು ಸ್ವರ್ಗಕ್ಕೂ ಕಳುಹಿಸ್ತೀಯಾ, ಮದುವೆನೂ ಮಾಡಿಸ್ತೀಯಾ, ಕೊನೆಗೆ ಹೊಗೇನೂ ಹಾಕಿಸ್ತೀಯಾ ಅಂತ ಗೊತ್ತು. ಅದೇ ಹೆದರಿಕೆ.:)
ಹರ್ಷ,
ಮಳೆಹನಿಗೆ ಸ್ವಾಗತ. ಅದೇ ಜೋಮನ್ ಕಣ್ರೀ. ಕೆಂಡಸಂಪಿಗೆಯ ಉಪಸಂಪಾದಕ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ್ಗ ಬರುತ್ತಲಿರಿ.
ಮಲ್ಲಿಕಾರ್ಜುನ ತಿಪ್ಪಾರ
ರೀ.. ಸ್ವಾಮಿ ಸದ್ಯ ನನಗೆ ಸ್ವರ್ಗಕ್ಕೆ ಹೋಗುವ ಮನಸ್ಸಿಲ್ಲ. ಬರೆದಿದ್ದೇ ತಪ್ಪಾಯ್ತು ಅನ್ನೋ ಹಾಗೆ, ಈಗ ನೀವು kpದವರೆಲ್ಲಾ ಸೇರಿ ನನ್ನನ್ನು ಸ್ವರ್ಗಕ್ಕೆ ಕಳುಹಿಸೋ ಯೋಚನೆ ಮಾಡುತ್ತಿದ್ದೀರಲ್ಲಾ.
ಬಾನಾಡಿ.
ಖಂಡಿತ. ಅಮ್ಮನಿಗೆ ಇದೊಂದು ವಿಷಯದಲ್ಲಿ ಮಾತ್ರ ನಾನು ಆಗಾಗ್ಗ ಸುಳ್ಳು ಹೇಳುವುದು. ಆದರೂ ಅಮ್ಮನ ಒತ್ತಡಕ್ಕೆ ಮಣಿದು ಆಗಾಗ್ಗ ಚರ್ಚಿಗೆ ಹೋಗುತ್ತೇನೆ. ಅಮ್ಮನಿಗೋಸ್ಕರ ದೇವರಲ್ಲಿ ಪ್ರಾರ್ಥಿಸುತ್ತಿರುತ್ತೇನೆ. ಪ್ರತಿಕ್ರಿಯೆ ನೋಡಿ ಖುಷಿಯಾಯಿತು.
ವಿಕಾಸ್.
ಖಂಡಿತ ವಿಕಾಸ್. ಯಾವುದೇ ಧರ್ಮದ ಮೇಲೆ ನನಗೆ ತಿರಸ್ಕಾರವಾಗಲಿ, ಅಗೌರವಾಗಲಿ ಇಲ್ಲ. ಇರಲು ಸಾಧ್ಯವೂ ಇಲ್ಲ. ಎಲ್ಲರನ್ನೂ, ಎಲ್ಲ ಧರ್ಮದವರನ್ನೂ ಗೌರವಿಸುತ್ತೇನೆ. ಪ್ರೀತಿಸುತ್ತೇನೆ. ಅದು ಮನುಷ್ಯ ಧರ್ಮ. [ಚರ್ಚಿಗೆ ಹೋಗದೇ ಇರುವುದು ಹೆಚ್ಚಾಗಿ ನನ್ನ ಸೋಮಾರಿತನದಿಂದ. ಪತ್ರಕರ್ತನಾದ ಮೇಲೆ, ವಿಶ್ವಾಸದ ಕೊರತೆಯೂ ಇದೆ ಅಂತ ಅಮ್ಮ ಹೇಳುತ್ತಿರುತ್ತಾಳೆ]
ಅದೆಲ್ಲ ಸರಿ. ಆದ್ರೆ ಮದುವೆಯಾಗೋದಕೋಸ್ಕರವೇ ಇಷ್ಟೆಲ್ಲ ಚಿಂತನೆ ನಡೆಸಿದ್ದೀರಾ ಹೇಗೆ?.......!
ಜೋಮನ್,
ಲೇಖನ ಈಗ ನಡೆಯುತ್ತಿರುವ ಪ್ರಚಲಿತ ಸಮಸ್ಯೆಗೆ ತುಂಬಾ ಬೇಕಾಗಿದೆ. ಇದು ಯಾವುದಾದರು ಪತ್ರಿಕೆಯಲ್ಲಿ ಬಂದಿದ್ರೆ ಜಾತಿ, ಧರ್ಮ ಅಂತಾ ಕಿತ್ತಾಡುವವರಿಗೆ ಸರಿಯಾದ ಪಾಠ ಅಗಬಹುದಿತ್ತೇನೋ.
ಇರಲಿ. ತುಂಬ ಚೆನ್ನಾಗಿತ್ತು. ಅಂದ ಹಾಗೆ ನೀನು ನಿನ್ನ ಮಾಡುವೆ ಬಗ್ಗೆ ಚಿಂತೆ ಬಿಡು. ಸರ್ಟಿಫಿಕೇಟ್ ಇಲ್ಲದೆ ಇದ್ರೂ ಪ್ರೀತಿಸುವ ಮನಸು ಇದೆಯಲ್ಲ ಅದೊಂದೇ ಸಾಕು ಮದುವೆಗೆ.
ಏನ್ರಿ ಹೀಗಂತೀರಾ? ನಮ್ ಕಡೆ ಕ್ರಿಶ್ಚಿಯನ್ ಆದ್ರೆ ಅವರೇ ಕೆಲಸ ಕೊಡಿಸಿ,ಹುಡುಗಿ ಹುಡುಕಿ ಮದುವೇನೂ ಮಾಡ್ತಾರೆ ಅಂತಾರಲ್ಲ.:)
ಮದುವೆ ವಿಷ್ಯ ಬಿಡಿ, ಹೇಗೋ ಅಗುತ್ತೆ..
ಇಷ್ಟು ಪ್ರಾಮಾಣಿಕವಾಗಿ-ಆಪ್ತವಾಗುವಂತೆ ಬರೆದಿದ್ದಕ್ಕೆ ನಿಮಗೊಂದು ಸಲಾಮ್! ಇಂಥದ್ನ ಓದಿದಾಗೆಲ್ಲಾ ನಂಗೆ ಜೀವನಪ್ರೀತಿ ಜಾಸ್ತಿಯಾಗುತ್ತೆ.. ಮನುಷ್ಯರನ್ನ ಮತ್ತಷ್ಟು-ಮತ್ತಷ್ಟು ನಂಬುವಂತಾಗತ್ತೆ..
ಒಂದು ಕೆಲಸ ಮಾಡಿ, ದಿನಾ ಚರ್ಚಿಗೆ ಬರ್ತಿದ್ದೆ ಅಂತಲೂ, ಹಿಂದೆ ಕೂರ್ತಿದ್ದೆ ಅಂತಲೂ ಹೇಳಿಬಿಡಿ! ಸಾವಿರ ಸುಳ್ಳು ಹೇಳಿ... ಗಾದೇನೇ ಇದೆಯಲ್ಲ.:)
ತಮಾಷೆ ಒತ್ತಟ್ಟಿಗಿರಲಿ, ಬರಹ ಇಷ್ಟವಾಯಿತು. ಸುಶ್ ಹೇಳಿದ ಹಾಗೆ, ಮನುಷ್ಯರನ್ನ ಮತ್ತಷ್ಟು-ಮತ್ತಷ್ಟು ನಂಬುವಂತಾಗತ್ತೆ..
ಇಂತಹ ಬರಹ ಬೇಕಿತ್ತು.
ಜೋಮನ್ ಅವರೆ,
ಇಂತಹ ಸಹೃದಯತೆ ಎಲ್ಲರಿಗೂ ಇದ್ದಿದ್ದರೇ ಕೋಮುಗಲಭೆಗಳೇ ಇಲ್ಲವಾಗುತ್ತಿದ್ದವೇನೋ! ತುಂಬಾ ಪ್ರಾಮಾಣಿಕತೆ, ಆಪ್ತತೆ, ಸರಳತೆಯಿದೆ ನಿಮ್ಮ ಬರವಣಿಗೆಯಲ್ಲಿ. ಮುಂದೆಯೂ ಹೀಗೇ ಇರಲಿ ಎಂದು ಹಾರೈಸುವೆ. ಸುಂದರ ಚೊಕ್ಕ ಲೇಖನಕ್ಕಾಗಿ ಧನ್ಯವಾದಗಳು.
Don't worry Choman. ನಾವಿದ್ದೀವಿ. ನಾನೂ ಈಗ ಆ ಕೂಪಕ್ಕೆ ಬೀಳ್ತ ಇದ್ದೀನಿ ಭಯ ಆಗ್ತಾ ಇದೆಮಾರಾಯ್ರೆ. ನೀವಾದ್ರೂ ಸ್ವಲ್ಪ ಯೋಚಿಸಿ ಬೀಳಿ. ಅನುಭವಸ್ತರನ್ ನಕೇಳಿ.
ಜಿತೇಂದ್ರ,
ಏನಿದ್ರೂ ನಿಮ್ಮ ಮದುವೆ ಮಾಡಿಸಿಯೇ ನನ್ನ ಮದುವೆ. ಅವಸರ ಮಾಡಬೇಡಿ. ಎಲ್ಲದಕ್ಕೂ ಕಾಲ ಕೂಡಿ ಬರುತ್ತೆ.
ಹಾರುವ ಹಕ್ಕಿ,
ಹಾರುವ ಹಕ್ಕಿಯ ಪ್ರೀತಿಗೆ ನನ್ನದೂ ಪ್ರೀತಿ. ಧನ್ಯವಾದಗಳು ಬ್ರಹ್ಮ. ನೀನೂ ಪ್ರತಿಕ್ರಿಯಿಸಿದರೆ ಖುಷಿಯಾಗತ್ತೆ.
ಸಂತೋಷಕುಮಾರ
ಪಾಟೀಲರೇ ಆ ಕ್ರಿಶ್ಚಿಯನ್ನರೇ ಬೇರೆ. ಅವರ ಕಥೇನೇ ಬೇರೆ. ಮದುವೆ ವಿಷ್ಯ ಹೇಗೋ ಆಗೋದಿಲ್ಲ ಬಿಡಿ. ಕಷ್ಟ ಪಡಬೇಕು. ಹುಡುಗಿ ಹುಡುಕಬೇಕು. ಎಷ್ಟೊಂದು ಕಷ್ಟ ಇದೆ, ನೀವೇನೋ ಆರಾಮಾಗಿ ಹೇಳಿಬಿಟ್ರಿ.
ಸುಶ್ರುತ,
ನಿಮ್ಮ ಜೀವನ ಪ್ರೀತಿ ಹೀಗೆಯೇ ಯಾವಾಗಲೂ ಇರಲಿ ಅಂತ ಆಸೆಯಾಗುತ್ತದೆ. ಲೇಖನ ಓದಿ ನೀವು ಖುಷಿ ಪಟ್ಟಿದ್ದಕ್ಕಿಂತ ಬೇರೆ ಖುಷಿ ನನಗೇನಿದೆ.
ಶ್ರೀನಿಧಿ
ನನಗೆ ಇಷ್ಟೊಂದು ಸರ್ಪೋರ್ಟ್ ಇದೆ ಅಂತ ಗೊತ್ತಿದ್ರೆ, ಇನ್ನು ಮದುವೆ ಅಲ್ಲ ಪಾದ್ರೀನೇ ಬಂದ್ರೂ ಹೆದರಲ್ಲ ಕಣ್ರೀ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆ ನೋಡಿ ಖುಷಿಯಾಯಿತು.
ತೇಜಸ್ವಿನಿ ಹೆಗಡೆ,
ನಿಮ್ಮ ಸಹೃದಯ ಓದು, ಆತ್ಮೀಯ ಪ್ರತಿಕ್ರಿಯೆಗಳು ಹೀಗೆಯೇ ಇರಲಿ, ಪ್ರೀತಿಯ ಹಾರೈಕೆಗೆ ಧನ್ಯವಾದಗಳು.
ಸಿಮ್ಮಾ,
ಸ್ವಾಮಿಗಳೇ, ನಾನು ಚೋಮನ್ ಅಲ್ಲ. ಜೋಮನ್. ಹಾಗೆ ಅಂದರೆ ಒಳ್ಳೆಯ ಹುಡುಗ ಅಂತ ಅರ್ಥ.( ಅಂತ ನನ್ನ ಅಮ್ಮ ಹೇಳ್ತಾಳೆ) ಅಷ್ಟಕ್ಕೂ ಹೆಸರಲ್ಲೇನಿದೆ ಅಂತಾ ಕೇಳಬೇಡಿ. ಮಳೆಹನಿಗೆ ಸ್ವಾಗತ. ಆಗಾಗ್ಗ ಬರುತ್ತಲಿರಿ.. ಮುಂದಿನ ಬಾರಿ ಹೆಸರು ತಪ್ಪಿಲ್ಲದೆ ಬರೆಯಿರಿ ಮತ್ತೆ!
ದೇವರು ಮನಸಿನಲ್ಲಿ ಇದ್ದರೆ ಸಾಕು ತಾನೆ. ಕಟ್ಟಡಗಳಲ್ಲಿ ಹುಡುಕಿ ಹೊಡೆದಾಡೋ ಮೊದಲು ನಿಮ್ಮಂತ ವಿಶಾಲ ಮನೋಭಾವ ಬೆಳೆಸ್ಕೋಬೇಕಾದ ಅಗತ್ಯ ಇದೆ. ಅಂದ ಹಾಗೆ ನೀವೂ ದೇವರನ್ನು ನಂಬ್ತೀರಿ ಅಂದ್ಕೋತೇನೆ. ಪೂರ್ವಾಗ್ರಹಗಳಿಲ್ಲದೆ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳೋ ಸಾಮರ್ಥ್ಯ ಪತ್ರಕರ್ತರಿಗೆ ಇಲ್ಲದಿದ್ರೆ ಅಪಾಯ ಅಲ್ವ?
ದೇವರು ಮನಸ್ಸಿನಲ್ಲಿ ಇಲ್ಲದೆ ಹೋದರೆ ಮಂದಿರಗಳಲ್ಲಿ ಹೊಡೆದಾಡಿ ಏನು ಪ್ರಯೋಜನ ಅಲ್ವ? ಅದಕ್ಕೂ ಮೊದಲು ನಿಮ್ ಥರ ವಿಶಾಲ ಮನೋಭಾವ ಬೆಳೆಸಬೇಕಾದ ಅಗತ್ಯ ಇದೆ. ಅಂದ ಹಾಗೆ ನೀವು ದೇವರನ್ನು ನಂಬ್ತೀರಿ ಅನ್ಸುತ್ತೆ!
ದೇವರು ಮನಸ್ಸಿನಲ್ಲಿ ಇಲ್ಲದೆ ಹೋದರೆ ಮಂದಿರಗಳಲ್ಲಿ ಹೊಡೆದಾಡಿ ಏನು ಪ್ರಯೋಜನ ಅಲ್ವ? ಅದಕ್ಕೂ ಮೊದಲು ನಿಮ್ ಥರ ವಿಶಾಲ ಮನೋಭಾವ ಬೆಳೆಸಬೇಕಾದ ಅಗತ್ಯ ಇದೆ. ಅಂದ ಹಾಗೆ ನೀವು ದೇವರನ್ನು ನಂಬ್ತೀರಿ ಅನ್ಸುತ್ತೆ!
ಏನ್ರೀ ಜೋಮನ್,
ಯಾವತ್ತಿಂದ ಕೆಂಗುಲಾಬಿ ಕೊಟ್ಕೊಂಡ್ ಬಂದಿದೀರಿ ಓದುಗ್ರಿಗೆ, ಇನ್ನೂ ಯಾರೂ ಸಿಕ್ಕಿಲ್ವಾ ನಿಮಗೆ? ನಿಮ್ ಟ್ರಿಕ್ಕು ಕೆಲ್ಸ ಮಾಡ್ತಿಲ್ವಾ? :-)
huh... :)
sulalitha prabhandha ...nice one
ಓಹ್! ಇದಾ ಸಮಾಚಾರ?
ಮದ್ವೆ ಆಗುತ್ತೆ ಬಿಡ್ರಿ...ನಿಮ್ಮ ಸ್ನೇಹಿತರೆಲ್ಲ ಸೇರಿ ಮಾಡಿಸ್ತಾರೆ. :)
ಬರಹ ಚೆನ್ನಾಗಿದೆ, ಓದಿಸ್ಕೊಂಡು ಹೋಯ್ತು.
ಜೋಮನ್, ನಿಮ್ಮ ಬರಹಕ್ಕೆ ಕಮೆಂಟ್ ಮಾಡೋವಾಗ ಲಿಂಕ್ ಎಲ್ಲಿದೆ ಅಂತ ಹುಡುಕ್ಬೇಕಾಯ್ತು. ನೋಡಿ, ಆ ಬಣ್ಣ ಬದಲಾಯಿಸಿ ಪುಣ್ಯ ಕಟ್ಕೋಳಿ. Backgroung ಬಣ್ಣದಲ್ಲಿ ಕಾಣೋಲ್ಲ :(
ಪಾದ್ರಿಯ ಮಗಳ ಜೊತೆಗೆ ಪ್ರೇಮ ಬೆಳೆಸೋದೆ ಅತ್ಯುತ್ತಮ ಉಪಾಯ!
ನಂಗೊಬ್ಬ ಫ್ರೆಂಡ್ ಇದಾನೆ ರೋಶನ್ ಅಂತ. ದೇವ್ರ ವಿಷಯ ಬಂದಾಗ್ಲೆಲ್ಲ ಉರಿದು ಬೀಳ್ತಿದ್ಧ. ಹೊಟ್ಟೆ ದೇವ್ರ ಮುಂದೆ ಯಾವ ದೇವ್ರು ಮಾರಾಯ್ತಿ ಅಂತಿದ್ದ. ಆದ್ರೆ, ಅದೆಷ್ಟು ಚಳಿ ಇದ್ರೂ ಭಾನುವಾರ ಬೇಗ ಎದ್ದು ಚರ್ಚ್‌ಗೆ ಹೋಗ್ತಾ ಇದ್ದ. ಯಾಕಪ್ಪ ಅಂದ್ರೆ ನಕ್ಕು ಮಾತು ಹಾರಿಸುತ್ತಿದ್ದ. ನಿಮ್ಮ ಬರಹ ನೋಡಿ ಅವನಿಗೀಗ ಕಿಚಾಯಿಸ್ತಾ ಇದೀನಿ.
ಇಷ್ಟೆಲ್ಲಾ ಗಲಾಟೆಯ ಮಧ್ಯೆಯೂ ಅನಿಸಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದು ಖುಷಿ ಕೊಟ್ಟಿತು. ಎಲ್ಲರೂ ಇಷ್ಟೇ ವಿವೇಕದಿಂದ ಯೋಚಿಸುವಂತಾದ್ರೆ, ತಮ್ಮ ದೇವರುಗಳ ಬಗ್ಗೆ ಪ್ರೀತಿಯಿಟ್ಟುಕೊಂಡೇ ಇನ್ನೊಂದು ಧರ್ಮವನ್ನೂ ಗೌರವಿಸುತ್ತ ಬದುಕಿದರೆ ಎಷ್ಟು ಚಂದಕ್ಕಿರುತ್ತಿತ್ತು!
ಜೋಮನ್ ,
ತುಂಬಾ ಚೆನ್ನಾಗಿ ಬರೆದಿದ್ದೀರ.
ನನಗನಿಸೋ ಹಾಗೆ ಈ ಜಾತಿ ಧರ್ಮಗಳ ಗಲಾಟೆ ಬೇಕಾಗಿರೋದು ಕೇವಲ ರಾಜಕಾರಣಿಗಳಂಥಾ ಕೆಲವರಿಗೆ ಮಾತ್ರ . ಉಳಿದ ನಮ್ಮ ನಿಮ್ಮಂಥವರಿಗೆ ದಿನನಿತ್ಯದ ಕರ್ಮವೇ ನಿಜ ಧರ್ಮ ವಾಗಿರುವಾಗ ಬೇರೆ ಕಡೆ ಯೋಚಿಸಲೂ ಪುರಸೊತ್ತೆಲ್ಲಿ?
ಬೈಬಲ್ಲಿನ ಜ್ಞಾನೋಕ್ತಿ ನಿಜಕ್ಕೂ ನೆನಪಿಡಬೇಕಾದ್ದು.
ಇನ್ನು ಮದುವೆಯ ವಿಷಯ ! ನಿಮ್ಮಲ್ಲಿ ಹೀಗೆಲ್ಲ ಪದ್ಧತಿ ಇದೆ ( ಪ್ರತಿ ಭಾನುವಾರ ಚರ್ಚಿಗೆ ಹಾಜರಾಗಬೇಕು ) ಎಂದು ಗೊತ್ತಿರಲಿಲ್ಲ.ನನ್ನ ಕ್ಯಾಥೊಲಿಕ್ ಗೆಳತಿಯರು ಅಷ್ಟು ನಿಯಮಿತವಾಗಿ ಹೋಗಿದ್ದನ್ನು ಕಾಣೆ.ಏನೂ ಯೋಚಿಸಬೇಡಿ ,ಏನಾದರೂ ಕುಟಿಲೋಪಾಯ ಇದ್ದೇ ಇರುತ್ತದೆ .ಸ್ವರ್ಗದ ದಾರಿಗೊಂದು ಶಾರ್ಟ್ ಕಟ್ ಎಲ್ಲಾದರೂ ಸಿಕ್ಕೇ ಸಿಗುತ್ತದೆ !
ಕೃಷ್ಣ
ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು. ಮಳೆಹನಿಗೆ ಬರುತ್ತಲಿರಿ.
ಭಾಗವತರೇ
ಮೊದಲೇ ನಿಮ್ಮ ಮಾತನ್ನು ಕೇಳದೆ ತಪ್ಪು ಮಾಡಿದೆ ಭಾಗವತರೇ. ಈಗ ಗುಲಾಬಿ ಕಿತ್ತು ಹಾಕಿ ಮಲ್ಲಿಗೆ ಬಳ್ಳಿ ನೆಡೋಣ ಅಂತಿದ್ದೇನೆ.
ವಿನೋದ್.
ಥ್ಯಾಂಕ್ಸ್ ವಿನೋದ್.
ಮನಸ್ವಿನಿ,
ಲಿಂಕ್ಸ್‌ನ ಬಣ್ಣ ಇಲ್ಲಿ ಚೆನ್ನಾಗಿ ಕಾಣುತ್ತಿದೆ. ಅಲ್ಲಿಯೂ ಕೂಡ ಚೆನ್ನಾಗಿಯೇ ಕಾಣುತ್ತಿದೆ ಅಂತ ಹಲವು ಗೆಳೆಯರು ಹೇಳಿದರು. ನೀವೂ ಹೇಳಿದ್ದೀರಿ ಅಂತ ಒಮ್ಮೆ ಪರಿಶೀಲಿಸಿ, ಹೊಸ ಬಣ್ಣ ತುಂಬುತ್ತೇನೆ. ಸ್ವಲ್ಪ ಟೈಮ್ ಕೊಡಿ ಮಾರಾಯ್ರೆ..
ಸುನಾಥ
ಕಥೋಲಿಕ್ ಪಾದ್ರಿಗಳು ಮದುವೆ ಆಗುವುದಿಲ್ಲ ಕಣ್ರೀ. ಮತ್ತೆಲ್ಲಿ ಮಗಳ ಪ್ರೇಮ. ಮಳೆಹನಿಗೆ ಸ್ವಾಗತ. ಆಗಾಗ್ಗ ಇಣುಕುತ್ತಿರಿ.
ಪ್ರಿಯಾ,
ಮಳೆಹನಿಗೆ ಸ್ವಾಗತ. ನನ್ನ ಲಿಸ್ಟ್‌ನಲ್ಲೂ ಹೊಟ್ಟೇನೇ ಪಸ್ಟ್ ದೇವರು. ರೋಶನ್‌ಗೆ ನನ್ನ ಸಹಮತವಿದೆ. ಚರ್ಚಿಗೆ ಹೋಗುವುದು, ಹೋಗದೇ ಇರುವುದು ಅವರವರ ಖುಷಿಯ ವಿಚಾರ. ನಿಮ್ಮ ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು.
ವೈಶಾಲಿ,
ವೈಶಾಲಿಯವರಿಗೆ ನಮಸ್ಕಾರ, ನಿಮ್ಮ ಪ್ರತಿಕ್ರಿಯೆಯೂ ಚೆಂದ. ಆಗಾಗ್ಗ ಬರುತ್ತಲಿರಿ.
ಚಿತ್ರ,
ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಕ್ಯಾಥೋಲಿಕ್ ಗೆಳತಿಯರನ್ನು ಕೇಳಿ ಸ್ವರ್ಗಕ್ಕೆ ಹೋಗುವ ಶಾರ್ಟ್ ಕಟ್ ನನಗೂ ತಿಳಿಸಿ ಕೊಡಿ. ಕಾಯುತ್ತಿರುತ್ತೇನೆ.
ನಿಮ್ಮ ಮಾಡುವೆ ಆದಷ್ಟು ಬೇಗ ಯಾವುದೇ ತೊಂದರೆಗಳಿಲ್ಲದೆ ಆಗಲೆಂದು ಹಾರೈಸುವೆ. ಮದ್ವೆಗೆ ಕರ್ಯೋದು ಮರೀಬೇಡಿ :) ನೋಡಿ ಕರಿಲಿಲ್ಲ ಅಂದ್ರೆ ಚರ್ಚ್ ಗೆ ಹೋಗಿ ಫಾದರ್ ಗೆ ನೀವು ಹೀಗೆ ಬರೆದ ವಿಷಯಗಳನ್ನೆಲ್ಲ ತಿಳಿಸಿಬಿಡ್ತೀನಿ :)
ಜೋಮನ್,
ಸರಳ ಬರಹ,ವಿರಳ ಭಾವನೆ.ಸ್ವರ್ಗದಲ್ಲಿ ಸಿಗ್ತಿನಿ.
olleya chintane....
vyangyada daatiyalli helabekada vishaya chennagi heliddiri...
manushya manushyara naduve aa devarannu yeledu yaake illada rana rampa madtaaro gottilla... avana paadige avanirali...alwa?
ಜೋಮನ್.ಮನಸ್ಸಿಗೆ ನಾಟಿತು ಈ ಪ್ರಾಮಾಣಿಕ ಬರಹ. ತುಂಬಾ ಚೆನ್ನಾಗಿ ಬರೆದಿದ್ದೀರಿ. ಆದ್ರೆ ಅಮ್ಮನಿಗೆ ಸುಳ್ಳು ಹೇಳಬೇಡಿ. "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೆ ಇರುವ ಪ್ರೀತಿ-ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ..." ಈ ಮಾತು ನಿಮಗೆ ಸ್ಫೂರ್ತಿ ಆದೀತು. ಮತ್ತೆ ಮದುವೆ ಚಿಂತೆ ಯಾಕ್ಸಾರ್..ಈಗ್ಲೆ ಹೇಳಿ ನಾವೆಲ್ಲ ಹುಡುಗಿ ಹುಡುಕುತ್ತೀವಿ..
-ಚಿತ್ರಾ
@ ಶರಶ್ಚಂದ್ರ
ಮಳೆಹನಿಗೆ ಸ್ವಾಗತ. ಮದುವೆ ಇನ್ನೂ ತುಂಬಾ ದೂರದ ಹಾದಿ ಮಾರಾಯ್ರೆ.. ಆದ್ರೂ ಈಗ್ಲೇ ಕರೀತಿದ್ದೀನಿ. ಸ್ವ-ಕುಟುಂಬ ಸಮೇತ ಬನ್ನಿ.:)
@ ಅಹರ್ನಿಶಿ
ಶ್ರೀಧರ್ ಸರ್, ನಿಮ್ಮ ಪ್ರತ್ರಿಕ್ರಿಯೆ ನೋಡುವಾಗ ಖುಷಿಯಾಗುತ್ತದೆ. ಬರುತ್ತಲಿರಿ. ನಮನ್ನು ಸ್ವರ್ಗಕ್ಕೆ ಕರೆದುಕೊಳ್ಳುವುದಿಲ್ಲ ಕಣ್ರೀ..
@ ವಿಜಯ್
ನಮಸ್ತೆ,
ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು.
@ ಚಿತ್ರಾ,
ನಮಸ್ತೆ,
ನಿಮ್ಮ ಆಪ್ತ ಪ್ರತಿಕ್ರಿಯೆ ನೋಡಿ, ಖುಷಿಯೂ, ನಗುವೂ ಬಂತು. ಹಾಗೆಯೇ ನಾವೆಲ್ಲಾ ಸೇರಿ ನಿಮಗೆ ಹುಡುಗನ್ನ ಹುಡುಕುತ್ತಾ ಇದೀವಿ.:) ನನ್ನ ಮದುವೆ ಇನ್ನೂ ತುಂಬಾ ದೂರದಲ್ಲಿದೆ.
ಗಳೆಯ,
ನಾನು ನಿನಗಾಗಿ ಕ್ರಿಶ್ಚಿಯನ್ ಹುಡುಗಿಯನ್ನು ಹುಡುಕ್ಕಿದ್ದೀನಿ. ನನ್ನ ಪರಿಚಯದವರೊಬ್ಬರು ರಿಜಿಸ್ಟಾರ್ ಆಫೀಸ್ ನಲ್ಲಿ ಕೆಲಸ ಮಾಡುತ್ತಾರೆ. ನೀನೂ ಒಪ್ಪುವುದಾದರೇ ಈ ಬಾರಿ ಬೆಂಗಳೂಗೆ ಬಂದಾಗ ಮದುವೆ ಮಾಡಿ ಮುಗಿಸಿ ಬಿಡೋಣ ಏನಂತೀಯಾ.
-ರವಿ ಬಳೂಟಗಿ
ಬರಹ ಚೆನ್ನಾಗಿದೆ!
"ಮೊನ್ನೆ ರಾಜ್ಯಾದ್ಯಂತ ಮತಾಂತರ ಪ್ರಕರಣ ನಡೆಯಿತಲ್ಲ. ನನ್ನ ಪ್ರಾಣ ಸ್ನೇಹಿತರೆಲ್ಲಾ ಫೋನು ಮಾಡಿ " ಲೆ, ಚರ್ಚಿಗೆ ಹೋಗಬೇಡ, ಹೋದರೆ, ನಿನ್ನನ್ನೂ ಹಿಡಿದು ಬಡಿದು ಕಳುಹಿಸುತ್ತಾರೆ ಅಂದಿದ್ದರು"
ಈ ಮಾತು ಓದಿದಾಗ - ಕಾವೇರಿ ಗಲಾಟೆ ನಡೆಯುವಾಗ ಮದರಾಸಿನಲ್ಲಿದ್ದ ನನಗೆ ಪಕ್ಕದ ಮನೆಯಾಕೆ - ಅರೆಬರೆ ತಮಿಳು ಬರುವ ನಾನು ಹೊರಗೆ ಓಡಾಡಬಾರದೆಂದು, ಯಾರಾದರೂ ಏನಾದರೂ ಕೇಳಿದರೆ ಆಕೆಯ ಮನೆಗೆ ಬಂದಿರುವವನು ಅಂತ ಹೇಳಬೇಕೆಂದೂ ಹೇಳಿದ್ದು ನೆನಪಾಯಿತು!
ಎಷ್ಟೋ ಬಾರಿ ಇಂತಹ ಅಕ್ಕಪಕ್ಕದವರು - ಗೆಳೆಯರು ಇಲ್ಲದಿದ್ದರೆ ಜೀವಿಸುವುದು ತಾನೇ ಹೇಗೆ ಅನಿಸುತ್ತೆ.
ಜೋಮನ್ ಸಾರ್,
ನೀವು ನಿಮ್ಮ ಮನದಾಳದ ಮಾತುಗಳನ್ನು ಪ್ರಾಮಣಿಕವಾಗಿ ಹೇಳಿಕೊಂಡಿರುವುದಕ್ಕೆ ತುಂಬಾ ಧನ್ಯವಾದಗಳು ಯಾವುದೇ ಮತಪದ್ದತಿಗೊಳಗಾಗದೆ ಜೀವನೋತ್ಸಾಹದಿಂದ ಬದುಕುವುದು ಒಂದು ಕಲೆ ಅದು ನಿಮ್ಮಲ್ಲಿದೆ. ನೀವು ಅಂದುಕೊಂಡಿದ್ದು ಖಂಡಿತ ಆಗುತ್ತದೆ.
@ ಹಂಸಾನಂದಿ
ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು. ಮಳೆಹನಿಗೆ ಸ್ವಾಗತ. ಹೌದು, ಎಷ್ಟೋ ಬಾರಿ ಅಕ್ಕಪಕ್ಕದವರು - ಗೆಳೆಯರು ಇಲ್ಲದಿದ್ದರೆ ಜೀವಿಸುವುದು ತಾನೇ ಹೇಗೆ ಅಂತ ಖಂಡಿತ ಅನಿಸುತ್ತೆ.
@ ಶಿವು
ಛಾಯಾಕನ್ನಡಿಯವರಿಗೆ ಮಳೆಹನಿಗೆ ಸ್ವಾಗತ. ಈ ಸಾರ್ ಅನ್ನುವ ದೊಡ್ಡ ಗೌರವ ಬೇಡ ಬಿಡಿ. ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.
ನಮಸ್ಕಾರ ಜೋಮನ್,
ನಿಮ್ಮ ಮಾಡುವೆ ಆಯ್ತಾ?? ಹಾಹಾಹಾ... ಸುಮ್ನೆ ತಮಾಷೆಗೆ ಕೇಳ್ದೆ ಅಷ್ಟೆ..!!!
ನಾನು ಸಹ ಊರಿ೦ದ ದೂರದ ಬೆ೦ಗೂರಿಗೆ ಬ೦ದು ನೆಲೆಸಿ ೫ ವರ್ಷಗಳಾದವು. ಪಾದ್ರಿಯ ಪರಿಚಯ ಮಾಡಿಕೊ೦ಡಿಲ್ಲ... ನಮ್ಮಮ್ಮ ಪ್ರತಿಸಲ ಫೋನ್ ಮಾಡಿದಾಗ ಕೇಳುತ್ತಿರುತ್ತಾರೆ.. ಮು೦ದೆ ಮದುವೆಗೆ ಕಷ್ಟ ಆಗಬಾರದಲ್ಲಾ ಅ೦ತ.. ನಿಮ್ಮ ಸುಲಲಿತ, ವಿನೋದಭರಿತ ಬರವಣಿಗೆ ತು೦ಬಾ ಇಷ್ಟವಾಯಿತು.
ನಿಮ್ಮ ಇಣುಕು ನೋಟಕ್ಕೆ ಸದಾ ಸ್ವಾಗತ... http://kiran-lonelyheaven.blogspot.com/
ಪದಗಳು ಹುಟ್ಟಿಸಿದ ಆತ್ಮಿಯತೆಯೊ೦ದಿಗೆ,
ಕವಿಕಿರಣ.
Post a Comment