Friday, 19 September 2008
ನಿನ್ನ ಪೂಜೆಗೆ ಬಂದೆ ಮಾದೇಶ್ವರ...
`ಶೌಚಾಲಯ ಕಟ್ಟಿಸಿ ಆರೋಗ್ಯ ವೃದ್ಧಿಸಿ` ಎನ್ನುವ ಗೋಡೆ ಬರಹಗಳೇ ಇರುವ ಈ ಊರಿನಲ್ಲಿ ನಾನು ವಾಸವಿರಲು ತೊಡಗಿ ಎಂಟು ತಿಂಗಳಾಯಿತು. `ಮಹಿಳೆಯರ ರಕ್ತಹೀನತೆ ತಡೆಯಲು ಬಳಸಿ ಶೌಚಾಲಯ` ಇತ್ಯಾದಿ ತರಹೇವಾರಿ ಬರಹಗಳಿರುವ ಓಣಿಯನ್ನು ದಾಟಿದರೆ ಅನತಿ ದೂರದಲ್ಲಿ ನನ್ನ ಬಾಡಿಗೆ ಮನೆಯಿದೆ. ಆ ಮನೆಯ ಟೇರಸ್ ಮೇಲೆ ನಿಂತು ಈ ಓಣಿಯನ್ನು ನೋಡುವಾಗ ತಮಾಷೆ ಎನಿಸುತ್ತದೆ. `ಊಟ ತಿಂಡಿಗೆ ಬೇಕು ಅಡುಗೆ ಮನೆ, ಮಲ ಮೂರ್ತ ವಿಸರ್ಜನೆಗೆ ಬೇಕು ಕಕ್ಕಸು ಮನೆ` ಇಂತಹ ಬರಹಗಳನ್ನು ಓದಿಕೊಂಡು, ಅದನ್ನು ಬರೆದವನ ಸೃಜನಶೀಲತೆಯನ್ನು ನೆನೆದು ನಾನು ನಗುತ್ತಿರುತ್ತೇನೆ.
ಮೈಸೂರಿನಿಂದ ಹುಣಸೂರು ರಸ್ತೆಯಲ್ಲಿ ಬಂದರೆ ಹಿನಕಲ್ ಎನ್ನುವ ಈ ಸೆಮಿ ಅರ್ಬನ್ ಊರು ಸಿಗುತ್ತದೆ. ಏನಿಲ್ಲವೆಂದರೂ ಈ ಊರಿನಲ್ಲಿ ಸಾಲಿಡಿದು ಹತ್ತರಿಂದ - ಹದಿನೈದು ಭೀರೇಶ್ವರ ಮಟನ್ -ಚಿಕನ್ ಸ್ಟಾಲ್‌ಗಳಿವೆ. ಬಟ್ಟೆ ಅಂಗಡಿಯ ಮುಂದೆ ಪ್ರದರ್ಶನಕ್ಕೆ ಹಾಕಿರುವ ರೆಡಿಮೇಡ್ ಉಡುಪುಗಳಂತೆ ಒಂದೊಂದು ಅಂಗಡಿಯ ಮುಂದೆಯೂ ಏಳೆಂಟು ಕುರಿಗಳನ್ನೂ, ಹತ್ತಿಪ್ಪತ್ತು ಕೋಳಿಗಳನ್ನೂ ಸದಾ ಸಮಯ ಸುಲಿದು ನೇತು ಹಾಕಿರುತ್ತಾರೆ. ಅವು ಪ್ರತಿ ಹದಿನೈದು ನಿಮಿಷಕ್ಕೆ ಬಿಕರಿಯಾಗುತ್ತಿರುತ್ತವೆ. ಒಂದೊಂದು ಅಂಗಡಿಯಲ್ಲೂ ದಿನಕ್ಕೆ ಇಪ್ಪತ್ತು ಕುರಿಗಳಂತೆ ಮಾರಾಟವಾದರೂ ಹದಿನೈದು ಅಂಗಡಿಯಿಂದ ಮುನ್ನೂರು ಕುರಿಗಳು ಒಂದು ದಿನ ಮಾಂಸವಾಗಿ ಮಾರಾಟವಾಗುತ್ತದೆ. ಅಬ್ಬಾ! ಹಿನಕಲ್ ಎನ್ನುವ ಈ ಅಂಗೈಯಗದ ಊರಿನಲ್ಲಿ ಇಷ್ಟೊಂದು ಮಾಂಸ ಹೇಗೆ ಖರ್ಚಾಗುತ್ತದೆ, ಎಂದರೆ ಇಲ್ಲಿರುವ ಮಟನ್ ಅಂಗಡಿಗಳ ಲೆಕ್ಕದಷ್ಟೇ ಕೇರಳಾಪುರದ ಮಿಲಿಟರಿ ಹೊಟೇಲ್‌ಗಳಿವೆ.
ಕೇರಳಾಪುರದ ಹೊಟೇಲ್‌ಗಳು, ಮಟನ್ ಅಂಗಡಿಗಳು, ಅಷ್ಟೇ ಸಂಖ್ಯೆಯಲ್ಲಿರುವ ಬಾರ್‌ಗಳು, ಎರಡು ಮೂರು ಕ್ಲಿನಿಕ್‌ಗಳು, ನಾಲ್ಕೈದು ಮೆಡಿಕಲ್ ಸ್ಟೋರ್‌ಗಳು ಎಲ್ಲಾ ಸೇರಿಕೊಂಡು ಹಿನಕಲ್‌ಗೆ ಒಂದು ಆಕರ್ಷಕ ಮೆರಗು ಕಲ್ಪಿಸಿದೆ. ಸಂಜೆಯ ವೇಳೆಗೆ ಇಲ್ಲಿನ ಟೆಂಟಿನಲ್ಲಿ ತಮಿಳು ಸಿನೆಮಾ ನೋಡಿ ತೀರ್ಥಂಕರರು ಕನ್ನಡದಲ್ಲಿ ಬೈಯುತ್ತಿರುತ್ತಾರೆ. ಕೇರಳಾಪುರದ ಹೊಟೇಲ್‌ನಲ್ಲಿ ತಲೆಮಾಂಸ, ಬೋಟಿ, ಪರೋಟ ಎಂದೆಲ್ಲಾ ತೊದಲುತ್ತಾ ಅಲ್ಲಿನ ಸಪ್ಲೆಯರ್ ಹುಡುಗರನ್ನು ಮದ್ಯ ತರಲು ಬಾರ್‌ಗಳಿಗೆ ಅಟ್ಟುತ್ತಿರುತ್ತಾರೆ. ಮಧ್ಯೆ ಮಧ್ಯೆ ಕುತ್ತೆ ಕನ್ವರ್‌ಲಾಲ್ ಎನ್ನುವ ಬೈಗುಳ. ಇದೇನಿದು ಕುತ್ತೆ ಕನ್ವರ್ ಲಾಲ್ ಎಂದರೆ, ಇದು ಮೈಸೂರಿನ ಎಸ್‌ಎಫ್‌ಎಮ್ ಬಿತ್ತರಿಸುವ ಒಂದು ನಿಮಿಷದ ತಮಾಷೆ ಕಾರ್ಯಕ್ರಮ. ಕಾಂಡೊಂ ಕಾಮಾಕ್ಷಿಯಂತೆ ಇದೂ ನಗೆ ಉಕ್ಕಿಸುವ ಕಾರ್ಯಕ್ರಮ ಎಂದು ಎಸ್‌ಎಫ್‌ಎಂನವರು ಹೇಳುತ್ತಾರೆ. ಆದರೆ ಇದನ್ನು ಹೇಳಿದವರೇ ನಗಬೇಕೇ ಹೊರತು ಕೇಳಿದವರು ನಗುವುದಿಲ್ಲ. ಆದರೆ ಕುಡುಕರ ಬಾಯಲ್ಲಿ ಇದನ್ನು ಕೇಳುವಾಗ ನಗು ಬರುತ್ತದೆ. ಎಸ್‌ಎಫ್‌ಎಂನ ರೇಡಿಯೋ ಜಾಕಿಣಿಗಳ ಹೆಸರಿಡಿದು ಇವರು ಓ ಮೈ ಡಾರ್ಲಿಂಗ್ ಎನ್ನುತ್ತಿರುತ್ತಾರೆ.
ಅರಕಲಗೂಡು ತಾಲೂಕಿನ ಕೇರಳಾಪುರ ಗ್ರಾಮದ ಬಹುತೇಕರು ಮೈಸೂರಿಗೆ ಬಂದು ಕೇರಳಾಪುರದ ಹಿಂದೂ ಮಿಲಿಟರಿ ಹೊಟೇಲ್‌ಗಳನ್ನು ನಡೆಸುತ್ತಿದ್ದಾರೆ. ಆ ಊರಿನವರು ಈ ರೀತಿ ನಗರಗಳಲ್ಲಿ ಹೊಟೇಲ್‌ಗಳನ್ನು ನಡೆಸುತ್ತಿರುವುದರಿಂದ ಆ ಹಳ್ಳಿಯ ಬಹುತೇಕ ಹುಡುಗರು ಶಾಲೆ ಬಿಟ್ಟಿದ್ದಾರೆ. ಹತ್ತಿರ ಹತ್ತಿರ ನೂರಿನ್ನೂರು ಹುಡುಗರು ಮೈಸೂರಿನ ಇಂತಹ ಹೊಟೇಲ್‌ಗಳಲ್ಲಿ ಕೆಲಸಕ್ಕಿದ್ದಾರೆ. ತಿಂಗಳಿಗೆ ಮೂರು ಸಾವಿರ ರೂಪಾಯಿ ಕೊಡ್ತಾರೆ ಸಾರ್, ದಿನಾಲೂ ಮಟನ್ ಊಟ, ಒಂದು ವರ್ಷದ ಕಾಸು ಮೊದಲೇ ಕೊಡುತ್ತಾರೆ, ಆರು ತಿಂಗಳಿಗೊಮ್ಮೆ ಊರಿಗೆ ಹೋಗೋದು ಎಂದು ಹಿನಕಲ್‌ನಲ್ಲಿ ಇಂತದೇ ಹೊಟೇಲ್ ಒಂದರಲ್ಲಿ ಎಂಟು ವರ್ಷದಿಂದ ಕೆಲಸಕ್ಕಿರುವ ಇಪ್ಪತ್ತು ವರ್ಷದ ಮಹಾದೇವ ಹೇಳಿದ್ದ.
ಮೂರನೆಯ ತರಗತಿಯ ವರೆಗೆ ಓದಿರುವ ಮಹಾದೇವ ಈಗ ನನ್ನ ಗೆಳೆಯನಾಗಿದ್ದಾನೆ. ಅವನ ದಿನಚರಿ ಕೇಳುವಾಗ ಬೇಜಾರಾಗುತ್ತದೆ. ರಾತ್ರಿ ಹನ್ನೆರಡಕ್ಕೆ ಮಲಗುವ ಈ ಹುಡುಗ ಮೂರು ಗಂಟೆಗೆ ಎದ್ದು ಕಲಸ ಪ್ರಾರಂಭಿಸುತ್ತಾನೆ. ಮೂರು ತಾಸು ಗುಬ್ಬಿ ನಿದ್ರೆ. ಈ ಕೆಲಸ ನಿನಗೆ ಬೇಜಾರಾಗಲ್ವಾ ಎಂದರೆ, ಯಾಕೆ ಬೇಜಾರಾಗಬೇಕು ಸಾರ್, ನಮ್ಮೂರಿನಲ್ಲಿ ಹುಡುಗರು ಯಾರೂ ಇಲ್ಲ, ಎಲ್ಲರೂ ಕೇರಳಾಪುರದ ಹೊಟೇಲ್‌ಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ ಎನ್ನುತ್ತಾನೆ. ಮಹಾದೇವನ ಬದುಕು, ಆತನ ಕನಸು ಎಲ್ಲವನ್ನೂ ಕೇಳುವಾಗ ಈ ಕೇರಳಾಪುರಕ್ಕೊಮ್ಮೆ ಹೋಗಿ ಬರಬೇಕು ಎನಿಸುತ್ತದೆ. ಊರಿಗೆ ಹೋಗಲು ಒಮ್ಮೆ ಆತ ಸಾಲವಾಗಿ ಪಡೆದಿದ್ದ ಐವತ್ತು ರೂಗಳಿಗೆ ಪ್ರತಿಯಾಗಿ ನನ್ನನ್ನು ಎಲ್ಲಿ ನೋಡಿದರೂ ನಮಸ್ಕಾರ ಎನ್ನುತ್ತಿರುತ್ತಾನೆ.
ಈ ಹೊಟೇಲ್‌ನಿಂದ ಸ್ಪೀಕರ್ ಹರಿದು ಹೋಗುವಂತೆ ಅರಚಿಕೊಂಡು ಬರುವ ನಿನ್ನ ಪೂಜೆಗೆ ಬಂದೆ ಮಾದೇಶ್ವರ... ಎನ್ನುವ ಜಾನಪದವೂ ಅಲ್ಲ, ಕ್ಲಾಸಿಕ್ಕೂ ಅಲ್ಲದ ರಘು ದೀಕ್ಷಿತ್ ಹಾಡನ್ನು ಕೇಳಿಸಿಕೊಳ್ಳುತ್ತಾ, ನಾನು ಸುಮ್ಮನೆ ನಡೆದು ಹೋಗುತ್ತೇನೆ. ಮಹಾದೇವ ಒಳಗಿದ್ದರೆ ಕೈ ಬೀಸುತ್ತಾನೆ.
Subscribe to:
Post Comments (Atom)
12 comments:
ಜೋಮನ್ ಅವರೆ,
ಅದೆಷ್ಟೋ ಮುಗ್ಧ ಮಕ್ಕಳು ಪುಡಿಗಾಸು ಹಾಗೂ ಹಿಡಿ ಅನ್ನಕ್ಕಾಗಿ ಹೋಟೆಲ್ ಹಾಗೂ ಕೆಲವು ದೊಡ್ಡ(!)ವರ ಮನೆಯಲ್ಲಿ ಗುಲಾಮರಂತೆ ದುಡಿಯುತ್ತಿರುತ್ತಾರೆ. ಹೋಟೆಲಿಗೆ ಹೋಗೋದೇ ಕಡಿಮೆ. ಅಪ್ಪಿ ತಪ್ಪಿ ಹೋಗುವ ಸಂದರ್ಭ ಬಂದರೂ ಅಲ್ಲಿರುವ ಚಿಕ್ಕ ವಯಸ್ಸಿನ ಸಪ್ಲೈಯರ್ಸ್ ಕಂಡು ತುಂಬಾ ಹಿಂಸೆಯಾಗೊತ್ತೆ. ಏನನ್ನೂ ತಿನ್ನುವುದೇ ಬೇಡ ಎಂದೆನಿಸಿ ಬಿಡುತ್ತದೆ. ಅವರಿಗೇನಾದರೂ ಕೊಡ ಹೋದರೆ ಯಜಮಾನರ ಬಿರುಗಣ್ಣು ಆ ಎಳೆಯರನ್ನು ತಿವಿಯುತ್ತದೆ. ಮುಂದಿನ ಪರಿಣಾಮ ಊಹಿಸಿಯೋ ಏನೋ ಅವರೇ ಎಷ್ಟೋ ಸಲ ನಿರಾಕರಿಸಿಬಿಡುತ್ತಾರೆ. ನಾವಿರುವ ಸಮಾಜದಲ್ಲೇ ಎಷ್ಟೊಂದು ಅಸಮಾನತೆಗಳಿವೆ ಅಲ್ಲವೇ?!!
ಜೋಮನ್, ಚೆನ್ನಾಗಿದೆ.
ನೀವು ಮೊದಲು ಹಾಕಿದ ಗೋಡೆ ಬರಹಗಳು ತಮಾಷೆಯಾಗಿವೆ. ಇವನ್ನು ಬರೆದವನ ಸೃಜನಶೀಲತೆಗೆ ಮೆಚ್ಚಬೇಕು. ಹೀಗೇ ನಾನೂ ಎಲ್ಲೋ ನೋಡಿದ್ದೆ. "ಸುಖೀ ದಾಂಪತ್ಯಜೀವನಕ್ಕೆ ಶೌಚಾಲಯ ಬಳಸಿ" ಅಂತಾ ! ಅದರ ಅರ್ಥ ಏನು ಅನ್ನೋದು ಇನ್ನೂ ತನಕ ಗೊತ್ತಾಗಿಲ್ಲ ನೋಡಿ.
ಜೋಮನ್...
ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಮತ್ತಷ್ಟು ಸೌಲಭ್ಯ ನೀಡುತ್ತಿದ್ದಾಗಲೂ ಶಾಲೆಗೆ ಹೋಗದ ಬಾಲಕಾರ್ಮಿಕರ ಸಂಖ್ಯೆ ತಪ್ಪುತ್ತಿಲ್ಲ.
ಮಧ್ಯಾಹ್ನ ಸಿಗುವ ಬಿಸಿ ಊಟಕ್ಕಿಂತ ಮಟನ್ ಊಟವೇ ಮೇಲು ಅನ್ನಿಸಿಬಿಟ್ಟಿರಬೇಕು ಈ ಮಕ್ಕಳಿಗೆ.
ಇಂದಿನ ಊಟಗಳಿಸುವ ಅನಿವಾರ್ಯತೆಯಿರುವ ಇಂಥ ಮಕ್ಕಳಿಗೆ ಭವಿಷ್ಯದ ಅರಿವು ಎಲ್ಲಿಂದ ತಾನೆ ಬರಬೇಕು?
ಇಂಥ ಮಕ್ಕಳನ್ನು ನೋಡುವಾಗ ನಿಜಕ್ಕೂ ಖೇದವೆನಿಸುತ್ತದೆ.
ಒಳ್ಳೆಯ ಬರಹ.
ಬರಹ ತುಂಬಾ ಚೆನ್ನಾಗಿದೆ ಜೋಮನ್. ಎಷ್ಟೊಂದು ಮಹದೇವರು ಮಹದೇಶ್ವರರು ನಮ್ಮ ನಡುವೆ ಇದ್ದಾರೆ. ಅವರನ್ನು ಇಷ್ಟು ಚೆನ್ನಾಗಿ ಹೆಕ್ಕಿ, ಗುರುತಿಸಿ, ಬರೆದಿದ್ದು ತುಂಬಾ ಅಪರೂಪ.
ಸೊಗಸಾದ ಬರವಣಿಗೆ. ಥ್ಯಾಂಕ್ಸ್.
- ಪಲ್ಲವಿ ಎಸ್.
ತೇಜಸ್ವಿ ಹೆಗಡೆ,
ಹೌದು ಅವರನ್ನು ನೋಡುವಾಗ ನನಗೂ ಹಾಗೆ ಅನಿಸುತ್ತದೆ. ಆದರೆ ಅಸ್ಸಾಯಕನಾಗಿ ಮರಳುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶ್ರೀದೇವಿ
ಶ್ರಿದೇವಿಯವರಿಗೆ ನಮಸ್ಕಾರ, ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ್ಗ ಬರುತ್ತಲಿರಿ..
ಮಧು,
:) ಇನ್ನೊಂದಿಷ್ಟು ಗೋಡೆ ಬರಹಗಳನ್ನು ಕಲೆಹಾಕೋಣ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶಾಂತಲಾ ಭಂಡಿ,
ಈ ರೀತಿ ಬರೆದ ಮೇಲೆ, ಬರೆಯುವುದು ಬಿಟ್ಟು, ನನ್ನಿಂದ ಏನೂ ಮಾಡಲಾಗುತ್ತಿಲ್ಲವಲ್ಲ ಅಂತಾ ನನಗೂ ಅನಿಸುತ್ತದೆ. ಆದರೇನು ಮಾಡುವುದು? ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
ಪಲ್ಲವಿ,
ಪಲ್ಲವಿಯವರಿಗೆ ನಮಸ್ಕಾರ. ಮಳೆ ಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ್ಗ ಬರುತ್ತಲಿರಿ.
"ತಾರೆ ಜಮೀನ್ ಪರ್" ಸಿನೆಮಾದಲ್ಲಿ ಆಮೀರ್ ಖಾನ್ ಇಂತದ್ದೇ ಮಹದೇಶ್ವರನೊಬ್ಬನ ಪಕ್ಕದಿ ಕೂರಿಸಿಕೊಂಡು ಟೀ ಕುಡಿಯುತ್ತಾ ನಮ್ಮ ಕಂಗಳಲ್ಲಿ ನೀರು ತರಿಸಿದ್ದು ನೆನಪಾಯ್ತು...
ಒಳ್ಳೆಯ ಬರಹ..ಥ್ಯಾಂಕ್ಸ್.
jomon nimma lekhan chennagide.. hige barita eri.. good luck
ಜೋಮನ್ ರಿಗೆ ನಮಸ್ಕಾರ.
ನಿಮ್ಮ ಲೇಖನ ಓದಿ ನಗು ಬಂತು,....ಹಾಗೆಯೇ ನಿಮ್ಮ ಕಳಕಳಿಯ ಹಿಂದಿನ ನೋವು ನಮ್ಮೆಲ್ಲರದು ಅನಿಸಿತು.
ನಾನು ಬ್ಲಾಗ್ ಲೋಕದ ಹೊಸ ಸದಸ್ಯೆ.
ನಿಮ್ಮ ಅನಿಸಿಕೆ,ತಿದ್ದುಪಡಿಗಳಿಗೆ ಸ್ವಾಗತ.
ಹೀಗೇ ಬರೆಯುತ್ತಿರಿ.
@ ರಂಜಿತ್
ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ್ಗ ಬರುತ್ತಲಿರಿ.
@ ಕನವರಿಕೆ,
ತುಂಬಾ ಥ್ಯಾಂಕ್ಸ್..
@ ಚರಿತ,
ನಮಸ್ಕಾರ. ಮಳೆಹನಿಗೆ ಸ್ವಾಗತ. ಆಗಾಗ್ಗ ಬಂದು ಹೋಗುತ್ತಲಿರಿ. ಪ್ರತಿಕ್ರಿಯೆ ನೋಡಿ ಖುಷಿಯಾಯಿತು.
ಜೋಮನ್ ರವರಿಗೆ ನಮಸ್ಕಾರ ಈ ಬರವಣಿಗೆಯು ನಿಜ ಚಿತ್ರವೆನಿಸಿದರೂ, ಅದರ ಹಿಂದಿನ ನಿಮ್ಮ ಕಳಕಳಿ ಕಾಣುತ್ತದೆ. ನನಗೂ ಹಾಗೆ ಅನ್ನಿಸುತ್ತದೆ. ಈಗಿನ ಸುಮಾರು ಮಕ್ಕಳಿಗೆಲ್ಲಾ ಶಿಕ್ಷಣ ತಪ್ಪಿಹೋಗುತ್ತಿರುವುದು ಚಿಂತೆಗೆ ಕಾರಣವಾಗಿದೆ. good keep it up..
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ನನ್ನ ಮತ್ತೊಂದು ಬ್ಲಾಗ್ ವಿಳಾಸ:
http://camerahindhe.blogspot.com/
ಈ ಬ್ಲಾಗಿನಲ್ಲಿ ಇರುವ ಲೇಖನಗಳು ಕುತೂಹಲಕಾರಿಯು ಹಾಗೂ ನಿಮಗೂ ಇಷ್ಟವಾಗಬಹುದು ಚೆನ್ನಾಗಿದೆ ಅನ್ನಿಸಿದ್ರೆ ಬ್ಲಾಗಿನಲ್ಲಿ ನಾಲ್ಕು ಮಾತು ಬರೆಯಿರಿ.
ಹಾಗೆ ನಿಮ್ಮ ಹಿನಕಲ್ ಊರಿಗೆ ಕ್ಯಾಮೆರಾ ನೇತುಹಾಕಿಕೊಂಡು ಹೋಗೋಣ ಅನ್ನಿಸುತ್ತಿದೆ.
ಶಿವು.ಕೆ
Post a Comment