Wednesday 15 October, 2008

ಮುಗಿದು ಹೋದ ಮೈಸೂರು ದಸರಾ


ಈ ಬಾರಿಯ ಮೈಸೂರು ದಸರಾ ಭರ್ಜರಿಯಾಗಿಯೇ ಮುಗಿಯಿತು. ದಸರಾ ದಿನಗಳಲ್ಲಿ ನಾನು ಸುಮ್ಮನೆ ಮೈಸೂರಿನ ರಸ್ತೆಗಳನ್ನು ಸುತ್ತುತ್ತಿದ್ದೆ. ಎಲ್ಲೆಡೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪನವರ ಕಟೌಟ್‌ಗಳೇ ಕಾಣಿಸಿ ನಾಡ ಹಬ್ಬ ಯಾಕೋ ಇವರಿಬ್ಬರದೇ ಹಬ್ಬವಾಗಿದೆ ಎಂದು ಅನಿಸಿ ದಿವ್ಯ ವಿಷಾದದಲ್ಲಿ ನಿಂತಿದ್ದೆ. ಮೈಸೂರಿನ ಬಸ್‌ಸ್ಟಾಂಡಿನಲ್ಲಿ ಹಳ್ಳಿಗಳಿಂದ ಬಂದ ಜನ ಎಳೆ ಸೌತೆಕಾಯಿ ತಿನ್ನುತ್ತಾ ದೇವನೂರು ಮಹಾದೇವರ ಶೈಲಿಯಲ್ಲಿ, ಹಳೆ ಮೈಸೂರಿನ ಸುಂದರ ಬೈಗುಳಗಳನ್ನು ತೇಲಿಬಿಡುತ್ತಿದ್ದರು. ದಸರಾ ವಿಶೇಷವಾಗಿ ವೋಲ್ವೋ ಬಸ್ಸುಗಳಿಗೆ ಒಂದು ರೂಪಾಯಿ ದರ ಇದ್ದಿದ್ದರಿಂದ ಮಳೆ ಸುರಿಯುತ್ತಿದ್ದರೂ, ಚಳಿ ಇದ್ದರೂ ಸಮಾನ್ಯ ಜನರು ಎಸಿ ಬಸ್ಸಿನಲ್ಲಿಯೇ ನಿಂತುಕೊಂಡು ಪ್ರಯಾಣಿಸುತ್ತಿದ್ದರು. ವರ್ಷಕ್ಕೊಮ್ಮೆ ಸಿಗುವ ಇಂತಹ ಪುಕ್ಕಟೆ ಖುಷಿಗಳನ್ನು ಜನರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬಾರದು ಎನ್ನುತ್ತಾ ನಾನೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಅವರ ನಡುವೆ ನುಸುಳಿಕೊಂಡು ನಿಂತಿದ್ದೆ.

ನೀವು ಮೈಸೂರು ಅರಮನೆಯನ್ನು ನೋಡಿರಬಹುದು. ಈ ಅರಮನೆಯ ಅಂಗಳದಲ್ಲಿ ಇಪ್ಪತ್ತು ವರ್ಷಗಳಿಂದ ಕಸ ಗುಡಿಸುವ ತಾಯಿಯೊಬ್ಬರಿದ್ದಾರೆ. ಒಂಟಿಕೊಪ್ಪಲಿನ ರಾಜಮ್ಮ ಎನ್ನುವುದು ಅವರ ಹೆಸರು. ನಾನು ಅರಮನೆ ಅಂಗಳದಲ್ಲಿ ಎಲ್ಲಿಗೆ ಹೋಗುವುದು ಎಂದು ಗೊತ್ತಾಗದೆ ನಿಂತಿದ್ದಾಗ ಇವರು ಸಿಕ್ಕಿದರು. ಸುಮ್ಮನೆ ಮುಗಳ್ನಕ್ಕಿದ್ದಕ್ಕೆ ಒಂದು ಗಂಟೆ ಪ್ರೀತಿಯಿಂದ ಮಾತನಾಡಿದರು. ತನ್ನಪ್ಪ ತಾನು ಚಿಕ್ಕವಳಿದ್ದಾಗ ಹೆಗಲು ಮೇಲೆ ಕೂರಿಸಿಕೊಂಡು ಜಂಬೂ ಸವಾರಿ ತೋರಿಸುತ್ತಿದ್ದನೆಂದೂ, ಈಗ ಅಪ್ಪ ತೀರಿ ಹೋಗಿ ನಾಲ್ಕು ವರ್ಷವಾಗಿದೆಯೆಂದೂ, ನಾನಿಲ್ಲಿ ದಿನಕ್ಕೆ ಎಪ್ಪತ್ತು ರೂಪಾಯಿಗಳಿಗೆ ದಿನಗೂಲಿ ಮಾಡುತ್ತಿರುವುದಾಗಿ ಹೇಳಿದಳು. ನಾಲ್ವಡಿ ಕೃಷ್ಣರಾಜರು ಒಡೆಯರು ಮೈಸೂರಿನ ರಾಜರಾಗಿದ್ದಾಗ ನನ್ನ ಚಿಕ್ಕಪ್ಪನೊಬ್ಬರು ಸೈನ್ಯದಲ್ಲಿದ್ದರೆಂದೂ ಆಗ ಅವರ ಬಳಿ ಇದ್ದ ಖಡ್ಗವೊಂದು ಈಗಲೂ ಮನೆಯಲ್ಲಿ ಇದೆಯೆಂದು ಹೇಳಿದಳು. ನಂತರ ನೀವು ಇಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತೀರಲ್ಲಾ ನನಗೆ ತುಂಬಾ ಖುಷಿಯಾಯಿತು ಎಂದು ಹೇಳಿ ತನಗೆ ತರಿಸಿದ್ದ ಚಹಾದಲ್ಲಿ ಅರ್ಧ ಲೋಟ ನನಗೆ ಕೊಟ್ಟಳು. ಆವತ್ತು ನನಗೆ ಎಷ್ಟು ಖುಷಿಯಾಗಿತ್ತು ಎಂದರೆ ಶ್ರೀಕಂಠ ದತ್ತ ಒಡೆಯರೇ ಚಹಾಕ್ಕೆ ಕರೆದಿದ್ದರೂ ಇಷ್ಟು ಸಂತೋಷ ಪಡುತ್ತಿರಲಿಲ್ಲ.

ರಾಜಮ್ಮನ ಕಥೆಯನ್ನು ಕೇಳಿಸಿಕೊಂಡು ಅರಮನೆಯ ಮುಂಬಾಗಕ್ಕೆ ಬಂದರೆ ನಾಲ್ವರು ಬೌದ್ಧ ಬಿಕ್ಷುಗಳು ಬಿಸಿಲು ಕಾಯಿಸಿಕೊಳ್ಳುತ್ತಾ, ಪಪ್ಪಾಯಿ ಹಣ್ಣು ತಿನ್ನುತ್ತಿದ್ದರು. ಬೈಲುಕುಪ್ಪೆಯ ಟಿಬೆಟಿಯನ್ ಕ್ಯಾಂಪಿನಿಂದ ದಸರಾ ನೋಡಲು ಮೈಸೂರಿಗೆ ಬಂದಿದ್ದ ಅವರ ಸುತ್ತ ಒಂದಿಷ್ಟು ಜನ ಸೇರಿ ಪೊಟೋ ತೆಗೆಸಿಕೊಳ್ಳಲು ಪೀಡಿಸುತ್ತಿದ್ದರು. ಬುದ್ದನ ಶಾಂತಿಯನ್ನೂ, ಪ್ರೀತಿಯನ್ನೂ ಮನಸ್ಸಿನಲ್ಲಿ ತುಂಬಿಕೊಂಡಿದ್ದ ಅವರು ಸ್ವಲ್ಪವೂ ಬೇಸರಿಸಿಕೊಳ್ಳದೆ ಎಲ್ಲರೊಂದಿಗೆ ಫೊಟೋ ಹೊಡಿಸಿಕೊಳ್ಳುತ್ತಿದ್ದರು. ಅವರೆಲ್ಲರೂ ಹೊರಟು ಹೋದ ನಂತರ, ಕಲಸಾಂಗ್, ಕುಂಡಮ್, ನವಾಂಗ್, ಗೊಬಾ ಎನ್ನುವುದು ತಮ್ಮ ಹೆಸರೆಂದೂ ಆ ಹೆಸರಿನ ಅರ್ಥ ಏಕಾಗ್ರತೆ, ಐಶ್ವರ್ಯ, ಪ್ರೀತಿ ಮತ್ತು ಧನಾತ್ಮಕತೆ ಎಂದೂ ಹೇಳಿದರು. ನೋಡಲೂ ಹಾಗೆಯೇ ಇದ್ದರು. ಈ ಮೈಸೂರನ್ನು ಆಳಿದ ಒಡೆಯರು ಯಾರೆಂದು ನಿಮಗೆ ಗೊತ್ತಾ ಎಂದು ಕೇಳಿದರೆ ಅವರು ನಕ್ಕು, ಅದೆಲ್ಲಾ ತಮಗೇನೂ ಗೊತ್ತಿಲ್ಲವೆಂದೂ, ದಲಾಯಿಲಾಮ ನಮ್ಮ ಗುರುವೆಂದೂ ಹೇಳಿದರು. ಟಿಬೆಟನ್ನರ ಮೇಲೆ ಚೀನಾ ನಡೆಸುತ್ತಿರುವ ಆಕ್ರಮಣದ ಕುರಿತು ಕೇಳೋಣವೆಂದರೆ, ಅವರು ಅದನ್ನೆಲ್ಲಾ ಆಗಲೇ ಮರೆತವರಂತೆ ಪಪ್ಪಾಯಿ ಹಣ್ಣು ತಿನ್ನುತ್ತಿದ್ದರು.

ಸರಿ, ಚಾಮುಂಡಿ ಬೆಟ್ಟವನ್ನೂ ಹತ್ತಿ ಬಿಡೋಣವೆಂದು ಅಲ್ಲಿಗೆ ಹೊರಟರೆ, ಚಾಮುಂಡಿದೇವಿಯ ಸನ್ನಿಧಾನದಲ್ಲಿ ಚೀನಾದ ಫಾಲೂನ್ ದಾಫಾ ಕಾರ್ಯಕರ್ತರು ಶಾಂತವಾಗಿ ಹಾಡುತ್ತಿದ್ದರು. ಆ ಹಾಡು ಅಲೆ ಅಲೆಯಾಗಿ ತೇಲಿ ಬಂದು ಬೆಟ್ಟದ ತಪ್ಪಲಿನವರೆಗೂ ಹೋಗಿ ಲೀನವಾಗುವಂತಿತ್ತು. ಒಂದು ಕಾಲದಲ್ಲಿ ಚೀನಾ ಸರಕಾರವನ್ನೇ ಉರುಳಿಸುವಂತೆ ಮಾಡಿದ್ದ ಈ ಕಾರ್ಯಕರ್ತರಿಗೆ ಇಲ್ಲೇನು ಕೆಲಸ ಎಂದು ಗುಂಪಿನೊಳಗೆ ನುಸುಳಿಕೊಂಡು ನೋಡಿದರೆ, ತೈವಾನ್, ಹಾಂಗ್‌ಕಾಂಗ್, ಚೀನಾದ ಇನ್ನಿತರ ಭಾಗಗಳಿಂದ ಆಗಮಿಸಿದ್ದ ಅವರು ಸತ್ಯ, ಕರುಣೆ, ಸಹನೆಯ ಬಗ್ಗೆ ಹೇಳುತ್ತಿದ್ದರು. ಅಲ್ಲದೆ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ದಸರಾ ಪ್ರದರ್ಶನ ನಡೆಯುವಲ್ಲಿ ತಮ್ಮ ಸಭೆ ನಡೆಯುತ್ತಿದೆಯೆಂದೂ ಅಲ್ಲಿಗೆ ಬಂದರೆ, ದೇಹ ಮತ್ತು ಮನಸ್ಸನ್ನು ದಂಡಿಸಲು ಐದು ವ್ಯಾಯಾಮಗಳನ್ನು ಕಲಿಸುವುದಾಗಿ ಹೇಳುತ್ತಿದ್ದರು. ಸುನೈನಾ ಎನ್ನುವ ಬೆಂಗಳೂರಿನ ಪಿಯುಸಿ ವಿದ್ಯಾರ್ಥಿನಿ ಈ ತಂಡದ ಮುಂಭಾಗದಲ್ಲಿ ನಿಂತು ಬ್ಯಾಂಡ್ ನುಡಿಸುವವರಿಗೆ ಸನ್ನೆಗಳನ್ನು ನೀಡುತ್ತಿದ್ದಳು. ಜೊತೆಗೆ ಫಾಲೂನ್ ದಾಫಾದ ಕಾರ್ಯಕ್ರಮಗಳ ಬಗ್ಗೆ ಕನ್ನಡದಲ್ಲಿ ವಿವರಿಸುತ್ತಿದ್ದಳು.

`ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮಗೇಕೆ ಈ ಆಧ್ಯಾತ್ಮದ ಗೊಡವೆ` ಎಂದು ಸುನೈನಾಳನ್ನು ಕೇಳಿದರೆ, ಆಕೆ , ದೇಹ, ಮನಸ್ಸು ಆತ್ಮದ ಕುರಿತು ಪುಟ್ಟದೊಂದು ಪ್ರವಚನ ಕೊಟ್ಟು ನಿಮ್ಮಂತ ಯುವಕರು ದೇಹವನ್ನೂ, ಮನಸ್ಸನ್ನೂ ಶುದ್ಧೀಕರಿಸಲು ದೊಡ್ಡಕೆರೆ ಮೈದಾನಕ್ಕೆ ಬರಬೇಕೆಂದಳು. ಜೊತೆಗೆ ಫಾಲೂನ್ ದಾಫಾದ ಕುರಿತು ಒಂದಿಷ್ಟು ಪಾಂಪ್ಲೆಟ್ ಕೊಟ್ಟು ಓದಿಕೊಳ್ಳುವಂತೆ ಹೇಳಿದಳು. ನಾನು ಅಲ್ಲೇ ಪಕ್ಕದಲ್ಲೇ ನಿಂತಿದ್ದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಒಬ್ಬರಿಗೆ ಇವೆರಲ್ಲಾ ಯಾರು ಎಂದು ಏನೂ ಗೊತ್ತಾಗವನಂತೆ ಕೇಳಿದರೆ, ಅವರು `ನೋಡು ಮಗು, ಇವರು ಟಿಬೆಟನ್ನರು, ಚೀನಾದವರು, ಧ್ಯಾನ ಕಲಿಸಲು ಮೈಸೂರಿಗೆ ಬಂದಿದ್ದಾರೆ, ಪಾಂಪ್ಲೆಟ್ ಕೊಟ್ಟಿದ್ದಾರಲ್ಲಾ ಓದಿಕೋ` ಎಂದು ನನ್ನನ್ನು ಓಡಿಸಿದರು.

ನನಗೆ ಎಲ್ಲಿ ಹೋದರು ಇಂತಹ ಒಳ್ಳೆಯ ಜನರೇ ಸಿಗುತ್ತಾರಲ್ಲಾ ಎಂದುಕೊಳ್ಳುತ್ತಾ, ಮೈಸೂರಿನ ರಸ್ತೆಗಳನ್ನು ಅಡ್ಡಾದಿಡ್ಡಿ ಸುತ್ತಿ ಆಫೀಸಿಗೆ ತಡವಾಗಿ ಬಂದು ಸಂಪಾದಕರಿಂದ ಸಣ್ಣಗೆ ಬೈಯಿಸಿಕೊಂಡು ಎರಡು ದಸರಾ ವಿಶೇಷ ಸುದ್ದಿಗಳನ್ನು ಟೈಪಿಸಿ ಕೆಂಡಸಂಪಿಗೆಯಲ್ಲಿ ಹಾಕಿದ್ದೆ.

12 comments:

Anonymous said...

ಚೆನ್ನಾಗಿ ಬರೆದಿದ್ದೀರ. ಒಂಟಿಕೊಪ್ಪಲಿನ ರಾಜಮ್ಮ ಕುರಿತು ಓದಿ ಖುಷಿಗೊಂಡೆ. ಆದರೆ ಈಗ ಹೆಸರಿಗೆ ಮಾತ್ರ ದಸರೆಯಾಗಿದೆ ಅಲ್ವಾ?
"ನನಗೆ ಎಲ್ಲಿ ಹೋದರು ಇಂತಹ ಒಳ್ಳೆಯ ಜನರೇ ಸಿಗುತ್ತಾರಲ್ಲಾ ..." ಬಹುಶಃ ನೀವು ಮಾನವನಾಗಿ ಹುಟ್ಟಿದ ಮೇಲೆ..ನಿಜವಾದ ಮನುಷ್ಯರನ್ನು ನೋಡಿಲ್ಲ ಅನಿಸುತ್ತೆ!!
-ಒಲವಿನಿಂದ
ಚಿತ್ರಾ

Rafi n Friends said...

mugidu hoda dasara cheenagitu joman. rafi

ಚರಿತಾ said...

good write up jomon.

ಆದ್ರೆ,..ಯಾಕೋ ಆ ’ಒಳ್ಳೆಯ’ ಜನರೊಂದಿಗೆ ನಾನು ಸ್ನೇಹ ಬೆಳೆಸೋ ಮುಂಚೆ ಗಡಿಬಿಡಿಯಲ್ಲಿ ಲೇಖನ ಮುಗಿಸೇಬಿಟ್ರಿ...!!... :)

shivu.k said...

ರಾಜಮ್ಮನ ಕಥೆ ಚೆನ್ನಾಗಿದೆ. ಇನ್ನಷ್ಟು ರಾಜಮ್ಮರನ್ನೂ ಹುಡುಕಿ. Thanks.

ಶಿವು.ಕೆ.

Supreeth.K.S said...

ಬರಹ ಚೆನ್ನಾಗಿದೆ ಸರ್... ಎಲ್ಲಿ ಹೋದರೂ ನಿಮಗೆ ಒಳ್ಳೆಯ ಜನರೇ ಸಿಕ್ಕುತ್ತಾರೆ ಎಂದಿರಿ... ಜನರು ಕೇವಲ ಪ್ರತಿಬಿಂಬಗಳು ಮಾತ್ರ ನಿಮ್ಮ ಕನ್ನಡಿ ಸ್ವಚ್ಛವಾಗಿದೆ ಅಂತಲೇ ಅರ್ಥ.
ನಮ್ಮ ಸ್ವಚ್ಛ ಕನ್ನಡಿಯ ಹುಡುಗನನ್ನು ಬೈಬೇಡಿ ಅಂ ಸಂಪಾದಕರಿಗೆ ಮನವಿ ಮಾಡಲು ನಾನು ತಯಾರು!

ಹರೀಶ್ ಕೇರ said...

ha ha ha.
maja bantu.

jomon varghese said...

@ ಚಿತ್ರಾ,
ನಿಜವಾದ ಮನುಷ್ಯರು ಹೇಗಿರುತ್ತಾರೆ, ನನಗೂ ತಿಳಿಯುವ ಕುತೂಹಲವಿದೆ. ನಿಮ್ಮ ಕಣ್ಣಿಗೆ ಬಿದ್ದರೆ ನನಗೂ ತಿಳಿಸಿ. ನಾನೂ ಹುಡುಕುತ್ತಾ ಇದೀನಿ. ಪ್ರತಿಕ್ರಿಯೆಗೆ ಧನ್ಯವಾದಗಳು.

@ ರಫಿ ಮತ್ತು ಗೆಳೆಯರಿಗೆ
ಧನ್ಯವಾದಗಳು ರಫೀಕ್, ಬರುತ್ತಲಿರಿ.

@ ಚರಿತಾ,
ಹೌದು, ಇನ್ನೊಂದಿಷ್ಟು ಬರೆಯಬೇಕಿತ್ತು ಅಂತ ನಂತರ ನನಗೂ ಅನ್ನಿಸಿತ್ತು. ಆದರೆ ಇದು ಅಂತರ್ಜಾಲ ಓದಿನ ಮಿತಿಯೂ ಇರಬಹುದೇನೋ. ಪ್ರತಿಕ್ರಿಯೆ ನೋಡಿ ಖುಷಿಯಾಯಿತು.
@ ಶಿವು
ಪ್ರತಿಕ್ರಿಯೆಗೆ ಧನ್ಯವಾದಗಳು. ಎಷ್ಟೋ ಜನ ಹಾಗೆ, ಯಾರಿಗೂ ಗೊತ್ತಿಲ್ಲದೆ ತಮ್ಮಷ್ಟಕ್ಕೆ ತಾವು ಬದುಕುತ್ತಿರುತ್ತಾರೆ, ಸುಮ್ಮನೆ ಅವರ ಮುಂದೆ ಕುಳಿತು ಇಂತಹ ಕಥೆಗಳನ್ನು ಕೇಳಿಸಿಕೊಳ್ಳಬೇಕೆನಿಸುತ್ತದೆ.

@ ಸುಪ್ರೀತ್
ನಿಮ್ಮ ಸಹೃದಯ ಓದು, ಪ್ರೀತಿ, ಪ್ರತಿಕ್ರಿಯೆಗೆ ಧನ್ಯವಾದಗಳು. ನಮ್ಮ ಸಂಪಾದಕರ ಮುಂದೆ ಇನ್‌ಪ್ಲೂಯೆನ್ಸ್ ನಡೆಯುವುದಿಲ್ಲ ಕಣ್ರೀ.

ಚಿತ್ರಾ said...

ಚೆನಾಗಿ ಬರ್ದಿದೀರಾ ಸಾರ್!

ನಿಜ, ರಾಜಮ್ಮನಂಥ ನಿರಾಳ ಮನಸ್ಸಿನ ಸಾಮಾನ್ಯ ಜನರ ಜೊತೆಗೆ ಬೆರೆತು ಮಾತನಾಡುವಾಗಿನ ಖುಷಿ ಶ್ರೀಕಂಠದತ್ತರ ಜೊತೆ ಬೆಳ್ಳಿ ಲೋಟದಲ್ಲೇ ಚಹಾ ಕುಡಿದರೂ ಸಿಕ್ಕದು.ಅಲ್ಲವೆ?

ನೀವೇ ಅದೃಷ್ಟವಂತರು ಕಣ್ರೀ, ಒಳ್ಳೆ ಜನರು ಕಾಣ ಸಿಗುವುದೇ ಅಪರೂಪವಾಗಿರುವಾಗ ನಿಮಗೆ ಹೋದಲ್ಲೆಲ್ಲಾ ಒಳ್ಳೆ ಜನರೇ ಸಿಗ್ತಿದಾರೆ ! ನಿಜವಾಗ್ಲೂ ನೀವೂ ಸಹ ಒಳ್ಳೆಯವರೇ ಆಗಿರ್ಬೇಕು ಅಂತ ನನ್ನ ಅನುಮಾನ :))
ಅಂದಹಾಗೇ , ದೊಡ್ಡ ಕೆರೆ ಮೈದಾನಕ್ಕೆ ಹೋಗಿದ್ರೇನ್ರೀ?

Anonymous said...

ಅದೆಷ್ಟು ಚಂದ ಬರೀತೀರಿ ಮಾರಾಯರೆ, ಸುನೈನಾ ವಾಪಾಸು ಬೆಂಗ್ಳೂರಿಗೆ ಬಂದ್ಲಂತೆ , ಗೊತ್ತಾಯ್ತಾ?

jomon varghese said...

@ ಚಿತ್ರಾ,
ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ಅನುಮಾನ ಬೇಡ, ಅಲ್ಪ ಸ್ವಲ್ಪ ಒಳ್ಳೆಯತನವೂ ಇದೆ. ನನ್ನ ಆತ್ಮವನ್ನು ಸ್ವರ್ಗಕ್ಕೆ ಹೋದ ನಂತರ ಶುದ್ಧೀಕರಣಕ್ಕೆ ಒಳಪಡಿಸುತ್ತೇನೆ. ಆದ್ದರಿಂದ ದೊಡ್ಡಕರೆ ಮೈದಾನಕ್ಕೆ ಹೋಗಿಲ್ಲ.:)

@ ಪ್ರಿಯಾ,
ಅದೆಷ್ಟು ಚೆಂದ ಪ್ರತಿಕ್ರಿಯಿಸುತ್ತೀರಿ ಮಾರಾಯರ್ರೆ, ಸುನೈನಾ ನಿಮಗೆ ಸಿಕ್ಕಿದರೆ ನನ್ನ ಆತ್ಮ ಈಗ ಶುದ್ಧವಾಗಿದೆ ಅಂತ ಹೇಳಿ.:)

Anonymous said...

ಪ್ರೀತಿಯ ಜೋಮನ್,

ನಿಮ್ಮ ಬರೆಹಗಳನ್ನು ನೋಡ್ತಾ ಇದ್ದೇನೆ. ಸಖತ್ತಾಗಿದೆ. ನಿಮ್ಮ ಇಷ್ಟದ ಕ್ಷೇತ್ರವೇ ನಿಮ್ಮನ್ನು ಹುಡುಕಿಕೊಂಡು ಬಂದ ಹಾಗಿದೆ. ತುಂಬಾ ಇಷ್ಟ ಪಡುವ ವಿಷಯವೇ ಉದ್ಯೋಗದಲ್ಲೂ ದೊರೆಯುವುದು ಅನ್ಯತ್ರ ಅಲಭ್ಯವಾದ ಅದೃಷ್ಟ.

ಹೀಗೇ ಮುಂದುವರಿಸಿ
ಶುಭವಾಗಲಿ
-ಅವಿನಾಶ್

jomon varghese said...

@ ನಿಮ್ಮ ಪ್ರತ್ರಿಕ್ರಿಯೆ ನೋಡಿ ತುಂಬಾನೆ ಖುಷಿಯಾಯಿತು.

ನಮ್ಮ ಜೀವನದಲ್ಲಿ ನಾವು ತುಂಬಾ ಪುಣ್ಯವಂತರಾಗಿದ್ದರೆ ನಮಗೆ ಎರಡು ವಸ್ತುಗಳು ಸಿಗುತ್ತವೆಯಂತೆ. ಒಂದು- ನಿಮ್ಮ ಇಡೀ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಮಾಡುವಂತ ಒಂದು ಕೆಲಸ ಮತ್ತೊಂದು ಆ ಕೆಲಸದಿಂದ ನಮಗೆ ದೊರೆಯುವ ಆತ್ಮತೃಪ್ತಿ. ಮಳೆಹನಿಗೆ ಆಗಾಗ್ಗ ಬರುತ್ತಲಿರಿ. ಸ್ವಾಗತ.