Monday, 29 December 2008

ಕೆಲಸವಿಲ್ಲದೇ ಕಳೆದ ಒಂದು ತಿಂಗಳು

ಆರ್ಥಿಕ ಮುಗ್ಗಟ್ಟಿನಿಂದ ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೇ ತಮ್ಮ ಉದ್ಯೋಗಿಗಳನ್ನು ನೋಟೀಸು ಕೂಡ ಕೊಡದೆ ತೆಗೆದುಹಾಕುತ್ತಿರುವಾಗ, ಕೆಲಸದಲ್ಲಿರುವವರು ತಮ್ಮ ಕೆಲಸ ಯಾವಾಗ ಹೋಗುತ್ತದೆಯೋ ಎನ್ನುವ ಸ್ಥಿತಿಯಲ್ಲಿರುವಾಗ, ಈಗ ಹಗಲು ದೀಪ ಹಚ್ಚಿ ಹುಡುಕಿದರೂ ಒಂದೇ ಒಂದು ಕೆಲಸ ಖಾಲಿ ಇಲ್ಲದಿರುವಾಗ, ನಾನೇನು ಮಾಡಿದೆ ಗೊತ್ತೇ? ನನ್ನ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಹೋಗಿದ್ದೆ. ನಿನಗೇನು ಹುಚ್ಚು ಹಿಡಿದಿದೆಯಾ? ಅಂತ ನೀವು ಬೈಯಬೇಡಿ. ಈಗಾಗಲೇ ಸಾಕಷ್ಟು ಜನ ಇದಕ್ಕಿಂತಲೂ ಚೆನ್ನಾಗಿಯೇ ನನ್ನನ್ನು ಬೈದಿದ್ದಾರೆ. `ಈಗ ನನಗೆ ಕೆಲಸ ಇಲ್ಲ ಕಣೋ/ಕಣೇ`ಎಂದು ಹೇಳಿ ಎಲ್ಲರಿಂದಲೂ ಒಂದಿಷ್ಟು ಪ್ರೀತಿ, ಅನುಕಂಪ ಪಡೆಯಬಹುದು ಎಂದು ನಿರೀಕ್ಷಿಸಿದ್ದ ನನಗೆ ಎಲ್ಲರಿಂದಲೂ ಸರಿಯಾಗಿ ಬೈಗುಳ ಸಿಕ್ಕಿತ್ತು. ಜೊತೆಗೆ ಹೊಟ್ಟೆ ತುಂಬುವಷ್ಟು ಮಂಗಳಾರತಿ. ನಿನಗೆ ಇನ್ನೊಂದೆರಡು ವರ್ಷ ಕೆಲಸವೇ ಸಿಗುವುದಿಲ್ಲ ಎಂದು ಹೆದರಿಸಿದವರೂ ಇದ್ದಾರೆ.

ನಾನು ಮಾತ್ರ `ದಂಡಿಗೆ ಹೆದರಿಲ್ಲ, ದಾಳಿಗೆ ಹೆದರಿಲ್ಲ, ಇದ್ಯಾವ ಮಹಾ ಕೆಲಸ` ಎನ್ನುವ ರೀತಿಯಲ್ಲಿ ಊರಿನ ದಾರಿ ಹಿಡಿದಿದ್ದೆ. ಒಂದು ತಿಂಗಳು ಯಾರಿಗೂ ಹೇಳದೇ ಕೇಳದೆ ಎಲ್ಲಾದರೂ ಸುತ್ತಲು ಹೋಗಬೇಕೆಂದುಕೊಂಡಿದ್ದೆ. ಒಮ್ಮೆ ಹಿಮಾಲಯಕ್ಕೆ, ಟಿಬೆಟ್ಟಿಗೆ ಹೋಗಿ ಬರಬೇಕು ಎಂದು ಸಹೋದ್ಯೋಗಿ ಜಿತೇಂದ್ರನಿಗೂ ಹೇಳಿದ್ದೆ. ಮನೆಯಲ್ಲಿ ಯಾರಿಗೂ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿರುವ ವಿಷಯ ಹೇಳಲಿಲ್ಲ. ಒಂದು ತಿಂಗಳು ರಜೆ ಹಾಕಿದ್ದೇನೆ ಎಂದಿದ್ದೆ. ಆದರೂ ತಿಂಗಳು ಮುಗಿಯುವುದರೊಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಲ್ಲಪ್ಪಾ ಎನ್ನುವ ಭೀತಿ ಒಳಗೊಳಗೇ ಇಣುಕುತಿತ್ತು. ನಮ್ಮಪ್ಪನಿಗೆ ಮಾತ್ರ ಇವ ಇಷ್ಟು ದಿವಸ ಯಾವತ್ತೂ ರಜೆ ಹಾಕಿ ಊರಿಗೆ ಬಂದವನಲ್ಲ, ಏನಾದರೂ ಆಗಿರಬೇಕು ಎನ್ನುವ ಸಂಶಯ ಮೊದಲ ದಿನವೇ ಹಟ್ಟಿತ್ತು. ಕೇಳಿದಾಗೊಮ್ಮೆ ನಾನು ವಿಷಯ ಮರೆಸುತ್ತಿದ್ದೆ. ಆದರೆ ದೇಶ ಸುತ್ತಲು ಹೋಗುವ ನನ್ನ ಆಸೆ ಕೈಕೊಟ್ಟಿತ್ತು. ಮನೆಯಲ್ಲಿ ಒಂದಿಷ್ಟು ಕೆಲಸ ಇತ್ತು.

ಒಂದು ತಿಂಗಳು ನಾನು ಹುಟ್ಟಿ ಬೆಳೆದ ನಮ್ಮೂರನ್ನು ಹತ್ತಿರದಿಂದ ನೋಡಿದೆ. ನಮ್ಮೂರ ಅಡಿಕೆ ತೋಟದಲ್ಲಿ, ಹಸಿರು ತುಂಬಿದ ಗದ್ದೆಗಳಲ್ಲಿ, ಬೈಗಿನ ಬೆಳಗಿನಲ್ಲಿ, ಮುತ್ತುಗ ಅರಳಿದ ಕಾಡಿನ ದಾರಿಯಲ್ಲಿ ಕಳೆದುಹೋದ ಯಾವುದೋ ವಸ್ತುವನ್ನು ಹುಡುಕುವಂತೆ ನಾನು ಖುಷಿ ಖುಷಿಯಿಂದ ದಿನಗಳು ಕಳೆದೆ. ಒಂದು ತಿಂಗಳು ನನಗೆ ಅಪ್ಯಾಯಮಾನವಾಗಿತ್ತು. ನನ್ನ ಮನಸ್ಸಿನ ಹುಲ್ಲುಗಾವಲಿನಲ್ಲಿ ಬೆಳಕಿನ ಬೀಜಗಳು ಅರಳಿದ್ದವು. ಕಳೆದ ಏಳೆಂಟು ವರ್ಷದಿಂದ ನಾನು ಊರಲ್ಲಿರುವುದು ವರ್ಷದಲ್ಲಿ ಹದಿನೈದೋ, ಇಪ್ಪತ್ತೋ ದಿನ. ನಮ್ಮನೆಯ ಹಿತ್ತಲಿನ ಮಾವಿನ ಗಿಡದಲ್ಲಿ ಕಾಯಿ ಬಿಟ್ಟಿದೆಯಾ ಎನ್ನುವ ವಿಷಯವೇ ನನಗೆ ತಿಳಿಯುವುದಿಲ್ಲ, ಹೀಗಿರುವಲ್ಲಿ ಊರಿನ ಸಮಾಚಾರ ಹೇಗೆ ತಿಳಿಯಬೇಕು? ಆದರೆ ಈ ಒಂದು ತಿಂಗಳು, ನನಗೆ ಅಪರಿಚಿತ ಎನಿಸತೊಡಗಿದ್ದ ನನ್ನೂರು ನನಗೆ ಇನ್ನಷ್ಟು ಹತ್ತಿರವಾಯಿತು. ಜಗತ್ತಿನ ಯಾವುದೇ ಕೆಲಸ ಕೊಡುವ ತೃಪ್ತಿಗಿಂತ ಹೆಚ್ಚಿನ ಖುಷಿಯನ್ನೂ, ಸಂತೃಪ್ತಿಯನ್ನೂ ಅದು ನನಗೆ ನೀಡಿತ್ತು. ಅಸಲಿಗೆ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಊರಿಗೆ ಬಂದಿದ್ದೇನೆ ಎನ್ನುವುದು ನನಗೆ ಮರತೇ ಹೋದಂತಿತ್ತು.

ಕೆಲಸದ ವಿಷಯಕ್ಕೆ ಬರೋಣ. ಕಳೆದ ಒಂದು ವರ್ಷ ನಾನು ನೀವೆಲ್ಲರೂ ಓದಿರಬಹುದಾದ ಕೆಂಡಸಂಪಿಗೆಯಲ್ಲಿ ಉಪಸಂಪಾದಕನಾಗಿದ್ದೆ. ಕಳೆದ ವರ್ಷ ಹೀಗೆಯೇ ಚಳಿಯಿದ್ದ ಡಿಸೆಂಬರಿನ ಒಂದು ದಿನ ನಾನು ಮೈಸೂರಿಗೆ ಬಂದು ಈ ಕೆಲಸಕ್ಕೆ ಸೇರಿಕೊಂಡಿದ್ದೆ. ಮೈಸೂರಿನ ರಸ್ತೆಗಳನ್ನು ಸುತ್ತುತ್ತಾ ಹಾಯಾಗಿದ್ದೆ. ಇದ್ದಕ್ಕಿದಂತೆ ಒಂದು ದಿನ ನನಗೆ ಈ ಕೆಲಸ ಇನ್ನು ಸಾಕು ಅಂತ ಅನಿಸತೊಡಗಿತು. ಕಾರಣವೇನೂ ಇಲ್ಲ, ಹಾಗೆ ಸುಮ್ಮನೆ. ಇನ್ನು ಸಾಕು ಎಂಬ ಅನಿಸಿಕೆ ಗಟ್ಟಿಯಾಗತೊಡಗಿದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಹೋಗಿದ್ದೆ.

ಒಂದು ತಿಂಗಳು ಊರಿನಲ್ಲಿ ಕಳೆದು ಬಂದಿದ್ದೇನೆ. ಬ್ಲಾಗ್ ಕೂಡ ಅಪ್ ಡೇಟ್ ಮಾಡಲಾಗಲಿಲ್ಲ. ಮೇಲ್ ಗಳ ರಾಶಿಯೇ ತುಂಬಿದೆ. ಅಂದಹಾಗೆ ಒಂದು ಖುಷಿಯ ವಿಷಯವಿದೆ. ನಾನೀಗ ನಿರುದ್ಯೋಗಿಯಲ್ಲ, ಒಂದು ಹೊಸ ಕೆಲಸ ಸಿಕ್ಕಿದೆ. ಬೆಂಗಳೂರಿನಲ್ಲಿ. ಉಪಸಂಪಾದಕ. ಹೊಸ ವರ್ಷದ ಮೊದಲ ದಿನ ಹೊಸ ಕೆಲಸಕ್ಕೆ ಸೇರಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಜೊತೆಗೊಂದಿಷ್ಟು ಅನುಕಂಪವೂ ಇರಲಿ ಎನ್ನುವ ಆಸೆ.

18 comments:

ಅಮರ said...

ಹೊಸ ವರುಷ... ಹೊಸ ಕೆಲಸ... ಬದುಕಿನಲ್ಲಿ ಖುಷಿ ತರಲಿ ....
ಶುಭ ಹಾರೈಕೆಗಳೊಂದಿಗೆ
ಅಮರ

shivu.k said...

ಜೋಮನ್,

ಒಂದು ತಿಂಗಳ ನಂತರ ಮತ್ತೆ ನಿಮ್ಮ ಬ್ಲಾಗ್ ನೋಡಿದೆ. ಹೊಸ ಲೇಖನವಿದೆ. ಅದರೆ ಅದು ಲೇಖನವಲ್ಲ ನಿಮ್ಮ ಒಂದು ತಿಂಗಳ ವರದಿ. ಯಾರೇನೆ ಅಂದರೂ, ಹೇಳಿದರೂ ನಾನಂತು ನಿಮ್ಮ ಅಭಿಪ್ರಾಯವನ್ನು ನೂರಕ್ಕೆ ಇನ್ನೂರರಷ್ಟು ಒಪ್ಪುತ್ತೇನೆ. ನಿಮ್ಮ ಕುದುರೆ, ನಿಮ್ಮ ಲಗಾಮು, ನೀವೆ ರಾಜ ನಿಮ್ಮ ಜೀವನಕ್ಕೆ. ಆ ರೀತಿ ನಡೆದುಕೊಂಡಾಗಲೇ ನಿಮ್ಮಲ್ಲಿ ಹೊಸ ಸ್ಪೂರ್ತಿ ಉತ್ಸಾಹ ಹುಟ್ಟಿಕೊಳ್ಳುತ್ತದೆಂದು ನನ್ನ ಅನಿಸಿಕೆ..
೨೦ ದಿನಗಳ ಹಿಂದೆ ನೀವು ಸಿಕ್ಕಾಗ ನನಗೆ ತುಂಬಾ ಖುಷಿಯಾಗಿತ್ತು. ನಿಮ್ಮ ಹೊಸ ಕೆಲಸ ಎಲ್ಲಿ ಎಂದು ನನಗಾಗಲೇ ಹೇಳಿದ್ದೀರಿ. ಮುಂದೆ ಒಳ್ಳೆಯದಾಗಲಿ ಎಂದಷ್ಟೇ ಆರೈಸುತ್ತೇನೆ. ನಂತರ ಏನೆ ಆದರೂ ಬ್ಲಾಗಿನಲ್ಲಿ ಹೇಳುತ್ತಿರಲ್ಲ್ಲಾ! welcome to once agaian !!

ಪ್ರೀತಿಯಿರಲಿ..
ಶಿವು.

Ashok Uchangi said...

ಅಭಿನಂದನೆಗಳು!
ನೀವು ಬ್ಲಾಗ್ ಲೋಕದಿಂದ ಕಣ್ಮರೆಯಾದದ್ದು ಆತಂಕ ತಂದಿತ್ತು.ಕೆಲದಿನಗಳ ಬಳಿಕ ನಿಮ್ಮ ಬಗ್ಗೆ ಸಾಕಷ್ಟು ಮಾಹಿತಿಯೂ ಸಿಕ್ಕಿತ್ತು.
ಇಂತ ಒಂದು ತಿಂಗಳು ನನಗೂ ಸಿಗಬೇಕೆಂಬ ಆಸೆ,ಆದ್ರೆ.....ಛೆ! ಪರಿಸ್ಥಿತಿ...
ನಿಮಗೆ ಇಂತಹ ಅವಕಾಶ ಸಿಕ್ಕಿದ್ದಕ್ಕೆ ಹೊಟ್ಟೆನೂ ಉರಿತಿದೆ.
ಅಶೋಕ ಉಚ್ಚಂಗಿ
http://mysoremallige01.blogspot.com/

Ashok Uchangi said...

ಪ್ರಿಯ ಜೋಮನ್
ನಿಮ್ಮ ಮಳೆಹನಿಯ ಮೊದಲ ಮುತ್ತು ಕೆಂಡಸಂಪಿಗೆ,ಎರಡನೆಯ ಮುತ್ತು ಪ್ರಜಾವಾಣಿ...ಅಂದ್ರೆ ನೀವು..
ಸರೀತಾನೆ?
ಅಶೋಕ ಉಚ್ಚಂಗಿ
http://mysoremallige01.blogspot.com/

ಬಾನಾಡಿ said...

ಹೊಸ ಕೆಲಸಕ್ಕೆ ಅಭಿನಂದನೆಗಳು. ಹೊಸ ವರ್ಷದ ಶುಭಾಶಯಗಳು. ಶುಭ ಹಾರೈಕೆಗಳು.
ಒಲವಿನಿಂದ
ಬಾನಾಡಿ

Jagali bhaagavata said...

ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಜೋಮನ್ ಎಲ್ಲಿ ತಪ್ಪಿಸ್ಕೊಂಡು ಬಿಟ್ರಪ್ಪ ಅಂತ ಯೋಚಿಸ್ತಿದ್ದೆ. ಅಲ್ಲಿ ಕೆಂಡಸಂಪಿಗೆಯಲ್ಲಿ ನೋಡಿದ್ರೆ ಜಿತೇಂದ್ರರದ್ದೇ ಪಾರುಪತ್ಯ. ’ಮನಸಿನ ಒಳಗೊಳಗೇ’ ಸೇರಿಕೊಂಡ ವ್ಯಕ್ತಿಯ ಜೊತೆ ಏನಾದ್ರೂ ಕಿತಾಪತಿ ಮಾಡ್ಕೊಂಡಿರ್ಬೇಕೇನೋ ಅನ್ಕೊಂಡೆ:-)

sunaath said...

ಶುಭಾಶಯಗಳು, ಜೋಮನ್!
ಹೊಸ ವರ್ಷವು ಶುಭವನ್ನು ತರಲಿ.

ಚಿತ್ರಾ said...

ಜೋಮನ್,

ಮೊದಲಿಗೆ , ಹೊಸ ಕೆಲಸಕ್ಕಾಗಿ ಅಭಿನಂದನೆಗಳು !
ಅಲ್ಲಾರೀ,ಈ ಆರ್ಥಿಕ ಮುಗ್ಗಟ್ಟಿನ ಹೊತ್ತಿನಲ್ಲಿ ಇರೋ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಹೊರಟ ನಿಮ್ಮ ಹುಚ್ಚು ಧೈರ್ಯಕ್ಕೆ ಮಂಗಳಾರತಿ ಆಗದೇ ಇರತ್ತಾ? ನಿಮಗೆ ಏನನ್ನೋದು ಸ್ವಾಮಿ ?

ranjith said...

ಪ್ರೀತಿ ವಿಶ್ವಾಸ ೧೦೦% ಇದೆ.ಜತೆಗೊಂದಿಷ್ಟು ಬೆಸ್ಟ್ ಆಫ್ ಲಕ್ಕು ಕೂಡ.

ಆದರೆ ಅನುಕಂಪ ಇಲ್ಲ ಸರ್‍. ಅದ್ಯಾಕೆ ಬೇಕು ಹೇಳಿ?

Harisha - ಹರೀಶ said...

ಹೊಸ ಕೆಲಸ ಸಿಕ್ಕಿದ್ದಕ್ಕೆ ಅಭಿನಂದನೆಗಳು. ಹಾಗೇ ಕೆಲಸ ಚೆನ್ನಾಗಿ ಮಾಡಿ ಶ್ರೇಯಸ್ಸು ಗಳಿಸಿ ಎಂಬ ಹಾರೈಕೆ ಕೂಡ..

Anonymous said...

Joman, Congrats for your new job. I am sure everybody feels to quit the job at one point of time. But rarely people use that time to enjoy the way you enjoyed.How I wish I could do the same. Happy new year and all the best for your new venture Keep writing.

jomon varghese said...

@ Amar
Thank u v much...)

@ Shivu

Thank u v much sir. sigona...:)


@ Ashok Uchangi,

Thank u v much sir... Tumba hogaliddira?

@ Banadi
Thank u v much...)

@ Jagali
Hagenu illa gurugale. im in bangalore with prajavani.

@ sunaath
Thank u v much...)

@ Chitra
Thank u v much madam. bybedi..:)

@ Ranjith

Anukampa beda bidi. preeti vishwasakke thanks.

@ Manasa

welcm to malehani. nimma pratikriyege danyavadagalu.

ಚಿತ್ರಾ ಸಂತೋಷ್ said...

ಓಹ್...ಅನುಕಂಪ ಗಳಿಸೋಣ ಅಂತ ಕೆಲ್ಸ ಕೆಲ್ಸಿ ಇಲ್ಲಾಂತ ಬಡ್ಕೋತಿದ್ಯಾ? ಗೊತ್ತಿರಲಿಲ್ಲ. ನನಗಂತೂ ನಿನ್ ಅನುಕಂಪ ಹುಟ್ಟಲ್ಲ..ಅದ್ಕೆ ಹುಚ್ಚು ಹಿಡಿಯಿತಾ? ಅಂತ ಬೈದಾ ಇದ್ದೆ..ಇರಲಿ..ಕೆಲ್ಸ ಸಿಕ್ತಾ? ಶುಭಾಶಯಗಳು...ಹೊಸ ವರುಷನೂ ನಿನಗೆ ಹರುಷ ತರಲಿ.
-ತುಂಬುಪ್ರೀತಿ,
ಚಿತ್ರಾ

ಸುಪ್ತದೀಪ್ತಿ suptadeepti said...

ಹೊಸ ವರುಷದಲ್ಲಿ ಹೊಸ ಕೆಲಸ, ಹೊಸ ನಗರ(?)ದಲ್ಲಿ ಹೊಸ ಜೀವನ!! ನಿಮಗೆಂದೆಂದೂ ಓದುಗರ ಪ್ರೀತಿ ವಿಶ್ವಾಸ ಇದ್ದೇ ಇದೆ. ಆದ್ರೆ, ಅನುಕಂಪ ಕೇಳುವ ಪರಿಸ್ಥಿತಿ ಬಾರದಿರಲಿ.
ನಿಮ್ಮ ಬರಹಗಳು ಖುಷಿ ಕೊಡುತ್ತವೆ. ಧನ್ಯವಾದ.

ತೇಜಸ್ವಿನಿ ಹೆಗಡೆ said...

ಜೋಮನ್ ಅವರೆ,

ಹೊಸವರ್ಷ್ ಹಾಗೂ ಹೊಸ ಕೆಲಸಕ್ಕೆ ಹಾರ್ದಿಕ ಶುಭಾಶಯಗಳು. ನಾವು ಏನು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ನಾವು ಮಾಡುವ ಕೆಲಸ ನಮಗೆಷ್ಟು ಸಂತೋಷ, ನೆಮ್ಮದಿ ಹಾಗೂ ಸಮಾಧಾನವನ್ನು ಕೊಡುತ್ತದೆ ಎಂಬುವುದೇ ಮುಖ್ಯ. ಇನ್ನು ಅನುಕಂಪ.. ಇದೊಂದು ಯಾವತ್ತೂ ನಿಮಗೆ ಸಿಗದಂತಾಗಲಿ. ಅನುಕಂಪವೇ ಮನುಷ್ಯನ ಆತ್ಮವಿಶ್ವಾಸದ ಶತ್ರು. ಇದನ್ನು ಪಡೆಯದೇ ಸ್ನೇಹ, ಪ್ರೀತಿ, ವಿಶ್ವಾಸ ಹಾಗೂ ಆತ್ಮವಿಶ್ವಾಸ ದಿಂದ ನೀವು ಯಶಸ್ಸನ್ನು ಖಂಡಿತ ಪಡೆಯುವಿರಿ. ಹಾಗೇ ಆಗಲೆಂದು ಹಾರೈಸುವೆ.

jomon varghese said...

ಚಿತ್ರಾ,
:) ಧನ್ಯವಾದಗಳು.

ಸುಪ್ತದೀಪ್ತಿ

ನಮಸ್ಕಾರ. ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ
ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು. ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು. ನೀವು ಎಲ್ಲಿ ಹೋಗಿದ್ದೀರಿ ಎಂದು ಭಾವಿಸಿದ್ದೆ.

ಚಿತ್ರಾ said...

ರೀ ಜೋಮನ್ ,

ಹೊಸ ಆಫೀಸ್ ನಲ್ಲಿ ಕೆಲ್ಸ ಇಷ್ಟೊಂದು ಜಾಸ್ತಿ ಏನ್ರಿ? ಬರೆಯೋದಕ್ಕೇ ಬಿಡುವಿಲ್ಲದಷ್ಟು ? ಇನ್ನೇನು ಮತ್ತೊಂದು ತಿಂಗಳ ರಜೆ ಬರೆದು ಹೋಗಿಲ್ಲ ತಾನೆ?
ಬಹಳ ದಿನಗಳಾದವು ನೀವು ಬರೆಯದೆ . ಬರೀರಿ ಸ್ವಾಮಿ.

Naveen said...

WOW