Tuesday, 29 July 2008

ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ


ಈ ಜಗತ್ತಿನಲ್ಲಿ ಸ್ವರ್ಗವೇನಾದರೂ ಇದ್ದರೆ ಅದು ಇಲ್ಲಿಗೇ ಇಳಿದು ಬಂದಿದೆ ಎಂದು ನಾನು ಸುರಿಯುವ ಮಂಜಿಗೆ ಮುಖವೊಡ್ಡಿ ಸುಖಿಸುತ್ತಿದ್ದೆ. ಅರಳೆಯಂತೆ ತೇಲಿ ಬರುವ ಮೋಡಗಳು ಜೊತೆಗೆ ನಮ್ಮನ್ನೂ ಹೊತ್ತು ಸಾಗುತ್ತಿದ್ದವು. ಅಕ್ಕ ಪಕ್ಕ ಒಬ್ಬರ ಕೈಯನ್ನಿಡಿದು ಒಬ್ಬರು ನಿಂತಿದ್ದರೂ ಪರಸ್ಪರ ಮುಖ ಕಾಣದಷ್ಟು ದಟ್ಟ ಮಂಜು. ಬೀಸಿ ಬರುವ ಗಾಳಿಗೆ ಮಂಜು ಹನಿ ಹನಿಯಾಗಿ ಮುಖದ ಮೇಲೆಲ್ಲಾ ಸುರಿದು ಅಪೂರ್ವ ಅನುಭವ ನೀಡುತ್ತಿದ್ದವು. ಹಿಂದೆಲ್ಲೋ ಚಂದಮಾಮ ಕಥೆಯಲ್ಲಿ ಓದಿದ ಮೋಡದ ಕಥೆಗಳು, ಅದರ ನಡುವಿನಿಂದ ಇಳಿದು ಬರುವ ದೇವದೂತರು, ಯಾವುದೋ ಹೊಟೇಲಿನ ಗೋಡೆಯ ಮೇಲೆ ಕಂಡು, ಮನಸ್ಸಿನಲ್ಲಿ ಇಳಿದು ಹೋಗಿರುವ ಮಂಜಿನ ವಾಲ್‌ಪೋಸ್ಟರ್‌ ಇದೆಲ್ಲವನ್ನೂ ಪ್ರತ್ಯಕ್ಷ ಕಂಡಂತೆ, ಕಂಡೂ ನಂಬಲಾಗದವನಂತೆ ನಾನು ಮರಗಟ್ಟಿದ ಕೈಯನ್ನು ಮತ್ತೊಂದು ಕೈಯಿಂದ ತಿಕ್ಕಿ ತಿಕ್ಕಿ ಬಿಸಿ ಮಾಡಿಕೊಳ್ಳುತ್ತಾ ಫೋಟೋ ತೆಗೆಯುತ್ತಿದ್ದೆ.

ಮೊನ್ನೆ ರಾತ್ರಿ ಹನ್ನೆರಡರ ಸುಮಾರಿಗೆ ಬೆಂಗಳೂರಿನಿಂದ ಬಂದ ತಂಡವೊಂದು, ಯಾವ ಸೂಚನೆಯೂ ಕೊಡದೆ ಮೈಸೂರಿನಲ್ಲಿ ನನ್ನನ್ನು ಗಾಡಿಯಲ್ಲಿ ಎತ್ತಿ ಹಾಕಿ ಗುಂಡ್ಲುಪೇಟೆಯಲ್ಲಿ ಇಳಿಸಿದಾಗಲೇ ನನಗೆ ನಾವು ಹೋಗುತ್ತಿರುವುದು ಗೋಪಾಲಸ್ವಾಮಿ ಬೆಟ್ಟಕ್ಕೆ ಎನ್ನುವುದು ಗೊತ್ತಾಗಿದ್ದು. ಕಸ್ತೂರಿ ಚಾನೆಲ್‌ನ ಏಳು ಜನ ಸ್ನೇಹಿತರು ಸ್ಟಿಂಜ್ ಆಪರೇಷನ್‌ಗೆ ಹೊರಟವರಂತೆ ಪಿಕ್‌ನಿಕ್‌ಗೆ ಬಂದಿದ್ದರು. ಏನ್ ಮಗ ಎಲ್ಲಿಗೆ? ಎಂದು ನಾನು ಕೇಳುವ ಮೊದಲೇ ಗಾಡಿಯಲ್ಲಿ ಹತ್ತಿಸಿಕೊಂಡು ನಂಜನಗೂಡಿನ ಬಳಿ ಇಳಿಸಿ, ಮಳೆಯಲ್ಲಿಯೇ ಹ್ಯಾಪಿ ಬರ್ತ್‌ ಡೆ ಹಾಡಿ ಗೆಳೆಯ ಪ್ರತೀಕ್‌ನ ಹುಟ್ಟು ಹಬ್ಬ ಆಚರಿಸಿದ್ದರು. ಓಹೋ ಹೀಗಾ ಸಮಾಚಾರ ಎಂದು ನಾನು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊತ್ತಿಗೆ, `ಟೆನ್ಷನ್ ತಕೋಬೇಡಿ, ನಾಳೆ ರಾತ್ರಿ ಇದೇ ಹೊತ್ತಿಗೆ ನಿಮ್ಮನ್ನು ತಂದು ಮೈಸೂರಿನಲ್ಲಿ ಓಗೀತೀವಿ ಅಲ್ಲಿಯವರೆಗೆ ಎಂಜಾಯ್‌` ಎಂದು ಕಸ್ತೂರಿಯ BP ಗಣೇಶ್ ವಾರ್ತೆಗೆ ಚಾಲನೆ ನೀಡಿದ್ದರು.

ಗುಂಡ್ಲುಪೇಟೆಯ ಫಠಾನ್ ಲಾಡ್ಜ್‌ನಲ್ಲಿ ಮಲಗಿ ಬೆಳಿಗ್ಗೆ ಆರು ಗಂಟೆಗೇ ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಲಾಗಿತ್ತು. ಹಾಗೇನಾದರೂ ನಾವು ಬೆಳಿಗ್ಗೆಯೇ ಹೋಗಿದ್ದರೆ ಆ ಚಳಿಯಲ್ಲಿ ಸತ್ತು ಹೋಗುತ್ತಿದ್ದೆವೋ ಏನೋ? ಆದರೆ ತಿಂಗಳ ಕೊನೆಯಲ್ಲಿ ಸರಿಯಾಗಿ ವೇತನ ಹೊರಡಿಸುವ ಕಸ್ತೂರಿ ಎಚ್‌ಆರ್ ಯೋಗಾನಂದ್ ಅವರು ತಮ್ಮ ಅತ್ತೆ ಮನೆಗೆ ಹೋಗಿದ್ದರಿಂದ ಬರುವುದು ಲೇಟಾಯಿತು, ಹಾಗಾಗಿ ನಾವು ಬೆಟ್ಟದ ತುದಿ ತಲುಪಿದಾಗ ಮಧ್ಯಾಹ್ನ ಒಂದೂವರೆಯಾಗಿತ್ತು. ಎದುರಿಗೆ ಬರುತ್ತಿದ್ದ ವಾಹನಗಳು ಲೈಟ್ ಹಾಕಿಕೊಂಡು ಇಳಿಯುತ್ತಿದ್ದವು. ಕೆಳಗೆ ಆಳ ಪ್ರತಾಪ. ಮೋಡಗಳು ಕೈಗೆಟುಕುವಂತೆ ಕಿಟಕಿಯ ಪಕ್ಕದಿಂದ ಹಾರಿ ಹೋಗುತ್ತಿದ್ದವು. ಬೆಟ್ಟದಲ್ಲಿ ಅದ್ಭುತವೆನ್ನುವ ವಾತಾವರಣ ಇತ್ತು. ಮಂಜು ಸುರಿಯುತ್ತಿತ್ತು.


ಬೆಟ್ಟದ ತುದಿಯಿಂದ ಹಾಗೆಯೇ ಇಳಿದುಕೊಂಡು ಹೋಗಿ ಬಂಡೆಯೇರಿ ಕುಳಿತೆವು. ಮಾತಿಲ್ಲ, ಕಥೆಯಿಲ್ಲ. ಮಾತನಾಡುವುದಾದರೂ ಏನನ್ನು, ಪಕೃತಿಯ ಸೌಂದರ್ಯವನ್ನೂ, ಸಂತಸವನ್ನೂ ಹನಿ ಹನಿಯಾಗಿ ಬೊಗಸೆಯಲ್ಲಿ ತುಂಬಿಕೊಂಡಂತೆ, ಪ್ರತಿಯೊಬ್ಬರೂ ಖುಷಿಯಲ್ಲಿ ತೇಲಿಹೋಗಿದ್ದರು. ಯಾರಾದರೂ ಭಾವುಕ ಮನಸ್ಸಿನವರು ಇದ್ದರೆ ಅಲ್ಲೇ ಕುಳಿತು ಕವಿತೆಯನ್ನೋ, ಕಥೆಯನ್ನೋ ಬರೆಯುತ್ತಿದ್ದರು. ಯಾರೂ ಎದ್ದು ಬರಲು ತಯಾರಿಲ್ಲ. ಮಂಜುನಾಥ್ ಜೂಟಿ ಎಲ್ಲರ ಒತ್ತಡಕ್ಕೆ ಮಣಿದು ತಂದಿದ್ದ ಬಾಳೆ ಹಣ್ಣು ಆಗಲೇ ಮುಗಿದಿತ್ತು. ಶರತ್ ಗುಂಡ್ಲುಪೇಟೆಯ ಹತ್ತಿರದಲ್ಲೇ ಇರುವ ತನ್ನ ಮನಗೆ ಹೋಗಿ ಬರುವುದಾಗಿ ಹೇಳಿದ. ರಫೀಕ್‌ಗೆ ಆದಷ್ಟು ಬೇಗ ಮದುವೆಯಾಗಿ, ಹನಿಮೂನ್‌ಗೆ ಇಲ್ಲಿಗೆ ಬಾ ಎಂದು ಹೇಳಿದೆವು. ಗಣೇಶ್, ಪ್ರತೀಕ್, ಮಸೂದ್ ಮರವೊಂದನ್ನು ಹತ್ತಿ ಇಲ್ಲೇ ಪ್ಲಾಟ್ ಕೊಂಡರೆ ಹೇಗೆ ಅಂತೆಲ್ಲಾ ಲೆಕ್ಕಾಚಾರ ನಡೆಸುತ್ತಿದ್ದರು.

ನಾನು ಇಷ್ಟೆಲ್ಲಾ ಖುಷಿಯನ್ನು ಒಟ್ಟಿಗೆ ಅನುಭವಿಸುವುದು ಹೇಗೆ ದೇವರೆ ಎಂದುಕೊಳ್ಳುತ್ತಾ, ಫೋಟೋ ತೆಗೆದಷ್ಟೂ ಸಾಕಾಗದವನಂತೆ ಸುಮ್ಮನೆ ಕ್ಲಿಕ್ಕಿಸುತ್ತಲೇ ಇದ್ದೆ. ಬೆಟ್ಟದ ತುದಿಯಲ್ಲಿದ್ದ ಗೋಪಾಲಸ್ವಾಮಿ ಚಳಿಯಲ್ಲಿ ನಡುತ್ತಿದ್ದನೋ ಏನೋ? ದೇವಸ್ಥಾನದ ಹಿಂದೆ ತೇಲಿ ಬರುವ ಬಿಳಿಯ ಮೋಡಗಳನ್ನು ನೋಡಿ, ಖುಷಿ ತಡೆಯಲಾಗದೇ ಹುಡುಗಿಯೊಬ್ಬಳು ಮನಸಾರೆ ನರ್ತಿಸುತ್ತಿದ್ದಳು. ಬೆಟ್ಟ ಇಳಿಯಲು ನನಗಂತೂ ಮನಸ್ಸು ಇರಲಿಲ್ಲ. ನಂತರ ಬಂಡೀಪುರಕ್ಕೆ ಬಂದು ಗಾಡಿಯಲ್ಲಿಯೇ ಕುಳಿತು ಸಫಾರಿ ಅನುಭವಿಸಿದರೂ ಯಾಕೋ ಗೋಪಾಲಸ್ವಾಮಿ ಬೆಟ್ಟ ಮನಸ್ಸಿನಿಂದ ಮರೆಯಾಗುತ್ತಿಲ್ಲ. ನನಗೆ ಆನೆ ನೋಡಬೇಕು ಎಂದೆಲ್ಲಾ ಹಠ ಹಿಡಿದಿದ್ದ ಕಸ್ತೂರಿ ಬಿಪಿ ಗಣೇಶ್ ಅವರಿಗೆ ಕೊನೆಗೂ ಬಂಡೀಪುರ ರಸ್ತೆಯಲ್ಲಿ ಆನೆಯ ಲದ್ದಿ ತೋರಿಸಿ ಸಮಾಧಾನ ಮಾಡಿ ಕರೆತಂದೆವು.

ಹಾಗೆ ಸುಮ್ಮನೆ ನಿಮ್ಮ ಮನಸ್ಸಿಗೆ ತುಂಬಾ ಬೇಸರ ಆಗಿದೆ ಅಂತ ಅನಿಸಿದರೆ ಯಾರಿಗೂ ಹೇಳದೇ ಕೇಳದೇ ಒಮ್ಮೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬನ್ನಿ. ವಾಪಾಸ್ಸು ಬರುವಾಗ ನಿಮ್ಮ ಮನಸ್ಸು ಮಗುವಿನಂತಾಗಿರದಿದ್ದರೆ ನನ್ನ ಕೇಳಿ.





18 comments:

Harisha - ಹರೀಶ said...

ಈಗ ಹೋದರೆ ಮಳೆ ಇರೋದಿಲ್ವೆ?

ಅಲ್ಲಿಗೆ ಹೋಗುವ ರಸ್ತೆ ಹೇಗಿದೆ? ವಾಹನಗಳು ಸರಾಗವಾಗಿ ಹೋಗುವಂತಿದೆಯೋ?

ಮಲ್ಲಿಕಾಜು೯ನ ತಿಪ್ಪಾರ said...

ನನಗೆ ಆನೆ ನೋಡಬೇಕು ಎಂದೆಲ್ಲಾ ಹಠ ಹಿಡಿದಿದ್ದ ಕಸ್ತೂರಿ ಬಿಪಿ ಗಣೇಶ್ ಅವರಿಗೆ ಕೊನೆಗೂ ಬಂಡೀಪುರ ರಸ್ತೆಯಲ್ಲಿ ಆನೆಯ ಲದ್ದಿ ತೋರಿಸಿ ಸಮಾಧಾನ ಮಾಡಿ ಕರೆತಂದೆವು.


Very funny lines joman

And

Lekhan tumba chennagide ninna akshar kusuri adhubat maraya


Mallikarjun

ಕುಕೂಊ.. said...

ಆನೆಯ ಲದ್ದಿ....! ತುಂಬಾ ಚನ್ನಾಗಿತ್ತು. ನನ್ನ ಗೆಳತಿಯೊಬ್ಬಳು ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿ ಬಂದು ಹೇಳಿದ್ದಳು. ನಾಲ್ಕುವಾರದಿಂದ ಹೋಗಬೇಕು ಅಂದುಕೊಂಡರೂ ಇನ್ನೂ ಹೋಗಲಾಗಿಲ್ಲ....ನಿಮ್ಮ ಬರಹ ಓದಿ ಅಲ್ಲಿಗೆ ಹೋಗಿ ಬಂದಷ್ಟು ಖುಷಿ ಆಯಿತು.
ಸ್ವಾಮಿ

Unknown said...

ಲೇಖನ ಓದಿದ ಕೂಡಲೇ ಇನ್ನೊಮ್ಮೆ ಬೆಟ್ಟಕ್ಕೆ ಹೋಗೋ ಮನಸಾಯಿತು. ಆದರೆ ಈ ಜಿಟಿ ಜಿಟಿ ಮಳೆ ಮಾತ್ರ ನನ್ನ ಉತ್ಸಾಹಕ್ಕೆ ತಣ್ಣೀರೆರೆಚಿ ಕೂರಿಸಿದೆ. ಇರಲಿ ಇನ್ನೊಮ್ಮೆ ನೋಡುತ್ತೇನೆ.
-ಜಿತೇಂದ್ರ

ರಾಜೇಶ್ ನಾಯ್ಕ said...

ಜೋಮನ್,
ಮಂಜಿನಲ್ಲಿ ನೆನೆದ ಆನಂದಮಯ ಅನುಭವವನ್ನು ಎಷ್ಟು ಚೆನ್ನಾಗಿ ಬಣ್ಣಿಸಿದ್ದೀರಾ. ಸೂಪರ್ ಲೇಖನ.

ಬ್ರಹ್ಮಾನಂದ ಎನ್.ಹಡಗಲಿ said...

ಫೋಟೋ ತೆಗೆದಷ್ಟೂ ಸಾಕಾಗದವನಂತೆ ಸುಮ್ಮನೆ ಕ್ಲಿಕ್ಕಿಸುತ್ತಲೇ.. ಯಾರ ಫೋಟೋ ಯಾವಾಗ ತೆಗೀತಾ ಇದ್ದಿಪ ಜೋಮಾ....
ಪ್ರವಾಸ ಕಥನ ತುಂಬಾ ಚೆನ್ನಾಗಿದೆ.
ಬ್ರಹ್ಮಾನಂದ. ನಾ. ಹಡಗಲಿ

jomon varghese said...

@ ಹರೀಶ,
ಹೌದು ಈಗ ಮಳೆ ಇದೆ. ರಸ್ತೆಗಳ ಕಥೆ ಹೇಳುವುದೇ ಬೇಡ. ಬೆಟ್ಟ ಕಳಗಿನಿಂದ ಮೇಲಿನವರೆಗಿನ ರಸ್ತೆ ಸರಿಯಾಗಿಲ್ಲ. ವಾಹನ ಸೌಕರ್ಯ ಇಲ್ಲ, ಹಾಗಾಗಿ ಸ್ವಂತ ವಾಹನದಲ್ಲಿ ಹೋಗಿ ಬರುವುದು ಒಳ್ಳೆಯದು. ಪ್ರತಿಕ್ರಿಯೆಗೆ ಧನ್ಯವಾದಗಳು.

@ ಮಲ್ಲಿಕಾರ್ಜುನ ತಿಪ್ಪಾರ
ಛೇ ಛೇ ಹಾಗೆಲ್ಲಾ ತಮಾಷೆ ಮಾಡಬಾರದು ಕಣ್ರೀ.. ಅವರು ಸೀರಿಯಸ್ ಆಗಿಯೇ ಲದ್ದಿ ನೋಡಿದ್ದು.

@ ಸ್ವಾಮಿ,
ಕುಮಾರಸ್ವಾಮಿಯವರಿಗೆ ಧನ್ಯವಾದಗಳು. ಮುಖ್ಯಮಂತ್ರಿಗಳು ಖುಷಿ ಆಗಿದ್ದಾರೆ ಎಂದ ಮೇಲೆ ನಾವೆಲ್ಲರೂ ಖುಷಿ. ಪ್ರತಿಕ್ರಿಯೆಗೆ ಧನ್ಯವಾದಳು.

@ ಜಿತೇಂದ್ರ,
ಇನ್ನೊಮ್ಮೆ ಹೋಗುವಾಗ ನಮಗೂ ಹೇಳಿ, ಜೊತೆಗೆ ಹೋಗೋಣ, ಥ್ಯಾಂಕ್ಸ್,

@ ನಾಯ್ಕರೇ,
ನೀವು ತಿರುಗುವುದನ್ನು ನೋಡಿ ಹೊಟ್ಟೆ ಕಿಚ್ಚು ಪಟ್ಟು, ಕೊನೆಗೂ ನಾನು ಒಂದು ಪ್ರವಾಸ ಹೋಗಿ ಬಂದಹಾಗಾಯ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.

@ ಬ್ರಹ್ಮ,
ಒಳ್ಳೆ ಹುಡುಗ, ಹಾಗೆಲ್ಲಾ ವಿಚಾರ ಮಾಡಬಾರದು.

ಶರಶ್ಚಂದ್ರ ಕಲ್ಮನೆ said...

ನಿಜ ಜೋಮನ್ ಅವ್ರೆ,

ತುಂಬಾ ಸುಂದರವಾದ ಸ್ಥಳ ಅದು. ಲೇಖನ ಚೆನ್ನಾಗಿದೆ. ನಾನು ಹೋದಾಗ ಆನೆಗಳ ಹಿಂಡು ನೋಡುವ ಅವಕಾಶ ಸಿಕ್ಕಿತ್ತು.

Parisarapremi said...

he he he... bandipur range alli neevu aane nODlilla annOdu viparyaasa ne bidi.. :-)

sadhya, alli plot togoLO vishya na alli ge bitralla, next time aane nODOrante... raatri alle halt maadi, beLagina jaava kaaNsutte..

sogasaada travelogue...

jomon varghese said...

@ ಶರಶ್ಚಂದ್ರ,

ಹೌದಾ, ಲಕ್ಕಿ ಕಣ್ರೀ ನೀವು.. ನಮಗೆ ಆನೆ ಲದ್ದಿ ಸಿಕ್ಕಿತು! ಬ್ಲಾಗ್ ಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ, ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್, ಆಗಾಗ್ಗ ಬರುತ್ತಲಿರಿ, ಓದುತ್ತಲಿರಿ..

ಧನ್ಯವಾದಗಳು.
ಜೋಮನ್

jomon varghese said...

@ ಪರಿಸರ ಪ್ರೇಮಿ,

ನಿಮ್ಮ ಸಹೃದಯ ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

ಶ್ರೀನಿಧಿ.ಡಿ.ಎಸ್ said...

:)

irli, "desent" age bardideera! nan camera hogittu, kastoori team jote:)

MD said...

ಅಪಘಾನಿಸ್ತಾನದಲ್ಲಿಯೂ ಇಂತಹ ಬೆಟ್ಟಗಳಿಗೆ ಭೇಟಿ ಕೊಟ್ಟಿಲ್ಲವೇ ಜೋಮೋನ್?
ಅಪಘಾನಿಸ್ತಾನ್ ಹೋಗ್ತೀನಿ ಎಂದು ಜಗಕೆಲ್ಲ ಕೊಚ್ಚಿಕೊಂಡು ಹೇಳಿಕೊಳ್ಳುತ್ತ ಹೋದ ಪತ್ರಕರ್ತರಿದ್ದಾರೆ. ನೀವು ಸುಮ್ಮನೆ ಗಪ್-ಚುಪ್ ಹೋಗಿಬಿಟ್ಟಿದ್ದೀರಾ. ನಿಮಗೆ ಮಾರ್ಕೆಟಿಂಗ್ ಮಾಡೋಕೆ ಬರೋಲ್ಲ. ಕಲಿತುಕೊಳ್ಳಿ.

ಪಂಚಮ said...

hello sir yhis is malli from kp.
also frend of brahm n thippar.
nice writing keep in tuch

jomon varghese said...

md

ಎಮ್ ಡಿ ಯವರೇ ನಾನು ಹೋಗಿದ್ದು, ಗೋಪಾಲಸ್ವಾಮಿ ಬೆಟ್ಟಕ್ಕೆ ಕಣ್ರೀ. ಆಪ್ಘಾನಿಸ್ತಾನಕ್ಕೆ ಯಾಕೆ ಹೋಗ್ಲಿ? ನಿಮ್ಮೂರಿಗೆ ಕರೆದರೆ ಬರುತ್ತೇನೆ.


ಪಂಚಮ,

ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ್ಗ ಬರುತ್ತಲಿರಿ...

kanavarike said...

jamon nanna bittu nivaste higiddu dodda anyaya.. e vishaya ondu vedike male aroggyakar acharcheyagali.. adene erali maga ninna baravanige adbuth. ninu katti kotta lekhana allige hogi bandastu kushi kotatu.. nanna kadinda ninage 100% marks..

Channu Mulimani
Dharwad

ಚಿತ್ರಾ ಸಂತೋಷ್ said...

ಚುಮುಚುಮುಚುಮು...ಚಳಿಯಲ್ಲಿ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿ ಬಂದ ಹಾಗಾಯ್ತು..ಥ್ಯಾಂಕ್ಯೂ ಜೋಮನ್...
ಮಳೆಹನಿ ಚೆನ್ನಾಗಿ ಮೂಡಿಬರುತ್ತಿದೆ.
-ಚಿತ್ರಾ

shivu.k said...

ನಿಮ್ಮ ಗೋಪಾಲಸ್ವಾಮಿ ಬೆಟ್ಟ ಲೇಖನ ಓದಿ ನನಗೆ ಮತ್ತೆ ಅಲ್ಲಿಗೆ ಹೋಗುವ ಆಸೆಯಾಗ್ತಿದೆ. ನಮ್ಮದು ಪ್ರತಿವರ್ಷ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡಿಪುರ ಒಂದು ಟೂರು ಇದ್ದೆ ಇರುತ್ತೆ ಹೇಳಿ ಕೇಳಿ ಫೋಟೋಗ್ರಫರಗಳ ಗಾಂಪರ ಗುಂಪು, ನಮ್ಮದೇ ಲೋಕ ನಮ್ಮದೇ ಹುಚ್ಚು. ಮತ್ತೊಮ್ಮೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದರೆ ಅಲ್ಲಿರುವ ದೇವಸ್ಥಾನದ ಒಳಗೆ ಹೋಗಿ ಗರ್ಭಗುಡಿಯ ಬಾಗಿಲ ಮೇಲ್ಬಾಗದಲ್ಲಿ ಕೈ ಹಾಕಿ. ಅಲ್ಲಿ ವರ್ಷದ ೩೬೫ ದಿನಗಳೂ ತಣ್ಣಗಿನ ನೀರು ಕೈಗೆ ಸಿಗುತ್ತದೆ. ಅದು ಎಲ್ಲಿಂದ ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಅರ್ಚಕರನ್ನು ಕೇಳಿದರೆ ಅದರ ಮಹಿಮೆ ಹೇಳುತ್ತಾರೆ.

ಮತ್ತೆ ನನ್ನ ಬ್ಲಾಗಿಗೆ ಬಂದಿದಕ್ಕೆ ಸಂತೋಷ. ನನ್ನ ಎರಡು ಬ್ಲಾಗಿಗೆ ಬಂದಿದ್ದೀರಿ. good!

ಮೊದಲ ಬ್ಲಾಗು ಛಾಯಾಂಕಣಕ್ಕೆ ಮೀಸಲು ಅದರ ಉಳಿದ ಲೇಖನ ಓದಿ ನಿಮಗೂ ಖುಷಿಯಾಗಬಹುದು.

ಮತ್ತೊಂದು ಬ್ಲಾಗು ನನ್ನ ವೃತ್ತಿ ಜೀವನದ ಬದುಕಿನ ಬರವಣಿಗೆಗೆ ಸೀಮಿತ. ಅದರಲ್ಲೂ ನಿಮಗೆ ಕಲ್ಪನೆಗೆ ಸಿಗದ ಕೆಲವು ಲೇಖನಗಳಿವೆ ಅದು ನಾನು ಅನುಭವಿಸಿದ್ದು. ನಿಮಗೂ ಇಷ್ಟವಾಗಬಹುದು.
ಓದಿ ನಂತರ ಇಷ್ಟವಾದರೇ ಬ್ಲಾಗಿನಲ್ಲೇ ಪ್ರತಿಕ್ರಿಯಿಸಿ.
Thanks.

ಶಿವು.ಕೆ.