Friday, 21 March 2008

ಯುನಿವರ್ಸಿಟಿಯ ಹೋಳಿಯೂ ಲಬೋ ಲಬೋ... ಅಳುವೂ..

ರಾತ್ರಿಯಿಡಿ ಉರಿಯುತ್ತಿದ್ದ ಕೊರಡಿನ ಬೆಂಕಿ ಬೆಳ್ಳಿಗ್ಗೆ ಹೊತ್ತಿಗೆ ಆರಿರುತ್ತಿತ್ತು. ಹಸಿರು ಲಂಟಾನ ಸೊಪ್ಪನ್ನು ಸೊಂಟಕ್ಕೆ ಸುತ್ತಿಕೊಂಡು, ಬೂದಿ ಬಳಿದು ಸಾಂಬಾ ನೃತ್ಯ ಮಾಡಿ ಮಲಗಿರುತ್ತಿದ್ದ ಹಾಸ್ಟೇಲಿನ ಪಡ್ಡೆ ಹುಡುಗರು ಮುಂಜಾನೆಯೇ ಎದ್ದು ಹಾಸ್ಟೇಲಿನ ಜವಾನನಿಗೆ ಮೊದಲು ಬಣ್ಣ ಮೆತ್ತುತ್ತಿದ್ದರು. ಇದ್ದಕ್ಕಿದಂತೆ ಹೀ..ಹೂ...ಕೇ..ಎಂದು ಪ್ರಾರಂಭವಾದ ಕೇಕೆಯಿಂದಲೇ ಹೋಳಿಯಾಟ ಪ್ರಾರಂಭವಾಗಿದೆ ಎಂಬ ಸುಳಿವು ಸಿಕ್ಕಿ, ಹಾಸ್ಟೇಲಿನ ಕೋಣೆಗಳಲ್ಲಿ ಕದವಿಕ್ಕಿಕೊಂಡು ಮಲಗಿರುತ್ತಿದ್ದ ಬಣ್ಣ ವಿರೋಧಿ ಹುಡುಗರು, ಕಿಟಕಿಯನ್ನೂ ಇನ್ನಷ್ಟು ಭದ್ರಪಡಿಸಿ, ಎರಡೆರಡು ಚಾದರ ಹೊದ್ದು ಮಲಗುತ್ತಿದ್ದರು. ಹೊರಗೆ ಬಾರಲೇs.. ಅವರ ರೂಮಿನ ಮುಂದೆ ನಿಂತು ಕಾಮಣ್ಣನ ಮಕ್ಕಳ ಲಬೋ ಲಬೋ ಎಂದು ಹೊಯ್ಕೊಳ್ಳುತ್ತಿದ್ದರೆ ಭೂಮಿ ಆಕಾಶ ಒಂದಾಗುತ್ತಿತ್ತು.

ಮಲಗಿದ್ದವರನ್ನು ಎಬ್ಬಿಸಿ, ತಲೆಗೆ ತಲಾ ಎರಡೆರಡು ಮೊಟ್ಟೆ ಹೊಡೆದು ಮುಖಕ್ಕೆಲ್ಲಾ ನಯವಾಗಿ ಸವರಿ ಒಂದಿಷ್ಟು ಬಣ್ಣದ ನೀರು ಸುರಿಯುತ್ತಿದ್ದಂತೆ ಹಾಸ್ಟೇಲ್ ಹುಡುಗರ ಹೋಳಿಯಾಟಕ್ಕೆ ರಂಗು ಮೂಡುತ್ತಿತ್ತು. ಹೀಗೆ ಪ್ರಾರಂಭವಾಗುತ್ತಿದ್ದ ಬಣ್ಣದೋಕುಳಿ ಎಂಟು ಗಂಟೆಯ ವೇಳೆಗಾಗಲೇ ಇಡಿ ವಿಶ್ವವಿದ್ಯಾಲಯವನ್ನು ಬಣ್ಣದಲ್ಲಿ ಅದ್ದಿ ನಿಗಿನಿಗಿ ಹೊಳೆಯುವಂತೆ ಮಾಡುತ್ತಿತ್ತು. ನ್ಯೂಜಿ ಪಿ.ಜಿಯಿಂದ ಧನು, ಶ್ಯಾಮ ಬಣ್ಣದೊಂದಿಗೆ ಓಡಿ ಬರುವ ವೇಳಗೆ ನಾನೊಂದು ಹಳೆಯ ದೊಗಳೆ ಶರ್ಟ್ ಹಾಕಿ ಬರ್ರೀ.. ಮಕ್ಕಳಾ... ಎನ್ನುವ ಗೆಟಪ್ಪಿನಲ್ಲಿ ಕಾದಿರುತ್ತಿದ್ದೆ. ನಂತರ ಭೀಮಾ ಹಾಗೂ ನ್ಯೂಪಿಜಿ ಹಾಸ್ಟೇಲ್‌ನವರು ಒಂದುಗೂಡಿ ಡೊಳ್ಳುಬಾರಿಸುತ್ತಾ, ವಾಣಿ ಅಂಗಡಿಯ ಹತ್ತಿರ ಬರುವ ವೇಳಗೆ ಶ್ಯಾಲ್ಮಲಾ ಹಾಗೂ ನಿಜಲಿಂಗಪ್ಪ ಹಾಸ್ಟೆಲಿನ ಹುಡುಗರು ಸೇರಿರುತ್ತಿದ್ದರು. ನಂತರ ಹೊರಡುತ್ತಿತ್ತು ಮೆರವಣಿಗೆ. ಸುಮಾರು ಒಂದು ಸಾವಿರದ ಹತ್ತಿರ ಹತ್ತಿರ ಹುಡುಗರು. ಮೊದಲು ಹೋಗುತ್ತಿದ್ದದ್ದು ಆಯಾ ವಿಭಾಗಗಳ ಉಪನ್ಯಾಸಕರುಗಳ ಮನೆಗೆ, ನಂತರ ಹಾಸ್ಟೇಲಿನ ನಿಲಯ ಪಾಲಕರ ಮನೆಗೆ.


ಸಾಮಾನ್ಯವಾಗಿ ನಾಲ್ಕು ಗಳಗಳ ಒಂದು ಚಟ್ಟವನ್ನು ಮಾಡಿ, ಅದಕ್ಕೆ ಮಡಿಕೆಯೊಂದನ್ನು ತೂಗು ಬಿಟ್ಟು, ಸುತ್ತಲೂ ಸೊಪ್ಪು ಕಟ್ಟಿ ಅದ ಮೇಲೆ ಮೇಲೆ ಒಬ್ಬನನ್ನು ಸತ್ತವನಂತೆ ಮಲಗಿಸಿಕೊಂಡು ಹೋಗಿ ಮಾಸ್ತರರ ಮನೆಯಂಗಳದಲ್ಲಿ ಮಲಗಿಸುತ್ತಿದ್ದೆವು. ಸರss ಇಂಟರ್ನಲ್ ಮಾರ್ಕ್ಸ್ ಕೊಡ್ಲಿಲ್ಲ ಅಂತ, ನಿಮ್ಮ ಹೆಸರು ಬರೆದಿಟ್ಟು ಸತ್ತ ಹೋಗ್ಯಾನ ನೋಡ್ರೀ.. ಮಣ್ಣು ಮಾಡೋಕೆ ರೊಕ್ಕಾ ಕೊಡ್ರೀ.. ಎಂದು ಕೋಗಲು ಸುರುಹಚ್ಚಿಕೊಳ್ಳುತ್ತಿದ್ದರು. ಹಿಂದೆ ನಿಂತಿರುತ್ತಿದ್ದ ಸಾವಿರಾರು ಹುಡುಗರು ಲಯಬದ್ದವಾಗಿ ಲಬೋ... ಲಲೋ.... ಹೊಯ್ಕೊಳ್ಳುತ್ತಿದ್ದರು. ಹೆಚ್ಚಿನ ಉಪನ್ಯಾಸರು ರೊಕ್ಕ ಬಿಚ್ಚುತ್ತಿರಲಿಲ್ಲ. ಐದೋ ಹತ್ತೋ ಕೊಟ್ಟು ಸಾಗಹಾಕಲು ಮುಂದೆ ಬರುತ್ತಿದ್ದರು. ಆಗ ಪ್ರಾರಂಭವಾಗುತ್ತಿತ್ತು ಬೈಗುಳ.. ಮಾಸ್ತರ ಒಂದು ವಾರ ಕಿವಿ ತೊಳಕೋಬೇಕು, ಅಂಥಾ ನಮೂನಿ ಇರತ್ತಿದ್ದವು. ನಲವತ್ತು ಸಾವಿರ ಪಗಾರ ತಕೋತಿಯಲ್ಲೋ.. ನಾಚಿಕೆ ಆಗೋದಿಲ್ಲೇನೋ.... ತಾವು ಕಲಿಸಿದ ವಿದ್ಯಾರ್ಥಿಗಳ ಬಾಯಿಯಿಂದಲೇ ತಮ್ಮ ಮರ್ಯಾದೆ ಬೀದಿ ಪಾಲಾಗುವುದರ ಮೊದಲೇ ಇನ್ನೊಂದೆರಡು ನೋಟುಗಳನ್ನು ತೆಗೆದು ಸತ್ತವನ ಚಟ್ಟದ ಮೇಲೆ ಹಾಕುತ್ತಿದ್ದರು. ಅವನು ಇದ್ದಕ್ಕಿದ್ದಂತೆ ಎದ್ದು ಮಾಸ್ತರನ್ನು ಅಪ್ಪಿ ಹಿಡಿದು, ಹ್ಯಾಪಿ ಹೋಳಿ ಸಾರ್ ಎನ್ನುತ್ತಾ ಬಣ್ಣ ಮೆತ್ತುತ್ತಿದ್ದ. ಉಳಿದವರು ಮಾಸ್ತರನ್ನು ವಿಚಾರಿಸಿಕೊಂಡು ಬಿಡುವ ಹೊತ್ತಿಗೆ ಅವರು ನೀರಿನಲ್ಲಿ ಮುಳುಗಿದ ಕೋಳಿಯ ತರ ಆಗಿರುತ್ತಿದ್ದರು. ಮನೆಯೊಳಗಿನ ಕಿಟಿಕಿಯ ಸಂಧಿಯಿಂದ ಮಾಸ್ತರರ ಹೆಂಡತಿ ಹಾಗೂ ಮಕ್ಕಳು ಮನೆಯೊಳಗೆ ಸದಾ ಹುಲಿ ತರ ಇರುತ್ತಿದ್ದ ಮಾಸ್ತರನ್ನು ವಿದ್ಯಾರ್ಥಿಗಳು ಪ್ರೀತಿಸುವ ಪರಿ ನೋಡಿ ನಗುತ್ತಿದ್ದರು.


ಆದರೆ ನಮಗೆ ಕಲಿಸುತ್ತಿದ್ದ ಮಾಸ್ತರುಗಳ ಮನೆಗಳಿಗೆ ಹೋಗುವಾಗ ಮಾತ್ರ ನಾವು ಗುಂಪಿನಲ್ಲಿ ಹಿಂದಿರುತ್ತಿದ್ದೆವು. ಎಷ್ಟೇ ಬಣ್ಣ ಹಚ್ಚಿಕೊಂಡಿದ್ದರೂ, ಎಲ್ಲಿ ಗೊತ್ತಾದರೆ ನಾಳೆ ಇಂಟರ್‌ನೆಲ್ ಮಾರ್ಕ್ಸಗೆ ಕುತ್ತು ಎಂದು ಬಣ್ಣ ಹಚ್ಚಲು ಹೋಗುತ್ತಿರಲಿಲ್ಲ. ಆದರೆ ಆ ಕೆಲಸವನ್ನು ಉಳಿದ ಡಿಪಾರ್ಟ್‌ಮೆಂಟಿನ ಹುಡುಗರಿಗೆ ಹೇಳಿ ಮಾಡಿಸುತ್ತಿದ್ದೆವು. ಬಿಡಬೇಡ್ರಲೇ ಈ ಮಾಸ್ತರನ್ನು ಬಣ್ಣದಾಗ ಕೆಡವಿ ಎನ್ನುತ್ತಿದ್ದೆವು. ಅವರ ಮಾಸ್ತರುಗಳಿಗೆ ನಾವು ಬಣ್ಣ ಬಳಿಯುತ್ತಿದ್ದೆವು. ನಂತರ ವಾಣಿ ಅಂಗಡಿಗೆ ಬಂದು ಆಕೆಗೆ ಬಣ್ಣ ಹಚ್ಚುವ ನೆಪದಲ್ಲಿ ಅಂಗಡಿಯ ಹೊರಗಿರುತ್ತಿದ್ದ ಎಳೆನೀರು, ಬಾಳೆಹಣ್ಣನ್ನು ಸ್ವಾಹ ಮಾಡುತ್ತಿದ್ದೆವು.


ನಂತರ ಸ್ವಲ್ಪ ಸುಧಾರಿಸಿಕೊಂಡು ವಿಶ್ವವಿದ್ಯಾಲಯ ಸುಂದರಿಯರು ವಾಸಿಸುತ್ತಿದ್ದ ಲೇಡೀಸ್ ಹಾಸ್ಟೇಲ್ ಹತ್ತಿರ ಹೆಜ್ಜೆ ಹಾಕುತ್ತಿದ್ದೆವು. ಅಕ್ಕಮಹಾದೇವಿ, ಕಿತ್ತೂರು ಚೆನ್ನಮ್ಮ, ವರ್ಕಿಂಗ್ ವುಮೆನ್ಸ್ ಹಾಸ್ಟೇಲ್‌ನ ಹುಡುಗಿಯರು ಕೋಣೆಯೊಳಗೇ ಬಣ್ಣ ಆಡುತ್ತಾ ಹೊರಬರಲಾಗಾದೆ ಚಟಪಡಿಸುತ್ತಿದ್ದರು. ಹುಡುಗರನ್ನು ನೋಡಿದ ಕೂಡಲೇ ಕಿಟಕಿಯೊಳಗಿನಿಂದ ನೋಡುತ್ತಾ, ಕೈಬೀಸಿ ಹ್ಯಾಪಿ ಹೋಳಿ ಎಂದು ವಿಶ್ ಮಾಡುತ್ತಿದ್ದರು. ಕೆಲವು ಹುಡುಗರು ಹಾಸ್ಟೇಲ್ ಎದುರಿನ ರಸ್ತೆಯಲ್ಲಿ ಮಲಗಿ, ಅವಳು ಬರದಿದ್ದರೇ ನಾನು ಹೋಗುವುದೇ ಇಲ್ಲ ಎಂದು ಹಠ ಹಿಡಿದ ಭಂಗಿಯಲ್ಲಿ ಮಲಗುತ್ತಿದ್ದರು. ವಿವಿಯಲ್ಲಿ ಸ್ವಲ್ಪ ಫೇಮಸ್ ಇರುತ್ತಿದ್ದ ಹುಡುಗಿಯರ ಹೆಸರನ್ನು ಕೋಗಿ ಹೇಳುತ್ತಾ ನೀನೇ ನನ್ನ ಜೀವಾ, ನೀನೇ ನನ್ನ ಪ್ರಾಣ ಎಂದೆಲ್ಲಾ ವಿರಹಗೀತೆ ಹಾಡಲು ಪ್ರಾರಂಭಿಸುತ್ತಿದ್ದರು. ಬಣ್ಣ ಮೆತ್ತಿಕೊಂಡು ಎಷ್ಟು ವಿಕಾರವಾಗಿ ಕಾಣಿಸಲು ಸಾಧ್ಯವೋ ಹಾಗಿರುವುದು ಹಾಗೂ ಲಬೋ ಲಬೋ ಎಂದು ಒಂದೇ ಸಮನೆ ಹೊಯ್ಕೊಳ್ಳುವುದು ಆಚರಿಸಿಕೊಂಡು ವಿವಿಯಲ್ಲಿ ಬಹಳ ವರ್ಷಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ. ಯಾರಿಗೂ ಯಾರ ಮುಖವೂ ಗೊತ್ತು ಹತ್ತುತ್ತಿರಲಿಲ್ಲ. ಇದು ಅತಿರೇಖಕಕ್ಕೆ ಹೋಗುವ ಮೊದಲು ಪೊಲೀಸರು ಬರುತ್ತಿದ್ದರು!


ಲೇಡೀಸ್ ಹಾಸ್ಟೇಲಿನಿಂದ ಹೊರಟ ಮೆರವಣಿಗೆ ಶ್ರೀನಗರ ಸರ್ಕಲ್‌ನಲ್ಲಿ ಕೊನೆಗೊಳ್ಳುತ್ತಿತ್ತು. ಶ್ರೀನಗರ ಸರ್ಕಲ್‌ನ ಫೇಮಸ್ ಫೊಟೋಗ್ರಾಫರ್ ಹುಡುಗರ ಬೆದರಿಕೆಗೆ ಹೆದರಿ ಸುಮ್ಮನೆ ಪ್ಲಾಶ್ ಮಾಡುತ್ತಿದ್ದ. ಒಳಗೆ ರೀಲ್ ಇರುತ್ತಿರಲಿಲ್ಲ. ನಂತರ ಅಲ್ಲೇ ಅಕ್ಕಪಕ್ಕದ ಓಣಿಗಳಿಗೆ ನುಗ್ಗಿ, ಎದುರಿಗೆ ಬಂದವರಿಗೆ ಬಣ್ಣ ಹಚ್ಚಿ, ಮಡಿಕೆ ಹೊಡೆಯಲು ಹೋಗುತ್ತಿದ್ದೆವು. ಮಡಿಕೆ ಹೊಡೆದು ಮತ್ತೆ ಶ್ರೀನಗರ ಸರ್ಕಲ್‌ಗೆ ಬಂದು ಸಂಗ್ರಹವಾಗಿರುತ್ತಿದ್ದ ದುಡ್ಡಿನಲ್ಲಿ ಕಬ್ಬಿನಹಾಲೋ ಎಳೆನೀರೋ ಕುಡಿಯುತ್ತಿದ್ದೆವು. ವಾಪಾಸ್ಸು ರೂಮು ಸೇರುವ ಹೊತ್ತಿಗೆ ಮೂರುಗಂಟೆ ಆಗುತ್ತಿತ್ತು. ಬಣ್ಣ ಮತ್ತಿರುತ್ತಿದ್ದ ಕೂದಲು ಸುತ್ತಿಗೆ ಏಟಿಗೂ ಬಗ್ಗದಂತೆ ಒಣಗಿ ನಿಂತಿರುತ್ತಿದ್ದವು. ಕಣ್ಣಲ್ಲಿ ಸಿಕ್ಕಾಪಟ್ಟೆ ಉರಿ ಉರಿ.. ಮೈಗೆ ಮತ್ತಿದ ಬಣ್ಣವನ್ನು ತಿಕ್ಕಿ ತೊಳೆಯಲು ಎಲ್ಲಾ ತರಹದ ಶಾಂಪೂ ಪ್ರಯೋಗ ನಡೆಯುತ್ತಿತ್ತು. ನಂತರ ಶ್ಯಾಲ್ಮಲಾ ಹಾಸ್ಟೇಲಿಗೆ ಹೋಗಿ ಪ್ರತೀಕನ ರೂಮಿನಲ್ಲಿ ಫಿಲಂ ನೋಡುತ್ತಿದ್ದೆವು. ಸಂಜೆ ಹೊತ್ತಿಗೆ ಕಣ್ಣಿಗೆ ಮಂಪು ಆವರಿಸಿ ಅಲ್ಲೇ ಅಡ್ಡಾಗುತ್ತಿದ್ದೆವು.


ಈವತ್ತು ಮೈಸೂರಿನಲ್ಲಿ ಹೋಳಿಯಂತೆ. ಹೊರಗಿಳಿದು ನೋಡಿದರೆ ಎಲ್ಲಿಯೂ ಬಣ್ಣ ಹಚ್ಚಿದ ಮುಖಗಳೇ ಕಾಣಲಿಲ್ಲ. ಮೈಸೂರಿನಲ್ಲಿ ಹೋಳಿ ಹೇಗಿರುತ್ತದೆ ಎಂದು ಕುತೂಹಲದಿಂದ ಕಾದಿದ್ದ ನನಗೆ ಭಾರಿ ನಿರಾಶೆಯೇ ಆಯಿತು. ದಿನವಿಡೀ ಸಂಕಟಪಟ್ಟೆ. ಧಾರವಾಡದ ಸ್ನೇಹಿತರು ಬಣ್ಣ ಆಡೋಣ ಬಾ ಅಂತ ಕರೆದಿದ್ದರು. ಮೊದಲೇ, ಇಲ್ಲಿ ಹೀಗಂತ ಗೊತ್ತಿದ್ದರೆ ಎರಡು ದಿವಸ ರಜೆ ಹಾಕಿ ಹೋಗಿ ಬರಬಹುದಿತ್ತು ಅಂತ ಚಡಪಡಿಸುತ್ತಿದ್ದೇನೆ.


ರಾಜೇಂದ್ರ ಚೆನ್ನಿಯವರು ಕೆಂಡಸಂಪಿಗೆಯಲ್ಲಿ ಬರೆದ ಧಾರವಾಡದ ಹೋಳಿಯ ಬಣ್ಣಗಳ ಹುಚ್ಚು ಹೊಳೆ ಓದಿ ಒಂದಿಷ್ಟು ಸಮಾಧಾನಪಟ್ಟೆ...

14 comments:

Haaru Hakki said...

ಜೋಮಾ,
ಬೆಂಗಳುರಿನಲ್ಲಿಯೂ ಬಣ್ಣ ಹಚ್ಚಿಕೊಂಡ ಮುಖಗಳು ಒಂದೂ ಕಾಣಸಿಗಲೇ ಇಲ್ಲ. ತುಂಬ ಬೇಸರ ಆಯ್ತು. ಪಿಜಿ ಜೀವನದಲ್ಲಿ ಹೋಳಿಯ ಬಗ್ಗೆ ಮತ್ತೆ ನೆನಪು ಮಾಡಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಆದರೆ ಹಾಸ್ಟೆಲ್ ಜೀವನದಲ್ಲಿ ವಿಶೇಷವಾಗಿ ಬಿಸಿಎಂ ಹಾಸ್ಟೆಲ್ ನನಗೆ ತುಂಬಾ ನೆನಪಿಗೆ ಬಂತು.

ಶಾಂತಲಾ ಭಂಡಿ (ಸನ್ನಿಧಿ) said...

jomon ಅವರೆ...
ಚೆನ್ನಾಗಿದೆ ಲೇಖನ.
ರಾಣಿ ಚೆನ್ನಮ್ಮ ಹಾಸ್ಟೆಲ್, ಗೆಳತಿಯರು, ಶ್ರೀನಗರ ಸರ್ಕಲ್, ಬಸ್ಟಾಪು...ಅಂಗಡಿಗಳ ಸಾಲುಗಳೆಲ್ಲ ಕಣ್ಮುಂದೆ ಬಂದವು.
ಆದರೆ ಎರಡು ವರ್ಷಗಳ ಕಾಲ ರಾಣಿ ಚೆನ್ನಮ್ಮ ಹಾಸ್ಟೆಲ್ ಅಲ್ಲಿ ಇದ್ದೆವಾದರೂ ಹೋಳಿಯ ಸಂದರ್ಭದಲ್ಲಿ ನಮ್ಮೂರ ಸೇರಿ ಸುರಕ್ಷಿತವಾಗಿದ್ದುಬಿಟ್ಟಿದ್ದಕ್ಕೇನೋ ಧಾರವಾಡದಲ್ಲಿ ಹೋಳಿ ಹೀಗಿರುತ್ತದೆದೆಂದು ಗೊತ್ತಿರಲಿಲ್ಲ.
ಚೆನ್ನಾಗಿ ವರ್ನಿಸಿದ್ದೀರಿ. ಬರೆಯುತ್ತಿರಿ.

jomon varghese said...

@ ಬ್ರಹ್ಮಾನಂದ,

ಬ್ರಹ್ಮ ನನಗಂತೂ ಈ ಬಾರಿ ಹೋಳಿ ಆಡದೆ ತುಂಬಾ ನಿರಾಶೆ ಆಯಿತು.ಹಾಸ್ಟೆಲ್‌ನಲ್ಲಿದ್ದಾಗ ಹೋಳಿಯನ್ನು ಎಷ್ಟು ಸಂಭ್ರಮದಿಂದ ಎದುರುಗೊಳ್ಳುತ್ತಿದ್ದೆವು.ಬದುಕಿನ ಸಹಜ ಸಂತೋಷ, ನಲಿವುಗಳೆಲ್ಲಾ ಬರುಬರುತ್ತಾ ಕಡಿಮೆಯಾಗುತ್ತಿವೆಯೇನೋ ಅಂತ ಅನಿಸುತ್ತಿದೆ.

ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬದುಕು ಕೂಡ ಬಣ್ಣ ತುಂಬಿರಲಿ.

ಜೋಮನ್.

jomon varghese said...

@ ಶಾಂತಲಾ ಭಂಡಿ,

ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು.ರಾಣಿ ಚೆನ್ನಮ್ಮ ಹಾಸ್ಟೆಲ್‌ನಲ್ಲಿ ಇದ್ದೀರೆಂದು ಹೇಳುತ್ತೀರಿ, ಹೋಳಿಯ ಸಮಯದಲ್ಲಿ ಊರಿಗೆ ಹೋಗಿ ನೀವು ತುಂಬಾ ಮಿಸ್ ಮಾಡಿಕೊಂಡಿರುತ್ತೀರಿ.. ಹೋಳಿಯ ದಿನ ನಮ್ಮ ವಿವಿಯನ್ನು ನೋಡುವ ಸೊಬಗೇ ಬೇರೆ...

ಧನ್ಯವಾದಗಳು.

ಜೋಮನ್.

ರಾಜೇಶ್ ನಾಯ್ಕ said...

ಜೋಮನ್,

ಹನ್ನೊಂದು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಹೋಳಿ ಆಡಿದ್ದೇ ಕೊನೆ. ಉಡುಪಿ - ಮಂಗಳೂರಿನಲ್ಲಂತೂ ಹೋಳಿ ಸುಳಿವೇ ಇರುವುದಿಲ್ಲ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತದ ವಿದ್ಯಾರ್ಥಿ ಸಮೂಹ ಅವರಷ್ಟಕ್ಕೇ ಹೋಳಿ ಆಚರಿಸುತ್ತಾರೆ. ಈ ಲೇಖನ ಓದಿ ಬೆಳಗಾವಿಯ ತಿಲಕ್-ವಾಡಿ ಮತ್ತು ಅನಗೋಳಗಳಲ್ಲಿ ಹೋಳಿಯ ಅಬ್ಬರ ಮತ್ತು ನಮ್ಮ ಮೆರೆದಾಟ ನೆನಪಾದವು. ಥ್ಯಾಂಕ್ಸ್.

Anonymous said...

ಮೈಸೂರಿನಲ್ಲಿ ಹೀಗೆಲ್ಲ ಎಂದು ಆಗಿದ್ದಿಲ್ಲ ಬಿಡು.. ಹೆಚ್ಚು ಅಂದ್ರೆ ಮುಖಕ್ಕೊಂದಿಷ್ಟು ಬಣ್ಣ ಬಳೀತಾರೆ ... ಪಡ್ಡೆ ಹುಡುಗರ ಹೋಳಿ ಆಚರಣೆ ಬಗ್ಗೆ ಇನ್ನೊಂದಿಷ್ಟು ಓದಿದ ಹಾಗಾಯಿತು....
-ಜಿತೇಂದ್ರ

Vathapi said...

jom, naanu e sala holi aadake aagilla. nin lekhana odi tumba khushi aytu. haage nin article odi manassu ond varsha hindake hogittu. so haleya nenapugala sutta manassu giraki hodeyitu.

so superb article..........

Anonymous said...

jom article chennagide.
odi holi habba Adidange aytu.
so superb..........

jomon varghese said...

@ ರಾಜೇಶ್ ನಾಯ್ಕ,

ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ಧನ್ಯವಾದಗಳು.

@ real and reel,

ಸ್ವಾಮಿ ನಿಮ್ಮ ನಿಜನಾಮ ತಿಳಿಸಿದರೆ ಯಾರೆಂದು ತಿಳಿಯಬಹುದಿತ್ತು. ಇರಲಿ, ಬಣ್ಣ ಆಡಿದಷ್ಟೇ ಖುಷಿಯಿಂದ ಪ್ರತಿಕ್ರಿಯಿಸಿದ್ದೀರಾ, ಧನ್ಯವಾದಗಳು.

@ ಅನಾಮಿಕರೆ, ಮುಂದಿನ ಬಾರಿ ನಿಮ್ಮ ಹೆಸರು ವಿಳಾಸ ತಿಳಿಸಿ, ಪ್ರತಿಕ್ರಿಯೆಗೆ ಧನ್ಯವಾದಗಳು.

jomon varghese said...

@ ಜಿತೇಂದ್ರ,

ನಿಮ್ಮ ಸಹೃದಯ ಓದಿಗೆ ಪ್ರತಿಕ್ರಿಯೆಗೆ ಧನ್ಯವಾದಗಳು.

ರೇಣುಕಾ ನಿಡಗುಂದಿ said...

ಜೋಮನ್, ಅವರೇ ಹೋಳಿ ಹಬ್ಬದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಾ.ನನಗೂ ಧಾರವಾಡ್ದ ಹೋಳಿ ಹಬ್ಬ, ಕಣ್ಣಿಗೆ ಕಟ್ಟಿದಂತಾಯಿತು.....ನನ್ನೂರನ್ನು ತುಂಬಾ ಮಿಸ್ ಮಾಡ್ತಿನಿ. ಚೆನ್ನಿಯವರ ಲೇಖನ ಓದಿದೆ.

ಸಂತೋಷಕುಮಾರ said...

ಇಲ್ಲೆ ಕುಂತ ಹೋಳಿ ಆಡಿದಷ್ಟು ಖುಷಿಯಾತು. ಭಾಳ ಛಂದ ಬರೆದೀರಿ. ಯಾಕ ಬ್ಲಾಗ ಅಪಡೆಟ್ ಮಾಡಿಲ್ಲಾ?

jomon varghese said...

@ ರೇಣುಕಾ ನಿಡಗುಂದಿ,

ಮೇಡಂ ನಿಮ್ಮ ಸಹೃದಯ ಓದಿಗೆ ಹಾಗೂ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಖುಷಿಯಾಯಿತು.

@ ಸಂತೋಷ ಕುಮಾರ,

ಏನ್ ಕೇಳ್ತೀರಿ ಸರ ನಮ್ಮ ಕಥೀ.. ಇರೋ ಕೆಲಸ ಮುಗಿಸೋದರ ಒಳಗ ಬೇಕಾದಷ್ಟು ಸಾಕಾಗಿರ್‌ತದ. ಬ್ಲಾಗ್ ಅಪ್‌ಡೇಟ್ ಮಾಡಬೇಕಂತ ಮನಸಿನ್ಯಾಗೆ ಐತಿ, ಆದ್ರೆ ಟೈಮೇ ಸಿಗತಿಲ್ಲ. ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾನೆ ಖುಷಿಯಾಯಿತು. ಧನ್ಯವಾದಗಳು.

ಜೋಮನ್.

Unknown said...

ಸರ್ ನಿಮ್ಮ ಹೊಸ ಬರಹಕ್ಕಾಗಿ ನಮ್ಮಂಥ ಅಭಿಮಾನಿ ಓದುಗರು ಕಾಯ್ತಾ ಇದ್ದಾರೆ.... ಹೀಗಿದ್ದು ಬರೆಯದಿರುವುದು ನ್ಯಾಯವೇ?