"ಅಪ್ಪ ನನಗೆ ರಾಂಕ್ ಬಂದಿದೆ" ಎಂದು ನಾನು ಕೂಗಿ ಹೇಳುವಾಗ, ಅಪ್ಪ ಏಣಿಯ ಮೇಲೆ ನಿಂತು ಅಡಿಕೆ ಮರಕ್ಕೆ ಔಷಧಿ ಹೊಡೆಯುತ್ತಿದ್ದರು. 50-60 ಅಡಿ ಎತ್ತರದ ಅಡಿಕೆ ಮರದ ತುದಿಯಿಂದ ಸಂಭ್ರಮದಿಂದಲೇ ಇಳಿದು ಬಂದ ಅಪ್ಪ, ಜಗತ್ತನ್ನು ಗೆದ್ದಷ್ಟು ಸಂತಸದಿಂದ ನನ್ನನ್ನು ನೋಡಿದ್ದರು. ಮುಖದಲ್ಲೆಲ್ಲಾ ಸುರಿದ ಮೈಲುತುತ್ತು, ಕಣ್ಣಿಗೆ ಔಷಧಿ ಬೀಳದಿರಲೆಂದು ತಲೆಗೆ ಸಿಕ್ಕಿಸಿಕೊಂಡಿದ್ದ ಪ್ಲಾಸ್ಟಿಕ್ ಟೋಪಿ, ಸೊಂಟಕ್ಕೆ ಕಟ್ಟಿಕೊಂಡಿದ್ದ ಪಂಜೆ ಬಿಟ್ಟರೆ ಅಪ್ಪನ ದೇಹದಲ್ಲಿ ಬೇರೆ ಬಟ್ಟೆಯೇನೂ ಇರಲಿಲ್ಲ. ಸಂತಸ ತಡೆದುಕೊಳ್ಳಲಾಗದೆ, ನನ್ನನ್ನು ಅಪ್ಪಿಕೊಳ್ಳಲು ಬಾಗಿದವನು, ನನ್ನ ಬಟ್ಟೆಗೆಲ್ಲಾ ಮೈಲುತುತ್ತು ದ್ರಾವಣ ಅಂಟಿಕೊಳ್ಳುತ್ತದೆ ಎಂದು, ಬಿಗಿಯಾಗಿ ಕೈ ಅದುಮಿ, ಕಣ್ಣಲ್ಲೇ ಸಂಭ್ರಮ ತಿಳಿಸಿದ್ದ. ಆಗ ನಾನು ಏಳನೇ ತರಗತಿಯಲ್ಲಿದ್ದೆ. ಪ್ರಥಮ ಪಬ್ಲಿಕ್ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾಗಿದ್ದೆ.
ಅಪ್ಪನೇ ಹಾಗೆ. ಅದ್ಭುತ ಜೀವನ ಪ್ರೀತಿಯ ಮನುಷ್ಯ. ಅಪ್ಪನ ಅಪ್ಪ ಅಂದರೆ ನನ್ನ ಅಜ್ಜ ಅಪ್ಪನಿಗೆ ಎರಡು ವರ್ಷವಿರುವಾಗ ತೀರಿಕೊಂಡರಂತೆ. ಅಜ್ಜನ ಮುಖವನ್ನು ನೋಡಿದ ಅಸ್ಪಷ್ಟ ನೆನಪು ಮಾತ್ರ ನನ್ನ ಅಪ್ಪನ ಕಲ್ಪನೆಯಲ್ಲಿರಬಹುದು. ಆಗಿನ ಕಾಲದಲ್ಲಿ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಬೆಳಿಗ್ಗೆ ಎದ್ದರೆ ಕಾಯಿಯ ಚೂರೊ, ಹಸಿ ಗೆಣಿಸಿನ ತುಣುಕೊ ತಿಂದು ಹಸಿವು ಇಂಗಿಸಿಕೊಳ್ಳುತ್ತಿದ್ದ ದಿನಗಳವು. ಒಂದು ದಿನ ಹಲಸಿನ ಹಣ್ಣು ಕಿತ್ತುಕೊಂಡು ಬರಲು ಹೋದ ಅಜ್ಜ, ಲಾರಿಯ ಚಕ್ರದೊಳಗೆ ಸಿಲುಕಿ ಧುರ್ಮರಣ ಅಪ್ಪಿದಾಗ ಇಡಿ ಕುಟಂಬ ಬೀದಿಗೆ ಬೀಳುವ ಪರಿಸ್ಥಿತಿ. ಅಜ್ಜ ಸತ್ತ ನಂತರ ಬಂಧುಗಳ ಅವಮಾನದ ಕುಶಲೋಪರಿಯ ನಡುವೆ ಏಳು ಮಕ್ಕಳನ್ನು ಸಾಕಲು ಅಜ್ಜಿ ಪಟ್ಟ ಪಾಡು ಅಪ್ಪ ವಿವರಿಸುವಾಗ ಕಣ್ಣಲ್ಲಿ ನೀರು ಜಿನುಗುತ್ತದೆ.
"ಅಂದು ಶೀಮಂತ ಮಕ್ಕಳು ಮಾತ್ರ ಬಟ್ಟೆ ಹಾಕುತ್ತಿದ್ದರು. ನಾವೆಲ್ಲ ಸೊಂಟದ ಸುತ್ತ ಮಾತ್ರ ಚಿಕ್ಕ ಟವಲು ಸುತ್ತಿಕೊಳ್ಳುತ್ತಿದ್ದೆವು. ಆಗಿನ ಕಾಲವೇ ಆಗಿತ್ತು. ಹೊಟ್ಟೆಗೆ ಇಲ್ಲದಿರುವಾಗ ಬಟ್ಟೆಯ ಬಗ್ಗೆ ಯಾರೂ ವಿಚಾರ ಮಾಡುತ್ತಿರಲಿಲ್ಲ." ಎಂದು ಅಪ್ಪನ ತನ್ನ ಬಾಲ್ಯದ ಬಡತನದ ಕಥೆಗಳನ್ನು ಒಂದೊಂದಾಗಿ ಬಿಡಿಸಿ ಹೇಳುತ್ತಿದ್ದರೆ ನನ್ನ ಕಣ್ಣಿನಲ್ಲಿ ನೀರು ಬರುತ್ತಿತ್ತು. ಅಂತಹ ಸ್ಥಿತಿಯಲ್ಲಿಯೇ ಅವರಿವರ ಮನೆಯ ಕೆಲಸ ಮಾಡಿ 10 ನೇ ತರಗತಿಯವರೆಗೆ ಓದಿದ ನನ್ನ ಅಪ್ಪ, ಅಂತಿಮ ಪರೀಕ್ಷೆಯ ಸಂದರ್ಭದಲ್ಲಿ ಟೈಪಾಯಿಡ್ ಬಂದು ಹಾಸಿಗೆ ಹಿಡಿದಾಗ ಔಷಧಿ ಕೊಡಿಸಲು ದುಡ್ಡಿರಲಿಲ್ಲವಂತೆ. ಇಲ್ಲದಿದ್ದರೇ ತಾನೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಇಂದು ಹತ್ತಂಕಿ ಸಂಬಳ ಪಡೆಯುವ ಆಫೀಸರ್ ಆಗಿರುತ್ತಿದ್ದೆ ಎನ್ನುತ್ತಾರೆ. ಆ ಮಾತು ಸತ್ಯ ಕೂಡ ಹೌದು.
ಆಗಿನ ಕಾಲವೇ ಹಾಗಿತ್ತು. ಎಲ್ಲರ ಮನೆಯಲ್ಲಿಯೂ ತುತ್ತು ಅನ್ನಕ್ಕೆ ಹಾಹಾಕಾರ. ನಾನು ಪೆನ್ನು ನೋಡಿದ್ದು 10ನೇ ತರಗತಿಗೆ ಬಂದ ಮೇಲೆ. ಅದೂ ನನ್ನ ಸಹಪಾಠಿಯದನ್ನು ಕದ್ದಿದ್ದು ಎನ್ನುವ ಅಪ್ಪ ತನ್ನ ಶಾಲೆಯ ದಿನಗಳಲ್ಲಿ ಮಧ್ಯಾನದ ಬಿಡುವಿನಲ್ಲಿ ಹೊಟ್ಟೆಗೆ ಊಟವಿಲ್ಲದೆ, ನದಿಯ ದಡದಲ್ಲಿ ಕುಳಿತು, ನಂತರ ಸುಮ್ಮನೆ ಎದ್ದು ಬರುತ್ತಿದ್ದರಂತೆ. ಎಲ್ಲರೂ ಮಧ್ಯಾನ್ಹದ ಬುತ್ತಿ ತಂದಿರುವಾಗ ಇವರು ಯಾರಿಗೂ ಗೊತ್ತಾಗದೆ ಬಡತನವನ್ನು ತನ್ನ ಹೊಟ್ಟೆಯೊಳಗೇ ಹುದುಗಿಸಿಟ್ಟು ಊಟ ಆಯಿತು ಎಂದು ಮುಗಳ್ನಗುತ್ತಿದ್ದರಂತೆ. ಮಳೆಗಾಲದಲ್ಲಿ ಶಾಲೆಗೆ ಹೋಗಲು ಛತ್ರಿ ಇರಲಿಲ್ಲ. ಬೇರೆಯವರ ತೋಟದ ಬಾಳೆಯ ಎಲೆಯೋ/ಕೆಸುವಿನ ಎಲೆಯನ್ನೂ ಸೂಡಿಕೊಂಡು ಹೋಗುತ್ತಿದ್ದೆವು ಎನ್ನುವ ಅಪ್ಪ, ನನ್ನ ಚಿಕ್ಕ ತಂಗಿ ತನಗೆ ಬಣ್ಣದ ಛತ್ರಿಯೇ ಬೇಕು ಇಲ್ಲದಿದ್ದರೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಾಗ, ತನ್ನ ಕಥೆ ಹೇಳಿದ್ದ. ಸುರಿಯುವ ಮಳೆಯಲ್ಲಿಯೂ ಆತನ ಕಣ್ಣಿನಿಂದ ಕಣ್ಣೀರು ಜಿನುಗಿದ್ದು ನಮಗೆ ಯಾರಿಗೂ ಕಾಣಿಸಿರಲಿಲ್ಲ.
ಅಪ್ಪನಿಗೆ ಅರಿವು ಮೂಡಿದ ವಯಸ್ಸಿನಿಂದ ಅಪ್ಪ ದುಡಿಯುತ್ತಲೇ ಇದ್ದಾನೆ. ದೈತ್ಯ ದುಡಿಮೆಗಾರ ಆತ. ಒಂದು ಕ್ಷಣವೂ ಅಪ್ಪ ಸುಮ್ಮನೆ ಕುಳಿತದ್ದನ್ನು ನಾನು ಇದುವರೆಗೆ ನೋಡಿಲ್ಲ. ಅಜ್ಜ ಸತ್ತ ಮೇಲೆ ಕೇರಳದಿಂದ ವಲಸೆ ಬಂದ ನಮ್ಮ ಕುಟುಂಬ ನೆಲೆ ನಿಂತದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಒಂದು ಕುಗ್ರಾಮದಲ್ಲಿ. ಸುತ್ತೆಲ್ಲಾ ದೈತ್ಯ ಕಾನನ. ಹತ್ತು ಹದಿನೈದು ಮೈಲಿಗೊಂದು ಮನೆ. ಮಳೆಗಾಲ ಪ್ರಾರಂಭವಾದರೆ, ಬರೋಬ್ಬರಿ 4 ತಿಂಗಳು ಜಲಾವೃತ. ಅಂತಹ ಕಾಡಿನ ಮಧ್ಯದಲ್ಲಿ ಎಲ್ಲಿಂದಲೋ ಕಾಡಿ ಬೇಡಿ ತಂದ ನಾಲ್ಕು ಬಾಳೆ ಹಾಗೂ ಅಡಿಕೆ ಸಸಿ ನೆಟ್ಟು ಅಪ್ಪ ಅಮ್ಮನೊಂದಿಗೆ ಸಂಸಾರ ಪ್ರಾರಂಭಿಸಿದ್ದ. ಪಕ್ಕದ ನಾಲ್ಕು ಮಾರು ದೂರದಲ್ಲಿ ದೊಡ್ಡಪ್ಪನ ಮನೆ. ಅಲ್ಲಿಯೂ ಇದೇ ಪರಿಸ್ಥಿತಿ. ನಾನು ಹುಟ್ಟುವ ವೇಳೆಗೆ ಮನೆಯಂಗಳ ನಾಲ್ಕು ಅಡಿಗೆ ಸಸಿಗಳು ಮೊದಲ ಸಿಂಗಾರ ಬಿಟ್ಟಿದ್ದವಂತೆ.
ನಾವೆಲ್ಲಾ ಶಾಲೆಗೆ ಹೋಗಬೇಕಾದರೆ 4 ಕಿಮಿ ಕಾಡಿನ ದಾರಿಯಲ್ಲಿ ನಡೆದು ಮುಖ್ಯ ರಸ್ತೆಗೆ ಬಂದು ನಂತರ ಕೆಂಪು ಬಸ್ಸಿನಲ್ಲಿ 7 ಕಿಮಿ ಪ್ರಯಾಣಿಸಬೇಕಿತ್ತು. ಮಳೆಗಾಲದಲ್ಲಿ ಅಪ್ಪ ನನ್ನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಮರದ ಶಂಖ ದಾಟಿಸಿ, ರಸ್ತೆಗೆ ತಲುಪಿಸುತ್ತಿದ್ದರು. ಸಂಜೆಯೂ ಶಾಲೆಯಿಂದ ಮರಳುವಾಗ ಇದು ಪುನರಾವರ್ತನೆ ಆಗುತ್ತಿತ್ತು. ಗಾಳಿ ಮಳೆ ಪ್ರಾರಂಭವಾದರೆ, ಮನೆಯಲ್ಲಿ ಅಮ್ಮ ದೇವರ ಪೋಟೊದ ಮುಂದೆ ಮುಂಬತ್ತಿ ಬೆಳಗಿ, ಮಕ್ಕಳು ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದ್ದರು. ಅಂತಹ ಭೀಕರ ಮಳೆ. ನಾವೆಲ್ಲ ನಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿಕೊಂಡು ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ನಂತರ ಸಾಗರಕ್ಕೆ ಬಂದು ಹಾಸ್ಟೆಲ್ ಸೇರಿದೆವು.
ನಮ್ಮಅಪ್ಪ ಓದಿದ್ದು 10. ಅಮ್ಮನದು 8 ನೇ ಇಯತ್ತೆ. ಆದರೆ ಅವರಿಬ್ಬರಿಗೆ ನಮ್ಮ ಮಕ್ಕಳು ಎಲ್ಲಿಯವರೆಗೆ ಓದುತ್ತಾರೆಯೇ ಅಲ್ಲಿಯವರೆಗೆ ಓದಲಿ ಎನ್ನುವ ಅದಮ್ಯ ಬಯಕೆ. ಹೊಟ್ಟೆಗೆ ಉಪವಾಸವಿದ್ದರೂ ನಮ್ಮ ಶಿಕ್ಷಣಕ್ಕೇನೂ ಕಡಿಮೆ ಮಾಡಲಿಲ್ಲ. ಪ್ರಾಮಾಣಿಕತೆ ಮತ್ತು ದುಡಿಮೆಯನ್ನೇ ನಂಬಿಕೊಂಡಿದ್ದ ಅವರು ನಮ್ಮ ಪಾಲಿಗೆ ಕೇವಲ ತಂದೆ-ತಾಯಿ ಅಷ್ಟೇ ಆಗಿರಲಿಲ್ಲ. ದೊಡ್ಡದೊಂದು ಜೀವನಾನುಭವಗಳ ವಿಶ್ವವಿದ್ಯಾಲಯ ಆಗಿದ್ದರು. ಹಾಗಾಗಿ ನಾವು ಮೂವರು ಮಕ್ಕಳೂ ಓದಿನಲ್ಲಿ ಎಂದೂ ಹಿಂದೆ ಬೀಳಲಿಲ್ಲ. ನಾನು ಸಾಗರದಲ್ಲಿ ಪಿಯುಸಿ ಮುಗಿಸಿ, ಹುಬ್ಬಳಿಗೆ ಪದವಿಗೆ ಸೇರುವಾಗ ಅಪ್ಪ ಹೇಳಿದ್ದರು. " ಬದುಕು ನೀನು ರೂಪಿಸಿಕೊಂಡಂತೆ. ನಿನ್ನ ಪ್ರಯತ್ನದಲ್ಲಿ, ಪ್ರಾಮಾಣಿಕತೆಯಲ್ಲಿ ಅದರ ಯಶಸ್ಸು ಅಡಗಿದೆಯೇ ಹೊರತು ನಿನ್ನ ಹಣೆಬರಹದಲ್ಲಿ ಅಲ್ಲ." ಅಪ್ಪನ ಮಾತು ಇಂದಿಗೂ ನನಗೆ ಸತ್ಯವೆನಿಸುತ್ತದೆ.
ಮೊನ್ನೆ ಮೊನ್ನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೊರಬಿದ್ದಾಗ ನಮ್ಮೂರಿಗೆ ವಿದ್ಯುತ್ ಬಂತು. ಮನೆಯಲ್ಲಿ ಶುಭ್ರವಾಗಿ ಉರಿಯುವ ಟ್ಯೂಬ್ ಲೈಟ್ಗಳನ್ನು ನೋಡುವಾಗ ಹಿಂದೆ ಪುಸ್ತಕದ ಮುಂದಿಟ್ಟುಕೊಂಡು ಓದಿದ ಚಿಮ್ಮಣಿ ಬುಡ್ಡಿಯ ನೆನಪು ಬರುತ್ತದೆ. ಇದೀಗ ನಮ್ಮೂರ ದಟ್ಟ ಕಾನನದ ನಡುವೆ ನಾಲೈದು ಹಂಚಿನ ಮನೆಗಳು ಎದ್ದಿವೆ. ಉರಿಗೆ ಟಿವಿ, ಪೋನ್ ಬಂದಿದೆ. ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಬದಲಾವಣೆಯ ಬೆಳಕು ಕಂಡಿದೆ. ಬಡತನ ಕರಗಿ ಸ್ವಾವಲಂಬನೆಯ ಹೊಂಗಿರಣ ಮೂಡಿದೆ.
ಸ್ನಾತಕೋತ್ತರ ಪದವಿ ಮುಗಿದ ಬೆನ್ನಲ್ಲೆ ನನಗೆ ಚೈನೈನಲ್ಲಿ ಕೆಲಸ ಸಿಕ್ಕಿತು. ಮಲೆನಾಡಿನ ಮೂಲೆಯೊಂದರಲ್ಲಿ ಹುಟ್ಟಿ ಬೆಳದ ನನ್ನನ್ನು ವಿಧಿ ಇನ್ನು ಕೆಲಸ ಮಾಡು ಎಂದು ಚೆನೈಗೆ ಎತ್ತಿ ಎಸೆದಿದೆ. ಚೈನೈನ ವೆಬ್ ದುನಿಯಾ ಕಂಪನಿಯಲ್ಲಿ ಅಂತರ್ಜಾಲ ಪತ್ರಕರ್ತನಾಗಿ ವೃತ್ತಿ. ಯಾಯೂ ಕನ್ನಡ ಜಾಲತಾಣದಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ. ಇವೆಲ್ಲಾ ನೆನಪುಗಳೊಂದಿಗೆ ಮೊನ್ನೆ ಕಿಲಿಮಣೆ ಕುಟ್ಟುತ್ತಿರುವಾಗ ಧಾರವಾಡದಿಂದ ಪೋನ್ ಬಂತು. ನಿಮ್ಮ ಅಂತಿಮ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡಿವೆ. ನಿನಗೆ ಪ್ರಥಮ ರಾಂಕ್ ಎಂದು ವಿಭಾಗ ಮುಖ್ಯಸ್ಥರು ಪೋನ್ ಮಾಡಿದ್ದರು. ಮತ್ತೊಮ್ಮೆ ಸಂಭ್ರಮ.
ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 7 ಸ್ವರ್ಣ ಪದಕಗಳು ಲಭಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಆ ಭಾಗ್ಯ ನನಗೆ. ಊರಿನಲ್ಲಿದ್ದ ಅಪ್ಪನಿಗೆ ಫೋನಾಯಿಸಿದೆ. ಸಂಭ್ರಮದಿಂದ ಮಾತನಾಡಲು ಅಪ್ಪನ ಗಂಟಲುಬ್ಬಿ ಬಂತು. ಎರಡು ಕ್ಷಣ ಏನೂ ಮಾತನಾಡಲಿಲ್ಲ. ನಂತರ ಹೇಳಿದರು. "ಕಷ್ಟ ಪಟ್ಟಿದ್ದಕ್ಕೆ ಪ್ರಾಮಾಣಿಕತೆಗೆ ಸಿಕ್ಕಿದ ಪ್ರತಿಫಲ ಅದು. ತುಂಬಾ ಜತನದಿಂದ ಅದನ್ನು ಕಾಪಾಡಿಕೊ" ನನಗೆ ತಿಳಿಯದಂತೆ ನನ್ನ ಕಣ್ಣಂಚಿನಿಂದ ಕಣ್ಣೀರು ಜಿನುಗಿತ್ತು. ಮನಸ್ಸು ಅಪ್ಪನ ಬಗ್ಗೆಯೇ ವಿಚಾರ ಮಾಡುತ್ತಿದೆ. ಎಂತಹ ಅದ್ಭುತ ಮನುಷ್ಯ ಆತ. ಅಪ್ಪನಿಗೇನಾದರೂ ನನ್ನಂತೆ ಓದಲು ಅವಕಾಶ ಸಿಕ್ಕಿದ್ದರೆ ಅದರ ಕಥೆಯೇ ಬೇರೆಯಾಗಿರುತ್ತಿತ್ತು.
ದುಡಿದ ಬೆಂಡಾಗಿರುವ ಅಪ್ಪನ ರಟ್ಟೆಯೊಳಗೆ ಅದ್ಭುತ ಜೀವನ ಶಕ್ತಿಯಿದೆ. ಮೊಗೆಮೊಗೆದು ಕೊಟ್ಟರೂ ಮುಗಿಯದ ಜೀವನ ಪ್ರೀತಿಯಿದೆ. ತುಂಬಾ ಹತ್ತಿರದಿಂದ ನೋಡಿದ ನನಗದು ಅರ್ಥವಾಗುತ್ತಿದೆ. ನನಗೆ ಸಿಕ್ಕಿರುವಂತ Gold Medal ನನ್ನ ಅಪ್ಪನಿಗೆ ಸಿಗಬೇಕಿತ್ತು. ಯಾವ ರೀತಿಯಲ್ಲಿ ನೋಡಿದರೂ, ಚಿನ್ನದ ಪದಕಗಳನ್ನು ಪಡೆಯಲು ಆತ ನನಗಿಂತ ನೂರು ಪಟ್ಟು ಅರ್ಹ ವ್ಯಕ್ತಿ. ತಮ್ಮ ಕನಸುಗಳೆನ್ನೆಲ್ಲಾ ತಮ್ಮ ಮಕ್ಕಳ ಯಶಸ್ಸಿನಲ್ಲಿ ನೋಡುವ ನನ್ನ ನನ್ನ ತಂದೆಯಾಗಿಗಳಿಗೆ ನಾನು ಇದಕ್ಕಿಂತ ಒಂದು ಉತ್ತಮ ಬಹುಮಾನ ಕೊಡಲು ಸಾಧ್ಯವಾಗದಿರಬಹುದೇನೋ...
7 comments:
ಮೊದಲನೆಯದಾಗಿ ಸ್ನಾತಕೋತ್ತರ ಪದವಿಯಲ್ಲಿ ಮೊದಲ ಸ್ಥಾನ ಪಡೆದಿದ್ದಕ್ಕೆ ಅಭಿನಂದನೆಗಳು.
ಹಿರಿಯರು ಪಟ್ಟ ಕಷ್ಟದ ಫಲವನ್ನೇ ನಾವು ಅನುಭವಿಸುವುದೆನ್ನುವುದಕ್ಕೆ ಇಲ್ಲಿ ನೀವು ಬರೆದಿರುವ ಅನುಭವಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಉತ್ತಮ ಬರಹ.. ಹೀಗೇ ಬರೆಯುತ್ತಿರಿ..
'ಮಲ್ಲಿಕಾರ್ಜುನ ತಿಪ್ಪಾರ್' ಹಾಗೂ 'ಸಂಧ್ಯ' ಅವರು ಆಸ್ಥೆಯಿಂದ ಮಾಡಿರುವ ಕಮೆಂಟ್ಗಳು ತಾಂತ್ರಿಕ ದೋಷದಿಂದ ಇಲ್ಲಿ ಪ್ರಕಟಗೊಂಡಿರುವುದಿಲ್ಲ. ಅವರ ಸ್ಪಂದನೆಗೆ ಕೃತಜ್ಞತೆಗಳು.
ಪ್ರಿಯ ಜೊಮನ್,
ಕಷ್ಟಗಳು ಬರಹಗಾರ ಎನಿಸಿಕೊಳ್ಳಲು ಆಗಬೇಕಾದ ಸಂಸ್ಕಾರ. ಅವು ಬರವಣಿಗೆ ಜೀವನ ಅಂದುಕೊಂಡವನಿಗೆ ಸರಸ್ವತಿಯ ದೀಕ್ಷೆ ನೀಡುವ ವಿಧಾನ. ನಿಮ್ಮ ಬರವಣಿಗೆ ಚೆನ್ನಾಗಿದೆ ಹಾಗೆಯೆ ನಿಮಗೆ ಸಂಸ್ಕಾರ ಕೂಡ ಸಿಕ್ಕಿದೆ... ಬರವಣಿಗೆ ಮುಂದುವರೆಯಲಿ...
ತುಂಬ ಚೆನ್ನಾಗಿದೆ.
ಜೋಮನ್,
ಸ್ಪಲ್ಪ ತಡವಾಗಿದೆ, ದಯವಿಟ್ಟು ನನ್ನ ಅಭಿನಂದನೆಗಳನ್ನು ಸ್ಪೀಕರಿಸಿ..
ತುಂಬಾ ಸ್ಪೂರ್ತಿದಾಯಕವಾಗಿದೆ ನಿಮ್ಮ ಶ್ರಮದಿಂದ ಮೇಲೆ ಬಂದ ರೀತಿ
ಶಿವು,
ನಿಮ್ಮ ಅಭಿನಂದನೆಗೆ ನಾನು ಅಬಾರಿ. ಆಗಾಗ್ಗ ನನ್ನ ಬ್ಲಾಗ್ಗೆ ಬರುತ್ತಲಿರಿ.
ಧನ್ಯವಾದಗಳು.
ಜೋಮನ್.
ನಿಮ್ಮ ಬರಹ........ ನಿಮ್ಮ ಬದುಕು.............................. ನಿಮ್ಮ ಬ್ಲಾಗು...ಮಳೆಹನಿ.
ನಾನು ಅತಿ ಶ್ರದ್ಧೆಯಿ೦ದ ಓದಿದ ಮೊದಲನೇ ಬ್ಲಾಗು ನಿಮ್ಮ ಮಳೆಹನಿ.
ಥ್ಯಾ೦ಕ್ಸ್ ಎ ಲಾಟ್ ಸರ್.
Post a Comment