ಜೈಮಿನಿ ಬ್ರಿಡ್ಜ್ನ ಪ್ಲೈಓವರ್ ಕೆಳಗೆ ನಡೆಯುತ್ತಾ ಯೋಚಿಸುತ್ತಿದ್ದೆ. ಹಸಿವು ಎನ್ನುವುದು ಎಷ್ಟೊಂದು ಕಠೋರ ಅಲ್ವಾ? ಮನುಷ್ಯನನ್ನು ಎಂತಹ ಸ್ಥಿತಿಗೂ ಹಸಿವು ತಂದು ನಿಲ್ಲಿಸುತ್ತದೆ. ಪ್ಲೈಓವರ್ನ ಸಂದುಗಳಲ್ಲಿ ಒಪ್ಪತ್ತಿನ ಊಟಕ್ಕೆ ಗತಿಯಿಲ್ಲದೆ, ಎದುರಿಗೆ ಬಂದು ನಿಂತು ಧನ್ಯತೆಯಿಂದ ಕೈಯೊಡ್ಡುವ ಚಿಕ್ಕ ಮಕ್ಕಳನ್ನು ಕಂಡಾಗ, ಕೈ ತನಗರಿವಿಲ್ಲದಂತೆ ಶರ್ಟಿನ ಜೇಬುಗಳನ್ನು ತಡಕುತ್ತಿತ್ತು. ಇತ್ತೀಚೆಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗಿನಿಂದ ಚೆನೈನ ರಾತ್ರಿ ಬದುಕಿನ ಕಠೋರತೆಯ ನಗ್ನ ದರ್ಶನವಾಗಿದೆ. ಹಗಲಿನ ಮಾರ್ಥತೆಯಾಗಲಿ, ಅವಸರದ ಕೊಳ್ಳುಬಾಕತನವಾಗಲಿ ರಾತ್ರಿಯಲ್ಲಿ ಮಾರ್ಧನಿಸುವುದಿಲ್ಲ. ರಾತ್ರಿ ಎಷ್ಟು ನಿಶಬ್ದವೂ ಅಷ್ಟೇ ಕಠೋರ. ನೀರವ ಮೌನದಲ್ಲೂ ಹಸಿವಿನ ಕ್ಷೀಣ ದ್ವನಿ ಅಂತರಂಗವನ್ನು ಕಲುಕುತ್ತದೆ.
ರಾತ್ರಿ 11 ಗಂಟೆಗೆ ರಾತ್ರಿ ಪಾಳಿಯ ಕೆಲಸವನ್ನು ಮುಗಿಸಿಕೊಂಡು ಹೊರಬಿದ್ದರೆ ಎಲ್ಲ ಬಸ್ಸುಗಳು ಆದಾಗಲೇ ಹೋಗಿರುತ್ತದೆ. share ಆಟೋಗಳು ಸಿಕ್ಕಿದರೆ ಪುಣ್ಯ. ಇಲ್ಲದಿದ್ದರೆ ಒಮ್ಮೊಮ್ಮೆ ನಡೆದುಕೊಂಡೇ ರೂಮು ಸೇರುತ್ತೇನೆ. ಮೊದ ಮೊದಲು ನಡಿಗೆ ಬೇಸರವಾಗಿತ್ತು. ಆದರೆ ಬರುಬರುತ್ತಾ ಅದು ಅನಿವಾರ್ಯವಾಯಿತು. ಮನುಷ್ಯ ಬದುಕಿನ ಸಂಕೀರ್ಣತೆಗಳನ್ನು, ಸೂಕ್ಷ್ಮತೆಗಳನ್ನು ಬಹಳ ಹತ್ತಿರದಿಂದ ಕಾಣುವ ಅವಕಾಶವನ್ನು ನೈಟ್ ಶಿಪ್ಟ್ ಕಲ್ಪಿಸಿದೆ. ಈಗ ರಾತ್ರಿ ಬೇಸರ ಎನಿಸುವುದಿಲ್ಲ. ಪ್ಲೈಓವರ್ಗಳ ಅಡಿಯಲ್ಲಿ ಪ್ಲಾಸ್ಟಿಕ್ ತುಣುಕೊಂದರಲ್ಲಿ ಅನ್ನ ಹಂಚಿಕೊಂಡು ತಿನ್ನುವ ತಂದೆ-ತಾಯಿ ಮಕ್ಕಳನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಹಸಿವು! ಅದು ಎಲ್ಲರಿಗೂ ಒಂದೇ ಅಲ್ಲವೇ ಎನ್ನುತ್ತದೆ ಮನಸ್ಸು.
ಚೆನೈಗೆ ಮೆಟ್ರೋಪಾಲಿಟನ್ ಸಿಟಿ ಎನ್ನುವ ನಾಮಾಂಕಿತವನ್ನು ಯಾವ ಮಾನದಂಡದ ಮೇಲೆ ನೀಡಿದ್ದಾರೆ ಎನ್ನುವುದು ಇದುವರೆಗೆ ನನಗೆ ತಿಳಿದಿಲ್ಲ. ಕಟ್ಟಾ ಕೊಳಕು ನಗರ. ಇಲ್ಲಿನ ಪ್ರಮುಖ ಆಹಾರ ಬಿರಿಯಾಣಿ. ಪ್ರತಿ ಗಲ್ಲಿಗೊಂದರಂತೆ ಮಟನ್ ಶಾಪ್ಗಳು ಹಾಗೂ ಬಿರಿಯಾಣಿ ಅಂಗಡಿಗಳು ಸಾಲುಗಟ್ಟಿ ನಿಂತಿವೆ. ರಾತ್ರಿ 11 ಗಂಟೆಯಾಗುತ್ತಿದ್ದಂತೆ ಬಿರಿಯಾಣಿ ಅಂಗಡಿಯ ಮಾಲಿಕ ಕದವಿಕ್ಕಿ, ದಿನದ ಆದಾಯ ಎಣಿಸತೊಡಗುತ್ತಾನೆ. ಇಂತಹ ಸಮಯದಲ್ಲಿ ಅಳಿದುಳಿದ ಎಲುಬಿನ ಚೂರುಗಳಿಗಾಗಿ ಪ್ಲೈಓವರ್ ಕೆಳಗಿನವರು ಬಂದು ನಿಲ್ಲುತ್ತಾರೆ. ಅಮ್ಮಾ.. ಅಣ್ಣಾಚಿ.. ಅದೇ ಧನ್ಯತೆಯ ಭಾವ.
ಪ್ಲೈಓವರ್ ಬದುಕನ್ನು ನೋಡಬೇಕಾದರೆ ನೀವು ರಾತ್ರಿ 12 ಗಂಟೆಯ ನಂತರ ರಸ್ತೆಗಿಳಿಯಬೇಕು. ಬಿಕ್ಷುಕರು, ಕುಡುಕರು, ಬದುಕಿನ ನಿರ್ಧಯತೆಗೆ ಗುರಿಯಾದವರು ಎಲ್ಲರೂ ಇಲ್ಲಿ ಸಿಗುತ್ತಾರೆ. ಕಾಲು ಕೊಳೆತು ವೃಣವಾದ 70ರ ಮುದುಕನಿಂದ ಹಿಡಿದು, ತಾಯಿಯ ಎದೆಹಾಲಿಗಾಗಿ ಕಿರುಚುತ್ತಿರುವ ಎಳೆಯ ಮಗುವಿನ ತನಕ ಇಲ್ಲಿ ಎಲ್ಲರಿಗೂ ಹಸಿವಿನ ದಾರಿದ್ರ್ಯತನ.
ಲಿಬರ್ಟಿ ಬಸ್ಸ್ಟಾಪಿನಿಂದ share ರಿಕ್ಷಾ ಸಿಕ್ಕಿದರೆ ಕೆಲವೊಮ್ಮೆ ಮೌಂಟ್ ರೋಡ್ ಸಮೀಪ ದೇವಿ ಥಿಯೇಟರ್ ಬಳಿ ಇಳಿದುಕೊಂಡು ಶಾಟ್ ಕಟ್ ಬಳಸಿ ರೂಮು ಸೇರಬಹುದು. ಇಲ್ಲಿನ ಬದುಕು ಮತ್ತೊಂದು ಕರಾಳ ಅಧ್ಯಾಯ. ಇದು ಮಾರುಕಟ್ಟೆ ಏರಿಯಾ ಆಗಿರುವುದರಿಂದ ಜಗತ್ತಿನ ಎಲ್ಲ ದುರ್ಗಂಧಗಳನ್ನು ಇಲ್ಲಿ ಅಗ್ರಾಣಿಸಬಹುದು. ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಹೆಣ ಜೋಡಿಸಿ ಇಟ್ಟಂತೆ ರಸ್ತೆಯ ಪಕ್ಕದಲ್ಲಿ ಜನರು ಮಲಗಿರುತ್ತಾರೆ. ತಲೆಯ ಮೇಲೆ ಸೂರಿಲ್ಲದವನಿಗೆ ಮಲಗಿದ ಜಾಗವೇ ಹಾಸಿಗೆ, ಆಕಾಶವೇ ಹೊದಿಕೆ ಎನ್ನುವ ಪರಿಸ್ಥಿತಿ. ಅವನ ಹಾಸಿಗೆ ಪಕ್ಕವೇ ಎದ್ದು ನಿಂತು ಕುಡುಕನೊಬ್ಬ ರಾತ್ರಿಯ ಮಂಪರುಗಣ್ಣಿನಲ್ಲಿ ಮೂರ್ತ ವಿಸರ್ಜನೆ ಮಾಡುತ್ತಾನೆ. ಅನತಿ ದೂರದಲ್ಲಿ ಸಂಸಾರವೊಂದು ಊಟ ಮಾಡುತ್ತಿರುತ್ತದೆ.
ಇವೆಲ್ಲಾ ನಡೆಯುತ್ತಿರುವುದು ರಾತ್ರಿ 12 ಗಂಟೆ ಸುಮಾರಿಗೆ. ಸಮಾಜದ ಒಂದು ವರ್ಗದ ಜನರು ಆದಾಗಲೇ ಮಲಗಿ ಎರಡು ಸುತ್ತಿನ ನಿದ್ರೆ ಮುಗಿದಿರುತ್ತದೆ. ಆ ವೇಳೆಗೆ ಇವರ ಬದುಕು ಪ್ರಾರಂಭವಾಗಿರುತ್ತದೆ. ಕೆಲವರು ಹಾಡುತ್ತಿರುತ್ತಾರೆ, ಇನ್ನು ಕೆಲವರು ಕುಡಿಯುತ್ತಿರುತ್ತಾರೆ. ಇಲ್ಲಿನ ಬದುಕು ತುಂಬಾ ವಿಚಿತ್ರ ಎನಿಸುತ್ತದೆ. ಅಸಹ್ಯ ಹುಟ್ಟಿಸುತ್ತದೆ. ನಡೆಯುತ್ತಾ ನಡೆಯುತ್ತಾ ಮುಖ್ಯ ರಸ್ತೆಗೆ ಬರುವ ವೇಳೆಗೆ ನಿಟ್ಟುಸಿರು ಬಿಡುತ್ತೇನೆ.
ಮೊದಮೊದಲು ಬೀದಿ ದೀಪಗಳಿಲ್ಲದ ಕತ್ತಲ ದಾರಿಯಲ್ಲಿ ನಡೆದು ಬರುವಾಗ ಆತಂಕ ಎನಿಸುತ್ತಿತ್ತು. ಈಗ ಅದೆಲ್ಲಾ ಮರೆಯಾಗಿದೆ. ಹಸಿವು, ಬಡತನ, ದಾರಿದ್ರ್ಯ ಎಲ್ಲದರ ಮುಖವೂ ಹತ್ತಿರದಿಂದ ಅನಾವರಣಗೊಂಡಿದೆ. ಚೈನೈನ ಬದುಕಿಗೆ ನಾನು ಸ್ಥಿತಪ್ರಗ್ನನಾಗಿ ಹೊಂದಿಕೊಂಡಿದ್ದೇನೆ. ರಾತ್ರಿ 12:30ಕ್ಕೆ ರೂಮು ಸೇರಿ, ಕದವಿಕ್ಕಿಕೊಂಡು ಗೆಳೆಯರಿಗೆ ಮಿಸ್ ಕಾಲ್ ಕೊಡುತ್ತೇನೆ. ಅವರದೂ ನನ್ನ ಹಾಗೆ ನೈಟ್ ಶಿಪ್ಟ್. ಒಬ್ಬನು ಬೆಂಗಳೂರಿನ Tv9 ಮತ್ತೊಬ್ಬನು ಹೈದ್ರಾಬಾದ್ನ Indian Express ನಲ್ಲಿ ಕೆಲಸ ಮಾಡುತ್ತಾನೆ. ಇಬ್ಬರಿಂದಲೂ ಮಿಸ್ ಕಾಲ್ ಬಂದ ನಂತರ ನಿರಾಳವಾಗಿ ನಿದ್ರೆ ಮಾಡಲು ಅಣಿಯಾಗುತ್ತೇನೆ.
ಬೆಳಿಗ್ಗೆ ಎದ್ದರೆ ರಾತ್ರಿ ನಡೆದುದೆಲ್ಲಾ ಒಂದು ದೃಶ್ಯಕಾವ್ಯದಂತೆ ಎದುರಿಗೆ ಬಂದು ನಿಲ್ಲತ್ತದೆ. ಪ್ಲೈಓವರ್ನ ನಿರ್ಭಿಡ ರಸ್ತೆಯಲ್ಲಿ ತನ್ನ ಪ್ರೀಯತಮೆಯನ್ನು ಬೆನ್ನಿಗಂಟಿಸಿಕೊಂಡು ಸುಯ್ಯನೆ ಗಾಳಿಯಲ್ಲಿ ತೇಲಿ ಹೋದ ಪ್ಯಾಶನ್ ಸವಾರನ ಮೇಲೆ ಸಿಟ್ಟು ಬರುತ್ತದೆ. ಮನಸ್ಸು ಮತ್ತೆ ಹಗಲಿನ ಬದುಕಿಗೆ ತೆರೆದುಕೊಳ್ಳುತ್ತದೆ. ನೀವು ಯಾವುದಾದರೂ ದೊಡ್ಡ ನಗರದಲ್ಲಿ ಕೆಲಸದಲ್ಲಿದ್ದರೆ ಒಮ್ಮೆ ಬಿಡುವು ಮಾಡಿಕೊಂಡು ರಾತ್ರಿ ಬದುಕನ್ನು ನೋಡಿ. ಹಗಲು ಮುಚ್ಚಿಟ್ಟಿದ್ದನ್ನು ರಾತ್ರಿ ತೆರದಿಡುತ್ತದೆ. ಎಲ್ಲಾ ನೋಟಗಳಾಚೆಗೂ ಒಂದು ಬದುಕಿದೆ ಅನ್ನುತ್ತಾರಲ್ಲಾ ಹಾಗೆ. ಆ ಅನುಭವದ ಸಾಕ್ಷಾತ್ಕಾರಕ್ಕೆ ಅರಿವು ದೇವರು.
3 comments:
ಹೌದು ಕತ್ತಲೆ ಎಲ್ಲವನ್ನು ನುಂಗಿ ಹಾಕುತ್ತೆ. ಕತ್ತಲೆಯಲ್ಲಿ ಕಣ್ಣ್ ಬಿಟ್ಟು ಅಲೆದಾಗಲೇ, ಮಹಾನಗರಗಳ ಕರಾಳ,ಹೇಸಗಿತನ ಗೊತ್ತಾಗೋದು..
ತುಂಬಾ ಚೆನ್ನಾಗಿ ಬರೆದಿದ್ದೀಯಾ.. ಜೋಮನ್.
Thanks
Malli
wwww.nannahaadu.blogspot.com
mana muttuwa lekhana..hasiwu,kashtagalu andre hegiruttawe annuwudanna thorisuttide ee lekhana...keep writing..:)
chitra-2
chennagide.
Post a Comment