`ನನಗೆ ತುಂಬಾ ಬೇಜಾರಾಗಿದೆ, ಸಮಾಧಾನ ಮಾಡಿ ಪ್ಲೀಸ್`
ಆ ಕಡೆಯಿಂದ ಪೋನಿನಲ್ಲಿ ಬರುತ್ತಿತ್ತು ಹೆಣ್ಣು ಧ್ವನಿ`
ನಾನು ಆಗ ತಾನೇ ಆಫೀಸು ಕೆಲಸ ಮುಗಿಸಿಕೊಂಡು, ದಾರಿಯಲ್ಲಿ ಯಾವುದೋ ಹೊಟೇಲಿಗೆ ನುಗ್ಗಿ ಊಟ ಮಾಡಿ, ಉಸ್ಸಪ್ಪಾ ಅಂತ ನನ್ನ ರೂಮಿನತ್ತ ಹೆಜ್ಜೆ ಹಾಕುತ್ತಿದ್ದೆ. ರಾತ್ರಿ ಹತ್ತು ಗಂಟೆ ಆಗಿತ್ತು. ಆವತ್ತು ನನಗೂ ಯಾಕೋ ತುಂಬಾ ಬೇಜಾರಾಗಿತ್ತು. ಇಲ್ಲಿ ನನ್ನ ಬಳಿಯೂ ಯಾರಾದರೂ ಇದ್ದಿದ್ದರೆ ನನ್ನ ದುಃಖವನ್ನೆಲ್ಲಾ ಅವರ ಬಳಿ ಹೇಳಿಕೊಂಡು ಒಂದಿಷ್ಟು ಅನುಕಂಪವನ್ನೂ, ಪ್ರೀತಿಯನ್ನೂ ಪಡೆದುಕೊಳ್ಳಬಹುದಿತ್ತಲ್ಲಾ ಅನಿಸಿ, ಸುಮ್ಮನೆ ಮೊಬೈಲು ಒತ್ತುತ್ತಾ ನಡೆಯುತ್ತಿದ್ದೆ. ರೂಮು ತಲುಪಿದರೂ ರೂಮಿನೊಳಕ್ಕೆ ಹೋಗಲು ಇಷ್ಟವಾಗದೆ ಟೇರಸ್ ಮೇಲೆ ಆಕಾಶ ನೋಡುತ್ತಾ ಕುಳಿತು ಬಿಟ್ಟಿದ್ದೆ. ಹೀಗೆ ಬೇಜಾರಾದಾಗ ಯಾರಾದರೂ ಫೋನ್ ಮಾಡಿದರೆ, ನಾನೀಗ ಭಾವಸಮಾಧಿ ಸ್ಥಿತಿಯಲ್ಲಿದ್ದೇನೆ, ಸ್ವಲ್ಪ ಹೊತ್ತು ಬಿಟ್ಟು ಫೋನ್ ಮಾಡಿ ಎಂದು ತಮಾಷೆ ಮಾಡುತ್ತಿರುತ್ತೇನೆ.
ಹೀಗೆ ಕೂತಿರುವಾಗ ಬಂದಿತ್ತು ಈ ಫೋನ್.
`ನಾನು ತುಂಬಾ ಕೆಟ್ಟವಳು, ನನಗೆ ಯಾರೂ ಫ್ರೆಂಡ್ಸ್ ಇಲ್ಲ.
`ದೇವರಿಗೆ ಕೂಡ ನನ್ನನ್ನು ಕಂಡರೆ ಇಷ್ಟ ಇಲ್ಲ
`ನನ್ನ ಹಣೆಬರವೇ ಸರಿ ಇಲ್ಲ, ನಾನೂ ಸರಿ ಇಲ್ಲ`
ಫೋನ್ ಮಾಡಿದ ಹುಡುಗಿ ಇನ್ನೇನು ಅತ್ತೇ ಬಿಡುವಳು ಎನ್ನುವ ಹಾಗಿತ್ತು ಧ್ವನಿ. ನನಗೇಕೋ ಇದು ದಾರಿ ತಪ್ಪಿ ಬಂದ ಕೇಸ್ ಅಂತ ಅನಿಸತೊಡಗಿತು. ನೋಡಮ್ಮ, ನಾನು ಜೋಮನ್, ನೀವು ಯಾರಂತ ಗೊತ್ತಾಗಲಿಲ್ಲ, ಬೇರೆ ಯಾರಿಗೋ ಫೋನ್ ಮಾಡಲು ಹೋಗಿ ನನಗೆ ಮಾಡಿರುವ ಹಾಗಿದೆ, ದಯವಿಟ್ಟು ನಂಬರು ಪರೀಕ್ಷಿಸಿಕೊಳ್ಳಿ ಅಂದೆ.
`ಇಲ್ಲ, ನಾನು ನಿಮಗೇ ಫೋನ್ ಮಾಡಿದ್ದು, ನೀವು ನನ್ನ ಜೊತೆ ಮಾತನಾಡಬೇಕು, ನನಗೆ ತುಂಬಾ ಬೇಜಾರಾಗಿದೆ` ಎಂದಳು. `ಅಯ್ಯೋ, ಇದೊಳ್ಳೆ ಕಥೆ ಆಯಿತಲ್ಲಾ, ನಾನು ಬೇಜಾರನ್ನು ತೆಗೆದುಕೊಂಡು ಖುಷಿ ಕೊಡುವ ಯಾವುದೇ ಕನ್ಸಲ್ಟೆನ್ಸಿ ಕಂಪನಿ ನಡೆಸುತ್ತಿಲ್ಲ, ಸುಮ್ಮನೆ ಹೋಗಿ ಮಾರಾಯ್ರೆ, ಇಲ್ಲಿ ನನ್ನ ದುಃಖವನ್ನು ಯಾರ ಬಳಿ ಹೇಳಲಿ ಅಂತ ನಾನು ಕೂತಿದ್ದೇನೆ` ಎಂದೆ. ನನ್ನ ಸ್ವಭಾವವೇ ಹೀಗೆ.
ಹುಡುಗಿ ಅಳಲು ಶುರು ಮಾಡಿದಳು. `ನಾನು ನಿಮ್ಮನ್ನೇ ನಂಬಿಕೊಂಡು ಫೋನ್ ಮಾಡಿದ್ದೇನೆ, ನೀವು ಈ ಥರ ಎಲ್ಲ ಮಾತನಾಡಿ ನನ್ನನ್ನು ಇನ್ನಷ್ಟು ಬೇಜಾರು ಮಾಡಬೇಡಿ, ನನಗೆ ಸಮಾಧಾನ ಮಾಡಿ, ಬದುಕುವ ಆಸೆ ತೋರಿಸಿ, ಇಲ್ಲದಿದ್ದರೆ ನಾನು ಏನು ಮಾಡಿಕೊಳ್ಳುತ್ತೇನೋ ನನಗೇ ಗೊತ್ತಿಲ್ಲ`.
ಈ ಸಲ ನಾನು ಏನಾದರೂ ಮಾಡಬೇಕಿತ್ತು. ನಿಜವಾಗಿಯೂ ಆ ಹುಡುಗಿ ತುಂಬಾ ಬೇಜಾರಿನಲ್ಲಿದ್ದಳು. ನನಗೆ ತಣ್ಣಗೆ ಹೆದರಿಕೆ ಪ್ರಾರಂಭವಾಯಿತು. ಏನು ಮಾಡುವುದು? `ಸರಿ, ನಿಮ್ಮ ಹೆಸರು ಹೇಳದಿದ್ದರೂ ಪರವಾಗಿಲ್ಲ. ಈಗ ನೋಡಿ, ನಿಮ್ಮಂತೆ, ನನಗೂ ತುಂಬಾ ಬೇಜಾರಾಗಿದೆ, ಒಂದರ್ಥದಲ್ಲಿ ನಾವಿಬ್ಬರೂ ಸಮಾನ ದುಃಖಿಗಳು, ನಾನು ನನ್ನ ದುಃಖವನ್ನು ನಿಮಗೆ ಕೊಡುತ್ತೇನೆ, ನೀವು ನಿಮ್ಮ ದುಃಖವನ್ನು ನನಗೆ ಕೊಡಿ, ಇಬ್ಬರೂ ಷೇರ್ ಮಾಡಿಕೊಳ್ಳೋಣ. ಮುಂದೆ ನಿಮಗೆ ತುಂಬಾ ಖುಷಿ ಸಿಕ್ಕಿದಾಗ ಅದರಲ್ಲಿ ಸ್ವಲ್ಪ ನನಗೆ ಕೊಟ್ಟು, ನಿಮ್ಮ ದುಃಖವನ್ನು ಇಲ್ಲಿಂದ ಬಿಡಿಸಿಕೊಂಡು ಹೋಗಬಹುದು` ಎಂದೆ.
`ಜೋಮನ್ ಪ್ಲೀಸ್, ನನ್ನನ್ನು ಅರ್ಥ ಮಾಡಿಕೊಳ್ಳಿ, ನಾನು ಒಬ್ಬೊಂಟಿ ಎನಿಸಿಬಿಟ್ಟಿದೆ, ನನಗೆ ಯಾರೂ ಫ್ರೆಂಡ್ಸ್ ಇಲ್ಲ, ಇರುವವರೆಲ್ಲಾ ನನ್ನನ್ನು ತುಂಬಾ ಭಾವುಕಳು ಅಂತ ದೂರ ಮಾಡಿದ್ದಾರೆ. ನಾನು ಬದುಕಿ ಏನೂ ಪ್ರಯೋಜನವಿಲ್ಲ ಅಂತ ಅನಿಸಿಬಿಟ್ಟಿದೆ, ನನಗೆ ಮಾತ್ರ ಯಾಕೆ ಇಷ್ಟೊಂದು ಬೇಜಾರಾಗುತ್ತದೆ, ತುಂಬಾ ಬೇಜಾರಾದಾಗ ಏನು ಮಾಡಬೇಕು? ಎಂದು ಮುದ್ದಾಗಿ ಕೇಳಿದಳು. `ನೀವು ಯಾರನ್ನೂ ಪ್ರೀತಿಸಿಲ್ಲವಾ? ನಿಮ್ಮ ಎದುರು ನಿಂತು, ಹುಡುಗಿ ನಿನ್ನ ದುಃಖವನ್ನೆಲ್ಲಾ ನನಗೆ ಕೊಟ್ಟು ಬಿಡು, ನಾನು ನಿನ್ನ ಹೃದಯವನ್ನು ಖುಷಿಯಿಂದ ತುಂಬುತ್ತೇನೆ` ಎನ್ನುವ ಗೆಳೆಯ ಯಾರೂ ಇಲ್ಲವಾ? ಅಂತ ಬಾಯಿಗೆ ಬಂದಿದನ್ನು ನೇರವಾಗಿ ಕೇಳಿಯೇ ಬಿಟ್ಟೆ.
`ನನಗೆ ಅಂತಹ ಯಾರೂ ಒಳ್ಳೆ ಫ್ರೆಂಡ್ಸ್ ಇಲ್ಲ, ಹುಡುಗರೆಲ್ಲಾ ತುಂಬಾ ಕೆಟ್ಟವರು,` ಎಂದಳು. `ಹುಡುಗರ ಬಗ್ಗೆ ಎಲ್ಲಾ ಈ ರೀತಿ ಪೂರ್ವಗ್ರಹ ಪೀಡಿತರಾಗಿ ಮಾತನಾಡಬಾರದು, ನಿಮ್ಮ ನಂಬಿಕೆಯನ್ನು ಬದಲಿಸಿಕೊಳ್ಳಬೇಕು ಎಂದೆ`` ಛೇ.. ಹಾಗಲ್ಲ, ನೀವು ಒಳ್ಳೆಯವರ ಥರ ಕಾಣುತ್ತೀರಿ, ತಪ್ಪು ತಿಳಿಯದಿದ್ದರೆ ನೀವೇಕೆ ನನ್ನ ಫ್ರೆಂಡ್ ಆಗಬಾರದು? ಎಂದಳು.
`ಅಯ್ಯೋ! ಹುಚ್ಚು ಹುಡುಗಿ, ನನ್ನ ಕಥೆ ನಿಮಗಿನ್ನೂ ಗೊತ್ತಿಲ್ಲ, ನನ್ನನ್ನೇ ನನಗೆ ಅರ್ಥ ಮಾಡಿಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ, ಒಮ್ಮೆ ಕಾಶಿಗೋ, ಹಿಮಾಲಯಕ್ಕೂ, ಜೆರುಸಲೇಂಗೋ, ಮೆಕ್ಕಾಗೋ ಕೊನೆಗೆ ಇಲ್ಲೇ ಹತ್ತಿರವಿರುವ ಯಲ್ಲಮ್ಮನ ಗುಡ್ಡಕ್ಕಾದರೂ ಹೋಗಿ ಬರಬೇಕೆಂದಿದ್ದೇನೆ, ಜೊತೆಗೆ ಇತ್ತೀಚೆಗೆ ನಾನು ಏಳುವ ಮತ್ತು ಮಲಗುವ ಗಳಿಗೆ ಕೂಡ ಸರಿ ಇಲ್ಲ. ಇಂತಹ ನಾನು ನಿನ್ನ ಗೆಳೆಯನಾದರೆ ಅಷ್ಟೇ, ಸುಮ್ಮನೆ ಏನೇನೋ ಹುಚ್ಚರ ಥರ ವಿಚಾರ ಮಾಡಬೇಡ`, ಅಂತ ಹೇಳಿ ಫೋನ್ ಕಟ್ ಮಾಡಲು ಹೋದವನು, ಯಾಕೋ ತಡೆದು ಹೇಳಿದೆ...
`ನೋಡು, ಮನುಷ್ಯ ಮೂಲಭೂತವಾಗಿ ತುಂಬಾ ಸ್ವಾರ್ಥಿ, ಪ್ರತಿಯೊಬ್ಬರೂ ಇನ್ನೊಬ್ಬರ ಮಾತು, ಸ್ವರ್ಶ, ಮತ್ತು ಕಾಳಜಿಗಾಗಿ ಹಂಬಲಿಸುತ್ತಲೇ ಇರುತ್ತಾರೆ. ಆದರೆ ನಮ್ಮ ಖಾಸಗಿ ಖುಷಿಯನ್ನೂ, ಪ್ರೀತಿ ವಿಶ್ವಾಸದ ಗೂಡುಗಳನ್ನೂ ನಾವೇ ಜತನದಿಂದ ಕಟ್ಟಿಕೊಳ್ಳಬೇಕು, ನಮ್ಮ ಸುಖವನ್ನು ನಮ್ಮ ಅಂತರಾಳದಲ್ಲಿ ಕಾಣುವ ಕಲೆಯನ್ನು ಬೆಳೆಸಿಕೊಳ್ಳಬೇಕು, ಎಷ್ಟೇ ಬೇಜಾರಿದ್ದರೂ, ಒಂಟಿತನವಿದ್ದರೂ ಈ ಲೋಕದಲ್ಲಿ ಖುಷಿ ಪಡಲು ಸಾಕಷ್ಟು ವಿಷಯಗಳಿವೆ. ಅದನ್ನು ನಾವು ಹುಡುಕಿಕೊಳ್ಳಬೇಕು`
ಹುಡುಗಿ ಕೇಳಿಸಿಕೊಳ್ಳುತ್ತಿದ್ದಳು. `ನೀವು ತುಂಬಾ ಒಳ್ಳೆಯವರ ಥರ ಕಾಣುತ್ತೀರಿ, ನನಗೆ ಬೇಜಾರು ಕಡಿಮೆಯಾಗುತ್ತಿದೆ, ನನ್ನೊಂದಿಗೆ ಇನ್ನಷ್ಟು ಮಾತನಾಡಿ` ಎಂದಳು. `ನೀವು ರೂಮಿನಲ್ಲಿದ್ದರೆ ಹೊರಗೆ ಬನ್ನಿ, ಈ ಆಕಾಶವನ್ನೊಮ್ಮೆ ನೋಡಿ, ಎಷ್ಟೊಂದು ನಕ್ಷತ್ರಗಳಿವೆ, ದೂರದಲ್ಲಿ ಮಿಂಚು ಹುಳುಗಳಂತೆ ಚಿಮ್ಮುತ್ತಾ ಹೋಗುವ ಜೆಟ್ ವಿಮಾನವಿದೆ, ಬೀಸುವ ತಂಗಾಳಿಯಿದೆ, ಈ ಖುಷಿಯನ್ನೆಲ್ಲಾ ನೀವು ಒಂದು ನಯಾಪೈಸೆ ಕೂಡ ಖರ್ಚು ಮಾಡದೆ ಪಡೆಯಬಹುದು ಎಂದೆ.
ಹುಡುಗಿ ಖುಷಿಯಿಂದ ನಕ್ಕಳು. ಲಂಕೇಶರು ಟೀಕೆ ಟಿಪ್ಪಣಿಯಲ್ಲಿ ಬರೆದ, ನಾನು ಓದಿ ಎಂದೋ ಮರೆತಿದ್ದ ಸಾಲೊಂದು ನೆನಪಾಯಿತು.
`ಈ ಬದುಕಿನಲ್ಲಿ ನೀವು ತುಂಬಾ ಪುಣ್ಯವಂತೆಯಾಗಿದ್ದರೆ ನಿಮಗೊಂದು ಅಪರೂದ ವಸ್ತು ಸಿಗುತ್ತದೆ. ಅದು ನಿಮ್ಮ ಇಡೀ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಮಾಡಬಹುದಾದ ಒಂದು ಸುಂದರ ಕೆಲಸ. ಆ ಕೆಲಸ ನಿಮಗೆ ಕೊಡುವ ಖುಷಿಯ ಮುಂದೆ ಇನ್ಯಾವುದೂ ಇಲ್ಲ. ಆ ಖುಷಿಗೆ ಪ್ರತಿಯಾಗಿ ನಿಮ್ಮೊಳಗೆ ಇಡಿ ಬದುಕಿನ ಬಗ್ಗೆ ಕೃತಜ್ಞತೆ ಮೂಡುತ್ತದೆ. ಅದು ಈ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನೂ ನಿಮಗೆ ಅನುಭವಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಬದುಕಿನ ಬಗ್ಗೆ ಹೆಮ್ಮೆ, ಪ್ರೀತಿ ಮೂಡುತ್ತದೆ. ಬೇಜಾರಾಗುವ ಪ್ರಶ್ನೆಯೇ ಇಲ್ಲ` ಹೌದಲ್ಲವೇ ಎಂದೆ.
ಹೌದೆಂದು ತಲೆಯಾಡಿಸಿದ ಹಾಗಾಯಿತು.
ಹೀಗೆ ಆರು ತಿಂಗಳ ಹಿಂದೆ ಪರಿಚಯವಾದ ಈ ಅನಾಮಿಕ ಹುಡುಗಿ, ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನ ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಟ್ಟಿದ್ದಾಳೆ. `ನಿನ್ನ ಪ್ರೀತಿಗೆ ಯೋಗ್ಯವಾದವರು, ನಿನ್ನ ಥರಾನೇ ಯಾವಾಗಲೂ ಬೇಜಾರು ಮಾಡಿಕೊಂಡು ಇದನ್ನೆಲ್ಲಾ ಯಾರ ಬಳಿ ಹೇಳಲಿ ಎಂದು ತಲೆಕೆಡಿಸಿಕೊಂಡಿರುವ ಸಾಕಷ್ಟು ಹುಡುಗರೂ ಈ ರಾಜ್ಯದಲ್ಲಿದ್ದಾರೆ.` ಅವರನ್ನೆಲ್ಲಾ ಜಾಸ್ತಿ ದಿನ ಕಾಯಿಸಬಾರದು. ಯಾರನ್ನಾದರೂ ಹುಡುಕಿಕೊಂಡು ಮದುವೆಯಾಗಿ, ನನ್ನ ಬಳಿ ಅಡ ಇಟ್ಟಿರುವ ನಿನ್ನ ದುಃಖಗಳನ್ನು ಬಿಡಿಸಿಕೊಂಡು ಹೋಗು ಎಂದು ತಮಾಷೆ ಮಾಡುತ್ತಿರುತ್ತೇನೆ.
ಇಂದಿಗೂ ತನ್ನ ನಿಜ ಹೆಸರು ಹೇಳದೆ ನನ್ನ ತಲೆ ತಿನ್ನುತ್ತಿರುವ ಆ ಅನಾಮಿಕ ಹುಡುಗಿಯ ಪ್ರೀತಿಗೆ ಈ ಲೇಖನ.
Sunday, 16 November 2008
Subscribe to:
Post Comments (Atom)
20 comments:
ನಂಗೊಂದಿಷ್ಟು ಜನ ಈ ಥರ ಹುಡ್ಗೀರು ಗೊತ್ತು... ನಿಮ್ಮ ಫೋನ್ ನಂಬರ್ ಕೊಡ್ತೀರಾ? ;-)
ಆಹಾ!...ಪ್ರೀತಿ ತುಂಬಿದ ಲೇಖನ.
ಆ ಅನಾಮಿಕ ಹುಡುಗಿಯೇ ಧನ್ಯಳು...:-)
ಯಾರಪ್ಪಾ ಅದು...?!
:)
Looo kalla yaro aa hudugi... ???? adu sari ninyake bejaralliddiya maraya be cheer up
ನೈಸ್!
ನಿಮ್ಮ ಬ್ಲಾಗಿನ ಬಣ್ಣಗಳನ್ನ ಬದಲಿಸಿ ಜೋಮನ್.. ಎಲ್ಲಿ ಲಿಂಕ್ಸ್ ಇವೆ ಅಂತ ಕಾಣೋದೇ ಇಲ್ಲ..
"ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಟ್ಟಿದ್ದಾಳೆ"
..ದೇವ್ರೇ,..ಪರಮಾತ್ಮಾ!!! :-))
ಜೋಮನ್, ನೀವಿರೋದು ಮೈಸೂರಲ್ಲಲ್ವಾ? ಹುಷಾರಾಗಿರಿ ಸ್ವಲ್ಪ. ನಮ್ಮ ಹಾಸ್ಟೆಲ್-ಗೂ ಈ ಥರ ತುಂಬ ಫೋನ್-ಗಳು ಬರ್ತಿತ್ತು, ಒಂದಿಷ್ಟ್ ಜನ ತಲೆ ಕೆಡಿಸ್ಕೊಂಡಿದ್ರು. ಕೆಲವ್ದು ನಿಜವಾದ್ದು, ಇನ್ನ್ ಕೆಲವ್ದು....
ಮನಸಿನ ಒಳಗೆ ಬಿಟ್ಕೊಳ್ಳಿ, ಆದ್ರೆ ಹೃದಯ ಕವಾಟ ತೆರೆಯುವ ಮುನ್ನ ಸ್ವಲ್ಪ ಯೋಚ್ನೆ ಮಾಡಿ :-)
ನಿಜಾ ಹೇಳಿ, ಜೋಮನ್,
ಆ " ಅನಾಮಿಕ ಹುಡುಗಿ" ಗೆ ನಿಮ್ಮದೇ ಫೋನ್ ನಂಬರ್ ಸಿಕ್ಕಿದ್ದಾದ್ರೂ ಹೇಗೆ ? ಯಾವುದಕ್ಕೂ ಹುಷಾರು ಸ್ವಾಮೀ .
ಅವಳು ಇನ್ನಷ್ಟು ದುಃಖಪೀಡಿತ ಹುಡುಗಿಯರಿಗೆ ನಿಮ್ಮ ನಂಬರ್ ಕೊಟ್ಟರೆ, ನೀವೊಂದು " ಸಾಂತ್ವನ "( ನೊಂದ ಹುಡುಗಿಯರಿಗೆ ಮಾತ್ರ) ಅಂತ ಕನ್ಸಲ್ಟನ್ಸಿ ತೆಗೀಬೇಕಾಗ ಬಹುದು ! !
nanna bagge lekhana brediddakke Thanks. am Thank full to u jom......
lovely Aricle. ur lovely frnd.......! Guess me...?
@ ಹರೀಶ್
ಪ್ರತಿಕ್ರಿಯೆಗೆ ಧನ್ಯವಾದ. ಯಾಕೆ ಸ್ವಾಮಿ ನನ್ನ ಫೋನ್ ನಂಬರ್. ನಿಮಗೆ ಗೊತ್ತಿರುವ ಆ ಥರ ಹುಡುಗಿಯರಿಗೆಲ್ಲಾ ನನ್ನ ಫೋನ್ ನಂಬರ್ ಕೊಡುವ ವಿಚಾರವೇ? ಏನೇ ಇರಲಿ, ನಮ್ಮ ಗುರುಗಳಾದ ಭಾಗವತರನ್ನು ಕೇಳಿ ಹೇಳ್ತೀನಿ.
@ ಚರಿತಾ,
ಪ್ರತಿಕ್ರಿಯೆಗೆ ಧನ್ಯವಾದ. ಅವರು ಯಾರು?, ನಿಜವಾದ ಹೆಸರೇನು?, ಎಲ್ಲಿರುತ್ತಾರೆ? ಯಾಕೆ ಫೋನ್ ಮಾಡುತ್ತಾರೆ? ಎಂಬಿತ್ಯಾದಿ ರೂಚಕ ಮಾಹಿತಿಗಳಿಗೆ ಟಿವಿ9ನಲ್ಲಿ ಬರುವ ಹೀಗೂ ಉಂಟೆ ನೋಡಿ. ಅಂತೆಲ್ಲಾ ನಾನು ಹೇಳಲ್ಲ. ಆ ಅನಾಮಿಕ ಹುಡುಗಿಯ ಮೇಲಾಣೆ, ನನಗೆ ಅವರು ಯಾರು ಅಂತ ಇದುವರೆಗೂ ಗೊತ್ತಾಗಿಲ್ಲ. ಹುಡುಕಾಟದಲ್ಲಿದ್ದೇನೆ..:)
@ ಅನಂತ
ಅನಂತ ಧನ್ಯವಾದ :)
@ ತಿಪ್ಪಾರ್
ಥ್ಯಾಂಕ್ಸ್...
@ಸುಶ್ರುತ,
ಬ್ಲಾಗಿನ ಬಣ್ಣದ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ, ಬಣ್ಣ ಬದಲಿಸಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
@ಭಾಗವತರು.
ಗುರುಗಳೇ ನೀವು ಇಷ್ಟೊಂದು ಹೆದರಿಕೊಳ್ಳುವ ಅಗತ್ಯ ಇಲ್ಲ. ಹೃದಯದ ಕವಾಟು ತೆರೆಯುವ ಮುನ್ನ ನಿಮಗೆ ತಿಳಿಸುತ್ತೇನೆ. ಆದರೆ ಹಾಗೇನೂ ಆಗುವ ಲಕ್ಷಣ ಕಾಣುತ್ತಿಲ್ಲ. ಆ ಹುಡುಗಿ ಬೇರೆ ಯಾರದೋ ಹೃದಯ ಗೂಡು ಸೇರಿದೆ.
@ ಚಿತ್ರಾ
ಹ್ಹ ಹ್ಹ.. ಹುಡುಗಿಗೆ ಫೋನ್ ನಂಬರ್ ಸಿಕ್ಕಿದ್ದು ಬೇರೊಂದು ಮೂಲದಿಂದ. ನದಿ ಮೂಲ, ಖುಷಿ ಮೂಲದ ಕುರಿತು ಕೇಳಬಾರದು ಎನ್ನುವ ಹಾಗೆ ಫೋನ್ ನಂಬರ್ ಮೂಲದ ಬಗ್ಗೆಯೂ ಕೇಳಬಾರದು. ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ನೀವು ಕೊಟ್ಟ ಐಡಿಯಾ ಚೆನ್ನಾಗಿದೆ...)
@ ಸ್ವಾಮಿ ಅನಾಮಿಕರೇ, ಖಂಡಿತವಾಗಿಯೂ ಇದು ನಿಮ್ಮ ಬಗ್ಗೆ ಬರೆದಿದ್ದಲ್ಲ. ಮನಸ್ಸಲ್ಲಿ ಮಂಡಿಗೆ ತಿನ್ನಬೇಡಿ. ಹೆಸರು ಹೇಳಿ ಪುಣ್ಯ ಕಟ್ಕೊಳ್ಳಿ.
ಸ್ವಾಮಿ ತಮಗೆ ಸಿಕ್ಕ ಹುಡುಗಿ ಅಂತಿಂತವಳಲ್ಲ ಬಹಳ ಹುಷಾರಾಗಿರಿ
ಜೋಮನ್ ಸಾರ್,
ಯಾವುದಕ್ಕೂ ಹುಷಾರಾಗಿರಿ. ನೀವೇನಾದ್ರು ಈ ರೀತಿ ಬಲೆಗೆ ಬಿದ್ದು ಮದುವೆಯಾಗಿ, ಇದುವರೆಗೂ ಅನಂತವಾಗಿ ಯಾರ ಹಂಗು ಇಲ್ಲದೆ ಬಿಡಿಬೀಸಾಗಿ ಬರೆಯುತ್ತಿದ್ದವರು, ಮುಂದು ಕೇವಲ ಸಂಸಾರ ದು:ಖಗಳನ್ನು ಬರೆಯಬೇಕಾಗುತ್ತದೆ.[ತಮಾಷೆಗೆ ಹೇಳಿದೆ]. ಹೋಗಲಿ ಆ ಹುಡುಗಿಗೆ ಈಗ ಸ್ವಲ್ಪ ನೆಮ್ಮದಿಯಾದರೂ ಸಿಕ್ಕಿದೆಯಲ್ಲ ಬಿಡಿ ಆಷ್ಟು ಸಾಕು.
ಆಹಾಂ ! ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ.
ಓಹೋ.....ಹಿಂಗೆ ವಿಷ್ಯ..... ;-)
ಛೇ ನನ್ನ ನಂಬರ್ ಯಾರಿಗೂ ಸಿಕ್ಕಿಲ್ಲ ಅಂತ ಕಾಣ್ಸುತ್ತೆ:(
Joman chennagide..... nice....;)-PRANATHI
ಜೋಮನ್..ಹಹಹಹಹಹಹ ಮಸ್ತ್ ಮಸ್ತ್ ! ಮಾರಾಯ...ಅದ್ಕೇನಾ ನಾವು ಫೋನ್ ಮಾಡಿದಾಗ ಬ್ಯುಸಿ ಅನ್ನೋದು. ನಂಗೇನು ಗೊತ್ತು..?!!!!
-ಚಿತ್ರಾ...
ನಮಗೆಲ್ಲಾ HSBC, HDFC, ICICIನಿ೦ದ ಎಲ್ಲಾ ಫೋನ್ ಮಾಡ್ತಾರಪ್ಪ.. ಕ್ರೆಡಿಟ್ ಕಾರ್ಡ್.. 'ಪರ್ಸನಲ್' ಲೋನ್..:D
@ ಸೋಮನಗೌಡ
:)
@ಶಿವು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಟೋಪಿಗಳ ಭೇಟಿಗೆ ಸದ್ಯದಲ್ಲಿಯೇ ಬರುತ್ತೇನೆ.
@ ವೈಶಾಲಿ
ಅಂದರೆ ಹೇಗೆ?
@ ಸಂದೀಪ್
ಮಳೆಹನಿಗೆ ಸ್ವಾಗತ. ನಿಮ್ಮ ನಂಬರ್ ಇಲ್ಲಿ ಕೊಡಿ, ಆಮೇಲೆ ನೋಡಿ.
@ ಪ್ರಣತಿ
ಥ್ಯಾಂಕ್ಸ್
@
ಚಿತ್ರಾ,
ವಿಶ್ಯ ನೀವು ತಿಳಿದಿರುವ ಹಾಗೇನೂ ಇಲ್ಲ. :)
ಪ್ರಮೋದ್
ಪ್ರತಿಕ್ರಿಯೆಗೆ ಧನ್ಯವಾದಗಳು. ಮಳೆಹನಿಗೆ ಸ್ವಾಗತ. ತಾಳಿದವನು ಬಾಳಿಯಾನು ಅಂತ ನೀವೂ ಸ್ವಲ್ಪ ಕಾಯಬೇಕು.
Do you even realise that you are giving the girl false hopes?
ಗುರು ಏನಿದು? ನಾವಿಬ್ಬರೂ ಸಮಾನ ದುಃಖಿಗಳು ಅಂದುಕೊಂಡರೆ ನೀವೆಲ್ಲೋ ಹೊಸ ವರಸೆ ಶುರು ಮಾಡಿದ್ದಿರಲ್ಲಾ?:)
ಹುಡುಗಿ ಸಿಕ್ಕು ಆರು ತಿಂಗಳಿಗೆ ಈ ವಿಷಯ ಬರೀತಾ ಇದ್ದಿರಿ ಅಂದ್ರೆ ಏನಾದರೂ ವಿಶೇಷ ಇರಲೇಬೇಕು ಸುಮ್ಮೆ ಸುತ್ತಿ ಬಳಸಿ ಹೇಳುವದಕ್ಕಿಂತ ನೇರವಾಗಿ ಹೇಳಿಬಿಡಿ :)
Post a Comment