Monday, 23 June 2008
ಮಳೆ ಮತ್ತು ನಾನು
ಕಳೆದವಾರ ಊರಿಗೆ ಹೋಗಿದ್ದೆ. ಊರಲ್ಲಿ ಸಿಕ್ಕಾಪಟ್ಟೆ ಮಳೆ. ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ಕುಳಿತುಕೊಂಡು ಅಮ್ಮ ಹಳೆಯ ಕಥೆಗಳನ್ನು ಹೇಳುತ್ತಿದ್ದರು. ಈ ಎಲ್ಲಾ ಕಥೆಗಳ ಅಲ್ಪಸ್ವಲ್ಪ ಭಾಗಗಳು ನನಗೆ ಗೊತ್ತಿದ್ದರೂ ಅದನ್ನು ಅಮ್ಮನ ಬಾಯಿಯಿಂದ ಕೇಳುವುದೇ ಬೇರೆಯ ತರನಾದ ಅನುಭವ. ಅಮ್ಮ ಮಾತಿಗೆ ಭಾವ ತುಂಬುತ್ತಾಳೆ. ಪಾತ್ರಕ್ಕೆ ಜೀವ ತುಂಬುತ್ತಾಳೆ. ಹಾಗಾಗಿ ಕೆಲವು ಘಟನೆಗಳು ನನಗೆ ಗೊತ್ತಿದ್ದರೂ ನಾನು ಏನೂ ಗೊತ್ತಿಲ್ಲದವನಂತೆ ಹೌದಾ? ಯಾವಾಗ ಆಯಿತು? ಮುಂದೆ? ಎಂದೆಲ್ಲಾ ಮತ್ತೆ ಮತ್ತೆ ಕೇಳುತ್ತಾ ಒಳಗೊಳಗೇ ಖುಷಿಪಡುತ್ತಿರುತ್ತೇನೆ. ನನ್ನ ತಂಗಿ ಮಾತ್ರ ಅಮ್ಮಾ, ಇದೆಲ್ಲಾ ಅಣ್ಣನಿಗೆ ಗೊತ್ತಿರುವ ಕಥೆಗಳೇ, ನೀನೇ ಎಷ್ಟು ಬಾರಿ ಹೇಳಿದ್ದೀಯಾ ಎನ್ನುತ್ತಾಳೆ. ಅಮ್ಮ ಮಾತ್ರ ಸ್ವಲ್ಪವೂ ಬೇಸರಿಸಿಕೊಳ್ಳದೆ, ತನ್ನ ಬಾಲ್ಯಕಾಲ, ತಾನು ಶಾಲೆಗೆ ಹೋಗಿದ್ದು, ಭಯಂಕರ ಮಳೆಗಾಲದಲ್ಲಿ ಅಪ್ಪನನ್ನು ಮದುವೆಯಾಗಿ ಈ ಊರಿಗೆ ಬಂದದ್ದು, ಆಗಿದ್ದ ಬಡತನ ಎಲ್ಲವನ್ನೂ ಹೇಳಿ ಹಗುರಾಗುತ್ತಾಳೆ.
ನಾನು ಓದಿದ್ದು ಒಂದು ಪುಟ್ಟ ಸರಕಾರಿ ಶಾಲೆಯಲ್ಲಿ. ಶಾಲೆ ಅನ್ನುವುದಕ್ಕೆ ಅಲ್ಲಿ ಏನೂ ಇರಲಿಲ್ಲ, ಮಣ್ಣಿನ ಇಟ್ಟಿಗೆಯಿಂದ ಕಟ್ಟಿದ ಎರಡು ಕೋಣೆಗಳು. ಮಳೆ ಬಂದಾಗ ಮೇಲಿದ್ದ ಮಂಗಳೂರು ಹಂಚು ಸೋರುತ್ತಿತ್ತು. ನಾವು ಮಣ್ಣಿನ ನೆಲದ ಮೇಲೆ ಹಲಗೆಮಣೆಯ ಮೇಲೆ ಕೂರುತ್ತಿದ್ದೆವು. ಮಳೆ ಜೋರಾದಂತೆ ನೀರು ತರಗತಿ ಕೋಣೆಯೊಳಕ್ಕೆ ಬರುತ್ತಿತ್ತು. ಹೆಚ್ಚೂ ಕಡಿಮೆ ಮಳೆಗಾಲದಲ್ಲಿ ಶಾಲೆಗೆ ರಜೆ. ಒಮ್ಮೊಮ್ಮೆ ಇರುವ ಸರಕಾರಿ ಬಸ್ಸು ರಸ್ತೆ ಪಕ್ಕ ಕೆಟ್ಟು ನಿಂತೋ, ಅಥವಾ ನಾವು ಹೊಳೆ ದಾಟಲು ಬಳಸುತ್ತಿದ್ದ ಮರದ ಶಂಖ ತೇಲಿಹೋಗಿಯೋ ಹೆಚ್ಚೂ ಕಡಿಮೆ ಮಳೆಗಾಲದಲ್ಲಿ ನಾವು ಮನೆಯಲ್ಲಿಯೇ ಉಳಿಯುವಂತಾಗುತ್ತಿತ್ತು. ಇಂತಹ ಮಳೆಗಾಲದ ದಿನಗಳಲ್ಲಿ ಅಡಿಕೆಗೆ ತಟ್ಟಿಯ ಕೆಳೆಗೆ ಬೆಂಕಿ ಹಚ್ಚಿ ಅಪ್ಪನೋ, ಅಮ್ಮನೋ ನನಗೆ ಅವರ ಬಾಲ್ಯದ ಕಥೆಗಳನ್ನು ಹೇಳುತ್ತಿದ್ದರು. ಇಂತಹ ಕಥೆಗಳು ಕೇವಲ ಕಥೆಗಳಾಗಿ ಉಳಿಯದೇ, ಅದರಲ್ಲಿನ ಪಾತ್ರಗಳು ತುಂಬಾ ಜೀವನಾನುಭವನ್ನು ಹೊಂದಿರುತ್ತಿದ್ದರಿಂದ ಅವುಗಳು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ.
ಪ್ರತಿ ಮಳೆಗಾಲ ಬಂದಾಗಲೂ ನನಗೆ ಇಂತಹ ಹಲವು ಕಥೆಗಳು, ಘಟನೆಗಳು ನನೆಪಿಗೆ ಬರುತ್ತದೆ. ನಮ್ಮೂರಿನದೇ ಕೆಲವು ಪಾತ್ರಗಳು ಅವರ ಹಾವಭಾವಗಳು, ನಾನು ಪ್ರಯಾಣಿಸುತ್ತಿದ್ದ ಸರಕಾರಿ ಬಸ್ಸು, ಅದರ ಕಲಾಲ್ ಎಂಬ ಕೆಂಡೆಕ್ಟರ್, ಮಳೆಗಾಲದಲ್ಲಿ ಸೀರೆ ಮೇಲೆತ್ತಿ ಕಷ್ಟ ಪಟ್ಟು ಗದ್ದೆ ಬದುವಿನ ಮೇಲೆ ನಡೆದು ಬರುತ್ತಿದ್ದ ಕಾವೇರಿ ಟೀಚರ್, ಎಷ್ಟು ತೆಳ್ಳನೆಯ ಎಷ್ಟು ಉದ್ದನೆಯ ಅಡಿಕೆ ಮರವಾದರೂ ಅದರ ತುತ್ತತುದಿಗೆ ಹತ್ತಿ ಗೊನೆ ಇಳಿಸುತ್ತಿದ್ದ ಸಣಕಲು ಕೇಶವ ಭಟ್ಟರು, ಒಂದು ರೂಪಾಯಿಗೆ ಇಪ್ಪತೈದು ನಿಂಬೆಹುಳಿ ಪೆಪರ್‌ಮಿಂಟ್ ಎಣಿಸಿ ಕೊಡುತ್ತಿದ್ದ ಕುಲಕರ್ಣಿ ಅಂಗಡಿಯ ಸೀತಜ್ಜಿ, ಒಮ್ಮೊಮ್ಮೆ ಶಾಲೆ ಬಿಟ್ಟು ಮನೆಗೆ ಹೊರಡುವುದು ಲೇಟಾಯಿತೆಂದರೆ, ಹಸಿವಾಗಿದೆಯಾ ಕಂದಾ ಎಂದು ಅಂಗಡಿಯೊಳಗೆ ಕರೆದು ಬೊಂಡಾ ಹಾಗೂ ಚಹಾ ಕೊಟ್ಟು ಪ್ರೀತಿಯಿಂದ ತಲೆಸವರುತ್ತಿದ್ದ ತಡಿಕೆ ಹೊಟೇಲಿನ ಶಾಂತಮ್ಮ, ಇವರೆಲ್ಲರೂ ಈಗಲೂ ನನಗೆ ಏನೋ ಅಪರೂಪದ ಪಾತ್ರಗಳಾಗಿ, ನನೆಸಿಕೊಂಡಾಗೊಮ್ಮೆ, ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಡುತ್ತಾರೆ.
ಊರಿಗೆ ಹೋದಾಗೊಮ್ಮೆ ಇವರನ್ನೆಲ್ಲಾ ಒಮ್ಮೆ ಭೇಟಿಯಾಗುವುದು, ಏನೋ ಗೊತ್ತಿಲ್ಲದವನಂತೆ ಅವರ ಬಾಯಿಯಿಂದ ಒಂದಿಷ್ಟು ಹಳೆಯ ಕಥೆಗಳನ್ನು ಕೇಳಿಸಿಕೊಳ್ಳುವುದು, ನಾನು ಕಲಿತ ಶಾಲೆಯಂಗಳದಲ್ಲಿ ಕಳ್ಳನಂತೆ ಓಡಾಡುವುದು, ಅಲ್ಲಿ ಇಲ್ಲಿ ಗುರುತು ಇಲ್ಲದವರನ್ನೂ ಗುರುತು ಹೆಚ್ಚಿ ಮಾತನಾಡಿಸಿ, ಕೊನೆಗೆ ನನ್ನ ಗುರುತು ಹೇಳದೆಯೇ ಹೊರಟು ಬರುವುದು ಇತ್ಯಾದಿಗಳನ್ನು ಮಾಡುತ್ತಿರುತ್ತೇನೆ. ಮೊನ್ನೆ ಹೀಗೆ ಮಳೆಸುರಿಯುವ ಹೊತ್ತಲ್ಲಿ ಶಾಲೆಯ ದಾರಿಯಲ್ಲಿ ನಡೆಯುತ್ತಿದ್ದೆ, ಥಟ್ಟನೆ ಎದುರಿಗೆ ಬಂದ ತಾಯಿಯೊಬ್ಬರು `ಏನ್ ತಮ್ಮಾ ನನ್ನ ಮಾತಾಡಿಸದೇ ಹಾಗೆ ಹೊರಟಿದ್ದೀಯಾ, ನಾನು ಯಾರು ಗೊತ್ತಾಯ್ತಾ? ಎಂದು ನನ್ನ ಮುಖವನ್ನು ತಮ್ಮ ಬೆಚ್ಚನೆಯ ಕೈಗಳಿಂದ ಸವರಿದರು. ನನಗಾದರೂ ಗಲಿಬಿಲಿ, ಯಾರಮ್ಮಾ ನೀನು ಎಂದು ಕೇಳಲು ಸಂಕೋಚ. ನನ್ನ ತಂಗಿ ಹುಟ್ಟಿದಾಗ ಆಸ್ಪತ್ರೆಯಲ್ಲಿದ್ದು ನೋಡಿಕೊಂಡವರು ಆಕೆ. ನನ್ನನ್ನು ಕರೆದುಕೊಂಡು ಹೋಗಿ ಅಲ್ಲೇ ಪಕ್ಕದಲ್ಲಿದ್ದ ಅಂಗಡಿ ಕಟ್ಟೆಯ ಮೇಲೆ ಕೂರಿಸಿ ಒಂದಿಷ್ಟು ಹೊತ್ತು ಮಾತನಾಡಿದರು. ನಂತರ ನನ್ನ ಬಾಲ್ಯಕಾಲದ ಕಿತಾಪತಿಗಳನ್ನು ಆ ಅಂಗಡಿಯವರಿಗೂ ಹೇಳಿ ನಕ್ಕರು. ಅಷ್ಟೊತ್ತಿಗೆ ಆ ಅಂಗಡಿಯವರೂ ನನ್ನ ಗುರುತುಹಿಡಿದು ಇತ್ತೀಚೆಗೆ ಟಿವಿಯಲ್ಲಿ ಬಂದವರು ನೀವೇ ಅಲ್ಲವಾ? ಓಯ್ ಗೊತ್ತಾಯ್ತು ಬಿಡಿ, ನೀವು ಕಲ್ಕೇರಿಯ ಇಂತವರ ಮಗ ಅಲ್ಲವಾ? ನಮಗೆ ಗೊತ್ತುಂಟು ಬಿಡಿ, ಎಂದು ನನ್ನ ಇತಿಹಾಸವೇ ತೆಗೆದ ಮೇಲೆ ಇನ್ನು ನನ್ನ ನಾಟಕ ಏನೋ ನಡೆಯುವುದಿಲ್ಲವೆಂದು ಗೊತ್ತಾಯ್ತು.
ಇಲ್ಲಿ ಮೈಸೂರಿನಲ್ಲಿ ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ಕುಳಿತುಕೊಂಡು ಈ ಕಥೆಗಳನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾ ಬೆಚ್ಚಗಾಗುತ್ತಿರುತ್ತೇನೆ. ಸಣ್ಣಿಯಮ್ಮನ ಪ್ರೀತಿಯ ಮಾತು, ಆ ಅಂಗಡಿಯವರು ಮಾಡಿಕೊಟ್ಟ ಬಿಸಿ ಬಿಸಿ ಚಹಾ, ಈ ಮಳೆಗಾಲಕ್ಕೆ ಇನ್ನೇನು ಬೇಕು. ಬೇಸರವಾದರೆ ಒಮ್ಮೆ ಊರಿಗೆ ಓಡಿ ಹೋಗಿ ಅಮ್ಮನ ಹತ್ತಿರ ಇನ್ನೊಂದೆರಡು ಹಳೆಯ ಕಥೆ ಕೇಳಿಸಿಕೊಂಡರಾಯಿತು.
Subscribe to:
Post Comments (Atom)
14 comments:
ಹಳ್ಳಿಗಳಿಂದ ಬಂದ ಬಹುತೇಕ ಎಲ್ಲರ ಬದುಕಲ್ಲೂ ನೀವಿಲ್ಲಿ ಹೇಳಿದಂತಹ ಪಾತ್ರಗಳು ಬಂದಿರುತ್ತವೆ...ಆದರೂ ಆ ಅನುಭವದ ನೆನಪು ಯಾವತ್ತಿದ್ದರೂ ಜೀವಂತ, ಅಷ್ಟೇ ಆಪ್ಯಾಯಮಾನ...ಹೇಳ್ತಾರಲ್ಲ ನೆನಪುಗಳ ಮಾತು ಮಧುರ ಅಂತ...ಹಾಗೇನೇ..ಒಳ್ಳೆ ಬರಹ ಜೋಮನ್....
ಮಳೆಹನಿಯ ಜತೆಗೆ ಹೃದಯದಲ್ಲೂ ಎರಡು ಹನಿ ಇದ್ದಾಗ ಅವು ಇಂತಹ ಬರಹಗಳನ್ನು ನೀಡುತ್ತವೆ.
ಪ್ರಿಯ ಜೋಮನ್, ಮಳೆ ಸುರಿದು ಇಳೆ ಹಸಿರಾಗಿದೆ.
ಆ ಹಸಿರಿನ ನೆನಪುಗಳನ್ನು ಮೇದು ನಮಗೆ ನೀಡಿದಕ್ಕೆ ಅಭಿನಂದನೆಗಳು.
ನೆನಪುಗಳ ಮಳೆ ಮತ್ತು ಮಳೆಯ ನೆನಪು ಸದಾ ಹಸಿರಾಗಿರಲಿ.
ಒಲವಿನಿಂದ
ಬಾನಾಡಿ
ಜೋಮನ್,
'ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿ' ಎಂದು ಒಂದು ತಿಂಗಳು ಕಾಯಿಸಿದರೂ ಓದಲು ಅತ್ಯುತ್ತಮ ಸರಕು ನೀಡಿದ್ದೀರಾ. ಓದಿದಾಗ ಹಲವಾರು ಜನರ ನೆನಪಾಯಿತು. ಎಲ್ಲೆಲ್ಲೋ ಭೇಟಿ ಆದವರು ಮತ್ತೆ ಮತ್ತೆ ನೆನಪಾಗತೊಡಗಿದರು. ಎಲ್ಲ ನಿಮ್ಮ ಈ ಉತ್ತಮ ಲೇಖನದ ಕೃಪೆ. ಥ್ಯಾಂಕ್ಸ್.
ಬಯಲು ಸೀಮೆಯಲ್ಲಿ ಬೆಳದ ನಾವು ಇವೇ ಚಿತ್ರಣಗಳಲ್ಲಿ ಖುಷಿ ಪಡಬೇಕು :(
btw, ಒದ್ತಾ, ’ಬೆಟ್ಟದ ಹೂ’ ಚಿತ್ರ ನೆನಪಾಯ್ತು.
ninu bareyuv lekan nima urinalli hutadavrig matu noddavrige kaiganadi. adre edanu enu chenagi bareybhuditu. ninu odugarig orige karedu kondu hode adare vapas bidleyilla. nanu chikavnidg hige madidenu.
ಜೋಮನ್,
ಮಳೆ ಬಿಚ್ಚಿಕೊಡುವ ನೆನಪುಗಳ ಗಂಟೇ ಅಂಥದು. ಬಹುತೇಕ ಎಲ್ಲರಿಗೂ ಮಳೆತರುವ ನೆನಪುಗಳು ಸುಂದರ ಮತ್ತು ಮನಸ್ಸಿಗೆ ಹತ್ತಿರವಾದವು.ಚಂದದ ಬರಹ.ಬರೆಯುತ್ತಿರಿ.ಅಲ್ಲಿ ಬಂದವಳು ಇಲ್ಲಿಗೂ ಬಂದಿದ್ದೇನೆ. :)
ಜೊಮನ್...
"ಅಲ್ಲಿ ಇಲ್ಲಿ ಗುರುತು ಇಲ್ಲದವರನ್ನೂ ಗುರುತು ಹೆಚ್ಚಿ ಮಾತನಾಡಿಸಿ, ಕೊನೆಗೆ ನನ್ನ ಗುರುತು ಹೇಳದೆಯೇ ಹೊರಟು ಬರುವುದು ಇತ್ಯಾದಿಗಳನ್ನು ಮಾಡುತ್ತಿರುತ್ತೇನೆ." ಈ ಸಾಲು ಚಂದ ಇದೆ ಅನಿಸಿತು.
ಒಟ್ಟಾರೆ ಭಾವಪೂರ್ಣಲೇಖನ.
@ ವಿನೋದ್,
ಹೌದು ನೀವು ಹೇಳಿದಂತೆ ನೆನಪುಗಳ ಮಾತು ಮಧುರ, ನಿಮ್ಮ ಸಹೃದಯ ಪ್ರತಿಕ್ರಿಯೆಗೆ ಧನ್ಯವಾದಗಳು.
@ಬಾನಾಡಿ,
ಬಾನಾಡಿಯವರೇ, ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾನೆ ಖುಷಿಯಾಯಿತು. ನಿಮಗೂ ಒಂದು ಬೊಗಸೆಯಷ್ಟು ಮಳೆಪ್ರೀತಿ.
@ ರಾಜೇಶ್ ನಾಯ್ಕ್
ನಾಯ್ಕರೇ ನಿಮ್ಮ ಸಹೃದಯ ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು. ಹೆದರಿಸಬೇಡಿ ಮಾರಾಯ್ರೆ, ನಾನು ಬೇಗ ಮುಂದಿನ ಕಂತು ಬರೆಯುತ್ತೇನೆ.
@ ಚೇತನ್
ಮಳೆಹನಿಗೆ ಸ್ವಾಗತ, ಆಗಾಗ್ಗ ಬರುತ್ತಾ ಇರಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@ ರಾಜೇಶ್ ವಿಷ್ಣು,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@ ಮನಸ್ವಿನಿ,
ಒಮ್ಮೆ ಬಂದು ಮತ್ತೆ ಮರೆತುಬಿಡಬೇಡಿ, ಆಗಾಗ್ಗ ಬರುತ್ತಾನೇ ಇರಿ, ಪ್ರತಿಕ್ರಿಯಿಸಿದ ನಿಮ್ಮ ಒಳ್ಳೆಯ ಮನಸ್ಸಿಗೆ ಧನ್ಯನಾದಗಳು.
@ ಶಾಂತಲಾ ಭಂಡಿ,
ನಿಮ್ಮ ಸಹೃದಯ ಓದು, ಪ್ರೀತಿಯ ಪ್ರತಿಕ್ರಿಯೆಗೆ ತುಂಬಾನೇ ಧನ್ಯವಾದಗಳು.
ಜೋಮನ್ ಅವರೆ,
ಈ ಮಳೆಗಾಲವೇ ಹೀಗೇನೋ.. ಹಳೆಯ ನೆನಪುಗಳನ್ನೆಲ್ಲಾ ಹನಿ ಹನಿಯಾಗಿ ಮನದೊಳು ಇಳಿಸಿ ಎದೆಯಗೂಡನ್ನು ತೊಯ್ದು, ಕೆಲವೊಮ್ಮ ಕಣ್ಣಂಚನ್ನೂ ಒದ್ದೆಯಾಗಿಸುವುದು. ಒಳಗೂ ಹೊರಗೂ ನೆನೆಯುವಂತಹ ಮಳೆ ಮುಗಿಯದಷ್ಟು ನೆನಪುಗಳ ಮೂಟೆಹೊತ್ತು ಬರುತ್ತಲೇ ಇರುತ್ತದೆ.. ಮತ್ತಷ್ಟು ಮಳೆಹನಿಗಳ ಮಳೆಯಾಗಲಿ. ನೆನೆಯಲು ನಾನಂತೂ ರ್‍ಎಡಿ ;-)
Wow.... Nijakku nimma ee lekhana nenapugala jathre nadeside... nanaganthu thumba kushi aithu.
nanna blog gu omme visit kodi.
Nanna blog:
http://neelimegha.blogspot.com/
ಜೋಮನ್,
ಲೇಖನ ತುಂಬ ಚೆನ್ನಾಗಿ ಬಂದಿದೆ. ಬಾಲ್ಯದ ಸುಖಕ್ಕಿಂತಲೂ ಅದನ್ನು ನೆನೆಸಿಕೊಂಡು ತಾರುಣ್ಯದಲ್ಲಿ, ಇಳಿವಯಸ್ಸಿನಲ್ಲಿ ನೆನೆಯುವ ಸುಖ, ಮತ್ತು ಆಗ ನಡೆದ ಯಾವು ಯಾವುದೋ ಅತಿ ಸಣ್ಣ ಘಟನೆಗಳು, ಸ್ವಲ್ಪ ಕಾಲವಷ್ಟೇ ಮನಕೆ ಹತ್ತಿರವಾಗಿ ಕಣ್ಮರೆಯಾದವರು ಎಲ್ಲರೂ ನೆನಪಿನ ಪರದೆಯ ಮೇಲೆ ಮೂಡುವ ಪರಿಯೇ ಒಂದು ಸೋಜಿಗ ಮತ್ತು ಅತ್ಯಂತ ಸಿಹಿ ಸುಖ ಅಂತ ನನ್ನ ಅನಿಸಿಕೆ.
ನಿಮ್ಮ ಬರಹ ಆ ನೆನಪುಗಳನ್ನು ಸಮರ್ಥವಾಗಿ ಪದಗಳಲ್ಲಿ ಕಟ್ಟಿಕೊಟ್ಟಿದೆ.
ಓದಿ ಖುಶಿಯಾಯಿತು.
ಪ್ರೀತಿಯಿಂದ
ಸಿಂಧು
@ ತೇಜಸ್ವಿನಿ ಹೆಗಡೆ,
ಖಂಡಿತವಾಗಿಯೂ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
@ ವಿಶು,
ಮಳೆಹನಿಗೆ ಸ್ವಾಗತ. ಆಗಾಗ್ಗ ಬರುತ್ತಲಿರಿ. ಅಂದಹಾಗೆ ನಿಮ್ಮ ನೀಲಿ ಮೇಘ ನೋಡಿ ಬಂದೆ. ಚೆನ್ನಾಗಿದೆ.
@
ಸಿಂಧು,
ನನಗೂ ಹಾಗೆ ಅನಿಸಿದೆ. ಬಾಲ್ಯದ ಸುಖಕಿಂತಲೂ ಅದನ್ನು ನೆನಸಿಕೊಳ್ಳುವಾಗ ಆಗುವ ಅನುಭೂತಿಯೇ ವಿಶಿಷ್ಠವಾದುದು. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ಮಳೆಯ ಪರಿಯೇ ಪರಿ. ಮಲೆನಾಡಿನ ಧೋ ಎಂಬ ಮಳೆಯದೊಂದು ಸೊಗಡಾದರೆ, ಬಯಲುಸೀಮೆಯ ಹನಿಗಳ ಮುದವೇ ಬೇರೆ. ಹಾಗೆಯೇ ಮುಂಬಯಿಯ ಸಮಯದ ಪರಿವೆ ಇಲ್ಲದೆಯೇ ಮೈ ತೋಯ್ಸಿ, ಜೊತೆಗೆ ಬೆವರನ್ನೂ ಸುರಿಸುವ ಪರಿ ಇನ್ನೊಂದು ಥರ.
ಏನೇ ಹೇಳಿ, ಮೊದಲ ಹನಿಯ ಸೊಗಡಿನ ವಾಸನೆ ಮಾತ್ರ ಎಲ್ಲೆಲ್ಲೂ ಒಂದೇ!!!
ಬಹಳ ಸುಂದರ ಲೇಖನ ಪ್ರಸ್ತುತಪಡಿಸಿ ನನ್ನ ಮನವನ್ನು ಹೊಯ್ದಾಡಿಸಿದ್ದಕ್ಕೆ ವಂದನೆಗಳು
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಮಳೆ ನಮ್ಮನ್ನ ವಿಭಿನ್ನವಾದ ಅನುಭವಗಳತ್ತ ಒಡ್ಡುತ್ತೆ, ಮಲೆನಾಡಿನಷ್ಟು ಅಗಾಧ ಮಳೆ ಬಯಲು ಸೀಮೆಯಲ್ಲಿ ಆಗದಿದ್ದರು ಮೊದಲ ಮಳೆಗೆ ಎಲ್ಲೆಡೆ ಹರಡುವ ಮಣ್ಣಿನ ಘಮಲು ರೈತ ಮುಖವನ್ನ ಅರಳಿಸುತ್ತೆ. ಬೆಚ್ಚನೆಯ ನಿಮ್ಮ ಅನುಭವಗಳ ಹಂಚಿಕೊಂಡಿದ್ದಿರಾ ಮಳೆ ಹನಿಗಳ ಜೋತೆ .. ಚನ್ನಾಗಿದೆ :)
ಆದರೂ ಈ ಬಾರಿ ಮಳೆ ಅಷ್ಟಾಗಿ ಆಗುತ್ತಿಲ್ಲ .... ಸಮಯಕ್ಕೆ ಸರಿಯಾಗಿ ಮಳೆಯಾಗಿ ... ಒಳ್ಳೆ ಫಸಲು ಬೆಳೆಯಲಿ.
-ಅಮರ
Post a Comment