Monday, 25 February 2008

ನಿಜವಾದ ಚಿನ್ನಗಳು ಮತ್ತು ನಾನು ಪಡೆದ ಚಿನ್ನದ ಪದಕಗಳು

ಯಾಕೋ ಎಲ್ಲವೂ ನೆನಪಾಗುತ್ತಿದೆ......
ಚಪ್ಪಲಿಯೇ ಇಲ್ಲದೆ ಬರಿಗಾಲಿನಲ್ಲಿ ಶಾಲೆಗೆ ನಡೆದು ಹೋಗಿದ್ದು, ಅಂಗಾಲಿಗೆ ಬಿದಿರಿನ ಮುಳ್ಳು ಚುಚ್ಚಿ ಕೀವು ತುಂಬಿಕೊಂಡದ್ದು, ಮಳೆಗಾಲದಲ್ಲಿ ನೆನೆದು ಮನೆಗೆ ಬಂದದ್ದು, ಬೇರೆಯವರ ಕೊಡೆ ಕೆಳಗೆ ನಿಲ್ಲಲು ಹೋಗಿ ಬೈಸಿಕೊಂಡದ್ದು, ಪೆನ್ಸಿಲ್‌ನಲ್ಲಿ ಬರೆಯುತ್ತಾ ಪೆನ್ನಿಗಾಗಿ ಆಸೆ ಪಟ್ಟದ್ದು, ಪೆನ್ನಿನ ಕಡ್ಡಿಯಲ್ಲಿ ಬರೆದು ಕೈ ಬೆರಳುಗಳ ಸಂಧಿಯೆಲ್ಲಾ ನೀಲಿ ಮಸಿ ಅಂಟಿಕೊಂಡದ್ದು, ಹಳೆಯ ವಿದ್ಯಾರ್ಥಿಗಳ ಹಳೆಯ ಪುಸ್ತಕವನ್ನು ಅರ್ಧ ರೇಟಿಗೆ ಕೊಂಡು ಬೇಸಿಗೆಯಲ್ಲಿ ರಜೆಯಲ್ಲಿ ಓದಿಕೊಂಡದ್ದು, ದುಡ್ಡಿದ್ದ ವಿದ್ಯಾರ್ಥಿಗಳು ಐಸ್‌ಕ್ಯಾಂಡಿ ಕೊಂಡು ಚೀಪುವಾಗ ದೂರದಲ್ಲಿ ನಿಂತು ಆಸೆಗಣ್ಣುಗಳಿಂದ ನೋಡಿದ್ದು, ಇರುವ ಒಂದೇ ನೋಟ್ ಬುಕ್‌ನಲ್ಲಿ ಎಲ್ಲ ವಿಷಯವನ್ನೂ ಬರೆದುಕೊಂಡದಕ್ಕೆ ಮೇಷ್ಟ್ರು ಬೆಂಚ್ ಹತ್ತಿ ನಿಲ್ಲಿಸಿದ್ದು, ಟಿಫಿನ್‌ಬಾಕ್ಸ್ ಕೈಯಿಂದ ಜಾರಿ ಬಿದ್ದು ಅನ್ನ ಚೆಲ್ಲಿದಾಗ ಮಧ್ಯಾಹ್ನ ಹಸಿವಿನಿಂದಾಗಿ ಅತ್ತಿದ್ದು, ಮಗ್ಗಿ ಬರಲಿಲ್ಲವೆಂದು ಜಯಾ ಟೀಚರ್ ಪಳಾರನೆ ಕೆನ್ನೆಗೆ ಹೊಡೆದಾಗ ಕಣ್ಣೀರು ಜಿನುಗಿದ್ದು, ಸೀಮೆ ಎಣ್ಣೆ ಬುಡ್ಡಿಯ ಬೆಳಕಲ್ಲಿ ಇಂಗ್ಲೀಷ್ ಪದ್ಯ ಕಂಠಪಾಠ ಮಾಡಿದ್ದು, ಬಸ್ಸಿಗೆ ದುಡ್ಡಿಲ್ಲವೆಂದು ಎಂಟು ಕಿಲೋಮೀಟರ್ ನಡೆದು ರಾತ್ರಿ ಮನೆ ಸೇರಿದ್ದು....

ಅಪ್ಪ ಅಮ್ಮ ಹಗಲಿರುಳೂ ದುಡಿದದ್ದು.. ನಮ್ಮನ್ನು ಓದಿಸಲು ಚಿಲ್ಲರೆ ಹಣವನ್ನೂ ಕೂಡಿಟ್ಟದ್ದು, ಉಪವಾಸವಿದ್ದರೂ ನಮ್ಮನ್ನು ಶಾಲೆಗೆ ಕಳುಹಿಸಿದ್ದು, ಬೆಳದಿಂಗಳ ರಾತ್ರಿಯಲ್ಲೂ ಕೆಲಸ ಮಾಡಿ ಮನೆ ಕಟ್ಟಿದ್ದು.. ಹೊಸ ಯೂನಿಫಾರ್ಮ್ ಹೊಲಿಸಲು ಹಣ ಕಡ ತಂದದ್ದು.. ಅಮ್ಮನ ಬಂಗಾರ ಬ್ಯಾಂಕಿನಲ್ಲಿಟ್ಟದ್ದು, ಕಂತು ತಪ್ಪಿದಾಗ ಬ್ಯಾಂಕಿನವರು ನೋಟೀಸು ಕಳುಹಿಸಿದ್ದು.. ಮಕ್ಕಳಿಗೆ ಹೊಸ ಬಟ್ಟೆ ಹೊಲಿಸಿ ತಾವು ಹಾಕಿದಷ್ಟೇ ಖುಷಿಯಿಂದ ಅಪ್ಪ ಅಮ್ಮ ಸಂಭ್ರಮಿಸಿದ್ದು.. ಮಕ್ಕಳು ಪರೀಕ್ಷೆಯಲ್ಲಿ ಪಾಸಾದಾಗ ಊರಿಗೆಲ್ಲಾ ಹೇಳಿ ಹಿರಿ ಹಿರಿ ಹಿಗ್ಗಿದ್ದು. ಬಡತನವಿದ್ದರೂ ಅದು ನಮಗೆ ಸೋಕದಂತೆ ಬೆಳೆಸಿದ್ದು... ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ತುಂಬಿ ಹರಿಯುವ ನದಿ ದಾಟಿಸಿದ್ದು, ಕರೆಂಟೂ ಇಲ್ಲದ ಕುಗ್ರಾಮವಾದ ನಮ್ಮೂರಲ್ಲಿ ನಾವು ಆಡಿ ಬೆಳೆದದ್ದು...ಬದುಕನ್ನು ಪ್ರೀತಿಸಲು ಕಲಿತಿದ್ದು.....

ಮುಂದೆ ದೊಡ್ಡವನಾದದ್ದು, ಗೆಳೆಯರು ಜೊತೆಯಾದದ್ದು, ಒಂದೇ ತಟ್ಟೆಯಲ್ಲಿ ಉಂಡು ಮಲಗಿದ್ದು. ಕಷ್ಟ ಸುಖ ಹಂಚಿಕೊಂಡದ್ದು, ಪರಸ್ಪರ ಸಾಲ ಕೊಟ್ಟಿದ್ದು, ತೆಗೆದುಕೊಂಡಿದ್ದು, ಪರೀಕ್ಷೆಯ ಹಿಂದಿನ ದಿನವಷ್ಟೇ ಓದುತ್ತಿದ್ದದ್ದು, ಗುಂಪು ಗುಂಪಾಗಿ ಇಡಿ ವಿಶ್ವವಿದ್ಯಾಲಯವನ್ನೇ ಸುತ್ತಿದ್ದು..ಒಮ್ಮೊಯೂ ಲೈಬ್ರರಿಯೆಡೆಗೆ ಮುಖ ಮಾಡದೆ ಅದರ ಮುಂದಿನಿಂದಲೇ ಹೋಗುತ್ತಿದ್ದದ್ದು.. ಮಾಸ್ ಬಂಕ್ ಮಾಡುತ್ತಿದ್ದದ್ದು.. ಮಾಸ್ತರರ ತಲೆ ತಿಂದದ್ದು.. ಕ್ಲಾಸಿನ ಹಿಂದಿನ ಡೆಸ್ಕಿನಲ್ಲಿಯೇ ಕೂರುತ್ತಿದ್ದದ್ದು.. ಅದ್ಭುತವೆನ್ನುವ ಟೀಮ್ ವರ್ಕ್ ಮಾಡುತ್ತಿದ್ದದ್ದು... ವಿಭಾಗದಲ್ಲೇ ಯಾವ ಬ್ಯಾಚಿನ ವಿದ್ಯಾರ್ಥಿಗಳೂ ಮಾಡದಿದ್ದಂತ ಹೊಸ ಹೊಸ ಯೋಜನೆಗಳಿಗೆ ಕೈ ಹಾಕುತ್ತಿದ್ದದ್ದು.. ಸಂಜೆ ಸಮಾಚಾರ ಪತ್ರಿಕೆ ತಂದದ್ದು, ಡಾಕ್ಯುಮೆಂಟರಿ ಮಾಡಿದ್ದು.. ಕಂಪ್ಯೂಟರ್, ಇಂಟರ್‌ನೆಟ್ ಅಂತ ತಲೆಕೆಡಿಸಿಕೊಂಡದ್ದು...ಉದ್ದಾರ ಆಗೋದಿಲ್ಲ ಎಂದ ಶಿಕ್ಷಕರೇ ಶಭಾಸ್ ಅಂದದ್ದು.

ಹೀಗೆ ಇವೆಲ್ಲವೂ ಆಗಿ ಬೆಳಗಾಗುವ ಹೊತ್ತಿಗೆ ನಾನು ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಸ್ನಾತಕೋತ್ತರ ಪದವಿ ಮುಗಿಸಿ ಹೊರಬಿದ್ದಿದ್ದೆ. ನೋಟ್ಸ್ ಬರೆದು, ಮಾಸ್ತರು ಹೇಳಿದ್ದನ್ನು ಕೇಳಿಸಿಕೊಂಡು, ಲೈಬ್ರರಿಗೆ ಹೋಗಿ ಕಂಠ ಪಾಠ ಮಾಡಿ, ನೀಟಾಗಿ ಎಕ್ಸಾಮ್ ಬರೆಯುವ ಬುದ್ಧಿ ನನಗೆ ಮೊದಲಿನಿಂದಲೂ ಬೆಳೆಯಲೇ ಇಲ್ಲ. ಅಸಲಿಗೆ ನಾನು ಎರಡು ವರ್ಷ ವಿವಿಯಲ್ಲಿದ್ದರೂ, ಲೈಬ್ರರಿ ಕಾರ್ಡ್ ಕೂಡ ಮಾಡಿಸಿರಲಿಲ್ಲ. ನನ್ನ ರೂಮಿನಲ್ಲಿ ಒಂದೇ ಒಂದು ಟೆಸ್ಟ್ ಬುಕ್ ಇರುತ್ತಿರಲಿಲ್ಲ. ನೀನು ಯಾವಾಗ ಓದುತ್ತೀಯಾ ಎನ್ನುವವರಿಗೆ ನಾನು ಯಾವಾಗಲೂ ಪ್ರಶ್ನೆಯಾಗಿಯೇ ಉಳಿದಿದ್ದೆ. ಪರೀಕ್ಷೆಯ ಹಿಂದಿನ ದಿನ ಎಲ್ಲ ಗೆಳೆಯರನ್ನು ಕಟ್ಟಿಕೊಂಡು ಎರಡು ಗಂಟೆಗಳು ಡಿಸ್ಕಸ್ ಮಾಡುತ್ತಿದ್ದೆ. ಕರ್ನಾಟಕ ವಿವಿಯ ವಿಶಾಲ ಆವರಣದಲ್ಲಿ ಪತ್ರಿಕೋದ್ಯಮ ವಿಭಾಗದ ಪಕ್ಕದಲ್ಲಿ, ಜೆನೆಟಿಕ್ಸ್ ವಿಭಾಗಕ್ಕೆ ಅಂಟಿಕೊಂಡಂತೆ ಡಾ. ಪಾವಟೆಯವರ ಸಮಾಧಿ ಇದೆ. ಎಲ್ಲರೂ ಸುಡುಗಾಡು ಎಂದು ಕರೆಯುವ ಆ ತಣ್ಣನೆಯ ವಾತಾವರಣದಲ್ಲಿ ನಾವೆಲ್ಲ ಗೆಳೆಯರು ಪರೀಕ್ಷೆ ನಾಳೆ ಇದ್ದರೆ ಇಂದು ಕಂಬೈಂಡ್ ಸ್ಟಡಿಯ ಹೆಸರಲ್ಲಿ ಒಂದುಗೂಡಿ ಲೋಕಾಭಿಮುಖರಾಗಿ ಹರಟೆ ಹೊಡೆಯುತ್ತಿದ್ದೆವು. ಅಲ್ಲಿಗೆ ಒಂದು ಸೆಮಿಸ್ಟರ್‌ನ ನಮ್ಮ ಓದು ನಿರಾತಂಕವಾಗಿ ಮುಗಿದು ಹೋಗುತ್ತಿತ್ತು.

ಈಗ ಒಂದು ಅಂತರ್ಜಾಲ ನಿಯತಕಾಲಿಕದಲ್ಲಿ ಉಪಸಂಪಾದಕ ಎಂದು ಕರೆಸಿಕೊಳ್ಳುವ ಈ ನಾನೆಂಬ ನಾನು, ಮೊನ್ನೆ ಕವಿವಿಯ ಘಟಿಕೋತ್ಸವಕ್ಕೆ ಹೋಗಿದ್ದೆ. ಅಪ್ಪ ಅಮ್ಮ ಬಂದಿದ್ದರು. ಅಮ್ಮನ ಕಣ್ಣಲ್ಲಿ ಕಣ್ಣೀರು. ಯಾಕಮ್ಮಾ ಅಳುತ್ತೀಯಾ.. ಖುಷಿಯಾಗಿರಬೇಕು ಎಂದೆ. ಮಕ್ಕಳು ಏನಾದರೂ ಸಾಧಿಸಿದರೆ ಅದಕ್ಕಿಂತ ತಂದೆತಾಯಿಗಳಿಗೆ ಇನ್ನೇನು ಬೇಕೋ, ನಾನು ಖುಷಿಯಿಂದ ಅಳುತ್ತಿದ್ದೇನೆ ಎಂದರು. ನನ್ನ ಕಣ್ಣಲ್ಲೂ ಕಣ್ಣೀರು ಹನಿಸಿತ್ತು. ಅಪ್ಪ ಬಂದು ಕೈ ಹಿಡಿದಾಗ ಕೆಲಸ ಮಾಡಿ ಒರಟಾಗಿರುವ ಅವರ ಅಂಗೈಯ ಸ್ಪರ್ಶ ಎಲ್ಲವನ್ನೂ ಹೇಳಿತ್ತು. ನನ್ನ ಗೆಳೆಯರೆಲ್ಲರೂ ತಮ್ಮದೇ ಕಾರ್ಯಕ್ರಮ ಎಂಬಂತೆ ಜೊತೆಗಿದ್ದರು. ಪತ್ರಕರ್ತರು ಸುತ್ತುವರೆದರು. ನಿಮ್ಮ ಸಾಧನೆಗೆ ಯಾರು ಪ್ರೇರಣೆ ಎಂದು ಕೇಳಿದರು. ಎಷ್ಟು ಜನರ ಹೆಸರು ಹೇಳಲಿ?

ಈ ಬಾರಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿ ನಾನು. ಚಿಕ್ಕದೊಂದು ಸಾಧನೆ. ಇಷ್ಟ ಪಟ್ಟು ಕಲಿತ ವಿಷಯವೊಂದರಲ್ಲಿ ಕಷ್ಟಪಟ್ಟಿದ್ದಕ್ಕೆ ಆರು ಚಿನ್ನದ ಪದಕಗಳು. ಜೊತೆಗೊಂದಿಷ್ಟು ಸಂತಸ. ಛಾಯಾಗ್ರಾಹಕರು ತೆಗೆದ ಗ್ರುಪ್ ಫೋಟೋದಲ್ಲಿ ಮೂವರು ಚಿನ್ನದ ಹುಡುಗಿಯರ ನಡುವೆ ಎದ್ದು ಕಾಣುವ ಚಿನ್ನದ ಹುಡುಗ!

ಆದರೆ ಅಸಲಿಗೆ ಅಸಲಿಗೆ ಚಿನ್ನದ ಹುಡುಗ ನಾನಲ್ಲ. ನಿಜವಾದ ಚಿನ್ನಗಳು ನನ್ನ ತಂದೆತಾಯಿಗಳು. ಪರಸ್ಪರ ರಕ್ತಸಂಬಂಧ ಇಲ್ಲದಿದ್ದರೂ, ಹಾಗಿರುವವರಿಗಿಂತ ಅನ್ಯೂನವಾಗಿರುವ ನನ್ನ ಗೆಳೆಯರು. ಅಕ್ಷರ ಕಲಿಸಿದ ಶಿಕ್ಷಕರು., ಎಲ್ಲೆಲ್ಲೋ ಹೇಗೇಗೋ ನೆರವಾಗಿರುವ, ನೆರವಿನ ಹಸ್ತಗಳು.. ಎಲ್ಲರ ಹೆಸರು ಬರೆದರೆ ನನ್ನ ಈ ಬ್ಲಾಗ್ ಸಾಕಾಗುವುದಿಲ್ಲ. ಇವರೆಲ್ಲರು ಇಲ್ಲದಿದ್ದರೆ ನಾನು ಚಿನ್ನದ ಪದಕ ಹಾಕಿಸಿಕೊಳ್ಳಲು ಕವಿವಿಯ ಗಾಂಧೀಭವನದ ಮೆಟ್ಟಿಲು ಹತ್ತುತ್ತಿರಲಿಲ್ಲ. ತೆರೆ ಮರೆಯಲ್ಲಿರುವ ನಿಜವಾದ ಚಿನ್ನಗಳಿಗೆ ನಾನು ಪಡೆದ ಚಿನ್ನದ ಪದಕಗಳಿಂದ ಬೆಲೆ ಕಟ್ಟಲು ಬರುವುದಿಲ್ಲ. ಚಿನ್ನಕ್ಕಿಂತಲೂ ಬದುಕು ದೊಡ್ಡದಲ್ಲವೇ? ಬದುಕು ಕಲಿಸುವ ಪಾಠ ಇನ್ನೂ ದೊಡ್ಡದಲ್ಲವೇ?

33 comments:

ಮಲ್ಲಿಕಾಜು೯ನ ತಿಪ್ಪಾರ said...

adhubhat Jomon.. Nin nenapugalu.. Nanna koda hindakke karedukondu hoyitu.. Modaldrdha bag nan jevanane ninu bardidi ansittu....Jotge kanniru haniyu jinigutu... Adre nantard ardha bagdalli nin madiro sadange nanu sanih baralare.. Nanyake nin jote holiskonde gottilla.. Mostlly nammibaru balynu onde..ansutte.. Ninu malenadalli kasta kandidiya.. Nanu bayalunadinallu..

Hogili bidu.. Nanu matte balyad jevankke hogutiiddene...

Adre nin lekhan tumba chennagide.. Nijavaglu badaku doddadu ninu helida haage.

M S tippar

Somanagouda said...

my dear guru jomon,
nina jeevana ellarigu ondu model. saadisuvvarigondu munnudi. jeevan nintha neeragabaaradu adu hosa hosa vicharagalige manssannu sadaa teredukondirbeku embudannu torisikottiruve. ninu patta shramakke ninu anubavisida aa kastagalige sanda pratipal aa six gold medle galu. nimma ella anubavagalannu hanchikondiddakke nooraa onu thanksgalu. whish u all d besy of luck.

Unknown said...

ಜೋಮನ್ ರವರೇ,

ಅಭಿನಂದನೆಗಳು. ಚಿನ್ನದ ಪದಕಗಳನ್ನು, ಮತ್ತೂ ಚಿನ್ನದಂತ ಅಪ್ಪ,ಅಮ್ಮ,ಗೆಳೆಯರನ್ನು ಪಡೆದಿದ್ದಕ್ಕೆ.

ರಾಜೇಶ್ ನಾಯ್ಕ said...

ಅಭಿನಂದನೆಗಳು. ಹೆತ್ತವರು ನಮ್ಮ ಬಗ್ಗೆ ಹರ್ಷಪಟ್ಟರೆ, ಹೆಮ್ಮೆಪಟ್ಟರೆ ನಮ ಜೀವನ್ ಸಾರ್ಥಕ.

jomon varghese said...

@ ಮಲ್ಲಿಕಾರ್ಜುನ ತಿಪ್ಪಾರ್...


ನಿಮ್ಮ ಬಾಲ್ಯಕ್ಕೆ ನನ್ನದೂ ಎರಡು ಕಣ್ಣ ಹನಿ...

ತುಂಬಾ ಧನ್ಯವಾದಗಳು. ನಿಮ್ಮ ಚೆಂದದ ಮನಸ್ಸಿಗೆ.

jomon varghese said...

@ ಮಧು,

ನಿಮ್ಮ ಸಹೃದಯ ಓದಿಗೆ ಪ್ರತಿಕ್ರಿಯೆಗೆ ಧನ್ಯವಾದಗಳು.


ಜೋಮನ್

jomon varghese said...

@ರಾಜೇಶ್ ನಾಯ್ಕ್

ನಿಮ್ಮ ಪ್ರತಿಕ್ರಿಯೆ ನೋಡಿ ಸಂತಸವಾಯಿತು. ಧನ್ಯವಾದಗಳು.

ಶಾನಿ said...

ಜೋಮನ್, ನಿನ್ನ ಚಿನ್ನದ ಪದಕಗಳಿಗೆ ಕಾಯ್ತಾ ಇದ್ದೆ. ಹೀಗೆ ಅಕ್ಷರಗಳಲ್ಲಿ ಆರ್ದ್ರತೆ ತೋರುತ್ತಿಯಾ ಎಂಬ ನಿರೀಕ್ಷೆ ಹುಸಿಯಾಗಲಿಲ್ಲ. ನಿನ್ನ ಸಾಧನೆಗೆ ಮತ್ತೊಮ್ಮೆ ಅಭಿನಂದನೆಗಳು

jomon varghese said...

@ ಸೋಮನ ಗೌಡ,

ಗೌಡರೇ ಯಾರು ಯಾರಿಗೂ ಗುರುವಲ್ಲ ! ನಮ್ಮ ಬದುಕೇ ನಮಗೆ ದೊಡ್ಡ ಪಾಠ ಶಾಲೆ.ಅನುಭವವೇ ಗುರು. ಹಾಗಂತ ನಂಬಿದವನು ನಾನು. ನಿಮ್ಮ ಹೊಗಳಿಕೆಯಲ್ಲಿ ಒಂದು ಗುಲಗಂಜಿಯಷ್ಟು ಭಾಗ ಮಾತ್ರ ನನಗೆ ಸೇರಬಹುದೇನೋ?

ನಿಮ್ಮ ಓದಿದೆ, ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಜೋಮನ್.

jomon varghese said...

@ ಆತ್ಮೀಯ ಚಂದ್ರಾವತಿ ಮೇಡಂ ಮಳೆಹನಿಗೆ ಸ್ವಾಗತ.

ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು. ಅಭಿನಂದನೆಗೆ ಒಂದು ಬೊಗಸೆ ಧನ್ಯವಾದಗಳು. ಹಿಡಿ ಪ್ರೀತಿ, ಅರೆಪಾವು ವಿಶ್ವಾಸ ಹೀಗೆಯೇ ಇರಲಿ..


ಜೋಮನ್.

ಬ್ರಹ್ಮಾನಂದ ಎನ್.ಹಡಗಲಿ said...

Huduga...Adhtuta... Enoo Helaloo Agta illa...

"Bangaradantha" Lekhan....

Brahma

ಶ್ರೀನಿಧಿ.ಡಿ.ಎಸ್ said...

touchy. abhinandanegaLu joman.. maatu horaDuttilla.

ವಿ.ರಾ.ಹೆ. said...

ನಮಸ್ತೇ ಜೋಮನ್,

ಅಭಿನಂದನೆಗಳು, ಚೆನ್ನಾಗಿ ಮನಸ್ಸಿಗೆ ತಟ್ಟುವಂತೆ ಬರೆದಿದ್ದೀರ.

ನಿಜವಾದ ಚಿನ್ನಗಳು ನನ್ನ ತಂದೆತಾಯಿಗಳು ಎಂದಿರುವ ನಿಮ್ಮ ಗುಣ ಎಲ್ಲರಿಗೂ ಮಾದರಿಯಾಗಿರುವಂತದ್ದು.
thank you.

ಮನಸ್ವಿನಿ said...

ನಮಸ್ಕಾರ,

ಅಭಿನಂದನೆಗಳು. ಇನ್ನೇನೂ ಹೇಳಲಾಗುತ್ತಿಲ್ಲ.

Srikanth - ಶ್ರೀಕಾಂತ said...

ಲೇಖನ ಚೆನ್ನಾಗಿದೆ. ನಿಮ್ಮ ಮನಸ್ಸಿನ ಭಾವಗಳು ಮತ್ತು ನೀವು ಬದುಕನ್ನು ನೋಡುವ ರೀತಿ ಮತ್ತಷ್ಟು ಚೆನ್ನಾಗಿದೆ.

ಚಿನ್ನದ ಪದಕ ಗಳಿಸಿದ್ದಕ್ಕೆ ಅಭಿನಂದನೆಗಳು. ನಿಜವಾದ ಚಿನ್ನಗಳಿಗೂ, ಅವರಂತೆಯೇ ಇರುವ ಅನೇಕ ತಂದೆ-ತಾಯಂದಿರಿಗೂ ನಮನಗಳು.

jomon varghese said...

@ಬ್ರಹ್ಮಾನಂದ,

ಧನ್ಯವಾದ ಬ್ರಹ್ಮ. ನಿನ್ನ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.

@ಶ್ರೀನಿಧಿ ಡಿ.ಎಸ್,

ಧನ್ಯವಾದಗಳು ಶ್ರೀನಿಧಿ ಸರ್.


@ವಿಕಾಸ ಹೆಗಡೆ,

ತುಂಬಾ ಧನ್ಯವಾದಗಳು.

@ ಮನಸ್ವಿನಿ,
ಧನ್ಯವಾದಗಳು.

@ಶ್ರೀಕಾಂತ್,

ನಿಮ್ಮ ಓದಿಗೆ, ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

Sarathy said...

ಏನ್ರೀ ಜೋಮನ್, ನಲ್ಲ ಇರಿಕ್ಕಿಂಗ್ಲ? ಲೇಖನ ಸೂಪರ್ ಸೂಪರ್. ಚಿನ್ನದಂಥ ಮಾತುಗಳು.

ಶಾಂತಲಾ ಭಂಡಿ (ಸನ್ನಿಧಿ) said...

jomonಅವರೆ...
ಚಿನ್ನದಂಥಹ ಅಪ್ಪ-ಅಮ್ಮ, ಚಿನ್ನದ ಪದಕಗಳನ್ನು ಹೊಂದಿದ್ದಕ್ಕಾಗಿ ಅಭಿನಂದನೆಗಳು.
ಭಾವಗಳೆನೆಲ್ಲ ಒಂದೆಡೆ ಕಟ್ಟಿಬಿಡುವಂಥಹ ಲೇಖನ. ಇನ್ನೇನೂ ಹೇಳಲಾರೆ.

jomon varghese said...

@ ವಿಜಯ ಸಾರಥಿ,

ಸರ್ ನೀವು ಚೆನೈದಿಂದ ಕರ್ನಾಟಕ್ಕೆ ಬಂದಿದ್ದೀರ ಅಂತ ತಿಳಿಯಿತು.ನಿಮ್ಮ ಅಪರೂಪದ ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷವಾಗುತ್ತಿದೆ.ಧನ್ಯವಾದಗಳು.

dinesh said...

good luck jomon ......whish you more success in your future.....

Sushrutha Dodderi said...

ಕಂಗ್ರಾಜುಲೇಶನ್ಸ್ ಜೋಮನ್! ಎಷ್ಟು ಭಾವ ತುಂಬಿ ಬರೆದಿದ್ದೀರ..

nagendra said...

ಜೋಮನ್,

ಸಾಧನೆಯ ಬದುಕಿನ ನೋವು-ನಲಿವುಗಳು ಅಕ್ಷರ ರೂಪದಲ್ಲಿ ಬಹಳ ಚೆನ್ನಾಗಿ ಲೇಖನದಲ್ಲಿ ಮೂಡಿ ಬಂದಿದೆ. ನೀವು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬ ಹಾರೈಕೆಯೊಂದಿಗೆ.


ನಾಗೇಂದ್ರ ತ್ರಾಸಿ.ಚೆನ್ನೈ

jomon varghese said...

@ಶಾಂತಲಾ ಭಂಡಿ,

ನಿಮ್ಮ ಸಹೃದಯ ಓದಿಗೆ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

@ದಿನೇಶ್,

Thank u ದಿನೇಶ್...

@ ಸುಶ್ರುತ ದೊಡ್ಡೇರಿ,

ಮೌನಗಾಳದ ಮಾಲೀಕರೇ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾನೇ ಖುಷಿಯಾಯಿತು.

@ನಾಗೇಂದ್ರ ತ್ರಾಸಿ,

ತ್ರಾಸಿ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಮಾತುಗಳು ಸ್ಪೂರ್ತಿ ತರುತ್ತದೆ.

Unknown said...

hi sir
nanu nima lekhan odi kelvu nann balyd naded yeno anta anistu total nibrerd artical NALI edu nange hidiside vinayak dumma

channappa said...

hai joma its pentastic chenagi baradi nenu barebeg enu chenagi bari

Keshav.Kulkarni said...

"ಮಕ್ಕಳಿಗೆ ಹೊಸ ಬಟ್ಟೆ ಹೊಲಿಸಿ ತಾವು ಹಾಕಿದಷ್ಟೇ ಖುಷಿಯಿಂದ ಅಪ್ಪ ಅಮ್ಮ ಸಂಭ್ರಮಿಸಿದ್ದು"

ಅದ್ಭುತ ಸಾಲುಗಳು. ಚಿನ್ನದ ಪದಕಗಳಿಗೆ ಅಭಿನಂದನೆಗಳು. ನಿಮ್ಮಿಂದ ಇಂಥ ಚಿನ್ನಂದಂಥ ಬರಹಗಳೂ ಹೆಚ್ಚು ಹೆಚ್ಚು ಬರಲಿ.

-ಕೇಶವ (www.kannada-nudi.blogspot.com

jomon varghese said...

@ ವಿನಾಯಕ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

@ಚೆನ್ನಪ್ಪ,

ತುಂಬಾ ಅಪರೂಪವಾದ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾನೆ ಖುಷಿಯಾಯಿತು.

@
ಕೇಶವ ಕುಲಕರ್ಣಿ ಅವರಿಗೆ ನಮಸ್ಕಾರ.. ಮಳೆಹನಿಗೆ ಸ್ವಾಗತ.

ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ನಾನು ಆಬಾರಿ. ತುಂಬಾ ಧನ್ಯವಾದಗಳಿವೆ.

Srinidhi said...

ಜೋಮನ್

ಅಭಿನಂದನೆಗಳು. ಅದ್ಭುತ ಬರಹ, ಬೇರೇನೂ ಹೇಳಲು ಮಾತು ಹೊರಡುತ್ತಿಲ್ಲ!

ಶ್ರೀನಿಧಿ

....Here I Am said...

jomon,

SUPER!, its really a pleasant experience to read the blog of a KUD rank holder and his tryst with the life.

Everybody has fond memories of their childhood experiences, but only few can transform it to words.

Your's article is that wonder. Excellent blog.

jomon varghese said...

@ here i am,

ನಿಮ್ಮ ಸಹೃದಯ ಓದಿಗೆ, ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

ಜೋಮನ್ ವರ್ಗೀಸ್.

ಅಮರ said...

ನಮಸ್ಕಾರ ಜೋಮನ್ ನಿಮ್ಮ ವಿಧ್ಯಾರ್ಥಿ ಜೀವನದ ಅನುಭವಗಳನ್ನ ಓದಿ..... ನಿಮ್ಮ ಹಾಗೆ ಎಮ್ ಎ ಓದು ಮುಗಿಸಿದ ನನ್ನ ಗೆಳೆಯನ ನೆನಪಾಯ್ತು. ಮನಮುಟ್ಟುವ ಬರಹ.
-ಅಮರ

ಅಹರ್ನಿಶಿ said...

ಜೋಮನರೆ,
ನಿಮ್ಮ ಬರಹದಲ್ಲಿ ಮಾ೦ತ್ರಿಕ ಶಕ್ತಿಯಿದೆ.ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.ಸಮಯ ಸಿಕ್ಕಿರಲಿಲ್ಲ.ಇ೦ದು ಒಮ್ಮೆಲೇ ನಿಮ್ಮ "ಮಳೆಹನಿ" ಯಲ್ಲಿ ತೊಯ್ದು ಹೋಗಿದ್ದೇನೆ.ನನಗೆ ನಿಮಗೆ ಸಿಕ್ಕ೦ಗೆ ಚಿನ್ನದ ಪದಕಗಳೇನೂ ಸಿಕ್ಕಿಲ್ಲ.ದೇವರು ಕೊಟ್ಟ ಎರಡು ಪದಕಗಳಲ್ಲಿ ಒ೦ದನ್ನ ಕಳೆದುಕೊ೦ಡಿದ್ದೇನೆ

jomon varghese said...

@ಅಮರ,
ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ನಿಮ್ಮ ಗೆಳೆಯನಿಗೆ ನನ್ನದೂ ಒಂದು ಶುಭ ಹಾರೈಕೆ. ಧನ್ಯವಾದಗಳು.

@ ಶ್ರೀಧರ್ ಸರ್,

ನಿಮ್ಮ ಸಹೃದಯ ಓದು, ಆತ್ಮೀಯ ಪ್ರತಿಕ್ರಿಯೆ ನೋಡಿ ತುಂಬಾನೇ ಖುಷಿಯಾಯಿತು. ದೇವರು ನಿಮಗೆ ಕೊಟ್ಟಿರುವ ಚಿನ್ನದ ಪದಕಗಳು ತುಂಬಾ ದೊಡ್ಡದು, ಅದಕ್ಕೆ ಮೌಲ್ಯ ಕಟ್ಟಲು ಬರುವುದಿಲ್ಲ. ಧನ್ಯವಾದಗಳು. ಆಗಾಗ್ಗ ಬರುತ್ತಲಿರಿ.

ಜೋಮನ್.