Friday, 4 January 2008

ಹೊಸ ವರ್ಷ ಮತ್ತು ಸಂಪಿಗೆಯ ಕಂಪು

ಕಳೆದ ಡಿಸೆಂಬರ್ 31ರ ಮಧ್ಯರಾತ್ರಿ ಇಡಿ ಮೈಸೂರೆಂಬ ಮೈಸೂರು ಹೊಸವರ್ಷಕ್ಕೆ ಮೈಮನ ತೆರೆದು ಕ್ಷಣಗಣನೆಗೆ ತೊಡಗಿರುವಾಗ, ನಾವಿಬ್ಬರು ಜಯಲಕ್ಷಿಪುರಂನಲ್ಲಿರುವ ಕಚೇರಿಯಲ್ಲಿ ಗಣಕಯಂತ್ರದ ಮುಂದೆ ಕುಳಿತು ಹೂವೊಂದು ಅರಳುವುದನ್ನು ಅಚ್ಚರಿಯಿಂದ ಕಾಯುತ್ತಿದ್ದೆವು. ಪ್ರತಿ ಕ್ಷಣದ ತಲ್ಲಣ, ಸಂಭ್ರಮ, ಕಾತರವನ್ನು ತನ್ನ ಎದೆಯೊಳಗೆ ಬೆಚ್ಚಗೆ ಮಡಗಿ, ಇನ್ನೇನು ಜಗತ್ತಿಗೆ ಬರಲಿರುವ ತನ್ನ ಮಡಿಲ ಕುಡಿಯನ್ನು ಚೊಚ್ಚಲ ಬಸುರಿ ಎದುರುನೋಡುವಂತೆ, ಆಕೆಯ ತಲ್ಲಣದಂತೆ, ಸಂಭ್ರಮದಂತೆ, ನಾವೂ ಅರಳುತ್ತಿರುವ ಹೂವನ್ನು ಈಗಲೋ ಆಗಲೋ ಎಂಬಂತೆ ಸ್ವಾಗತಿಸಲು ಸಿದ್ದರಾಗಿದ್ದೆವು.

ಆ ಪ್ರಸವ ವೇದನೆಯ ಆನಂದವನ್ನು, ನೋವನ್ನು ಒಂದು ವಿಶಿಷ್ಠ ಅನುಭೂತಿಯೊಳಗೆ ಆಸ್ವಾದಿಸುತ್ತಾ, ಆ ಅರಳುವಿಕೆಯ ಸೊಗಸಿನಲ್ಲಿ ಹೊಸವರ್ಷವನ್ನು ಆಚರಿಸುವ ಸಂತಸದಲ್ಲಿದ್ದೆವು. ಹೊರಗೆ ಪಟಾಕಿ ಸಿಡಿಯುವ ಸದ್ದು ಕೇಳಿಸುತ್ತಿತ್ತು. ಕೆಲವು ಪುಂಡ ಹುಡುಗರು ಹೊಸವರ್ಷದಲ್ಲಿ ಜಗತ್ತನ್ನೇ ಬದಲಿಸಿಬಿಡುತ್ತೇವೆ ಎನ್ನುವ ಗತ್ತಲ್ಲಿ ಬೈಕೇರಿ ಬರ್ರ್s ಎಂದು ನಗರ ಪ್ರದಕ್ಷಿಣೆ ಮಾಡುತ್ತಿದ್ದರು. ದೇವರೇ ಇವರಲ್ಲಿ ಎಷ್ಟು ಜನರಿಗೆ ನಾಳೆಯ ಪತ್ರಿಕೆಯಲ್ಲಿ ಮೃತರ ಕಾಲಂ ಅಲಂಕರಿಸುವ ಭಾಗ್ಯವಿದೆಯೋ ಎಂದು ನಿರ್ಭಾವುಕವಾಗಿ ನೆನೆಯುತ್ತಾ, ಕಿಟಕಿಯೊಳಗಿನಿಂದ ಆಗಸದಲ್ಲಿ ಚಿಮ್ಮುವ ಸಿಡಿಮದ್ದಿನ ಚಿತ್ತಾರಗಳನ್ನು ನೋಡುತ್ತಾ, ಲೇಖನಗಳನ್ನು ಜತನದಿಂದ ಆಫ್‌ಲೋಡ್ ಮಾಡುತ್ತಿದ್ದೆ. ಹೊಸವರ್ಷಕ್ಕೆ ಇನ್ನು ಕಲವೇ ಕ್ಷಣಗಳು ಬಾಕಿ ಉಳಿದಿರುವಾಗ
ಕೊನೆಯ ಸುದ್ಧಿಯನ್ನು ಆಫ್‌ಲೋಡ್ ಮಾಡಿ, ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ, ಒಂದು ಸುಂದರ ಸಂತಸದಲ್ಲಿ ಸಾರ್ ಎಲ್ಲ ಮುಗೀತು, ನೀವೊಮ್ಮೆ ಚೆಕ್ ಮಾಡಿ ಎಂದೆ.

ನೈಸ್ ಜೋಮನ್. ಚೆನ್ನಾಗಿ ಬಂದಿದೆ. ಓಎಲ್‌ಎನ್ ಅವರಿಗೆ ಒಂದು ಫೋನ್ ಮಾಡಿ ಹೇಳೊಣ. ನಿಮಗೆ ಹೊತ್ತಾಗಿದೆಯಾ? ಇನ್ನೊಂದು ಐದು ನಿಮಿಷ. ನಾನು ನಿಮ್ಮನ್ನು ರೂಮಿಗೆ ಬಿಟ್ಟು ಬರುತ್ತೇನೆ. ಯಾರಿಗಾದರೂ ಸರಿಯಾಗಿ 12 ಗಂಟೆಗೆ ಪೋನ್ ಮಾಡಬೇಕಿದೆಯಾ ಎಂದು ಕೆಣಕಿದರು. ನಾನು ನಕ್ಕೆ. ಮನೆಗೆ ರಾತ್ರಿ 12 ಗಂಟೆಗೆ ಫೋನ್ ಮಾಡಿ, ಮಲಗಿರುವ ಅಪ್ಪ ಅಮ್ಮನನ್ನು ಎಬ್ಬಿಸಿ, ಹ್ಯಾಪಿ ನ್ಯೂ ಇಯರ್ ಅಂದರೆ, ಸಮ್ಮನೆ ಮಲ್ಕೋ ಅಂತಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡೆ. ಒಂದಿಬ್ಬರು ಗೆಳೆಯರಿಗೆ ಮಸೇಜ್ ಕಳುಹಿಸಿದೆ. ಹೊಸ ವರ್ಷದೆಂದು ಮಸೇಜ್‌ಗಳಿಗೆ ಒಂದು ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿರುವುದರಿಂದ ದುಡ್ಡು ಕಳೆದುಕೊಂಡು ವಿಶ್ ಮಾಡುವಷ್ಟು ಪ್ರೀತಿಯನ್ನು ಯಾವ ಗೆಳೆಯರೂ ತೋರಿಸಲಿಲ್ಲ. ಇದಕ್ಕಿದಂತೆ, ತುಂಬಾ ಸರಳವಾಗಿ ಅದೋ ನೋಡಿ, ಶಿವರಾಂ ಪೈಲೂರ್ ಕಮೆಂಟ್ ಕಳುಹಿಸಿದ್ದಾರೆ ಎಂದರು. ಆಶ್ಟರ್ಯ! ಇನ್ನೂ ನಮ್ಮ ಹೂವು ಅರಳಿ ಕ್ಷಣಗಳು ಕಳೆದಿಲ್ಲ. ಆದಾಗಲೇ ಮೊದಲ ಪ್ರತಿಕ್ರಿಯೆ ಬಂದಿದೆ. ನಮಗೆ ಹೊಸ ವರ್ಷದ ಸ್ವಾಗತಕ್ಕೆ ಇದಕ್ಕಿಂತ ಬೇರೇನು ಬೇಕು? ಇಬ್ಬರ ಮುಖದಲ್ಲೂ ಸಂಭ್ರಮದ ಪಲ್ಲವ.


ಕೆಲಸ ಮುಗಿಸಿ, ರಾತ್ರಿ ರೂಮಿಗೆ ಹೊರಡುವ ಹೊತ್ತಿಗೆ 12ಕ್ಕೆ ಐದೋ ಆರೋ ನಿಮಿಷ ಬಾಕಿಯಿತ್ತು. ಪ್ರತಿ ವರ್ಷ ನಾನು ಆಕಾಶವಾಣಿಯಲ್ಲಿ ನ್ಯೂ ಇಯರ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. ಈ ವರ್ಷ ಯಾರಿದ್ದಾರೆ ಎನ್ನುತ್ತಾ, ಗಾಡಿಯೊಳಗಿದ್ದ ಸ್ಟಿರಿಯೋ ಕಿ ಅದುಮಿದರು. ಹೊಸ ವರ್ಷದ ಸ್ವಾಗತಕ್ಕೆ ಯಾವುದೇ ಒಂದು ಹಾಡು ಪ್ರಸಾರವಾಗುತ್ತಿತ್ತು. ನಾನು ಗಾಡಿಯ ಕಿಟಕಿಯನ್ನು ತುಸು ಇಳಿಸಿ, ಶುಭ್ರ ಆಕಾಶದಲ್ಲಿ ಬೆಳಗುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ರೂಮು ಬಂದಾಗ ಗಾಡಿ ಇಳಿದು ನಾನು ಅವರಿಗೆ, ಅವರು ನನಗೆ ನ್ಯೂ ಇಯರ್ ವಿಶ್ ಮಾಡಿಕೊಂಡೆವು. ಬಾಡಿಗೆ ಮನೆಯ ಆಂಟಿ ಗೇಟಿನ ಕಿಲಿಯನ್ನು ಹಾಕಿದ್ದರಿಂದ ಅನಿವಾರ್ಯವಾಗಿ ಗೋಡೆ ಜಿಗಿದು, ಟರೇಸ್ ಮೇಲಿರುವ ನನ್ನ ಕೋಣೆ ಸೇರಿಕೊಂಡೆ. ಹೊರಗೆ ಹೊಸ ವರ್ಷದ ಕೇಕೆಗಳು ಮುಗಿಲು ಮುಟ್ಟುತ್ತಿದ್ದವು. ಕಣ್ಣಳತೆಯ ದೂರದ ವೃತ್ತವೊಂದರಲ್ಲಿ ಒಂದಿಷ್ಟು ಹುಡುಗರು ಹಳೆಯ ಅಲ್ಯುಮಿನಿಯಂ ಪಾತ್ರೆಯೊಂದನ್ನು ಮುಗಿಚಿ ಹಾಕಿ ಡ್ರಮ್ ಬಾರಿಸುತ್ತಿದ್ದರು. ಪಾನಿಪುರಿಯ ಅಂಗಡಿಯ ಪುಟ್ಟ ಹುಡುಗನೊಬ್ಬ ಲಾಂದ್ರಾದ ಬೆಳಕಿನಲ್ಲಿ ಪಾತ್ರೆ ತೊಳೆಯುತ್ತಾ ತನ್ನ ದುಡಿಮೆಯ ಖುಷಿಯಲ್ಲಿ ಹೊಸ ವರ್ಷ ಸ್ವಾಗತಿಸುತ್ತಿದ್ದ. ನ್ಯೂ ಇಯರ್ ಅಲ್ವಾ ಯಾರಿಗಾದರೂ ಫೋನ್ ಮಾಡದೆ ಮಲಗಲು ಮನಸ್ಸಾಗಲಿಲ್ಲ. ಮನೆಯ ನಂಬರ್‌ಗೆ ಡಯಲ್ ಮಾಡಿದೆ. ನಮ್ಮಮ್ಮ ಕಾಯುತ್ತಿದ್ದವರಂತೆ ಫೋನ್ ಎತ್ತಿ ಹ್ಯಾಪಿ ನ್ಯೂ ಇಯರ್ ಎಂದರು. ನಮ್ಮಪ್ಪ ಮಲಗಿದ್ದರೂ, ಪ್ರೀತಿಯಿಂದ ಎದ್ದು ಬಂದು, ನನಗಷ್ಟೇ ಎಂಬಂತೆ ಹೊಸ ವರ್ಷದ ಶುಭ ಕೋರಿದರು. ಹೊಸ ವರ್ಷ ಆಚರಣೆ ಹೀಗೆ ಮುಗಿಯಿತು.

ಬೆಳಿಗ್ಗೆ ಎದ್ದಾಗ ಮೊಬೈಲ್ ತುಂಬಾ ಮಸೇಜುಗಳು, ಮಿಸ್ ಕಾಲ್‌ಗಳು. ಹೊಸ ವರ್ಷದ ಹೊಸ ಬೆಳಗು, ಕಿಟಕಿಯನ್ನು ತೂರಿ ಒಳಬಂದಿತ್ತು. ರೂಮಿನಲ್ಲಿದ್ದ 2007ರ ಕ್ಯಾಲೆಂಡರ್ ಒಂದೇ ದಿನದಲ್ಲಿ ಹಳತಾಗಿತ್ತು. ಅಂದಹಾಗೆ ಅಂದು ರಾತ್ರಿ ಅರಳಿದ ಹೂವಿನ ಹೆಸರು ಕೆಂಡಸಂಪಿಗೆ. ಅಂತರ್ಜಾಲ ಪತ್ರಿಕೆ. ನನ್ನೊಂದಿಗಿದ್ದವರು ಅಬ್ದುಲ್ ರಶೀದ್. ಸಂಪಾದಕರು. ಮತ್ತೆ ನನ್ನದೇನು
ಕೆಲಸ ಎನ್ನುತ್ತೀರಾ? ಇಷ್ಟು ಓದಿದ ಮೇಲೆ ನಿಮಗದು ಗೊತ್ತಾಗಿರಬಹುದು. ಹಾಂ! ಸಂಪಿಗೆಯ ಕಂಪು ಆಘ್ರಾಣಿಸಲು ಮರೆಯದಿರಿ.

10 comments:

Anonymous said...

kenda sampigey bagge hagu hosavarshada bagge tavu brediruv lekhan odide. hosa varshada shubhashayagalu

ಮಲ್ಲಿಕಾಜು೯ನ ತಿಪ್ಪಾರ said...

Nice lekhan Jomon.. Nim kenda Sampikge kampu.. Karnatak gadi daati jagttinellede pasarasali..

Happy new year

VENU VINOD said...

ಕೆಂಡಸಂಪಿಗೆ ಘಮಘಮಿಸುತ್ತಿದೆ, ಅದರಲ್ಲಿ ಪಾಲುಗೊಂಡ ನಿಮಗೆ ಕಂಗ್ರಾಟ್ಸ್ :)

jomon varghese said...

ಸುಭಾಶ್ ನಿಮಗೂ ಕೂಡ ಹೊಸವರ್ಷದ ಶುಭಾಶಯಗಳು.

ಪ್ರೀತಿಯಿಂದ
ಜೋಮನ್.

jomon varghese said...

ಮಲ್ಲಿಕಾರ್ಜುನ್ ತಿಪ್ಪಾರ್, ಕೆಂಡಸಂಪಿಗೆಯ ಕುರಿತು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ್ಗ ಭೇಟಿ ಕೊಡ್ತಾ ಇರಿ.

ಧನ್ಯವಾದಗಳು
ಜೋಮನ್.

jomon varghese said...

ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. Thank u vinod..:)

Archana said...

ಕೆಂಡಸಂಪಿಗೆ ಚೆನ್ನಾಗಿದೆ..ನಾವೂ ಓದ್ತೀವಿ..

jomon varghese said...

ಧನ್ಯವಾದಗಳು ಅರ್ಚನಾ.ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.ನೀವು ಹೀಗೆ ಓದ್ತಾನೆ ಇರಬೇಕು.

ಧನ್ಯವಾದಗಳು.

ಜೋಮನ್.

Shiv said...

ಜೋಮನ್,
ಕೊನೆಯವರೆಗೆ ಆ ಹೂವು ಕೆಂಡಸಂಪಿಗೆ ಅಂತಾ ಗೊತ್ತೆ ಆಗಲಿಲ್ಲ :)

ಕೆಂಡಸಂಪಿಗೆ ನಿಜಕ್ಕೂ ಪರಿಮಳ ಬೀರುತ್ತಿದೆ...
ಕೆಂಡಸಂಪಿಗೆ ಅರಳಲು ನೀವು ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ..

jomon varghese said...

ಶಿವು,

ನಿಮ್ಮ ಸಹೃದಯ ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

ಜೋಮನ್.