ನಮ್ಮೂರಿನ ಮಳೆಗಾಲವೇ ಹಾಗೆ. ಒಮ್ಮೆ ಮಳೆ ಪ್ರಾರಂಭವಾದರೆ ಮೂರು ತಿಂಗಳು ಜಲಾವೃತ. ಎರಡು ಮೂರು ಹೊಳೆಗಳನ್ನು ದಾಟಿಕೊಂಡು ನಾವು ಶಾಲೆಗೆ ಹೋಗಬೇಕಾಗಿತ್ತು. ಮಳೆಗಾಲ ತೀವ್ರಗೊಳ್ಳುತ್ತಿದ್ದಂತೆ ಹೊಳಗೆ ಅಡ್ಡಲಾಗಿ ಹಾಕಿದ್ದ ತೂಗು ಸೇತುವೆಗಳು ಪ್ರವಾಹದಲ್ಲಿ ತೇಲಿಕೊಂಡು ಹೋಗುತ್ತಿದ್ದವು. ನದಿಯ ಆಚೆಗಿರುವ ಊರು ಒಂದು ಪುಟ್ಟ ದ್ವೀಪ ಸಮೂಹವಾಗಿ ಮಾರ್ಪಡುತ್ತಿತ್ತು. ಜೋರು ಗಾಳಿ ಮಳೆ ಪ್ರಾರಂಭವಾದರೆ, ಕಾಡಿನಲ್ಲಿ ಮರಳುಗಳು ಬುಡಸೇವತ ಕಿತ್ತು ಬೀಳುತ್ತಿದ್ದವು. ಅಂಗಳದಲ್ಲಿನ ಅಡಿಕೆ ಮರಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚುತ್ತಿದ್ದವು. ಇಂತಹ ಮಳೆ ಪ್ರಾರಂಭವಾಯಿತೆಂದರೆ ನಮಗೆ ಶಾಲೆಗೆ ರಜೆ. ಏಕೋಪಾಧ್ಯಾಯ ಶಾಲೆಯ ಕಾವೇರಿ ಟೀಚರ್, ಬಸ್ಸಿನಲ್ಲಿ ಸಿಕ್ಕಿದ ಯಾರ ಬಳಿಯಾದರೂ, ಕಲ್ಕೇರಿ, ಚೆನ್ನೇಕಲ್, ಚಂಡೇಮನೆ ಹುಡುಗರಿಗೆ ಮಳೆ ನಿಲ್ಲುವವರೆಗೂ ಶಾಲೆಗೆ ಬರಬೇಡಿ ಎಂದು ಹೇಳಿ ಕಳುಹಿಸುತ್ತಿದ್ದರು.
ಇವತ್ತು ಹೀಗೆಯೇ ಆಯಿತು. ಉಂಬಾಣಿ ಭಟ್ಟರ ವರದಿ ಒಪ್ಪಿಸುತ್ತಿದ್ದಂತೆ, ಶಾಲೆಗೆಂದು ಅರ್ಧದಾರಿಯವರೆಗ ತೆರಳಿದ್ದ ನಾವು, ಕೂಗು ಹಾಕುತ್ತಾ ಮನೆಗೆ ಮರಳಿದ್ದೆವು. ನಮ್ಮನ್ನು ನೋಡಿ ತೋಟದ ಕೆಲಸಕ್ಕೆ ಹೊರಟ್ಟಿದ್ದ ಅಪ್ಪನಿಗೆ ತೇಲಿಹೋದ ಶಂಖದ ಮೇಲೆ ಅಸಾಧಾರಣ ಸಿಟ್ಟು ಬಂತು. ಈ ಮಳೆಗಾಲವೆಲ್ಲಾ ಮಕ್ಕಳು ಮನೆಯಲ್ಲೇ ಇರೋದಾಯ್ತು, ಎಂದು ಗೊಣಗುತ್ತಾ, ತೋಟದತ್ತ ಮುಖ ಮಾಡಿದರು. ಎಂಥಾತು ಸೌಟು ಹಿಡಿದು ಹೊರಬಂದ ಅಮ್ಮನಿಗೆ ಮತ್ತೊಮ್ಮೆ ದೊಡ್ಡ ಹೊಳೆ ನೀರಿನಲ್ಲಿ ಶಂಖ ತೇಲಿಹೋದ ಸ್ವಾರಸ್ಯಕರ ಘಟನೆ ವಿವರಿಸಿದೆ. ಹೊಸ ಶಂಖ ಹಾಕುವ ವರಗೆ ನಮಗೆ ರಜೆ ಎನ್ನುವುದನ್ನು ಖುಷಿಯಿಂದ ಹೇಳಿದೆ. ಮನೆಯಲ್ಲಿ ನಮ್ಮನ್ನು ಸಂಭಾಳಿಸುವುದರಲ್ಲೇ ಸಾಕು ಬೇಕಾಗುತ್ತಿದ್ದ ಅಮ್ಮ, ಇನ್ನು ಈ (ವಾ)ನರ ಸೈನ್ಯದಿಂದ ಏನೆಲ್ಲಾ
ಕಾದಿದೆಯೋ ಎನ್ನುತ್ತಾ, ಅಡುಗೆ ಮನೆಗೆ ನುಗ್ಗಿದರು.
ಕಾದಿದೆಯೋ ಎನ್ನುತ್ತಾ, ಅಡುಗೆ ಮನೆಗೆ ನುಗ್ಗಿದರು.
ಆದರೆ ನನ್ನ ತಲೆ ಮಾತ್ರ ಬೇರೆ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಿತ್ತು. ಇಷ್ಟೊತ್ತಿಗೆ ಕಳಸವಳ್ಳಿ ಬಸ್ಸು ಹರೋಡಿನ್ನು ದಾಟಿಕೊಂಡು ಹೋಗಿರಬಹುದು, ಬಚ್ಚೋಡಿ, ನಾಗೋಡಿ ಹುಡುಗರು ಶಾಲೆಗೆ ಹೋದರೋ ಏನೋ? ಮಂಜನಿಗೆ ಈವತ್ತು ಪೇರಲೆ ಕಾಯಿ ತರ್ತೀನಂತ ಹೇಳಿದ್ದೆ. ಮಧ್ಯಾನ್ಹ ಊಟಕ್ಕೆ ಬಿಟ್ಟಾಗ, ಗೊಂಡರ ಹುಡುಗ ನಾಗಯ್ಯನ ಕರಕೊಂಡು ದಿನವೂ ಕಾಣಿಸುವ ಕಲ್ಲೇಡಿಗೆ ಕೂಲಿನಿಂದ ಚುಚ್ಚಬೇಕೆಂದಿದ್ದೆ. ಹೆಗಡೆಯವರ ತೋಟದ ಪಕ್ಕದಲ್ಲಿರುವ ಸಂಪಿಗೆ ಮರದಲ್ಲಿ ಸಿಕ್ಕಾಪಟ್ಟೆ ಹಣ್ಣಾಗಿತ್ತು. ಶಾಲೆಗೆ ಹೋಗುವಾಗ ದೊಡ್ಡ ಹೊಳೆಗೆ ಗಾಳ ಕಟ್ಟಬೇಕೆಂದಿದ್ದೆ. ಭಟ್ಟರ ತೋಟದೊಳಗೆ ಮೂಸಂಬಿ ಹಣ್ಣು ಪಕ್ಕದ ಅಡಿಕೆ ಮರದಿಂದ ಹತ್ತಿದರೆ ಕೈಗೆ ಸಿಗುವ ಅಂತರದಲ್ಲೇ ಇತ್ತು. ಛೇ ಶಾಲೆಗೆ ರಜೆ ಸಿಗದಿದ್ದರೆ... ಹೀಗೆ ನೂರಾರು ವಿಚಾರಗಳು ಏಕಕಾಲಕ್ಕೆ ನನ್ನ ತಲೆಯೊಳಗೆ ಹೊಕ್ಕು ರಜೆಯನ್ನು ಹೇಗೆ ಕಳೆಯಬೇಕೆನ್ನುವ ಗೊಂದಲಕ್ಕೆ ಬಿದ್ದಿದ್ದೆ. ಬೇರೆ ಭಟ್ಟೆ ಹಾಕ್ಕೊಂಡು ಬುಟ್ಟಿ ತಕ್ಕೊಂಡು ಕೆಳಗೆ ಬಾ, ಅಡಿಕೆ ಹಣ್ಣಾಗಿ ಒದುರಿ ಬಿದ್ದಿವೆ, ಹೆಕ್ಕಿ ಒಂದು ವಾರ ಆಯ್ತು. ಅಪ್ಪ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಂತೆ ಆದೇಶಿಸಿ ಹೋಗಿದ್ದ.
ಹಳೆಯದೊಂದು ಚಡ್ಡಿ ಹಾಕಿ, ಅಡಿಕೆ ಬುಟ್ಟಿಯನ್ನು ಕೈಯಲ್ಲಿಡಿದು, ತೋಟದತ್ತ ನಡಕೊಂಡು ಹೊಂಟಿದ್ದೆ. ದೂರದಿಂದ ಉಂಬಾಣಿ ಭಟ್ಟರು ಬರುವುದು ಕಾಣಿಸಿತು. ಈ ಉಂಬಾಣಿ ಭಟ್ಟರು ವಿಚಿತ್ರ ಆಸಾಮಿ. ಅವರ ನಿಜವಾದ ಹೆಸರು ಗಜಾನನ ಗಣಪತಿ ಹೆಗಡೆ. ಅವರಿಗೆ ಉಂಬಾಣಿ ಭಟ್ಟರು ಎಂದು ಹೆಸರಿಟ್ಟಿದ್ದು ನಮ್ಮೂರಿನವರು. ಎಂಥದು ಮಾರಾಯರ್ರೆ.. ಈ ವಾರ ಬಾಳೆಗೊನೆ ಯಾವುದಾದರೂ ಕಡೀಲಿಕ್ಕೆ ಉಂಟಾ ಎನ್ನುತ್ತಾ, ನಮ್ಮ ತೋಟದ ಬಾಳೆಗೊನೆ ಹಾಗೂ ಅದರ ಕಾಯಿಗಳನ್ನು ನಮಗಿಂತ ಕರಾರುವಕ್ಕಾಗಿ ಹೇಳುವ ವ್ಯವಹಾರ ಚತುರತೆ ಈ ಭಟ್ಟರದು.ಉಂಬಾಣಿ ಭಟ್ಟರು ನಮ್ಮ ಸುತ್ತ ಮುತ್ತ ಊರಿನಿಂದ ಬಾಳೆಗೊನೆಗಳನ್ನು ಚೌಕಾಶಿ ದರದಲ್ಲಿ ಖರೀದಿಸಿ, ವಾರಕ್ಕೊಮ್ಮೆ ಭಟ್ಕಳದ ಸಂತೆಯಲ್ಲಿ ಸಾಬರಿಗೆ ಮಾರುತ್ತಿದ್ದರು. ನಾಲ್ಕೈದು ವರ್ಷ ವ್ಯವಹಾರ ಮಾಡಿದರೂ ಭಟ್ಟರಿಗೆ ಸಾಬರ ವ್ಯವಹಾರ ಬುದ್ದಿ ಕರಗತವಾಗಲಿಲ್ಲ. ಆದ್ದರಿಂದ ಭಟ್ಟರ Export ಬ್ಯುಸನೆಸ್ ಅಷ್ಟೊಂದು ವಿಸ್ತರಿಸಿರಲಿಲ್ಲ. ನೇರವಾಗಿ ತೋಟಕ್ಕೆ ನುಗ್ಗಿ, ಅಲ್ಲಿರುವ ಬಾಳೆಗೊನೆಗಳನ್ನೆಲ್ಲಾ, ಲೆಕ್ಕಹಾಕಿ, ಮುಂದಿನ ವಾರಕ್ಕೆ ಯಾವುದು ಬಲಿಯುತ್ತದೆ, ಎಷ್ಟು ಕಾಯಿ ಆಗಬಹುದು, ಎಂದು ಲೆಕ್ಕಾಚಾರ ಹಾಕಿ ಬೇಕಾದರೆ ನೂರಿನ್ನೂರು ರೂಪಾಯಿ ಮುಂಗಡ
ಕೊಡುವಷ್ಟು ಭಟ್ಟರ ಆರ್ಥಿಕ ಕ್ಷಮತೆ ಬೆಳದಿತ್ತು.
ಆದರೆ ಭಟ್ಟರು ಮಾಡುವ ಬಾಳೆಕಾಯಿ ಬ್ಯುಸನೆಸ್ ಮಾತ್ರ ಸುತ್ತಮುತ್ತಲಿನ ನಾಲ್ಕು ಹಳ್ಳಿಗಳಲ್ಲಿ ಜನಪ್ರಿಯವಾಗಿತ್ತು. ಸದಾ ಸಂಚಾರಿಯಾಗಿರುವ ಭಟ್ಟರು ಪೇಟೆ ಮತ್ತು ಹಳ್ಳಿಯ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದದ್ದು ಇದರ ಗುಟ್ಟು. ಮಳೆಗಾಲದಲ್ಲಿ ಹೊಸಿಲು ಬಿಟ್ಟು ಹೊರಗಿಳಿಯದ ಮನೆಗಳಲ್ಲಿ ಸುದ್ದಿ ತಲುಪಿಸು ಏಕೈಕ ಪತ್ರಿಕಾ ಏಜೆಂಟ್ ಆಗಿ ಭಟ್ಟರು
ಕಾರ್ಯನಿರ್ವಹಿಸಿದರು.ಇಂತಹ ಸರ್ವಾಂತರ್ಯಾಮಿ ಭಟ್ಟರಿಗಿದ್ದ ಒಂದು ಕೆಟ್ಟ ಚಟವೆಂದರೆ ಬಾಳೆ ಕಾಯಿಯನ್ನು ಲೆಕ್ಕ ಹಾಕುವಾಗ ತಪ್ಪು ಲೆಕ್ಕ ಒಪ್ಪಿಸುತ್ತಿದ್ದದ್ದು. ಎರಡುನೂರ ಎಪ್ಪತ್ತೆಂಟು ಕಾಯಿ ಇದ್ದರೆ ಭಟ್ಟರು ಎರಡುನೂರಾ ಇಪ್ಪತ್ತು ಅನ್ನುವರು. ನೂರು ಪುಟ್ಬಾಳೆ (ಏಲಕ್ಕಿ) ಕಾಯಿಗೆ ಭಟ್ಕಳದಲ್ಲಿ 50-60 ರೂಗಳಿದ್ದರೆ, ಭಟ್ಟರು, ಈ ವಾರ ಕುಂದಾಪುರದಿಂದ ತುಂಬಾ ಕಾಯಿ
ಬಂದಿದೆ, ಪುಟ್ಬಾಳೆಗೆ ಯಾವುದೇ ಡಿಮ್ಯಾಂಡ್ ಇಲ್ಲ. 35 ರಿಂದ 40 ಲಾಸ್ಟ್ ಎಂದು ತಮ್ಮ ರೇಟ್ ಫಿಕ್ಸ್ ಮಾಡುತ್ತಿದ್ದರು. ಏನೇ ಮಾಡಿದರೂ ಭಟ್ಟರ ಕಡೆಯಿಂದ ಎರಡು ರೂಪಾಯಿ ಜಾಸ್ತಿ ಬರುತ್ತಿರಲಿಲ್ಲ. ತಮ್ಮ ಬ್ಯುಸನೆಸ್ ನಂಬಿ ಮುಂಬೈ ಶೇರು ಸೂಚ್ಯಂಕ ನಿಂತಿದೆ ಎನ್ನುವಷ್ಟರ ಮಟ್ಟಿಗೆ ಭಟ್ಟರು ನಾಲಿಗೆ ಕೌಶಲ್ಯ ಹೊಂದಿದ್ದರು. ಆದ್ದರಿಂದ ಬಾಳೆಗೊನೆ ಮಾಲೀಕರು, ಸಾಯ್ಲಿ ಬುಡಿ ಅತ್ಲಾಗೆ, ನಾಲ್ಕು ಕಾಯಿ ಕಡಿಮೆ ಲೆಕ್ಕ ಕೊಟ್ಟ ಅಂತ, ಭಟ್ಟ ಎನೂ ಅರಮನೆ ಕಟ್ಟಿಸೋದಿಲ್ಲ ಎಂದು ಸುಮ್ಮನಾಗುತ್ತಿದ್ದರು. ತೋಟದಲ್ಲಿ ಬಾಳೆಗೊನೆ ಕಡಿಯಲು ಹೋದಾಗ ಉದುರಿಬಿದ್ದ ಅಡಿಕೆಗಳು ಭಟ್ಟರ ಕವಳದ ಸಂಚಿ ಸೇರುತ್ತಿದ್ದವು. ಇವೆಲ್ಲವೂ ಅವರ ಮನೆಯಂಗಳದಲ್ಲಿ ಒಟ್ಟುಗೂಡಿ, ಒಂದು ಅಡಿಕೆ ಗಿಡವೂ ಇಲ್ಲದ ಭಟ್ಟರು ವರ್ಷದ ಕೊನೆಯಲ್ಲಿ ಒಂದು ಕ್ವಿಂಟಾಲ್ ಅಡಿಕೆ ಮಾರುತ್ತಿದ್ದದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಇಂತಹ ಚಾಣಾಕ್ಷ್ಯ ಭಟ್ಟರಿಗೆ ನಮ್ಮೂರಿನ ಯುವಕರು ಕಂಡು ಹಿಡಿದ ಅಡ್ಡ ಹೆಸರೇ "ಉಂಬಾಣಿ ಭಟ್ಟರು".
ನಮ್ಮೂರಿನಲ್ಲಿ ಗಣಪತಿ ಹೆಗಡೆಯವರ ಮನೆ ಎಂದರೆ ಯಾರಿಗೂ ಅರ್ಥ ಆಗಲ್ಲ. ಉಂಬಾಣಿ ಭಟ್ಟರು ಎಂದರೆ ಎಲ್ಲರಿಗೂ ಚಿರಪರಿಚಿತ. ಭಟ್ಟರಿಗೊಬ್ಬ ಮಗ ಇದ್ದಾನೆ. ಅವನ ಹೆಸರು ಮಂಜುನಾಥ ಗಣಪತಿ ಗಜಾನನ ಹೆಗಡೆ. ಅವನನ್ನು ನಾವೆಲ್ಲ "ಮರಿ ಉಂಬಾಣಿ" ಎಂದು ಕರೆಯುತ್ತೇವೆ. ಒಂದು ಶನಿವಾರ ನೀವು ನಮ್ಮೂರಿನ ಕಳಸವಳ್ಳಿ ಬಸ್ ಮೂಲಕ ಹಾದು ಹೋದರಾಯಿತು. ಭಟ್ಟರು ಬಾಳೆಗೊನೆಯೊಂದಿಗೆ ಬಸ್ಸಿನಲ್ಲೇ ಇರ್ತಾರೆ. ಬೇಕಾದರೆ ವ್ಯವಹಾರ ಕೂಡ ಮಾಡಬಹುದು.
9 comments:
ನಮಸ್ತೇ.
ನಿಮ್ಮ ಬ್ಲಾಗ್ ಸೊಗಸಾಗಿದೆ. ಬಹಳ ಖುಶಿಯಾಯ್ತು.
ಉಂಬಾಣಿ ಭಟ್ಟರ ಜೊತೆ ನಮ್ಮೂರಿಗೆಲ್ಲ ಹೋಗಿ ಬಂದೆ ನಾನು!
ಹೌದು. ಆ ರೀತಿಯ ಒಬ್ಬರು ತೀರ್ಥಳ್ಳಿಯಲ್ಲೂ ಇದ್ದರು. ಅದೆಲ್ಲ ನೆನಪಾಯ್ತು.
ಥ್ಯಾಂಕ್ಸ್.
ಚೇತನಾ ತೀರ್ಥಹಳ್ಳಿ
ಧನ್ಯವಾದಗಳು ಚೇತನಾ ಮೇಡಂ. ಅವಧಿಯಲ್ಲಿ ನಿಮ್ಮ ಲೇಖನಗಳನ್ನು ಆಗಾಗ್ಗ ಓದುತ್ತಿರುತ್ತೇನೆ. ತುಂಬಾ ಚೆನ್ನಾಗಿ ಬರೆಯುತ್ತೀರಿ. ಉಂಬಾಣಿ ಭಟ್ಟರ ಲೇಖನಕ್ಕೆ ನಿಮ್ಮ ಕಮೆಂಟ್ ನೋಡಿ ತುಂಬಾ ಖುಷಿಯಾಯಿತು.
ಧನ್ಯವಾದಗಳು
ಜೋಮನ್.
ಚೆನ್ನಾಗಿದೆ. ಉಂಬಾಣಿ ಭಟ್ಟರಂತೇ ಮಲೆನಾಡಿನ ಉದ್ದಕ್ಕೂ ಪ್ರತಿ ಊರಿನಲ್ಲಿ ಒಬ್ಬರಾದರೂ ಇರುತ್ತಾರೆ. ಇದಲ್ಲದೆ, ಶಾಲೆಗೆ ಹೋಗುವುದು 'ಯಾಕೆ' ಎಂಬುದನ್ನೂ ಚೆನ್ನಾಗಿ ಬರೆದು, ಎಲ್ಲವನ್ನೂ ನೆನಪಿಸಿದ್ದೀರಿ.
ಜೋಮನ್ ಅವರಿಗೆ
ನಮಸ್ಕಾರ. ನಿಮ್ಮ ಉಂಬಾಣಿ ಭಟ್ಟರ ವ್ಯಕ್ತಿ ಚಿತ್ರ ಓದಿದೆ. ಚೆಂದವಾಗಿ, ನವಿರಾಗಿದೆ. ನೋಡಿ, ವ್ಯಕ್ತಿಗಿಂತ ಅವರ ಸ್ವಭಾವ ನೆನಪಿನ ತೋಟವನ್ನು ಎಷ್ಟು ಹಸಿರಾಗಿಡುತ್ತಲ್ಲಾ ?
ನಿಮ್ಮ ಬ್ಲಾಗ್ ನ ಬಣ್ಣವೂ ಚೆನ್ನಾಗಿದೆ.
ನಾವಡ.
ನಾವಡ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
namasthe.. modala baarige nimma blog ge bheti needide.. very nice! innu pade pade baruttiruttene!
ತುಂತುರು ಹನಿಗೆ, ಮಳೆಹನಿಯೊಳಗೆ ಆತ್ಮೀಯ ಸ್ವಾಗತ.
ಧನ್ಯವಾದಗಳು ಶೀನಿಧಿ.
ಉಂಬಾಣಿ ಭಟ್ಟರ ವೃತ್ತಾಂತ ಚೆನ್ನಾಗಿತ್ತು..
ಆದರೆ ಉಂಬಾಣಿ ಅಂದ್ರೇನು ತಿಳಿಯಲಿಲ್ಲ..
ಶಿವು,
ನನಗೂ ತಿಳಿದಿಲ್ಲ.ಅದೊಂದು ಅಡ್ಡ ಹೆಸರು.
ಧನ್ಯವಾದಗಳು.
ಜೋಮನ್.
Post a Comment