Monday, 17 December 2007

ಅವರ ದ್ವನಿಯೊಳಗೆ ತೆರೆದುಕೊಳ್ಳುವ ಮತ್ತೊಂದು ಬದುಕು


ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಟ್ರೈನಿನಿಂದ ಇಳಿದಾಗ ಬೆಳ್ಳಂಬೆಳಗ್ಗೆ ಆರು ಗಂಟೆ. ಚುಮು ಚುಮು ಚಳಿಯಲ್ಲಿ ಹಲ್ಲುಗಳು ಗರಗಸದ ಸದ್ದು ಹೊರಡಿಸುತ್ತಿದ್ದವು. ಟಿಕೆಟ್ ಕೌಂಟರ್ ಪಕ್ಕದಲ್ಲಿರುವ “ಕಾಫಿಡೆ”ಯಲ್ಲಿ ಎಂಟು ರೂಪಾಯಿ ತೆತ್ತು ಕಫಚಿನೊ ಕುಡಿದಿದ್ದಾಯಿತು. ಚಳಿ ಮಾತ್ರ ಕಡಿಮೆಯಾಗಲಿಲ್ಲ. ಇಟಾಲಿಯನ್ ಕಾಫಿಯ ಕಹಿ ಮಾತ್ರ ನಾಲಿಗೆಯ ಮೇಲೆಯೆ ಅಂಟಿಕೊಂಡಿತ್ತು. ಹೊರಗೆ ಬಂದರೆ ಕುಳಿರ್‌ಗಾಳಿ ಗಾಳಿ. ಮಂಜು ಮುಸುಕಿದ ಮುಂಜಾವಿನಲ್ಲಿ ಇಡಿ ಮೈಸೂರು ಬೆಚ್ಚಗಿನ ಸ್ವೆಟರ್ ಹಾಕಿ ಕೂರಬಾರದೇ ಎಂದೆನಿಸಿತು. ವಾಕಿಂಗ್‌ಗೆ ಬಂದ ಬೆಳ್ಳನೆಯ ಹುಡುಗಿಯರು, ಇಳಿವಯಸ್ಸಿನ ಅಜ್ಜಂದಿರು, ಹೀಗೆ ಸುಮ್ಮನೆ ಓಡುವುದು ಬಿಟ್ಟು ಮನೆಯಲ್ಲಿ ಮುದುಡಿ ಮಲಗಬಾರದೇ ಎಂದು ಕರೆದು ಹೇಳಬೇಕೆನಿಸಿತು. ಅಷ್ಟರಲ್ಲಾಗಲೇ ಚಳಿ ನಿಧಾನವಾಗಿ ಮೈಯನ್ನೆಲ್ಲಾ ಆವರಿಸಿ, ಕೂದಲನ್ನು ಆಂಟೆನಾ ಕಡ್ಡಿಗಳಂತೆ ನಿಮಿರಿಸಿದ್ದವು. ಸ್ವಲ್ಪ ಬಿಸಿಲಾದರೂ ಮೂಡಿದ್ದರೆ, ದೂರದ ಆಸೆಯೊಂದು ಮೂಡಿ ಮರೆಯಾಯಿತು.


ಅಬ್ಬಾ! ಚೆನೈಯಲ್ಲಿ ಇಷ್ಟೊಂದು ಚಳಿ ದೇವರಾಣೆ ಇಲ್ಲಪ್ಪಾ ಎನ್ನುತ್ತಾ, ಮಣಭಾರದ ಲಗೇಜ್ ಹೊತ್ತುಕೊಂಡು ರೈಲು ನಿಲ್ದಾಣದಿಂದ ಹೊರಗೆ ಬಂದೆ. ರಿಕ್ಷಾದವರು ಮುತ್ತಿಕೊಂಡರು. ಎಲ್ಲಿಗೆ ಸಾರ್? ಕುಟುಂಬದ ಸದಸ್ಯರೇನೋ ಎನ್ನುವಷ್ಟು ಆತ್ಮೀಯತೆ ಪ್ರದರ್ಶಿಸಿದರು. "ಬೇಕಾದರೆ ಅರ್ಥ ತಾಸು ಕಾಯಿ, ಆದರೆ, ಈ ರಿಕ್ಷಾದವರಿಗೆ ಮಾತ್ರ ಬೆಳ್ಳಂಬೆಳಗ್ಗೆ ದುಡ್ಡು ಕೊಡಬೇಡ ಎಂದು ನನ್ನ ಮೆದುಳು ಎಚ್ಚರಿಕೆ ರವಾನಿಸಿತ್ತು. ಅದೂ ಗೊತ್ತಿಲ್ಲದ ಉರಿನಲ್ಲಿ ಅಡ್ರೆಸ್ ಹೇಳಲು ಬಬ್ಬಬ್ಬೇ ಮಾಡುವುದನ್ನು ನೋಡುವಾಗಲೇ ರಿಕ್ಷಾದವನಿಗೆ, ನನ್ನ ಪರಿಸ್ಥಿತಿ ಗೊತ್ತಾಗುತ್ತದೆ. ಮುಂದಿನದು ವಿವರಿಸುವುದು ಬೇಡ. ಹಾಗಾಗಿ ಆ ಪ್ರಯತ್ನಕ್ಕೆ ಕೈಹಾಕಲಿಲ್ಲ. ಸರಿ, ಬಸ್‌ಸ್ಟಾಂಡಿನಲ್ಲಿ ಮುಂಜಾನೆ ನನ್ನಂತೆ ನೆರೆದಿದ್ದ ಸಹಪ್ರಯಾಣಿಕ ಬಳಿ ಹೋಗಿ, ಪ್ರೀಮಿಯರ್ ಸ್ಪುಡಿಯೋ ಕಡೆ ಹೋಗಬೇಕಾದರೆ ಯಾವ ಬಸ್ಸಿಗೆ ಹೋಗಬೇಕೆಂದು ಕೇಳಿದೆ. ಪುಣ್ಯಾತ್ಮರೊಬ್ಬರು ಬಸ್ ನಂಬರ್ ತಿಳಿಸಿ, ಎಲ್ಲಿ ಇಳಿಯಬೇಕೆಂದು ಹೇಳುವಷ್ಟರಲ್ಲಿ ಅವರ ಮಗಳು ಸ್ಕೂಟಿಯೊಂದಿಗೆ ಬಂದಳು. ಹಾಯ್ ಪಪ್ಪ ಎಂದಿದ್ದೇ ತಡ, ಅವರು ನನ್ನತ್ತ ಗಮನ ಕೂಡ ಕೊಡದೆ, ಮಗಳ ಹಿಂದೆ ಕುಳಿತು ಮರೆಯಾದರು. ಅವರಪ್ಪನಿಗಿಂತ ಆ ಹುಡುಗಿ ನೋಡಲು ಚೆನ್ನಾಗಿದ್ದಳು. ನನಗೂ ಕೂಡ ಹೀಗೆ, ಯಾರಾದರೂ, ಅಪರಿಚಿತ ಊರಿನಲ್ಲಿ ಪರಿಚಿತರಾಗಿ ಬಂದು ಡ್ರಾಪ್ ಕೊಡಬಹುದಾ ಎನ್ನುವ ಆಸೆಯೊಂದು ಕ್ಷಣಕಾಲ ಸುಳಿಯಿತು. ಆದರೆ ಅದು ಸಾಧ್ಯವಿಲ್ಲ ಎನ್ನುತ್ತಾ, ಎರಡು ಕಣ್ಣುಗಳನ್ನು ಸಾಧ್ಯವಾದಷ್ಟು ದೂರ ಹರಿಬಿಟ್ಟು, ಬಸ್ಸಿಗಾಗಿ ಕಾಯುತ್ತಾ ನಿಂತೆ. ಹಲವು ಬಸ್‌ಗಳು ಬಂದು ಹೋದವು. ಓಡಿ ಹೋಗಿ ಕಂಡೆಕ್ಟರ್ ಹತ್ತಿರ ವಿಚಾರಿಸುತ್ತಿದ್ದೆ. ಆದರೆ ಪ್ರೀಮಿಯರ್ ಸ್ಪುಡಿಯೋ ಕಡೆಗೆ ಹೋಗುವ ಯಾವುದೇ ಬಸ್ ಬರಲಿಲ್ಲ.


ನಮ್ಮ ಸಂಪಾದಕರಿಗೆ ಪೋನಾಯಿಸಿದೆ. ಅವರು ಬೆಳಗಿನ ಜಾವದ ನಿದ್ರೆಯಲ್ಲಿದ್ದರು. ‘ಓಹೋ ಹಾಗ, ನೀವಲ್ಲೇ ಇರಿ, ನಾನು ಗಾಡಿ ತೆಗೆದುಕೊಂಡು ಬರುತ್ತೇನೆ’ ಅಂದರು. ನನ್ನ ಸಮಸ್ಯೆ ಬಗೆಹರಿದರೂ, ಒಳಗೊಳಗೇ ಬಂದ ಮೊದಲ ದಿನವೇ ಅವರಿಗೆ ತೊಂದರೆ ಕೊಡುತ್ತಿದ್ದೇನಲ್ಲಾ, ಮುಂದೆ ಏನು ಕಾದಿದೆಯೋ ಎಂದು ನೆನೆದು ಕಸಿವಿಸಿ ಎನಿಸತೊಡಗಿತು. ಅವರು ಹೇಳಿದ ಸಮಯಕ್ಕೆ ಹಾಜರಾದರು. ನೀವು ಮಲೆನಾಡಿನವರು ಹೀಗೆ ನಡುಗಿದರೆ ಇನ್ನುಳಿದವರ ಪರಿಸ್ಥಿತಿ ಏನು ಎಂದು ನಕ್ಕರು. ಸಾರ್ ಮಲೆನಾಡಿನಲ್ಲಿ ಇಷ್ಟು ಚಳಿ ಇಲ್ಲ, ಇದೊಳ್ಳೆ ಜಮ್ಮು ಕಾಶ್ಮೀರಕ್ಕೆ ಬಂದ ಹಾಗಿದೆ ಎಂದೆ. ಚೆನೈನಲ್ಲಿ 24 ಗಂಟೆಯೂ ಫ್ಯಾನ್ ಹಾಕಿಕೊಂಡು ಮಲಗುತ್ತಿದ್ದ ಕಥೆ ವಿವರಿಸಿದೆ. ಏನೂ ಆಗಲ್ಲ ಎಂದು ಅವರು ಧೈರ್ಯ ಹೇಳಿದರೂ, ಬಂದ ಎರಡು ದಿನದಲ್ಲಿ ಗಂಟಲು ನೋವು, ನೆಗಡಿ, ಶೀತ ಇತ್ಯಾದಿ ಎಲ್ಲಾ ನೆಂಟರೂ ಕಾಣಿಸಿಕೊಂಡರು. “ನಿನ್ನ ದ್ವನಿ ಏಕೆ ಹೀಗಿದೆ, ಒಳ್ಳೆ ವಜ್ರಮನಿ ಮಾತಾಡಿದಂಗೆ ಮಾತಾಡ್ತೀಯಲ್ಲಾ” ಅಂತ ನನ್ನ ಗೆಳೆಯರೊಬ್ಬರು ಕುಶಲ ವಿಚಾರಿಸಿಕೊಂಡರು. ನಮ್ಮಮ್ಮ ಏನಾಗಿದೆಯೋ, ಸ್ವೆಟರ್ ಹಾಕ್ಕೋ, ಸಿಕ್ಕಲ್ಲಿ ನೀರು ಕುಡಿಯಬೇಡ ಎಂದೆಲ್ಲಾ ಮುನ್ನೆಚ್ಚರಿಕೆ ಪಟ್ಟಿ ಒಪ್ಪಿಸಿದರು. ಹೇಗಿದೆ ನನ್ನ ಡಿಜಿಟಲ್ ವಾಯ್ಸ್ ಎನ್ನುತ್ತಾ ನಮ್ಮಪ್ಪನೊಂದಿಗೆ ಸೌಂಡ್ ಎಫೆಕ್ಟ್ ಹಂಚಿಕೊಂಡೆ. ನಂತರ ಎರಡು ದಿವಸದ ನಂತರ ಎಲ್ಲವೂ ನಿಯಂತ್ರಣಕ್ಕೆ ಬಂತು.

ಮೈಸೂರಿನಲ್ಲಿ ನನ್ನ ಅಭಿರುಚಿಗೆ ತಕ್ಕದಾದ ಕೆಲವೊಂದು ಸಿಕ್ಕಿದಾಗ ಚೆನೈನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಬಂದಿದ್ದೆ. ಕೋರ್ಸು ಮುಗಿದ ಕೂಡಲೇ ಯಾಹೂ ಕನ್ನಡದಲ್ಲಿ ಉಪಸಂಪಾದಕ ಹುದ್ಧೆ ಸಿಕ್ಕಿದಾಗ ಚೆನೈಗೆ ಲಗೇಜು ಎತ್ತಿಕೊಂಡು ಹೋಗಿದ್ದೆ. ಆರು ತಿಂಗಳ ನಂತರ ಮನೆಗೆ ಮರಳುತ್ತಿದ್ದೆ. ಮನೆಯಲ್ಲಿ ಮಗ ಕರ್ನಾಟಕಕ್ಕೆ ಬರುತ್ತಿದ್ದಾನಲ್ಲಾ ಎನ್ನುವ ಖುಷಿ ಒಂದೆಡೆಯಾದರೆ, ನನಗೂ ಚೆನೈವಾಸದಿಂದ ಮುಕ್ತಿ ದೊರಕಿತ್ತು. ಕಾಲು ಚಾಚಿದರೆ, ಗೋಡೆಗೆ ತಾಕುತ್ತಿದ್ದ, ಗಾಳಿ ಬೆಳಕು ಹರಿಯದ ಮಾನ್ಸ್‌ಷ್‌ನ ಗುಬ್ಬಿ ಗೂಡಿನಂತ ಕೋಣೆಯಲ್ಲಿ ಬದುಕು ಸಾಗಿಸುವುದು ತುಂಬಾ ಕಷ್ಟವಾಗಿತ್ತು. ತಿಂಗಳಿಗೆ ಎರಡು ಸಾವಿರ ಬಾಡಿಗೆ ಪಾವತಿಸಿ, ಸ್ವಚ್ಚತೆಯ ಗಾಳಿ ಗಂಧವೂ ಇರದ ಉರಿನಲ್ಲಿ ಮೂಗು ಮುಚ್ಚಿಕೊಂಡು ನಡೆಯುವುದಕ್ಕಿಂತ ನಮ್ಮೂರಿನಲ್ಲಿ ಕಿರಾಣಿ ಅಂಗಡಿ ಇಷ್ಟುಕೊಳ್ಳುವುದೇ ಎಷ್ಟೋ ಉತ್ತಮವಾಗಿರುತ್ತಿತ್ತು ಎಂದು ಒಮ್ಮೊಮ್ಮೆ ನನ್ನ ತಲೆಗೆ ಅನಿಸುತ್ತಿತ್ತು. ನಮ್ಮೂರಿನ ತೆಂಗಿನಕಾಯಿ ವ್ಯಾಪಾರಿಯೊಬ್ಬ ತನ್ನ ತಿಂಗಳ ಆದಾಯದೊಂದಿಗೆ ನನ್ನ ವೇತನವನ್ನ ತಾಳೆ ಹಾಕಿಕೊಂಡು, ನೀನು ಸಂಪಾದಿಸುವುದು ಇಷ್ಟೇನಾ? ಇದಿಷ್ಟು ಸಂಪಾದಿಸುವುದಕ್ಕೆ ಯಾಕೆ ಚೆನೈಗೆ ಹೋಗಿದ್ದೀಯಾ? ಇಲ್ಲೇ ಹೊಟೇಲು ಪ್ರಾರಂಭಿಸಿದ್ದರೆ ಆಗ್ತಿತ್ತಲ್ಲಾ ಎಂದಾಗ ನನಗೆ ಮೈಯೆಲ್ಲಾ ಉರಿದು ಹೋಗಿತ್ತು. ಆದರೇನು ಮಾಡುವುದು, ನನ್ನ ತಲೆಯಲ್ಲೂ ಆಗೀಗ ಮಿಂಚಿ ಮರೆಯಾಗುವ ಇಂಥ ವಿಚಿತ್ರ ಐಡಿಯಾಗಳ ನಡುವೆ ಮತ್ಯಾಕೆ ಇಷ್ಟು ಓದಬೇಕಿತ್ತು, ಎನ್ನುವ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟವಾಗಿತ್ತು. ನಾನು ಅಂದುಕೊಂಡದ್ದು, ಏನೋ ಇದ್ದರೆ, ಇಲ್ಲಿ ನಡೆಯುತ್ತಿರುವುದು ಅದಕ್ಕೆ ತದ್ವಿರುದ್ದವಾಗಿದೆಯ್ಲಾ ಎನ್ನುತ್ತಾ, ಐಸ್‌ಕ್ರೀಮ್‌ನಂತೆ ಕರಗಿ ಹೋಗುವ ಗಾಂಧಿ ತಲೆಯ ನೋಟುಗಳಿಗೆ ಲೆಕ್ಕ ಇಡಲಾಗದೆ, ಆಗಾಗ್ಗ ಜೇಬು ಮುಟ್ಟಿ ನೋಡಿಕೊಳ್ಳುತ್ತಾ, ತಿಂಗಳ ಕೊನೆಯನ್ನು ದೂಡುತ್ತಿದ್ದೆ. ಕೊನೆಗೂ ಕರ್ನಾಟಕ್ಕೆ ಮರಳುತ್ತಿದ್ದೇನಲ್ಲಾ ಎನ್ನುವ ಸಮಾಧಾನ ಸಿಕ್ಕಿದಾಗ ಒಂದಿಷ್ಟು ಖುಷಿ ಪಟ್ಟಿದ್ದೆ.

ಕಲಿಯುವಾಗ ಇರುವ ಸ್ಥಿತಿಯೇ ಬೇರೆ, ಕಲಿತ ನಂತರ ಉದ್ಯೋಗ ಹುಡುಕುವ ಕಷ್ಟವೇ ಬೇರೆ. ಬೇಗ ಕೆಲಸ ಸಿಕ್ಕಿದರೆ, ಹೇಗಾದರೂ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ, ಕಲಿತು ಕೆಲಸಕ್ಕಾಗಿ ಕಾದು ಕೂರುವುದಿದೆಯಲ್ಲಾ ಅದು ದೊಡ್ಡ ಹಿಂಸೆ. ನನ್ನೊಂದಿಗೆ ಕಲಿತ ಅನೇಕರಿಗೆ ಇನ್ನೂ ಕೆಲಸ ಸಿಕ್ಕಿಲ್ಲ. ಅವರ ಪರಿಸ್ಥಿತಿಯನ್ನು ನೆನೆಯುವಾಗ ಮರುಕ ಹುಟ್ಟುತ್ತದೆ. ಕೆಲವರಿಗೆ ದುಡಿಮೆಯ ಅನಿವಾರ್ಯತೆ ಇಲ್ಲವಾದರೂ, ಮನೆಯಲ್ಲಿ ಖಾಲಿ ಕೂರುವ ಸ್ಥಿತಿಯೇ ಭಯಾನಕವಾದದ್ದು ಎನ್ನುತ್ತಾರೆ. “ನೀವೇನಪ್ಪಾ ಕೆಲಸ ಮಾಡ್ತೀರಿ, ನಮ್ಮ ಪರಿಸ್ಥಿತಿ ನಿಮಗರ್ಥವಾಗೋದಿಲ್ಲ” ಎಂದು ಸಹಪಾಠಿಗಳು ಹೇಳುವಾಗ ನಾನು ಅಸಹಾಯಕನಾಗಿ ಕೇಳಿಸಿಕೊಳ್ಳುತ್ತೇನೆ. ಏನೋ ಸಮಾಧಾನ ಹೇಳಿ, ಹಿಡಿ ಪ್ರೀತಿ, ಅರೆಪಾವು ವಿಶ್ವಾಸ ತುಂಬುವ ಪ್ರಯತ್ನ ಮಾಡುತ್ತೇನೆ. ಅವರ ದ್ವನಿಯೊಳಗೆ ಬದುಕಿನ ಮತ್ತೊಂದು ಮುಖದ ದರ್ಶನವಾಗುತ್ತದೆ.. ನಾನು ಮೈಸೂರಾದರೇನು, ಚೆನೈ ಆದರೇನು ನನ್ನ ಕೈಯಲ್ಲಿ ಕೆಲಸವೊಂದಿದೆಯಲ್ಲಾ ಎಂದು ನಿಟ್ಟುಸಿರು ಬಿಡುತ್ತೇನೆ.

7 comments:

VENU VINOD said...

ಇಷ್ಟು ಸಂಪಾದನೆಗೆ ಅಲ್ಯಾಕಿದ್ದೀಯಾ? ಈ ಪ್ರಶ್ನೆ ಪತ್ರಿಕೋದ್ಯಮದ ಬಹುತೇಕರನ್ನು ಕಾಡಿರಬಹುದು:)
ಒಳ್ಳೆ ಬರಹ, ಆಪ್ತ ಬರವಣಿಗೆ ಶೈಲಿ ನಿಮ್ಮದು...ಮುಂದುವರಿಸಿ

jomon varghese said...

Re.

ಹೌದು ವಿನೋದ್. ನೀವು ಹೇಳಿರುವಂತೆ ಈ ಪ್ರಶ್ನೆ ಪತ್ರಿಕೋದ್ಯಮದ ಹಲವರನ್ನು ಆಗಾಗ್ಗ ಕಾಡುತ್ತಿರುತ್ತದೆ. ಆದರೆ ಈ ವೃತ್ತಿ (ಬರವಣಿಗೆ) ನೀಡುವ ಆತ್ಮತೃಪ್ತಿ ಬೇರೆ ಯಾವ ವೃತ್ತಿಯೂ ನೀಡುವುದಿಲ್ಲ ಎನ್ನುವುದೂ ಸತ್ಯ.


ಪ್ರತಿಕ್ರಿಯೆಗೆ ಧನ್ಯವಾದಗಳು

ಬ್ರಹ್ಮಾನಂದ ಎನ್.ಹಡಗಲಿ said...

Nimma kelavu tingala Chennai Anubhavagalanna BARAHA roopadalli tumba chennagi Barediddiri.

Shigradalle nimma nadige baruva hagoo Inti Nimma Chennai Snehit haagoo nivu nanna bittta banda mele Aagiruva DEVDAS.

ಬ್ರಹ್ಮಾನಂದ ಎನ್.ಹಡಗಲಿ said...

Nimma kelavu tingala Chennai Anubhavagalanna BARAHA roopadalli tumba chennagi Barediddiri.

Shigradalle nimma nadige baruva hagoo Inti Nimma Chennai Snehit haagoo nivu nanna bittta banda mele Aagiruva DEVDAS.

ಮಲ್ಲಿಕಾಜು೯ನ ತಿಪ್ಪಾರ said...

tumba chennagide Jomon.. Ninn Exprince.. Yakendre ade Aswachch vatavarandind diggane eddu bandavanu.. Tumba lavalavike baravanige

jomon varghese said...

ಆತ್ಮೀಯ ಬ್ರಹ್ಮನಿಗೆ,

ಯಾಕೋ ದೇವದಾಸ, ಏನಾಯ್ತು ನಿನಗೆ, ನಾನಿದ್ದಾಗ ತುಂಬಾ ಚೆನ್ನಾಗಿಯೇ ಇದ್ದೆಯಲ್ಲಾ? ಈಗ ಏನಾಗಿದೆ? ನೀನೂ ಕೂಡ ಬೇಗ ಕರ್ನಾಟಕಕ್ಕೆ ಬರುವಂತನಾಗು. ನಾವೆಲ್ಲರು ನಿನ್ನ ದಾರಿ ಕಾಯುತ್ತಿದ್ದೀವಿ.

ಪ್ತೀತಿಯಿಂದ
ಜೋಮನ್

jomon varghese said...

ಆತ್ಮೀಯ ತಿಪ್ಪಾರ್‌ರವರಿಗೆ, ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು ಧನ್ಯವಾದಗಳು. ಹಾಗೆ ನಿಮ್ಮ ಬ್ಲಾಗ್ update ಮಾಡಿ ಸಾರ್.