Wednesday, 3 October 2007

ಪುಟ್ಟಿ ಒಂದು ಪುಟ್ಟ ಪತ್ರ ಬರಿ...


ನಾಲ್ಕಾರು ವರ್ಷಗಳ ಹಿಂದಿನ ಮಾತು. ಆಗ ಇಂದಿನಂತೆ ಮೊಬೈಲ್ ರಿಂಗಣಿಸುತ್ತಿರಲಿಲ್ಲ. ಸಂದೇಶ ಕಳುಹಿಸಲು ಮಿಂಚಂಚೆ ಜಾರಿಯಲ್ಲಿರಲಿಲ್ಲ. ಓಡಿ ಹೋಗಿ ಪೋನ್ ಮಾಡೋಣವೆಂದರೆ, ಈಗಿನಂತೆ ಬೀದಿ ಬೀದಿಯಲ್ಲಿ ಕಾಯಿನ್ ಬಾಕ್ಸ್ ಇರಲೇ ಇಲ್ಲ. ಭಾವನೆಗಳ ಅಭಿವ್ಯಕ್ತಿಗೆ ಪತ್ರವೊಂದೇ ಮಾರ್ಗವಾಗಿತ್ತು. ಅಂಚೆಯಣ್ಣ ಸೈಕಲ್ ಏರಿ ಬರುತ್ತಿದ್ದರೆ, ಆತನ ಹಿಂದೆ ಮಕ್ಕಳ ಹಿಂಡೇ ಓಡಿಬರುತ್ತಿತ್ತು. ಯಾರ ಮನೆಗೆ ಪತ್ರ ಬಂದರೂ, ಓಣಿಗೆಲ್ಲಾ ಸಂಭ್ರಮ ಸಡಗರ. ಪುಟ್ಟ ಪತ್ರ. ಅದರ ಮೇಲೆ ನಾಲ್ಕಾಣೆ ಸ್ಟಾಂಪಿನ ಮುದ್ರೆ. ಕಳಗೆ ಶ್ರೀಯುತರಿಗೆ ಎನ್ನುವ ವಿಳಾಸ. ಒಡೆದು ಓದಿದರೆ ಅಕ್ಷರಗಳಲ್ಲಿ ಅನಾವರಣಗೊಂಡಿರುವ ಭಾವನೆಗಳ ಅಂತರಂಗ. ಅಂಗೈಯಗಲದ ಪತ್ರದ ತುಂಬೆಲ್ಲಾ ಸವಿ ಸವಿ ನೆನಪುಗಳು.

ಈಗ ಪತ್ರ ಬರುವುದಿಲ್ಲ. ಅಂಚೆಯಣ್ಣನ ದಾರಿ ಕಾಯುವುದಿಲ್ಲ. ಪತ್ರ ಬರೆಯುವ ಮನಸ್ಸು ಕೂಡ ಯಾರಿಗೂ ಇಲ್ಲ. ವೇಗದ ಬದುಕಿನೊಂದಿಗೆ ನಮ್ಮ ಜೀವನ ಕ್ರಮ ಕೂಡ ಬದಲಾಗಿದೆ. ಭಾವನೆಗಳು ಔಪಚಾರಿಕ ಎನ್ನುವಷ್ಟರ ಮಟ್ಟಿಗೆ ಸಂಕುಚಿತಗೊಂಡಿದೆ. ಪತ್ರವೆಂಬ ಎರಡಕ್ಷರದ ಪುಟ್ಟ ಕಾಗದದ ದೋಣಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಅಕ್ಷರದಲ್ಲಿ ಅಭಿವ್ಯಕ್ತಗೊಳ್ಳುತ್ತಿದ್ದ ಭಾವನೆಗಳ ಅಂತರಂಗ, ಇಂದು ಉಚಿತ ಮೆಸೇಜುಗಳ ನಿರ್ಭಾವುಕ ಸಂದೇಶಗಳಲ್ಲಿ ಮರೆಯಾಗುತ್ತಿದೆ. ಬರೆಯುವುದಕ್ಕಿಂತ ಕಿಲಿ ಮಣೆ ಕುಟ್ಟುವುದೇ ಹಿತಕರವಾಗಿದೆ. ಯಾಕೆ ಹೀಗೆ, ಒಂದು ಕಾಲಕ್ಕೆ ಭಾವನಾತ್ಮಕ ಸಂವೇದನೆಯ ಮೂಲ ಸೆಲೆಯಾಗಿದ್ದ ಪತ್ರ ಇಂದು ಮೂಲೆಗುಂಪಾಗಿದೆ. ಅತ್ಯಂತ ಆತ್ಮೀಯತೆಯಿಂದ ಕರೆದು, ಕೂರಿಸಿ ಕುಶಲೋಪರಿ ವಿಚಾರಿಸುತ್ತಿದ್ದ ಅಂಚೆಯಣ್ಣನನ್ನು ಕೂಡ, ಕೆಳದರ್ಜೆಯ ಜವಾನನಂತೆ ನೋಡುವ ಪರಿಪಾಠ ಬೆಳೆಯುತ್ತಿದೆ.

ಒಂದು ಪತ್ರ ಕಟ್ಟಿಕೊಡುವ ಭಾವನಾ ಪ್ರಪಂಚವನ್ನು ಎರಡು ನಿಮಿಷದ ಫೋನ್ ಕರೆಯಾಗಲಿ, ಸೆಕಂಡ್‌ಗಳಲ್ಲಿ ಕಳುಹಿಸುವ ಮಸೇಜುಗಳಾಗಲಿ ತುಂಬಲು ಸಾಧ್ಯವಿಲ್ಲ. ಆದರೂ, ಪತ್ರ ಇಂದು ನಮ್ಮಿಂದ ದೂರವಾಗುತ್ತಿದೆ. ಗೆಳೆಯರ ಜನ್ಮದಿನಕ್ಕೆಂದೋ, ಮದುಮಗಳ ಶುಭ ಹಾರೈಕೆಗೆಂದೂ, ಅಸ್ಥೆಯಿಂದ ಬರೆಯುತ್ತಿದ್ದ ಪತ್ರಗಳು ಕೂಡ ಈಗ ಹಳೆಯ ಶತಮಾನದ ಫ್ಯಾಶನ್ ಆಗಿದೆ. "ಯಾವನಿಗೆ ಬೇಕು ಅದರ ರಗಳೆ, ಅದನ್ನು ಬರೆಯುತ್ತಾ ಕೂರಬೇಕು. ನಂತರ ಪೋಸ್ಟ್ ಬಾಕ್ಸ್‌ಗೆ ಹಾಕಬೇಕು. ಅದು ತಲುಪಲು ಒಂದು ವಾರ ತೆಗೆದುಕೊಳ್ಳುತ್ತದೆ. ಅದಕ್ಕಿಂತ ಒಂದು ಫೋನ್ ಮಾಡಿದರೆ ಸಾಕಲ್ಲ ಎನ್ನುವ ಮನಸ್ಥಿತಿಯವರೇ ಹೆಚ್ಚು.

ಪತ್ರದಲ್ಲಿ ಕಲ್ಮಶವಿರುವುದಿಲ್ಲ. ಪತ್ರದೊಂದಿಗೆ ಪತ್ರ ಬರೆದವನ ಮನಸ್ಸು ಕೂಡ ಎದುರಿಗೆ ಬಂದು ನಿಲ್ಲುತ್ತದೆ. ಸರಿಯೋ ತಪ್ಪೂ, ಇದ್ದುದನ್ನು ಇದ್ದಂತೆ ಹೇಳಿಬಿಡುವ ಹೃದಯ ವೈಶಾಲ್ಯತೆ ಪತ್ರಕ್ಕಿದೆ. ಅಲ್ಲಿ ಅನಾವರಣಗೊಂಡ ಅಕ್ಷರಗಳಲ್ಲಿ ಭಾವನಾತ್ಮಕ ಸೆಲೆ ತುಂಬಿರುತ್ತದೆ. ಆದ್ದರಿಂದಲೇ ಪತ್ರ ಆಪ್ತವಾಗುತ್ತದೆ. ತಿಂಗಳುಗಟ್ಟಲೆ ಜತನದಿಂದ ಕಾಪಾಡಿಕೊಂಡು ಮತ್ತೆ ಮತ್ತೆ ಓದಿ ಸಂತಸ ಪಡುತ್ತೇವೆ. ನಿಮಗೊಂದು ಪತ್ರ ಬಂದಾಗ ನಿಮಗೂ ಕೂಡ ಈ ಅನುಭವ ಆಗಿರಬೇಕು.

ಇಂದು ನಮ್ಮ ಮನೆಯಂಗಳಕ್ಕೆ ಅಂಚೆಯಣ್ಣ ಬರುವುದಿಲ್ಲ. ಆತನನ್ನು ಎದುರುಗೊಳ್ಳುವ ಹಂಬಲ, ಹಪಹಪಿಯೂ ನಮ್ಮಲ್ಲಿ ಇಲ್ಲ. ಆದರೂ, ಅಂಚೆಯಣ್ಣನಿಗೆ ಬೇಸರವಿಲ್ಲ. ಆತನ ಕೈಯಲ್ಲಿ ಮೊಬೈಲ್ ಇಲ್ಲ. ಲ್ಯಾಪ್‌ಟಾಪ್ ಇಲ್ಲ. ಹಳೆಯದೊಂದು ಪ್ಯಾರಗಾನ್ ಚಪ್ಪಲಿ ಮೆಟ್ಟಿಕೊಂಡು ಅಟ್ಲಾಸ್ ಸೈಕಲ್ ಹತ್ತಿ, ತನ್ನ ಕಾಯಕವನ್ನು ನಿಷ್ಠೆಯಿಂದ ಪಾಲಿಸುತ್ತಾನೆ. ಪತ್ರ ತಲುಪಿಸಬೇಕಾದವರಿಗೆ ಸರಿಯಾಗಿ ತಲುಪಿಸಿ, ತನ್ನ ಸೇವೆಯ ಸಾರ್ಥಕತೆ ಕಾಣುತ್ತಾನೆ.

ಇತ್ತೀಚೆಗೆ ಧಾರವಾಡ ಮುಖ್ಯ ಅಂಚೆ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿದ್ದ ಗೋಡೆ ಬರಹ ನನ್ನನ್ನು ಆಕರ್ಷಿಸಿತು. ಚೆಂಬೆಳಕಿನ ಕವಿ ಚನ್ನವೀರ ಕವಿ ಅವರು ಅಂಚೆಯಣ್ಣನ ಕುರಿತು ಹೀಗೆ ಬರೆದಿದ್ದರು. "ಪತ್ರ ಬರಲಿ, ಬರದೇ ಇರಲಿ, ಅಂಚೆಯಣ್ಣ ಮಾತ್ರ ದಿನವೂ ಮನೆಗೆ ಬಂದು ಹೋಗುತ್ತಿರಲಿ" ಎಷ್ಟೊಂದು ಆತ್ಮೀಯತೆ ಇದೆ ಸಾಲಿನಲ್ಲಿ. ಅದನ್ನು ಓದಿದ ಮೇಲೆ ಇಷ್ಟೆಲ್ಲಾ ಬರೆಯಬೇಕಾಯಿತು. ಅಂಚೆಯಣ್ಣನ ಶ್ರಮಕ್ಕೆ ನಮ್ಮದೂ ಶುಭ ಹಾರೈಕೆಗಳಿರಲಿ..

1 comment:

Anu said...

Your story drags me to imagine the picture of post man. I think it is really good writing. Keep writing and keen observation...