Friday, 28 November, 2008

ಮಂಜು ಸುರಿಯುವ ಈ ಮುಂಜಾವಿನಲ್ಲಿ...

ಈವತ್ತು ಬೆಳಿಗ್ಗೆ ಮೈಸೂರಿನಲ್ಲಿ ಸೋನೆಮಳೆಯಂತೆ ಮಂಜು ಸುರಿಯುತ್ತಿತ್ತು. ಸಹಿಸಲಸಾಧ್ಯ ಚಳಿ ಬೇರೆ. ಈಗಿನ್ನೂ ಏಳು ಗಂಟೆಯಾಗಿರಬಹುದು ಎಂದು ಎದ್ದು ನೋಡಿದರೆ ಹನ್ನೊಂದಾಗಿತ್ತು. ನಾನು ಎಲ್ಲಿದ್ದೇನೆ ಎಂದು ನನಗೇ ಗುರುತು ಸಿಗದ ಹಾಗೆ ಮಂಜು ಆವರಿಸಿಕೊಂಡಿತ್ತು. ನನ್ನ ರೂಮಿನ ಹಿಂದಿನ ಎಲೆಕ್ಟ್ರಿಕ್ ತಂತಿಯ ಮೇಲೆ ಕುಳಿತು ದಿನಾಲೂ ರೊಮಾನ್ಸ್ ಮಾಡುತ್ತಿದ್ದ ಗುಬ್ಬಚ್ಚಿಗಳು ಈವತ್ತು ಯಾಕೋ ಮಂಜಿನಲ್ಲಿ ತೊಯ್ದು ಹೋಗಿ ಈ ಚಳಿಯಲ್ಲಿ ನಡುಗುತ್ತಾ ಒಂದಕ್ಕೊಂದು ಅಂಟಿಕೊಂಡು ಕುಳಿತಿದ್ದವು. ನನಗೆ ಏಕೋ ಪಾಪ ಅನಿಸತೊಡಿಗಿತು. ನಾವು ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಈ ರೀತಿ ತೋಯಿಸಿಕೊಂಡು ಹಾರಲಾಗದೆ ಶಾಲೆಯ ಹಂಚಿನ ಮಾಡಿನ ಕೆಳಗೆ ಕೂರುತ್ತಿದ್ದ ಗುಬ್ಬಚ್ಚಿಗಳನ್ನು ಹಿಡಿದು, ಅದನ್ನು ರಟ್ಟಿನ ಬಾಕ್ಸ್‌ನಲ್ಲಿ ಬಂಧಿಸಿಡುತ್ತಿದ್ದೆವು. ನಂತರ ಅದರ ಕಾಲಿಗೊಂದು ದಾರ ಕಟ್ಟಿ, ಆ ದಾರದ ತುದಿಯಲ್ಲಿ ಪೇಪರ್‌ ಒಂದನ್ನು ಕಟ್ಟಿ, ಅದರಲ್ಲಿ ನಮ್ಮ ನಮ್ಮ ತರಗತಿಯ ವಿದ್ಯಾರ್ಥಿಗಳೆಲ್ಲರ ಹೆಸರು ಬರೆದು ಹಾರಿ ಬಿಡುತ್ತಿದ್ದೆವು. ಆ ಗುಬ್ಬಚ್ಚಿ ಹಾರಿ ಅಮೆರಿಕಕ್ಕೆ ಹೋಗುತ್ತದೆಂದೂ, ಅಲ್ಲಿ ನಮ್ಮೆಲ್ಲರ ಹೆಸರನ್ನು ನೋಡಿ, ಇದು ಭಾರತದಿಂದ ಹಾರಿ ಬಂದ ಗುಬ್ಬಚ್ಚಿಯೆಂದೂ ಪತ್ತೆ ಹಚ್ಚುತ್ತಾರೆಂದೂ ಮಾತನಾಡಿಕೊಂಡು ಸಂಭ್ರಮಿಸುತ್ತಿದ್ದೆವು.

ಈವತ್ತು ನೋಡಿದರೆ ಮಳೆಯಲ್ಲಿ ತೋಯಿಸಿಕೊಂಡು ಹಾರಲಾಗದೆ ಕುಳಿತ ಗುಬ್ಬಚ್ಚಿಗಳ ಮೇಲೆ ಯಾವನೋ ಕಿಲಾಡಿ ಹುಡುಗನೊಬ್ಬ ಕ್ಯಾಟರ್‌ ಬಿಲ್ಲಿನಿಂದ ಕಲ್ಲು ಬೀಸುತ್ತಿದ್ದ. ನನಗೆ ರೋಸಿ ಹೋಗಿ ಆತನನ್ನು ಕರೆದು ಸರಿಯಾಗಿ ಬೈದು ಕಳುಹಿಸಿದೆ. ಯಾಕೋ ಮನಸ್ಸೆಲ್ಲಾ ಮುದುಡಿ ಹೋದಂತೆನಿಸಿ ಏನು ಮಾಡಲಾಗದೆ ಕೈ ಕೈ ತಿಕ್ಕಿಕೊಳ್ಳುತ್ತಾ ಅದರ ಬಿಸುಪಿನಲ್ಲಿ ಬೆಚ್ಚಗಾಗಲು ಯತ್ನಿಸುತ್ತಿದ್ದೆ. ನಮ್ಮ ಪಕ್ಕದ ಮನೆಯ ಆಂಟಿ - ಅಂಕಲ್ ಇಂತಹ ಚಳಿಯಲ್ಲಿಯೂ ಮನಗೇ ಬೆಂಕಿ ಬಿದ್ದವರಂತೆ ಭಯಂಕರವಾಗಿ ಜಗಳವಾಡುತ್ತಿದ್ದರು. ಮಾಜಿ ಪ್ರಧಾನಿ ವಿ.ಪಿ ಸಿಂಗ್ ತೀರಿಹೋಗಿದ್ದರಿಂದ, ಅವರ ಮಕ್ಕಳೂ ಕೂಡ ರಜೆಯಿಂದ ಮನೆಯಲ್ಲೇ ಇದ್ದು ಅಪ್ಪ ಅಮ್ಮನ ಜಗಳವನ್ನು ನೋಡುತ್ತಿದ್ದರು. ಮಕ್ಕಳ ಮುಂದೆ ಜಗಳವಾಡಬಾರದು ಎಂದು ಈ ತಂದೆತಾಯಿಗಳಿಗೆ ಹೇಳಿಕೊಡುವರು ಯಾರು ಎನ್ನುತ್ತಾ ಪೇಪರ್ ಓದೋಣವೆಂದರೆ ಅದು ಮಂಜಿನಲ್ಲಿ ಬಿದ್ದು ಕರಗಿ ಹೋಗಿತ್ತು. `ವೀರಮರಣ ಹೊಂದಿದ ಅಧಿಕಾರಿಗಳಿಗೆ ನಮ್ಮ ನಮನ`, `ಮಾಲೇಂಗಾವ್ ಸ್ಫೋಟದ ದೇಶಭಕ್ತರನ್ನು ರಕ್ಷಿಸಿ`, `ಶಿವರಾಜ್ ಪಾಟೀಲರನ್ನು ದೇಶದಿಂದ ಹೊರಹಾಕಿ` ಇಂತಹ ತರಹೇವಾರಿ ಮಸೇಜುಗಳಿಂದ ನನ್ನ ಇನ್‌ಬಾಕ್ಸ್ ತುಂಬಿ ಹೋಗಿ ಎಲ್ಲವನ್ನೂ ಒಂದೆಡೆಯಿಂದ ಡಿಲೀಟ್ ಮಾಡುತ್ತಾ ಕುಳಿತುಕೊಂಡೆ. ಇದ್ಯಾಕೋ ರೇಜಿಗೆ ಹುಟ್ಟಿಸಿದಂತೆನಿಸಿ ಸುಮ್ಮನೆ ಹೊರಬಂದು ತಿರುಗಾಡೋಣವೆಂದು ಹೊರಟೆ.

ನಾನಿರುವ ಹಿನ್‌ಕಲ್ ತುಂಬಾ ವಿಶೇಷತೆಗಳಿಂದ ಕೂಡಿದ ಊರು. ಇಲ್ಲೊಬ್ಬ ದಿನಾಲೂ ಪಲ್ಸರ್ ಗಾಡಿಯಲ್ಲಿ ಕುಳಿತು ಎಮ್ಮೆ ಮೇಯಿಸಿಕೊಂಡು ಬರುತ್ತಾನೆ. ಈವತ್ತು ಯಾಕೋ ಅವನು ಕಾಣಿಸದೆ ಹೋಗಿ, ಅವನ ಎಮ್ಮೆಗಳೆಲ್ಲಾ ಎಲ್ಲಿ ಮೇಯಲು ಹೋಗಿರಬೇಕೆಂದು ಪೆದ್ದು ಪೆದ್ದಾಗಿ ಯೋಚಿಸತೊಡಗಿದೆ. ದೂರದಲ್ಲಿ ನೋಡಿದರೆ ಕಟ್ಟಾ ಸುಬ್ರಮಣ್ಯ ನಾಯ್ಡುವಿನಂತೆ ಟೋಪಿ ಹಾಕಿಕೊಂಡು ಒಬ್ಬರು ನಡೆದುಕೊಂಡು ಹೋಗುತ್ತಿದ್ದರು. ಹತ್ತಿರ ಹೋಗಿ ನಮಸ್ಕಾರ ತಾತಾ ಎಲ್ಲಿಗೆ ಹೊರಟಿದ್ದೀರಾ ಎಂದರೆ ಅವರು ಏನೂ ಕೇಳಿಸಿಕೊಳ್ಳದಂತೆ ನಡೆಯುತ್ತಿದ್ದರು. ನೋಡಿದರೆ ಅವರು ಕಿವಿಗೆ ಶ್ರವಣ ಸಾಧನ ಹಾಕಿಕೊಂಡಿದ್ದರು:) ಇಲ್ಲಿರುವ ಒಂದು ಹೊಟೇಲ್‌ನಲ್ಲಿ ಎಕಾಮಿಕ್ಸ್ ಟೈಮ್ಸ್ ಪೇಪರನ್ನು ತರಿಸುತ್ತಾರೆ. ಸಾಮಾನ್ಯವಾಗಿ ಇಂತಹ ಹೊಟೇಲ್‌ಗಳಲ್ಲಿ ಸ್ಥಳೀಯ ನ್ಯೂಸ್ ಪೇಪರ್‌ಗಳನ್ನು ತರಿಸುವುದೂ, ಅದು ಒಂಭತ್ತು ಗಂಟೆಯಾಗುತ್ತಿದ್ದಂತೆ ಹರಿದು ಹಂಚಿ ಹೋಗುವುದೂ ಸಾಮಾನ್ಯ. ನೋಡಿದರೆ ಈ ಹೊಟೇಲ್ ಮಾಲಿಕ ಎಕನಾಮಿಕ್ಸ್ ಟೈಮ್ಸ್ ಪೇಪರನ್ನು ಜತನದಿಂದ ಎತ್ತಿಟ್ಟಿದ್ದ. ಕುತೂಹಲಕ್ಕೆ ವಿಚಾರಿಸಿದರೆ ಆತನದೂ ಒಂದು ಷೇರಿದ್ದು, ಮಂಗಳೂರಿನಲ್ಲಿ ಎಂಬಿಎ ಓದುತ್ತಿರುವ ಮಗನ ಆಸೆಯಂತೆ ಷೇರು ಪೇಟೆಯ ತಲ್ಲಣಗಳನ್ನು ತಿಳಿಯಲು ಆತ ಎಕನಾಮಿಕ್ಸ್ ಟೈಮ್ಸ್ ತರಿಸುತ್ತಿದ್ದಾನೆಂದೂ ತಿಳಿಯಿತು. ಸದ್ಯ ಆತನ ಷೇರುಗಳೆಲ್ಲಾ ಮುಳುಗಿ ಹೋಗಿರುವುದರಿಂದ ಆತನ ಹೊಟೇಲಿನ ತಿಂಡಿಯ ವಿಷಯದಲ್ಲೂ ಅದರ ಮುಗ್ಗಟ್ಟು ಕಾಣಿಸಿಕೊಂಡಿದೆ. ರೈಸ್‌ಬಾತ್‌‌ನಲ್ಲಿ ಟಮೋಟೊ, ಬೀನ್ಸ್, ಬಟಾಣಿ ಕಾಳುಗಳು ಮರೆಯಾಗಿರುವುದರ ಹಿಂದೆ ಈ ಆರ್ಥಿಕ ಮುಗ್ಗಟ್ಟು ಮತ್ತು ಏಕನಾಮಿಕ್ಸ್ ಟೈಮ್ಸ್‌ನ ಪ್ರಭಾವ ಇರುವುದನ್ನು ನಾನು ಪತ್ತೆಹಚ್ಚಿದೆ.

ಹನ್ನೆರಡು ಗಂಟೆಯಾದರೂ ಬಿಸಿಲು ಮೂಡದಿದ್ದರಿಂದ ಸುರಿಯುತ್ತಿರುವ ಮಂಜನ್ನು ಶಫಿಸುತ್ತಾ ನಾಯಿಗಳೆರಡು ನನ್ನ ಮನೆಯ ಮುಂದಿನ ಅಂಗಳದಲ್ಲಿದ್ದ ಮರಳಿನಲ್ಲಿ ಗುಂಡಿ ತೋಡಿ ಮಲಗಿಕೊಂಡು ಸೂರ್ಯನ ಆಗಮನಕ್ಕಾಗಿ ಕಾಯುತ್ತಿದ್ದವು. ಹಳ್ಳಿಯಿಂದ ಬಂದ ಅಜ್ಜನನೊಬ್ಬ ತಲೆಯ ಮೇಲೆ ಕೊತ್ತಂಬರಿ, ಬಸಳೆ, ಪಾಲಕ್, ಸಬ್ಬಸಿಗೆ, ಮೆಂತ್ಯ, ಕಿಲ್‌ಕಿರೆ ಸೊಪ್ಪನ್ನು ಹೊತ್ತುಕೊಂಡು ಇಲ್ಲಿನ ಅಪಾರ್ಟ್‌ಮೆಂಟ್‌ಗಳ ಮುಂದೆ ಮಾರುತ್ತಿದ್ದ. ಆತ ಕಾಲಿಗೆ ಚಪ್ಪಲಿಯನ್ನೂ ಹಾಕಿರಲಿಲ್ಲ. ದುಡಿಯುವವರಿಗೆ ಮಳೆಯಾದರೆನು, ಚಳಿಯಾದರೇನು ಎಂದುಕೊಂಡೆ. ಈ ಅಜ್ಜನಿಂದ ಸ್ಫೂರ್ತಿ ಪಡೆದವನಂತೆ ಹುರುಪಿನಿಂದ ಎದ್ದು ರೆಡಿಯಾಗಿ ಆಫೀಸಿಗೆ ಬಂದರೆ, ಟಿವಿ ಒಂಭತ್ತರಲ್ಲಿ ಮುಂಬಯಿ ಭಯೋತ್ಪಾದನೆ ಕಾರ್ಯಾಚರಣೆ ಬರುತ್ತಿತ್ತು. ರಾಧಿಕಾ ರಾಣಿಯರು ಫುಲ್ ಖುಷಿಯೊಳಗೆ ವಾರ್ತೆ ಓದುತ್ತಿದ್ದರು. ` ಎಕೆ 47 ನಿಂದ ಹಾರಿದ ಗುಂಡುಗಳು ಎಷ್ಟು ವೇಗವಾಗಿತ್ತೆಂದರೆ ಅದು ನಮ್ಮ ದೆಹಲಿ ಪ್ರತಿನಿಧಿಯ ಕಣ್ಣಿಗೂ ಬೀಳಲಿಲ್ಲ` ಎನ್ನುವ ಅರ್ಥ ಬರುವಂತೆ ಏನೋನೋ ಮನೋರಂಜನೆ ನೀಡುತ್ತಿದ್ದರು. ಈ ಲೈವ್ ನ್ಯೂಸ್ ಕೇಳಿ ಕೇಳಿ ನನ್ನ ಕಿವಿಗಳು ಪಾವನವಾಗುವ ಅಪಾಯ ಇದ್ದಿದ್ದರಿಂದ, ಟಿವಿ ಮ್ಯೂಟ್ ಮಾಡಿ ಚಿತ್ರ ನೋಡುತ್ತಾ ಕುಳಿತುಕೊಂಡೆ. ನಿನ್ನೆ ಇದೇ ಟಿವಿಯ ವರದಿಗಾರರೊಬ್ಬರು ಬೆಂಗಳೂರಿನಲ್ಲಿ ನಿಂತುಕೊಂಡು ದೆಹಲಿಯ ತಾಜ್ ಹೊಟೇಲಿನೊಳಗೆ ಏನಾಗುತ್ತಿದೆ ಎನ್ನುವುದನ್ನು ಲೈವ್ ಕೊಡುತ್ತಿದ್ದರು. ಅಬ್ಬಾ! ಹೀಗೆಲ್ಲಾ ಲೈವ್ ಕೊಡಲು ಈ ಉತ್ತಮ ಸಮಾಜದವರಿಂದ ಮಾತ್ರ ಸಾಧ್ಯ ಎಂದುಕೊಂಡು ಟಿವಿ ಆಫ್‌ ಮಾಡಿ, ನನ್ನ ಕೆಲಸಕ್ಕೆ ಲಾಗಿನ್ ಆದೆ.

ಹೊರಗೆ ಮಂಜು ಸುರಿಯುತ್ತಲೇ ಇದೆ.

21 comments:

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

"ರಾಧಿಕಾ ರಾಣಿಯರು ಫುಲ್ ಖುಷಿಯೊಳಗೆ ವಾರ್ತೆ ಓದುತ್ತಿದ್ದರು. ` ಎಕೆ 47 ನಿಂದ ಹಾರಿದ ಗುಂಡುಗಳು ಎಷ್ಟು ವೇಗವಾಗಿತ್ತೆಂದರೆ ಅದು ನಮ್ಮ ದೆಹಲಿ ಪ್ರತಿನಿಧಿಯ ಕಣ್ಣಿಗೂ ಬೀಳಲಿಲ್ಲ` ಅಂತೆಲ್ಲಾ ಏನೋನೋ ಮನೋರಂಜನೆ ನೀಡುತ್ತಿದ್ದರು. ಈ ಲೈವ್ ನ್ಯೂಸ್ ಕೇಳಿ ಕೇಳಿ ನನ್ನ ಕಿವಿಗಳು ಪಾವನವಾಗುವ ಅಪಾಯ ಇದ್ದಿದ್ದರಿಂದ, ಟಿವಿ ಮ್ಯೂಟ್ ಮಾಡಿ ಚಿತ್ರ ನೋಡುತ್ತಾ ಕುಳಿತುಕೊಂಡೆ.." ದೊಡ್ಡ ರೈಲು ಕಣಯ್ಯ. ಚುಮುಚುಮು ಚಳಿ, ಸೋನೆ ಮಳೆಯ ಅನುಭ,ಆರ್ಥಿಕ ಬಿಕ್ಕಟ್ಟು, ನ್ಯೂಸ್..ವಾಹ್ ಸೂಪರ್ ಕಣಯ್ಯ. ನಂಗೆ ಇಷ್ಟವಾಯಿತು ಲೇಖನ.

shivu K said...

ಮಂಜಿನ ಹನಿ, ಹಿಮ ಶೀತಗಾಳಿ ವಾತಾವರಣದ ಮೈಸೂರಿನ ಇಂದಿನ ಬದುಕನ್ನು ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಅನುಭವಗಳೆಲ್ಲಾ ಪಕ್ಕ ನಮ್ಮವೂ ಆಗಿವೆ ಬೆಂಗಳೂರಿನಲ್ಲಿ. ಓದುತ್ತಾ ಹೋದಂತೆ ಎಲ್ಲವನ್ನು ಅನುಭವಿಸಿದಂತೆ ಆಯಿತು. ಅದಕ್ಕೆ ಇದೆಲ್ಲಾ ಜಂಜಾಟ ಬೇಡವೆಂದು ನಾವೆಲ್ಲಾ ಕಳೆದ ವಾರ ನಂದಿಬೆಟ್ಟಕ್ಕೆ ಹೋಗಿ ಇಂಥದೇ ಇಬ್ಬನಿ ವಾತಾವರಣದಲ್ಲಿ ಮಜಾ ಅನುಭವಿಸಿದೆವು. ಅದರ ಫೋಟೊ ಮತ್ತು ಪುಟ್ಟ ಲೇಖನವನ್ನು ಬ್ಲಾಗಿಗೆ ತಳ್ಳಿದ್ದೇನೆ ನೋಡಬನ್ನಿ.

suragi said...

ಭಾಷೆಯ ದುಂದುಗಾರಿಕೆಗೆ ಟೀವಿ ವರದಿಗಾರರು ಮತ್ತು ವಾರ್ತಾವಾಚಕ/ಕಿಯರಿಗೆ ಪ್ರಶಸ್ತಿಯನ್ನೇ ನೀಡಬಹುದು.ನಿಮ್ಮ ಹಾಗೆ ನಾನು ಕೂಡ ಕೆಲವೊಮ್ಮೆ ಮ್ಯುಟ್ ಮಾಡಿಯೇ ನ್ಯೂಸ್ ನೋಡುವುದು.ಮಾತಿಗಿಂತ ಮೌನ ಹೆಚ್ಚು ಅರ್ಥ ಸ್ಫುರಿಸುವಂತೆ ಹಲವು ಬಾರಿ ಕ್ಯಾಮರವೇ ಬಹಳಷ್ಟನ್ನು ಸಂವಹನ ಮಾಡುತ್ತದೆ.

UCHANGI said...

ರಾಧಿಕಾ ರಾಣಿ ಹಾಗೆ ಹೇಳಿದರೇ?ಮುಂಬೈ ಎಲ್ಲಿ ದೆಹಲಿ ಎಲ್ಲಿ?
ನಿಮ್ಮ ಕಿವಿ ಚುರುಕಾಗಿದೆ!
ashok uchangi
mysore

ಚಿತ್ರಾ said...

ತುಂಬಾ ಚಂದ ಬರೆದಿದ್ದೀರ ಜೋಮನ್.
ಮಂಜು ಮುಸುಕಿದ ಮುಂಜಾವು ( ನಿಮ್ಮ ಮಧ್ಯಾಹ್ನ!) ಎಷ್ಟು ಸುಂದರ ಅಲ್ಲವೆ?
ಇನ್ನು ಟಿ ವಿ ರಿಪೋರ್ಟರ್ಗಳನ್ನೇನು ಕೇಳ್ತೀರಾ ಬಿಡಿ, ಅವರೆಲ್ಲ ತಮ್ಮ ಉಕ್ಕಿ ಹರಿಯುವ ಉತ್ಸಾಹದಲ್ಲಿ ಒಂದೊಂದು ಸಲ ರೈಲ್ವೆ ಇಲಾಖೆ ಸೇರಿಬಿಡ್ತಾರೆ.ಬಹಳ ಸಮಯದ ಹಿಂದೆ ನೋಡಿದ ಶೇಖರ್ ಸುಮನ್ ಶೋ ನೆನಪಾಗುತ್ತದೆ. ಇಂಥಾ ರಿಪೋರ್ಟರ್ ಗಳ ಪೈಪೋಟಿಯನ್ನು ಬಣ್ಣಿಸುತ್ತ ಒಂದು ಉದಾಹರಣೆ ಕೊಟ್ಟಿದ್ದರು.ಚಾನಲೊಂದರ ಬ್ರೇಕಿಂಗ್ ನ್ಯೂಸ್ " ..ನಗರದ.. ಗಲ್ಲಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಯಿಯೊಂದು ಸತ್ತು ಬಿದ್ದಿದೆ. ಈ ಘಟನೆ ನಡೆದ ಸ್ಥಳದಲ್ಲಿ ನಮ್ಮ ಪ್ರತಿನಿಧಿ ತುಂಬಾ ಹೊತ್ತಿನಿಂದಲೇ ಹಾಜರಿದ್ದು ಕಾಯುತ್ತಿದ್ದರು ! "....
ಅಂದಹಾಗೆ , ಮ್ಯೂಟ್ ಮಾಡಿ ವಾರ್ತೆ ನೋಡುವ ನಿಮ್ಮ ಜೊತೆ ನನ್ನ ಪತಿದೇವರನ್ನೂ ಸೇರಿಸಿಕೊಳ್ಳಿ.

ಚಿತ್ರಾ said...

ತುಂಬಾ ಚಂದ ಬರೆದಿದ್ದೀರ ಜೋಮನ್.
ಮಂಜು ಮುಸುಕಿದ ಮುಂಜಾವು ( ನಿಮ್ಮ ಮಧ್ಯಾಹ್ನ!) ಎಷ್ಟು ಸುಂದರ ಅಲ್ಲವೆ?
ಇನ್ನು ಟಿ ವಿ ರಿಪೋರ್ಟರ್ಗಳನ್ನೇನು ಕೇಳ್ತೀರಾ ಬಿಡಿ, ಅವರೆಲ್ಲ ತಮ್ಮ ಉಕ್ಕಿ ಹರಿಯುವ ಉತ್ಸಾಹದಲ್ಲಿ ಒಂದೊಂದು ಸಲ ರೈಲ್ವೆ ಇಲಾಖೆ ಸೇರಿಬಿಡ್ತಾರೆ.ಬಹಳ ಸಮಯದ ಹಿಂದೆ ನೋಡಿದ ಶೇಖರ್ ಸುಮನ್ ಶೋ ನೆನಪಾಗುತ್ತದೆ. ಇಂಥಾ ರಿಪೋರ್ಟರ್ ಗಳ ಪೈಪೋಟಿಯನ್ನು ಬಣ್ಣಿಸುತ್ತ ಒಂದು ಉದಾಹರಣೆ ಕೊಟ್ಟಿದ್ದರು.ಚಾನಲೊಂದರ ಬ್ರೇಕಿಂಗ್ ನ್ಯೂಸ್ " ..ನಗರದ.. ಗಲ್ಲಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಯಿಯೊಂದು ಸತ್ತು ಬಿದ್ದಿದೆ. ಈ ಘಟನೆ ನಡೆದ ಸ್ಥಳದಲ್ಲಿ ನಮ್ಮ ಪ್ರತಿನಿಧಿ ತುಂಬಾ ಹೊತ್ತಿನಿಂದಲೇ ಹಾಜರಿದ್ದು ಕಾಯುತ್ತಿದ್ದರು ! "....
ಅಂದಹಾಗೆ , ಮ್ಯೂಟ್ ಮಾಡಿ ವಾರ್ತೆ ನೋಡುವ ನಿಮ್ಮ ಜೊತೆ ನನ್ನ ಪತಿದೇವರನ್ನೂ ಸೇರಿಸಿಕೊಳ್ಳಿ.

Jagali bhaagavata said...

'ದೆಹಲಿ'ಯ ತಾಜ್ ಹೊಟೇಲಿನೊಳಗೆ ??

Jagali bhaagavata said...

ಆತನ ಹೊಟೇಲಿನ ತಿಂಡಿಯ ವಿಷಯದಲ್ಲೂ ....

ಅಡುಗೆ ಮಾಡ್ಕೊಳಲ್ವಾ?

ಶರಶ್ಚಂದ್ರ ಕಲ್ಮನೆ said...

ನಮ್ಮೂರಿನ ಚಳಿಗಾಲವನ್ನು ನಿನಪಿಸಿದಿರಿ ಸರ್, ಬೆಂಗಳೂರಲ್ಲಿ ಚಳಿ ಇದ್ದರೂ ಊರಿನ ಇಬ್ಬನಿ, ಪರಿಸರ, ಜನ ಎಲ್ಲವನ್ನು ಮಿಸ್ ಮಾಡ್ಕೋತ ಇದೀನಿ. ಸಾಮಾನ್ಯವಾಗಬಹುದಿದ್ದ ಒಂದು ಸುಂದರ ಮುಂಜಾನೆಯನ್ನು ತುಂಬ ಚನ್ನಾಗಿ ವರ್ಣಿಸಿದ್ದೀರ :) ಇನ್ನು ಟಿವಿ ೯ ರ ಬಗ್ಗೆ ಹೇಳಲು ನಾನು ಇಚ್ಚಿಸುವುದಿಲ್ಲ, ನನ್ನ ಸಮಯವೂ ದಂಡ, ಓದುವ ನಿನ್ನ ಸಮಯವೂ ನಷ್ಟ.

ಶರಶ್ಚಂದ್ರ ಕಲ್ಮನೆ

Harish kera said...

“ಇದೇ ಟಿವಿಯ ವರದಿಗಾರರೊಬ್ಬರು ಬೆಂಗಳೂರಿನಲ್ಲಿ ನಿಂತುಕೊಂಡು ದೆಹಲಿಯ ತಾಜ್ ಹೋಟಲಿನೊಳಗೆ ಏನಾಗುತ್ತಿದೆ ಎಂಬುದನ್ನು ಲೈವ್ ಕೊಡುತ್ತಿದ್ದರು...". ಅಬ್ಬಾ, ಎಂಥ ಜೋಕ್ ಜೋಮನ್. ನಕ್ಕು ಸಾಕಾಯಿತು. ಇನ್ನೊಂದು ವಾರ ಇದನ್ನೇ ಎಲ್ಲರಿಗೂ ಹೇಳಿ ನಗಿಸಬಹುದು.
- ಹರೀಶ್ ಕೇರ

Ashok Uchangi said...

dear Joman
Mysore malligeya modala moggu aralide.purusottu madikondu bhetikodi

--ashok uchangi
http://mysoremallige01.blogspot.com/

rajkumari said...

ನಿಮ್ಮ ಲೇಖನ ತುಂಬ ಚೆನ್ನಾಗಿದೆ.ಅವುಗಳನ್ನು ಹೇಗೆ ಬರೆಯುತ್ತಿರಿ. ಆ ಭಾವನೆಗಳಿಗೆ ಸ್ಪಂದಿಸುವ ನಿಮ್ಮ ವಾಕ್ಯ ರಚನೆ ಸುಂದರವಾಗಿದೆ.

Anonymous said...

LO JOBI NINENO CHUMU CHUMU MANJINALLI NINNA ANTARALAVNNA JAGTJAHIRATU MADIBITTE. AADRE NAMMA BAGGENU SWALPA YOCHISO..MARAYA...

Anonymous said...

LO JOBI NINENO CHUMU CHUMU CHALIYALLI NINNA BAVANEGALANNA JAGATJAHIRU MADIBITTE. ADELLA OK..NAMMA BAGGENO SWALPA YOCHISAPPA....

Harish - ಹರೀಶ said...

ಜೋಮನ್, ಇವತ್ತು ಬೆಳಿಗ್ಗೆ ಬೆಂಗಳೂರಿನಲ್ಲೂ ಮಂಜು.... ಚುಮು ಚುಮು ಚಳಿ.. ಸಖತ್ತಾಗಿದೆ ವಾತಾವರಣ... ಚೆನ್ನಾಗಿ ಬರೆದಿದೀರಿ :-)

Parameshwar said...

ಹಾಯ್ ಜೋಮನ್, ಹೇಗಿದ್ದೀರಿ?
ಒಳ್ಳೇ ಬರವಣಿಗೆ. ಖುಷಿಯಾಯ್ತು. ಆದರೆ ಕಾಮೆಂಟು ಸ್ವಲ್ಪ ಜಾಸ್ತಿ ಆಯ್ತು ಅನಿಸುತ್ತೆ. ನೀವು ಟೀವಿ ೯ ನೋಡದೆ ಇರೋದೇ ಒಳ್ಳೇದು ಅನಿಸತ್ತೆ ನಂಗೆ. ಯಾಕಂದ್ರೆ ಟೀವಿ ಪ್ರಭಾವ ನಿಮ್ಮ ಮೇಲೆ ತುಂಬಾನೆ ಆದಂಗಿದೆ. ನೀವೇನಂತೀರಿ?

- ಗೊದ್ಲಬೀಳು

Jagali bhaagavata said...

ಎಷ್ಟು ಕೆಲಸ ಮಾಡ್ತೀರಿ ಮಾರಾಯ್ರೆ ನೀವು? ಇನ್ನೂ ಲಾಗಾಫ್ ಆಗಿಲ್ವಾ? ಯಾಕ್ ಏನೂ ಹೊಸದು ಬರೆದಿಲ್ಲ? ಎಂತ ಆಯ್ತು?

ಬಾನಾಡಿ said...

ದಿನ ಸುಮಾರಾಯ್ತು... ಹನಿ ಸುರಿಯದೆ... ಮಳೆ ಬರಲಿ...
ಮೋಡ ಕದಡಿ ಸುರಿದು ಬಾನು ತಿಳಿಯಾಗಲಿ...
ಸಾಲದಾ...
ಕಾಯುವೆನು...
ಒಲವಿನಿಂದ
ಬಾನಾಡಿ

ಬಾನಾಡಿ said...

ದಿನ ಸುಮಾರಾಯ್ತು... ಹನಿ ಸುರಿಯದೆ... ಮಳೆ ಬರಲಿ...
ಮೋಡ ಕದಡಿ ಸುರಿದು ಬಾನು ತಿಳಿಯಾಗಲಿ...
ಸಾಲದಾ...
ಕಾಯುವೆನು...
ಒಲವಿನಿಂದ
ಬಾನಾಡಿ

ಚಿತ್ರಾ said...

ರೀ ಜೋಮನ್ ,

ಏನಾಯ್ತು ? ಮಳೆ ಬಿದ್ದೇ ಇಲ್ಲ ತುಂಬಾ ದಿನದಿಂದ. ಬೇಸಿಗೆಗೆ ಇನ್ನೂ ತಡ ಇದೆ ಕಣ್ರೀ.

ಜೋಮನ್ said...

pratikriyisida ellarigu tumba danyavadagalu.

jomon.