Saturday 1 November, 2008

ಎಲ್ಲರೂ ಮಲಗಿರಲು ಇವನೊಬ್ಬನೆದ್ದ...!


ಕುಟ್ಟಿ ಕುಂದಾಪುರಕ್ಕೆ ಹೋದ ಕಥೆ ನಿಮಗೆ ಗೊತ್ತಿರಬೇಕಲ್ಲಾ? ಹೀಗೆ ಮೊನ್ನೆ ನಾನೂ ಕೂಡ ದಾವಣಗರೆಗೆ ಹೋಗಿದ್ದೆ. ಕಾರಣಗಳೇನೂ ಇರಲಿಲ್ಲ. ಸುಮ್ಮನೆ ಕುಳಿತಿರುವಾಗ ನನಗೆ ಇಂತಹ ಅತೀಂದ್ರಿಯ ಪ್ರೇರೇಪಣೆಗಳಾಗುವುದಿದೆ. ಮೈಸೂರಿನಿಂದ ಅರಸೀಕರೆಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಬಂದು, ಶಿವಮೊಗ್ಗದಿಂದ ಹರಿಹರಕ್ಕೆ ಬಂದಿಳಿದು, ದಾವಣಗರೆ ತಲುಪುವುದರೊಳಗೆ ಮಧ್ಯರಾತ್ರಿ ಒಂದಾಗಿತ್ತು. ಹತ್ತಿರ ಹತ್ತಿರ ಹತ್ತು ತಾಸು ಹಿಡಿದಿತ್ತು. ಮುಂದೆ ನನಗೆ ಇಂತಹ ಪ್ರೇರೇಪಣೆಗಳಾಗದಿರಲಿ ದೇವರೆ ಎಂದು ಮಲಗಿದ್ದ ಗೆಳೆಯನನ್ನು ಎಬ್ಬಿಸಿ, ಆ ಹೊತ್ತಿನಲ್ಲಿ ಅವನ ರೂಮು ಹುಡುಕಿ, ಕಷ್ಟ ಸುಖ ಮಾತಾಡುತ್ತಾ ಕುಳಿತೆವು. ಹೊರಗೆ ದೀಪಾವಳಿಯ ಪಟಾಕಿಯ ಹೂಬಾಣಗಳು ಆಗಸಕ್ಕೆ ಚಿಮ್ಮಿ ಚಿತ್ತಾರ ಬಿಡಿಸುತ್ತಿದ್ದವು.

ದಾವಣಗರೆಯ ರಾತ್ರಿಗೆ ಒಂದು ವಿಶೇಷತೆಯಿದೆ. ನಿಮ್ಮ ಗಮನಕ್ಕೂ ಬಂದಿರಬಹುದು. ಅಲ್ಲಿ ಹಾವೇರಿ, ಚಿತ್ರದುರ್ಗ, ಹರಪನಹಳ್ಳಿ, ಜಗಳೂರು, ಬಳ್ಳಾರಿ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ಬರುವ ಸಹಸ್ರಾರು ಹೂವುಗಳು, ಮಾಲೆಗಳಾಗಿ, ಗುಚ್ಚಗಳಾಗಿ, ಮೊಗ್ಗರಳಿ ಹೂವಾಗಿ ಬೆಳಗಾಗುವ ಹೊತ್ತಿಗೆ ಆಂಧ್ರ, ಮಹಾರಾಷ್ಟ್ರ, ಗೋವಾ ಅಂತೆಲ್ಲಾ ಹೋಗಿಬಿಡುತ್ತದೆ. ರಾತ್ರಿಯಿಡಿ ದಾವಣಗೆರೆಯ ಕತ್ತಲಿನಲ್ಲಿ ಈ ಹೂವಿನ ಘಮಲು ತೇಲುತ್ತಿರುತ್ತದೆ. ಮರ್ಕುರಿ ದೀಪದ ಕೆಳಗೆ ಕುಳಿತು ನೂರಾರು ಜನರು ಈ ಹೂವಿನ ದೊಡ್ಡ ಪೆಂಡಿಗಳನ್ನು ಕಟ್ಟುವುದರಲ್ಲಿ, ಎತ್ತಿಡುವುದರಲ್ಲಿ ನಿರತರಾಗಿರುತ್ತಾರೆ. ಮಲ್ಲಿಗೆ, ಕಾಕಡ, ಸೂಜಿ, ಸೇವಂತಿಗೆ, ಗುಲಾಬಿ, ಚೆಂಡು ಹೀಗೆ ಹೂವೆಲ್ಲಾ ಈ ಚೆಲುವೆಲ್ಲಾ ತಮ್ಮದೆನ್ನುತ್ತಾ, ಬುಟ್ಟಿಯಿಂದ ಇಣುಕಿ ನೋಡುತ್ತಾ, ಕುಲುಕುಲು ನಗುತ್ತಿರುತ್ತವೆ. ಎಲಾ! ರಾತ್ರಿರಾಣಿಯರೇ ಎಂದು ನಾನೂ ಕೂಡ ಇದನ್ನು ನೋಡುತ್ತಾ ನಿಂತಿದ್ದೆ. ಕೈಯಲ್ಲಿ ಕ್ಯಾಮರಾ ಇರಲಿಲ್ಲ. ಕೈ ಕೈ ಹಿಸುಕಿಕೊಂಡೆ. ಕ್ಯಾಮರಾ ಇಲ್ಲದೆ ಸಂಚರಿಸುವ ನೀನಾವ ಸೀಮೆಯ ಪತ್ರಕರ್ತ ಕಣಯ್ಯಾ ಎಂದು ನನ್ನನ್ನು ನಾನೇ ಬೈದುಕೊಂಡೆ. ಉದುರಿಬಿದ್ದ ಹೂವಿನ ಪಕಳೆಗಳನ್ನು ಎತ್ತಿ, ಮೈದಡುವುತ್ತಾ, ನೀನು ಹೂವಿನಡಗಲಿಯ ಮಲ್ಲಿಗೆಯಾ? ದುರ್ಗದ ಸೂಜಿಯಾ? ದಾವಣಗೆರೆಯ ಗುಲಾಬಿಯಾ? ಅಂತೆಲ್ಲಾ ಕೇಳುವ ಆಸೆಯಾಯಿತು.

ಬೆಳಿಗ್ಗೆ ಎದ್ದು ನೋಡಿದರೆ ದಾವಣಗೆರೆಯ ಜನ ಗೋಪೂಜೆ ಮಾಡುತ್ತಿದ್ದರು. ಸಿಡಿದ ಪಟಾಕಿಗಳ ಶೇಷ ಭಾಗಗಳು ನಮ್ಮತ್ತ ನೋಡಿ, `ಲೇ ಪತ್ರಕರ್ತರೇ ನಿಮಗೆ ಯಾವುದೇ ಹಬ್ಬವಿಲ್ಲವೇ, ಹೋಗಿ ನಿಮ್ಮ ಹೆಂಡತಿ ಮಕ್ಕಳೊಂದಿಗೆ ಹಬ್ಬ ಆಚರಿಸಿ ಎನ್ನುವಂತಿತ್ತು. `feeling less paper tigers` ಅನ್ನುವ ವಿಶೇಷಣ ಹೊತ್ತಿರುವ ನಾವು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದವರಂತೆ ನಿರ್ಭಾವುಕರಾಗಿ ರಸ್ತೆ ಸುತ್ತುತ್ತಿದ್ದೆವು. ಒಳ್ಳೆಯ ಬಿರಿಯಾಣಿ ಕೊಡಿಸುತ್ತೇನೆ ಬಾ ಎಂದು ನನ್ನ ಗೆಳೆಯ ಸುವರ್ಣದ ವರದಿಗಾರ ಧನಲಿಂಗೇಶ, ನನ್ನನ್ನೂ ಹಾಗೂ ಕಸ್ತೂರಿಯ ವರದಿಗಾರ ಕೆರಿಬಸಪ್ಪನವರನ್ನೂ ಕರೆದುಕೊಂಡು ವೀರಶೈವ ಖಾನಾವಳಿ ಹೊಕ್ಕು ಹೂಳಿಗೆ ಊಟ ಮಾಡಿಸಿದ್ದ. ನಂತರ ಟಿವಿ 9 ಆಫೀಸಿಗೆ ಹೋಗಿ ನಮ್ಮ ಹಿರಿಯರಾದ ಬಸವರಾಜ ದೊಡ್ಡಮನಿ ಅವರಿಗೆ ನಮಸ್ಕಾರ ಮಾಡಿದೆವು. ಅವರು ಚಿತ್ರದುರ್ಗದಿಂದ ಪ್ರಾರಂಭವಾಗುವ ರಾಷ್ಟ್ರೀಯ ಹೆದ್ದಾರಿ (3) ದಾವಣಗರೆಯ ಮೂಲಕ ಹಾದು ಎಲ್ಲಿಯವರೆಗೆ ಹೋಗುತ್ತದೆ ಎಂದು ತಲೆಕೆಡಿಸಿಕೊಂಡಿದ್ದರು. ಅದರ ಉಗಮ ಚಿತ್ರದುರ್ಗವೆಂದೂ, ಸೊಲ್ಲಾಪುರದಲ್ಲಿ ಕೊನೆಗಳೊಳ್ಳಲಿದೆಯೆಂದೂ ತಿಳಿದ ನಂತರ ನಿರಮ್ಮಳರಾಗಿ ನನ್ನತ್ತ ನೋಡಿ, ಪ್ರೀತಿಯಿಂದ ಯೋಗಕ್ಷೇಮ ವಿಚಾರಿಸಿಕೊಂಡರು. ನಾನು ಮೈಸೂರಿನಿಂದ ಬಂದಿದ್ದ ದಣಿವನ್ನೆಲ್ಲಾ ಮುಖದಲ್ಲಿ ಪ್ರದರ್ಶಿಸಿ ಅವರಿಂದ ಒಂದಿಷ್ಟು ಪ್ರೀತಿಯನ್ನೂ, ಅನುಕಂಪವನ್ನೂ ಹೆಚ್ಚು ಪಡೆದುಕೊಳ್ಳಲು ಶ್ರಮಿಸುತ್ತಿದ್ದೆ.

ವಾಪಾಸ್ಸು ದಾವಣಗೆರೆ ಬಿಡುವಾಗ ರಾತ್ರಿ ಹತ್ತಾಗಿತ್ತು. ಹರಿಹರದಿಂದ ಅರಸೀಕೆರೆಗೆ ಹತ್ತಿದ ಬಸ್ ಕಡೂರಿನ ಬಳಿ ಪಂಕ್ಚರ್ ಆಯಿತು. ಬಸ್ಸು ಬಳ್ಳಾರಿ ಡಿಪೋಗೆ ಸೇರಿದ್ದರಿಂದ ಕಡೂರು ಡಿಪೋದವರು ಈ ರಾತ್ರಿ ನಿದ್ರೆಯಿಂದ ಎಚ್ಚೆತ್ತು ಟಯರ್ ಚೇಂಜ್ ಮಾಡಲು ನಮ್ಮಿಂದ ಆಗುವುದಿಲ್ಲ ಎಂದರು. ಸರಿ, ಡ್ರೈವರ್ ಕಂಡೆಕ್ಟರ್ ಬಸ್ಸಿನ ಕೆಳಗೆ ನುಸುಳಿ ಟಯರು ಬದಲಿಸಲು ಪ್ರಾರಂಭಿಸಿದರು. ಮೈಕೊರೆಯುವ ಚಳಿ ಬೇರೆ. ನಾನು ಇಳಿದು, ಅವರ ಪಕ್ಕವೇ ನಿಂತು, ಈ ರೀತಿ ಕೆಲಸ ಮಾಡುವುದಕ್ಕೆ ನಿಮಗೆ ಎಕ್ಟ್ರಾ ದುಡ್ಡು ಕೊಡುತ್ತಾರೆ ಅಂತೆಲ್ಲಾ ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುತ್ತಿದ್ದೆ. ಕತ್ತಲೆಯಲ್ಲಿ ಅವರು ಕಷ್ಟಪಟ್ಟು ಪೆನ್ ಟಾರ್ಚ್ ಬೆಳಕಿನಲ್ಲಿ ಬೋಲ್ಟ್ ಬಿಚ್ಚುತ್ತಿದ್ದರು. `ನಿಮಗೆ MRF ಟಯರ್ ಕಂಪನಿ ಗೊತ್ತಾ, ಅದರ ಲೋಗೋ ಇದೆಯಲ್ಲಾ, ಒಬ್ಬ ಪೈಲ್ವಾನ ತನ್ನ ಎರಡೂ ಕೈಗಳಲ್ಲಿ ಟಯರನ್ನು ಎತ್ತಿ ಹಿಡಿದು ನಿಂತ ಚಿತ್ರ, ಆ ಲೋಗೋಗೆ ಐಡಿಯಾ ಕೊಟ್ಟವನು ದಾರಿಯಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡ ಒಬ್ಬ ಸಾಮಾನ್ಯ ವ್ಯಕ್ತಿ` ಈಗ ಅವರಿಗೆ ಆ ಲೋಗೋದಿಂದ ಕೋಟ್ಯಾಂತರ ರೂಪಾಯಿ ಬರುತ್ತಿದೆ, ಈ ಕಥೆ ನಿಮಗೆ ಗೊತ್ತಿದೆಯಾ ಅಂತ ಡ್ರೈವರನ್ನು ಕೇಳುವ ಆಸೆಯಾದರೂ, ಆತ `ಮಧ್ಯರಾತ್ರಿ ಈ ಟಯರು ಬಿಚ್ಚುವ ಕೆಲಸ ಈಗ ನಾನು ನಿನಗೆ ಕಲಿಸಿಕೊಡುತ್ತೇನೆ ಬಾ` ಅಂತ ಹೇಳುವ ಸಾಧ್ಯತೆ ಇದ್ದಿದ್ದರಿಂದ ನಾನು ಅದನ್ನು ನುಂಗಿಕೊಂಡು ನಿಂತಿದ್ದೆ.

ಕಡೂರಿನ ಆ ಮೈಕೊರೆಯುವ ಚಳಿಯಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡದಂತೆ ನಿಂತಿದ್ದರೆ ಒಬ್ಬನು ಮಾತ್ರ ಸ್ಟೌವ್ ಉರಿಸಿ ಚಹಾ, ಕಾಫಿ ಮಾರುತ್ತಿದ್ದ. ಎಲ್ಲರೂ ಮಲಗಿರಲು ಇವನೊಬ್ಬನೆದ್ದ ಎಂದು ಹತ್ತಿರ ಹೋದರೆ ಅವನು ಚಾಯೆ.. ಕಾಫೀ.. ಅಂತ ಜೋರು ವ್ಯಾಪಾರ ಮಾಡುತ್ತಿದ್ದ. ಚಳಿಯಿಂದ ನಡುಗಿದವರೆಲ್ಲಾ ಬಾಯಲ್ಲಿ ಹೊಗೆ ಬಿಡುತ್ತಾ, ಚಹಾ, ಕಾಫಿಯನ್ನು ಊದಿ ಊದಿ ಕುಡಿದು ನಾಲಿಗೆ ಸುಟ್ಟುಕೊಳ್ಳುತ್ತಿದ್ದರು. ಈ ರೀತಿ ವ್ಯಾಪಾರ ಮಾಡುವ ನೀನೊಬ್ಬ ಮಲೆಯಾಳಿಯೇ ಇರಬೇಕು ಎಂದು ಅವನನ್ನು ಕೇಳಿದರೆ ಅವನು ಮಲೆಯಾಳಿಯೇ ಆಗಿದ್ದ. ಮಲ್ಲುಬಾಯ್ ನಿಮ್ಮ ಬಳಿ ಕಟ್ಟಂಚಾಯ, ಕಪ್ಪ (ಮರಗೆಣಸು) ಸಿಗುತ್ತದೆಯಾ ಅಂತ ಕೇಳಿದರೆ, ಕೂತುಕೊಳ್ಳಿ ಸಾರ್, ಇನ್ನೇನು ಬೆಳಗಾಗುತ್ತದೆ, ತರಿಸಿಕೊಡುತ್ತೇನೆ ಎನ್ನಬೇಕೇ. `ಈ ಬಾರಿಯ ಚಂದ್ರಯಾನ ಉಪಗ್ರಹದಲ್ಲಿ ಇಬ್ಬರು ಮಲಯಾಳಿಗಳೂ ಹೋಗಿದ್ದಾರೆ, ನಿನ್ನ ಟೆಂಟನ್ನು ಅವರ ಹತ್ತಿರ ಕೊಟ್ಟು ಕಳುಹಿಸಿದ್ದರೆ, ನೀನೂ ಕೂಡ ಬೇಗ ಅಲ್ಲಿಗೇ ಶಿಪ್ಟ್ ಆಗಬಹುದಿತ್ತು` ಎಂದಿದ್ದಕ್ಕೆ ಆತ ನಕ್ಕ. ಚಹಾ ಅಂಗಡಿ ನಡೆಸಿಯೇ ನಾನು ಇಡಿ ಬ್ರಹ್ಮಾಂಡವನ್ನೇ ಸುತ್ತಬಲ್ಲೆ ಎನ್ನುವಂತಿತ್ತು ಅವನ ಮಾತಿನ ಧಾಟಿ.

ಅರಸಿಕೆರೆಯಲ್ಲಿ ಇಳಿದಾಗ ಬೆಳಗಿನ ಜಾವ ಐದಾಗಿತ್ತು. `ಬಡವರ ಬಂಧು ರೈಲಿದೆ ಸಾರ್, ಇಪ್ಪತ್ತೈದು ರೂಪಾಯಲ್ಲಿ ಮೈಸೂರಿಗೆ ಕರ್‌ಕೊಂಡು ಹೋಗ್ತಾನೆ, ಯಾಕೆ ನೂರೈವತ್ತು ರೂಪಾಯಿ ಕೊಟ್ಟು ಬಸ್ಸಿಗೆ ಹೋಗ್ತೀರಾ?` ಎಂದು ಸಹ ಪ್ರಯಾಣಿಕರೊಬ್ಬರು ಮದುವೆಯಾಗದ ನನಗೆ ದುಡ್ಡು ಉಳಿಸುವ ಅಗತ್ಯವನ್ನೂ, ಐಡಿಯಾವನ್ನೂ ಹೇಳಿ ಒತ್ತಾಯಪೂರ್ವಕ ಎನ್ನುವಂತೆ ರೈಲು ಹತ್ತಿಸಿದರು. ಅಯ್ಯೋ! ಲಾಲುವೇ ಎಂದು ನಾನು ರೈಲು ಹತ್ತಿದರೆ ಅದು ಹೊರಡಬೇಕೋ ಬೇಡವೂ, ಮೈಸೂರು ತಲುಪಬೇಕೋ ಬೇಡವೋ ಎನ್ನುವ ಸ್ಥಿತಿಯಲ್ಲಿತ್ತು. ಬರ್ತ್ ಮೇಲೆ ಬ್ಯಾಗಿಟ್ಟು ತಲೆಯಾನಿಸಿದರೆ ಮೈಸೂರು ಹತ್ತಿರ ಡೋರನಹಳ್ಳಿ ಬಂದಾಗ ಎಚ್ಚರವಾಯಿತು. `ಎಲ್ಲರೂ ಎದ್ದಿರಲು ಇವನೊಬ್ಬ ಮಲಗಿದ` ಎಂದು ಕೆಳಗೆ ಸೀಟಿನಲ್ಲಿ ಕುಳಿತ ಪ್ರಯಾಣಿಕರು ನನ್ನನ್ನೇ ಕೆಕ್ಕರಿಸಿಕೊಂಡು ನೋಡುವ ಹಾಗಿತ್ತು. ಹೇಮಾವತಿ ನದಿಯನ್ನು ನೋಡಬೇಕು, ಅಲ್ಲಿ ತೇಜಸ್ವಿ ಮೀನು ಹಿಡಿದ ಸ್ಥಳವನ್ನು ನೋಡಬೇಕು ಎಂದೆಲ್ಲಾ ಮಲಗಿದ್ದ ನಾನು ಹನ್ನೊಂದು ಗಂಟೆಗೆ ಎಚ್ಚರಗೊಂಡಿದ್ದೆ. ಮೈಸೂರಿನಲ್ಲಿ ರೈಲಿಳಿದಾಗ ಸುಡುಸುಡು ಬಿಸಿಲು.

ಈ ಸಲದ ದೀಪಾವಳಿಗೆ ಪಟಾಕಿ ಸುಡಲಿಲ್ಲ, ಎಣ್ಣೆ ಸ್ನಾನ ಮಾಡಲಿಲ್ಲ. ಬದಲಿಗೆ ಗಳೆಯ ಧನುವಿನ ಪ್ರೀತಿ, ಕರಿಬಸಪ್ಪನವರ ಆತ್ಮೀಯತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ದಾವಣಗರೆಯಿಂದ ಮೈಸೂರಿಗೆ ಮರಳಿ ಬಂದಿದ್ದೆ. ಮುಂದಿನ ದೀಪಾವಳಿಗೂ ನನಗೆ ದಾವಣಗೆರೆಗೆ ಹೋಗುವ ಪ್ರೇರಣೆಯಾಗಲಿ ಎಂದು ಈಗ ಪ್ರಾರ್ಥಿಸುತ್ತಿರುವೆ.

[ಚಿತ್ರ - ಅಂತರ್ಜಾಲದಿಂದ ಕದ್ದಿದ್ದು]


ಕದ್ದ ತಪ್ಪಿಗೆ...

ಜಗತ್ತಿನ ಕೋಟ್ಯಾನುಕೋಟಿ ವೆಬ್‌ಸೈಟ್‌ಗಳಿಂದ ಜನರು ಎನೆಲ್ಲಾ ಕದಿಯುತ್ತಿರುವಾಗ, ಒಬ್ಬ ಬಡ ಪತ್ರಕರ್ತನಾದ ನಾನು ಯಾವುದೋ ಒಂದು ತಾಣದಿಂದ ಒಂದು ಫೋಟೋವನ್ನು ಕದ್ದು ಹಾಕಿದರೆ ಅದು ದೊಡ್ಡ ತಪ್ಪೇನಲ್ಲ ಅಂತ ಭಾವಿಸಿ, ಸುಮ್ಮನಾದರೆ ನಮ್ಮ ಭಾಗವತರು `ಸ್ವಾಮಿ ನಿಮ್ಮ ಪಾಪ ಪರಿಹಾರಕ್ಕೆ ಅದರ ಲಿಂಕ್ ಕೊಡಿ` ಎನ್ನಬೇಕೆ. ಕದ್ದ ತಪ್ಪಿಗೆ ಈ ಚಿತ್ರವನ್ನು ಅಂತರ್ಜಾಲದಿಂದ ಕದ್ದಿದ್ದು ಎಂದು ಕ್ರೆಡಿಟ್ ಕೊಟ್ಟು ನಾನೊಬ್ಬ ಪ್ರಾಮಾಣಿಕ ಕಳ್ಳ ಎಂದು ನಿವೇದಿಸಿಕೊಂಡರೂ ಭಾಗವತರು ನನ್ನ ಬೆನ್ನು ಬಿಡಲಿಲ್ಲ. ಅವರೊಂದಿಗೆ ಈಗ ನಮ್ಮ ಟೀನಾ ಮೇಡಂಮ್ಮೂ ಸೇರಿಕೊಂಡು, ಸೋರ್ಸ್ ಲಿಂಕನ್ನು ವೆಬ್ ಪತ್ರಕರ್ತರಾದ ನೀವು ಜವಾಬ್ದಾರಿಯಿಂದ ಕೊಡಬೇಕು. ಎಂದೆಲ್ಲಾ ಕ್ಲಾಸ್ ತೆಗೆದುಕೊಂಡ ಮೇಲೆ, ಎಲ್ಲಿಂದ ಕದ್ದಿದ್ದು ಎಂದು ನನಗೇ ಮರೆತುಹೋಗಿದ್ದ ಈ ಚಿತ್ರದ ಮೂಲವನ್ನು ಹುಡುಕಿಕೊಂಡು ಅಂತರ್ಜಾಲವೆಲ್ಲಾ ಅಡ್ಡಾಗಿ ಸುಸ್ತಾಗಿ ಹೋಗಿದ್ದೇನೆ. ಆದರೂ ಚಿತ್ರದ ಪಕ್ಕಾ ಮೂಲ ಸಿಕ್ಕಿಲ್ಲ. ಇದನ್ನು ಫ್ಲಿಕ್ಕರ್ ತಾಣದಿಂದ ಎಗರಿಸಿದ್ದು. ಈ ಚಿತ್ರ ಇನ್ನೇನು ಕೈಗೆ ಸಿಗಬಹುದು ಎನ್ನುವಷ್ಟು ಹತ್ತಿರದ ಕೊಂಡಿ ಕೊಟ್ಟಿದ್ದೇನೆ. ಟೀನಾ ಮತ್ತು ಭಾಗವತರು ಇಲ್ಲಿ ಕ್ಲಿಕ್ಕಿಸಿ ಇದರ ಅಕ್ಕ ಪಕ್ಕ ಹುಡುಕಿ ನನಗೂ ತಿಳಿಸಬೇಕೆಂದು ಕೋರಿಕೆ. ನನಗಂತೂ ಸಾಕಾಗಿದೆ. ನೀವು ಬೇಕಾದರೆ ನನ್ನ ಮೇಲೆ ಕಾಪಿರೈಟ್ ಉಲ್ಲಂಘನೆಯಡಿ ಕೇಸು ಹಾಕಿ, ಬ್ಲಾಗ್ ಲೋಕದಿಂದ ಒದ್ದು ಓಡಿಸಬಹುದು.

20 comments:

shivu.k said...

ಚೋಮನ್ ಸಾರ್,
ರಾತ್ರಿ ಹೂಗಳ ಮೈದಡವುವಾಗ ನನ್ನ ನೆನೆಸಿಕೊಳ್ಳಬಾರದೇ ಕ್ಯಾಮೆರಾ ಹಿಡಿದು ಓಡಿ ಬರುತ್ತಿದ್ದೆ. ಇನ್ನೂ ಟೈರ್ ಬಿಚ್ಚುವಾಗಿನ ನಿಮ್ಮ ಅಧಿಕಪ್ರಸಂಗಿತನ ಸೂಪರ್, ಆ ಚಳಿ ಸಮಯದಲ್ಲಿ ಟೀ ಕೊಟ್ಟವನಿಗೊಂದು thanks ಹೇಳಿ. ಬಸ್ಸಿಗಿಂತ ರೈಲು ಪ್ರಯಾಣ ಬಲು ಮಜಾ!

ಮಲ್ಲಿಕಾಜು೯ನ ತಿಪ್ಪಾರ said...

Nice joman... Tumba chennagide.. Ninna baravanige tumab kakkulaati ide joman

Jagali bhaagavata said...

ಜೋಮನ್ನರೇ,

ಕದ್ದಿದ್ದು ಅನ್ನೋ ಬದ್ಲು, ಅದ್ನ ಎಲ್ಲಿಂದ, ಯಾವ ಕೊಂಡಿಯಿಂದ ಎಗರಿಸಿದ್ರಿ ಅಂತ ಬರೆಯಿರಿ. ಅಷ್ಟು ಸಾಕು

ಕಾರ್ತಿಕ್ ಪರಾಡ್ಕರ್ said...

ಚೆನ್ನಾಗಿದೆ ಬರಹ

ಚರಿತಾ said...

ಏನ್ರಿ..ಎಷ್ಟ್ ಚೆನ್ನಾಗ್ ಬರಿತೀರಿ..!
ಹೊಟ್ಟೆಕಿಚ್ಚಾಗುತ್ತೆ...:)

Anonymous said...

ಜೋಮನ್ ನೀನು ಏನೇ ಬರೆದರೂ ತುಂಬಾ ಪ್ರೀತಿಯಿಂದ ಬರೆಯುತ್ತೀಯಾ, ತುಂಬಾ ಚೆನ್ನಾಗಿ ಬರೆಯುತ್ತೀಯಾ, ಇಲ್ಲಿನ ಪ್ರತಿ ಬರಹಗಳು ಕೇವಲ ಬರಹಗಳಾಗಿರದೆ ಅದರೊಳಗೆ ನಿನ್ನೊಳಗಿನ ಜೀವನಪ್ರೀತಿ ಮತ್ತು ಸ್ವಚ್ಛ ಮನಸ್ಸು ಮಾತನಾಡುತ್ತದೆ. ಹಾಗಾಗಿ ನಿನ್ನ ಲೇಖನಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಓದಿ ನಂತರ ತುಂಬಾ ದಿನಗಳ ಕಾಲ ಅದು ಕಾಡುತ್ತಿರುತ್ತದೆ. ಚರಿತ ಹೇಳಿದಂತೆ ನನಗೂ ನಿನ್ನ ಮೇಲೆ ಹೊಟ್ಟೆಕಿಚ್ಚಾಗುತ್ತದೆ.

- ಪ್ರೀತಿ

jomon varghese said...

@ ಶಿವು,
ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ಈ ಬಾರಿ ಕ್ಯಾಮರಾ ಮರೆತು ಹೋಗಿದ್ದೆ ಕಣ್ರಿ. ಒಂದೊಳ್ಳೆ ನುಡಿಚಿತ್ರ ಮಾಡುವ ಅವಕಾಶ ಕೈತಪ್ಪಿಹೋಯಿತು.

@ಮಲ್ಲಿ,
ನನ್ನ ಬರವಣಿಗೆಗಿಂತ ನಿಮ್ಮ ಪ್ರತಿಕ್ರಿಯೆಯಲ್ಲಿ ತುಂಬಾ ಪ್ರೀತಿ ಇದೆ. ಧನ್ಯವಾದಗಳು.

@ ಭಾಗವತರು
ಭಾಗವತರೇ ನಿಮ್ಮ ಕಣ್ಣಿಗೆ ಇಂತಹದೇ ವಿಷಯಗಳು ಯಾಕೆ ಬೀಳುತ್ತದೆ ಅಂತ. ಜಗಲಿಯಿಂದ ಜಿಗಿದು ಅಂಗಳಕ್ಕೆ ಬನ್ನಿ. ಪ್ರತಿಕ್ರಿಯಿಸಿದ್ದು ನೋಡಿ ಖುಷಿಯಾಯಿತು.

@ ಕಾರ್ತಿಕ್
ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದ. ಆಗಾಗ್ಗ ಬರುತ್ತಲಿರಿ.

@ ಚರಿತಾ,
ನೀವು ಇಷ್ಟು ಒಳ್ಳೆಯ ಹೊಟ್ಟೆಕಿಚ್ಚನ್ನು ನನ್ನ ಮೇಲೆ ಎಷ್ಟು ಬೇಕಾದರೂ ಇಟ್ಟುಕೊಳ್ಳಬಹುದು. ಬದಲಿಗೆ ನಾನು ಸ್ವಲ್ಪವೂ ಹೊಟ್ಟೆಕಿಚ್ಚು ಪಡೆದೆ, ಬೇಸರವಾಗದೆ, ಇನ್ನಷ್ಟು ಪ್ರೀತಿಯಿಂದ ಲೇಖನ ಬರೆಯುತ್ತೇನೆ. ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್!

@ ಪ್ರೀತಿ
ಅನಾಮಿಕರಾದ ಪ್ರೀತಿ ಮಳೆಹನಿಗೆ ಸ್ವಾಗತ.
ನನ್ನ ಈ ಲೇಖನಕ್ಕಿಂತ ನಿಮ್ಮ ಈ ಪ್ರತಿಕ್ರಿಯೆಯೆ ತುಂಬಾ ಚೆನ್ನಾಗಿದೆ. ನಿಮ್ಮ ಹೆಸರಿಗೆ ತಕ್ಕಂತೆ ನೀವು ಒಳ್ಳೆಯದನ್ನು ಸ್ವಚ್ಛ ಮನಸ್ಸಿನಿಂದ ಪ್ರೀತಿಸುವಿರಿ. ಹಾಗಾಗಿ ನಾನು ಬರೆದ ಈ ಲೇಖನವೂ ನಿಮಗೆ ಅಪ್ಯಾಯಮಾನವಾಗಿ ಕಂಡಿರಬೇಕು. ನಿಮ್ಮ ಒಳ್ಳೆಯ ಹೊಟ್ಟೆಕಿಚ್ಚು ಹೀಗೆಯೇ ಮುಂದುವರಿಯಲಿ ಎನ್ನುವುದು ನನ್ನ ಆಸೆ ಮತ್ತು ಪ್ರೀತಿ.

Anonymous said...

jomon superb, chennaagi barediddira. ur lovely frnd

Anonymous said...

ನಿನ್ನ ಮಳೆಹನಿ ಮಲ್ಲಿಗೆ ಹೀಗೆ ಯಾವಾಗಲೂ ಪಸರಿಸುತ್ತಿರಲಿ. ಬರಹ ಮಲ್ಲಿಗೆಯಂತೆ ಘಮ ಘಮವಾಗಿತ್ತು.
ಬ್ರಹ್ಮಾನಂದ್ ಹಡಗಲಿ

shashimysooru said...

ಸರಳತೆಯೇ ನಿಮ್ಮ ಬರವಣಿಗೆಯ ವೈಶಿಷ್ಟ್ಯತೆ. ಅದು ನಮ್ಮ ಮೈಸೂರು ಮಲ್ಲಿಗೆಯಂತೆ ನಿನ್ನ ಬರವಣಿಗೆಯಲ್ಲಿ ಸದಾ ಘಮಘಮಿಸುತ್ತದೆ.

ಪ್ರೀತಿಯಿಂದ,
ಶಶಿ

Anonymous said...

nimma lekana tumba chennagide guru. malligeya parimala heege pasarisuttirali. best of luck

Jagali bhaagavata said...

ತಮಾಷೆಗೆ ಹೇಳಿದ್ದಲ್ರೀ, ಜೋಮನ್ನರೇ. ನಿಮ್ಮ ಕಿವಿಹಿಂಡಿ ಹೇಳ್ತಿದ್ದೇನೆ :-) ಇಂಥ ಲಿಂಕು ಅಂತ ಬರೆಯಿರಿ. ಪಾಪ ಪರಿಹಾರವಾಗತ್ತೆ:-))

Anonymous said...

ಜೋಮನ್,
ಚನಾಗಿದೆ ಲೇಖನ. ಭಾಗವತ್ರ್ ಜತೆ ಮೊದಲನೇ ಸಾರಿ ಅಗ್ರೀಯಿಸಿ ನಿಮ್ಮ ಕಿವಿಹಿಂಡುತ್ತ ಇದೇನೆ - ಸೋರ್ಸ್ ಲಿಂಕನ್ನ ವೆಬ್ ಪತ್ರಕರ್ತರಾದ ನೀವು ಜವಾಬ್ದಾರಿಯಿಂದ ಕೊಡಬೇಕು. ಅಕ್ಕರೆಯಿಂದ ಹೇಳುತ್ತಿದೇನೆ.ಬೇಸರಿಸಬೇಡಿ.
-ಟೀನಾ

sapna said...

ಜೋಮನ್ ಅವ್ರೇ ನಿಮ್ಮ ಬರಹ ಚೆನ್ನಾಗಿತ್ತು. ನಿಮ್ ಥರಾ ಮನೆಯಲ್ಲಿ ಹಬ್ಬದ ಸವಿ ಸವಿಯುವ ವಂಚಿತರ ಸಾಲಿಗೆ ನಾನೂ ಇದ್ದೀನಿ. ಮನೆಯಲ್ಲಿ ಹಬ್ಬದೂಟ ಸವಿಯುತ್ತಾ ಅದರ ಸಂಭ್ರಮದಲ್ಲಿ ಭಾಗಿಯಾಗೋದೇ ಒಂದು ಚಂದ ಬಿಡಿ. ಒಂದೇ ಬರಹದಲ್ಲಿ ಹಬ್ಬ, ಹೂವಿನ ಘಮ, ಫಜೀತಿ ಪ್ರಯಾಣದ ಚಿತ್ರಣ ಕೊಟ್ಟಿದ್ದೀರ. ತುಂಬ ಚೆನ್ನಾಗಿತ್ತು.

Jagali bhaagavata said...

ನಿಮ್ಮನ್ನು ’ಒದ್ದು’ ಓಡಿಸುವ ಕಾರ್ಯಕ್ರಮವನ್ನು ವೈಭವೋಪೇತವಾಗಿ ಆಚರಿಸೋಣವಂತೆ, ಅದಕ್ಕೇನು? :-) ಸೂಕ್ತ ಸಮಯದಲ್ಲಿ ಜಗಲಿಯಲ್ಲಿ ದಿನಾಂಕ ಮತ್ತು ಕಾರ್ಯಕ್ರಮದ ವಿವರವನ್ನು ಪ್ರಕಟಿಸಲಾಗುವುದು. ಯಾರಿಂದ ನಿಮಗೆ ಒದೆಸಿಕೊಳ್ಳಬೇಕು ಎಂದು ನಿಮ್ಮ ಕೊನೆಯ ಆಸೆಯನ್ನು ತಿಳಿಸಿದರೆ ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಲು ಅನುಕೂಲವಾಗುತ್ತದೆ :-)

ಜೋಮನ್ನರೇ, ಏನಿದು? ಅಕ್ಕರೆಯಿಂದ ಹೇಳಿದ್ದನ್ನು ’ಹೃದಯ’ಕ್ಕೇ ತೆಗೆದುಕೊಂಡರೆ ಹೇಗೆ? :-) ನಿಮ್ಮ ಮೇಲಿನ ಅಭಿಮಾನದಿಂದ ಬರೆದಿದ್ದು. ಹೋಗಲಿ ಬಿಡಿ, ಇನ್ನು ಮುಂದೆ ಹೀಗೆ ಬರೆಯುವುದಿಲ್ಲ.

ನಿಮ್ಮನ್ನು ಯಾರು, ಏಕೆ, ಹೇಗೆ ಒದ್ದು ಓಡಿಸುತ್ತಾರೆ? ಸಂದರ್ಭ ಸಹಿತ ವಿವರಿಸಿ (೫ ಅಂಕಗಳು) :-). ಯಾರಾದರೂ ಓಡಿಸಲು ಬಂದರೆ ನನಗೆ ತಿಳಿಸಿ. ನಿಮ್ಮ ಜೊತೆ ಇದ್ದೇನೆ ನಾನು. ನೋಡಿಯೇ ಬಿಡುವ ಒಂದು ಕೈ, ಏನಾಗುತ್ತೆ ಅಂತ :-)

jomon varghese said...

@ ಅನಾಮಿಕ
ನನ್ನ ಗೆಳೆಯ ಎಂದು ಹೇಳಿ, ಹೆಸರು ಬರೆಯದೆ ನನಗೂ ಅನಾಮಿಕರಾಗಿ ಉಳಿದಿರುವ ನಿಮಗೆ ಧನ್ಯವಾದಳು. ಮಳೆಹನಿಗೆ ಸ್ವಾಗತ. ಮುಂದಿನ ಸಲ ಬಂದಾಗ ಹೆಸರು ತಿಳಿಸಿ.

ಬಹ್ಮ
ಹಡಗಲಿಯವರಿಗೆ ಧನ್ಯವಾದಗಳು.

ಶಶಿಕುಮಾರ್
ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು.

ಸೋಮನಗೌಡ
ಗೌಡರಿಗೆ ಧನ್ಯವಾದ

ಸಪ್ನ
ಮಳೆಹನಿಗೆ ಸ್ವಾಗತ. ನಿಮ್ಮ ಚೆಂದದ ಪ್ರತಿಕ್ರಿಯೆಗೆ ಧನ್ಯವಾದ. ಆಗಾಗ್ಗ ಬರುತ್ತಲಿರಿ.

ಜಗಲಿ ಭಾಗವತರು
ಭಾಗವತರೇ ನಾನು ಯಾವುದನ್ನೂ ಹೃದಯಕ್ಕೆ ತೆಗೆದುಕೊಂಡಿಲ್ಲ. ನೀವು ಚಿಂತೆ ಬಿಡಿ. ಇನ್ನು ಮುಂದೆಯೂ ಧಾರಾಳವಾಗಿ ನನ್ನ ಕೈಯೋ, ಕಾಲೋ ಎಳೆಯಬಹುದು. ಜಗಲಿಯಲ್ಲಿ ಬೇಗ ಒದೆಯುವ ಸ್ವರ್ಧೆಯ ದಿನಾಂಕ ಪ್ರಕಟಿಸಿ, ಅಬ್ಯರ್ಥಿಗಳ ಪಟ್ಟಿಯನ್ನು ನನಗೆ ಕಳುಹಿಸಿಕೊಡಿ. ನಾನು ಆಯ್ಕೆ ಮಾಡಿ ತಿಳಿಸುತ್ತೇನೆ.

ಟೀನಾ ಮೇಡಂ
ಮಳೆಹನಿಗೆ ಸ್ವಾಗತ. ಬೇಜಾರೇನಿಲ್ಲ ಕಣ್ರಿ. ಚಿತ್ರದ ಕೊಂಡಿ ಕೊಟ್ಟು ನಿಮಗೊಂದು ಕೆಲಸ ಕೊಟ್ಟಿದ್ದೇನೆ. ನಿಜವಾದ ಲಿಂಕ್ ನನಗೂ ಹುಡುಕಿಕೊಡಿ.

ಚಿತ್ರಾ ಸಂತೋಷ್ said...

ನೀವು ಪಕ್ಕಾ ಕಳ್ಳರೇ..ನನ್ನ ಚಾಟ್ ಬಾಕ್ಸ್ ನಲ್ಲಿ ಹಾಕಿದ್ದ ಸ್ಟೇಟಸ್ ಮೆಸೇಜ್ ತೆಗೆದು ನಿಮ್ಮ ಲೇಖನಕ್ಕೆ ಹೆಡ್ಡಿಂಗ್ ಕೊಡ್ಡಿದ್ದೀರಲ್ಲಾ..! ಮತ್ತೆ ಮೊನ್ನೆ ಭಾಗವತರು ನಾನು ಮಹಿಳಾ ವಿಶೇಷ ಬಸ್ಸು ಫೋಟೋ ಹಾಕಿದ್ದಕ್ಕೆ ಕ್ಲಾಸು ತೆಕೊಂಡಿದ್ದಾರೆ ಮಾರಾಯ. ಭಾರೀ ಡೇಂಜರ್ರು..ನಾನು ಕದ್ದಿದ್ದು ಅಲ್ಲಾ. ಯಾರೋ ಫಾರ್ವರ್ಡ್ ಮಾಡಿದ್ದು. ಅಂದಹಾಗೇ ಅದೇನು ಅತೀಂದ್ರೀಯ ಪ್ರೇರಣೆ..ನೀವು ಸ್ವಾಮೀಜಿ ಎಲ್ಲಾ ಆಗಿಬಿಡ್ರೆ ಕಷ್ಟ. ಏನೇ ಆಗ್ಲಿ..ಒಳ್ಳೆ ಬರಹ ಉಣಬಡಿಸಿದ್ದೀರಿ.
-ಚಿತ್ರಾ

Jagali bhaagavata said...

ಜೋಮನ್ನರೇ,

ನೀವು ಈ ರೀತಿ ಚಿಂತಾಕ್ರಾಂತರಾಗಿ ಕೈಕಟ್ಟಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಈ ಕೂಡಲೇ ಈಗಿನ ಚಿತ್ರವನ್ನು ತೆಗೆದು, ನೀವು ಕೊಟ್ಟಿರುವ ಕೊಂಡಿಯಿಂದಲೇ ಇನ್ನೊಂದು ಒಪ್ಪುವಂಥ ಚಿತ್ರವನ್ನು ಹಾಕಿರಿ. ನಿಮ್ಮ ಸಮಸ್ಯೆಯು ಬಗೆಹರಿಯುತ್ತದಲ್ಲಾ? ಇಗೋ, ಇನ್ನೂ ಸಮಸ್ಯೆಯು ಕಾಡಿದರೆ ’ಓಂ ಶ್ರೀ ಜಗಲಿ ಭಾಗವತಾಯ ನಮಃ’ ಎಂದು ಪುಣ್ಯನಾಮ ಸ್ಮರಣೆಯನ್ನು ಮಾಡಿ. ನಿಮ್ಮ ಕ್ಲೇಶಗಳೆಲ್ಲವೂ ಪರಿಹಾರವಾಗುವುದು. ಮಂಗಳವಾಗಲಿ.

@ಚಿತ್ರಾ,
’ಭಾರೀ ಡೇಂಜರ್ರು’..
...ಛೇ, ಛೇ...ಏನಪ್ಪ, ಈಗಿನ ಕಾಲದ ಹುಡ್ಗಹುಡ್ಗೀರು.....ದೊಡ್ಡವ್ರ ಮಾತು ಕೇಳೊದೇ ಇಲ್ಲ ಅಂತಾರಲ್ಲ .. :-))

Anonymous said...

nice one...
anada haage kuTTi kundaaprakke hoda kathe nimkadenoo heltaara?

Naveen said...

Very nice .....

naveenboosnur@gmail.com