Sunday, 2 December, 2007

ಕಾಡು ಸೇರಿದ ಸದಾನಂದನ ಹಾಡು ಪಾಡು
ಸಾಗರದಿಂದ ಕೋಗಾರ್ ಘಾಟಿಯ ಅಷ್ಟಾವಕ್ರ ತಿರುವುಗಳನ್ನು ಇಳಿದು ಬರುವಾಗ ಮೈಯಳ್ಳಿ ಎನ್ನುವ ಗುಡ್ಡ ಎದುರಾಗುತ್ತದೆ. ದೂರದಿಂದ ನೋಡಿದರೆ ಬಾಂಡ್ಲಿ ತಲೆಯಂತೆ ನುಣ್ಣಗೆ ಕಾಣುವ ಈ ಗುಡ್ಡ ಸುಮಾರು ಎರಡು ನೂರು ಏಕರೆ ಹುಲ್ಲುಗಾವಲು ಪ್ರದೇಶವನ್ನು ಒಳಗೊಂಡಿದೆ. ಈ ಮೈಯಳ್ಳಿ ಗುಡ್ಡವನ್ನು ಏರಿ 8 ಕಿ.ಮಿ. ಕಾಡಿನ ದಾರಿಯಲ್ಲಿ ನಡೆದರೆ ದಕ್ಷಿಣಕ್ಕೆ ಮತ್ತೊಂದು ಹುಲ್ಲುಗಾವಲು ಪ್ರದೇಶ ಎದುರಾಗುತ್ತದೆ. ಇದನ್ನು "ಸದಾನಂದನ ಗುಡ್ಡ" ಎಂದು ಕರೆಯುತ್ತಾರೆ. ಸದಾನಂದನೇ ಈ ಲೇಖನದ ಪ್ರಮುಖ ವ್ಯಕ್ತಿ. ನಾಗರಿಕ ಜಗತ್ತಿನೊಂದಿಗೆ ಯಾವುದೇ ಸಂಪರ್ಕವಿಲ್ಲದೆ ನಿಭಿಡಾರಣ್ಯದಲ್ಲಿ ಮನೆಮಾಡಿಕೊಂಡು ಸ್ನಿತಪ್ರಜ್ಞನಂತೆ ಬದುಕುತ್ತಿರುವ ಸದಾನಂದನ ಬದುಕು ರೋಚಕ, ವೈವಿಧ್ಯಮಯ.


ಹಾಗೆ ನೋಡಿದರೆ ಸದಾನಂದ ದೈಹಿಕವಾಗಿ ಗಟ್ಟಿಮುಟ್ಟಾದ ಆಳೇನೂ ಅಲ್ಲ. ಬಾಲಮಂಗಳ ಕಥೆಯಲ್ಲಿ ಬರುವ ಲಂಬೋದರನಂತೆ ಕಾಣುವ ಈ ಸದಾನಂದ, ತನ್ನ ಗುಂಗುರು ಕೂದಲನ್ನು ನೀಟಾಗಿ ಬಾಚಿಕೊಂಡು ಕ್ಲೀನ್ ಶೇವ್ ಮಾಡಿ, ಜೀನ್ಸ್ ಪ್ಯಾಂಟ್, ಟಿ ಶರ್ಟ್ ಹಾಕಿಕೊಂಡು ಒಮ್ಮೊಮ್ಮೆ ಗುಡ್ಡದ ತುದಿಗೆ ನಿಂತು ತನ್ನಷ್ಟಕ್ಕೆ ಹಾಡುತ್ತಾನೆ. ಬೇಸರವಾದರೆ ದಿನಗಟ್ಟಲೆ ಮೌನಿಯಾಗಿ ಉಳಿದುಬಿಡುತ್ತಾನೆ. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜದೊಡೆಯಂತಯ್ಯಾ" ಎನ್ನುವಂತೆ, ಪಶ್ಚಿಮ ಘಟ್ಟದ ನಿಭಿಡಾರಣ್ಯದೊಳಗೆ, ತನ್ನ ಮನೆಯಂಗಳದಲ್ಲೂಂದು ಮಂಚ ಹಾಸಿ,
ಒಂದಿಷ್ಟು ಇಂಗ್ಲೀಷ್ ದಿನಪತ್ರಿಕೆ, ಮ್ಯಾಗ್‌ಜಿನ್‌ಗಳನ್ನು ಹರಡಿಕೊಂಡು ಆಧುನಿಕ ಜಗತ್ತಿನ ವೇಗವನ್ನು ತನ್ನ ಮೊನುಚು ಕಣ್ಣುಗಳಲ್ಲಿ ಧ್ಯಾನಿಸುತ್ತಾ ಕುಳಿತು ಬಿಡುತ್ತಾನೆ.


ಇಂತಹ ವಿಚಿತ್ರ ವ್ಯಕ್ತಿತ್ವದ ಸದಾನಂದನ ಕುರಿತು ಗುಡ್ಡದ ಕೆಳಗಿನ ಕೋಗಾರು, ಕ್ಯಾದಿಗೋಡು, ಹೆರೋಡಿ, ಕಲ್ಕೇರಿ, ನಾಗವಳ್ಳಿ ಗ್ರಾಮಸ್ಥರಲ್ಲಿ ಒಂದು ವಿಚಿತ್ರ ಕುತೂಹಲ ಇದೆ. ಕೆಲವರು ಸದಾನಂದನನ್ನು ಮಾನಸಿಕ ಅಸ್ವಸ್ಥ ವ್ಯಕ್ತಿ ಎನ್ನುತ್ತಾರೆ. ಇನ್ನು ಕೆಲವರು ಆತ ತುಂಬಾ ಓದಿರುವುದರಿಂದ ಈ ರೀತಿ ತಲೆ ಕೆಟ್ಟಿದೆ ಎನ್ನುತ್ತಾರೆ. ಆರ್ಥಿಕವಾಗಿ ಉತ್ತಮ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಆತನಿಗೆ ಈ ಕಾಡಿನಲ್ಲಿ ಮನೆ ಮಾಡಿಕೊಂಡಿರುವ ಅಗತ್ಯವಾದರೂ ಏನು ಎನ್ನುವುದು ಅನೇಕರ ಪ್ರಶ್ನೆ. ಇಷ್ಟೇ ಆಗಿದ್ದರೆ ಸದಾನಂದನ ಬಗ್ಗೆ ಕುತೂಹಲ ಇಲ್ಲಿಗೆ ಮುಗಿದು ಹೋಗುತ್ತಿತ್ತು. ಆದರೆ ತನ್ನ ಪೂರ್ವಾಪರ ಹುಡುಕಲು ತವಕಿಸುವ ಎಲ್ಲರಲ್ಲಿಯೂ ಒಂದು ಪ್ರಶ್ನಾರ್ಥಕ ಚಿನ್ಹೆ ಹುಟ್ಟುಹಾಕುತ್ತಾ ಹೋಗುವ ಸದಾನಂದನ ಮತ್ತೊಂದು ಪ್ಲಾಶ್ ಬ್ಯಾಕ್ ನಿಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.


ನಮ್ಮ ಕಥಾಪುರುಷ ಸದಾನಂದ, 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾವಂತ ವಿದ್ಯಾರ್ಥಿ. ಓದುತ್ತಿರುವಾಗಲೇ ಪ್ರಕೃತಿ ಮತ್ತು ನಿಭಿಡಾರಣ್ಯಗಳ ಬಗ್ಗೆ ವಿಚಿತ್ರ ಕುತೂಹಲ ಬೆಳೆಸಿಕೊಂಡಿದ್ದ ಈತ, ಓದಿನ ನಂತರ, ದಟ್ಟ ಅರಣ್ಯದ ನಡುವೆ ಮನೆ ಮಾಡಿಕೊಂಡು ನಾಗರಿಕ ಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ಉಳಿದುಬಿಡಬೇಕೆಂಬ ನಿರ್ಧಾರಕ್ಕೆ ಬಂದಿದ್ದ. ಈ ಹುಚ್ಚಿಗೆ ಬಿದ್ದಿದ್ದರಿಂದಲೇ ಸೌದಿ ಅರೇಬಿಯಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ, ಒಂದು ಮುಂಜಾನೆ ಯಾರಿಗೂ ಹೇಳದೇ ಕೇಳದೆ ಭಟ್ಕಳದಲ್ಲಿರುವ ತನ್ನ ಮನೆಗೆ ಮರಳಿ ಬಂದಿದ್ದ. ಸದಾನಂದನ ವಿಚಿತ್ರ ಅರಣ್ಯ ಪ್ರೇಮವನ್ನು ನೋಡಿದ ನೋಡಿ, ಆತನ ತಂದೆ ತಾಯಿ, ಸಹೋದರರು ಬುದ್ಧಿವಾದ ಹೇಳಿದರೂ, ಆತ ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ಬರೆದು, ಇನ್ನೇನು ಬೆರಳ ತುದಿಯಲ್ಲಿ ಲಭಿಸುತ್ತಿದ್ದ ಜಿಲ್ಲಾಧಿಕಾರಿ ಹುದ್ದೆಯನ್ನು ತ್ಯಜಿಸಿ ಬಂದವನಿಗೆ ಮನೆಯವರು ಹೇಳುವುದೇನೂ ಬಾಕಿ ಉಳಿದಿರಲಿಲ್ಲ. "ಸರಿ ನಿನ್ನಿಷ್ಟದಂತೆ ಇದ್ದು ಬಿಡು" ಎಂದು ಕೈಬಿಟ್ಟಿದ್ದರು.


ಕುಟುಂಬದ ಸಂಬಂಧವನ್ನು ಕಡಿದುಕೊಂಡು ಭಟ್ಕಳ, ಸಾಗರ, ಹೊನ್ನಾವರ, ಕುಮಟಾ, ಯಲ್ಲಾಪುರ ಮುಂತಾದ ಪ್ರದೇಶಗಳ ಅಂಚಿನಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ತನ್ನ ವಾಸಸ್ಥಾನವನ್ನು ಅರಸುತ್ತಾ ಐದು ವರ್ಷಗಳ ಕಾಲ ಮತಿಗೆಟ್ಟ ಸನ್ಯಾಸಿಯಂತೆ ಅಲೆದ ಸದಾನಂದ, ಕೊನೆಗೆ ಆಯ್ಕೆ
ಮಾಡಿಕೊಂಡಿದ್ದು, ಮೈಯಳ್ಳಿ ಗುಡ್ಡದ ದಕ್ಷಿಣಕ್ಕಿರುವ ಈ ಅನಾಮಧೇಯ ಗುಡ್ಡವನ್ನು. ಹೆಸರಿಲ್ಲದ ಈ ಗುಡ್ಡವನ್ನು ಇಲ್ಲಿನ ಗ್ರಾಮಸ್ಥರು ಈಗ "ಸದಾನಂದನ ಗುಡ್ಡ" ಎಂದು ಕರೆಯುತ್ತಾರೆ. ಇಂತಹ ವಿಚಿತ್ರ ವ್ಯಕ್ತಿತ್ವದ ಸದಾನಂದನನ್ನು ಮಾತನಾಡಿಸಲು ಯಾರಿಗಾದರೂ ತುಸು ಹೆದರಿಕೆಯೇ. ಆತನ ವೇಷಭೂಷಣ, ಬದುಕಿನ ಬಗ್ಗೆ ಸ್ವಲ್ಪ ವೆಂಗ್ಯಭಾವ ವ್ಯಕ್ತಪಡಿಸಿದರೂ ಸಾಕು, ಉಗ್ರಾವತಾರ ತಾಳಿಬಿಡುತ್ತಾನೆ. ಎದುರಿಗಿರುವ ವ್ಯಕ್ತಿಯ ಜಂಘಾಬಲವೇ ಉಡುಗಿ ಹೋಗುವಂತೆ ಬೈದುಬಿಡುತ್ತಾನೆ. ಹಾಗಾಗಿ ಆತನಿಗೆ ಸಾರ್ವಜನಿಕ ಸಂಪರ್ಕ ತುಂಬಾ ಕಡಿಮೆ. ಸದಾ ಅಂರ್ತಮುಖಿಯಾಗಿರುವ ಆತ, ಸಾಮಾನ್ಯವಾಗಿ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ನಾಲ್ಕೈದು ತಿಂಗಳಿಗೊಮ್ಮೆ ಗುಡ್ಡ ಇಳಿದು, ಭಟ್ಕಳದಲ್ಲಿರುವ ತನ್ನ ಮನೆಯ ಬಾಡಿಗೆ ವಸೂಲಿ ಮಾಡಿಕೊಂಡು ದಿನಸಿ ಸಮಾನುಗಳನ್ನು ಖರೀದಿಸಿ ತನ್ನ ಅರಣ್ಯವಾಸಕ್ಕೆ ಮರಳುತ್ತಾನೆ.


ಸದಾನಂದ ಈ ಗುಡ್ಡದಲ್ಲಿ ತಳವೂರಿ ಇದೀಗ 15 ವರ್ಷಗಳು ಕಳೆದಿವೆ. ನೂರಿನ್ನೂರು ಅಡಿಕೆ ಗಿಡ ಹಾಗೂ, ಪೇರು ಮಾವಿನ ಸಸಿಗಳನ್ನು ಕೃಷಿ ಮಾಡಿದ್ದಾನೆ. ಮನೆಯಂಗಳದಲ್ಲಿ ಪುಟ್ಟದೊಂದು ನಿಂಬೆ ತೋಟವಿದೆ. ನಮ್ಮೂರಿನಿಂದ ಈ ಸದಾನಂದನ ಮನೆ ತಲುಪಲು ಕಾಡಿನ ಒಳದಾರಿಯಲ್ಲಿ ಎಂಟು ಕಿಮಿ ನಡೆದರೆ ಸಾಕು. ಹುಲ್ಲುಗಾವಲು ಪ್ರದೇಶಕ್ಕೆ ಆಗಾಗ್ಗ ಶಿಕಾರಿಗೆಂದು ಗ್ರಾಮಸ್ಥರು ಹೋಗಿ ಬರುವುದರಿಂದ ಕಾಡಿನಲ್ಲಿ ಅಲ್ಲಲ್ಲಿ ದಾರಿಗಳಿವೆ. ಏನೇ ಆಗಲಿ ಈ ಬಾರಿ ಊರಿಗೆ ಹೋದಾಗ ಸದಾನಂದನನ್ನು ಮಾತನಾಡಿಸಿಕೊಂಡು ಬರುವ ನಿರ್ಧಾರ ಕೈಗೊಂಡಿದ್ದೆ. ಒಂದು ಭಾನುವಾರ ಒಂದಿಬ್ಬರು ಸ್ಥಳೀಯ ಸ್ನೇಹಿತರೊಂದಿಗೆ ಗುಡ್ಡ ಹತ್ತಿ ಸದಾನಂದನ ಮನೆಯಂಗಳ ತಲುಪಿದೆವು. ಸದಾನಂದನ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನಿರೀಕ್ಷಿಸುತ್ತಿದ್ದ ನಮಗೆ ನಿರಾಸೆ ಕಾದಿತ್ತು. ಕಾಡಿನಲ್ಲಿರುವ ನೀರಿನ ಒರತೆಯೊಂದರಿಂದ ಪೈಪಿನ ಮೂಲಕ ನೀರು ಹಾಯಿಸಲು ಆತ ಹೋಗಿದ್ದ.


ಸರಿ, ಆತ ಬರುವವರೆಗೆ ಕಾಯುವುದೆಂದು ಕುಳಿತೆವು. ಅಂದಹಾಗೆ ಆತನ ಹೆಂಡತಿಯ ಬಗ್ಗೆ ಹೇಳಲಿಲ್ಲವಲ್ಲಾ? ತನ್ನ ತೋಟದ ಕೆಲಸಕ್ಕಾಗಿ ಕರೆತಂದ ಮೇಘಾನಿ ಗುಡ್ಡದ ಮರಾಠಿ (ಕುಣಬಿ ಸಮುದಾಯದಂತೆ ಇವರದೂ ಒಂದು ಬುಡಕಟ್ಟು ಸಮುದಾಯ) ಹೆಂಗಸೊಬ್ಬಳನ್ನು ಸದಾನಂದ
ಮದುವೆಯಾಗಿದ್ದಾನೆ. ಆತನಿಗೊಂದು ಮಗುವೂ ಇದೆ. ಮನೆಗೆ ಬಂದ ಅಪರಿಚಿತ ಅತಿಥಿಗಳನ್ನು ಬೆರಗುಗಣ್ಣಿನಿಂದಲೇ ಸ್ವಾಗತಿಸಿದ ಆಕೆ, ಚಹಾ, ಬಿಸ್ಕತ್ತುಗಳನ್ನು ತಂದು ಎದುರಿಗಿರಿಸಿದಾಗ ಬೆರಗಾಗುವ ಸರದಿ ನಮ್ಮದು. ಕೈಯಲ್ಲಿರುವ ಮೊಬೈಲನ್ನು ತೆಗೆದು, ಈ ಗುಡ್ಡದಲ್ಲಿ ನೆಟ್‌ವರ್ಕ್
ಬರುತ್ತದೆಯಾ ಎಂದು ಪರಿಶೀಲಿಸುತ್ತಿರುವಾಗ " ಇಲ್ಲಿ ಟಾಟಾ ಇಂಡಿಕಾಮ್ ಮಾತ್ರ ಬರುತ್ತದೆ, ಹಚ್, ಏರ್‌ಟಲ್ ಬರುವುದಿಲ್ಲ. ನಮ್ಮ ಯಜಮಾನರ ಹತ್ತಿರವೂ ಮೊಬೈಲ್ ಇದೆ" ಎನ್ನಬೇಕೇ? ನನಗಂತೂ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದ ಅನುಭವ. ಶಾಲೆಯ ಮೆಟ್ಟಿಲನ್ನೂ ಹತ್ತಿಲ್ಲದ ಈ ಹೆಂಗಸು, ಇಂತಹ ನಿಭಿಡಾರಣ್ಯದೊಳಗಿದ್ದುಕೊಂಡು ಆಧುನಿಕ ಸಂವಹನದ ಬಗ್ಗೆ ಮಾತನಾಡುತ್ತಿದ್ದಾಳಲ್ಲಾ? ಆ ಕ್ಷಣಕ್ಕೆ ಸದಾನಂದನ ಗುಡ್ಡ ಒಂದು ಪುಟ್ಟ ಜಾಗತಿಕ ಹಳ್ಳಿಯಂತೆ ಕಂಡುಬಂತು.


ಸುಮಾರು ಒಂದು ಗಂಟೆಯ ನಂತರ ಸದಾನಂದ ಬಂದರು. ಅಲ್ಲಿಯವರೆಗೆ ನರಿ ಊಳಿಡುವಂತೆ ಒಂದೇ ಸಮನೆ ಕೂಗುತ್ತಿದ್ದ ಆತನ ನಾಯಿ ತನ್ನ ಕರ್ತವ್ಯಕ್ಕೆ ಪುಲ್‌ಸ್ಟಾಪ್ ಹಾಕಿತ್ತು. ಹಣೆಯ ಮೇಲೊಂದು ಕುಂಕುಮ ತಿಲಕ, ಬಿಳಿಯ ಪಂಚೆಯ ಮೇಲೆ ಹಸಿರು ಶರ್ಟ್ ಹಾಕಿದ್ದ ಸದಾನಂದ,
ಜಾಗತೀಕರಣ ಹಾಗೂ ಪ್ರಕೃತಿಯ ನಡುವೆ ಸಿಲುಕಿ ಬಿದ್ದ ಅನಾಥ ಕೂಸಿನಂತೆ ಕಂಡರು. "ಇಂತಹ ನಿಭಿಡಾರಣ್ಯದಲ್ಲಿ ನನಗೆ ನೆಮ್ಮದಿ ಇದೆ. ಆದರೆ ಬದುಕು ದುಸ್ತರ" 15 ವರ್ಷಗಳ ಅರಣ್ಯವಾಸದ ನಂತರ ಇದೀಗ ಪಶ್ಚಾತಾಪ ಅನಿಸುತ್ತಿದೆ ಎಂದು ಕಳೆದುಹೋದ ತಮ್ಮ ಯೌವನವನ್ನು ಸ್ಮರಿಸಿಕೊಂಡರು. ಅವರು ಮಾತನಾಡುತ್ತಾ ಹೋದದ್ದನ್ನು ಮನಸ್ಸು ದಾಖಲಿಸುತ್ತಾ ಹೋಯಿತು. "ಯಾರಾದರೂ ಪಾರ್ಟಿ ಬಂದರೆ ಈ ಜಾಗವನ್ನು ಮಾರಬೇಕೆಂದಿದ್ದೇನೆ. ಇದಕ್ಕೆ ಪಟ್ಟಾ ಇಲ್ಲ. ರೆವನ್ಯೂ ಭೂಮಿ. ಇದನ್ನು ಕೊಳ್ಳಲು ನನ್ನಂತ ಮತ್ತೊಬ್ಬ ಹುಚ್ಚ ಬರಬೇಕು" ಎಂದು ತಾವೆ ಹೇಳಿ ತಾವೆ
ನಕ್ಕರು. ವರ್ಷಗಳ ಬಳಿಕ ತನ್ನ ಮನೆಗೆ ಆಗಮಿಸಿದ ಅತಿಥಿಯೊಬ್ಬರೊಂದಿಗೆ ಮನಸ್ಸು ತೆರೆದಿಟ್ಟ ಸಮಾಧಾನ ಅವರ ಮುಖದಲ್ಲಿ ಸ್ಷಷ್ಟವಾಗಿ ಗೋಚರಿಸುತ್ತಿತ್ತು.


ಸದಾನಂದ ಹೇಳಿದ್ದೆಲ್ಲವನ್ನೂ ಈ ಮೇಲೆ ಕಥೆಯಾಗಿ ದಾಖಲಿಸಿದ್ದೇನೆ. ಅಂದಹಾಗೆ ಈ ಸದಾನಂದನ ಸ್ವಂತ ಅಣ್ಣ ನಮ್ಮ ರಾಜ್ಯದ ಪ್ರಭಾವಿ ರಾಜಕಾರಿಣಿಗಳಲ್ಲಿ ಒಬ್ಬರು ಎಂದರೆ ನೀವು ನಂಬುತ್ತೀರಾ? ಹೀಗೆ ಕೆದಕುತ್ತಾ ಹೋದರೆ ಅಚ್ಚರಿಗಳ ನಡುವೆ ಬದುಕುತ್ತಿರುವ ಸದಾನಂದನ ಬಗ್ಗೆ ನೂರಾರು ವೈವಿಧ್ಯಮಯ ವಿಷಯಗಳು ಹೊರಗೆ ಬರುತ್ತವೆ. ಈಗ ಹೇಳಿ ಈತನನ್ನು ಮಾನಸಿಕ ಅಸ್ವಸ್ಥ ಎನ್ನಬೇಕೇ? ಅತಿ ಬುದ್ದಿವಂತ ಎನ್ನಬೇಕೇ? ಈ ವಿಚಾರ ನಿಮಗೆ ಬಿಟ್ಟದ್ದು. ಸದಾನಂದನ ಗುಡ್ಡ ಇಳಿದು ಊರು ಸೇರುವ ಹೊತ್ತಿಗೆ ಗಂಟೆ ರಾತ್ರಿ ಎಂಟಾಗಿತ್ತು. ಇಂಬಳಗಳು(ಜಿಗಣೆ) ಕಾಲಿನ ಸುತ್ತ ಕಚ್ಚಿಕೊಂಡು ರಕ್ತ ಹೀರಿದ್ದವು.

6 comments:

ಸಿಂಧು Sindhu said...

ಜೋಮನ್

ಆಸಕ್ತಿದಾಯಕವಾಗಿದೆ. ನೀವು ಬರೆದ ಹಾಗೆ ಅಚ್ಚರಿಗಳ ನಡುವೆಯೂ ಎದ್ದು ಕಾಣುವ ಅಚ್ಚರಿಯೇ? ಸದಾನಂದನ ಸೋಲು/ಗೆಲುವು ಅಥವಾ ಅವನ ನಿರ್ಧಾರದ ಗಟ್ಟಿತನವನ್ನು ದೂರದಿಂದ ನೋಡಿದ ನಾವು ಹೇಳಲು ಕಷ್ಟ. ಅನುಭವಿಸಿ ತಿಳಿದ ಜೀವ - ಅವರೇ - ಅಭಿವ್ಯಕ್ತಿಸಬೇಕು.

ಏನೋ ಇದು ಅಂತಹಾ ಸರಿಹೋಗಲಿಲ್ಲ ಅನ್ನುವ ಭಾವ ಇವತ್ತಿನ ಕ್ಷಣಕ್ಕೆ ಅನಿಸಿರಬಹುದು. ಮೊದಮೊದಲು ಬಂದು ಇದ್ದಾಗ ಅನುಭವಿಸಿದ್ದ ಕ್ಷಣಗಳ ತನ್ಮಯತೆ,ಇಷ್ಟ,ನೆಮ್ಮದಿಯನ್ನ ಯಾರು ಹೇಗೆ ಲೆಕ್ಕ ಹಾಕಲಾಗುತ್ತದೆ.? ಅಲ್ಲವಾ..

ಇಷ್ಟು ಆಸಕ್ತಿದಾಯಕವಾದ ಪೋಸ್ಟಿಂಗ್ ಕೊಟ್ಟಿದ್ದಕೆ ಧನ್ಯವಾದಗಳು. ನಿಮ್ಮ ಚಿತ್ರಹನಿಗಳೂ ತುಂಬ ಚೆನ್ನಾಗಿವೆ.

ಪ್ರೀತಿಯಿಂದ
ಸಿಂಧು

channu said...

mitra ninna lekjhan oodi tumba kushiyaytu... datta kananad madhye nigudhavagi tannaney baduku sagisuttiruv sadanand lekhan nijakku vismayakariyagide...

enthaha lekhanvnnu kananadind nadige muttisid ninage krutagnategalu....

Haaru Hakki said...

ಸದಾನಂದರ ಜೀವನ ಶೈಲಿ, ಅವರ ವ್ಯಕ್ತಿತ್ವ ಹಾಗೂ ಅವರ ಅರಣ್ಯವಾದಸದ ಪರಿಯನ್ನು ತುಂಬಾ ಚೆನ್ನಾಗಿ ಬಣ್ಣಿಸಿದ್ದೀರಾ ಜೋಮನ್. ಜೊತೆಗೆ ಅವರ ಕುರಿತು ನಿಮ್ಮ ಬ್ಲಾಗ್‌ನಲ್ಲಿ ಹಾಕಿ ಇಂತಹ ವ್ಯಕ್ತಿಯೊಬ್ಬರನ್ನು ಪರಿಚಯಿಸಿದ್ದೀರಿ ಅದಕ್ಕಾಗಿ ನಿಮಗೂ ಹಾಗೂ ನಿಮ್ಮ ಮಳೆಹನಿಗೂ ಒಂದು ಥ್ಯಾಂಕ್ಸ್.ಲೇಖನ ಮನಮುಟ್ಟುವಂತಿದ್ದು, ಸದಾನಂದನ ಬಗ್ಗೆ ನೂರಾರು ವೈವಿಧ್ಯಮಯ ವಿಷಯಗಳು ಹೊರಗೆ ಚೆಲ್ಲಿದ್ದೀರಿ. ಅವರ ಬಗ್ಗೆ ಇನ್ನೂ ಏನಾದ್ರೂ ಕೇಳಬೇಕೆಂಬ ಆಸೆಯಾಗುತ್ತಿದೆ. ಅವರ ಬಗ್ಗೆ ಇನ್ನೂ ಮಾಹಿತಿ ನೀಡಿದ್ರೆ ತುಂಬಾ ಚೆನ್ನಾಗಿ ಇರ್ತಿತ್ತು.ಎಲ್ಲಕ್ಕೂ ಮಿಗಿಲಾಗಿ ನೀವು ದಟ್ಟಡವಿಯ ಮಧ್ಯ ನಮ್ಮಂತಹ ಓದುಗರಿಗಾಗಿ ಎಂಟು ಕಿ.ಮೀ. ನಡೆದು, ಸದಾನಂದನ ಗುಡ್ಡವನ್ನೇರಿ, ಅವರಿಗಾಗಿ ಅಲ್ಲಿಯೇ ಕಾದು ಇಂತಹ ಒಂದು ಅದ್ಭುತ ಲೇಖನವನ್ನು ನೀಡಿದ್ದಕ್ಕೆ ನಿಮ್ಮನ್ನು ನಾನು ಮೆಚ್ಚಲೇಬೇಕು.

ರಾಜೇಶ್ ನಾಯ್ಕ said...

ಜೊಮೋನ್,
ಬಹಳ ಕುತೂಹಲದಿಂದ ಸದಾನಂದನ ಬಗ್ಗೆ ಓದಿದೆ. ಆತನ ಅರಣ್ಯ ಪ್ರೀತಿಗೆ ಏನು ಹೇಳಲಿ? ಉತ್ತಮ ಜೀವನ ಕಣ್ಮುಂದೆ ಇದ್ದಾಗ ಈ ತರಹ ಬಾಳನ್ನು ಆತ ಆಯ್ಕೆ ಮಾಡಿದ್ದಕ್ಕೆ ಬಹಳ ಗೊಂದಲಕ್ಕೀಡಾದೆ.
ತುಂಬಾ ಚೆನ್ನಾಗಿ ಬರೆದಿದ್ದೀರಾ. ಸದಾನಂದ ಮತ್ತು ಆತನ ಗುಡ್ಡವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಶಾಂತಲಾ ಭಂಡಿ said...

Jomon...
ಸದಾನಂದರ ಬಗ್ಗೆ ನಿಮ್ಮ ಪುಟಗಳಲ್ಲಿ ಜನತೆಗೆ ಪರಿಚಯಿಸಿದ ನಿಮ್ಮ ಯತ್ನ ಪ್ರಶಂಸನೀಯ.
ಸದಾನಂದರ ಬಗ್ಗೆ ಅವರನ್ನು ಕಂಡಿರದ ನಾವುಗಳು ಅಭಿಪ್ರಾಯ ಹೇಳುವುದು ಕಷ್ಟದ ಮಾತೇ ಸರಿ.
ಆದರೂ ನಿಮ್ಮ ವಿವರಣೆಗಳೇ ಸೂಚ್ಯವಾಗಿ ಹೇಳುವಂತೆ ಅವರ ಪ್ರತಿಭೆಗೆ ಸರಿಯಾಗಿ ಸಿಗದ ಪುರಸ್ಕಾರ ಅವರಲ್ಲಿ ಸಮಾಜದ ಬಗ್ಗೆ ತಿರಸ್ಕಾರ ಹುಟ್ಟಿಸಿರಬಹುದು ಅನಿಸಿತು.
ಮನುಷ್ಯ ಕೆಲವೊಮ್ಮೆ ತನ್ನ ವಿಶೇಷತೆಯನ್ನು ಬಹಿರಂಗಪಡಿಸುವ ಸಲುವಾಗಿ ಎಲ್ಲರಿಗಿಂತ ವಿಭಿನ್ನವಾಗಿದ್ದು ಸಮಾಜದ ಕಣ್ಸೆಳೆಯುವ ಯತ್ನ ಮಾಡುತ್ತಾನೆ.
ಒಳ್ಳೆಯ ವರದಿ. ಧನ್ಯವಾದಗಳು.

ಎಂ ಎಸ್ ತಿಪ್ಪಾರ said...

joman nice story... E jeevan na ne ondu huchar sante.... Yararigo yavado huchu irutte.. Adre reeti ee sadanadndu huchchu... But... way of narration is very fantastic... Jomon keep it up..

Malli