Monday 15 October, 2007

ದೇವರು ಆ ತಾಯಂದಿರಿಗೆ ಶತವರ್ಷಗಳ ಆಯಸ್ಸು ಕೊಡಲಿ


ಹುಟ್ಟಿದ್ದು ಮಲೆನಾಡಿನಲ್ಲಾದರೂ, ಓದಿದ್ದು ಮಾತ್ರ ಧಾರವಾಡದಲ್ಲಿ. ಕರಾವಳಿ ಕಡಲ ತಡಿಯ ಮಂಡೆ ಬಿಸಿ ಸಂಸ್ಕೃತಿ ಮತ್ತು ಎಂಥದು ಮಾರಾಯರೆ ನಾಮ ಭೂಷಣವೂ ಮೇಳೈಸಿದ ಮಧ್ಯಂತರ ಊರು ನಮ್ಮದು. ಇಂತಹ ಊರಿನಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಾಗಿ ಧಾರವಾಡಕ್ಕೆ ಆಗಮಿಸಿದಾಗ ಉತ್ತರ ಕರ್ನಾಟಕ ಇಷ್ಟೊಂದು ಆತ್ಮೀಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನಮ್ಮೂರಿನ ಏಲಕ್ಕಿ ಬಾಳೆಹಣ್ಣಿನ ಸವಿಯಂತೆ ಧಾರವಾಡದ ಠಾಕೂರ್ ಸಿಂಗ್‌ನ ಪೇಡಾವೂ ನಾಲಗೆಯಲ್ಲಿ ಕರಗಿದಾಗ ಧಾರವಾಡದಲ್ಲೇ ಸ್ನಾತಕೋತ್ತರ ಪದವಿ ಪಡೆಯುವ ನಿರ್ಥಾರ ಕೈಗೊಂಡಿದ್ದೆ.

ಕೇವಲ ಪೇಡಾದ ಸಿಹಿಯಿಂದಲ್ಲ. ಅಲ್ಲಿನ ಜನರ ಸಂಸ್ಕೃತಿ, ಆಚಾರ ವಿಚಾರ, ಜೀವನ ವಿಧಾನದಲ್ಲೂ ವೈವಿಧ್ಯತೆಯ ಸೊಬಗಿದೆ. ಹೊಟ್ಟೇಗೇನ್ ಶಗಣಿ ತಿನ್‌ತ್ತೀಯಾ ಎಂದು ಕೇಳುವ ಮಾತಿನ ಹಿಂದೆ, ಏನಪ್ಪಾ ತಮ್ಮಾ ಹೇಗಿದಿಯಾ? ಎನ್ನುವ ಕುಕ್ಕುಲತೆಯೂ ಇದೆ. ಹತ್ತಿರವಾದಂತೆ ನಾವೂ ಅವರಲ್ಲೂಂದಾಗಿ ಬಿಡುವ, ಅರಿಯದೆ ಹತ್ತಿರವಾಗುವ ಆತ್ಮೀಯತೆಯೂ ಧಾರವಾಡದ ಮಣ್ಣಿನಲ್ಲಿದೆ.

ಧಾರವಾಡ ಮಾತ್ರವಲ್ಲ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇದೇ ವಾತಾವರಣವಿದೆ. ಖಡಕ್ ರೊಟ್ಟಿ ಖಾರ ಚಟ್ನಿ ತಿಂದು ಉತ್ತರ ಕರ್ನಾಟಕದವರು ತುಂಬಾ ರಫ್ ಆಗಿದ್ದಾರೆ ಎನ್ನುವುದು ಎನ್ನುವುದು ಮಲೆನಾಡಿನ ಬಹುಪಾಲು ಜನರ ಅಭಿಪ್ರಾಯ. ಆದರೆ ಅವರ ನೇರವಂತಿಕೆಯ ಮಾತಿನ ಹಿಂದೆ ಅರಳೆಯಂತಹ ಮನಸ್ಸಿದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಅತಿಥಿ ಸತ್ಕಾರಕ್ಕೆ ಮಲೆನಾಡು ಹೇಳಿ ಮಾಡಿಸಿದ ಊರಾದರೂ, ಉತ್ತರ ಕರ್ನಾಟಕದವರ ಹೃದಯ ವೈಶಾಲ್ಯತೆಯ ಮುಂದೆ ಅದು ತುಸು ಕಡಿಮೆಯೇ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಅಭಿಪ್ರಾಯವನ್ನು ನಾನು ಧಾರವಾಡದಲ್ಲಿ ಓದಿದ್ದೇನೆ ಎನ್ನುವ ಒಂದೇ ಒಂದು ಕಾರಣಕ್ಕೆ ನೀಡುತ್ತಿಲ್ಲ. ನೀವು ಯಾವ ಹೊತ್ತಿನಲ್ಲಿ ಯಾರದೇ ಮನೆಗೆ ಹೋಗಿ, ನಿಮ್ಮ ಪರಿಚಯ ಇರಲಿ, ಇಲ್ಲದಿರಲಿ, ಬಾರಪ್ಪಾ ತಮ್ಮಾ, ಕೈಕಾಲ್‌ ಮುಖಾ ತೊಳ್ಕೋ..ಊಟಕ್ಕೆ ನೀಡ್ತಿನಿ ಎನ್ನುವ ಅಲ್ಲಿನ ತಾಯಂದಿರ ಪ್ರೀತಿ ಇದೆಯಲ್ಲಾ ಅದು ಮಲೆನಾಡಿನಲ್ಲಿ ಕಾಣಸಿಗುವುದು ಬಹಳ ಅಪರೂಪ ಎನ್ನುವುದು ನನ್ನ ಅನುಭವಕ್ಕೆ ಬಂದಿರುವ ವಿಷಯ.

ಮನೆಗೆ ಬಂದವರ ಕುಲ, ಗೋತ್ರ, ನಕ್ಷತ್ರ, ರಾಶಿ ವಿಚಾರಿಸಿ, ಇವನು ನಮ್ಮ ಪೈಕಿಯವನೇ ಎಂದು ಪರೀಕ್ಷಿಸಿ, ಸ್ಥಾನ-ಮಾನ, ಆಸ್ತಿ ಅಂತಸ್ಸು ತೂಗಿ, ಕೂತ್ಕೊಳ್ಳಿ.. ಊಟ ಮಾಡಿಕೊಂಡು ಹೋಗುವಿರಂತೆ, ಕಾಫಿ ಕುಡೀತೀರಾ? ಎಂದು ಕೇಳುವ ಮಲೆನಾಡಿಗೂ, ಧಾರವಾಡದ ಮಾತಿಗೂ ಎಷ್ಟು ವ್ಯತ್ಯಾಸವಿದೆ ನೀವೆ ನೋಡಿ. ಅಂವ, ಇಂವ, ಈಕಿ, ಹೂನ್ರೀ. ಶೈಲಿಯ ಮಾತಿನ ನಡುವೆಯೂ ಧಾರವಾಡದವರ ಜೀವನ ಪ್ರೀತಿ ಮತ್ತು ಅವರು ಮತ್ತೊಬ್ಬರಿಗೆ ತೋರಿಸುವ ಗೌರವ ಇದೆಯಲ್ಲಾ ಅದನ್ನು ಯಾರೇ ಆಗಲಿ ಮೆಚ್ಚಬೇಕು.

ಬಹಳ ಜನರಿಗೆ ಧಾರವಾಡ ಬಾಷೆಯೆಂದರೆ ಕುಹಕ. ಇತ್ತೀಚೆಗೆ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಈ ಭಾಷಾ ಪ್ರಯೋಗಕ್ಕೆ ಮುಂದಾಗಿ, ಅದು ಮನೋರಂಜನೆಯೂ ಅಲ್ಲದೆ, ಗಂಭೀರವೂ ಆಗದೆ, ಅಪಹಾಸ್ಯಕ್ಕೀಡಾಗುತ್ತಿರುವ ಪ್ರಸಂಗಳು ನಡೆಯುತ್ತಿವೆ. ಭಾಷೆಯನ್ನು ಪ್ರಯೋಗಿಸುವ ಮೊದಲು, ಅದರ ಹಿಂದಿರುವ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದುಕೊಂಡಿರಬೇಕು. ಭಾಷೆಯನ್ನು ಅವಮಾನಿಸಿದರೆ ಅದು ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ ಹಾಗೆ. ಅಂಥವರಿಗೆ ಧಿಕ್ಕಾರವಿರಲಿ.

ಹುಬ್ಬಳ್ಳಿ-ಧಾರವಾಡದಲ್ಲಿ ಓದಿದ ಐದು ವರ್ಷಗಳು ನನ್ನ ವಿದ್ಯಾರ್ಥಿ ಜೀವನದಲ್ಲಿ ಅವಿಸ್ಮರಣೀಯ ಘಟ್ಟಗಳು. ಶನಿವಾರ ಭಾನುವಾರ ಬಂದಿತೆಂದರೆ, ಸ್ಥಳೀಯ ಗೆಳೆಯರು ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. "ನಾಚ್ಕೆ ಪಟ್ಕೋಬೇಡ ತಮ್ಮಾ.. ಊಟ ಮಾಡು.. ಇದು ನಿಮ್ಮ ಮನೆ ಇದ್ದ ಹಾಗೆ... ನಾನು ನಿಮ್ಮವ್ವ ಇದ್ದ ಹಾಗೆ" ಎಂದು ನನ್ನ ಗೆಳೆಯಂದಿರ ತಾಯಂದಿರು ಹೇಳುತ್ತಿದ್ದರೆ, ಹೊಟ್ಟೆ ಮಾತ್ರವಲ್ಲ ಮನಸ್ಸೂ ತುಂಬುತ್ತಿತ್ತು. ಬರುಬರುತ್ತಾ ಅವರ ಮನೆಗಳಿಗೂ ನನ್ನ ನಡುವೆಯೂ ಒಂದು ಭಾವನಾತ್ಮಕ ಸಂಬಂಧ ಟಿಸಿಲೊಡೆಯುತ್ತಿತ್ತು. "ಪಾಪ ಹುಡುಗ ಹಾಸ್ಟೇಲಿನಲ್ಲಿದ್ದಾನೆ, ಮನೆಯ ಊಟ ಸಿಗುವುದಿಲ್ಲ ಎನ್ನುವ
ಕಾಳಜಿಯೊಂದಿಗೆ ಹಬ್ಬ-ಹುಣ್ಣಿಮೆಗಳು ಬಂದಾಗ ಬುತ್ತಿ ಕಟ್ಟಿ ಕೊಟ್ಟು ಕಳುಹಿಸುತ್ತಿದ್ದರು".

ಆದರೆ ಅವರದೆಲ್ಲಾ ಒಂದೇ ದೂರು. ನನ್ನ ಹೆಸರಿನದು. ಧಾರವಾಡದಲ್ಲಿ ಹೆಸರಿನ ಮುಂದೆ ಅಡ್ರಸ್ ಚಾಲ್ತಿಯಲ್ಲಿದ್ದರೆ, ನಮ್ಮ ಮಲೆನಾಡಿನಲ್ಲಿ ಅದಿಲ್ಲ. ನನ್ನ ಕ್ರಿಶ್ಚಿಯನ್ ಹೆಸರು ಅವರ ಕಿವಿಗೆ ಕರ್ಕಶವಾಗಿ ಕೇಳುತ್ತಿತ್ತು ಎನ್ನುವುದರಲ್ಲಿ ಅವರದೇನೂ ತಪ್ಪಿಲ್ಲ. ನನ್ನ ಗೆಳೆಯ ಚನ್ನು ಮೂಲಿಮನಿಯ ತಾಯಿ ಒಂದು ದಿನ ಅವರ ಮನೆಗೆ ಹೋಗಿದ್ದಾಗ ಹೇಳಿದ್ದರು. "ತಮ್ಮಾ ನೀನು ಏನೇ ಅನ್ನು, ನನಗೆ ಮಾತ್ರ ನಿನ್ನ ಹೆಸರು ಹೇಳಾಕೆ ಬರೋದಿಲ್ಲ' ಎಂದಿದ್ದರು. ಅವರ ಮಾತಿನ ಹಿಂದೆ ಕಲ್ಮಶವಿರಲಿಲ್ಲ. ನಾವೆಲ್ಲರು ಮನಸಾರೆ
ನಕ್ಕಿದ್ದೆವು.

ಧಾರವಾಡದಲ್ಲಿ ಓದುತ್ತಿರುವ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದ ಹೃದಯ ವೈಶಾಲ್ಯತೆ ಅರ್ಥವಾಗಿರುತ್ತದೆ. ಗೋವಿನ ಹಾಡಿನ ಸಂಸ್ಕೃತಿ ನಾಡು ನಮ್ಮದು ಎನ್ನುತ್ತೀವಲ್ಲಾ ಅದನ್ನು ಅನುಭವಿಸಲು, ಅದರ ಮಾಧುರ್ಯತೆ ತಿಳಿಯಬೇಕಾದರೆ ಧಾರವಾಡಕ್ಕೆ ಬರಬೇಕು. ಧಾರವಾಡದ ಚನ್ನು ಮೂಲಿಮನಿ, ಹುಬ್ಬಳ್ಳಿಯ ನವೀನ್ ನವಲ್‌ಗುಂದ್, ಕೊಪ್ಪಳದ ಶ್ರೀಕಾಂತ್ ಭದ್ರಾಪೂರ, ಕರಡಿಕೊಪ್ಪದ ಬಸವರಾಜ ಗರಗ, ಇವರೆಲ್ಲರ ತಾಯಂದಿರಿಗೆ ದೇವರು ಶತವರ್ಷಗಳ ಆಯಸ್ಸು ಕೊಡಲಿ. ಅವರು ನನ್ನ ಮೇಲೆ ತೋರಿಸಿದ ಪ್ರೀತಿಗೆ, ಅಂತಃಕರಣಕ್ಕೆ ಎಂದಿಗೂ ನಾನು ಚಿರಋಣಿ. ಇದನ್ನೇ ಋಣಾನುಬಂಧ ಎನ್ನುವುದು. ಅದು ಎಲ್ಲರಿಗೂ ಸಿಗುವುದಿಲ್ಲ.

7 comments:

Haaru Hakki said...

ಪ್ರೀತಿಯ ಜೋಮನ್...

ಮಲೆನಾಡಿನಲ್ಲಿ ಹುಟ್ಟಿ,ಧಾರವಾಡ (ಗಂಟು ಮೆಟ್ಟಿನ ನಾಡು) ಬಗ್ಗೆ ನಿಮ್ಮ ಅನುಭವಗಳನ್ನು, ಅಲ್ಲಿನ ತಾಯಂದಿರ ಹೃದಯ ವೈಶಾಲ್ಯತೆಯನ್ನು ಅಕ್ಷರಗಳ ಮೂಲಕ, ಅರ್ಪಿಸಿದ್ದೀರಿ. ಇದು ನಿಮ್ಮ ವ್ಯಕ್ತಿತ್ವ ಎಂತಹದ್ದು ಎಂದು ತೋರಿಸುತ್ತದೆ.
ನಾನು ಕೂಡ ಧಾರವಾಡದವನೇ ಆಗಿರುವುದುರಿಂದ, (ಆದರೆ, ಮಲೆನಾಡ ಅನುಭವ ಇಲ್ಲ) ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯವಾಗಿವೆ.

ಲೇಖನ ಮನ ಎಲ್ಲ ಮನ ಮುಟ್ಟುವಂತಿದೆ.. ಹಾಗೆ ಮುಂದುವರೆಸಿ.

ಬ್ರಹ್ಮಾನಂದ

ಮಲ್ಲಿಕಾಜು೯ನ ತಿಪ್ಪಾರ said...

ಹೌದು. ಸಿನೆಮಾ ಮತ್ತು ಕಿರುತೆರೆ ಮಾಧ್ಯಮದಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನು ಜೋಕರ್ ತರಹ ನೋಡುತ್ತಾರೆ. ಇದು ಸಲ್ಲದು. ಭಾಷೆಯನ್ನು ಅವಮಾನಿಸುವುದು ಎಂದರೆ ಹೆತ್ತ ತಾಯಿಯನ್ನು ಅವಮಾನಿಸದಂತೆ...

ನೀವು ವ್ಯಕ್ತಪಡಿಸಿದ ವಿಚಾರಗಳು ಸತ್ಯವಾಗಿವೆ. ಜೋಮನ್.

MD said...

JOMON ಭಾಯಿ,
ಉತ್ತರ ಕರ್ನಾಟಕದ ಭಾಷೆ,ಜನರು,ಜೀವನ ಶೈಲಿ,ಪ್ರೀತಿ,ಅತಿಥಿ ಸತ್ಕಾರ ಹೀಗೆ ಎಲ್ಲದರ ಬಗ್ಗೆಯೂ 'ನಿಜ' ವಾದುದ್ದನ್ನು ಮನಮುಟ್ಟುವಂತೆ ಅಷ್ಟ ಅಲ್ಲದೇ ನಾವು ಉತ್ತರ ಕರ್ನಾಟಕದವರೂ ಹೇಳುವುದಕ್ಕಿಂತ 'ಕಾಳಜಿ'ಯಿಂದ ಹೇಳಿದ್ದೀರಾ. ನಿಮಗೆ ನನ್ನ ಅಭಿನಂದನೆಗಳು.

jomon varghese said...

ಹಾಯ್ md ಭಾಯ್ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು...

ನಿಮ್ಮಂತ ಹಲವಾರು ಜನ ಭಾಯ್‌ಗಳನ್ನು ಸ್ನೇಹಿತರನ್ನು ಉತ್ತರ ಕರ್ನಾಟಕ ನನಗೆ ನೀಡಿದೆ..

ಒಂದು ರೀತಿಯ ಋಣಾನುಬಂಧ ಅನ್ನುತ್ತಾರಲ್ಲಾ ಹಾಗೆ..


ಧನ್ಯವಾದಗಳು...

Seema S. Hegde said...

ಜೋಮನ್,
ನೀವು ಬರೆದಿದ್ದು ನೂರಕ್ಕೆ ನೂರು ನಿಜ.
ನಾನೂ ಕೂಡ ನಾಲ್ಕು ವರ್ಷ ಧಾರವಾಡದಲ್ಲಿ ಕಳೆದಿದ್ದೇನೆ.
ನಿಮ್ಮಂತೆ ನನಗೂ ಕೂಡ ಅನೇಕ ಸಿಹಿ ಅನುಭವಗಳು ಸಿಕ್ಕಿವೆ.

Anonymous said...

ಜೋಮೊನ್,

ನಿಮ್ಮ ಎಲ್ಲಾ ಬರಹಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿವೆ.

Anonymous said...

ನಿಮ್ಮ ಮಾತು ಅಕ್ಷರಾಹ ನಿಜ. ಧಾರವಾಡದ ಜನ ತುಂಬಾ ಹೃದಯವಂತರು. ನಾನು ಉಡುಪಿಯಲ್ಲಿ ಹುಟ್ಟಿ ಬೆಳೆದವಳು. ಉತ್ತರ ಕರ್ನಾಟಕದ ಜನರ ಬಗ್ಗೆ ನನ್ನಲ್ಲೂ ಅಂತ ಒಳ್ಳೆಯ ಭಾವನೆ ಇರಲಿಲ್ಲ. ಕೆಲಸದ ನಿಮಿತ್ತ ಧಾರವಾದದಲ್ಲಿ ೩ ತಿಂಗಳು ಇರಬೇಕಾಗಿ ಬಂದಾಗ ತುಂಬಾ ಹೆದರಿದ್ದೆ. ಆದರೆ ಅಲ್ಲಿಯ ಜನ ನನ್ನ ನೋಡಿಕೊಂಡ ರೀತಿ ನಾನು ಜನುಮವಿದೀ ಮರೆಯೋಹಾಗಿಲ್ಲ.ಈ ಬ್ಲಾಗ್ ಮೂಲಕ ನಾನು ಅಲ್ಲಿಯ ಜನರಿಗೆ ನನ್ನ ಹೃಡಯಪೂರ್ವಕಾ ಕೃತಜ್ಞಾತೆ ತಿಳಿಸುತೇನೆ.
ಮಾನಸ ಎನ್