Monday 15 June, 2009

ಮಂದಣ್ಣ, ಬೋದಿಲೇರ್ ಮತ್ತು ಮಾಧವಿಕುಟ್ಟಿ

ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಎನ್ನುತ್ತಾನೆ ಪ್ರೆಂಚ್ ಕವಿ ಬೋದಿಲೇರ್. ಬೋದಿಲೇರ್‌ನ ಮಾತು ನಿಜವಾಗುತ್ತಿದ್ದರೆ ಈ ಲೋಕವೆಲ್ಲಾ ಸದಾ ಎಷ್ಟೊಂದು ಅಮಲಿನಲ್ಲಿ ತೇಲುತ್ತಿರುತ್ತಿತ್ತು ಎಂದು ನಾನು ಯೋಚಿಸುತ್ತಿರುತ್ತೇನೆ. ನಮ್ಮಲ್ಲಿ ಕೆಲವೇ ಕೆಲವು ಜನರು ಮಾತ್ರ ಸಂಜೆಯ ಹೊತ್ತಿಗೆ ಬೋದಿಲೇರ್‌ನನ್ನು ನೆನಪಿಸಿಕೊಳ್ಳುತ್ತಾರಲ್ಲಾ ಎಂದು ಬೇಜಾರಾಗುತ್ತದೆ. ಒಮ್ಮೆ ತೇಜಸ್ವಿಯ ’ಕರ್ವಾಲೋ’ ಓದಿ ಲಂಕೇಶ್ "ನಾನೂ ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚನ್ನಾಗಿರುತ್ತಿತ್ತು" ಎಂದು ಬರೆದಿದ್ದರು. ನನಗೂ ಕೂಡ ಇತ್ತೀಚೆಗೆ ಯಾಕೋ ಬೋದಿಲೇರ್‌ನಂತೆ ಕುಡಿದ ಸ್ಥಿತಿಯಲ್ಲಿ ಮಂದಣ್ಣನಂತೆ ಆರಾಮವಾಗಿ ತಿರುಗಾಡಿಕೊಂಡು ಇರಬೇಕು ಅನಿಸುತ್ತಿದೆ.

ಹೈದ್ರಾಬಾದ್‌ನಲ್ಲಿ ಲಂಕೇಶರ ಟೀಕೆ- ಟಿಪ್ಪಣಿ ಕುರಿತು ಪಿಎಚ್‌ಡಿ ಮಾಡುತ್ತಿರುವ ನನ್ನ ಸೀನಿಯರ್ ಒಬ್ಬರಿಗೆ ಮೊನ್ನೆ ಹೇಗಿದ್ದೀರಾ? ಎಂದು ಸ್ಕ್ರಾಪ್ ಮಾಡಿದರೆ, ಅವರು ’ಏನೂಂತ ಹೇಳಲಿ ಜೋಮನ್ ಹೊರಗಡೆ ಮಳೆ ಉಯಿತಿದೆ ಒಳಗಡೆ ಝಳ ಆಗ್ತಿದೆ; ನಟ್ಟ ನಡು ಲೈಫಲ್ಲಿ ಬಿಟ್ಟು ಹೋದವಳ ನೆನಪು, ದಟ್ಟ ಕಾಡಲ್ಲಿ ಅಮಾಯಕ ಮೊಲದ ಸ್ಥಿತಿ! ಇನ್ನು ನೀನೆ ಉಹಿಸಿಕೋ! ಎಂದು ತೀವ್ರ ವಿಷಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನೂ ಕೂಡ ಅವರಿಗೆ ತೇಜಸ್ವಿ ಶೈಲಿಯಲ್ಲಿ ’ನಿಮ್ಮ ಎದೆಯೊಳಗಿನ ಅದಮ್ಯ ಪ್ರೇಮ ಶರಧಿಯನ್ನೂ, ತ್ಯಾಗಮಯತೆಯನ್ನೂ, ಸಾಹಸ ಪ್ರೀಯತೆಯನ್ನೂ ಅರಿಯುವ ಯೋಗ್ಯತೆ ಅಲ್ಲಿನ (ಹೈದ್ರಾಬಾದಿನ) ಹುಡುಗಿಯರಿಗೆ ಇಲ್ಲ ಎನ್ನುವ ತೀವ್ರ ವಿಷಾದ ನಿಮ್ಮಂತೆ ನನ್ನ ಹೃದಯವನ್ನೂ ಕಾಡುತ್ತಿದೆ ಎಂದು ಬರೆದು ಸಮಾಧಾನ ಮಾಡಿದ್ದೇನೆ.

"ನಾನು ಶ್ರಿಕೃಷ್ಣನನ್ನು ಅಲ್ಲಾಹುವಾಗಿ ಪರಿವರ್ತಿಸಿ ಅವನನ್ನು ಪ್ರವಾದಿಯನ್ನಾಗಿ ಮಾಡಿ, ಮೊಹಮದ್ ಎಂದು ಕರೆಯುತ್ತೇನೆ. ಗುರುವಾಯೂರಿಗೆ ಹೋದರೆ ಅಲ್ಲಿ ಕೃಷ್ಣ ಇರುವುದಿಲ್ಲ" ಎಂದು ನಿರ್ಭಯವಾಗಿ ಹೇಳಿಕೆ ನೀಡಿ, ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಮಾಧವಿಕುಟ್ಟಿ ಎಂಬ ಕಮಲಾ ಸುರಯ್ಯ ತೀರಿಹೋಗಿ ಈವತ್ತಿಗೆ ಹದಿನೇಳು ದಿನಗಳಾದವು. ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಹಲವು ಪುಸ್ತಕದ ಅಂಗಡಿಗೆ ನುಗ್ಗಿ ಅವರ ’ನಷ್ಟಪಟ್ಟ ನೀಲಾಂಬರಿಯೋ, ನೆಯ್ ಪಾಯಸ’ಮೋ ಸಿಗುತ್ತೆದೆಯೇ ಎಂದು ಆಸೆಯಿಂದ ಹುಡುಕಿ ಬಂದೆ. ಎಲ್ಲೂ ಸಿಗಲಿಲ್ಲ. ಸಿಕ್ಕಿದ್ದರೆ ಗೊತ್ತಿರುವ ಅಲ್ಪಸ್ವಲ್ಪ ಮಲಯಾಳದಲ್ಲಿ ಅದನ್ನು ಓದಬಹುದಿತ್ತು ಎಂಬ ಆಸೆ ಹಾಗೆಯೇ ಉಳಿಯಿತು. ಹಾಗೆ ರೂಮಿಗೆ ಬಂದು ಕೈಗೆ ಸಿಕ್ಕಿದ ’ಕರ್ವಾಲೋ’ ಮತ್ತೊಮ್ಮೆ ಓದಿದಾಗ ಈ ಮೇಲಿನ ತಮಾಷೆಗಳೆಲ್ಲಾ ನೆನಪಾದವು.

ಈಗೀಗ ಬ್ಲಾಗಿಗೆ ಬರೆಯಲು ತುಂಬಾ ಹೆದರಿಕೆ ಆಗುತ್ತಿದೆ. ಏಕೆಂದರೆ ನನ್ನ ಬ್ಲಾಗ್ ಆಫ್‌ಡೇಟ್ ಆಗಿ ನಾಲ್ಕು ತಿಂಗಳಾಯಿತು. ಸನ್ಮಾನ್ಯ ಬ್ಲಾಗಿಗರೇ ನಾನು ಮಳೆಹನಿಯ ಜೋಮನ್ ವರ್ಗೀಸ್ ಎಂದು ನನ್ನನ್ನು ನಾನೇ ಪರಿಚಯಿಸಿಕೊಳ್ಳುತ್ತಾ ಮತ್ತೊಮ್ಮೆ ಪ್ರಾರಂಭಿಸಬೇಕಿದೆ. ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವಂತೆ ನನ್ನ ಬ್ಲಾಗ್ ಈಗ ಆಪ್‌ಡೇಟ್ ಆಗಿದೆ. ಈ ಮಳೆ ಸುರಿಯುವ ಹೊತ್ತಿನಲ್ಲಾದರೂ ಕನ್ನಡದ ಸಹೃದಯ ಬ್ಲಾಗಿಗರು ಮಳೆಹನಿಯನ್ನು ನೆನಪಿಸಿಕೊಳ್ಳಲಿ ಎನ್ನುವ ಆಸೆಯಾಗುತ್ತಿದೆ.

ಕನ್ನಡದಲ್ಲಿ ಪ್ರತಿದಿನವೂ ಆಪ್‌ಡೇಟ್ ಆಗುವ ಬ್ಲಾಗ್ ಎಂದು ಯಾರಾದರೂ ಪ್ರಶಸ್ತಿ ಕೊಟ್ಟರೆ ಅದು ಪರ್ಯಾಯದ ಉದಯಶಂಕರ ಭಟ್ಟರಿಗೂ, ಅತ್ಯಂತ ನಿಧಾನವಾಗಿ ಅಫ್‌ಡೇಟ್ ಆಗುವ ಬ್ಲಾಗ್ ಎನ್ನುವ ಪ್ರಶಸ್ತಿ ಮಳೆಹನಿಗೂ ಖಂಡಿತ ಬರುತ್ತದೆಯೆಂದು ನಾನೂ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ. ನನಗೆ ಸಿಗುವ ಈ ಪ್ರಾಮಾಣಿಕ ಪ್ರಶಸ್ತಿಗೆ ಯಾರಾದರೂ ಪ್ರತಿಸ್ಪರ್ಧಿಗಳಿದ್ದರೆ ಮೊದಲೇ ನನಗೆ ತಿಳಿಸತಕ್ಕದ್ದು. ವೀಕ್ ಆಫ್ ಇರುವ ದಿನ ಪ್ರೆಸ್‌ಕ್ಲಬ್‌ನಲ್ಲಿ ರಾಜಿ ಸಂಧಾನಕ್ಕೆ ಅವಕಾಶವಿರುತ್ತದೆ.

19 comments:

Anonymous said...

ಜೋಮನ್,

ನೀನು ಏನು ಬರೆದರೂ ನಿನ್ನ ನಿರೂಪಣಾ ಶೈಲಿಯಿಂದಾಗಿ ಅದನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಕುಡಿದಷ್ಟೇ ಖುಷಿಯಾಯಿತು.....:)

-ಬೋದಿಲೇರ್

ಅಹರ್ನಿಶಿ said...

ಜೋಮನ್,

ಮತ್ತೆ ಸ್ವಾಗತ ಬ್ಲಾಗ್ ಲೋಕಕ್ಕೆ.ನಿಮ್ಮ ಬ್ಲಾಗ್ ಮಲಗಿರುವಾಗ ಮಮ್ಮಲ ಮರುಗಿದವರಲ್ಲಿ ನಾನೂ ಒಬ್ಬ.ನಿಮಗೆ ಪ್ರತಿಸ್ಪರ್ಧಿ ನಾನೆ,ಮೊನ್ನೆ ಒ೦ದು ಬ್ಲಾಗ್ ಪೋಸ್ಟಿ೦ದ ಇನ್ನೊ೦ದು ಪೋಸ್ಟಿಗೆ ಎರಡು ತಿ೦ಗಳು ಕಾಲಾವಕಾಶ ತಗೊ೦ಡಿದ್ದೆ.ಯಾಕೋ ಬಹಳ ಮುಜುಗರವಾಯಿತು,ಛೆ ಹೀಗಾಗಬಾರದಿತ್ತು ಎ೦ದು ಮತ್ತೆ ಮೈ ಕೊಡವಿಕೊ೦ಡು ಬ್ಲಾಗಿಸತೊಡಗಿದ್ದೇನೆ.ನಿಮ್ಮ ಮಳೆಹನಿ ಯೂ ನಿಲ್ಲದಿರಲಿ..ಬೀಳಲಿ ನಿರ೦ತರ.

sunaath said...

ಮಳೆಹನಿಯ ಜೋಮನ್ ಅವರೆ,
ನಿಮ್ಮನ್ನು ನಾವು ಮರೆತಿಲ್ಲ. ಮನ್ಸೂನಿಗಾಗಿ ಕಾಯ್ತಾ ಇದ್ದೀವಿ. ಲೇಟಾದರೂ ಸರಿ, ಮಳೆ ಬಂದರೆ ಸಾಕು!

ಮಲ್ಲಿಕಾಜು೯ನ ತಿಪ್ಪಾರ said...

tadavaagi blog update madorage prasasti kodadare.. naanu ningint modalane standallidini iddini embodu nenapirali Joman.. Haagin illi raji sandanad mate baralla. En antiya???

Sushrutha Dodderi said...

ಮದಿರೆ, ಕಾವ್ಯ ಅಥವಾ ಋಜುತ್ವ -ಈ ಯಾವುದನ್ನಾದರೂ ಕುಡಿದ ಅಮಲಿನಲ್ಲಿರಬೇಕೂಂತ ಅಂತ ಅಲ್ವಾ ಅವನು ಹೇಳಿದ್ದು? ನಾನಿನ್ನೂ ಬೋದಿಲೇರ್‌‍ನನ್ನು ಓದಬೇಕು..

ಬರೀರಿ ಅಂತ ನಿಮ್ಮನ್ನ ಪೀಡಿಸ್ಬೇಕು ಅನ್ಸುತ್ತೆ, ಆದ್ರೆ ಏನಂದ್ರೂ ನೀವು ಹೇಳಿದ್ಮಾತು ಕೇಳಲ್ಲ. ಯಾವುದಕ್ಕೂ ಒಮ್ಮೆ ಪ್ರೆಸ್‌ಕ್ಲಬ್ಬಲ್ಲಿ ಸಿಗೋದೇ ಒಳ್ಳೇದೇನೋ?

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಅರ್ರೇ ಜೋಮನ್, ನಿಮ್ಗೆ ಕಾಂಪಿಟಿಷನ್ ಕೊಡಕ್ಕೆ ನಾನಿದ್ದೀನಿ ಬಿಡ್ರೀ.. ;) ರಾಜಿ-ಸಂಧಾನಕ್ಕೆ ಬರೀ ಪ್ರೆಸ್ ಕ್ಲಬ್ಬಾ..? :(

ಶಾಂತಲಾ ಭಂಡಿ (ಸನ್ನಿಧಿ) said...

ಜೋಮನ್...
ಆವಾಗಾವಾಗಾದ್ರೂ ಇಷ್ಟಿಷ್ಟಾದ್ರೂ ಮಳೆ ಸುರಿದರೆ ಮಳೆಹನಿಯಲ್ಲೇ ನೆನೆದು ತಂಪಾಗ್ಬಹುದು. ಆದ್ರೆ ಮಳೆಹನಿನೇ ಇಲ್ಲದೇ ಮಳೆಹನಿನೇ ನೆನೀತಾ ಕೂತ್ಕೊಳೋ ಥರ ಮಾತ್ರ ಮಾಡ್ಬೇಡಿ :-)
ಅಪರೂಪಕ್ಕೆ ಮಳೆ ಬಿದ್ರೂ ಹದವಾಗಿ, ಸುಂದರವಾಗಿ ಬೀಳತ್ತಲ್ಲ, ಅದು ಖುಷಿ.

PARYAYA said...

Abba neevadaro prashasti kuduva prastapa maadidiralla marayare!
Prashasti samitige yaarnnu adhyaksharnnagi maadona?
-Nethrakere Udaya Shankara
www.paryaya.blogspot.com

jomon varghese said...

ಆಧುನಿಕ ಬೋದಿಲೇರಿಗೆ ನಮಸ್ಕಾರ. ನಿಮ್ಮ ಹೆಸರು ಬಹಿರಂಗಪಡಿಸಿದ್ದರೆ ಚೆನ್ನಾಗಿತ್ತು. ಧನ್ಯವಾದಗಳು, ಕುಡಿದಾಗ ಬರುತ್ತಲಿರಿ:).

ಅಹರ್ನಿಶಿ
ಶ್ರೀಧರ್ ಸರ್ ನಮಸ್ಕಾರ. ನಾನೆಲ್ಲಿ ಮಳೆಹನಿಯನ್ನು ಮರೆತಿದ್ದೀರಿ ಅಂದುಕೊಂಡಿದ್ದೆ. ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.

ಸುನಾಥ
ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು. ಮನ್ಸೂನ್ ಬರಲಿದೆ. ಹವಾಮಾನ ವರದಿಗೆ ಕಿವಿಗೊಡಬೇಡಿ.

ಮಲ್ಲಿ,
ಯಾಕ್ರೀ ನನಗೆ ಸಿಗೋ ಪ್ರಶಸ್ತಿ ಮೇಲೆ ಕಣ್ಣು ಹಾಕ್ತೀರಿ?

ಸುಶ್ರುತ,
ಪ್ರೆಸ್‌ಕ್ಲಬ್ ನಲ್ಲಿ ಸಿಕ್ಕಿದಾಗ, ಕುಡಿದ ಸ್ಥಿತಿಯಲ್ಲಿ ಬೋದಿಲೇರ್ ಮತ್ತು ನನ್ನ ಪ್ರಶಸ್ತಿಯ ಕುರಿತು ಮಾತನಾಡೋಣ. ಏನಂತೀರಿ?

ಪೂರ್ಣಿಮಾ ಭಟ್
ಹ್ಹ ಹ್ಹ.. ಯಾಕ್ರೀ ನಿಮಗೆ ನನಗೆ ಸಿಗೋ ಪ್ರಶಸ್ತಿ ಮೇಲೆ ಕಣ್ಣು ? ರಾಜಿ ಸಂಧಾನಕ್ಕೆ ನಿಮ್ಮೂರಿಗೆ ಬರಲು ಸಿದ್ಧ. (ಸಣ್ಣಕೇರಿಗೆ) ವಿಳಾಸ ಕೊಡಿ.

ಶಾಂತಲ ಭಂಡಿ
ಮೇಡಂ ನೀವೆಲ್ಲಿ ಹೋಗಿದ್ದೀರಿ ಅಂತ ಯೋಚಿಸುತ್ತಿದ್ದೆ. ಪ್ರತಿಕ್ರಿಯೆ ನೋಡಿ ತುಂಬಾನೆ ಖುಷಿಯಾಯಿತು. ಬರುತ್ತಲಿರಿ.

ಪರ್ಯಾಯ,
ಸರ್, ಮಳೆಹನಿಗೆ ಸ್ವಾಗತ. ಪ್ರಶಸ್ತಿ ಸಮಿತಿಗೆ ಗಿರೀಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸುವುದು. ಧನ್ಯವಾದಗಳು.

ಸಂತೋಷಕುಮಾರ said...

ಆಗಾಗ ನಿಮ್ಮ ಬ್ಲಾಗಗೆ ಇಣುಕಿ ಅಪ್ ಡೇಟ್ ಆಗದ್ದನ್ನು ಕಂಡು ನಿರಾಸೆಯಾಗಿತ್ತು. ಪುನರಾಗಮನಕ್ಕೆ ಸ್ವಾಗತ.

ರಾಜೇಶ್ ನಾಯ್ಕ said...

ಬ್ಲಾಗ್ ಅಪ್ ಡೇಟ್ ಆಗ್ತಾ ಇದೆಯಲ್ಲಾ... ಅಷ್ಟು ಸಾಕು.

Sree said...

ತುಂಬಾ ಚೆನ್ನಾಗ್ ಬರ್ದಿದೀರ, ಕರ್ವಾಲೋ, ಕಮಲಾದಾಸ್ - ಎಲ್ಲಾ ಓದ್ಬೇಕನ್ನ್ಸೋ ಹಾಗೆ:)
ನಾನಿರ್ಬೇಕಾದ್ರೆ ನಿಮ್ಗೆಲ್ಲ ಹೆಂಗ್ಬರುತ್ತೆ ಪ್ರಶಸ್ತಿ! ನನ್ನ ಲಾಸ್ಟ್ ಪೋಸ್ಟು ಯಾವ್ ಜನ್ಮದಲ್ಲಿ ಬರ್ದಿದ್ದು ಅಂತ ನನ್ಗೇ ನೆನಪಿಲ್ಲ!:D ಅದಕ್ಕೇ ಕನ್ಸು ಕಾಣೋದ್ ನಿಲ್ಸಿ(ಪ್ರಶಸ್ತಿ ಬಗ್ಗೆ! ಬೇರೆ ಕನ್ಸುಗಳು ಎಷ್ಟ್ ಬೇಕಾದ್ರೂ ಕಾಣ್ಕೊಳಿ!:)) ತೆಪ್ಪಗ್ ಬರೀತಿರಿ!:D

MD said...

ಯಾರೋ ಒಬ್ಬರು ಬಂದು 'ರೀ ಸ್ವಾಮಿ ಬ್ಲಾಗ್ ಅಪ್-ಡೇಟ್ ಮಾಡದೇ ಇರೋದ್ರಲ್ಲಿ ಜೋಮೋನ್ ಎಂಬುವವರಿಗೆ ಪ್ರಶಸ್ತಿ ಕೊಟ್ಟಿದ್ದಾರಂತೆ. ನೀವು ಇನ್ನೂ ಮಲಗಿದ್ದೀರಲ್ಲಾ' ಅಂತ ಬಂದು ಹೇಳಿದ್ ಮೇಲೇನೇ ಗೊತ್ತಾಗಿದ್ದು ನನಗೆ, ನನ್ನ ಪ್ರಶಸ್ತಿ ಇನ್ಯಾರಿಗೋ ಅನ್ಯಾಯವಾಗಿ ಕೊಟ್ಟಿದ್ದಾರೆ ಎಂದು.
ಜೋಮೋನ್ ನೀವು ಈ ಪ್ರಶಸ್ತಿಗೆ ಅರ್ಹರಲ್ಲ. ದಯವಿಟ್ಟು ಆ ಪ್ರಶಸ್ತಿಯನ್ನು ನನಗೆ ಕೊಟ್ಟುಬಿಡಿ. ನಾನೂ ಒಮ್ದು ದಿನ ನೀವು ಮಾಡಿದಂತಹ ತಪ್ಪನ್ನು ಅಂದ್ರೆ ಬ್ಲಾಗ್ ಅಪ್-ಡೇಟ್ ಮಾಡಿದ್ ಮೇಲೆ ಇನ್ಯಾರು ಮಲಗಿದಾರೋ ಅವ್ರಿಗೆ ಕೊಟ್ಟುಬಿಡ್ತೀನಿ.

ಖುಶಿಯಾಯಿತು, ನಮ್ಮೂರು ಮಳೆ ತರಹ ಕೈಕೊಡದೇ ಮತ್ತೆ ಮಳೆಹನಿ ಶುರುವಾಯಿತು.

jomon varghese said...

ಸಂತೋಷ್
ಪಾಟೀಲರೆ, ಎಲ್ಲಿ ನಿಮ್ಮ ವಾಸ, ನಿವಾಸ? ಚೆನೈನಲ್ಲಿ ಮಳೆ ಇದೆಯಾ?

ರಾಜೇಶ್ ನಾಯ್ಕ್,
ನಾಯ್ಕರಿಗೆ ನಮಸ್ಕಾರ. ನಿಮ್ಮ ಮಾತಿಗೆ ಆಭಾರಿ.

ಶ್ರೀ,
ಎಲ್ಲ ಓಕೆ. ಅವಾಜ್ ಯಾಕೆ? ಪ್ರತಿಕ್ರಿಯೆ ಚೆನ್ನಾಗಿದೆ. ಆದ್ರೆ ಕಣ್ಣು ಮುಚ್ಚಿದ್ರೆ ಪ್ರಶಸ್ತಿ ಕನಸೇ ಬೀಳುತ್ತಿದೆ.

ಎಮ್‌ಡಿ,
ಪ್ರೆಸ್‌ಕ್ಲಬ್ಬಿಗೆ ಬನ್ನಿ. ರಾಜಿ ಸಂಧಾನಕ್ಕೆ ಅವಕಾಶವಿದೆ. ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.

madhu bhat said...

chennagide nimma blog nimma abhimani madhu bhat

visit:www.madhubhat.blogspot.com

ಚಿತ್ರಾ said...

ಅಬ್ಬಬ್ಬಾ,
ಅಂತೂ ನಾಕು ಹನಿ ಬಿತ್ತಲ್ಲ ! ತಂಪಾಯ್ತು ಜೋಮನ್ !
ಈ ಸಲ ಪ್ರಶಸ್ತಿ ನಿಮಗೇ ಕೊಡಿಸೋಣ ಬಿಡಿ. ಆದರೆ ,ಪ್ರಶಸ್ತಿ ಆಸೆಗೆ ಪದೇ ಪದೇ ಈ ಥರ ಮಾಡಬೇಡಿ .ಒಬ್ಬರಿಗೆ ಒಂದೇ ಸಲ ಬಹುಮಾನ ಅಂತ ರೂಲ್ಸ್ ಮಾಡಬೇಕಾಗತ್ತೆ !

ಶ್ರೀನಿಧಿ.ಡಿ.ಎಸ್ said...

ಎಲ್ಲ ಹಾಳಾಗಿ ಹೋಗಲಿ. ವೀಕ್ಲಿ ಆಫು ಯಾವತ್ತು ಅದ್ನ ಮೊದಲು ಹೇಳಯ್ಯ:)

ಚರಿತಾ said...

ನನಗಿಂತ ಒಳ್ಳೆ ಪ್ರತಿಸ್ಪರ್ಧಿ ಯಾರು ಸಿಕ್ಕಾರು ನಿಮ್ಗೆ..?
ನಾನು ಬರೋಬ್ಬರಿ ಐದು ತಿಂಗಳ ನಂತರ ಅಪ್ ಡೇಟ್ ಮಾಡಿದ್ದೇನೆ!
ಹಾಗಾಗಿ ಮತ್ತೆ ಸ್ವಾಗತ ನಿಮ್ಗೆ ಅಂತ ಹೇಳೋ ಹಕ್ಕು ನಂಗೆ ಖಂಡಿತ ಇಲ್ಲ.

ಬರೀತಾ ಇರಿ.

ಧರಿತ್ರಿ said...

ಭಜ ಗೋವಿಂದಾ....ಚೆನ್ನಾಗ್ ಬರೆದಿಯಾ! ಅಲ್ಲ ನಿನ್ನ ಜೊತೆ ಸ್ಪರ್ದೇ ಕಟ್ಟೋಕೆ ನಾಚಿಕೆಯಾಗುತ್ತೆ ಕಣಣ್ಣ.
ಸೋಮಾರಿ ಆಗಬೇಡ..ಬರೀತಾ ಇರು
-ಧರಿತ್ರಿ