Friday, 25 January, 2008

ತರಕಾರಿ ಮಾರುವ ಇಬ್ಬರು ಅಜ್ಜಿಯರ ಕಥೆ


ಮೈಸೂರಿನ ಹಿನಕಲ್ ಬಳಿ ಇರುವ ಸಿಂತ್ರಿ ಟೇಲರ್ ಅಂಗಡಿಯ ಎದುರಿಗೆ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿರುವ ಈ ಅಜ್ಜಿಗೆ ಹತ್ತಿರ ಹತ್ತಿರ ಎಪ್ಪತ್ತು ವಯಸ್ಸಿರಬಹುದು. ಚರ್ಮ ಸುಕ್ಕುಗಟ್ಟಿ, ಕೆನ್ನೆಗಳು ಗುಳಿಬಿದ್ದು, ಆಳಕ್ಕಿಳಿದಿರುವ ಬೊಚ್ಚು ಬಾಯಿಯಲ್ಲಿ ಟಮೊಟೋ ಮೂರು ರೂಪಾಯಿ ಎನ್ನುತ್ತಾ ಕೊತ್ತಂಬರಿ ಸೊಪ್ಪುಗಳನ್ನು ಓರಣವಾಗಿ ಜೋಡಿಸಿಟ್ಟು, ನೀರು ಚಿಮುಕಿಸುವ ಈಕೆಗೆ ಕಿವಿ ಸ್ವಲ್ಪ ಮಂದವಾಗಿದ್ದರೂ, ಕಣ್ಣು ಮಾತ್ರ ಹದಿನಾರರ ಹರೆಯದಂತೆ ಚುರುಕಾಗಿವೆ. ಕಿವಿಗೆ ಹಾಕಿದ್ದ ಜುಮಕಿಯ ಭಾರಕ್ಕೆ ಆಕೆಯ ಕಿವಿಯ ಎರಡೂ ಕಡೆ ತೂತು ಬಿದ್ದಿರುವುದು ಬಿಟ್ಟರೆ, ಅಜ್ಜಿಯ ದುಂಡನೆಯ ಮುಖದಲ್ಲಿ ಎಳೆ ಬಿಸಿಲಿಗೆ ಬೆವರ ಹನಿಗಳು ಉತ್ಸಾಹದಿಂದಲೇ ಜಿನುಗುತ್ತವೆ. ಸೊಂಟಕ್ಕೆ ಸಿಕ್ಕಿಸಿರುವ ಸಂಚಿಯಿಂದ ಐವತ್ತು ಪೈಸೆ ಒಂದು ರೂಪಾಯಿ ನಾಣ್ಯಗಳನ್ನು ಎಚ್ಚರಿಕೆಯಿಂದ ತೆಗೆದು, ಎರಡೆರಡು ಬಾರಿ ಎಣಿಸಿ, ಪ್ಲಾಸ್ಟಿಕ್ ಕಪ್ಪಿನಲ್ಲಿ ಚಹಾ ಬಗ್ಗಿಸಿ ಕೊಡುವ ಎದುರಿನ ಮಂಜುನಾಥ ಕ್ಯಾಂಟೀನಿನ ಹುಡುಗನ ಕೈಗಿಟ್ಟು, ಸುರ್‌s ಎಂದು ಚಹಾ ಸೇವಿಸಿದರೆ, ಆಕೆಯ ದೈನಂದಿನ ದಿನಚರಿಯ ಸೊಗಸಾದ ಅಧ್ಯಾಯವೊಂದು ಯಾವುದೇ ಒತ್ತಡವಿಲ್ಲದೆ ಪ್ರಾರಂಭಗೊಳ್ಳುತ್ತದೆ. ತಳ್ಳುಗಾಡಿಯ ತುದಿಯೊಂದಕ್ಕೆ ಪ್ಲಾಸ್ಟಿಕ್ ದಾರದಲ್ಲಿ ಕಟ್ಟಿರುವ ಹಸಿರು ಬಣ್ಣದ ನೀರಿನ ಬಾಟಲಿ, ಗಾಡಿಯ ಕೆಳಗೆ ಕಾಂಗರೂ ಹೊಟ್ಟೆಯ ಚೀಲದಂತೆ ಕಾಣುವ ಸೆಣಬಿನ ತಡಿಕೆಯಲ್ಲಿ ತರೇವಾರಿ ಸೊಪ್ಪುಗಳ ನಡುವೆ ಅಲ್ಯುಮಿನಿಯಂ ಟಿಫಿನ್ ಬಾಕ್ಸೊಂದರಲ್ಲಿ ಮಡಗಿರಬಹುದಾದ ಮೂರು ಇಡ್ಲಿ ಆಕೆಯ ಹೊಟ್ಟೆಗೆ ಬೇಕಾದಷ್ಟು ಸಾಕೆನಿಸುತ್ತದೆ.

ಹೀಗೆ ನಾನು ದಿನವೂ ನೋಡುತ್ತಿದ್ದ ಈ ಸಾಮಾನ್ಯ ಅಜ್ಜಿ, ಮೂರ್ನಾಲ್ಕು ದಿನಗಳಿಂದ ಕಾಣದೇ ಇದ್ದಾಗ ಏನೋ ಕಳೆದುಕೊಂಡಂತಾಗಿ ರಸ್ತೆಯುದ್ದಕ್ಕೂ ದೃಷ್ಠಿ ಹಾಯಿಸಿ ನಿರಾಶನಾಗಿದ್ದೆ. ಅಜ್ಜಿಯ ತಳ್ಳುಗಾಡಿಯ ಮುಂದಿನಿಂದಲೇ ಫೆವಿಕೋಲ್ ಜಾಹಿರಾತಿನ ಟೆಂಪೋದಂತೆ ಪ್ರಯಾಣಿಕರನ್ನು ತುಂಬಿ ಬರುವ ಮಿನಿಬಸ್‌ ಹತ್ತಿ ಮೈಸೂರು ಸಿಟಿಗೆ ಹೋಗುವ ನೂರಾರು ಪ್ರಯಾಣಿಕರು, ಅದರ ನಡುವೆ ಬೆಳ್ಳಿ ಚುಕ್ಕಿಗಳಂತೆ ಕಾಣಿಸುವ ಅಲ್ಪ ಸ್ವಲ್ಪ ಸೌಂದರ್ಯ ಪ್ರಜ್ಞೆಯಿರುವ ಹುಡುಗಿಯರು, ಮೊಬೈಲ್ ಹೆಡ್‌ಸೆಟ್‌ಗಳನ್ನು ಕಿವಿಗೆ ಸಿಕ್ಕಿಸಿ, ಆರ್‌ಜೆ, ಡಿಜೆಗಳಂತೆ ತಲೆ ಕುಣಿಸುವ ಕಾಲೇಜು ಹುಡುಗರು, ಹೋಗಪ್ಪಾ, ಎಷ್ಟೊತ್ತು ನಿಲ್ಲಿಕ್ಸೊಂಡು ಇರ್ತೀಯಾ, ನಮ್ಮ ದುಡ್ಡು ಕೊಡು, ಬಸ್ಸಿಗೋಯ್ತೀವಿ ಎಂದು ಟೆಂಪೋ ಡ್ರೈವರನ್ನು ಗದರಿಸುವ ಹಳೆ ಮೈಸೂರಿನ ರೈತರು ಇವರೆಲ್ಲರ ಗದ್ದಲ ಎಂದಿನಂತೆ ಇದ್ದರೂ, ಆ ಸ್ಥಳದಲ್ಲಿದ್ದ ವಸ್ತುವೊಂದನ್ನು ಸ್ಥಾನಪಲ್ಲಟ ಮಾಡಿದ್ದಾರೆ ಎನ್ನುವಂತೆ ಅಜ್ಜಿಯ ಅನುಪಸ್ಥಿತಿ ನನ್ನನ್ನು ಕಾಡುತ್ತಿತ್ತು. ಪ್ರಾಮಾಣಿಕವಾಗಿ ಕಾಯಿಪಲ್ಲೆ ಮಾರುತ್ತಾ ಜೀವನ ಸಾಗಿಸುತ್ತಿದ್ದ ಅಜ್ಜಿಗೆ ಯಾರಾದರೂ ಪುಂಡರು, ಪೋಕರಿಗಳು ತೊಂದರೆ ಕೊಟ್ಟು ಸ್ಥಳಾಂತರ ಮಾಡಿದ್ದಾರೆಯೇ, ಅಥವಾ ಆಕೆಯ ಮನೆಯಲ್ಲಿ ಏನಾದರೂ ಅವಗಡ ಸಂಭವಿಸಿದೆಯೇ, ಸ್ವತಃ ಅಜ್ಜಿಯೇ ಕಾಯಿಲೆ ಬಿದ್ದಿರಬಹುದೇ ಎಂದೆಲ್ಲಾ ಯೋಚಿಸುತ್ತಾ, ಹಿನ್‌ಕಲ್ ರಸ್ತೆಯಿಂದ ಬಹುದೂರ ಹಾಗೆಯೇ ನಡೆದುಕೊಂಡು ಹೋಗಿ ಹುಡುಕಿ ಬಂದಿದ್ದೆ. ಅಜ್ಜಿ ಕಾಣಿಸಿರಲಿಲ್ಲ.

ಐದು ವರ್ಷಗಳ ಹಿಂದೆ ಹುಬ್ಬಳ್ಳಿಯ ವಿದ್ಯಾನಗರದ ಸಮೀಪ ರೂಮು ಮಾಡಿಕೊಂಡು ಪದವಿ ಓದುತ್ತಿರುವಾಗ ತುರ್ತು ಸಂದರ್ಭವೊಂದರಲ್ಲಿ ಹಣ ನೀಡಿ ಸಹಕರಿಸಿದ ಇದೇ ರೀತಿಯ ಮತ್ತೋರ್ವ ತರಕಾರಿ ಮಾರುವ ಅಜ್ಜಿಯ ನೆನಪಾಗಿ, ಆಕೆಯನ್ನು ಈ ರಾತ್ರಿಯೇ ಹೋಗಿ ನೋಡಿಕೊಂಡು, ಒಂದಿಷ್ಟು ದುಡ್ಡು ಕೊಟ್ಟು ಬರುವ ಎನ್ನುವ ಮನಸ್ಸಾಯಿತು. ಆಗಾಗ್ಗ ತರಕಾರಿ ಕೊಳ್ಳಲು ಆಕೆಯ ಅಂಗಡಿಗೆ ಹೋಗುವುದು ಬಿಟ್ಟರೆ, ನನಗೆ ಅಜ್ಜಿಯ, ಅಜ್ಜಿಗೆ ನನ್ನ ಪರಿಚಯವೇನೂ ಇರಲಿಲ್ಲ. ಅನಾಸ್ತಿಕನಾದ ನಾನು ಆಕೆ ಕೊಡುತ್ತಿದ್ದ ಇಟಗಿ ಭೀಮಾಂಬಿಕೆಯ ಪ್ರಸಾದವನ್ನು ಮಾತ್ರ ತುಂಬಾ ರುಚಿಯಾಗಿದ್ದ ಕಾರಣಕ್ಕೆ ಭಕ್ತಿಯಿಂದಲೇ ಸ್ವೀಕರಿಸುತ್ತಿದ್ದೆ. "ತಗೋ ಅಪ್ಪಿ, ನಾನು ಭಾನುವಾರ ಕಾಯಿಪಲ್ಲೆ ತರಲು ಹೋಗುವಾಗ ಕೊಡು, ಇಲ್ಲಾ, ಮನೆಯಿಂದ ರೊಕ್ಕ ಬಂದ ಮೇಲೆ ಕೊಡುವಿಯಂತೆ" ಎಂದು ಹಿಂದು ಮುಂದು ನೋಡದೆ ತನ್ನ ಉಡಿಯೊಳಗೆ ಮಡಚಿ ಇಟ್ಟಿದ್ದ ನೂರು ರೂಪಾಯಿಯ ಎರಡು ನೋಟುಗಳನ್ನು ಅಂದು ಆಕೆ ತೆಗೆದುಕೊಡದೆ ಇದ್ದಿದ್ದರೆ, ನನ್ನ ರೂಮ್ ಪಾರ್ಟ್‌ನರ್ ಇಂದು ಬಿ.ಇಡಿ ಮುಗಿಸಿ, ಹೈಸ್ಕೂಲ್ ಶಿಕ್ಷಕನಾಗುತ್ತಿರಲಿಲ್ಲವೇನೋ.

ಹಿನ್‌ಕಲ್‌ನಲ್ಲಿದ್ದ ಈ ಅಜ್ಜಿಗೂ ಹುಬ್ಬಳ್ಳಿಯ ಆ ಅಜ್ಜಿಗೂ ಅನೇಕ ಮಾನವೀಯ ಸಾಮ್ಯತೆಗಳು ಕಾಣಿಸಿದ್ದರಿಂದ ಇವರಿಬ್ಬರು ನನ್ನ ಸ್ವಂತ ಅಜ್ಜಿಯರೇನೋ ಎನ್ನುವಷ್ಟು ಮನಸ್ಸಿಗೆ ಹತ್ತಿರವಾಗಿದ್ದರು. ಯಾವಾಗದಾರೊಮ್ಮೆ ತರಕಾರಿ ಕೊಳ್ಳುವ ನೆಪದಲ್ಲಿ ಅಜ್ಜಿಯ ಹತ್ತಿರ ಹೋಗಿ ಮಾತನಾಡಿಸೋಣವೆಂದರೆ ಸುತ್ತೆಲ್ಲಾ ತುಂಬಾ ಜನರು ನೆರೆದಿರುತ್ತಿದ್ದರಿಂದ ಏನೋ ಮುಜುಗರವಾದಂತೆ ಭಾಸವಾಗಿ ಅದನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದೆ. ಆದರೆ ಆಕೆ ಅಪ್ರತ್ಯಕ್ಷಳಾದ ನಾಲ್ಕು ದಿನಗಳಿಂದ ಇನ್ನು ಆಕೆ ಯಾವಾಗ ಬಂದರೂ, ಮೊದಲು ಹೋಗಿ ಮಾತನಾಡಿಸಬೇಕು ಎಂದು ನಿರ್ಧರಿಸಿದ್ದೆ. ಹೀಗೆ ನಿರ್ಧರಿಸಿದ್ದ ಮಾರನೇಯ ದಿನವೇ ತನ್ನ ತಳ್ಳುಗಾಡಿಯೊಂದಿಗೆ ಆಕೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಾಗ ಖುಷಿಯಾಗಿದ್ದೆ. ಆದರೆ ಹಿಂದಿನ ಲವಲವಿಕೆ ಆಕೆಯ ಮುಖದಲ್ಲಿರಲಿಲ್ಲ. ಏನೋ ನಡೆದಿದೆ ಎಂದು ಆಕೆಯ ಮನಸ್ಸು ಹೇಳುತ್ತಿರುವಂತೆ ಅನಿಸುತ್ತಿತ್ತು.

ಒಂದು ಭಾನುವಾರ ಪುಟ್ಟದೊಂದು ಕೈಚೀಲವನ್ನು ಕೈಯಲ್ಲಿಡಿದು ಆಕೆಯ ಹತ್ತಿರ ಹೋಗಿ ಒಂದಿಷ್ಟು ತರಕಾರಿಗಳನ್ನು ತೂಗಿಸಿಕೊಂಡೆ. ಅಜ್ಜಿ ಅರಾಮಿದ್ದೀಯಾ? ಸಹಜವಾಗಿ ಕೇಳಿದೆ. ತರಕಾರಿ ಖರೀದಿಸಲು ಬಂದ ವ್ಯಕ್ತಿಯೊಬ್ಬ ಈ ರೀತಿ ಕೇಳಿದ್ದು ಆಕೆಗೆ ಆಶ್ಚರ್ಯ ಎನಿಸಿರಬೇಕು. ಹೂಂ, ಎಂದು ನನ್ನ ಮುಖ ನೋಡಿದಳು. ಕಳೆದ ನಾಲ್ಕೈದು ದಿನಗಳಿಂದ ಕಾಣಲಿಲ್ಲ, ಊರಿಗೆ ಹೋಗಿದ್ದೀಯಾ ಅಂದುಕೊಂಡೆ ಅಂದೆ. 'ಇಲ್ಲೇ ಪಿರಿಯಾಪಟ್ಟಣದತ್ತ ನಮ್ಮೂರು ಇರುವುದು, ಇವರಪ್ಪನನ್ನು ಆಸ್ಪತ್ರೆಗೆ ಹಾಕಿದ್ವಿ. ಮೊನ್ನೆ ತೀರಿಕೊಂಡರು. ಯಾವುದೇ ಖಾಯಿಲೆಯಂತೆ ಎಂದು ಅಲ್ಲೇ ಮಣ್ಣಿನಲ್ಲಿ ಆಡುತ್ತಿದ್ದ ಪುಟ್ಟ ಹುಡುಗನನ್ನು ತೋರಿಸಿದರು. ಇವರವ್ವ ಮನೆಗೆ ಬಂದು ಕುಂತವ್ಳೆ, ನಾನಾದರೂ ಏನಂತ ಸಮಾಧಾನ ಮಾಡ್ಲಿ, ಹೊಟ್ಟೆಪಾಡಿಗೆ ಕಾಯಿಪಲ್ಲೆ ಮಾರುತ್ತಿದ್ದೆ. ಇವನಿಗೆ ಶಾಲೆಗೆ ಹಾಕುವ ವಯಸ್ಸಾಯಿತು. ಇದ್ದ ದುಡ್ಡನ್ನೆಲ್ಲಾ ಆಸ್ಪತ್ರೆಗೆ ಹಾಕಿದ್ವಿ. ನಿಮ್ಮ ಹಾಗೆ ನಮ್ಮನೇನಲ್ಲೂ ಯಾರಾದರೂ ಶಾಲೆ ಕಲ್ತಿದ್ದರೆ ನನಗೆ ಈ ವಯಸ್ಸಲ್ಲಿ ತರಕಾರಿ ಮಾರಬೇಕಾದ ಸ್ಥಿತಿ ಬರುತ್ತಿರಲಿಲ್ಲ ಎಂದಳು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಾ ಹೋದೆ. ನೀನು ಎಷ್ಟನೇ ಸ್ಕೋಲಿಗೆ ಹೋಗ್ತಿಯಾ, ಸಿಟಿಯಾಗಿನ ದೊಡ್ಡ ಶಾಲೆಗೆ ಹೋಗ್ತೀಯಾ ಎಂದಳು. ನಾನು ಅಲ್ಲದಿದ್ದರೂ ಹೌದೆಂದು ತಲೆಯಾಡಿಸಿದೆ. ನಂತರ ವಿದ್ಯೆಯ ಕುರಿತು ತುಂಬಾ ಮಾರ್ಮಿಕವಾದ ಗಾದೆಯನ್ನು ತನ್ನದೇ ಶೈಲಿಯಲ್ಲಿ ಹೇಳಿದಳು. ಒಂದು ರೀತಿ ಜಾನಪದ ಹಾಡಿನಂತಿದ್ದ ಆ ಗಾದೆಯನ್ನು ನೆನಪಿನಲ್ಲಿಟ್ಟುಕ್ಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಮತ್ತೆ ಮತ್ತೆ ಮರೆತು ಹೋಗುತ್ತಿತ್ತು.

ಹಿನಕಲ್‌ನ ಅಕ್ಷರ ಬಾರದ ಈ ಅಜ್ಜಿಗೆ ತನ್ನ ಮೊಮ್ಮಗನಿಗಾದರೂ ವಿದ್ಯೆ ಕಲಿಸಿ, ದೊಡ್ಡ ಆಫೀಸರನ್ನಾಗಿ ಮಾಡುವ ಆಸೆ. ಹುಬ್ಬಳ್ಳಿಯ ಆ ಅಜ್ಜಿಗೆ ವಿದ್ಯೆ ಕಲಿತಿರುವ ತನ್ನ ಮಕ್ಕಳೇ ತನ್ನನ್ನು ಮನೆಯಿಂದ ಹೊರದಬ್ಬಿರುವುದರ ವಿರುದ್ಧ ಪ್ರತಿಭಟಿಸಲಾಗದ ಅಸ್ಸಾಯಕತೆ. ಇಬ್ಬರೂ ಇಳಿವಯಸ್ಸಿನಲ್ಲಿ ತರಕಾರಿ ಮಾರಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಯಾವುದಾದರೂ ಒಂದು ಪದವಿ ಸಂಪಾದಿಸಿ, ಒಂದಿಷ್ಟು ಹಣಗಳಿಸಲು ತೊಡಗಿದರೆ ಕಲಿತ ವಿದ್ಯೆ ಸಾರ್ಥಕವಾಯಿತು ಎನ್ನುವ ಈ ಶತಮಾನದ ಮನಸ್ಥಿತಿ ನೆನೆದು ಕಸಿವಿಸಿ ಎನಿಸಿತು. ಅಷ್ಟಕ್ಕೂ ನಾವು ಕಲಿತಿರುವ, ಕಲಿಯುತ್ತಿರುವ ವಿದ್ಯೆಯಾದರೂ ಎಂಥದ್ದು? ತರಕಾರಿ ತೂಗಿ ಚೀಲಕ್ಕೆ ಹಾಕಿ, ಇನ್ನೇನಾದರೂ ಬೇಕಾ ಅಂದಳು ಅಜ್ಜಿ. ನಾನು ಬೇಡವೆಂದು ತಲೆಯಾಡಿಸಿದೆ. ರೂಮಿಗೆ ಬಂದು ಬಹಳ ಹೊತ್ತು ಚಿಂತಿಸಿದರೂ ಮೇಲಿನ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ.

14 comments:

ರಾಜೇಶ್ ನಾಯ್ಕ said...

ಜೋಮನ್,
ವಯಸ್ಸಾದವರು ಹೀಗೆ ಹೊಟ್ಟೆಪಾಡಿಗಾಗಿ ಕಷ್ಟಪಡುವುದನ್ನು ನೋಡಿದಾಗ ನನಗಂತೂ ಬಹಳ ಬೇಜಾರಾಗುತ್ತದೆ. ಕೆಲವೊಮ್ಮೆ ಅವಶ್ಯಕತೆಯಿಲ್ಲದಿದ್ದರೂ ಖರೀದಿ ಮಾಡಿದ್ದು ಇದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ.

ಎಂ ಎಸ್ ತಿಪ್ಪಾರ said...

Jomon tumba chennagide ajjiyaru... Nim baravanige nigakku tumba chenagide keep it up

ಜೋಮನ್ said...

ಆತ್ಮೀಯ ರಾಜೇಶ್ ನಾಯ್ಕ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅಸ್ಸಾಯಕರಿಗೆ ಸಹಾಯ ಮಾಡಲು ಮುಂದಾಗುವ ನಿಮ್ಮ ಮಾನವೀಯ ಅಂತಃಕರಣ ಇಷ್ಟವಾಯಿತು. ನಿಮ್ಮೂರಿನ ಅಜ್ಜಿಯಂದಿರನ್ನು ನಮಗೆ ಪರಿಚಯಿಸಿ.

ಧನ್ಯವಾದಗಳು.
ಜೋಮನ್.

ಜೋಮನ್ said...

ಆತ್ಮೀಯ ತಿಪ್ಪಾರ್ ಸರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಬರವಣಿಗೆಗಿಂತ ಅಜ್ಜಿಯರು ನಿಮಗಿಷ್ಟವಾದರೆ,ನಾನು ಬರೆದದ್ದು ಸಾರ್ಥಕ. ಎರಡಕ್ಕೂ ಥ್ಯಾಂಕ್ಸ್.

ಪ್ರೀತಿಯಿಂದ
ಜೋಮನ್

ತೇಜಸ್ವಿನಿ ಹೆಗಡೆ said...

ಮನಮುಟ್ಟುವ ಬರಹ... ನಿಜಕ್ಕೂ ಅಜ್ಜಿಯರ ಪಾಡು ನೆನೆದು ಮನ ಮುದುಡಿತು. ನಾವು ಕಲಿತ ವಿದ್ಯೆಗಿಂತ ಜೀವನ ಕಲಿಸುವ ಪಾಠವನ್ನು ಸರಿಯಾಗೆ ಕಲಿತರೆ-ಅರಿತರೆ ನಿಜಕ್ಕೂ ನಮ್ಮ ಬದುಕು ಸಹನೀಯವಾಗಬಹುದೇನೋ?

ಜೋಮನ್ said...

ತೇಜಸ್ವಿನಿ ಹೆಗಡೆಯವರಿಗೆ ನಮಸ್ಕಾರ. ನಿಮಗೆ ಮಳೆಹನಿಗೆ ಸ್ವಾಗತ.ಬರುತ್ತಾ ಇರಿ. ಅಜ್ಜಿಯರ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.

ಧನ್ಯವಾದಗಳು.
ಜೋಮನ್.

ಶಾಂತಲಾ ಭಂಡಿ said...

ಜೋಮೋನ್...
ಇಷ್ಟವಾಯಿತು ಜೊತೆಗೆ ಓದುವಾಗ ಕಷ್ಟವೂ ಆಯಿತು ಅಜ್ಜಿಯರ ಪಾಡು ನೆನೆದು. ಚೆನ್ನಾಗಿ ಬರೆಯುತ್ತೀರ, ಬರೆಯುತ್ತಿರಿ, ಓದುತ್ತಿರುತ್ತೇನೆ.

ಜೋಮನ್ said...

ಶಾಂತಲಾ ಭಂಡಿ..

ನಮಸ್ತೆ, ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ಧನ್ಯವಾದಗಳು. ಆಗಾಗ್ಗ ಬರುತ್ತಾ ಇರಿ.

ನಾವಡ said...

ಜೋಮನ್,
ಕಣ್ಣಲ್ಲಿ ಹನಿ ತುಂಬಿಕೊಂಡವು. ಮನಸ್ಸಿನಲ್ಲಿ ಏಕೋ ಬೇಸರ ತುಂಬಿಕೊಂಡಿತು. ಇಂಥವರಿಗೆ ನಮ್ಮಿಂದೇನಾದರೂ,ಕಡೇ ಪಕ್ಷ ಆ ಹುಡುಗನಿಗೇನಾದರೂ ಸಹಾಯ ಮಾಡಲು ಸಾಧ್ಯವೇ?

ಚೆನ್ನಾದ ಬರಹ, ಹೀಗೇ ಬರೆಯುತ್ತಿರಿ.

ನಾವಡ

ಸುಧನ್ವಾ said...

oh its good yaar.

Shiv said...

ಜೋಮನ್,

ನಿಮ್ಮ ಬರಹ ಓದಿದ ನಂತರ ಬಹಳ ಹೊತ್ತು ಅಜ್ಜಿಯರಿಬ್ಬರು ತುಂಬಾ ಕಾಡುತ್ತಿದ್ದರು. ಯಾಕೋ ಮನಸ್ಸು ಅಳ್ತಾ ಇತ್ತು.
ನಿಮ್ಮ ಬರವಣಿಗೆ ಶೈಲಿ ತುಂಬಾ ಆತ್ಮೀಯವೆನಿಸುತ್ತೆ..
ಹೀಗೆ ಸಾಗಲಿ ನಿಮ್ಮ ಮಳೆ ಹನಿಗಳು..

ಜೋಮನ್ said...

ನಾವಡ,

ಸುದ್ದಿಜೀವಿಗಳೇ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ಆಗಾಗ್ಗ ಬರುತ್ತಾ ಇರಿ.


ಸುಧನ್ವಾ,

ಧನ್ಯವಾದಗಳು.ಶಿವು,

ಮಳೆಹನಿಗೆ ಆತ್ಮೀಯ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಬರುತ್ತಾ ಇರಿ..ಶಿವು,

ಸಂತೋಷಕುಮಾರ said...

ಅಜ್ಜೀಯರು ಇನ್ನೂ ಕಣ್ಣ ಚಿತ್ರದಿಂದ ಮರೆಯಾಗುತ್ತಿಲ್ಲಾ . ತುಂಬಾ ಸುಂದರರವಾಗಿದೆ ಬರಹ ಮತ್ತು ನಿಮ್ಮ ಮನಸು ಏರಡೂ..

ಜೋಮನ್ said...

@ ಸಂತೋಷಕುಮಾರ,,


ನಿಮ್ಮ ಸಹೃದಯ ಓದಿಗೆ ಮತ್ತು ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಬರುತ್ತಲಿರಿ....


ಜೋಮನ್