Thursday, 25 October, 2007

ಯಾಕೋ ಸಮುದ್ರಕ್ಕೆ ನಾಚಿಕೆಯಾಯಿತು...
ಮರೀನಾ ಬೀಚ್‌ನ ಸಂಜೆಗೆಂಪಿನ ಕಡಲ ಕಿನಾರೆಯಲ್ಲಿ ಕಲರವ ಕೇಳಿಬರುತ್ತಿತ್ತು. ಬಿಸಿಲ ಧಗೆಗೆ ಬಳಲಿದ ನೂರಾರು ಹುಡುಗರು ಉಪ್ಪು ನೀರಿನಲ್ಲಿ ಈಜು ಬಿದ್ದಿದ್ದರು. ಉಕ್ಕಿ ಬರುವ ನೊರೆ ನೊರೆ ಅಲೆಯಲ್ಲಿ ಕಾಲು ಕುಣಿಸುತ್ತಾ ಒಂದಿಷ್ಟು ಪುಟಾಣಿ ಹುಡುಗರು ಸಮುದ್ರದ ವಿಸ್ಮಯ ನೋಡುತ್ತಿದ್ದರು. ಅತ್ತ ಎಮ್‌ಜಿಆರ್ ಸಮಾಧಿ ಬಳಿ ಇರುವ ಮರ್ಕ್ಯುರಿ ದೀಪ ಮೆಲ್ಲನೆ ಉರಿದು ಕತ್ತಲನ್ನು ತನ್ನ ಪ್ರಕಾಶದೊಳಗೆ ಲೀನಗೊಳಿಸುತ್ತಿತ್ತು. ಆಗ ತಾನೆ ಉರಿಯತೊಡಗಿದ ನೂರಾರು ಮಿಣುಕು ದೀಪಗಳು ಕಡಲ ತಡಿಯಲ್ಲಿ ವಿಶೇಷ ಪ್ರಭೆಯನ್ನು ಮೂಡಿಸಿದ್ದವು.


ದೂರದಲ್ಲಿ ನಿಂತು ನೋಡಿದರೆ ಕಡಲ ತಡಿಯಲ್ಲಿ ನೆರದ ಸಾವಿರಾರು ಜನರು ಸಾಲುಗಟ್ಟಿದ ಇರುವೆಗಳಂತೆ ಕಾಣುತ್ತಿದ್ದರು. ಸಂಜೆಗತ್ತಲಿನೊಂದಿಗೆ ಬೆರತ ಸಮುದ್ರದ ನೀರು ಕೂಡ ಕಪ್ಪನೆಯ ಬಣ್ಣಕ್ಕೆ ತಿರುಗಿ, ಆಟ ಮುಗಿದು ವಿಶ್ರಮಿಸಿಕೊಳ್ಳುತ್ತಿರುವ ಕ್ರೀಡಾಂಗಣದಂತೆ ಕಾಣುತ್ತಿತ್ತು. ಅದರ ಮಧ್ಯದಿಂದ ಎದ್ದು ಬರುವ ಪುಟಾಣಿ ಅಲೆಗಳು ತೀರಕ್ಕೆ ಬರುತ್ತಿದ್ದಂತೆ ಹೆಗಲಿಗೆ ಹೆಗಲು ಜೋಡಿಸಿ, ಶರವೇಗ ಪಡೆದು ದಂಡೆಯ ಮೇಲೆ ಮರಳಿಗೆ ಮುತ್ತು ನೀಡಿ ಮರಳುತ್ತಿದ್ದವು. ಅಪ್ಪ ಅಮ್ಮನ ಕಾಲನ್ನು ತಬ್ಬಿ ಹಿಡಿದು ನೀರಿಗಿಳಿದ ಮಕ್ಕಳು ಅಲೆ ಮರಳುವಾಗ ತಮ್ಮ ಪಾದದಡಿಯ ಮರಳು ಜಾರಿ ಹೋಗಿ ಕಚಗುಳಿ ಇಟ್ಟಾಗ ವಿಶೇಷ ಸಂಭ್ರಮಕ್ಕೊಳಗಾಗುತ್ತಿದ್ದರು. ಅತ್ತ ಸಂಜೆಗತ್ತಲಿನಲ್ಲಿ ತನ್ನ ಪ್ರಿಯತಮೆಯ ಮುಖವನ್ನೇ ತದೇಕ ಚಿತ್ತದಿಂದ ನೋಡತ್ತಾ ಕುಳಿತ ಇನಿಯ, ಸಮಯ ಸಾಧಿಸಿ ಅವಳ ಕೆನ್ನೆಯ ಮೇಲೊಂದು ಕಳ್ಳ ಮುತ್ತು ನೀಡಿ ಏನೂ ಅರಿಯದವನಂತೆ ಬಾನಿನೆಡೆಗೆ ಮುಖಮಾಡಿ ಕುಳಿತ್ತಿದ್ದ.


ಉಬ್ಬರ. ಉತ್ಸಾಹ, ಪ್ರೀತಿ, ಪ್ರೇಮ, ಸಂಭ್ರಮ, ಹತಾಶೆ, ನಿಟ್ಟುಸಿರು, ಮೌನ ಹೀಗೆ ನೂರಾರು ಭಾವನೆಗಳ ಮಡಿಲಾಗಿ ಮರೀನಾ ಬೀಚ್ ವಿಶಾಲವಾಗಿ ಮಲಗಿತ್ತು. ದಿನ ಸಾವಿರಾರು ಜನರು ಬರುತ್ತಾರೆ. ಸಾವಿರಾರು ಜನರು ಹೋಗುತ್ತಾರೆ. ಎಷ್ಟೊಂದು ಜನರನ್ನು ನೆನಪಿಟ್ಟುಕೊಳ್ಳುವುದು. ಬೇಲ್ ಪುರಿ ಮಾರುವ ಸೋನಲ್‌ವಾಲನ ಮುರುಕು ಬುಟ್ಟಿ, ಗರಂ ಗರಂ ಚಾಯ ಎನ್ನುತ್ತಾ ಪುಟ್ಟದೊಂದು ಪಾತ್ರೆಯನ್ನು ಕಾಲಿನ ಸಂದುಗಳ ನಡುವೆ ಸಿಕ್ಕಿಸಿ, ಪ್ಲಾಸ್ಟಿಕ್ ಕಪ್‌ನಲ್ಲಿ ಟೀ ಬಗ್ಗಿಸಿ ಕೊಡುವ ಪೆರುಮಾಳ್ ತಂಬಿ, ಟೈಮ್‌ಪಾಸ್ ಕಡಲೆಕಾಯಿ ಮಾರುವ ಪಳನಿ, ಸಮುದ್ರದ ದಡದಲ್ಲಿ ಸೀಮೆಎಣ್ಣೆ ಸ್ಟೌವ್ ಮೇಲೆ ಎಣ್ಣೆ ಕಾಯಿಸಿ ಮೀನು ಹುರಿದು ಕೊಡುವ ವಾಸಂತಿ ಚೇಚಿ, ಸಾವಿರಾರು ಜನರ ಮಧ್ಯದಿಂದಲೇ ಬೂಟ್ ಪಾಲೀಶ್.. ಬೂಟ್ ಪಾಲೀಶ್.. ಎನ್ನುತ್ತಾ, ಬೂಟಿರುವ ಕಾಲುಗಳನ್ನು ಚಕ್ಕನೆ ಗುರುತಿಸಿ, ಕಾಲಿಗೆರಗುವ ಬಾಲಕ ವೇಣು, ಹೀಗೆ ಕಲವೇ ಕೆಲವು ಜನ ಆಪ್ತರ ಹೆಸರುಗಳು ಮಾತ್ರ ಮರೀನಾ ಬೀಚ್‌ನ ಅಡ್ರಸ್ ಪುಸ್ತಕದಲ್ಲಿ ದಾಖಲಾಗಿದೆ.


ಇಂಥ ಕತ್ತಲಲ್ಲಿ ಕೈಯಲ್ಲೊಂದು ಹೃದಯದ ಲೋಲಕ ಹಿಡಿದು ಶ್ರೀನಿಲ್ ಧೃತಿಗೆಟ್ಟವನಂತೆ ಕಾದು ನಿಂತಿದ್ದ. ಅವನ ಎದೆ ಎದೆಯೊಳಗಿನಿಂದ ಹೊರಡುತ್ತಿದ್ದ ನಿಟ್ಟುಸಿರು ಸಮುದ್ರದ ಅಲೆಗಳ ನಿನಾದದ ಮುಂದೆ ಕ್ಷೀಣವಾದ್ದರಿಂದ ಯಾರಿಗೂ ಕೇಳಿಸುತ್ತಿರಲಿಲ್ಲ. ಇಲ್ಲಿಂದ ಸರಿಯಾಗಿ 20 ಕಿ.ಮಿ ದೂರದಲ್ಲಿರುವ ಅಣ್ಣಾನಗರದಲ್ಲಿ ಲೇಡೀಸ್ ಹಾಸ್ಟೇಲ್‌ನಲ್ಲಿ ರೂಮು ಮಾಡಿಕೊಂಡಿರುವ, ಸ್ಟರ್ಲಿಂಗ್ ರೋಡ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುವ ನಿತ್ಯಾಳಿಗಾಗಿ ಅವನು ದಾರಿ ಕಾಯುತ್ತಿದ್ದ. ನಿತ್ಯಾಳ ಕುತ್ತಿಗೆಗೆ ಈ ಲೋಲಕ ಕಟ್ಟಬೇಕು, ಅವಳ ಹಣೆಯ ಮೇಲೊಂದು ಮುತ್ತಿಡಬೇಕು. ಅದಕ್ಕಾಗಿ ಶ್ರೀನಿಲ್ ಸಮುದ್ರ ತಟದಲ್ಲಿ ನೆರೆದ ಸಾವಿರಾರು ಜನರಲ್ಲಿ ನಿತ್ಯಾಳ ಕಣ್ಣುಗಳಿಗಾಗಿಯೇ ದೃಷ್ಟಿ ಹರಿಬಿಟ್ಟಿದ್ದ.


ನಿತ್ಯ ಹೇಳಿದ ಸಮಯವನ್ನು ತಪ್ಪಿಸುವುದಿಲ್ಲ, ಎನ್ನುವಾಗಲೇ ಅದೆಲ್ಲಿಂದ ಪ್ರತ್ಯಕ್ಷವಾದಳೋ ಎನ್ನುವಂತೆ ಅವನ ಬೆನ್ನ ಹಿಂದಿನಿಂದ ಬಂದು ತೋಳು ಬಳಸಿದ್ದಳು. ಅವಳ ಕಂಕುಳದಲ್ಲಿ ಸಿಂಪರಿಸಿಕೊಂಡಿದ್ದ ಅತ್ತರಿನ ವಾಸನೆ ಘಮಘಮಿಸಿತ್ತು. ಅವನಿಗದು ಇಷ್ಟ. ಅದಕ್ಕೆಂದೇ ಅವಳದನ್ನು ಬಳಸುತ್ತಾಳೆ. ಕೈಯಲ್ಲಿ ಮುದುಡಿ ಹಿಡಿದ ವಸ್ತುವನ್ನು ಕತ್ತಲಲ್ಲಿ ಗುರುತಿಸಿ ಏನೆಂದು ಹುಬ್ಬು ಹಾರಿಸಿದ್ದಳು. ತಾನೇ ಕೈಹಿಡಿದು, ಅಂಗೈಯಲ್ಲಿ ಬೆವರಿನೊಂದಿಗೆ ಬೆಸೆದುಕೊಂಡಿದ್ದ ಲೋಲಕವನ್ನು ಅಚ್ಚರಿಯಿಂದ ನೋಡಿ, ನನಗಾ? ಎಂದು ಕಣ್ಣಲ್ಲೇ ಕೇಳಿದ್ದಳು. ಶ್ರೀನಿಲ್ ತನಗರಿವಿಲ್ಲದಂತೆ ಸುಮ್ಮನೆ ತಲೆಯಾಡಿಸಿದ್ದ. ಲೋಲಕವನ್ನು ಅವನ ಕೈಗೆ ಕೊಟ್ಟು ತಿರುಗಿ ನಿಂತು ತನ್ನ ಕುತ್ತಿಗೆಗೆ ಕಟ್ಟುವಂತೆ ಬಾಗಿದವಳ ಧೈರ್ಯ ಕ್ಷಣಕಾಲ ಅವನನ್ನು ತಬ್ಬಿಬ್ಬುಗೊಳಿಸಿತ್ತು. ತಾನು ಅಂದುಕೊಂಡಿದ್ದು ಇಷ್ಟು ಬೇಗ ಮುಗಿದುಹೋಗುತ್ತದೆ ಎಂದು ಅವನು ಕನಸಿನಲ್ಲಿಯೂ ಎಣಿಸಿರಲಿಲ್ಲ.


ಲೋಲಕವನ್ನು ಕುತ್ತಿಗೆಗೆ ಕಟ್ಟುತ್ತಿದ್ದಂತೆ ಅವನ ಕಣ್ಣಲ್ಲೇ ದೃಷ್ಟಿ ನೆಟ್ಟು ನೋಡಿದ ನಿತ್ಯಾ, ಥಟ್ಟನೆ ಬಾಗಿ ಅವನ ಹಣೆಗೊಂದು ಮುತ್ತು ನೀಡಿ, ಅಣ್ಣಾಚೌಕದ ಬಸ್‌ಸ್ಟಾಂಡಿನತ್ತ ಓಡಿದ್ದಳು. ಲೇಟಾದರೆ ಹಾಸ್ಟೆಲ್ ವಾರ್ಡ್‌ನ್ ಒಳಗೆ ಸೇರಿಸುವುದಿಲ್ಲ ಎಂದು ಓಟದ ನಡುವೆಯೇ ಹೇಳಿ, ನಾಳೆ ಮೇಲ್ ಮಾಡ್ತೀನಿ ಅಂದಿದ್ದಳು. ಶ್ರೀನಿಲ್‌ಗೆ ನಡೆದಿದ್ದೆಲ್ಲ ಒಂದು ದೃಶ್ಯಕಾವ್ಯದಂತೆ ಎದುರಿಗೆ ಬಂದು ನಿಂತಿತ್ತು. ಅವಳು ಓಡಿ ಹೋದ ಉಸುಕಿನ ತಗ್ಗುಗಳಲ್ಲಿ ಏನನ್ನೊ ಅರಸುವವನಂತೆ ತುಂಬಾ ಹೊತ್ತು ಹಾಗೇ ನಿಂತಿದ್ದ.


ದೂರದಲ್ಲಿ ಲಂಗರು ಹಾಕಿದ ಹಡಗು, ಕಾಮಗಾರಿ ಮುಗಿಯದೆ ಅರ್ಥಕ್ಕೆ ನಿಂತಿದ್ದ ಕಟ್ಟಡ, ತಡವಾಯಿತು ಎಂದು ಮನೆಗೆ ಮರಳಲು ಅವಸರಿಸುತ್ತಿರುವ ಜನರು, ಓಡುತ್ತಿರುವ ಬೇಲ್‌ಪುರಿ ಹುಡುಗ, ಮೀನು ಹುರಿಯುತ್ತಿರುವ ವಾಸಂತಿ ಚೇಚಿ, ಎಲ್ಲವೂ ಅವನಿಗೆ ಸ್ತಬ್ಧಚಿತ್ರಗಳಂತೆ ಭಾಸವಾಯಿತು. ಅತ್ತ ಕಳ್ಳ ಮುತ್ತು ನೀಡಿ, ಬಾನಿನತ್ತ ಮುಖಮಾಡಿದ್ದ ಹುಡುಗ, ತನ್ನ ಹುಡುಗಿಯ ಕೈಹಿಡಿದು ಹೊರಡಲನುವಾಗುತ್ತಿದ್ದ. ಸಂಜೆಗತ್ತಲಿನ ಮುಸುಕಿನ ಮರೆಯಿಂದ ಹೊರಬಂದ ಚಂದ್ರ ನಕ್ಷತ್ರಗಳಿಗೆ ಪಿಸುಗುಟ್ಟುತ್ತಿದ್ದ. ಮರೀನಾ ಬೀಚ್‌ನ ದಾಖಲೆ ಪುಸ್ತಕದಲ್ಲಿ ಎರಡು ಹೊಸ ಜೋಡಿಗಳ ಹೆಸರು ಸೇರ್ಪಡೆಗೊಂಡಿದೆ. ಯಾಕೋ ವಿಶಾಲವಾಗಿ ಹರಡಿ ಮಲಗಿದ್ದ ಸಮದ್ರಕ್ಕೆ ನಾಚಿಕೆಯಾಯಿತು.. ಚಂದ್ರನಿಗೆ ಕಾಣದಂತೆ ತನ್ನ ಅಲೆಗಳ ಮರೆಯಲ್ಲಿ ಮುಖ ಮುಚ್ಚಿಕೊಂಡಿತು.

7 comments:

Dynamic Divya said...

ಯಾಕೋ ವಿಶಾಲವಾಗಿ ಹರಡಿ ಮಲಗಿದ್ದ ಸಮದ್ರಕ್ಕೆ ನಾಚಿಕೆಯಾಯಿತು.. ಚಂದ್ರನಿಗೆ ಕಾಣದಂತೆ ತನ್ನ ಅಲೆಗಳ ಮರೆಯಲ್ಲಿ ಮುಖ ಮುಚ್ಚಿಕೊಂಡಿತು.
BEAUTIFUL!!
Tumba chanaagidhe Jomon nim varNane!!! Naanu saha Parisarapremi aagirOdhdrinda tummmmba ishta aaythu nim ee writing..!
"ಯಾಕೋ ಸಮುದ್ರಕ್ಕೆ ನಾಚಿಕೆಯಾಯಿತು... "
Couldn't resist reading this!!Tumbaaa santOsha aythu Odhi idanna!
Keep it going!

Hahaa Sreenil and Nitya khushi paTraa idunna Odhi :)

ಎಂ ಎಸ್ ತಿಪ್ಪಾರ said...

ಯಾಕೋ ಸಮುದ್ರ ನಾಚೀತು ಎನ್ನುವುದು ನನಗೆ ತಿಳಿದ ಮಟ್ಟಿಗೆ ಹೊಸ ವರ್ಣನೆ ಎಂದು ನಾನು ಭಾವಿಸಿಕೊಳ್ಳುತ್ತೇನೆ.ನಿಮ್ಮಲ್ಲಿ ಅದ್ಭುತವಾದ ಕಲ್ಪನಾಶಕ್ತಿಯಿದೆ ಜೋಮನ್. ಅದನ್ನು ಸರಿಯಾಗಿ ಬಳಸಿಕೊಳ್ಳಿ.

ಯಾಕೋ ಸಮುದ್ರ ನಾಚಿತು... ವರ್ಣನೆಗಳ ಆಗರವಾಗಿದೆ ಎಂಬುದು ನನ್ನ ಭಾವನೆ

Satish said...

ಭಾಳಾ ಗಟ್ಟಿಗರು ಸ್ವಾಮೀ ನೀವು, ಮದ್ರಾಸ್‌ನಲ್ಲಿ ತಮಿಳರ ನಡುವೆ ಬದುಕಿಕೊಂಡಿರೇದೇ (ಯಾರಿಗಾದ್ರೂ) ಒಂದು ದೊಡ್ಡ ಸಾಧನೆ ಅಂತ ನಾನಂದುಕೊಂಡಿದ್ರೆ ನೀವು ನಾನು ಕರೆಯೋ ಮದ್ರಾಸನ್ನ ಅವರು ಕರೆಯೋ ಚೆನ್ನೈ ಅನ್ನ ಕನ್ನಡೀಕರಿಸಿ "ಚೆನ್ನಿ" ಅಂತ ಚಿತ್ರದಲ್ಲಿ ತೋರಿಸಿದ್ದೀರಲ್ಲಾ!

ಶ್ಶ್... ಮತ್ಯಾರಾದ್ರೂ ತಮಿಳರಿಗೆ "ಚೆನ್ನಿ" ಬಗ್ಗೆ ಹೇಳೋದಿಲ್ಲ ಚಿಂತೆ ಮಾಡ್ಬೇಡಿ :-)

Parisarapremi said...

sogasaada chitraNa.. :-)

nagendra said...

ನಾಗೇಂದ್ರ ತ್ರಾಸಿ.

ದಡಕ್ಕೆ ಬಂದಪ್ಪಳಿಸುವ ಸಮುದ್ರದ ಅಲೆಗಳ ಹಾಗೆ ಸಾಗುವ ಯಾಕೋ ಸಮುದ್ರ ನಾಚೀತು ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

JOMON said...

ಸತೀಶ್,

ಚೆನ್ನೈನ ಕನ್ನಡೀಕರಣ "ಚೆನ್ನಿ" ಅಲ್ಲ. ಅದು ಚಿತ್ರದಲ್ಲಾಗಿರುವ Spelling mistake. ನೀವು ಗುರುತಿಸಿದ ನಂತರವೇ ನನ್ನ ಗಮನಕ್ಕೂ ಅದು ಬಂದದ್ದು.

ನಿಮ್ಮ ಹದ್ದಿನ ಕಣ್ಣಿನ ಸೂಕ್ಷ್ಮತೆಗೆ ಧನ್ಯವಾದಗಳು. ತಿದ್ದಿ ಹಾಕಿದ್ದೇನೆ.. ಗಮನಿಸುತ್ತೀರಲ್ಲಾ?

Harish - ಹರೀಶ said...

ಸುಂದರ ಕಲ್ಪನೆ. ಹೀಗೇ ಬರವಣಿಗೆಯನ್ನು ಮುಂದುವರೆಸಿ.