Sunday 8 July, 2007

ಅಮರ ಪ್ರೇಮದ ದೃಶ್ಯಕಾವ್ಯ ತಾಜ್ ಮಹಲ್



ವಿಶ್ವದ ಏಳು ಅಧ್ಬುತಗಳ ಪಟ್ಟಿಗೆ ತಾಜ್ ಮಹಲ್ ಆಯ್ಕೆಯಾಗಿದೆ. ಶಹಜಾನ ಪ್ರೀತಿಗೆ, ಅದರ ರೀತಿಗೆ, ವಿಶ್ವ ತಲೆಬಾಗಿದೆ. ಅಮರ ಪ್ರೇಮದ ದೃಶ್ಯಕಾವ್ಯ ತಾಜ್ ಮಹಲ್. ಮಂಜು ಸುರಿದ ಮುಂಜಾವಿನಲ್ಲಿ ನೊರೆ ಹಾಲಿನಂತೆ ಕಾಣುವ ತಾಜ್ ಮಹಲ್‌ನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಅಪೂರ್ವ ಅನುಭವ.

ಪ್ರೀತಿಸುವವರ ಎದೆಯಲ್ಲಿ ತಾಜ್ ಮಹಲ್‌ಗೊಂದು ವಿಶಿಷ್ಠ ಸ್ಥಾನವಿದೆ.ಅವರ ಎದೆ ಬಡಿತ ಕೂಡ ಯಮುನಾ ನದಿಯ ನೀರ ಅಲೆಗಳಂತೆ ಮಧುರವಾಗಿರುತ್ತದೆ. ಲಂಗದಾವಣಿಯ ಹುಡುಗಿ ಸಹ ತನ್ನ ಇನಿಯನ ಎದೆ ಮೇಲೆ ತನೆಯಾನಿಸಿ ತಾಜ್ ಮಹಲ್‌ನಷ್ಟು ಕನಸು ಕಾಣುತ್ತಾಳೆ. ಆಸೆ ತುಂಬಿದ ಕಣ್ಣುಗಳಲ್ಲಿ ಪ್ರೀತಿ ಮೊಗೆದು ತನ್ನ ಕನಸಿನ ಮಹಲು ಕಟ್ಟುತ್ತಾಳೆ, ಸಮುದ್ರದ ದಂಡೆಯ ಮೇಲೆ ಮರಳಿನಲ್ಲಿ ಮಹಲು ಕಟ್ಟಿ ಮಮತಾಜ್ ಆಗ ಬಯಸುತ್ತಾಳೆ.
ತಾಜ್ ಮಹಲ್ ಇಷ್ಟವಾಗುವುದು ಅದರ ಸೌಂದರ್ಯತೆಗೆ.ಪರಿಶುಧ್ದತೆಗೆ. ಸ್ನಾನ ಮಾಡಿ ಮಲ್ಲಿಗೆ ಮುಡಿದು ನಿಂತ ಅಪ್ಸರೆಯಂತೆ ಅದು ಸ್ಥಿತಪ್ರಗ್ನ. ಅಲಂಕಾರ ಬೇಕಿಲ್ಲ. ಆಡಂಬರ ಬೇಕಿಲ್ಲ. ಸರ್ವಕಾಲಿಕ ಯೌವನೆ. ತಾಜ್ ಮಹಲ್ ಕಂಬಗಳನ್ನು ಮುಟ್ಟಿದ ಕೂಡಲೇ ಮುಟ್ಟಿದ ವ್ಯಕ್ತಿಯ ಕೈಗೂ ಪ್ರೀತಿಯ ಹುಡಿ ಹತ್ತಿಕೊಳ್ಳುತ್ತದೆ ಎನ್ನುತ್ತಾರೆ ಪ್ರೀತಿಸುವ ಹೃದಯಗಳು. ತಾಜ್ ಮಹಲ್‌ನ ಎದುರಿಗೆ ನಿಂತು ತಮ್ಮ ಪ್ರೀತಿಯನ್ನು ಪಿಸುಗುಟ್ಟಿದರೆ ಸಾಕು, ತಾವು ಇಷ್ಟಪಟ್ಟವರು ತಮಗೆ ಸಿಗುತ್ತಾರೆ ಎನ್ನುವುದು ಮತ್ತೊಂದು ನಂಬಿಕೆ.
ಅಸಂಖ್ಯ ಹೃದಯಗಳ ಪ್ರೀತಿಯನ್ನು ಹೊತ್ತು ನಿಂತಿದೆ ತಾಜ್ ಮಹಲ್. ಶಹಜಾನ್ ಮಮತಾಜಳನ್ನು ಅದೆಷ್ಟು ಪ್ರೀತಿಸಿದನೆಂದರೆ, ಇಂದಿಗೂ ಪ್ರೀತಿಸುವ ಹುಡುಗಿಯರು ಮಮತಾಜಳ ಮೇಲೊಂದು ಮಧುರ ಹೊಟ್ಟೆಕಿಚ್ಚು ಇಟ್ಟುಕೊಂಡಿರುತ್ತಾರೆ. ನನ್ನ ಪ್ರೀಯತಮ ಕೂಡ ಶಹಜಾನನ ತರ ಪ್ರೀತಿಸಿದ್ದರೆ ಎಂದು ಪ್ರತಿ ಕನವರಿಕೆಯಲ್ಲೂ ಅವರ ಮನ ಮಿಡಿಯುತ್ತದೆ. ತಾಜ್‌ಗೆ ಮಾತನಾಡಲು ಬರುವುದಿಲ್ಲ ನಿಜ. ಆದರೆ ಅದಕ್ಕೆ ಪ್ರಣಯ ಭಾಷೆ ಗೊತ್ತಿದೆ. ಪ್ರೀತಿಸುವವರ ಭಾವುಕತೆಗೆ ಸ್ಪಂದಿಸುವ ಶಕ್ತಿ ಅದರ ನಿರ್ಜೀವ ಕಂಬಗಳಲ್ಲೂ ಇದೆ.
ತಾಜ್ ಮಹಲ್‌ನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿ ಎಂದು ಅಂತರ್ಜಾಲ ಮತಯಾಚನೆ ನಡೆದಾಗ, ಬಹುಶ್ಯಃ ಹೆಚ್ಚು ಮತ ಯಾಚಿಸಿದವರು ಪ್ರೇಮಿಗಳೇ ಇರಬಹುದು. ನನ್ನ ಎದೆಯಲ್ಲಿ ನಿನ್ನ ನೆನಪುಗಳ ತಾಜ್ ಮಹಲ್ ಕಟ್ಟಿದ್ದೇನೆ ಎನ್ನುವವರಿಗೆ ಒಂದು ಮಾತು. ನಿಮ್ಮ ತಾಜ್ ಮಹಲ್ ಕೊನೆಗೂ ಆಯ್ಕೆಯಾಗಿದೆ. ನಿಮ್ಮ ಪ್ರೀತಿಗೆ ಜಯವಾಗಲಿ, ಮುಂಜಾನೆಯ ಇಬ್ಬನಿಯ ಹನಿಯಂತೆ ಪರಿಶುಧ್ದವಾಗಿರಲಿ....

2 comments:

RAJJU said...

ಮಂಜು ಸುರಿದ ಮುಂಜಾವಿನಲ್ಲಿ ನೊರೆ ಹಾಲಿನಂತೆ ಪರಿಶುದ್ಧವಾಗಿ ಕಾಣುವ ತಾಜ್‌ಮಹಲ್‌ನ ವರ್ಣನೆಯು ನಿಜಕ್ಕೂ ಮುಂಜಾನೆಯ ಇಬ್ಬನಿಯ ಹನಿಯಂತೆ ಪರಿಶುದ್ಧವಾಗಿದೆ.ಏಳು ಅದ್ಭುತಗಳ ಪಟ್ಟಿಗೆ ಸೇರ್ಪಡೆಯಾದ ಅಮರಪ್ರೇಮ ಸಂಕೇತವಾದ ತಾಜ್‌ಮಹಲ್ನ ಕುರಿತಾದ ಅದ್ಭುತ ಲೇಖನಕ್ಕಾಗಿ ನನ್ನ ಆತ್ಮೀಯ ಸ್ನೇಹಿತ ಜೋಮನ್ ಅವರಿಗೆ ನನ್ನ ಶುಭ ಹಾರೈಕೆಗಳು.

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...

ಒಲವಿನ ಮಹಲಿನ ಬಗ್ಗೆ ಬರೆದ
ನಿಮ್ಮ ಶಬ್ದ ಗಳು ಪ್ರೀತಿ ಯ ಮಳೆಯಲ್ಲಿ ಚೆನ್ನಾಗಿ ನೆನೆದಿವೆ,

ಪ್ರೀತಿ ಯ ಬಗ್ಗೆ ಮತ್ತೆ ಬರೆಯಿರಿ