Saturday 23 June, 2007

ಮೊದಲ ಮಳೆಹನಿ...

ಮಳೆ ಪ್ರಾರಂಭವಾಗಿದೆ. ಧರೆಯ ಒಡಲಲ್ಲಿ ಹಸಿರು ಮೂಡಿದೆ. ಸುರಿಯುವ ಮುಗಿಲ ಹನಿ ಕಪ್ಪೆಚಿಪ್ಚಿನೊಳಗೆ ಸೇರಿ ಮುತ್ತಾಗುವ ಸಂಭ್ರಮದಲ್ಲಿದೆ. ಸುರಿಯುವ ಜಟಿ ಜಟಿ ಮಳೆಯಲ್ಲಿ ಒತ್ತರಿಸಿ ಬರುವ ಭಾವನೆಗಳನ್ನು ಬಿಗಿದಪ್ಪಿ ಮಳೆಗೆ ಮುಖವೊಡ್ಡಿದರೆ, ಮನಸ್ಸು ಕೂಡ ತೊಯ್ದು ತೊಪ್ಪೆಯಾಗುತ್ತದೆ. ಮಳೆಯೆಂಬ ಭಾವನೆಯೇ ಅದ್ಭುತ. "ಮಳೆ ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಮಳೆಯಲ್ಲಿ ಅಳುವುದು, ಕಣ್ಣೀರುಗೆರೆಯುವುದು ಯಾರಿಗೂ ಗೊತ್ತಾಗುವುದಿಲ್ಲ. ತುಂಬಾ ದುಃಖವಾದಾಗ ನಾನು ಮಳೆಯಲ್ಲಿ ಅಳುತ್ತಾ ನಡೆಯುತ್ತೇನೆ ಎನ್ನುತ್ತಾನೆ ಮಹಾನ್ ಹಾಸ್ಯ ನಟ,ಎಲ್ಲರನ್ನು ನಕ್ಕು ನಗಿಸಿದ ಚಾರ್ಲಿ ಚಾಪ್ಲಿನ್.
ಇಂತಹ ಎಷ್ಟೋ ಮಳೆಗಳನ್ನು ನೆಲೆದು ನಾವೆಲ್ಲ ಇಷ್ಟು ದೊಡ್ಡವರಾಗಿದ್ದೇವೆ. ಕೊಚ್ಚೆಯಲ್ಲಿ ಕಾಲಿರಿಸಿ ಶಾಲೆಗೆ ನಡೆದು ಬಂದದ್ದು,ಗದ್ದೆಯ ಏರಿಯಿಂದ ಜಾರಿಬಿದ್ದು ಚಡ್ಡಿಯ ಹಿಂದೆ ಕೆಸರು ಮೆತ್ತಿಕೊಂಡದ್ದು, ಸುರಿಯುವ ಜಡಿಮಳೆಯಲ್ಲಿ ಕಾಗದದ ದೋಣಿ ಹರಿಬಿಟ್ಟು ಟೈಟಾನಿಕ್ ಗಾತ್ರದ ಕನಸು ಕಂಡದ್ದು, ಉದ್ದನೆಯ ಕೊಕ್ಕೆಯಲ್ಲಿ ಗಾಳ ಸಿಕ್ಕಿಸಿ ಮೀನು ಹಿಡಿಯಲು ಕಾದು ಕೂತದ್ದು ಎಷ್ಟು ಮಳೆಗಾಲ ಕಳೆದರೂ ಮರೆಯಲಾಗದ ಸುಂದರ ನೆನಪುಗಳು.
ಮಳೆಗಾಲದ ರಾತ್ರಿಗಳೇ ಅದ್ಬುತ. ಚುಮು ಚುಮು ಚಳಿಯಲ್ಲಿ ಕುತ್ತಿಗೆಯವರೆಗೆ ಬೆಡ್‌ಶೀಟ್ ಎಳೆದುಕೂಂಡು ಮಲಗಿದರೆ, ಬಳಿಗ್ಗೆ ಏಳಲು ಮನಸ್ಸೇ ಆಗುತ್ತಿರಲಿಲ್ಲ. ರಾತ್ರಿ ಕೂಗುವ ವಂಡರ ಕಪ್ಪೆಗಳ ಶಬ್ದದೊಂದಿಗೆ ಅದರ ಗೋಲಿಯಾಕಾರದ ಕಣ್ಣುಗಳೂ ನೆನಪಾಗಿ ತಲೆಯ ತುಂವಾ ಚಾದರಾ ಹೊದ್ದು ಮಲಗಿದ್ದು ಇನ್ನೂ ನೆನಪಿದೆ. ಬೆಳಿಗ್ಗೆ ಎದ್ದರೆ ಮನೆಯಂಗಳದ ತುಂಬ ನೀರು. ಗೋಡೆಯ ಪಕ್ಕದಲ್ಲಿದ್ದ ಬಾಳೆ ಗಿಡ ನೆಲಕ್ಕೆ ಬಾಗಿರುತ್ತದೆ. ಪಕ್ಕ ನಿಂತಿದ್ದ ನುಗ್ಗೆ ಗಿಡದ ಒಂದು ದೊಡ್ಡ ಕೊಂಬೆ ಮುರಿದಿರುತ್ತದೆ. ಮನೆಯ ಹಿತ್ತಲಿನ ಮಾವಿನ ಮರದಿಂದ ಕಾಯಿಗಳು ಉದುರಿ ಅಂಗಳದ ತುಂಬ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಮನೆಯಂಗಳದ ಮೂಲೆಯಲ್ಲಿ ನಿಂತು ಮಳೆ ನೀರಿನಲ್ಲಿ ಉದ್ದಕ್ಕೆ ಸುಸ್ಸೂ ಮಾಡಿ ಅಪ್ಪನ ಕಣ್ತಪ್ಪಿಸಿ ಮತ್ತೆ ಹೋಗಿ ಮಲಗಿದ್ದು ಈಗ ನಾಚಿಕೆ ಎನಿಸುತ್ತದೆ.
ಮಳೆಗಾಲದಲ್ಲಿ ಅಮ್ಮ ಸಾಕಷ್ಟು ಕಷ್ಟಪಡುತ್ತಿದ್ದಳು. ಮಳೆಯಲ್ಲಿ ನೆನೆದ ಸೌದೆ ಬೆಂಕಿ ಹೊತ್ತಿಕೊಳ್ಳದೆ, ಹಂಚಿನ ಮನೆಯ ತುಂಬ ಹೊಗೆಯಾಗಿ ಆಕೆಯ ಮೂಗಿನಿಂದ ಹಾಗೂ ಕಣ್ಣಿನಿಂದ ನೀರು ಬರುತ್ತಿದ್ದವು. ಕುಡಿಯುವ ನೀರು ತುಂಬಿಡಲು ಹರಸಾಹಸ ಪಡುತ್ತಿದ್ದಳು. ನಾವು ತಾಸಿಗೊಮ್ಮೆ ತೋಯಿಸುತ್ತಿದ್ದ ಭಟ್ಟೆಯನ್ನ ತೊಳೆದು ಒಣಗಿಸುವುದೇ ಆಕೆಯ ಬಹುದೊಡ್ಡ ಕೆಲಸವಾಗಿತ್ತು. ಮಳೆಯೆಂದರೆ ನನ್ನ ಪಾಲಿಗೆ ನವಿರು ಭಾವನೆಗಳ ಸಂಗಮ. ಅದು ಮರಳಿ ಬಯಸುವ ಮಧುರ ಬಾಲ್ಯ. ಅಪ್ಪ, ಅಮ್ಮ ಒಡಹುಟ್ಟಿದವರೆಲ್ಲರೂ ನೆನಪಾಗುತ್ತಾರೆ. ಜಡಿ ಜಡಿ ಮಳೆಯಲ್ಲಿ ಹೊರಟನೆಂದರೆ ಮಳೆಹನಿ ಮಾತನಾಡುತ್ತದೆ. ಕಣ್ಣೀರು ಜಿನುಗುತ್ತದೆ. ಮಳೆ ಎಲ್ಲವನ್ನೂ ಮರೆಸುತ್ತದೆ. ಇದಕ್ಕಾಗಿಯೇ ನನ್ನ ಬ್ಲಾಗ್‌ಗೆ ಮಳೆಹನಿ ಎಂದು ಹೆಸರಿಟ್ಟಿದ್ದೇನೆ. ಸುರಿಯುವ ಜಡಿಮಳೆಗೆ ನೀವು ಬೊಗಸೆ ಪ್ರೀತಿ ತೋರಿಸಬಹುದು.

No comments: